ಪುಸ್ತಕದ ಹೆಸರು : ಬುದ್ಧ ಕಾಣದ ನಗೆ
ಕೃತಿ ಪ್ರಕಾರ : ಕವನ ಸಂಕಲನ
ಕವಿ : ಎಸ್. ರಾಜು ಸೂಲೇನಹಳ್ಳಿ.
ಪ್ರಕಾಶಕರು : ತನುಶ್ರೀ ಪ್ರಕಾಶನ, ಸೂಲೇನಹಳ್ಳಿ.
ಪುಟ : 86
ಬೆಲೆ : 90
ಕವಿ ಹಾಗೂ ಕಾದಂಬರಿಕಾರರೂ ಆದ ರಾಜು ಎಸ್ ಸೂಲೇನಹಳ್ಳಿ ರವರು ತಮ್ಮ ಕೃತಿಗೆ ಕೊಟ್ಟಿರುವ ‘ಬುದ್ಧ ಕಾಣದ ನಗೆ’ ಎಂಬ ಶೀರ್ಷಿಕೆಯೇ ಬಹಳ ಆಕರ್ಷಕವಾಗಿದೆ. ಪುಟ ತಿರುಗಿಸುತ್ತಾ ಹೋದರೆ ಮತ್ತಷ್ಟು ಆಕರ್ಷಣೆ ಇವರ ಕವಿತೆಗಳಲ್ಲಿ ಕಂಡುಬರುತ್ತೆ. ಕೃತಿಯ ಮೊದಲ ಕವಿತೆಯಲ್ಲಿಯೇ ಕವಿಗಳು ಬುದ್ದಿವಂತಿಕೆ ಮತ್ತು ಹೃದಯಸಂಪನ್ನತೆಯ ಕುರಿತು ಹೇಳುತ್ತಾ ನಾವು ಹೃದಯ ಸಂಪನ್ನರಾಗೋಣ ಎಂದು ಕರೆ ಕೊಡುವರು. ಹೃದಯ ಸಂಪನ್ನರ ಕೊರತೆಯನ್ನು ಎದುರಿಸುತ್ತಿರುವ ಸಮಾಜಕ್ಕೆ ಅದರಲ್ಲಿಯೋ ಸಮಕಾಲೀನ ಕರೋನಾ ಸಂಕಷ್ಟದ ಸಂದರ್ಭದಲ್ಲಿ ಈ ಸಂದೇಶ ಬಹಳಾ ಮುಖ್ಯವಾದದಾಗಿದೆ. ಕವಿಗಳು ಕೇವಲ ಹೃದಯ ಸಂಪನ್ನರಾಗೋಣ ಎಂದು ಕರೆ ಕೊಡುವಲ್ಲಿಗೆ ನಿಲ್ಲುವುದಿಲ್ಲ ಬದಲಾಗಿ ಸ್ವತಃ ತಾವು ಹೃದಯಸಂಪನ್ನತೆಯನ್ನು ಮೆರೆದಿರುವರು ಎಂಬುದು ನಮಗೆ ಇದೇ ಕೃತಿಯ ಮುಂದಿನ ಪುಟಗಳಲ್ಲಿ ದೃಡಪಡುತ್ತದೆ.
ಅಷ್ಟೇ ಅಲ್ಲದೇ ಇಲ್ಲಿನ ಪದಬಳಕೆ, ಪ್ರಾಸ, ಮುಕ್ತವಾದ ಛಂದಸ್ಸು ಇವುಗಳನ್ನು ಕವಿ ಯಶಸ್ವಿಯಾಗಿ ಬಳಸಿರುವರು. ಇಲ್ಲಿನ ಹಲವು ಕವಿತೆಗಳು ರಾಗ ಸಂಯೋಜನೆ ಮಾಡಿ ಹಾಡಬಹುದಾದ ಉತ್ತಮ ಭಾವಗೀತೆಗಳ ದಾಟಿಯಲ್ಲಿ ಬಂದಿರುವುದು ವಿಶೇಷ. ನನ್ನ ಅಂತರಂಗದ ಭಾವ ನೀನು ಎಂಬ ಕವಿತೆಯಲ್ಲಿ ಪ್ರಕೃತಿಯ ಎಲ್ಲಾ ವಸ್ತು ವಿಸ್ಮಯಗಳನ್ನು ಕವಿ ತಮ್ಮ ಗೆಳೆಯತಿಯಲ್ಲಿಯೇ ಕಾಣುವ ಉತ್ಕಟ ಪ್ರೇಮಭಾವನೆ ಇದೆ. ಶ್ರಾವಣ ಮಾಸ ಎಂಬ ಕವಿತೆಯಲ್ಲಿ ಕವಿ ತಮ್ಮ ಶಬ್ದ ಚಮತ್ಕಾರಗಳಿಂದ ಓದುಗನ ಕಣ್ಣ ಮುಂದೆ ಶ್ರಾವಣ ಮಾಸದ ಪ್ರಾಕೃತಿಕ ಸೌಂದರ್ಯ ವೈಭವದ ಚಿತ್ರಣವನ್ನು ಕಟ್ಟಿಕೊಡುತ್ತಾರೆ. ಇದು ಪ್ರಕೃತಿಯ ಎಲ್ಲ ವೈಚಿತ್ರ ವಿಶೇಷತೆಗಳನ್ನು ಚಿತ್ರಿಸುವ ಬಹುತ್ವದ ನೆಲೆಯ ಕವಿತೆಯಾಗಿದೆ. ಹೇಗೆ ಪ್ರಕೃತಿ ತನ್ನ ವೈವಿಧ್ಯತೆಯಿಂದ ಮೈತುಂಬಿರುವುದೊ ಅದೇ ರೀತಿ ಈ ಕವಿತೆ, ಈ ಸಂಕಲನವು ಸಹಾ ಹಲವು ಅನುಭವಗಳು ಹಾಗೂ ಸಂವೇದನೆಗಳಿಂದ ಮೈತುಂಬಿಕೊಂಡಿದೆ. ಪ್ರೀತಿಯ ಅಭಿವ್ಯಕ್ತಿ ಮತ್ತು ಪ್ರಕೃತಿಯ ವರ್ಣನೆಯಿಂದ ಪ್ರಾರಂಭವಾಗುವ ಕೃತಿ ಮುಂದುವರೆದಂತೆ ತೀರ ಗಂಭೀರವಾದ ಚರ್ಚೆಯ, ಗಹನವಾದ ವಿಚಾರದ ಕಡೆಗೆ ಓದುಗನ ಗಮನವನ್ನು ಸೆಳೆಯುವ ಪ್ರಯತ್ನವನ್ನು ‘ಸಮಾನತೆ’ ಎಂಬ ಪದ್ಯದ ಮೂಲಕ ಮಾಡುತ್ತದೆ. ಈ ಕವಿತೆಯ ೩ ಭಾಗಗಳನ್ನು ಹೊಂದಿದ್ದು ಪ್ರತಿಯೊಂದು ಭಾಗವು ಸಮಾನತೆಯ ಚರ್ಚೆಯ ಮಂಡಿನೆಯನ್ನು ವಿವಿಧ ರೀತಿಯಲ್ಲಿ ಮಾಡುವುದು. ಮೊದಲ ಭಾಗದಲ್ಲಿ ಸಿರಿವಂತನೊಂದಿಗೆ ಬಡವನು, ಬುದ್ಧಿವಂತನೊಂದಿಗೆ ದಡ್ಡನು, ಸುರೂಪಿಯೊಂದಿಗೆ ಕುರೂಪಿಯು ಎಲ್ಲರೂ ಸಮಾನವಾದ ಮಾನ್ಯತೆ ಪಡೆಯಲು ತಿಣುಕಾಡುತ್ತಲೇ ಇರುತ್ತಾರೆ. ಈ ತಿಣುಕಾಟದಲ್ಲಿ ಅವರ ಆಯುಶ್ಯವೆಲ್ಲ ಮುಗಿದೇ ಹೋಗುವುದು. ಸಮಾನತೆ ಎಂಬುದು ಹೀಗೆ ತಿಣುಕಾಡುವುದರಿಂದ ಸಾಧ್ಯವಾಗುವುದಿಲ್ಲ. ಎಂಬುದನ್ನು ವಿವರಿಸುತ್ತಾ ಎರಡನೇ ಭಾಗದಲ್ಲಿ ಜಗತ್ತಿನ ಪ್ರಾಕೃತಿಕ ನಿಯಮವನ್ನು ಬಹಳಾ ಸೊಗಸಾಗಿ ಸರಳವಾಗಿ ಕವಿ ವಿವರಿಸುತ್ತಾರೆ. ಜಗತ್ತಿನಲ್ಲಿ ಸಮಾನತೆ ಯೆಂಬುದು ನಿಜವಾಗಿಯು ಇಲ್ಲ ಎಂದು ಕವಿ ಸ್ಪಷ್ಠವಾಗಿ ಹೇಳುತ್ತಾರೆ. ನಮ್ಮ ಪ್ರಕೃತಿಯಲ್ಲಿ ಯಾವುದೂ ಸಹಾ ಒಂದಕ್ಕೆ ಒಂದು ಸಮಾನವಲ್ಲ ಅವುಗಳಿಗೆ ಅವುಗಳದ್ದೇ ಆದ ವೈವಿಧ್ಯತೆ, ವೈಶಿಷ್ಟ್ಯತೆ ಮತ್ತು ನಮ್ಮ ಜೀವ ಸರಪಳಿಯಲ್ಲಿ ಅವುಗಳಿಗೆ ಅವುಗಳದ್ದೇ ಆದ ಪ್ರಾಮುಖ್ಯತೆ ಇದೆ. ಪ್ರಕೃತಿ ಬಹುತ್ವದಿಂದ ಕೂಡಿದೆ, ಹಾಗೂ ಪ್ರಕೃತಿಯ ವ್ಯವಹಾರಗಳು ಒಂದನ್ನೊಂದು ಅವಲಂಬಿಸಿದೆ. ಇಲ್ಲಿ ಸಮಾನತೆ ಎಂಬುದು ಇಲ್ಲ ಆದರೆ ಎಲ್ಲವೂ ಅವುಗಳ ಸ್ಥಾನದಲ್ಲಿ ಮುಖ್ಯವಾದವೇ. ಮಾನವನು ಈ ಪ್ರಾಕೃತಿಕ ಸತ್ಯವನ್ನು ಹಾಗೇ ತಮಗಿರುವ ಮಹತ್ವವನ್ನು ಅರಿಯದೆ ನಾವು