ಕಡಲ ಕಿನಾರೆಯಲಿ ನಿಂತು ನೀಲಾಕಾಶವ ಕಂಡಾಗ !: ಡಾ. ಹೆಚ್ ಎನ್ ಮಂಜುರಾಜ್

‘ಕಷ್ಟಕಾಲದಲಿ ಯಾರು ನಮ್ಮ ಜೊತೆ ಬಂದಾರು? ಕತ್ತಲಲಿ ನೆರಳು ಕೂಡ ನಮ್ಮನ್ನು ಬಿಟ್ಟು ಹೋಗುತ್ತದೆ!’ ಎಂಬ ಮಾತು ಸತ್ಯ. ಆದರೆ ಹಲವೊಮ್ಮೆ ನೆರಳು ಕೈ ಬಿಟ್ಟರೂ ಯಾರದೋ ಬೆರಳು ನಮ್ಮನ್ನು ಕಾಪಾಡುವಂಥ ಪವಾಡ ಈ ಜಗತ್ತಿನಲ್ಲಿ ಸದ್ದಿಲ್ಲದೆ ನಡೆಯುತ್ತಲೇ ಇರುತ್ತದೆ. ನಮ್ಮ ಜೀವಿತಾವಧಿಯಲ್ಲಿ ಇಂಥ ಅದೆಷ್ಟೋ ಅಪರಿಚಿತರು ಆಪದ್ಬಾಂಧವರಾಗಿ ಬಂದು ನಮ್ಮನ್ನು ನಿರಾಳಗೊಳಿಸಿರುತ್ತಾರೆ. ಆಪದ್ಬಾಂಧವ ಎಂದರೆ ಆಪತ್ತಿಗೆ ಆದವರೇ ನೆಂಟರು ಎಂದು. ಆಪತ್ತು ಎಂದರೆ ದಿಢೀರನೆ ಎದುರಾಗುವ ಕಷ್ಟಕಾಲ. ಇದು ಯಾರಿಗೆ ಬರುವುದಿಲ್ಲ? ಸಾಕ್ಷಾತ್ ಪ್ರಭು ಶ್ರೀರಾಮಚಂದ್ರನಿಗೂ ಒಂದಾದ ಮೇಲೊಂದು ದುರ್ವಿಧಿಗಳು ಎದುರಾದವು. ಇನ್ನು ಕೃಷ್ಣ ಪರಮಾತ್ಮನಿಗೂ ಹಲವು ಆಪತ್ತುಗಳು ವಿಪತ್ತುಗಳಾಗಿ ಕಾಡಿದವು. ‘ಸಂಕಷ್ಟಗಳು ಭಗವಂತನಿಗೂ ತಪ್ಪಿದ್ದಲ್ಲ ಎಂದು ಹೇಳುವುದರ ಮೂಲಕ ನರಮನುಷ್ಯರಾದ ನಮ್ಮದೇನು ಮಹಾ?’ ಎಂಬುದು ಇದರ ತಾತ್ಪರ್ಯ. ಮನಸ್ಸಿಗೆ ಸಮಾಧಾನ ತಂದುಕೊಳ್ಳುತ್ತಾ ‘ನೋಡೋಣ, ಭಗವಂತನಿದ್ದಾನೆ!’ ಎಂದು ಪರಿಹರಿಸಿಕೊಳ್ಳಲು ಪ್ರಯತ್ನಿಸುವಂತೆ ಮಾಡುವ ವೆರಿಗುಡ್ ಸೆಲ್ಫ್ ಕೌನ್ಸೆಲಿಂಗ್ ಮತ್ತು ಸೆಲ್ಫ್ ಬೂಸ್ಟಿಂಗ್ ಇದು!!

‘ಭಾಷಾಗೌರವ’ ಎಂದು ತಜ್ಞರು ಗುರುತಿಸುವ ವಿದ್ಯಮಾನವೊಂದು ಗ್ರಾಮೀಣ ಭಾಗದಲ್ಲಿದೆ. ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ ರೈತಾಪಿ ಸಮುದಾಯವು ಹುಳ ಮುಟ್ಟಿತು, ಸತ್ತೆ ಮುಟ್ಟಿತು, ಸೊಪ್ಪು ಸವರಿತು, ಮುಳ್ಳು ಗೀರಿತು ಎಂದೆಲ್ಲ ಅಂದುಕೊಂಡು ತಮಗಾಗಿರಬಹುದಾದ ಪ್ರಾಣಾಂತಿಕ ತೊಂದರೆಗಳು ತಲೆಗೇರದಂತೆ ನೋಡಿಕೊಳ್ಳುವರು. ಏಕೆಂದರೆ ಹಾವು ಕಚ್ಚಿತು ಎಂದಾಗ ಅದು ಮನಸಿಗೆ ನಾಟುತ್ತದೆ. ‘ದೇಹವೇ ಬೇರೆ, ಮನಸೇ ಬೇರೆ, ನಾವು ಅಂದುಕೊಳ್ಳುವುದೇ ಬೇರೆ’ ಎಂದು ವಾದಿಸುವವರೊಂದಿಗೆ ನಾನು ಮಾತಾಡುತ್ತಿಲ್ಲ. ಒಂದು ಹಂತದ ತನಕ ಮನಸಿನ ಆಣತಿಯನ್ನು ದೇಹ ಪಾಲಿಸುತ್ತದೆ ಎಂಬ ಅಪರಿಮಿತ ವಿಶ್ವಾಸದಲ್ಲಿ ನಿಂತು ಆಲೋಚಿಸಿದರೆ ಇದು ಮನದಟ್ಟಾಗುವ ಅಂಶ.

