“ಸನ್ಮಾರ್ಗ ತೋರುವ “ಸತ್ ಪಾತ” ಕವಿತೆಗಳು”: ಅನುಸೂಯ ಯತೀಶ್

“ಸತ್ ಪಾತ” ಎಸ್. ಬಿ. ಮಾಳಗೊಂಡ ವಿರಚಿತ ಕವನ ಸಂಕಲನವಾಗಿದ್ದು 66 ಕವಿತೆಗಳನ್ನು ಒಳಗೊಂಡ ಬೃಹತ್ ಹೊತ್ತಿಗೆಯಾಗಿದೆ. ನಾಡಿನ ಖ್ಯಾತ ಲೇಖಕರಾದ “ರಾಗಂ” ಎಂದೆ ಹೆಸರು ವಾಸಿವಾಸಿಯಾದ ರಾಜಶೇಖರ ಮಠಪತಿಯವರ ಬೆನ್ನುಡಿಯ ಕಳಶದೊಂದಿಗೆ ಚೆನ್ನಬಸವಣ್ಣ ಎಸ್.ಎಲ್. IPS. ರವರ ಮುನ್ನುಡಿಯ ಶುಭ ಹಾರೈಕೆ ಜೊತೆಗೂಡಿ 2022 ರಲ್ಲಿ ಕನ್ನಡ ಸಾರಸ್ವತ ಲೋಕವನ್ನು ಪ್ರವೇಶಿಸಿದ ಕೃತಿ ಇದಾಗಿದೆ. ಎಸ್. ಬಿ. ಮಾಳಗೊಂಡರವರು ಪೊಲೀಸ್ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಆಗಿ ಲಾಟಿ ಹಿಡಿದು ಸಮಾಜಘಾತುಕರ ವಿರುದ್ಧ ಚಾಟಿ ಬೀಸುವ ಹುದ್ದೆಯಲ್ಲಿ ಇರುವವರು. ಇವರ ಕೈಯಲ್ಲೊಂದು ಹರಿತವಾದ ಲೇಖನಿ ಸಿಕ್ಕರೆ ಏನಾಗಬಹುದು ಎಂಬ ಕುತೂಹಲವನ್ನು ತಣಿಸುವ ನಿಟ್ಟಿನಲ್ಲಿ ಸಾಗುವ ಮಾನವ ಪ್ರೇಮ ಮತ್ತು ಆಧ್ಯಾತ್ಮಿಕ ಅಡಿಪಾಯಗಳಿಂದುದಿಸಿದ ಕಾವ್ಯಗಳು ಕವಿಯ ಮನದೊಳಗೆ ಪುಟಿದೆದ್ದ ಭಾವಗಳ ಸಹಜ ಉಕ್ತಿಯಾಗಿವೆ. ಇವರು ವೃತ್ತಿಯಲ್ಲಿ ಸಮಾಜವನ್ನು ತಿದ್ದುವ, ರಕ್ಷಿಸುವ ಕಾಯಕದಲ್ಲಿ ಇದ್ದುಕೊಂಡು, ಪ್ರವೃತ್ತಿಯಲ್ಲಿ ಕವಿತೆಗಳ ಮೂಲಕ ಮನು ಕುಲವನ್ನು ಸರಿ ದಾರಿಯಲ್ಲಿ ಕೊಂಡೊಯ್ಯುವ ಸಂಕಲ್ಪಗೈದವರು. ನಿತ್ಯ ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಹೆಗಲ ಮೇಲಿದ್ದರೂ, ತನ್ನ ಮನದೊಳಗೆ ಹುಣ್ಣಿಮೆಯ ಕಡಲಿನ ಅಲೆಗಳಂತೆ ಉಕ್ಕುವ ಅಂತರ್ಭಾವವನ್ನು ರಚನಾತ್ಮಕವಾಗಿ ಕ್ರಿಯಾಶೀಲವಾಗಿ ಅಭಿವ್ಯಕ್ತ ಪಡಿಸಲು ಇವರು ಆಯ್ಕೆ ಮಾಡಿಕೊಂಡ ಮಾರ್ಗವೇ ಕವನಗಳ ರಚನೆ.

ಇತರರ ಕವನ ಸಂಕಲನಗಳಿಗೆ ಹೋಲಿಸಿದಾಗ ಇವರ ಪುಸ್ತಕದಲ್ಲಿ ಬಹಳ ವಿಶೇಷ ಅನಿಸಿದ್ದು ಇವರ ಪ್ರತಿ ಕವಿತೆಯು ಹೆರಿಗೆಯಾದ ಕಾರಣ, ಸಂದರ್ಭ, ಸ್ಥಳ, ದಿನಾಂಕಗಳ ಮಾಹಿತಿಯನ್ನು ನಮೂದಿಸಿರುವುದು. ಇಂತಹ ದಾಖಲೆಯನ್ನು ನಾವು ಕೆಲವೇ ಕೆಲವು ಹಿರಿಯ ಕವಿಗಳ ಬರಹದಡಿಯಲ್ಲಿ ಕಾಣಬಹುದು. ಇದನ್ನು ಪ್ರತಿಯೊಬ್ಬ ಕವಿಯು ಮಾಡಿದರೆ ಒಳಿತು. ಮುಂದೆ ಅವರ ಸಾಹಿತ್ಯ ಪಯಣ ಪ್ರಭುದ್ಧತಯೆಡೆಗೆ ಸಾಗುತ್ತಾ ಬರಹ ಮಾಗಿದ ಕಾಲಮಾನದಲ್ಲಿ ತಮ್ಮ ಕವಿತೆಗಳು ಯಾವ ಯಾವ ಕಾಲಘಟ್ಟಗಳಲ್ಲಿ ಯಾವ ಯಾವ ಹಂತದಲ್ಲಿದ್ದವು ಎಂಬುದನ್ನು ತಿಳಿಯಲು ನೆರವಾಗುತ್ತದೆ. ಜೊತೆಗೆ ಕೃತಿಚೌರ್ಯದಂತಹ ಆಚಾತುರ್ಯಗಳಿಂದ ನಮ್ಮ ಕವಿತೆಗಳನ್ನು ಕಾಪಾಡಿಕೊಳ್ಳಬಹುದು. ಇಲ್ಲಿ ನನ್ನನ್ನು ಬಹುವಾಗಿ ಪಡೆದ ಪ್ರಶ್ನೆ ಇವರು ತನ್ನ ಪೊಲೀಸ್ ವೃತ್ತಿಯ ಕರ್ತವ್ಯಕ್ಕೆ ಇತರ ಸ್ಥಳಗಳಿಗೆ ಹೋದಾಗ ಅಲ್ಲಿ ತಂಗಿದ್ದ ತಾಣಗಳನ್ನೆ ತನ್ನ ಕಾವ್ಯ ಉತ್ಪಾದನೆಯ ಕಾರ್ಖಾನೆಯನ್ನಾಗಿ ಮಾಡಿಕೊಂಡು ಉತ್ಕೃಷ್ಟ ಕಾರ್ಯದ ನೂಲನ್ನು ತೆಗೆದಿರುವುದು.

ಓದುಗರಿಗೆ ಪ್ರಭುದ್ಧ ಕಾವ್ಯದ ಸಾರವನ್ನುಣಿಸುವ ಕೃತಿಕಾರರ ದೃಢವಾದ ನಿಲ್ಲುವ ಪ್ರತಿ ಕವಿತೆಗಳಲ್ಲಿ ವ್ಯಕ್ತವಾಗಿದೆ. ಇವರ ಚೊಚ್ಚಲ ಕವನ ಸಂಕಲನದಲ್ಲಿಯೇ ಅಧಮ್ಯ ಹುರುಪು ಧಾರಾಕಾರವಾಗಿ ಹರಿದಿದೆ. ಇಲ್ಲಿ ಕವಿಯು ಸಮಾಜದ ಒಡನಾಟದೊಂದಿಗೆ ನಿತ್ಯ ವೃತ್ತಿಯನ್ನು ಮಾಡುವುದರಿಂದ ಅವರಿಗೆ ಸಹಜವಾಗಿ ಜನರ ನಾಡಿಮಿಡಿತದ ಅರಿವಿದ್ದು, ಪೂರಕ ಮಿಡಿತಗಳನ್ನು ಸೃಷ್ಟಿಸುತ್ತ ಇಂದಿನ ಭಾವಿ ಜನಾಂಗಕ್ಕೆ ಏನು ಅಗತ್ಯವಿದೆ ಎಂದರಿತು, ಕೃಷಿ ಮಾಡುವ ಮೂಲಕ ಓದುಗರೆದೆ ತಟ್ಟಿ ಅವರ ಮನದ ವೈಚಾರಿಕತೆಯ ಬಾಗಿಲನ್ನು ತೆರೆಯುವ ಪ್ರಯತ್ನ ಮಾಳಗೊಂಡ ಅವರದಾಗಿದೆ. ಇದರಿಂದ ಕಾವ್ಯ ಪ್ರಿಯರು ಇವರ ಕವಿತೆಗಳ ಜೇನನ್ನು ಚಪ್ಪರಿಸಿ ಚಪ್ಪರಿಸಿ ಸವಿಯುವಂತೆ, ಪ್ರತಿ ಸಾಲನ್ನು ಓದಿ ಓದಿ ಆನಂದಿಸುವರು. ಬಹುತೇಕ ಕವಿತೆಗಳು ಚಿಂತನ ಮಂಥನದಲ್ಲಿ ಕಡೆದ ಸುಂದರವಾದ ಕಾವ್ಯ ಶಿಲ್ಪಗಳಾಗಿವೆ. ಜಗದ ಜಾತ್ರೆಯಲ್ಲಿ ನಿಂತಾಗ ಕಾಣುವ ಮನುಜರ ವಿಭಿನ್ನ ಮನಸ್ಸುಗಳ ಅನುಭೂತಿಯನ್ನು ಇವು ಕಟ್ಟಿಕೊಡುತ್ತವೆ.

ಇವರು ತಮ್ಮ ಕವಿತೆಗಳಿಗೆ ನೀಡಿರುವ ಶೀರ್ಷಿಕೆಗಳು ಓದುವವರಿಗೆ ಹೆಚ್ಚು ಅಪ್ಯಾಯಮಾನವಾಗಿಸುವ ಜೊತೆಗೆ ಉತ್ತಮ ಸೆಳೆತವನ್ನು ಆಕರ್ಷಣೆಯನ್ನು ಕೂಡ ಹೊಂದಿವೆ. ಓದುಗರನ್ನು ಚಿಂತನಾ ಲಹರಿಯಲ್ಲಿ ಮುಳುಗಿಸುತ್ತವೆ. ಮನುಜರ ಬದುಕಿಗೆ ಬೇಕಾದ ಬದುಕಿನ ಒಳ ತಿರುಳನ್ನು ತಮ್ಮ ಶೀರ್ಷಿಕೆಗಳಿಗೆ ನೀಡುವ ಮೂಲಕ ಜೀವನದ ಅನುಭವದ ಉಗ್ರಾಣಗಳಂತೆ ಭಾಸವಾಗುತ್ತವೆ. ಈ ಉಗ್ರಾಣಗಳಿಗೆ ಪ್ರವೇಶಿಸಿದಾಗ ಅಧಮ್ಯ ಜೀವನೋತ್ಸಾಹ, ಪ್ರೇಮೋತ್ಸವದ ಭರಾಟೆ, ಆತ್ಮ ವಿಮರ್ಶೆಯ ಕಿಟಕಿಗಳು ತೆರೆದು ಸಮಾಜದಲ್ಲಿ ನೊಂದವರ ಕಣ್ಣೀರಿಗೆ ಸೇತುವೆ ಕಟ್ಟುವ ಕೆಲಸ ಮಾಡುತ್ತವೆ.

ವೃತ್ತಿಯಾಗಲಿ ಪ್ರವೃತ್ತಿಯಾಗಲಿ ವ್ಯಕ್ತಿಗಳಿಗೆ ಯಶಸ್ಸು ನೀಡುವುದು ಅವರು ಅದಕ್ಕೆ ತೋರುವ ನಿಷ್ಠೆ, ಬದ್ಧತೆ, ಕಾಳಜಿ, ಪ್ರೀತಿ, ಅಭಿಮಾನ, ಆತ್ಮವಿಶ್ವಾಸ, ದೃಢ ಸಂಕಲ್ಪ ಹೊಂದಿದ್ದಾಗ ಮಾತ್ರ ಇಂತಹ ಸಂದರ್ಭಗಳು ಅವರ ಬರಹವನ್ನು ಗಟ್ಟಿಗೊಳಿಸುತ್ತಾ ಗಮ್ಯದೆಡೆಗೆ ಸಾಗಿಸುತ್ತವೆ. ಅಂತಹ ಅಧಮ್ಯ ಶಕ್ತಿ ಇವರ ಕಾವ್ಯಗಳಲ್ಲಿ ಕಾಣುತ್ತದೆ. ಬರೆಯಬೇಕೆಂಬ ಒತ್ತಡದಿಂದಲೊ ಅಥವಾ ಒತ್ತಾಯದಿಂದಲೊ, ಹಂಬಲದಿಂದಲೋ ಜೀವ ತಳೆದ ಕವಿತೆಗಳಂತೆ ಇವು ಕಾಣುವುದಿಲ್ಲ. ಪ್ರತಿ ಕವಿತೆಯನ್ನು ಕವಿ ಧ್ಯಾನಿಸಿ ಬರೆದಂತಿದೆ, ಅನುಭವಿಸಿ ಅನುಸಂಧಾನಿಸಿದಂತಿದೆ.

ಮಾಳಗೊಂಡರವರ ಕವಿತೆಗಳು ಇವರ ಅಧ್ಯಯನದ ಮಟ್ಟವನ್ನು ಅಳೆಯುತ್ತವೆ. ಉತ್ತಮ ಓದುಗ ಮಾತ್ರ ಉತ್ಕ್ರುಷ್ಟ ಸಾಹಿತ್ಯ ರಚಿಸಬಲ್ಲ ಎಂಬ ಮಾತಿಗೆ ಇವರ ಕವಿತೆಗಳು ಪುಷ್ಟಿ ತುಂಬುತ್ತವೆ. ಮೊನಚಾದ ಬರಹದಲ್ಲಿ ಸಮಾಜ ವಿರೋಧಿ ಚಟುವಟಿಕೆಗಳನ್ನು ವ್ಯಂಗ್ಯವಾಗಿ ಅಭಿವ್ಯಕ್ತಪಡಿಸುವ ಇವರ ನಿಖರ ನಿಲುವನ್ನು ನಾವು ಮೆಚ್ಚಲೇಬೇಕು. ತಪ್ಪನ್ನು ಕಂಡಾಗ ತಪ್ಪೆಂದು ಹೇಳುವಲ್ಲಿ ಕವಿಗೆ ಯಾವುದೇ ಬಂಧನಗಳಿಲ್ಲ. ಗಟ್ಟಿಯಾದ ಧ್ವನಿಯಲ್ಲಿ ಅದನ್ನು ಎದುರಿಗಿಟ್ಟು ಖಂಡಿಸುತ್ತಾ ಸರಿ ದಾರಿಯಲ್ಲಿ ನಡೆಯಲು ಬೆರಳು ತೋರುತ್ತಾರೆ.

ಇವರ ಕವಿತೆಗಳಲ್ಲಿ ಪ್ರೀತಿ, ಪ್ರೇಮ, ಕಾಳಜಿ, ಅಂತಃಕರಣ, ಸಹೃದಯತೆ, ಪ್ರಕೃತಿ ಪ್ರೇಮ ಎದ್ದು ಕಾಣುತ್ತದೆ. ಇಲ್ಲಿ ಕವಿಗೆ ತನ್ನ ಸುತ್ತ ಮುತ್ತಲಿನ ಜನರ ಸಂಕಟಗಳು, ಸಮಾಜದ ಕ್ರೌರ್ಯ, ಅಸಮಾನತೆ, ಮೋಸ, ವಂಚನೆ, ಸ್ವಾರ್ಥ, ಲಾಲಸೆ, ಅಪ್ರಮಾಣಿಕತೆ, ಡೋಂಗಿತನ, ಲೋಲಪತೆ, ಶೋಷಣೆ ಬಹುವಾಗಿ ಕಾಡಿವೆ. ಇವಕ್ಕೆಲ್ಲ ತನ್ನ ಕಾವ್ಯದ ಮೂಲಕ ಚಿಕಿತ್ಸೆ ನೀಡುವ ಪಣ ತೊಟ್ಟು ಸಮಾಜದ ಅವ್ಯವಸ್ಥೆಯನ್ನು, ಅನಾಚಾರವನ್ನು ತಡೆಗಟ್ಟಲು ಜನರನ್ನು ಆಧ್ಯಾತ್ಮಿಕ ಮಾರ್ಗದಲ್ಲಿ ಪ್ರಜ್ಞಾಪೂರ್ವಕವಾಗಿ ಕರೆದೊಯ್ದ ಪ್ರಯುಕ್ತ ರೂಪುಗೊಂಡ ಕವನ ಸಂಕಲನವೆ ಸತ್ ಪಾತ. ಇವರ ಬರಹ ಅರಿತವಷ್ಟೇ ಅಲ್ಲ ವಿಭಿನ್ನವಾಗಿ ಬಿತ್ತರಿಸುವ ನೋಟಗಳು ಕೂಡ ತೀಕ್ಷ್ಣವಾಗಿವೆ. ಇಲ್ಲಿ ಮೂಢನಂಬಿಕೆಗೆ ಅವಕಾಶವಿಲ್ಲ. ವೈಚಾರಿಕವಾಗಿ, ವೈಜ್ಞಾನಿಕವಾಗಿ, ತಾರ್ಕಿಕವಾಗಿ ಚಿಂತಿಸುವ ಮೂಲಕ ಬರಹಕ್ಕೆ ಜೀವ ತುಂಬಿದ್ದಾರೆ.

ಇಲ್ಲಿ ಕೆಲವು ಕವಿತೆಗಳು ಭಾವಗೀತೆ ಸ್ವರೂಪದಲ್ಲಿ ಮೂಡಿಬಂದಿದ್ದು ಹಾಡಲು ಬರುವಂತಿವೆ. ಮತ್ತಷ್ಟು ಕವಿತೆಗಳು ವಾಚಿಸಿಸುವಂತೆ ಮೂಡಿಬಂದಿವೆ. ಆದರೆ ಅವು ವಾಚ್ಯವೆನಿಸದೆ ಮೃದು ಮಧುರತೆಯನ್ನು ಹೊಂದಿವೆ. ಇಲ್ಲಿ ವಿಶೇಷವಾಗಿ ಕವಿಯು ಪ್ರಾಸ ಪ್ರಯೋಗಕ್ಕೆ ಒಗ್ಗಿಕೊಂಡಿರುವುದು ಕಂಡುಬರುತ್ತದೆ. ಪ್ರಾಸ ಬಳಕೆ ಎಂದಾಗ ಒತ್ತಾಯಪೂರ್ವಕವಾಗಿ ಪ್ರಾಸ ಜೋಡಿಸಲು ಹೋಗಿ ಅರ್ಥ ಮತ್ತು ಭಾವ ವ್ಯತ್ಯಾಸವಾಗುವ ಅಪಾಯಗಳೆ ಹೆಚ್ಚು. ಇಲ್ಲಿ ಮಾಳಗೊಂಡರವರ ಕವಿತೆಗಳನ್ನು ಓದಿದಾಗ ತ್ರಾಸವಿಲ್ಲದೆ ಸುಲಲಿತವಾಗಿ ಪ್ರಾಸ ಪ್ರಯೋಗಿಸಿರುವ ಜಾಣ್ಮೆ ಎದ್ದು ಕಾಣುತ್ತದೆ. ಮನಸ್ಸಿಗೆ ತೋಚಿದಂತೆ ತೀಡಿದ ಮಾತ್ರಕ್ಕೆ ಕಾವ್ಯವು ಪರಿಮಳ ಸೂಸಲಾರದು. ಅದು ಓದುಗರ ಮನದಲ್ಲಿ ನಿಲ್ಲಲು ಸಮಾಜದ ಪ್ರತಿಬಿಂಬವಾಗಿ, ನೊಂದವರ ಪಾಲಿಗೆ ಬೆಳಕ ನಿಚ್ಚಣಿಕೆಯಾಗಬೇಕು. ಕವಿಯ ಜವಾಬ್ದಾರಿ ಕೇವಲ ತನ್ನ ಮನಸಿನಲ್ಲಿದ್ದ ಭಾವಗಳನ್ನು ಅಭಿವ್ಯಕ್ತ ಪಡಿಸುವುದಷ್ಟೇ ಅಲ್ಲ, ಸ್ವಯಂ ಸಂತೋಷಪಡುವುದು ಅಲ್ಲ, ತನ್ನ ಕೈಯಲ್ಲಿರುವ ಲೇಖನಿಯನ್ನು ಹರಿತವಾದ ಆಯುಧದಂತೆ ಬಳಸುವ ಮೂಲಕ ಸ್ವಾಸ್ಥ ಸಮಾಜ ನಿರ್ಮಾಣದ ವಾತಾವರಣ ಸೃಷ್ಟಿಸಬೇಕೆಂಬ ಹಂಬಲ.

ಸಮಾಜದ ಸಮಸ್ಯೆಗಳಿಗೆ ಉತ್ತರ ದೊರಕಿಸುವ ಖಜಾನೆಯಾಗಬೇಕು ಅಂತಹ ಸಾಹಿತ್ಯ ಸರ್ವಕಾಲ ಮಾನದಲ್ಲೂ ಸ್ವೀಕಾರವಾಗಿ ಉಳಿಯುತ್ತದೆ. ಅಂತಹ ಗುಣಲಕ್ಷಣಗಳು ಮಾಳಗೊಂಡ ಅವರ ಹೊತ್ತಿಗೆಯ ಪ್ರಮುಖ ಹೈಲೈಟ್ ಆಗಿದೆ.

ಸೂಕ್ಷ್ಮವಾದ ವಿಚಾರಗಳನ್ನು ತೀಕ್ಷ್ಣವಾದ ಶಬ್ದ ಭಂಡಾರ ಬಳಸಿ, ಅತಿ ನಾಜೂಕಾಗಿ ನವಿರಾಗಿ ಭಾವಗಳನ್ನು ಅಕ್ಷರ ರೂಪಕ್ಕಿಸಿದ್ದಾರೆ. ವಚನಕಾರರು, ತತ್ವಪದಕಾರರು ಮತ್ತು ಸೂಫಿಗಳ ಜಾಡಿನಲ್ಲಿ ಸಾಗಿರುವ ಕವಿಯು ತಮ್ಮ ಕವಿತೆಗಳ ಮೂಲಕ ಜೀವನ ದರ್ಶನ ಮಾಡಿಸಿದ್ದಾರೆ. ಇವು ಕೇವಲ ಪದ್ಯಗಳಂತೆ ಭಾಸವಾಗದೆ ಅನುಭವದ ಅರಿವಿನಲ್ಲಿ ಪುಟಿದೆದ್ದ ಆತ್ಮಾನುಸಂಧಾನವಾಗಿವೆ. ತಾತ್ವಿಕ ದೃಷ್ಟಿಕೋನದಿಂದ ಚಿಂತಿಸಿ ಜೀವನದ ಸವಾಲುಗಳನ್ನು ಎದುರಿಸಲು ಪ್ರೇರಣೆಯಾಗುತ್ತವೆ. ಹೊಸದೊಂದು ಹುಡುಕಾಟಕ್ಕೆ ದಾರಿಯಾಗುತ್ತವೆ. ಬದುಕಿನ ಚಹರೆಗಳನ್ನು ತಿಳಿದು ಮುನ್ನಡೆಲು ಈ ರಚನೆಗಳು ಸಹಕಾರಿಯಾಗಿವೆ.