ಮತ್ತೊಬ್ಬರೊಂದಿಗೆ ಸಮಾನಾಗಿ ಬೆಳೆಯಬೇಕೆಂಬ ತಿಣುಕಾದಲ್ಲಿಯೇ ಜೀವನ ಮುಗಿಸಿ ಬಿಡುತ್ತಾರೆ. ಇನ್ನು ಕವಿತೆಯ ಮೂರನೇ ಭಾಗವನ್ನುಗಮನಿಸಿದರೆ ಇಲ್ಲಿನ ಕವಿ ದೃಷ್ಠಿ ಹಿಂದಿನ ಎರಡು ಪದ್ಯಗಳಿಗಿಂತ ಭಿನ್ನವಾಗುತ್ತದೆ. ಸಮಾನತೆ ಯೆಂಬುದು ಆತ್ಮದಲ್ಲಿ ಮೊದಲು ಬರಬೇಕು ಎಂಬುದನ್ನು ಹೇಳುತ್ತಾ… ಮಾನವ ನಿರ್ಮಿತವಾಗಿ ಅಸಮಾನತೆಗಳ ವಿರುದ್ಧದ ಬಂಡಾಯದ ದ್ವನಿಯಾಗಿ ಈ ಮೂರನೇ ಭಾಗ ಕಾಣಿಸುತ್ತದೆ. ಇದನ್ನೇ ನಾವು ಬಹುತ್ವ ಎನ್ನುವುದು. ಕವಿ ಒಂದು ವಿಚಾರವನ್ನು ಹಲವು ಆಯಾಮಗಳಲ್ಲಿ ಹೇಗೆ ಓದುಗನಿಗೆ ಬಹಳ ಸರಳವಾಗಿ ಕಾಣಿಸಬಹುದು ಎಂಬುದಕ್ಕೆ ಈ ಪದ್ಯ ಒಂದು ಉದಾಹರಣೆ.
ಮುಂದೆ ಸುಜ್ಞಾನ – ಅಜ್ಞಾನ ಎಂಬ ಕವಿತೆಯಲ್ಲಿ ‘ಅಜ್ಞಾನಿಗಳ ಕೂಡೆ ಅಖಿಳ ಸ್ನೇಹಗಳಿಗಿಂತ ಸುಜ್ಞಾನಿಗಳ ಕೂಡೆ ಜಗಳವೇ ಲೇಸು’ ಎಂಬು ನುಡಿಯನ್ನು ನೆನಪಿಸುವಂತೆ ಕವಿ ಸುಜ್ಞಾನಿಗಳ ಸಂಗದ ಮಹತ್ವವನ್ನು ವಿವರಿಸಿರುವರು. ಹಾಗೂ ಜ್ಞಾನಕ್ಕಿಂತ ಮಿಗಿಲಾದ ಸಂಪತ್ತು ಯಾವುದು ಇಲ್ಲ ಎಂಬ ಸಂದೇಶವನ್ನು ಇಲ್ಲಿ ನೀಡಿರುವರು. ಮುಂದೆ ಈ ಜ್ಞಾನ ಕೇವಲ ಬುದ್ದಿವಂತಿಕೆಯಿಂದ ಕೂಡಿದ್ದರೆ ಸಾಲದು ಅದು ಹೃದಯವಂತಿಕೆಯಿಂದ ಕೂಡಿರಬೇಕು ಆಗ ಮಾತ್ರ ಅದರ ಸಾರ್ಥಕತೆ ಎಂಬುದನ್ನು ಬುದ್ಧಿವಂತಿಕೆ – ಹೃದಯವಂತಿಕೆ ಎಂಬ ಪದ್ಯದಲ್ಲಿ ನೀಡಿರುವರು. ಇಲ್ಲಿ ಬುದ್ಧಿವಂತನಿಗೂ ಹೃದಯವಂತನಿಗೂ ಇರುವ ವ್ಯತ್ಯಾಸ, ಹೃದಯವಂತಿಕೆಯ ಮಹತ್ವವನ್ನು ಕವಿ ಬಹಳಾ ಸೊಗಸಾಗಿ ವಿವರಿಸಿದ್ದಾರೆ. ನಮ್ಮ ಸಮಾಜದಲ್ಲಿ ಬುದ್ಧಿವಂತರು ಹೆಚ್ಚಾಗುತ್ತಾ ಇದ್ದಾರೆ. ಆದರೆ ಹೃದಯವಂತರ ಸಂಖ್ಯೆ ಬಹಳ ಕಡಿಮೆ ಆಗಿದೆ. ನಿಜದಲ್ಲಿ ಈ ಬುದ್ದಿವಂತಿಕೆ ಹಾಗೂ ಹೃದಯವಂತಿಕೆ ಬೇರೆ ಬೇರೆ ಅಲ್ಲ ಇವೆರಡು ಒಂದೇ ಮನಸ್ಸಿನಲ್ಲಿ ನೆಲೆಸಿರುತ್ತವೆ. ನಮ್ಮ ಹೃದಯದ ಮಾತಿನಂತೆ ನಮ್ಮ ಬುದ್ಧಿವಂತಿಕೆಯನ್ನು ಬಳಸಿದಾಗ ಮಾತ್ರ ಅದಕ್ಕೆ ಸಾರ್ಥಕತೆ ಎಂಬುದನ್ನು ಈ ಪದ್ಯ ದ್ವನಿಸುತ್ತದೆ.
ಮುಂದೆ
‘ಜಗತ್ತಿನ ಎದೆಯಲ್ಲಿ ಪ್ರೀತಿ ಅಧ್ಯಾಯ ಬರೆಯುತ್ತೇವೆಂಬ ಮೊಂಡು ಹಟ ಬೇಡ ಗೆಳತಿ
ಇದು ಬಾಯಲ್ಲಿ ಪ್ರೀತಿ
ಬಗುಲಲ್ಲಿ ಬಾಕು
ಇಟ್ಟುಕೊಂಡವರ ಜಮಾನ’ ಈ ಪದ್ಯದಲ್ಲಿ ಸಮಾಜಕ್ಕೆ ಎದುರು ನಿಲ್ಲಲಾರದ, ಒಂದು ವೇಳೆ ಎದುರು ನಿಂತರೆ ಏನಾಗಬಹುದೆಂಬ ಸ್ಪಷ್ಟ ಅರಿವಿರುವ, ತಮ್ಮ ಪ್ರೀತಿಯನ್ನು ತ್ಯಾಗವೂ ಮಾಡಲಾರದ ಸಂಧಿಗ್ದತೆಯಲ್ಲಿ ಸಿಲುಕಿರುವ ಇಬ್ಬರು ಪ್ರೇಮಿಗಳ ಅಂತರಂಗದ ತುಮುಲಗಳನ್ನು ಕವಿ ಓದುಗರ ಮುಂದೆ ಇರಿಸಿದ್ದಾರೆ. ಧರ್ಮದ, ಜಾತಿಯ, ಅಂತಸ್ಥಿನ ಹಾಗೂ ಬೇರೆ ಬೇರೆ ಕಾರಣಗಳಿಂದ ಪ್ರೇಮಿಗಳನ್ನು ಅಗಲಿಸುವ, ಪ್ರಾಣ ತೆಗೆಯುವ ಪ್ರಕರಣಗಳು ಹೆಚ್ಚುತ್ತಲೇ ಇರುವ ಪ್ರಸ್ತುತ ಸಂಧರ್ಭದ ಸಮಾಜದ ಕಣ್ಣು ತೆರೆಸುವ ಪ್ರಯತ್ನ ಈ ಕವಿತೆಯಲ್ಲಿದೆ. ಇಂತಹಾ ಪ್ರೇಮಿಗಳ ವೇದನೆಯನ್ನು, ಏಕಾಂಗಿತನವನ್ನು ವಿವರಿಸುವ ಪ್ರಯತ್ನ ಮುಂದಿನ ‘ಮನವೇ’ ಪದ್ಯದಲ್ಲಿ ವ್ಯಕ್ತವಾಗಿದೆ.