ಜಮೀನಿನಲ್ಲಿ ಹುಲ್ಲು ಕೊಯ್ಯುವಾಗ ಅದೇನೋ ಸವರಿದಂತಾಗಿ ಕಾಲು ಜಾಡಿಸಿದನಂತೆ. ಯಾವುದೋ ಏಡಿಯಂಥದು ತಾಗಿಕೊಂಡು ಹೋಗಿರಬೇಕೆಂದುಕೊಂಡು ಕಾಲು ಮುಟ್ಟಿ ನೋಡಿಕೊಂಡು ಆ ಗದ್ದೆ ಬದಿಯ ನೀರಿನಲ್ಲೇ ಚೆನ್ನಾಗಿ ತೊಳೆದುಕೊಂಡು ಮನೆಗೆ ಬಂದನಂತೆ. ಹುಲ್ಲಿನ ಹೊರೆಯನ್ನು ಇಳಿಸಿ, ಕೊಟ್ಟಿಗೆಯ ದನಗಳಿಗೆ ಮೇವು ಹಾಕುವಾಗ ದೊಡ್ಡದೊಂದು ಹಾವು ಸರಸರನೆ ಕಟ್ಟಿದ್ದ ಕಂತೆಯಿಂದ ಹೊರ ಬಂದು ಬುಸುಗುಟ್ಟಿದಾಗಲೇ ಅವನಿಗೆ ಗೊತ್ತಾದದ್ದು: ನನಗೆ ಈ ಹಾವೇ ಕಚ್ಚಿರಬೇಕು ಆಗ ಎಂದು! ಅಲ್ಲಿಗಲ್ಲಿಗೆ ಬಹಳ ಸಮಯವಾಗಿದ್ದರೂ ಅದು ವಿಷದ ಹಾವೋ? ವಿಷವಲ್ಲದ್ದೋ? ಅಂತೂ ಅವನು ಅದನ್ನು ಮನಸಿಗೆ ತಂದುಕೊಂಡನು!! ಒಡನೆಯೇ ಅವನಲ್ಲಿ ತಲ್ಲಣವುಂಟಾಗಿ ಭೀತಿಯಿಂದ ಬವಳಿ ಬಂದು ಕುಸಿದು ಬಿದ್ದನು. ಅದು ಹೆದರಿಕೆಯಿಂದ ಆದ ಹೃದಯಾಘಾತವೋ? ಅಲ್ಲಿಯವರೆಗೆ ಮನಸ್ಸು ತಡೆದಿದ್ದ ವಿಷಭಾವ ತಲೆಗೇರಿ ರಕ್ತನಾಳಗಳಲಿ ಸಂಚರಿಸಿ ಆದ ದುರಂತವೋ? ಗೊತ್ತಿಲ್ಲ.