ಎಸ್. ಬಿ. ಮಾಳಗೊಂಡವರು ಭಾವ ಸೂಕ್ಷ್ಮತೆಯ ಮತ್ತು ವಾಸ್ತವ ಪ್ರಜ್ಞೆಯ ಕವಿಯಾಗಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಉದಯೋನ್ಮುಖ ಕವಿಯಾಗಿ ಗುರುತಿಸಿಕೊಳ್ಳುವ ಎಲ್ಲಾ ಲಕ್ಷಣಗಳನ್ನು ತಮ್ಮ ಚೊಚ್ಚಲ ಕವನ ಸಂಕಲನದಲ್ಲಿಯೆ ನಿರೂಪಿಸಿದ್ದಾರೆ. ಇವರ ಕಾವ್ಯಕ್ಕೆ ನಿಲುಕದ ವಸ್ತುವಿಲ್ಲವೆನ್ನುವಂತೆ ಕಾವ್ಯ ವಸ್ತುಗಳನ್ನ ದುಡಿಸಿಕೊಂಡು ತಮ್ಮ ಕವಿತೆಗಳ ಮೂಲಕ ನವರಸಗಳನ್ನು ಎರಕ ಹೊಯ್ದಿದ್ದಾರೆ. ಇಲ್ಲಿ ಸಿಹಿಯು ಇದೆ, ಕಹಿಯೂ ಇದೆ, ಒಗರು ಇದೆ. ಯಾವುದು ಎಲ್ಲೂ ಮಿತಿಮೀರಿಲ್ಲ. ಸಮಾನವಾದ ತಕ್ಕಡಿಯಲ್ಲಿ ತೂಗಿ ಓದುಗರಿಗೆ ಬಹುಮಟ್ಟಿಗೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಇವರ ಕವಿತೆಗಳ ದಾಟಿ ತುಂಬಾ ವಿಶಿಷ್ಟವೆನಿಸುತ್ತದೆ. ಕೆಲವೊಮ್ಮೆ ತಾನು ಹೇಳಬೇಕೆಂದುಕೊಂಡಿರುವ ವಿಷಯವನ್ನು ನೇರವಾಗಿ ವ್ಯಕ್ತಪಡಿಸಿದರೆ, ಮತ್ತೆ ಕೆಲವೊಮ್ಮೆ ತಾರ್ಕಿಕ ಚಿಂತನೆಯಲ್ಲಿ ಮುಳುಗಿಸಿ ಓದುಗರೆ ಆಲೋಚಿಸಿ ಒಳಿತು ಕೆಡುಕುಗಳ ನಿರ್ಣಯ ಮಾಡಲು ಬಿಡುತ್ತಾರೆ. ಮಗದಷ್ಟು ಕಡೆ ಮಾರ್ಮಿಕವಾಗಿ ತನ್ನ ಆಶಯವನ್ನು ಹೇಳುತ್ತಾ ಅದರೊಟ್ಟಿಗೆ ವಹಿಸಬೇಕಾದ ಎಚ್ಚರಿಕೆಯ ಗಂಟೆ ಬಾರಿಸುವುದನ್ನು ಮರೆಯುವುದಿಲ್ಲ. ಇಲ್ಲಿ ಭಾವ ತೀವ್ರತೆಯ ಕವಿತೆಗಳು ಮತ್ತು ಸಂವೇದನೆಗಳ ಅರ್ಥ ವಿಸ್ತಾರ ಬಿಂಬಿಸುವ ಬರಹಕ್ಕೂ ಯಾವುದೇ ಕೊರತೆ ಇಲ್ಲ. ಭಾವಜೀವಿಯಾದ ಕವಿ ಮನಸ್ಸಿನ ಅಂತ:ಕರಣವನ್ನು ಸೃಜನಾತ್ಮಕವಾಗಿ ಹಾಗೂ ಲೀಲಾಜಾಲವಾಗಿ ಪ್ರಯೋಗಿಸಲ್ಪಟ್ಟು ಮನುಕುಲದ ಉದ್ಧಾರದ ಪರಮ ಧ್ಯೇಯವನ್ನು ಮಂಡಿಸುತ್ತವೆ.

ಸಮಾಜದ ದುಸ್ಥಿತಿಗೆ ಕಣ್ಣೀರು ಹಾಕುವ ಕವಿ ಪ್ರೀತಿ ಪ್ರೇಮ ಮಾನವೀಯತೆಯ ಹೃದಯವಂತರನ್ನು ಕಂಡಾಗ ಹೆಮ್ಮೆಯಿಂದ ಬೀಗುವುದಕ್ಕೂ ಸಿದ್ಧ. ವಿದ್ವಂಸಕ ವಿಕೃತ ವಿಲಕ್ಷಣ ಮನಸ್ಥಿತಿಗಳಿಗೆ ಚಡಿಯೇಟು ಕೊಡಲು ಬದ್ಧ. “ಸತ್ ಪಾತ್” ಕೃತಿಯಲ್ಲಿ ಕವಿಯ ಭಾಷಾ ಪ್ರಭುತ್ವದ ಪ್ರಬುದ್ಧತೆಯನ್ನು ಗುರುತಿಸಬಹುದು. ಪದಗಳ ಪ್ರಯೋಗದಲ್ಲಿ ಪುನರಾವರ್ತನೆಗೆ ಹೆಚ್ಚು ಜೋತು ಬೀಳದೆ ತನ್ನೊಳಗಿರುವ ಅಮೋಘ ಶಬ್ದ ಭಂಡಾರದಿಂದ ನವ ನವೀನ ಶಬ್ದಗಳನ್ನು ಹೆಕ್ಕಿ ತೆಗೆದು ಕಾವ್ಯಗಳನ್ನು ಅಲಂಕರಿಸಿ ನವ ನಾವಿನ್ಯತೆಗೆ ಆದ್ಯತೆ ನೀಡಿದ್ದಾರೆ. ಆದಾಗ್ಯೂ ವೈಭವೀಕರಣದಲ್ಲಿ ಸೊಕ್ಕದೆ, ಭಾಷಾ ಬಳಕೆಯಲ್ಲಿ ಚಮತ್ಕಾರಗಳನ್ನು ಮೆರೆದಿದ್ದಾರೆ.

ಕಾವ್ಯ ಮಗ್ಗದಲ್ಲಿ ಅಮೋಘವಾದ ರೂಪಕಗಳು ಮತ್ತು ಪ್ರತಿಮೆಗಳೆಂಬ ನೂಲನ್ನು ಸೊಗಸಾಗಿ ತೆಗೆದು ವೈವಿಧ್ಯಮಯವಾದ ಹಾಗೂ ಮನಮೋಹಕವಾದ ಕಾವ್ಯವನ್ನು ನೇಯ್ದಿದ್ದಾರೆ. ತುಂಬಾ ಸಹಜವಾಗಿ ಸಲೀಸಾಗಿ ಪ್ರಯೋಗಿಸಲ್ಪಟ್ಟ ರೂಪಕಗಳು ಓದುಗರಿಗೆ ಕಾವ್ಯವನ್ನು ಹೆಚ್ಚು ಅಪಾಯಮಾನವಾಗಿಸುತ್ತವೆ. ಜೊತೆಗೆ ಕವಿತೆಗಳಿಗೆ ಪೂರಕವಾದ ಚಿತ್ರಗಳು ತುಂಬಾ ಸುಂದರವಾಗಿ ಮೂಡಿ ಬಂದಿದ್ದು ಕಣ್ಮನ ಸೆಳೆಯುತ್ತವೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಪುಟ್ಟ ಗ್ರಾಮ ಟಕ್ಕಳಕಿಯವರಾದ ಇವರು ತಮ್ಮ ನೆಲದ ಭಾಷೆ, ಕವಿಯ ಎದೆಯ ದನಿಯಾದ ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ಬಹುತೇಕ ಕವಿತೆಗಳನ್ನ ರಚಿಸಿರುವುದು ಪುಸ್ತಕಕ್ಕೆ ತುಂಬಾ ವಿಭಿನ್ನತೆಯನ್ನು ನೀಡಿದೆ.

ಹಳ್ಳಿ ಭಾವ ಬಳ್ಳಿ, ಪುರಾಂಗಿ, ನಾನೇಕೆ ಕವಿಯಾಗಬೇಕು?, ಬಾನಿನಾಚೆ ಏನಿದೆ?, ಕಾಲನ ಕಾವಲುಗಾರರು, ಆದಿ ಅನಾದಿ, ನಿನಗೆ ಯಾವ ರೋಗ, ಹುತ್ತದೊಳನೆತ್ತಿ, ಲೋಕಮತಿ, ರೋಗ ಬಂಡನಿಗೆ ಯೋಗ ದಂಡ, ಹಿಂಗಾದ್ರ ಹೆಂಗ್ ಕನ್ನಡ್ಗತಿ, ವೀರ ಕನ್ನಡ, ಆ ದಿನಗಳು, ಜಗ ಜಾಣ ಮಾಡಲು ಕೊಡಬೇಕಾ ಪ್ರಾಣ, ಮುಸುಕು ಸರಿಸೋ ಮಾಯೆ, ನಾ ಬಂದೇನಿ ಬೇ, ಕಟ್ಟುಪಾಡು ಸುಟ್ಟು ಈ ಕವಿತೆಗಳು ಈ ಸಂಕಲನದ ಅತಿ ದೀರ್ಘ ಕವಿತೆಗಳಾಗಿವೆ. ದೀರ್ಘ ಕವಿತೆಗಳು ಎಂದಾಗ ಅಲ್ಲಿ ತೊಡಕುಗಳು ಹೆಚ್ಚು ಎದುರಾಗುತ್ತವೆ ಆದರೆ ಅಷ್ಟು ಸುಧೀರ್ಘ ಕಾವ್ಯ ಹೆಣೆದಿದ್ದಾರೆ. ಎಲ್ಲೂ ಅದರ ಅರ್ಥ ಮತ್ತು ಭಾವಗಳಿಗೆ ಕೊಂಕಾಗದಂತೆ ಎಚ್ಚರ ವಹಿಸುವುದರೊಂದಿಗೆ ನೀರಸ ಭಾವದಿಂದ ಹೊರತಂದು ಕುತೂಹಲ ಮತ್ತು ಆಸಕ್ತಿಯಲ್ಲಿ ಪ್ರತಿ ಪದ್ಯವನ್ನು ಕಾಪಾಡುತ್ತಾ ಸಾಗಿದ್ದಾರೆ. ಇಲ್ಲಿ ಕವಿಯ ಭಾವ ಸಂಯೋಜನೆ ಮತ್ತು ಶಬ್ದ ಜೋಡಣೆಯ ಕಲಾತ್ಮಕತೆಯನ್ನು ಮೆಚ್ಚಲೇಬೇಕು. ಇಂತಹ ಕವಿತೆಗಳು ಕವಿಯ ಕಾವ್ಯ ಕೃಷಿಯ ಬಲಿತ ಫಸಲುಗಳಾಗಿ ಕಾವ್ಯ ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆ ನಿಂತು ಕವಿಯ ಪ್ರೌಢಿಮೆಯನ್ನು ಸಾರುತ್ತವೆ.