ಮುಂದಿನ ಪದ್ಯದಲ್ಲಿ ಸಾವಿರಾರು ಆಸೆ ಹೊತ್ತು ರೈತರು ಮಳೆಗಾಗಿ ಕಾಯುವುದು. ಮಳೆ ಬಾರದೇ ಹೋದಾಗಿನ ಅವರ ಪರದಾಟ, ಸಮೃದ್ಧವಾಗಿ ಮಳೆ ಸುರಿದಾಗ ರೈತರಿಗಾಗುವ ಸಂಭ್ರಮ, ಪ್ರಕೃತಿಯ ಸೊಬಗು, ಇವುಗಳನ್ನು ಪ್ರಕೃತಿಯೊಂದಿಗೆ ಮಾನವನ ಸಂಬಂಧದ ಹಿನ್ನೆಲೆಯಲ್ಲಿ ವಿವರಿಸಿದ್ದಾರೆ. ಹಳ್ಳಿಗಾಡಿನಲ್ಲಿ ಬೆಳೆದ ಕವಿಗಳಿಗೆ ಅವರ ಊರಿನಲ್ಲಿ ಬೆಳೆಯುತ್ತಿದ್ದ ಸೀತಾಪಲ ಹಣ್ಣಿನ ಕುರಿತು ಒಂದು ಕವಿತೆ ಬರೆದಿದ್ದಾರೆ. ಈ ಕವಿತೆ ಮೇಲ್ನೋಟಕ್ಕೆ ಒಂದು ಸರಳ ಪದ್ಯದಂತೆ ಅನಿಸಿದರೂ ಸಹಾ ಇದರ ಅಂತರಾಳದಲ್ಲಿ ಬದಲಾಗುತ್ತಿರುವ ಕೃಷಿ ಪದ್ದತಿ, ರಾಸಾಯನಿಕಗಳ ಅಧಿಕ ಬಳಕೆ, ಹಾಗೂ ಹೃಬ್ರಿಡ್ ತಳಿಗಳ ಅಭಿವೃದ್ದಿಯಂತಹಾ ಪ್ರಕೃತಿ ವಿರೋಧಿ ಚಟುವಟಿಕೆಗಳ ವಿರುದ್ಧದ ಸಣ್ಣ ಕೂಗು ಈ ಕವಿತೆಯಲ್ಲಿ ಅಡಗಿದೆ. ಯಾವುದೇ ರಸಗೊಬ್ಬರ ರಾಸಾಯನಿಕಗಳಿಲ್ಲದೇ ಕಂಡಕಂಡಲ್ಲಿ ಬೆಳೆದು, ಕಾಡಿನ ನೂರಾರು ಪಕ್ಷಿ, ಪ್ರಾಣಿ, ಕೀಟಗಳಿಗೆ ಆಹಾರ ಒದಗಿಸುತ್ತಿದ್ದ ಜೇನಿನಷ್ಟೇ ರುಚಿಕರವಾಗಿರುತ್ತಿದ್ದ ಸೀತಾಫಲದಂತಹಾ ಹಲವಾರು ಕಾಡಿನ ಹಣ್ಣುಗಳು ಮಾನವನ ದುರಾಸೆ ಹಾಗೂ ಅತಿಯಾದ ಪರಿಸರ ಹಾನಿಯ ಕಾರಣದಿಂದ ಇಂದು ನೋಡಲು ಸಹಾ ಇಲ್ಲದೇ ಹೋಗಿರುವುದನ್ನು ನಾವು ಇಲ್ಲಿ ನೆನೆಯಬಹುದು. ಮುಂದೆ ಹುಣ್ಣಿಮೆಯ ರಾತ್ರಿಯ ಚಂದ್ರನ ನಕ್ಷತ್ರಗಳ ಸೌಂದರ್ಯವನ್ನು ಹೇಳುತ್ತಾ ಪ್ರಾರಂಭವಾಗುವ ‘ಬೆಳದಿಂಗಳು’ ಕವಿತೆ ಎರಡನೇ ಭಾಗದಲ್ಲಿ ಮಗುವನ್ನು ಸಂತೈಸುವ ತಾಯಿ, ಹಾಗೂ ಹಾಳು ಗುಡಿಗಳಲ್ಲಿ ಮಲಗಿರುವ ಒಪ್ಪೊತ್ತಿನ ಊಟಕ್ಕು ಇಲ್ಲದ ಬಡ ಜನರ ಬದುಕನ್ನು ಚಿತ್ರಿಸುತ್ತದೆ. ನಾವು ಚಂದ್ರನನ್ನು ಕಾಣುವಾಗ ನಮ್ಮಲ್ಲಿ ಸೌಂದರ್ಯಾನುಭವವನ್ನು ಪಡೆಯುವ ಉತ್ಕಟತೆ ಇರುತ್ತದೆ. ಅದೇ ರಾತ್ರಿಯ ಅದೇ ಚಂದ್ರನ ನೆರಳಿನಲ್ಲಿ ಮೈ ನಡುಗುವ ಚಳಿಯಲಿ ಊಟಕ್ಕೂ ಇಲ್ಲದ ಹಲವು ಸಂಸಾರಗಳು ಮಲಗಿರುವುದು ನಮ್ಮಗಮನಕ್ಕೆ ಬರುವುದಿಲ್ಲ. ಇಲ್ಲಿ ಕವಿ ಚಂದ್ರನ ನೆರಳಿನಲ್ಲಿ ನಡೆಯುವ ಎರಡು ರೀತಿಯ ವ್ಯಾಪಾರಗಳನ್ನು ಚಂದ್ರನ ಕಣ್ಣಿಂದ ನೋಡಿದ ಹಾಗೇ ಈ ಕವಿತೆಯಲ್ಲಿ ಜೋಡಿಸಿ ಓದುಗರಿಗೆ ಹೇಳುವ ಪ್ರಯತ್ನ ಮಾಡಿರುವರು.
ಮುಂದೆ ‘ನನ್ನ ಒಡಲಿನ ಗೋಳು’ ಕವಿತೆಯಲ್ಲಿ ನಮ್ಮ ಪ್ರಕೃತಿಯ ವೈಭವ, ನಮ್ಮ ದೈನಂದಿನ ಜಂಜಾಟಗಳಲ್ಲಿ ನಾವು ಪ್ರಕೃತಿಯನ್ನು ನಿರ್ಲಕ್ಷಿಸುತ್ತಿರುವ ಬಗೆ, ಆಧುನಿಕ ತಂತ್ರಜ್ಞಾನದಿಂದ ಪ್ರಕೃತಿ ಹಾಗೂ ಹಲವು ಪಕ್ಷಿ ಸಂಕುಲಗಳು ನಾಶ ಹೊಂದುತ್ತಿರುವುದನ್ನು ಕವಿ ಪರಿಸರ ಕಾಳಜಿಯ ಹಿನ್ನೆಲೆಯಲ್ಲಿ ವಿವರಿಸುವರು.