ಸಾಕ್ಷಾತ್ ಈಶ್ವರನೇ ನಂಜು ಕುಡಿದು ನಂಜುಂಡನಾದ, ವಿಷಕಂಠನಾದ ಲೋಕಕಲ್ಯಾಣಕಾಗಿ! ತನ್ನ ಪತಿಯನ್ನು ಉಳಿಸಿಕೊಳ್ಳಲು ಪಾರ್ವತಿಯು ಗಂಟಲನ್ನು ಒತ್ತಿ ಹಿಡಿದ ಪರಿಣಾಮವಾಗಿ ಅದು ಅಲ್ಲೇ ಉಳಿಯಿತು. ದೇಹಕೆ ಹರಡಲಿಲ್ಲ! ಇದೆಲ್ಲ ಕತೆಗಳು ಏನನ್ನು ಹೇಳುತ್ತಿವೆ? ನಮಗೆಲ್ಲರಿಗೂ ಒಂದಲ್ಲ ಒಂದು ಬಾರಿ ಇಂಥದೆಲ್ಲ ಅನುಭವಕ್ಕೆ ಬಂದೇ ಇರುತ್ತದೆ. ಹೊರಗೆಲ್ಲೋ ಇದ್ದಾಗ ಹಸಿವು, ನಿದ್ರೆ, ಮಲ ಮೂತ್ರಗಳ ಪರಿಜ್ಞಾನವಿಲ್ಲದೇ ಅಂಥದು ಅರಿವಿಗೆ ಬಂದಾಗಲೂ ಕಾರಣಾಂತರಗಳಿಂದ ಬಿಡುಗಡೆ ಸಿಗದೇ ಇದ್ದಾಗ ಮತ್ತು ಮನೆಗೆ ಬರುವತನಕ ಅದರ ಯೋಚನೆಯೂ ಇಲ್ಲದೆ ಓಡಾಡಿದಾಗ, ಕೊನೆಗೆ ಮನೆಗೆ ಬಂದ ತಕ್ಷಣ ಮತ್ತೆ ಧುತ್ತನೆ ಅವುಗಳ ಸಂಕಷ್ಟ ಎದುರಾಗಿ ಇನ್ನು ತಡೆದಿಟ್ಟು ಕೊಳ್ಳಲು ಸಾಧ್ಯವೇ ಇಲ್ಲ ಎನ್ನುವಂತಾಗಿ, ಕೂಡಲೇ ವಿಸರ್ಜನಾನಂದಕ್ಕಾಗಿ ಬಾತುರೂಮಿಗೆ ಓಡಿದ ಅನುಭವ ಯಾರಿಗಿಲ್ಲ? ಮನೆಗೆ ಬರುವತನಕ ಅವುಗಳನ್ನು ಕಂಟ್ರೋಲಿಸಿದ ಶಕ್ತಿ ನಮ್ಮಲ್ಲೇ ಇತ್ತಲ್ಲವೆ? ಮನೆ ಕಾಣುತಿದ್ದಂತೆ ಇನ್ನು ನನ್ನಿಂದಾಗದು, ನಿನಗೆ ಬಿಟ್ಟಿದ್ದು ಎಂದು ಆ ಶಕ್ತಿಯು ಕೈ ಚೆಲ್ಲುವಂತಾದುದೂ ನಮ್ಮದೇ ಅಲ್ಲವೆ? ಇಲ್ಲೆಲ್ಲ ‘ಮನಸು ಕಾರಣವಲ್ಲ, ಪಾಪ ಪುಣ್ಯಕ್ಕೆಲ್ಲ, ಅನಲಾಕ್ಷ ನಿನ್ನ ಪ್ರೇರಣೆ ಇಲ್ಲದೆ!’ ಎಂಬ ಕೈಲಾಸವಾಸ ಗೌರೀಶ ಈಶ ಎಂಬ ವಿಜಯದಾಸರ ಕೀರ್ತನೆಯ ಸಾಲುಗಳು ನನಗೆ ಆಯಾಚಿತವಾಗಿ ನೆನಪಾಗುತ್ತದೆ! ಒಂದು ಹಂತದವರೆಗೆ ಜೀವಕೋಶವನ್ನು ಭಾವಕೋಶಗಳು ನಿಯಂತ್ರಿಸುತ್ತವೆ ಎಂಬುದನ್ನು ವಿಜ್ಞಾನದಿಂದ ಅಲ್ಲ, ಅನುಭವದಿಂದಲೇ ತಿಳಿಯಬಹುದಾಗಿದೆ. ಹುಳ ಮುಟ್ಟಿತು ಎಂಬುದಕ್ಕೂ ಹಾವು ಕಚ್ಚಿತು ಎಂಬುದಕ್ಕೂ ಇರುವ ಮನೋಧರ್ಮದ ವ್ಯತ್ಯಯವನ್ನು ಭಾಷಾಗೌರವ ತುಂಬ ಚೆನ್ನಾಗಿ ಮನದಟ್ಟು ಮಾಡುವುದು. ಹಾಗೆಯೇ ಬಳೆ ಒಡೆಯಿತು ಎಂದರೆ ಅಪಶಬ್ದ; ಬಳೆ ಹೆಚ್ಚಿತು ಎನ್ನಬೇಕು. ಇಲ್ಲೆಲ್ಲ ನಮ್ಮ ಸಂಸ್ಕೃತಿ ಹಾಸು ಹೊಕ್ಕಾಗಿರುವ ಮತ್ತು ಪಾತಿವ್ರತ್ಯ, ಕುಟುಂಬ, ದಾಂಪತ್ಯ ಆ ಮೂಲಕ ಒಂದು ಸಮಾಜದ ಆರೋಗ್ಯವಂತಿಕೆಯನ್ನು ಕಾಪಾಡುವ ಹುಕಿ ಎದ್ದು ಕಾಣುತ್ತದೆ. ನಮ್ಮ ಕೆ ಎಸ್ ನ ಬರೆದ ರಾಯರು ಬಂದರು ಕವನದಲ್ಲಿ ‘ಪದುಮಳು ಒಳಗಿಲ್ಲ, ನಾದಿನಿ ನಕ್ಕಳು, ರಾಯರು ನಗಲಿಲ್ಲ!’ ಎಂಬ ಸಾಲುಗಳ ಅರ್ಥವನ್ನು ಜೀರ್ಣಿಸಿಕೊಳ್ಳಬೇಕಾದರೆ ಒಂದು ಕಾಲಘಟ್ಟದ ಭಾರತದ ಸಮಾಜೋ ಸಾಂಸ್ಕೃತಿಕ ಪದ್ಧತಿ, ಆಚರಣೆಗಳ ಅರಿವಿರಬೇಕು. ಆ ಪದ್ಧತಿ-ಆಚರಣೆಗಳ ಸರಿತಪ್ಪುಗಳ ಪ್ರಶ್ನೆ ಬೇರೆ; ಅರಿವು ಬೆಳಕಾಗುವುದು ಬೇರೆ.