ಎಸ್. ಬಿ. ಮಾಳಗೊಂಡರವರ ಅನೇಕ ಕವಿತೆಗಳು ಆಧ್ಯಾತ್ಮಿಕವಾದ ನೋಟದಿಂದ ವಿಭಿನ್ನ ಒಳಹುಗಳನ್ನು ಸೃಷ್ಟಿಸುತ್ತ, ಸರ್ವ ಧರ್ಮಗಳಲ್ಲೂ ಸಮಾನ ತತ್ವವಿರುವುದನ್ನು ಸಾರುವ ಸಮ ಸಮಾಜದ ಕಲ್ಪನೆಯನ್ನು ನನಸಾಗಿಸುವ ಅಂತ ಸತ್ವವನ್ನು ಸಾರುತ್ತವೆ ಎನ್ನಲು ಅಡ್ಡಿಯಿಲ್ಲ.

ಎಸ್. ಬಿ. ಮಾಳಗೊಂಡ ರವರು ಆಧ್ಯಾತ್ಮಿಕ ಚಿಂತನೆಯ ಕವಿಯಾಗಿದ್ದು, ದೇವರು ಮತ್ತು ಧರ್ಮದ ಬಗ್ಗೆ ಅಪಾರ ನಂಬಿಕೆ ಇಟ್ಟಿದ್ದಾರೆ ಆದರೆ ಇವುಗಳನ್ನು ಸೀಮಿತವಾದ ನೆಲೆಯಲ್ಲಿ ನೋಡದೆ, ಪ್ರೀತಿ ಪ್ರೇಮ ಸಹಬಾಳ್ವೆ ಸಾಮರಸ್ಯದ ಮೂಲಕ ಮನುಕುಲವನ್ನು ಒಗ್ಗೂಡಿಸುವುದೆ ಪರಮ ಧರ್ಮವೆಂದು ಸಾರುತ್ತವೆ. ಇವರು ತಮ್ಮ ಕವಿತೆಗಳಲ್ಲಿ ಕುವೆಂಪುರವರ ಆಶಯವಾದ ಸರ್ವ ಜನಾಂಗದ ಶಾಂತಿಯ ತೋಟವಾಗಿ ನಾಡನ್ನು ನೋಡ ಬಯಸುತ್ತಾರೆ. ಇದಕ್ಕೆ ಪೂರಕವಾಗಿ ಕವಿನುಡಿಯಲ್ಲಿ ತಮ್ಮ ಗುರುಗಳ ಮಾತನ್ನು ಹೀಗೆ ಉಲ್ಲೇಖಿಸುತ್ತಾರೆ “ಮಕ್ಕಳ್ರ್ಯಾ, ಜಗತ್ತಿನಲ್ಲಿ ಯಾವುದೇ ಜಾತಿ ಧರ್ಮವಿಲ್ಲ. ಎಲ್ಲರೂ ಒಂದೆ. ಹಿಂದೂ ಕ್ರಿಶ್ಚಿಯನ್ ಮುಸ್ಲಿಂ ಎಂದು ಬಡಿದಾಡದೆ ಬದುಕನ್ನು ಗೆದ್ದು ಹೋಗಿ” ರೆಂಬ ತಮ್ಮ ಗುರುಗಳಾದ ಶ್ರೀ ಮಕಬೂಲ ಸಾಹೇಬರ ಮಾತು ತಮ್ಮ ಮೇಲೆ ಅಗಾಧ ಪ್ರಭಾವ ಬೀರಿದ್ದು, ಅದನ್ನು ಅವರು ತಮ್ಮ ಬದುಕು ಮತ್ತು ಬರಹಗಳಲ್ಲಿ ಅಳವಡಿಸಿಕೊಂಡಿರುವೆ ಎಂದಿದ್ದಾರೆ. ಇಂತಹ ವಿಚಾರಗಳೇ ಸಮಾಜವನ್ನು ಜನಸಮುದಾಯವನ್ನು ಕಾಡಬೇಕು. ಅದೇ ದಾರಿಯಲ್ಲಿ ಕೊಂಡೊಯ್ಯಬೇಕು. ಆ ದೃಷ್ಟಿಯಿಂದ ಎಸ್.ಬಿ. ಮಾಳಗೊಂಡವರು ಅಭಿನಂದನಾರ್ಹರು.

ಯಾವುದೇ ವಿಚಾರವನ್ನು ಹೇಳುವಲ್ಲಿ ಸೂಕ್ಷ್ಮತೆ ಕವಿ ಇರಬೇಕು. ಉದ್ವೇಗ, ಉದ್ರೇಕ, ಸಿಟ್ಟು ಸೆಡವು, ಆಕ್ರೋಶ ಆವೇಶಗಳಿಂದುದುಗಿದ ಕಾವ್ಯಕ್ಕೆ ಆಯಸ್ಸು ಕಮ್ಮಿ. ಅದರಿಂದ ಸಾಮಾಜಿಕ ಹಿತ ಬಯಸುವುದು ಮರೀಚಿಕೆಯಂತೆ. ದಂಡ ಹಿಡಿದು ತಪ್ಪಿಸಸ್ಥರನ್ನು ಪಳಗಿಸಿ ಸರಿ ಮಾಡುವ ತಂತ್ರಗಳು ಇವರಿಗೆ ಹೇಗೆ ಕರಗತವಾಗಿವೆಯೋ ಹಾಗೆಯೇ ಕಾವ್ಯದ ಮೂಲಕ ಸಮಾಜದಲ್ಲಿನ ದುಷ್ಟತನವನ್ನು, ಲಂಪಟತನವನ್ನು, ಅತಿರೇಖಕ್ಕೆ ಆಸ್ಪದ ನೀಡದಂತೆ ಸಾತ್ವಿಕವಾದ ಸಿಟ್ಟು ದಂಡ ಪ್ರಯೋಗಿಸಿ ತಿದ್ದಲು ಇವರ ಲೇಖನಿ ತುಡಿದಿದೆ. ಎಸ್.ಬಿ. ಮಾಳಗೊಂಡವರು ತಮ್ಮ ಕೆಲವು ಕವಿತೆಗಳಲ್ಲಿ ಜೋಡು ನುಡಿಗಳನ್ನು, ದ್ವಿರುಕ್ತಿಗಳನ್ನು ಅದ್ಭುತವಾಗಿ ಪ್ರಯೋಗಿಸುವ ಮೂಲಕ ತಮ್ಮ ಕವನಗಳ ಸಾರವನ್ನು ಇಮ್ಮಡಿಗೊಳಿಸಿದ್ದಾರೆ. ಇಂತಹ ಹೊಸ ಹೊಸ ಪ್ರಯೋಗಗಳು ಇವರನ್ನು ವಿಶಿಷ್ಟ ಸ್ಥಾನದಲ್ಲಿ ನೋಡುವಂತೆ ಮಾಡುತ್ತವೆ.

ಸಾಹಿತ್ಯ ಕ್ಷೇತ್ರದಲ್ಲಿ ಕಾವ್ಯವೆಂಬುದು ನಿರಂತರ ತೊರೆಯಾಗಿ ಹರಿಯುತ್ತಿದ್ದು, ಆ ಮಹಾಸಾಗರದಲ್ಲಿ ತಮ್ಮ ಕವಿತೆಗಳ ಅಸ್ತಿತ್ವವನ್ನು ಉಳಿಸಿಕೊಳ್ಳಲು ಕವಿಗಳು ಹೆಣಗಾಡುತ್ತಿರುವ ದಿನಮಾನಗಳಲ್ಲಿ ಗಟ್ಟಿತನದ ಬರಹದ ಮೂಲಕ ತನ್ನ ಅಸ್ಮಿತೆಯನ್ನು ಕಂಡುಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಇದೆಲ್ಲವನ್ನು ಮೆಟ್ಟಿನಿಂತು ಸವಕಲು ಸಾಹಿತ್ಯ ರಚಿಸದೆ ಹೊಸತನದ ಮೂಲಕ ತನ್ನೊಳಗೆ ಅಧಮ್ಯ ತುಡಿತವನ್ನು, ತಲ್ಲಣಗಳನ್ನು, ಬದುಕಿನ ಪಲ್ಲಟಗಳನ್ನು ತೀಕ್ಷ್ಣವಾಗಿ ಕಟ್ಟಿಕೊಡುತ್ತಾ ತನ್ನದೇ ಆದ ಓದುಗ ವರ್ಗವನ್ನು ಸೃಷ್ಟಿಸಿಕೊಂಡಿದ್ದಾರೆ.