ಮುಂದೆ ‘ದೌರ್ಜನ್ಯ’ ಎಂಬ ಕವಿತೆಯಲ್ಲಿ ಜೀತ ಪದ್ಧತಿಯ ಕರಾಳ ಚಿತ್ರಣ, ಹಿಂಸೆ, ಆರ್ಥಿಕತೆಯ ಪೇಚಿಗೆ ಸಿಲುಕಿರುವ ಸಂಭಂದಗಳು, ಅತ್ಯಾಚಾರಗಳು, ಕಾನೂನುಗಳ ದುರುಪಯೋಗ ಮುಂತಾದವುಗಳನ್ನು ಕವಿ ರೋಸಿ ಹೋಗಿ ಅಸಹಾಯಕತೆಯಿಂದ ಇದಕ್ಕೆಲ್ಲ ಎಂದು ಮುಕ್ತಿ ಸಿಗುವುದೋ ಎಂದು ದೇವರಲ್ಲಿ ಮೊರೆಯಿಡುವ ಚಿತ್ರಣವಿದೆ. ಮುಂದೆ ‘ನನ್ನ ನೆಂಟತನ’ ಎಂಬ ಕವಿತೆಯಲ್ಲಿ ಕುಸಿಯುತ್ತಿರುವ ಮಾನವ ಮೌಲ್ಯಗಳು. ಹಣದ ದುರಾಸೆಗಾಗಿ ಪ್ರಕೃತಿ ನಾಶ. ಹಣದ ಆಸೆಯ ಸಂಭಂದಗಳು ಅಪಮೌಲ್ಯಕೊಳ್ಳಗಾಗುತ್ತಿರುವ ಚಿತ್ರಣವನ್ನು ಕವಿ ಕಟ್ಟಿಕೊಟ್ಟಿದ್ದಾರೆ.
ಮುಂದೆ ಗುರುವಿನ ಅಳಲು ಪದ್ಯದಲ್ಲಿ ಮಗುವಿಗೆ ಮೊದಲ ಗುರುವಾದ ತಾಯಿ, ಹಾಗೂ ಅಕ್ಷರ ಕಲಿಸಿದ ಶಿಕ್ಷಕ ಇವರಿಬ್ಬರನ್ನು ಇಂದಿನ ಯುವ ಪೀಳಿಗೆ ಮರೆತು, ಅವರನ್ನು ಲಕ್ಷಿಸದೇ ಮುಂದೆ ಗುರಿ ಇಲ್ಲದೇ ಹಿಂದೆ ಗುರು ಇಲ್ಲದೇ ಇಡೀ ಲೋಕವೇ ನಶ್ವರವಾಗುವ ಅಂತ್ಯ ಕಾಣುವ ದಿಕ್ಕಿಗೆ ಸಾಗುತ್ತಿರುವುದನ್ನು ಚಿತ್ರಿಸುವರು. ‘ಗುರುವೇ ನಮಃ’ ಎಂಬಲ್ಲಿಂದ ಇಂದು ‘ಗುರುವೇನ್ ಮಹಾ’ ಎಂಬಲ್ಲಿಗೆ ನಮ್ಮ ಜನಜೀವನ ಋಣಾತ್ಮಕವಾಗಿ ಬದಲಾಗಿರುವ ಸನ್ನಿವೇಷವನ್ನು ಕವಿ ಇಲ್ಲಿ ವಿವರಿಸಿರುವರು. ವಿನಾಕಾರಣ ದ್ವೇಶ, ನಿಂದನೆ, ಅವಮಾನ, ಅತಿ ಆಸೆ, ದ್ರೋಹ, ವಂಚನೆ, ಅನೈತಿಕತೆ ಅಸೂಯೆಗಳನ್ನು ಕಂಡು ಬೆಸತ್ತ ಕವಿ ಈ ಜಗತ್ತೇ ಅಯೋಮಯವಾಗಿದೆಯಲ್ಲ ಎಂದು ದೇವರಲ್ಲಿ ಮೊರೆಯಿಡುವ ಪ್ರಯತ್ನ ‘ಯಾರು ಬಲ್ಲರು ? ಜಗದ ನಿಯಮ’ ಎಂಬ ಕವಿತೆಯಲ್ಲಿದೆ. ಮುಂದೆ ‘ಸಂತೆ’ ಎಂಬ ಕವಿತೆಯಲ್ಲಿ ಒಂದು ರೀತಿಯ ತತ್ವಪದದ ಲಕ್ಷಣವನ್ನು ಒಳಗೊಂಡಿದ್ದು ಮಾನವನ ವ್ಯಾಪಾರಗಳನ್ನು ವಿಡಂಬಿಸುವ ಕೆಲಸ ಇಲ್ಲಿದೆ. ಮುಂದೆ ‘ವಿಧವೆ’ ಎಂಬ ಕವಿತೆಯಲ್ಲಿ ಒಂದು ವೈಚಾರಿಕತೆ, ಸ್ವಾತಂತ್ರ್ಯ ಆಶಯದ ಚರ್ಚೆಯನ್ನು ಗಮನಿಸಬಹುದು. ಮುಂದೆ ನೋವು ಎಂಬ ಪದ್ಯದಲ್ಲಿ ತಮ್ಮನು ಕಾಡುವ ನೆನಪುಗಳು ಅದರಿಂದಾಗುವ ಹಿಂಸೆಯ ಚಿತ್ರಣವಿದೆ. ನೆನಪುಗಳ ಚರಿತ್ರೆ ದೊಡ್ಡದು, ಇದು ಅಗೋಚರವಾಗಿ ನಮ್ಮನ್ನು ಕಾಡುವ ಶತ್ರು, ಹಾಗೇ ಪ್ರೀತಿಯ ಮಿತ್ರನು ಸಹಾ. ಪ್ರಸ್ತುತ ಪದ್ಯದಲ್ಲಿ ನೆನಪುಗಳು ಕವಿಯನ್ನು ಕಾಡುವ ಚಿತ್ರಣವಿದೆ.