ಹಾಗಾಗಿ, ‘ಸಂಕಟ ಬಂದಾಗ ವೆಂಕಟರಮಣ’ ಎಂಬ ಮಾತಿನ ಇನ್ನೊಂದು ಆಯಾಮವನ್ನು ನಾವು ಮನಗಾಣಬೇಕು. ಸುಖದಲ್ಲಿ ಯಾರು ದೇವರ ಮೊರೆ ಹೋಗುತ್ತಾರೆ? ಕಷ್ಟಕಾಲದಲ್ಲಿ ತಾನೇ ಭಗವದ್ಭಕ್ತಿ ಉದ್ಬೋಧಗೊಳ್ಳುವುದು. ದೇವರನ್ನು ನೆನೆಯುವುದಿರಲಿ, ದೇವರ ರೂಪದಲ್ಲಿ ಯಾರಾದರೂ ಬಂದು ಸಹಾಯ ಮಾಡುತ್ತಾರೆಂಬ ಧ್ವನಿಯೂ ಈ ಒಳ್ನುಡಿಯಲ್ಲಿದೆ. ‘ಓ ದೇವರೇ ಅಂತಲೋ ಓಹ್ ಮೈ ಗಾಡ್ ಅಂತಲೋ’ ನಾವು ಆಯಾಚಿತವಾಗಿ ಅಂಥ ಸಂದರ್ಭದಲ್ಲಿ ಕೂಗಿಕೊಳ್ಳುವುದು ನಮಗರಿವಿಲ್ಲದೆಯೇ! ಏನನ್ನೂ ಆಲೋಚಿಸದೇ ಹೊರ ಹಾಕುವ ಉದ್ಗಾರವಾಚಕವದು. ಪೆಟ್ಟಾದಾಗ ಮತ್ತು ನೋವಿನಲ್ಲಿ ಅಮ್ಮಾ ಎಂದು ನರಳಿದಂತೆಯೇ ಹೆಲ್ಪ್ ಮಿ ಎಂಬ ಆಸರೆಗಾಗಿ ಅರಚುವ ಯಾಚನೆಯದು. ಅಂಥ ಹೊತ್ತಿನಲ್ಲಿ ಒದಗುವ ಸಹಾಯವೇ, ಸಹಾಯ ನೀಡಿದವರೇ ಆಪದ್ಬಾಂಧವರು. ಪರಿಶುದ್ಧ ಮನಸ್ಸಿನಿಂದ ಮಾಡುವಂಥ ಪವಿತ್ರ ಕಾರ್ಯವದು. ನಮ್ಮಲ್ಲಿ ಒಳ್ಳೆಯತನವಿದ್ದು ನಿರ್ವ್ಯಾಜ ಪ್ರೀತಿ ವಿಶ್ವಾಸಗಳಿಂದ ಬಾಳುವೆ ನಡೆಸುತ್ತಾ ಸ್ನೇಹ ಹಸ್ತ ಚಾಚಿ, ನೆರವೀಯುವ ಮನಸ್ಸಿದ್ದರೆ ಖಂಡಿತ ನಾವು ಆಪತ್ತಿನಲ್ಲಿ ಸಿಲುಕಿಕೊಂಡಾಗ ಯಾರಾದರೂ ಲಭಿಸಿ, ಪರಿಹರಿಸುವಲ್ಲಿ ಜೊತೆಯಾಗುತ್ತಾರೆ. ವಿಜ್ಞಾನದ ನಿಯಮಗಳಂತೆ ಇದನ್ನು ಪ್ರಯೋಗಗಳ ಮೂಲಕ ಸಾಬೀತು ಮಾಡಲು ಸಾಧ್ಯವಾಗದೇ ಹೋದರೂ ಬದುಕಿನ ನಿಡುಗಾಲದ ಪಯಣದಲ್ಲಿ ನಮ್ಮೆಲ್ಲರಿಗೂ ಇಂಥ ಅನುಭವಗಳು ಆಗಿಯೇ ಇರುತ್ತವೆ; ಅಂಥವು ಮರೆತು ಹೋಗಿರುತ್ತವೆ ಕೂಡ! ಬಹಳ ದೊಡ್ಡ ದೊಡ್ಡ ಸಂಕಷ್ಟಗಳಿರಲಿ, ಚಿಕ್ಕ ಪುಟ್ಟ ವಿಚಾರಗಳಲ್ಲೂ ಒಮ್ಮೊಮ್ಮೆ ನಮ್ಮ ಸಮಸ್ಯೆ ಬೆಟ್ಟದಷ್ಟು ಎನಿಸಿದಾಗ ಯಾರೋ ಅಪರಿಚಿತರ, ಸ್ನೇಹಿತರ ರೂಪದಲ್ಲಿ ಭಗವಂತನು ಸಹಾಯ ಮಾಡಿರುತ್ತಾನೆ. ತಾಳ್ಮೆಯಿಂದ ಕಾಯುವ ಮತ್ತು ನಡೆದ ಘಟನೆ ಸಂಘಟನೆಗಳನ್ನು ವಿಶ್ಲೇಷಿಸುತ್ತಾ ಸಾಗುವ ಸಕಾರಾತ್ಮಕ ಮನೋಬುದ್ಧಿ ಪ್ರತಿಭೆಗಳು ನಮ್ಮಲ್ಲಿರಬೇಕು ಅಷ್ಟೇ!

ನಮಗೆದುರಾಗುವ ಎಲ್ಲ ಬಗೆಯ ಸಂಕಟಗಳೂ ದುಃಖ ಕೊಡಲಿಕ್ಕೇನೂ ಬಂದಿರುವುದಿಲ್ಲ; ಸತ್ವಪರೀಕ್ಷೆಗಾಗಿಯೂ ಎದುರಾಗಿರುತ್ತವೆ. ಬಂಡೆಗಳನ್ನು ಯಾರೂ ಎಡಹುವುದಿಲ್ಲ; ಎಡಹುವುದೇನಿದ್ದರೂ ಚಿಕ್ಕ ಪುಟ್ಟ ಕಲ್ಲುಗಳಿಂದಲೇ! ಎಂಬ ಮಾತಿದೆ. ಆಗಿನ ನಮ್ಮ ಮನಸ್ಥಿತಿ ಮತ್ತು ಪರಿಸ್ಥಿತಿಗಳು ಮುಖ್ಯ. ಆಗಿನ ಕಲಿಕೆಗಳೇ ಜೀವನದಲ್ಲಿ ಮುಂದೆ ಉಪಯೋಗಕ್ಕೆ ಬರುವಂಥವು. ಬದುಕೆಂಬುದು ನಿರಂತರ ಕಲಿಸುವ ಗರಡಿಮನೆ. ಹಳೆಯ ಪಟ್ಟುಗಳು ಕೆಲಸಕ್ಕೆ ಬರದೇ ಹೋದಾಗ ಅನಿವಾರ್ಯವಾಗಿ ಹೊಸಪಟ್ಟುಗಳನ್ನು ಕಂಡುಕೊಳ್ಳಬೇಕು. ಗೆದ್ದವರಿಗಿಂತ ಸೋತವರಲ್ಲಿ ಅನುಭವ ಹೆಚ್ಚು. ಅವರ ದಾರಿಯ ದೀಪ ನಮಗೆ ಗೆಲುವಿನ ಬೆಳಕಾಗಬಹುದು. ಕುಳಿತು ಮಾತಾಡುವ ವ್ಯವಧಾನ ಮತ್ತು ಆಲಿಸುವ ಸಹನಾವಂತಿಕೆ ಇರಬೇಕು. ಹಂಚಿಕೊಳ್ಳುವ, ಅರ್ಥ ಮಾಡಿಕೊಳ್ಳುವ, ಎಂಥ ಆರ್ತನಾದದಲ್ಲೂ ಅರ್ಥ ಕಂಡು ಕೊಳ್ಳುವ ಸಂತಧ್ಯಾನ ಬೇಕು.