ಇವರ ಕವಿತೆಗಳಲ್ಲಿ ಶಾರದೆಯ ಸ್ತುತಿಯಿದೆ, ಕನ್ನಡದ ಬಗ್ಗೆ ಕಾಳಜಿ ಹೆಮ್ಮೆ ಅಭಿಮಾನವಿದೆ, ನೇಗಿಲ ಯೋಗಿ ಕಾಯಕ ಜೀವಿ ಅನ್ನದಾತ ರೈತನ ಬಗ್ಗೆ ಗೌರವಾರ್ಪಣೆ ಇದೆ, ಯುಗಾದಿಯ ಪ್ರಕೃತಿಯ ವರ್ಣನೆ ಇದೆ, ಸಾಮಾಜಿಕ ಮೌಢ್ಯ ಜಾಡ್ಯಗಳ ತೊಲಗಿಸುವಿಕೆಯ ಹಂಬಲವಿದೆ, ಬಾನಿನಾಚೆ ಏನಿದೆ ಎಂಬ ಹುಡುಕಾಟವಿದೆ, ಭಾವ ಬಂಧನದ ಬಿಡುಗಡೆಯ ಮಾರ್ಗವಿದೆ, ಕವಿಯ ಸ್ವಯಂ ಆತ್ಮ ವಿಮರ್ಶೆಯಿದೆ, ತಾನುಟ್ಟಿ ಬೆಳೆದ ಪ್ರಕೃತಿಯ ತಾಣ ಮತ್ತು ಬಾಲ್ಯದ ಸವಿನೆನಪುಗಳ ಸರಮಾಲೆ ಇದೆ, ಬದುಕಿನ ಸಡಗರದ ಸೊಗಸಿದೆ, ಬುದ್ಧನಾಗುವ ಬದ್ಧತೆಯ ಮಾರ್ಗವಿದೆ, ಮಡದಿಯೊಂದಿಗಿನ ಪ್ರೀತಿ ಪ್ರೇಮದ ಪುಳಕ ಭಾವವಿದೆ, ಬದುಕಿನ ಅನುಕ್ಷಣದ ಉಲ್ಲಾಸವಿದೆ, ಮನುಜನಿಗೆ ಹಿಡಿದಿರುವ ಕೆಟ್ಟ ಚಾಳಿಗಳ ವಿಡಂಬನೆಯಿದೆ, ತಳಮಳದ ಜೀವನದ ಪಾಠವಿದೆ, ಹುಟ್ಟು ಸಾವುಗಳನ್ನು ವರ್ಗಾವಣೆಗೆ ಹೋಲಿಸುವ ಪರಿಯೂ ಇದೆ. ಅಂತರಂಗದ ಕಣಜ ತೆರೆಯುವ ಮಾರ್ಗವಿದೆ, ಡೋಂಗಿತನದ ಅನಾವರಣವಿದೆ, ಬಾಳೆಂಬ ದೀಪಕ್ಕೆ ಬತ್ತಿ ಹೊಸೆಯುವ ಹಂಬಲವಿದೆ, ಶಕ್ತಿ ದೇವಿಯ ವಿಭಿನ್ನ ಅವತಾರಗಳ ಸ್ಮರಣೆ ಇದೆ, ಯೋಗ ಯೋಗದ ಮಹಿಮೆ ಇದೆ, ಪ್ರೀತಿಯ ಬೆಸುಗೆ ಇದೆ, ದೇಹವೆಂಬ ತೊಗಲಿನ ಚೀಲದಿಂದ ಮುಕ್ತಿ ಪಡೆಯುವ ದಾರಿ ಇದೆ, ಕಾಲನ ಕಾವಲುಗಾರರ ಕಾಯಕದ ಮಹತ್ವವಿದೆ, ಬದುಕು ಹದವಾಗಲು ಪರಿಹಾರವಿದೆ, ಶಾಲೆಯ ವರ್ಣನೆ ಇದೆ, ನಿಜಗುಣವ ಹೊಂದುವ ಜಗವೇ ದೀಪವೆಂಬ ಕಲ್ಪನೆ ಇದೆ, ಮನುಜರಲ್ಲಿ ಗುದ್ದಾಟಗಳು ಭಗವಂತನ ಕರೆದಾಟದ ಮುಂದೆ ಸೋಲುತ್ತವೆಂಬ ತತ್ವವಿದೆ. ನಂದೂ ನಿಂದೂ ಏನಿಲ್ಲ ಜಾಗದಲ್ಲಿ ಎಂಬ ಬದುಕಿನ ಸಾರವಿದೆ, ಸಾರ್ಥಕತೆಯ ದಾರಿ ಇದೆ, ಮಣ್ಣು ಸೇರುವ ಮುನ್ನ ಮನುಜನಾಗಬೇಕೆಂಬ ಸಲಹೆ ಇದೆ, ಕೆಟ್ಟ ಕಟ್ಟುಪಾಡುಗಳು ಸುಟ್ಟು ವೈಚಾರಿಕ ಮಾರ್ಗದಲ್ಲಿ ಸಾಗುವ ಸಂದೇಶವಿದೆ, ಪ್ರಕೃತಿಯೊಳಗಿನ ಗುಟ್ಟಿನ ಪರಿಚಯವಿದೆ, ಸಹಜ ಬದುಕಿನ ಸರಳ ಸೂತ್ರಗಳಿವೆ, ಬಾಳಿನ ಮಾಯೆ ಎಂಬ ಮುಸುಕು ಸರಿಸಲು ದಾರಿ ಇದೆ, ಪುರಾಣದ ಸಾಧ್ವೀಯರ ಸ್ಮರಣೆ ಇದೆ, ಬದುಕು ಸಾಗಲು ಬೇಕಾದ ಅಂಶಗಳ ಪಟ್ಟಿ ಇದೆ, ಸರ್ವಧರ್ಮಗಳ ಸಾಮರಸ್ಯವು ಇದೆ, ಜಗದ ಬಂಡಿಗೆ ಇರಬೇಕಾದ ಕೊಂಡಿಯ ಹುಡುಕಾಟವಿದೆ, ಕಳೆದ ಬಾಲ್ಯದ ದಿನಗಳ ನೆನಪಿನ ಬುತ್ತಿ ಇದೆ, ದೈವದ ವಿಭಿನ್ನ ಆಟಗಳ ಲೀಲೆ ಇದೆ.

ಮಾಳಗೊಂಡ ಅವರ ಕವಿತೆಗಳ ಕೆಲವು ಝಲಕ್ ಗೋಳನ್ನು ನೋಡುವುದಾದರೆ,

“ಸಿಟ್ಟಿಲ್ಲ ಸೆಡವಿಲ್ಲ
ಹುಟ್ಟು ಬಡವಿಯಲ್ಲ
ಆದರೂ ನಿನಗ್ಯಾಕೆ ಸೊಕ್ಕಿಲ್ಲ”?

ಎಂದು ತನ್ನ ಮಡದಿ ದೀಪಿಕಾರನ್ನು ಮನದುಂಬಿ ಹೊಗಳುವ ಕವಿ, ಈ ಕವಿತೆಗೆ ನೀಡಿರುವ ಶೀರ್ಷಿಕೆ ಪೂರಾಂಗಿ. ನನ್ನ ಅರಿವಿನಲ್ಲಿ ನೋಡಿದಾಗ ಇದು ಬಹುಶಃ ಕನ್ನಡದಲ್ಲಿ ಮೊದಲ ಪ್ರಯೋಗವಿರಬಹುದು. ಇದ್ದರೂ ಅಪರೂಪವಿರಬಹುದು, ಚರಿತ್ರೆ ಪುರಾಣಗಳ ಕಾಲದಿಂದಲೂ ಹೆಂಡತಿಯನ್ನು ಅರ್ಧಾಂಗಿಯಾಗಿ ಬಿಂಬಿಸಲಾಗಿದೆ. ಆದರಿವರು ಪೂರಾಂಗಿ ಎನ್ನುವ ಹೊಸ ಪದವನ್ನು ಮಡದಿಗೆ ನೀಡಿರುವುದು ಕವಿಯ ಲಿಂಗ ಸಮಾನತೆಯ ಮನೋಭಾವದ ಜೊತೆಗೆ, ಹೆಣ್ಣಿನ ಬಗೆಗಿನ ಇವರ ಗೌರವಾಧರ ಭಾವವು ಕಂಡು ಬರುತ್ತದೆ.

“ಹಳ್ಳಿ ಒಂದು ಭಾವಲೋಕ
ಬೇಡಿಲ್ಲ ನಮಗೆ ರೊಕ್ಕ ಗಿಕ್ಕ
ಸಾಯುತ್ತಿದ್ದೆವು ನಕ್ಕ ನಕ್ಕ
ಕುಣಿಯುತ ತೈಯ್ಯಾತಕ”

ಈ ಸಾಲುಗಳೆ ಓದುಗರನ್ನು ತಯ್ಯಾತಕ ಎಂದು ಕುಣಿಸುವುದಂತು ಸತ್ಯ. ಎಲ್ಲರ ಭಾವ ಬಳ್ಳಿಯಲ್ಲೂ ಬೆಸೆದುಕೊಂಡಿರುವ ಅವರ ಹಳ್ಳಿಯ ಸೊಬಗು ಸೌಂದರ್ಯದ ವರ್ಣನೆಯೊಂದಿಗೆ ಬಾಲ್ಯದಲ್ಲಿ ಹಳ್ಳಿಗಾಡುಗಳಲ್ಲಿ ಪ್ರಕೃತಿಯ ಮಡಿಲಲ್ಲಿ, ಪಕ್ಷಿಗಳ ಕಲರವದಲ್ಲಿ, ಗಿಡಮರಗಳ ತಂಗಾಳಿಯಲ್ಲಿ, ನದಿ ತೊರೆಗಳ ನಿನಾದದಲ್ಲಿ, ಆಡಿದ ಆಟ ತುಂಟಾಟ ಇವೆಲ್ಲವುಗಳಿಂದ ತುಂಬಿದ ಪ್ರತಿಯೊಬ್ಬರ ಭಾವ ಕೋಶವನ್ನು ತೆರೆದು ಅವರನ್ನು ಮತ್ತೊಮ್ಮೆ ಬಾಲ್ಯದ ಸ್ಮರಣೀಯ ಕ್ಷಣಗಳಿಗೆ ಕರೆದೊಯ್ದ ಕವಿಯ ಬರಹದ ಶೈಲಿ ಅಮೋಘವಾಗಿ ಮೂಡಿಬಂದಿದೆ.

“ಬಾ!! ಇಲ್ಲಿ ನೋಡಿಲ್ಲಿ ಹೊಲ
ತುಂಬಾ ಹಸಿರ ಭೂತಾಯಿಯ
ಭರಪೂರ ಬಸಿರ, ಕೇಳು
ಕನ್ಯೆಯರ ಸೋಬಾನ ಸಡಗರ
ನೋಡಿ ಮನ ತುಂಬಾ ನಗತಾರ,
ಮುಗಿಲ ಚಂದಿರ ನೇಸರ”

ಇಲ್ಲಿ ಕವಿಕಲ್ಪನೆ ಅದೆಷ್ಟು ಸುಂದರವಾಗಿ ಮೂಡಿಬಂದಿದೆ. ಭೂತಾಯ ಹಸಿರೊಡಲ ಬಸಿರ ಐಸಿರಿಯು ಕವಿ ಕಾವ್ಯಕ್ಕೆ ಸ್ಪೂರ್ತಿಯಾಗಿದೆ. ತರುಣಿಯರು ಮನದುಂಬಿ ಹಾಡಿದ ಹಾಡಿಗೆ ಮನಸೋತು ಭೂಮಿಯ ಅಂದ ಚಂದಕೆ ಬೆರಗಾಗಿ ಮುಗಿಲ ಮನೆಯಲ್ಲಿ ಕುಳಿತ ಸೂರ್ಯ ಚಂದ್ರರು ನಗುವ ಪರಿ ಸೊಗಸಾಗಿದೆ.

“ಬತ್ತಿ ಹೋಗುತ್ತಿರುವ ಹಳ್ಳ ಕೊಳ್ಳ
ಮುಂದೆ ಹೇಗೆ ಬದುಕಬೇಕು
ನಮ್ಮಯ ಪಿಳ್ಳ, ಬಡಾಯಿ
ಮಾಡುತ್ತಿದ್ದೇವೆ ಆಸೆಗೆ ಬಿದ್ದು ಸುಳ್ಳ
ಮುಂದೆ ಆಗುವಳು ಭೂತಾಯಿ ಸುಟ್ಟ ಎಳ್ಳ”

ಇಲ್ಲಿ ಕವಿ ಅದ್ಭುತವಾದ ಚಾಟಿ ಬೀಸುವ ಮೂಲಕ ಪ್ರಕೃತಿಯ ವಿರುದ್ಧ ವಿಕೃತಿ ಮೆರೆಯುವ ಮನುಷ್ಯನ ಅನಾಚಾರವನ್ನು ಬಗೆದಿಡುವ ಜೊತೆಗೆ ಭೂತಾಯಿಯನ್ನು ಹೀಗೆ ಬರಿದು ಮಾಡಿದರೆ ಮುಂದಿನ ಜನಾಂಗದ ಗತಿ ಏನು ಅದಕ್ಕಾಗಿ ಪ್ರಕೃತಿಯನ್ನು ಉಳಿಸಿ ಕಾಪಾಡಬೇಕೆಂಬ ಕಾಳಜಿ ಹಾಗೂ ಆತಂಕ ಕವಿಯನ್ನು ಬಹುವಾಗಿ ಕಾಡಿದೆ.