‘ಆಕಾಶಗಂಗೆ’ ಪದ್ಯದಲ್ಲಿ ಮಳೆಯನ್ನು ಆಕಾಶಗಂಗೆ ಎಂಬ ಪದದಿಂದ ಸೂಚಿಸಿ ಮಳೆಯ, ಮಳೆಗಾಲದ ಪ್ರಕೃತಿಯ ವೈಭವವನ್ನು ಚಿತ್ರಿಸಿರುವುದು ವಿಶೇಷವಾಗಿದೆ.
‘ಆ ದಿನಗಳು’ ‘ಬುತ್ತಿ’ ಪದ್ಯದಲ್ಲಿ ಕವಿಗಳ ಬಾಲ್ಯಕಾಲದ ನೆನಪಿನ ಚಿತ್ರಗಳು, ತಾಯಿಯ ಪ್ರೀತಿ, ಬಡತನ, ಕೃಷಿ ಕಾರ್ಯ, ನಿಸರ್ಗದ ಸೊಬಗು, ಬಾಲ್ಯಕಾಲದ ಸ್ನೇಹಿತರೊಂದಿಗಿನ ಆಟಪಾಟಗಳ ಚಿತ್ರಣ ಬಡತನದಲ್ಲಿಯೋ ನೆಮ್ಮದಿಯ ಬದುಕನ್ನು ನಡೆಸಿದ ಚಿತ್ರಣ ಇದ್ದರೆ ಮುಂದಿನ ‘ಎಲ್ಲಿಗೆ ಹೋದವೊ’ ಎಂಬ ಕವಿತೆ ಕಾಲಕಳೆದಂತೆ ಬದಲಾಗುತ್ತಿರುವ ಈ ಎಲ್ಲಾ ಪರಿಸ್ಥಿತಿಗಳ ಕುರಿತು ಆತಂಕವನ್ನು ವ್ಯಕ್ತಮಾಡುತ್ತದೆ. ಮುಂದೆ ‘ಮಾನವೀಯತೆ’ ಎಂಬ ಕವಿತೆಯಲ್ಲಿ ನಗರ ಜೀವನ, ಅನಾಥ ಮಕ್ಕಳ ಪರದಾಟ, ಹಸಿವು, ಉಳ್ಳವರ ವಂಚನೆ, ಕೌರ್ಯ, ಇವನ್ನೆಲ್ಲಾ ಕಣ್ಣಿಗೆ ಕಟ್ಟುವಂತೆ ಕವಿ ಚಿತ್ರಿಸಿದ್ದಾರೆ. “ಶಿವನ ಆಟ’ ಎಂಬ ಕವಿತೆಯಲ್ಲಿ ಮಾನವನ ವ್ಯಾಪಾರ, ಮನಸ್ಥಿತಿಗಳನ್ನು, ದ್ವಂದ್ವಗಳನ್ನು, ಶಿವನ ಮೇಲೆ ಆರೋಪಿಸಿ ವಿವರಿಸುವ ಪ್ರಯತ್ನ ಇದೆ.
