ನಾ ಹೇಳಿರುವೆ
ನಾ ಬೆಂಕಿಯಾದೆ
ದೀಪವ ಬೆಳಗುವ ಹೊತ್ತಿನಲ್ಲಿ
ನಾ ನಿನ್ನ ಸುಟ್ಟು ಹಾಕಲೆಂದಲ್ಲ
ನಾ ದೀಪವಾದೆ
ನೀ ಹೋಗುವ ದಾರಿ ಕಾಣಲೆಂದು
ನಿನ್ನ ದಾರಿ ಮಸುಕು ಅಗಲೆಂದಲ್ಲ
ನಾ ಬುವಿಯಾದೆ
ನೀ ಇಡುವ ಹೆಜ್ಜೆ ಸಾಗಲೆಂದು
ನಿನ್ನ ಹೆಜ್ಜೆಗೆ ಮುಳುವಾಗಲೆಂದಲ್ಲ
ಇಂದು ನಾ ಹೇಳಿರುವೆ ನಿನ್ನ ದಾರಿಯ ಅರಿವು ನಿನಗಾಗಲೆಂದು
ನಿನ್ನ ಬಾಳು ಸದಾ ಬೆಳಗಲೆಂದು
ನಿನ್ನ ಜೀವನ ಹಾಳಾಗಲಿ ಎಂದಲ್ಲ.
– ದೀಪಾ ಜಿ ಎಸ್
ಏನಿದ್ದರೂ ಶೂನ್ಯ
ಏನಿದ್ದರೂ ಶೂನ್ಯ
ಬಾಳಲ್ಲಿ ಪ್ರೀತಿ ಇರದಿದ್ದರೆ
ಪ್ರೇಮಾಂಕುರವಾಗದಿದ್ದರೆ
ಏನಿದ್ದರೂ ಶೂನ್ಯ
ನಡತೆಯಲಿ ಸಂಸ್ಕಾರವಿಲ್ಲದಿದ್ದರೆ
ಸಂಸಾರದಲ್ಲಿ ಸ್ವಾರಸ್ಯವಿಲ್ಲದಿದ್ದರೆ
ಏನಿದ್ದರೂ ಶೂನ್ಯ
ಹಣದೊಟ್ಟಿಗೆ ಹೃದಯವಂತಿಕೆಯಿಲ್ಲದಿದ್ದರೆ
ಮುಖ್ಯವಾಗಿ ನೆಮ್ಮದಿಯಿಲ್ಲದಿದ್ದರೆ
ಏನಿದ್ದರೂ ಶೂನ್ಯ
ಕಾಲವಿದ್ದರೂ ಸದುಪಯೋಗವಿಲ್ಲದಿದ್ದರೆ
ಪ್ರತಿ ಕ್ಷಣವನ್ನು ಅನುಭವಿಸದಿದ್ದರೆ
ಏನಿದ್ದರೂ ಶೂನ್ಯ
ಮಕ್ಕಳು ಮರಿ ಆದರೇನು
ಅವರಿಗಾಗಿ ಸಮಯ ಮೀಸಲಿಡದಿದ್ದರೆ
ಏನಿದ್ದರೂ ಶೂನ್ಯ
ಮರ್ಯಾದೆ ಇರದಿದ್ದರೆ
ಮಾನವೀಯತೆ ಮರೆತಿದ್ದರೆ.