ನಾನೇಕೆ ಕವಿಯಾಗಬೇಕು ಎಂಬ ಕವಿತೆಯಲ್ಲಿ “ಉತ್ತಿಷ್ಟ ವಿಚಾರವಾದಿಯಾಗುವುದಕ್ಕಿಂತ ಕನಿಷ್ಠ ವಿವೇಕವಾದಿಯಾಗಬೇಕೆಂಬ ಆಸೆಯಿಂದ ನಾನು ಬರೆಯಬೇಕು” ಇಲ್ಲಿ ಕವಿಗೆ ತಾನೇಕೆ ಬರೆಯಬೇಕೆಂಬ ಕುರಿತು ಸ್ಪಷ್ಟ ಗುರಿಯಿದೆ. ಅದಕ್ಕಾಗಿ ತನ್ನನ್ನು ತಾನು ಆತ್ಮವಿಮರ್ಶೆಗೆ ಒಳಪಡಿಸಿಕೊಂಡು, ತನ್ನ ಬರಹದ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಇವರ ಕವಿತ್ವ ವೈಯಕ್ತಿಕ ನೆಲೆಯನ್ನು ದಾಟಿ ಸಾರ್ವತ್ರಿಕ ಅಂಗಳದಲ್ಲಿ ಸರ್ವ ಜನಾಂಗದ ಹಿತ ಬಯಸುತ್ತದೆ.

“ಕಂಡದ್ದೆಲ್ಲಾ ಓಡ್ಯಾಡಿ ನೆಕ್ಕತಿ
ಕಾಣದಿದ್ದರೂ ಹುಡುಕಾಡಿ ಹೆಕ್ಕತಿ
ಅನ್ಯರ ಪಾಲನ್ನು ಕ್ಯಬರಾಡಿ ಕಸೀತಿ
ಕೊನೆಗೆ ಪಶ್ಚತ್ತಾಪದಿಂದ ಬಿಕ್ಕತಿ”

ಮರ್ಕಟದಂತೆ ಆಡುವ ಮನುಷ್ಯನ ವರ್ತನೆಯನ್ನು ಈ ಕವಿತೆ ಕಟ್ಟಿಕೊಡುತ್ತದೆ ದುರಾಸೆಯಿಂದ ಕಂಡಿದ್ದನ್ನು ಕಾಣದಿದ್ದನ್ನು ಕಬಳಿಸಿ ಇತರರಿಗೆ ಸೇರಿದ್ದನ್ನು ತಾನೇ ಕಸಿದುಕೊಂಡು ಕೊನೆಗೆ ಅಂತ್ಯಕಾಲದಲ್ಲಿ ತನ್ನ ತಪ್ಪಿನ ಅರಿವಾಗಿ ದುಃಖಿಸುವೆ. ಅದೆಲ್ಲ ಆಗುವ ಮುನ್ನ ಎಚ್ಚರಿಕೆ ವಹಿಸಬೇಕೆಂದು ಒಳಿತು ಮಾಡಬೇಕೆಂದು ಕವಿ ಹುರಿದುಂಬಿಸುತ್ತಾರೆ.

“ಮನಸು ಕದ್ದ ತುಡುಗಿ
ಕನಸು ಕಟ್ಟುವ ಬೊಂಬಾಟದ ಬೆಡಗಿ
ನನ್ನಿಭಾವ ಬಣ್ಣದ ಗಡಗಿ
ಅಂತಸ್ತು ಅಂತರಂಗದೊಳಗಡಗಿ
ಆಹಾ, ಏನು ನಿನ್ನ ಬಳಕುವ ನಡಿಗಿ”

ಇಲ್ಲಿ ಕವಿಯು ತನ್ನ ಹುಡುಗಿಯನ್ನು, ತನ್ನ ಮನದರಸಿಯನ್ನು ಅವಳ ಅಂದ ಚಂದದ ಜೊತೆಗೆ, ಅವಳ ಅಂತರಂಗದ ಪ್ರೇಮವನ್ನು ಸೊಗಸಾದ ಭಾವದೊಲವಿನಲ್ಲಿ ಸುಂದರ ರೂಪಕಗಳ ಮೂಲಕ ಚಂದದ ಪ್ರಾಸ ಬಂಧದಲ್ಲಿ ವರ್ಣಿಸಿದ್ದಾರೆ.

ಸಂಭಾಷಣೆಯ ರೂಪದಲ್ಲಿ ಮೂಡಿಬಂದ ನಿನಗೆ ಯಾವ ರೋಗ ?ಕವಿತೆಯ ಸಾಲುಗಳಾದ

“ನಿನಗೆ ಇನ್ನೊಬ್ಬರಿಗೆ ಮೋಸ
ವಂಚನೆ ಮಾಡುವ ರೋಗ
ಸುಳ್ಳನ್ನು ಸತ್ಯವೆಂದು ಹೇಳುವ ರೋಗ
ಆಸ್ತಿ ಲಪಟಾಯಿಸುವ ಅನ್ಯ
ಹೆಣ್ಣನ್ನು ಭೋಗಿಸುವ ಅತ್ಯಾಚಾರ
ಅನಾಚಾರ ಮಾಡುವ ರೋಗ
ಖಾದಿ ಕಾಕಿ ಕಾವಿ ಧರಿಸಿ
ಸತ್ಯ ಶರಣರಂತೆ ನಟಿಸುವ ರೋಗ”

ಹೀಗೆ ಕವಿಯ ಪ್ರತಿ ಪ್ರಶ್ನೆಗೂ ಮನುಷ್ಯ ತತ್ತರಿಸುವಂತೆ ಈ ಕವಿತೆ ರಚಿತವಾಗಿದೆ. ಮನುಷ್ಯ ಮಾಡುವ ಎಲ್ಲಾ ದುಷ್ಕ್ರಿಯೆಗಳನ್ನು ಮುಂದಿಡುತ್ತಾ ಅವನ ಅವಕಾಶವಾದಿತನ ಮುಖವಾಡಿತನವನ್ನು ಬಯಲಿಗೆ ಎಳೆಯುವ ಕಾರ್ಯವನ್ನು ಈ ಕವಿತೆಯಲ್ಲಿ ಮಾಡಿದ್ದಾರೆ.

“ಬೇಡವಾದ್ದೆಲ್ಲ ಮಾಡಿ
ಕಾಡ ಬಾರದವರನ್ನೆಲ್ಲಾ ಕಾಡಿ
ಕೊನೆಗೆ ಹೋಗುತಿ ಮನೋಹರ
ಹೇಳುತ ಹರೋಹರ”

ಬದುಕು ಕ್ಷಣಿಕ ಸದುಪಯೋಗ ಮಾಡಿಕೊಂಡವನೇ ಜಾಣ ಏನೆಲ್ಲಾ ಹೋರಾಟ ಮಾಡಿ ತಲೆ ಮಾರು ತಿನ್ನುವಷ್ಟು ಆಸ್ತಿ ಸಂಪಾದಿಸಿ, ಸುತ್ತ ಮುತ್ತಲಿದ್ದವರಿಗೆಲ್ಲ ಕಷ್ಟ ನೀಡಿ ನೀನು ಸಾಧಿಸುವುದಾದರೂ ಏನು? ಅದೆಲ್ಲ ತಿಂದುಂಡು ಖುಷಿ ಪಡಲು ಈ ಧರೆಯಲ್ಲಿ ನಿನ್ನ ಬದುಕು ಶಾಶ್ವತವಲ್ಲ. ಈ ದೇಹವನ್ನು ತ್ಯಜಿಸಿ ನೀನು ಹೋಗಲೇಬೇಕೆಂಬ ಸತ್ಯವನ್ನು ಮನುಜನಿಗೆ ಅರ್ಥ ಮಾಡಿಸಿ, ಸನ್ಮಾರ್ಗದಲ್ಲಿ ನಡೆಯುತ್ತಾ ಸತ್ ಕಾರ್ಯಗಳನ್ನು ಮಾಡಲು ಕವಿತೆ ಬಯಸುತ್ತದೆ.

“ನಿನ್ನನ್ನು ಎಬ್ಬಿಸಿ ನಿನ್ನ ಸ್ಥಾನಕ್ಕೆ
ನಿನ್ನಂತವನು ಬಂದಾ, ಏಳುವುದು
ಎಬ್ಬಿಸುವುದು ಸೃಷ್ಟಿಯ ಕ್ರಮ
ಎಂದಾ, ಒಳಗಿನ ಗೋವಿಂದ
ಖೊತಖೊತ ಕುದಿಯಿತು ಒಳಗಿಂದ”

ಅದೆಂತ ಅದ್ಭುತ ತತ್ವ ಜ್ಞಾನವನ್ನು ಮಾರ್ಮಿಕವಾದ ಸಾಲುಗಳಲ್ಲಿ ಬಂಧಿಸಿದ್ದಾರೆ. ವೃತ್ತಿ ಬದುಕಿನಲ್ಲಿ ವರ್ಗಾವಣೆ ಸಹಜ. ಒಂದು ಸ್ಥಾನವನ್ನು ಒಬ್ಬರು ತ್ಯಜಿಸಬೇಕು, ಮತ್ತೊಬ್ಬರು ಸ್ವೀಕರಿಸಬೇಕು. ಅದೇ ವೃತ್ತಿಯ ಚಕ್ರ. ಆದರೆ ಕವಿಯಿಲ್ಲಿ ಇದನ್ನು ಇದೊಂದೆ ಆಯಾಮದಲ್ಲಿ ನೋಡದೆ ಸೃಷ್ಟಿ ಕ್ರಿಯೆಯ ನೆಲೆಯಲ್ಲಿ ಚರ್ಚಿಸುತ್ತಾರೆ. ಹಳೆ ಎಲೆಯುದುರಿ ಹೊಸ ಚಿಗರಿಗೆ ಹೇಗೆ ದಾರಿ ಬಿಡುವುದೋ ಹಾಗೆ ಮನುಜರು ಈ ಧರೆಯಲ್ಲಿ ತಾನಳಿದು ಮತ್ತೊಂದು ಜೀವಿಗೆ ಬದುಕಲು ಆಸರೆ ಆಶ್ರಯ ಆಹಾರ ನೀಡಬೇಕೆಂಬ ನಿಜಾರ್ಥವನ್ನು ಇಲ್ಲಿ ಬಿಂಬಿಸಿದ್ದಾರೆ.

“ಎದ್ದು ಮಾತನಾಡು
ಬಿದ್ದು ಹೋಗುವ ಮುನ್ನ
ಶುದ್ಧವಾಗು ಸುದ್ದಿಯಾಗುವ
ಮುನ್ನ ನಿನ್ನ ಸಾವು
ಬುದ್ಧನಾಗು ಹದ್ದು ಹೆಣದ ಮೇಲೆ
ಹಾರಾಡುವ ಮೊದಲು”

ಬುದ್ಧ ಬೆಳಕಿನಲ್ಲಿ ಸಾಗುವ ಈ ಕವಿತೆ ಮನುಕುಲಕ್ಕೆ ಬಾಳಿನ ದಾರಿ ತೋರುತ್ತದೆ. ಇಲ್ಲಿ ಕವಿಯು ಸಾವು ನಿನ್ನ ಅಪ್ಪಿಕೊಳ್ಳುವ ಮುನ್ನ, ಜನ ಮೆಚ್ಚಿಕೊಳ್ಳುವ ಕಾಯಕ ಮಾಡು. ನಿನ್ನ ನಂತರ ಉಳಿಯುವ ಸಾಧನೆ ಮಾಡು. ಆಗ ಉಪಯುಕ್ತ ಕಾರ್ಯಗಳೆ ನಿನ್ನ ಬಗ್ಗೆ ಮಾತನಾಡುತ್ತವೆ ಎನ್ನುತ್ತಾರೆ. ನಿನ್ನ ಅನುಪಸ್ಥಿತಿಯಲ್ಲೂ ನಿನ್ನ ಸತ್ಕಾರ್ಯಗಳು ನಿನ್ನ ಉಪಸ್ಥಿತಿಯನ್ನು ಜಗತ್ತಿಗೆ ತೋರಿಸುತ್ತವೆ. ನೀನು ಸತ್ತಾಗ ನಿನ್ನ ತಿನ್ನಲು ಹದ್ದು ಬರುವ ಮುನ್ನ ನೀನು ಬುದ್ಧನಾಗು ಅಂದರೆ ಜ್ಞಾನ ಪಡೆ. ಬುದ್ಧನಂತೆ ಲೌಕಿಕ ಬಂಧನಗಳಿಂದ ಹೊರತಾಗಿ ಸಾಮಾಜಿಕ ಹಿತಪರ ಬಯಸುವ ಬದುಕು ಸಾಗಿಸು ಎಂದು ಸಲಹೆ ನೀಡುತ್ತಾರೆ.