ಎಲ್ಲವನ್ನೂ ಪ್ರಶ್ನಿಸುತ್ತಾ ಹೋದರದು ನರಕ; ಎಲ್ಲವನೂ ಅರ್ಥ ಮಾಡಿಕೊಳ್ಳುವುದೂ ಇನ್ನೊಂದು ಬಗೆಯ ನರಕ. ಇದನ್ನು ಮಹಾನರಕವೆಂದು ಹೆಸರಿಸಬಹುದು. ಎಲ್ಲವನೂ ಅರ್ಥ ಮಾಡಿಕೊಂಡು ಏನು ಮಾಡುವುದು? ಎಂದು ನಾನು ಒಮ್ಮೊಮ್ಮೆ ನನ್ನನ್ನೇ ಕೇಳಿಕೊಳ್ಳುತ್ತಿರುತ್ತೇನೆ. ಏಕೆಂದರೆ ಅತಿಯಾದ ವಿವೇಕವೂ ನಮಗೆ ಅಹಂಕಾರವನ್ನು ತಂದು ಕೊಡುವುದು; ಉಳಿದವರ ಅವಿವೇಕ ಗೊತ್ತಾಗಿ ಹಿಂಸೆಯಾಗಲು ಶುರುವಾಗಿ ಬಿಡುವುದು. ಹಾಗಾಗಿಯೇ ‘ಎಲ್ಲರೊಳಗೊಂದಾಗು ಮಂಕುತಿಮ್ಮ’ ಎಂದರು ಡಿವಿಜಿಯವರು!

ಹಳ್ಳಿಯಲೊಮ್ಮೆ ನದಿಯ ಪ್ರವಾಹ ಹೆಚ್ಚಾಗಿ, ಎಲ್ಲವನೂ ಆಕ್ರಮಿಸಿಕೊಳ್ಳ ತೊಡಗಿದಾಗ ತಂತಮ್ಮ ಮನೆಗಳನ್ನು ಖಾಲಿ ಮಾಡಿಕೊಂಡು ಸುರಕ್ಷಿತ ಸ್ಥಳ ಹುಡುಕಿಕೊಂಡು ಗ್ರಾಮಸ್ಥರು ಹೊರಟರು. ಒಬ್ಬ ವ್ಯಕ್ತಿ ಮಾತ್ರ ಅಲ್ಲಾಡಲಿಲ್ಲ. ನಾನಿಷ್ಟು ದಿವಸ ನಿಷ್ಠೆಯಿಂದ ದೇವರ ಧ್ಯಾನ ಮಾಡಿದ್ದೇನೆ. ಆತ ನನ್ನನ್ನು ಖಂಡಿತ ಕಾಪಾಡುತ್ತಾನೆ ಎಂದು ತುಂಬು ಭರವಸೆಯಲ್ಲಿ ಮನೆಯಲ್ಲೇ ಉಳಿದ. ಹಳ್ಳಿಯ ಹಿರಿಯರು ಬುದ್ಧಿ ಹೇಳಿದರು. ಆಗಲೂ ಆತನದು ಒಂದೇ ಹಠ ಮತ್ತು ಅಚಲ ಭಕ್ತಿ.

ಸರ್ಕಾರದ ಗಮನಕ್ಕೆ ಬಂತು. ಪೊಲೀಸರು ಬಂದರು. ಆತನನ್ನು ಸ್ಥಳಾಂತರಿಸಲು ಪರಿಪರಿಯಾಗಿ ಪ್ರಯತ್ನಿಸಿದರು. ಆತ ಮಾತ್ರ ಧ್ಯಾನದಿಂದ ಈಚೆ ಬರಲೇ ಇಲ್ಲ. ದೈವದ ಸಹಾಯವೊಂದನ್ನು ಬಿಟ್ಟು ನನಗೆ ಬೇರೆ ಯಾರ ನೆರವೂ ಬೇಡ ಎಂದು ಕಠಿಣವಾಗಿ ನುಡಿದ. ಹಾಳಾಗಿ ಹೋಗು ಎಂದು ಸುಮ್ಮನಾದರು. ಏಕೆಂದರೆ ಇಡೀ ಗ್ರಾಮ ಮುಳುಗುತ್ತಿರುವಾಗ ಅವರಿಗೆ ಬೇರೆ ಕೆಲಸಗಳೂ ಇದ್ದವು. ಪ್ರವಾಹದ ಮಟ್ಟ ಇನ್ನೂ ಹೆಚ್ಚಾಗಿ ಆತನ ಮನೆ ಮುಳುಗಡೆಯಾಗಲಿಕ್ಕೆ ಬಂತು. ಅವನು ಧ್ಯಾನ ಬಿಟ್ಟು ಎರಡನೆಯ ಮಹಡಿಗೆ ಹೋಗಿ ನಿಂತ. ಆಗಲೂ ಸುರಕ್ಷತಾ ಬೋಟಿನ ಮಂದಿ ಆತನನ್ನು ಕರೆದರು. ದೇವರ ಮೇಲಿನ ಅತಿ ನಂಬುಗೆಯಲ್ಲಿದ್ದ ಅವನು ಆ ಸಹಾಯವನ್ನೂ ನಿರಾಕರಿಸಿದ. ನೀರು ಇನ್ನೂ ಹೆಚ್ಚಾದಾಗ ಮನೆಯ ಮಾಳಿಗೆಯ ಮೇಲೆ ನಿಂತು ಆಕಾಶದ ಕಡೆಗೆ ಮುಖ ಮಾಡಿ ದೇವರನ್ನು ಪ್ರಾರ್ಥಿಸಿದ. ಹೆಲಿಕಾಪ್ಟರ್ ಮೂಲಕ ಜನರನ್ನು ರಕ್ಷಿಸುತ್ತಿದ್ದವರು ದಪ್ಪನೆಯ ಹಗ್ಗ ಬಿಟ್ಟರು. ಅವನು ಹಗ್ಗದ ನೆರವು ಪಡೆಯಲಿಲ್ಲ! ಹಠ ಬಿಡಲಿಲ್ಲ. ಕೊನೆಗೆ ನೀರು ತುಂಬಿಕೊಂಡು ಆತ ಕೊಚ್ಚಿಕೊಂಡು ಹೋದ, ದುರಂತವಾದ.