-ಸುರೇಶ ತಂಗೋಡ
ಅವಳು
ತೌರ ದಾರಿ ಸರಿದು ದೂರ
ಸಾಗುತಿಹಳು ಮಗಳು
ನಿನ್ನೆ ಇಂದು ಕಾಣದ ತೀರ
ಬೆರಗುಗೊಂಡು ಅವಳು
ಅಪ್ಪನೆಂಬ ಗಗನ
ಮೋಡಗಳಲಿ ಮರೆಯಾಗಿ
ಗಂಡನೆಂಬ ಚಂದ್ರನು
ನಾಳೆಗಳಲಿ ಜೊತೆಯಾಗಿ
ಸಾಗುತಿದೆ ಪಯಣ
ತೌರ ನೆನಪುಗಳ ಹೊತ್ತು
ಕಾಡುತಿದೆ ಮೌನ
ರಾಯರ ಬಳಿಯಲಿ ಕೂತು
ಹೊಸಿಲು ತುಳಿದ
ಕಾಲುಗಳಿಗೆ ಹೊಸತಾದ ನಡುಕ
ಬಿಸಿಲು ಕಳೆದ
ಮುಗಿಲಿಗೀಗ ಇರುಳೊಂದೆ ಬೆಳಕ
-ರವಿ ಶಿವರಾಯಗೊಳ
ಬೆತ್ತವೂರಿ
ಮಾಗಿದ ಮೋಡಗಳು
ಮೆಲ್ಲಗೆ ನಡೆಯುತ್ತವೆ
ನೆಲದಿ ಮಳೆ ಹನಿಗಳ ಬೆತ್ತವೂರಿ
ಭಗ್ನಪ್ರೇಮಿ ಗಾಳಿ
ಹುಚ್ಚರಂತೆ ಅಲೆಯುವುದು
ತರಗೆಲೆಗಳ ಚಿತ್ತದಂತೆತೂರಿ
ರೆಕ್ಕೆ ಬಡಿದು ಹಾರಲೆತ್ನಿಸಿ
ಸೋತ ಮರದಂತೆ ಕೂತಿಹರು ಕೆಲವರು
ಯಶಕ್ಕೆ ಯತ್ನಿಸಿ, ಕಪಾಳದಿ ಕಣ್ಣ ತೊರೆಗಳ
ಗುರುತು ಅಳಿಸುತ್ತಾ
ಸವಿನೆನಪು ಲತೆಗೆ ನೀರು ಹನಿಸದವರು
ನಿಂತಿಹರು, ಮನದ ಗಾಡಿಯ ಟೇಲರ್ನಲ್ಲಿ
ಚಿಂತೆಯ ಸಂತೆ ಹೇರುತ್ತಾ
ಆಧುನಿಕತೆ ಆಮಂತ್ರಣಕೆ
ಮಾರು ಹೋದವರು ನಿಂತಿಹರು
ಸ್ವಾರ್ಥದ ಉರುಳಿಗೆ
ಸ್ವಾಸ್ಥ್ಯದ ಅಳಿವು ನೋಡುತ್ತಾ
ಬಂಧಗಳ ಕಳಚಿ ನಡೆದವರು
ಬಂದರು ಬಂಧುರ ಹುಡುಕುತ್ತಾ
ಅಂದು ಅಲೆಯಂತೆ ಈಜಿ ಹೋದವರು
ಅಲೆದಲೆದು ಬೇಸತ್ತರು
ನೆಮ್ಮದಿಯ ಹುಡುಕುತ್ತಾ
–ಅಯ್ಯಪ್ಪ ಬಸಪ್ಪ ಕಂಬಾರ
ಕೈಗೆಟುಕದ ತಾರೆ ನೀನು,
ಭುವಿಯಲಿರುವ ನೀರೆ ನಾನು…
ನಿನ್ನ ನೋಡುತ ದಾರಿಯ ಕಾಯುತ
ಬಳಲಿ ಬಳಲಿ ಸೋತೆ ನಾನು.
ನಿನ್ನ ನೋಟಕೆ ,ಅದರ ಆಟಕೆ
ಸೋತೆ ನಾನು ಮನಸೋತೆ ನಾನು.
ನಿನ್ನ ಕಾಂತಿಗೆ ಒಡಲ ಶಾಂತಿಗೆ
ಮಾತು ಹಿಂಗಿದ ಗೀತೆ ನಾನು…
ನಿನ್ನ ಒಂದು ಸವಿ ಸಲಿಗೆಗೆ
ಹಂಬಲಿಸಿರುವೆ ಹಗಲಿರುಳು.