“ಅಂಧ, ಒಳಗಿದೆ ಚಂದ
ತಮಂದ ಕಳಚೆಂದ
ಹಾಕಿ ಕಣ್ಣು ಮುಚ್ಚಿ ಬಂಧ
ಬಿಟ್ಟು ವಾಸನೆಯ ಸುಂಧ
ಧುಂದ ಮಾಡದ ಸಮಯ
ಕಳಚು ಕಲ್ಮಶದಂಧ”

ಇಲ್ಲಿ ಕವಿಯು ಹೊರಗಿನ ಅಂದಕ್ಕಿಂತ ಒಳಗಿನ ಚಂದವನ್ನು ನೋಡಲು ಬಯಸುತ್ತಾರೆ. ಕುರುಡಾಗಿ ಹೊರಗಿನ ಅಂದ ಚಂದಕ್ಕೆ ಮಾರುಹೋಗಬೇಡಿ ಆ ತಮವನ್ನು ಸರಿಸಿ ಬೆಳಕಿನಲ್ಲಿ ನಿಂತು ಸಮಯ ಮೀರುವ ಮುನ್ನ ಒಳಿತನ್ನು ಯೋಚಿಸು ಎಂದು ಕಿವಿ ಹಿಂಡುತ್ತಾರೆ.

“ಆಹಾ, ಕನ್ನಡ ವ್ಯಾಕರಣ
ಸವಿ ಮಾಮರದ ಶೀಕರಣ
ಮಾಟಗಾರತಿಗೆ ವಶೀಕರಣ
ಮಾತೃಭಾಷೆಗೆ ಮರಣ ಶಾಸನ”

ಈ ಕವಿತೆ ಕನ್ನಡ ಭಾಷೆಗೆ ಒದಗಿರುವ ದುಸ್ಥಿತಿಯನ್ನು ಎತ್ತಿ ತೋರುತ್ತದೆ. ಕನ್ನಡಿಗರಾದ ನಾವು ನಮ್ಮ ಭಾಷೆ ಬಿಟ್ಟು ಅನ್ಯ ಭಾಷೆಯ ಮೋಹ ಪಾಶದಲ್ಲಿ ಬಂಧಿಯಾಗಿ, ಕನ್ನಡ ಮಾತನಾಡಲು ಅವಮಾನವೆಂಬ ಭಾವ ತೋರುವುದನ್ನು ಕವಿ ಈ ರೀತಿ ಖಂಡಿಸುತ್ತಾರೆ. ಅನ್ಯ ಭಾಷೆ ಮಾಟಗಾರ್ತಿಯಂತೆ ಕಂಡಿದೆ ಕವಿಗಿಲ್ಲಿ. ಕನ್ನಡ ನುಡಿ ವ್ಯಾಕರಣವನ್ನು ಮಾಮರದ ಸಿಹಿ ಶೀಕರಣಿಗೆ ಹೋಲಿಸುವ ಮೂಲಕ ನಮ್ಮ ಕನ್ನಡ ಭಾಷೆಯನ್ನು ಪ್ರೀತಿಸಲು ಕರೆ ನೀಡುತ್ತಾರೆ.

“ಭಾವಗನ್ನಡ – ಲಯಗನ್ನಡ ಬೋಧಗನ್ನಡ
ಸ್ವಾದಗನ್ನಡ ಪದ್ಯಗನ್ನಡ -ಗದ್ಯಗನ್ನಡ
ನಿದ್ದೆಗನ್ನಡ – ಬುದ್ಧಿಗನ್ನಡ
ಅಲ್ಲಿ ಕನ್ನಡ, ಇಲ್ಲಿ ಕನ್ನಡ, ಎಲ್ಲೆಲ್ಲೂ ಕನ್ನಡ
ಲೋಕ ಪಾವನಿ ಸುವರ್ಣಾವತಿ ಕಪಿಲ ಕನ್ನಡ”

ಕನ್ನಡಾಂಬೆಯ ಈ ವರ್ಣನೆ ನಮ್ಮ ಕನ್ನಡ ನುಡಿಯ ಸೊಬಗು ಮಹಿಮೆಯನ್ನು ಸಾರುತ್ತದೆ. ಕನ್ನಡವೆಂಬುದು ಕೇವಲ ಭಾಷೆಯಲ್ಲ .ಅದು ಕನ್ನಡಿಗರ ಉಸಿರು. ಅವರ ಕಣಕಣದಲ್ಲೂ ಭವ್ಯ ನುಡಿಸಿರಿ ತುಂಬಿದೆ ಎಂಬುದನ್ನು ಕವಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.

“ಸುಮ್ಮನೇ ಬಡಿದಾಡತಿ
ಆ ಭಕ್ತ ಈ ಭಕ್ತ
ಎದೆ ಬಗೆದರೆ ಒಂದೇ ರಕ್ತ
ಒಮ್ಮೆ ಹೋಗುವಾಗ ಮಣ್ಣು ಮುಕ್ತ
ನಿಜಾನಂದ ಪಡೆಯಲಾಗು ಪೋಕ್ತ”

ಇದು ಜೀವನ ದರ್ಶನ ಮಾಡಿಸುವ ಕವಿತೆಯಾಗಿದೆ ಊರಿಗೊಂದು ಕೇರಿಗೊಂದು ದೇವರನ್ನಿಟ್ಟುಕೊಂಡು ನಾನು ಆ ದೇವರ ಭಕ್ತ ನೀನು ಈ ದೇವರ ಭಕ್ತ ಎಂದು ಹೊಡೆದಾಡುತ್ತೀರಿ, ಆದರೆ ಎಲ್ಲರ ದೇಹದಲ್ಲಿ ಹರಿಯವ ರಕ್ತ ಒಂದೇ ಆಗಿದೆ. ಎಲ್ಲರೂ ಕೊನೆಗೆ ಸೇರುವುದು ಅದೇ ಭೂತಾಯ ಮಣ್ಣು ಎಂಬ ತತ್ವ ಜ್ಞಾನವನ್ನು ಬೋಧಿಸುತ್ತಾ ಎಲ್ಲರೊಳಗೊಂದಾಗಿ ಜೀವನದ ನಿಜ ಆನಂದವನ್ನು ಅನುಭವಿಸು ಎನ್ನುತ್ತಾರೆ.

“ಜಗತ್ತೈತಿ ಒಂದೇ ಬಿಂದು
ಮಾಡುವಾಗಿಲ್ಲಿ ಹೋಗಿ ಬಂದು
ಮುಗಿದು ಬಂದರೆ ನಂದು ನಿಂದು
ಹಾಕಿ ತುಳಿತಾನ ಹೊಸ
ಮಡಿಕೆಗಾಗಿ ಕುಂಬಾರ ಚಂದು”

ಈ ಕವಿತೆ ಕವಿಯ ಆತ್ಮ ಜ್ಞಾನದ ಪ್ರತೀಕವಾಗಿದೆ. ಇಲ್ಲಿ ಕವಿ ಜಗತ್ತನ್ನು ಒಂದು ಬಿಂದುವಿನಲ್ಲಿ ನೋಡುವ ಪರಿ ವಿಸ್ಮಯವಲ್ಲವೇ ? ನಮ್ಮ ಕಾಲ ಮುಗಿದ ನಂತರ ಸೃಷ್ಟಿಕರ್ತನಾದ ಪ್ರಭು ನಮ್ಮನ್ನು ಕರೆದುಕೊಂಡು ಹೊಸ ಸೃಷ್ಟಿಗೆ ಜೀವ ತುಂಬುತ್ತಾನೆಂಬ ತತ್ವವಿಲ್ಲಿ ಅಡಗಿದೆ. ಇದಕ್ಕೆ ಮಾಳಗೊಂಡರವರು ಬಳಸಿರುವ ರೂಪಕ ಅದೆಷ್ಟು ಮಾರ್ಮಿಕವಾಗಿದೆ.

“ಕಳ್ಳ ಲೋಕ – ಮಳ್ಳ ಲೋಕ
ಸತ್ಯ ಲೋಕ – ನಿತ್ಯ ಲೋಕ
ಶ್ರೀಮಂತ ಲೋಕ – ಬಡವರ ಲೋಕ
ಮೋಸಲೋಕ – ತ್ರಾಸಲೋಕ ಯಪ್ಪಾ…”

ಇಲ್ಲಿ ಕವಿಯು ಭೂಲೋಕದಲ್ಲಿ ಕಾಣುವ ಮನುಜ ಸೃಷ್ಟಿಸಿದ ಸ್ವಾರ್ಥ, ಲಾಲಸೆ, ಮೋಸ, ವಂಚನೆ, ತಾರತಮ್ಯ, ಸುಳ್ಳು ಲೋಕಗಳ ಅನಾವರಣ ಮಾಡುತ್ತಾ ಇಂದು ಧರೆಯಲ್ಲಿ ಏನೆಲ್ಲ ಅಕ್ರಮಗಳು, ಅವ್ಯವಹಾರಗಳು, ಅನಿಷ್ಠಗಳು ನಡೆಯುತ್ತವೆ ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

“ಬಣ್ಣ ನೋಡಿ ಬದುಕಬೇಡ
ಚಿನ್ನ ನೋಡಿ ಬಳುಕಾಬ್ಯಾಡ
ಮಣ್ಣು ನೋಡಿ ಮುಲುಕಬ್ಯಾಡ
ಅಂತಃಕರಣ ತೆರೆದು ನೋಡು ಸುಗಂಧ”

ನೀರೆಯ ಬಣ್ಣಕ್ಕೆ, ಚಿನ್ನದ ಆಸೆಗೆ, ಮಣ್ಣಿನ ಮೋಹಕ್ಕೆ ಸಿಲುಕಿ ಅಂಧನಾಗಬೇಡ ಎಂದು ಕವಿ ಕರೆ ನೀಡಿದ್ದಾರೆ. ಹೊರಗಿನ ಒಳಪಿಗೆ ಮರುಳಾಗಿ ಒಳಗಿನ ಅಂತಃಕರಣದ ಕಣ್ಣನ್ನು ಮುಚ್ಚಬೇಡವೆಂಬ ಸಂದೇಶ ಇಲ್ಲಿದೆ. ಅಂಧತ್ವ ತ್ಯಜಿಸಿ ಸತ್ಯಾ ಸತ್ಯತೆಯನ್ನು ಶುದ್ಧತೆಯನ್ನು ಸರಿಯಾಗಿ ಗುರುತಿಸಲು ಮಾರ್ಗದರ್ಶನ ನೀಡುತ್ತಾರೆ.

“ಪ್ರಾಪಂಚಿಕ ತತ್ವಗಳೆಲ್ಲ
ಕಾಲನ ಕರ್ಮಕ್ಕೆ ತಳಕು
ಹಾಕಿಕೊಂಡು ಉರುಳುತ್ತಿವೆಯೇ
ಮೇಲೊಮ್ಮೆ ಕೆಳಗೊಮ್ಮೆ?”