ಈ ದೃಷ್ಟಾಂತದ ಸ್ವಾರಸ್ಯ ಇರುವುದು ಈಗಲೇ! ಮರಣಿಸಿದ ಮೇಲೆ ಯಮಲೋಕದಲ್ಲಿ ದೇವರನ್ನು ಭೇಟಿಯಾದ. ದೈವವನ್ನೇ ತರಾಟೆಗೆ ತೆಗೆದುಕೊಂಡ. ʼನಾನು ನಿಷ್ಠಾವಂತ ಧಾರ್ಮಿಕನಾಗಿದ್ದು, ನೀತಿ ನಿಯಮ ಶ್ರದ್ಧೆ-ಕಡುನಿಷ್ಠೆಯಿಂದ ನಿನ್ನ ಧ್ಯಾನ ಮಾಡಿದರೂ ಅಚಲ ಭಕ್ತಿಯನಿಟ್ಟು ಬದುಕಿದರೂ ನೀನು ಸಹಾಯಹಸ್ತ ಚಾಚದೇ ನನ್ನನ್ನು ಆಹುತಿ ತೆಗೆದುಕೊಂಡೆ, ಇದು ಸರಿಯೇ?ʼ

ಆಗ ದೇವರು ಎಂದಿನ ತನ್ನ ಹಸನ್ಮುಖತೆಯಿಂದಲೇ ಆ ವ್ಯಕ್ತಿಗೆ ಸಮಾಧಾನ ಮಾಡಲು ಪ್ರಯತ್ನಿಸಿದನಂತೆ: ‘ನೀರಲ್ಲಿ ನೀನು ಸಿಲುಕಿಕೊಂಡಾಗ ನಿನಗಾಗಿ ನಾನು ಊರಿನ ಹಿರಿಯರಿಗೆ ಸದ್ಬುದ್ಧಿ ಕೊಟ್ಟು ನಿನ್ನ ಬಳಿಗೆ ಬರುವಂತೆ ಮಾಡಿದೆ. ಆಗ ನೀನು ಮಣಿಯಲಿಲ್ಲ! ಆಮೇಲೆ ನಿನಗಾಗಿ ನಾನು ಪೊಲೀಸರನ್ನು ಕಳುಹಿಸಿ ಕೊಟ್ಟೆ. ಅವರು ಪರಿಪರಿಯಾಗಿ ವಿನಂತಿಸುವಂತೆ ಮಾಡಿದೆ. ಆಗಲೂ ನೀನು ಹಠ ಬಿಡಲಿಲ್ಲ! ಸುರಕ್ಷತಾ ನಾವೆಯನ್ನು ಕಳುಹಿಸಿ ಕೊಟ್ಟೆ, ಕೊನೆಗೆ ನೀನಿದ್ದ ಕಡೆಗೇ ಹೆಲಿಕಾಪ್ಟರಿನಿಂದ ಹಗ್ಗ ಬರುವಂತೆ ಮಾಡಿದೆ. ಆಗಲೂ ನೀನು ನಾನೇ ಸ್ವತಃ ಬರುತ್ತೇನೆಂಬ ಭ್ರಮೆಯಲ್ಲಿದ್ದೆ. ಇದನ್ನೆಲ್ಲಾ ನಾನೇ ಮಾಡಿಸಿದ್ದು! ನಿಸರ್ಗದ ನಿಯಮ. ಪ್ರವಾಹದಲ್ಲಿ ನೀನು ಕೊಚ್ಚಿಕೊಂಡು ಜೀವ ನೀಗಿಕೊಂಡು ಈಗ ನನ್ನ ಬಳಿಗೆ ಬಂದಿದ್ದೀಯಾ! ನೀನು ನನ್ನನ್ನು ಗುರುತಿಸುವಲ್ಲಿ ವಿಫಲನಾದೆ!! ನೀನು ಮಾತ್ರವಲ್ಲ, ನಿನ್ನಂಥವರು ಭೂಮಿಯಲ್ಲಿ ಬೇಕಾದಷ್ಟು ಮಂದಿ ಇದ್ದಾರೆ. ನಿನ್ನಂತೆಯೇ ಅವರೂ ಭಕ್ತರೇ; ಹೊರಗಣ್ಣು ಮುಚ್ಚಿ ಒಳಗಣ್ಣು ತೆರೆಯಬೇಕು. ಆದರೆ ನೀವು ಮಾಡಿದ್ದೇನು?’ ಬಹುಶಃ ಆ ದಡ್ಡನಿಗೆ ಈ ಮಾತುಗಳು ಆಗಲಾದರೂ ಅರ್ಥವಾಗಿರಬೇಕು.