ಮುನ್ನ ಭುವಿಗೆ ಇಳಿದು ಬಾರೆಯ?
ನಿನ್ನ ನಲ್ಲೆಯ ಮನವ ತಿಳಿದು…
ನೀಲಿ ನಭದ ಮುಕುಟ ನೀನು,
ಹಸಿರು ಧರೆಯ ಸ್ಮಿತೆಯು ನಾನು.
ಎಲ್ಲೇ ಹೋದರು ಬಿಡದೇ ನಿನ್ನ
ಸ್ತುತಿಸೋ ಸ್ತುತಿಯ ಶೃತಿಯು ನಾನು.
–ಸರೋಜ ಪ್ರಶಾಂತಸ್ವಾಮಿ
ಕಾಯಬೇಕು…
ಕಾಯಬೇಕು ಕಾಯವನ್ನ ಜ್ವಾಕೀಲೇ
ಕಾಯಬೇಕು ಪ್ರತಿನಿತ್ಯ ಮನಸೀಲೆ
ಕಾಯದ ಹೊರತು ಹೊತ್ತು ಒಯ್ಯುವರು
ಕಾಯ ಮಾಯವಾಗುವುದು ಒಮ್ಮೀಲೆ
ಕಾಯಬೇಕು ಒಳಹೊರಗ ಹದವಾಗಿ
ಮಾಯಬೇಕು ನೋವೆಲ್ಲ ನಲಿವಾಗಿ
ನೇಯಬೇಕು ಮನಸನ್ನ ಅರಿವಾಗಿ
ಬೇಯಬೇಕು ಅರಿವದು ಹರವಾಗಿ
ಆರು ಮಂದಿ ಕಳ್ಳರಿಲ್ಲಿ ಕುಂತಾರೋ
ಐದು ಹಾದಿಗುಂಟ ಸಾಗಿ ಬರತಾರೋ
ನಾಲ್ಕು ಬೀದಿ ನಾಕುತಂತಿ ತಾಕ್ಯಾರೋ
ಮೂರು ಜಾವದಾಗ ಕನ್ನ ಹಾಕ್ಯಾರೋ
ಚಿತ್ತವನ್ನ ಗಟ್ಟಿಗೊಳಿಸಿ ತಲಿಯಾಗ
ಸತ್ಯ ನಿತ್ಯ ಜಪವಿರಲಿ ಜಗದಾಗ
ಸುತ್ತ ಪ್ರೇಮ ಪಾಶವಿಡಿದು ಕೈಯಾಗ
ಕುತ್ತು ಬರದಂಗ ಮಾಡು ಈ ಯಾಗ
-ಸಚಿನ್‌ಕುಮಾರ ಹಿರೇಮಠ(ರನ್ನ ಕಂದ)
ಕನಸು
ಗೆಳತಿ,
ಕನಸುಗಳ ಸಾಮ್ರಾಜ್ಯದಲ್ಲಿ
ಮುಳುಗಿ
ಮೇಲೇಳದೆ ಪರಾವಲಂಬಿಗಳಾದ
ನಾವು ಮೇಲೇಳಲು
ಪ್ರಯತ್ನ ಪಡಲಿಲ್ಲ
ಮುಳುಗಿರುವುದು ಗೊತ್ತಾಗಲಿಲ್ಲ
ಆದರೆ ತೇಲಿದಾಗ
ಮುಳುಗಿರುವುದು ತೋರಿಬಂತು ಮರೀಚಿಕೆಯಂತೆ
ಮೇಲೆಳಲು
ಪ್ರಯತ್ನಿಸಿದಾಗ ನೀರು ಹಿಂಗಿತ್ತು.
–ಶೈಲಜ ಮಂಚೇನಹಳ್ಳಿ