ಈ ಕವಿತೆ ಮನುಜ ತನ್ನ ಅನುಕೂಲಕ್ಕೆ ತಕ್ಕಂತೆ ಮಾಡಿಕೊಂಡಿರುವ ನಿಯಮಗಳು, ಕಟ್ಟುಪಾಡುಗಳು, ದೈವದ ಲೀಲೆಗೆ ಬುಡ ಮೇಲಾಗಿ ಇವನು ಎಣಿಸುವುದು ಒಂದಾದರೆ, ಕಾಲನ ನಿರ್ಣಯ ಬೇರೆಯೇ ಇರುತ್ತದೆ ಎಂಬ ತತ್ವವನ್ನು ಪ್ರತಿಪಾದಿಸುತ್ತದೆ.

“ಥೂ, ಕರ್ಮದ ಪಿಂಡಾ
ಊರುವೆ ಏಕೆ ಜಾತಿ ಧರ್ಮದ ಝಂಡಾ?
ಒಳಗಿರುವಾಗೆಲ್ಲರಿಗೂ ಮಾಂಸ ಖಂಡ
ಕಟ್ಟಲೇಬೇಕು ಕೊನೆಗೆ ಶಿಕ್ಷೆಗೆ ದಂಡ”

ಈ ಕವಿತೆ ಕವಿಯ ಜಾತ್ಯಾತೀತ ಗುಣದ ಪ್ರತೀಕವಾಗಿ ಜೀವ ತಿಳಿದಿದೆ. ಮನುಷ್ಯನ ದೇಹ ಮಾಂಸ ಖಂಡದ ತಡಿಕೆ. ಅದು ಎಲ್ಲರ ದೇಹದಲ್ಲೂ ಒಂದೇ ಆಗಿರುತ್ತದೆ. ಅವರು ಅಸ್ಪೃಶ್ಯತೆಗೆ ತಡೆಯೊಡ್ಡಿ ಸಮಾನತಾ ಭಾವ ತಾಳುವಂತೆ ಆಗ್ರಹಿಸಿದ್ದಾರೆ.

“ಸುಮ್ಮನೆ ಕಟ್ಟಿಕೊಂಡು ತಂಡ
ತೆಗೆಯುತ ಅಮಾಯಕರ ರುಂಡ
ಉಂಡು ಹೋಗಲೇಬೇಕು ಪಾಪ
ಕೊನೆಗೆ ಸೇರಿ ಹೊಂಡ”

ಈ ಕವಿತೆಯು ಗುಂಪು ಕಟ್ಟಿಕೊಂಡು ಪುಂಡಾಟಿಕೆ ಮಾಡುವ ಜನ ಸಾಮಾನ್ಯರನ್ನು ಹಿಂಸಿಸುವ ಕಿಡಿಗೇಡಿಗಳಿಗೆ ತಕ್ಕ ಬುದ್ಧಿ ಕಲಿಸ್ರೆಂಬ ತಾತ್ವಿಕ ಕ್ರೋಧವನ್ನು ವ್ಯಕ್ತಪಡಿಸುತ್ತದೆ. ನಾವು ಮಾಡಿದ ದುಷ್ಪಲಗಳನ್ನು ನಾವು ಉಣ್ಣಬೇಕು. ಅದರಿಂದ ಸತ್ಕಾರ್ಯಗಳನ್ನು ಮಾಡುವ ಸಲಹೆಯನ್ನು ಕವಿಯು ಈ ಕವಿತೆಯ ಮೂಲಕ ನೀಡಿದ್ದಾರೆ.

“ನಾವೈದು ಮಂದಿ ಜಗಕೆ
ನಮಗಿಪ್ಪತ್ತು ಮಕ್ಕಳು ನೀವು
ಮೊಮ್ಮಕ್ಕಳು ಮರಿ ಗಿರಿ ಹರಿ ಮಕ್ಕಳು
ತಂದೆ ಪರಮಾತ್ಮ ಕೊಟ್ಟ ಜೀವಾತ್ಮ
ನೀವು ತಂದೆ-ತಾಯಿಯನ್ನೇ ಸಾಕುವುದಿಲ್ಲ ಹುಚ್ಚಿ
ನಾವು ಜಗವನ್ನೆ ಸಾಕುತ್ತಿದ್ದೇವೆ ನೆಚ್ಚಿ”

ಇಲ್ಲಿ ಪ್ರಕೃತಿ ಮನುಜನಿಗೆ ನೀತಿ ಬೋಧೆ ಮಾಡುತ್ತಿದೆ. ನಾವು ಐದು ಮಂದಿ ಎಂಬ ರೂಪಕ ಪಂಚಭೂತಗಳಾದ ಆಕಾಶ, ಭೂಮಿ, ಬೆಂಕಿ, ಗಾಳಿ, ನೀರುಗಳ ಸಂಕೇತವಾಗಿದ್ದು, ಮಕ್ಕಳಾದ ಸಕಲ ಮಾನವ ಕುಲ ಕೋಟಿಯನ್ನು ಪ್ರಕೃತಿ ಪೊರೆಯುತ್ತಿದೆ. ಆದರೆ ಮಕ್ಕಳು ತಮ್ಮ ಹೆತ್ತ ತಂದೆ ತಾಯಿಗಳನ್ನು ಸಾಕದೆ ಕಡೆಗಣಿಸುವುದನ್ನು ಕವಿ ವಿಷಾದ ಭಾವದಿಂದ ವಿಡಂಬನೆಗೈದಿದ್ದಾರೆ.

“ಸಿಕ್ಕಾಪಟ್ಟೆ ಹೊಲಾ ಬಂಗಾರ ಆಡಂಬರ ಜಾಲ
ಎಲ್ಲರೊಳಗೂ ತುಂಬಿರುವುದು ಒಂದೇ ಮಲ
ಯಾಕ ಆಗತಿ ಜೀವ ಕುಲಕ್ಕೆ ಮೂಲಾ”

ಐಷಾರಾಮಿ ವಸ್ತುಗಳ ಮೇಲಿನ ಮನುಷ್ಯನ ಮಿತಿಮೀರಿದ ವ್ಯಾಮೋಹ, ದುರಾಸೆ, ವೈಭವೀಕರಣ, ಆಡಂಬರಗಳ ಕುರಿತು ವ್ಯಂಗ ಭಾವದಲ್ಲಿ ಕಾವ್ಯ ರಚಿಸಿದ್ದಾರೆ. ಬಡವರು ಬಲ್ಲಿದರೆಲ್ಲರ ದೇಹದೊಳಗೂ ಕಲ್ಮಶವಾದ ಮಲ ತುಂಬಿರುವಾಗ ನಿಮ್ಮೊಳಗೆ ಕನಿಷ್ಠತೆ ಶ್ರೇಷ್ಠತೆಯ ಮದವೇಕೆಬೇಕೆಂದು ಕವಿ ಪ್ರಶ್ನಿಸುತ್ತಾರೆ.

“ನೋವು ನಲಿವು ನುಂಗಿ ಕುಳಿತು
ಒಳಿತು ಮಾಡು ಮನಸ ಮೊಳೆತು
ಅರಿಷಡ್ವರ್ಗಗಳ ಪರಸಂಗಿ ನಾಲ್ಕು ದಿನವಿದ್ದು
ಚೆಂದಾಗಿ ಮಾಡು ಪರಮ ಸತ್ಸಂಗ”

ಜೀವನ ಹೋರಾಟದಲ್ಲಿ ನೋವು ನಲಿವು ಸಹಜ ಅವೆಲ್ಲವನ್ನು ಮೆಟ್ಟಿನಿಂತು ಯೋಚಿಸು ಬೌದ್ದಿಕವಾಗಿ ಪ್ರಬುದ್ಧತೆಯಿಂದ ಒಳ್ಳೆಯದನ್ನು ಮಾಡುವ ಮನಸ್ಸು ಮಾಡು ಎನ್ನುವ ಕವಿಯು ಅರಿಷಡ್ವರ್ಗಗಳ ಪರಸಂಗಿಯಾದ ನೀನು ಜೀವಿತಾವಧಿಯ ಪರಮ ಸತ್ಸಂಗ ಮಾಡು ಆಧ್ಯಾತ್ಮದಲ್ಲಿ ಮುಳುಗು ಎನ್ನುತ್ತಾರೆ.

ಹೀಗೆ “ಸತ್ ಪಾತ” ಕೃತಿಯ ಪ್ರತಿಯೊಂದು ಕವಿತೆಯೂ ಕೂಡ ಸರಿಯಾದ ದಾರಿಯಲ್ಲಿ ಜನ ಸಮುದಾಯವನ್ನು ಕರೆದೊಯ್ಯುವ ಒಂದು ಪಣತೊಟ್ಟು ಜೀವತಳೆದಂತಹ ಕವಿತೆಗಳಾಗಿವೆ. ಇಲ್ಲಿ ಪ್ರಕೃತಿ ಹೆಣ್ಣು ಆಧ್ಯಾತ್ಮಿಕತೆ ತತ್ವಜ್ಞಾನ ಕವಿಯ ಮೇಲೆ ಅಗಾಧ ಪ್ರಭಾವ ಬೀದಿರುವುದು ಇವರ ಬರಹಗಳಲ್ಲಿ ಎದ್ದು ಕಾಣುತ್ತದೆ.

ಆಧ್ಯಾತ್ಮಿಕ ಮತ್ತು ತಾತ್ವಿಕ ನೆಲೆಯಲ್ಲಿ ರಚಿತವಾಗಿರುವ ಸಾಹಿತ್ಯ ಚಿರಕಾಲ ಉಳಿದು ಸರ್ವಕಾಲ ಮಾನದಲ್ಲೂ ಪ್ರಸ್ತುತವಾಗಿ ಉಳಿಯುತ್ತದೆ. ಆದರೆ ಅದರ ಪ್ರಸ್ತುತಿ ಅಷ್ಟು ಸುಲಭವಲ್ಲ. ಅಂತಹ ಧೃಡ ಸಂಕಲ್ಪಗೈದ ಇವರ ಕಾವ್ಯ ಶಕ್ತಿಗೆ ಅಭಿನಂದಿಸದೆ ಇರಲಾಗದು.ಇವರ ಕವಿತೆಗಳು ಸರ್ವಕಾಲಕ್ಕೂ ಸ್ಥಿರವಾಗಿ ಉಳಿಯುವ ಮಾನವ ಧರ್ಮವನ್ನು, ಬದುಕಿನ ನೈಜ ಅರ್ಥವನ್ನು ಬೋಧಿಸುತ್ತವೆ. ಜನರನ್ನು ನೈತಿಕತೆಯಲ್ಲಿ ಸಾಗಿಸುವ ಗುಣಲಕ್ಷಣಗಳು ಕಂಡುಬರುವುದು ಗಮನಾರ್ಹ ಸಂಗತಿಯಾಗಿದೆ. ಆ ದೃಷ್ಟಿಯಿಂದ ಇವರ ಆಧ್ಯಾತ್ಮಿಕ ಸಾಧನೆಗೆ ಹಾಗೂ ಸಾಹಿತ್ಯ ಕೃಷಿಗೆ ಕವಿಗೆ ಶುಭವನ್ನು ಕೋರುತ್ತಾ ಮುಂದಿನ ಸಾಹಿತ್ಯ ಪಯಣ ಯಶಸ್ವಿಯಾಗಲೆಂದು ಹಾರೈಸುವೆ.

-ಅನುಸೂಯ ಯತೀಶ್

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x