ಹೀಗೆ ನಮ್ಮ ಜೀವಿತಾವಧಿಯಲ್ಲೂ ಇಂಥ ಹಲವುಗಳು ನೆರವಿಗೆ ಬಂದಿರುತ್ತವೆ. ನಾವು ಗುರುತಿಸಿ, ಗೌರವಿಸುವಲ್ಲಿ ವಿಫಲರಾಗುತ್ತೇವೆ. ಸಂಕಟದ ಸಮಯದಲ್ಲಿ ಮತ್ತೆ ದೈವವನ್ನು ಹಳಿಯುತ್ತೇವೆ. ‘ದೈವಂ ಮಾನುಷ ರೂಪೇಣ’ ಎಂದರೆ ಇದೇ! ಅಂಥವರೇ ನಮ್ಮ ಪಾಲಿನ ದೇವರು. ‘ದೇವರು ಬಂದ ಹಾಗೆ ಬಂದಿರಿ’ ಎನ್ನುವುದೂ ಇಂಥದಕ್ಕೇನೇ. ಅಂಥ ಇಕ್ಕಟ್ಟು ಬಿಕ್ಕಟ್ಟುಗಳಾದಾಗ ಗುಡಿಯಲ್ಲಿ ಇರುವ ಶಿಲ್ಪಕಲೆಯ ದೇವರು, ಫೋಟೊಗಳಲ್ಲಿ ಇರುವ ಚಿತ್ರಪಟದ ದೇವರು ಹಾಗೆಯೇ ಅದೇ ರೂಪದಲ್ಲಿ ಬರುವುದಿಲ್ಲ. ಹಾಗೆ ಬರಬೇಕೆಂದು ಮೇಲಿನ ಕತೆಯ ದಡ್ಡಭಕ್ತನ ಹಾಗೆ ಜಪಿಸುವವರು ನಿಜಕೂ ಮೂರ್ಖರು. ಯಾವು ಯಾವುದೋ ರೂಪದಲ್ಲಿ, ಯಾರದೋ ಮೂಲಕ ನಮಗೆ ದೈವದ ನೆರವು ಲಭಿಸಿರುತ್ತದೆ. ಅದನ್ನು ಗುರುತಿಸಿ, ಅದರಿಂದ ಪಾಠ ಕಲಿಯುವ ವಿನಯ, ವಿವೇಕಗಳು ನಮ್ಮದಾಗಬೇಕು ಅಷ್ಟೇ. ದೇವರಿಗೂ ದೈವತ್ವಕ್ಕೂ ಇರುವ ವ್ಯತ್ಯಾಸ ಇದೇ. ಏಕೆಂದರೆ ಈ ಜಗತ್ತು ಮಾನವರಲ್ಲಿ ದೈವತ್ವವನ್ನು ಕಂಡು ಆದರಿಸಿದೆ, ಆರಾಧಿಸಿದೆ, ಅನುಸರಿಸಿದೆ, ಆನಂದಿಸಿದೆ, ಕೃತಾರ್ಥಗೊಂಡಿದೆ. ಇದೊಂದು ಗುಣಮೌಲ್ಯ; ಬದುಕಿನ ಪರಮಗಂತವ್ಯ. ಬುದ್ಧಿಗೆ ನಿಲುಕದ ನಿಸರ್ಗದ ವಿಸ್ಮಯ. ತರ್ಕಕೆ ಸಿಲುಕದ ಹೃದಯವೈಶಾಲ್ಯ. ಕಾಣದ ಕೈಗಳು ಚಾಚಿದ ಸಹಾಯ ಹಸ್ತದ ಆಶೀರ್ವಾದ. ಕಡಲ ಕಿನಾರೆಯಲಿ ನಿಂತು ನೀಲಾಕಾಶವ ವೀಕ್ಷಿಸಿದರೆ ಕಡಲು ಯಾವುದು? ಆಗಸ ಯಾವುದು? ಎಂದು ತಿಳಿಯದಷ್ಟು ಏಕೀಭವ ಸಂಭವ!

-ಡಾ. ಹೆಚ್ ಎನ್ ಮಂಜುರಾಜ್,


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x