ಮುಂದುವರೆದು ವರದಕ್ಷಿಣೆ, ದೇವರು,
ಕೊರಗು, ದೀಪ, ಕಳ್ಳರೆಂದರೆ ಯಾರು ? ಎಂಬ ಕವಿತೆಗಳು ಬಹಳ ಪ್ರಮುಖವಾಗಿ ಓದುಗರನ್ನು ಸೆಳೆಯುತ್ತವೆ. ‘ಕವಿತೆ’ ಎಂಬ ಶೀರ್ಷಿಕೆಯ ಕವಿತೆಯಲ್ಲಿ ಕವಿತೆ ಎಂದರೇನು ? ಎಂಬುದಕ್ಕೆ ತಮ್ಮದೇ ಆದ ಒಂದು ಹೊಸ ಮಿಮಾಂಸೆಯನ್ನು ಕವಿ ವಿವರಿಸುವ ಕೆಲಸ ಮಾಡಿರುವರು. ಮನದ ಭಾವನೆಗಳ, ಸಹೃದಯನಿಗೆ ಅರ್ಥವಾಗುವ, ಕಲ್ಪನಾ ಲೋಕದ ಚಿತ್ರಣ, ತಾನು ಕಂಡು ಉಂಡ ಅನುಭವ ಗಳಿಂದ ಕೂಡಿದ ಪದ, ವಾಕ್ಯ ಸಮೂಹವೇ ಕವಿತೆ ಎಂದು ಕವಿ ಹೇಳುವುದು ವಿಶೇಷವಾಗಿದೆ.
‘ಬುದ್ಧ ಕಾಣದ ನಗೆ’ ಕವಿತೆಯಲ್ಲಿ ಬುದ್ಧನ ಜಿವನವನ್ನು ಸಂಕ್ಷಿಪ್ತವಾಗಿ ಹೇಳುವ ರಾಜುರವರು ಬುದ್ಧನಿಗೆ ಜ್ಞಾನ ಸಿಕ್ಕಿತು ಆದರೆ ಅವನ ಪ್ರಜೆಗಳ ಮುಖದಲ್ಲಿ ನಗು ಮಾತ್ರ ಕಾಣಲೇ ಇಲ್ಲ. ಎಂದರೆ ಅಂದಿನಿಂದ ಇಂದಿನವರೆಗೆ ಇಲ್ಲದವರ ಕಷ್ಟಗಳು ತೀರುವ ದಾರಿಯೇ ಸಿಗಲಿಲ್ಲ ಎಂಬುದನ್ನು ಕವಿ ಇಲ್ಲಿ ದುಃಖದಿಂದ ಹೇಳುವ ಪ್ರಯತ್ನ ಮಾಡಿದ್ದಾರೆ. ಇನ್ನು ‘ಹಣತೆ’ ಮತ್ತು ‘ದೀಪ’ ಎಂಬ ಕವಿತೆಗಳ ಮೂಲಕ ದೀಪ ಗುಡಿಯ ದೇವರಿಗಲ್ಲ ಬದಲಾಗಿ ಕತ್ತಲು ಕವಿದಿರುವ ನೊಂದ ಹೃದಯಗಳಿಗೆ ಸಾಂತ್ವನ ಹಾಗೂ ಪ್ರೀತಿ, ವಾತ್ಸಲ್ಯದ ದೀಪ ಹಚ್ಚಬೇಕೆಂಬ ಆಶಯ ವ್ಯಕ್ತವಾಗಿದೆ.
ಹೀಗೆ ಮಾನ್ಯ ರಾಜು ಸೂಲೇನಹಳ್ಳಿ ಅವರ ಕವನ ಸಂಕಲನ ‘ಬುದ್ಧ ಕಾಣದ ನಗೆ’ ವೈವಿಧ್ಯಮಯವಾದ ಕಲ್ಪನಾ ಚಿತ್ರಣಗಳನ್ನು, ಕವಿಯ ಅನುಭವ – ಅನುಭಾವ ಜಗತ್ತನ್ನು, ಮಾನಸಿಕ ತುಮುಲಗಳನ್ನು, ಬದಲಾಗುತ್ತಿರುವ ಪ್ರಕೃತಿ, ಮಾನವೀಯ ಸಂಬಂಧಗಳ ಕುರಿತಾದ ಆಳವಾದ ದುಖಃವನ್ನು, ವೈಚಾರಿಕ ಹಾಗೂ ಬಂಡಾಯದ ಎಳೆಯನ್ನು ನಿಸ್ವಾರ್ಥ ಪ್ರೇಮಿಯೊಬ್ಬನ ಮನಸಿನ ನೋವುಗಳನ್ನು ತನ್ನ ಅಂತರಂಗದಲ್ಲಿ ಹೊತ್ತು ಹಲವು ವೈವಿಧ್ಯತೆ, ವಿಶಿಷ್ಟತೆ ಹಾಗೂ ಸೂಕ್ಷ್ಮ ಸಂವೇದನೆಗಳಿಂದ ಕೂಡಿದ್ದು ಸಹೃದಯರ ಮನಸ್ಸನ್ನು ಒಂದೇ ಓದಿಗೆ ಗೆಲ್ಲುವ ಶಕ್ತಿ ಈ ಕೃತಿ ತನ್ನಲ್ಲಿ ಅಡಗಿಸಿಕೊಂಡಿದೆ. ಇಂತಹಾ ಕೃತಿರತ್ನ ವನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಕವಿಗಳಿಗೆ ಹೃದಯಪೂರ್ವಕ ಅಭಿನಂದನೆಗಳು.
(ಪ್ರತಿಗಳಿಗಾಗಿ ಸಂಪರ್ಕಿಸಿ : 9741566313)
-ವರುಣ್ ರಾಜ್