“ಯೆಂಡ, ಯೆಡ್ತಿ, ಕನ್ನಡ ಪದಗೊಳ್” ಎಂದ ತಕ್ಷಣ ನಮಗೆ ನೆನಪಾಗುವುದೇ ಕನ್ನಡದ ಪ್ರಸಿದ್ಧ ಬರಹಗಾರರಾದ ಜಿ ಪಿ ರಾಜರತ್ನಂರವರು. ಯೆಂಡ, ಹೆಂಡತಿ, ಕನ್ನಡದ ಬಗ್ಗೆ ಅಪಾರ ಒಲವಿದ್ದ ಕವಿ ತಮ್ಮ ಕವಿತೆಗಳಲ್ಲಿ ತಿಳಿಹಾಸ್ಯದ ಮೂಲಕ ಬದುಕನ್ನು, ಬದುಕುವ ರೀತಿಯನ್ನು ಬಹಳ ವಿಸ್ತಾರವಾಗಿ ಕಟ್ಟಿಕೊಟ್ಟಿದ್ದಾರೆ. ಗ್ರಾಮೀಣ ಭಾಷೆಯ ಸೊಗಡಿನಿಂದ ಕೂಡಿದ ಪದಪುಂಜಗಳು, ಪ್ರಾಸಗಳ ಸರಳ ಹೊಂದಿಕೆ, ವಾಸ್ತವಕ್ಕೆ ಹತ್ತಿರವಾದ ವಿಚಾರಗಳು ಈ ಎಲ್ಲವೂ ಒಟ್ಟಿಗೆ ಸೇರಿ ಕವಿತೆಗಳನ್ನು ಒಮ್ಮೆ ಓದಿದ ಸಹೃದಯನನ್ನು ಮತ್ತೆ ಮತ್ತೆ ತಮ್ಮತ್ತ ಆಕರ್ಷಿಸುತ್ತವೆ.
ಈಗಾಗಲೇ ತಿಳಿಸಿರುವಂತೆ, ರಾಜರತ್ನಂ ತಮ್ಮ ಬಹುತೇಕ ಕವಿತೆಗಳಲ್ಲಿ ಯಾವುದೋ ಒಂದು ವಿಚಾರವನ್ನ ಪ್ರಸ್ತಾಪಿಸುತ್ತಿದ್ದಾರೆಂದರೆ ಅಲ್ಲಿ ತಿಳಿಹಾಸ್ಯವಿರುತ್ತದೆ ಇಲ್ಲ ಗಂಭೀರವಾದ ವಿಚಾರ ಇದ್ದೇ ಇರುತ್ತದೆ. ಬೇವರ್ಸಿ, ಪುಟ್ನಂಜಿ, ಮುನಿಯ, ಯೆಂಡ, ಹೆಂಡ್ತಿ, ಕನ್ನಡ ಇವು ಇವರ ಹಲವಾರು ಕವಿತೆಗಳಲ್ಲಿ ಬಂದು ಹೋಗುವ ಅಸಾಮಾನ್ಯ ಪಾತ್ರಗಳು.
ಅವರ ಕವಿತೆಗಳಲ್ಲಿ ಅವರು ಬದುಕನ್ನು ಗ್ರಹಿಸಿರುವ ರೀತಿ ಇಲ್ಲಿ ಪ್ರಸ್ತುತವಾಗಿದೆ. ಜೀವನ ಎಂದರೆ ಏನು ? ಸಮಸ್ಯೆಗಳನ್ನೂ ಸವಾಲಾಗಿ ಹೇಗೆ ಸ್ವೀಕರಿಸಬೇಕು ? ಪ್ರೇಮ, ಪ್ರೀತಿ, ದಾಂಪತ್ಯದ ಅರ್ಥಗಳೇನು ? ಹೀಗೆ ಹಲವಾರು ಪ್ರಶ್ನೆಗಳಿಗೆ ಇವರ ಕವಿತೆಗಳೇ ಉತ್ತರವಾಗಿವೆ. ಅಂತಹ ಕವಿತೆಗಳ ಪಾಲಿನೊಳಗೆ ಕೆಲವೊಂದು ಸಾಲುಗಳನ್ನು ಆಯ್ದು ಇಲ್ಲಿ ಉಲ್ಲೇಖಿಸುವ ಮೂಲಕ ಈ ಲೇಖನವನ್ನು ಮುಂದುವರಿಸುತ್ತಿದ್ದೇನೆ.
ಹಿಂದೆ ಕಷ್ಟ ಅನ್ನುವುದು ಮನುಷ್ಯನಿಗೆ ಬರದೇ ಮರಕ್ಕೆ ಬರುತ್ತಾ ? ಅನ್ನೋ ಮಾತೊಂದಿತ್ತು. ಅಂದರೆ ಜೀವನದಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ಮನುಷ್ಯನಾದವನು ಅವುಗಳನ್ನು ಹೆದುರಿಸಿ ನಿಲ್ಲುವಂತಹ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಆ ಮೂಲಕ ಬದುಕನ್ನು ಹೊಸ ರೀತಿಯಲ್ಲಿ ಸ್ವಿಕರಿಸಬೇಕೆಂಬದು. ಅದೇ ಮಾತನ್ನು ಕವಿ :
ಮನ್ಸನ್ ಜೀವ ಮೂರೇ ನಿಮ್ಸ
ಕುಸಿ ಪಟ್ಟೌನ್ ಗೆದ್ದ !
ತಾಪತ್ರೇನ್ ತಬ್ಬಿಡುಕೊಂಡಿ
ಗೋಳಾಡೋವನ್ ಬಿದ್ದ !
(ಕವಿತೆ : ನಾಳೆ )
ಇಲ್ಲಿ ಕವಿ ನಿರಾಶಭಾವನೆಯನ್ನು ಹೊಂದಿರುವ ವ್ಯಕ್ತಿಯೊಬ್ಬನ ಕಿವಿಯನ್ನು ಹಿಂಡುತ್ತಿದ್ದಾರೆ. ಜೀವನವೆಂದರೆ ಇಷ್ಟೇ ಎಂಬುದಾಗಿ ಭಾವಿಸಿಕೊಂಡು ಇಡೀ ಬದುಕನ್ನು ಗೋಳಾಡುವುದರಲ್ಲೇ ಕಳೆವ ನಿನಗೆ ತಿಳಿದಿಲ್ಲ; ಈ ಜೀವನವೆನ್ನುವುದೇ ಚಿಕ್ಕದು. ಈ ದೇಹಕ್ಕೆ ಸಾವೆಂಬುದು ಯಾವಾಗ ಹೇಗೆ ಬರುತ್ತದೆಂಬುದೇ ತಿಳಿಯದು. ಅದನ್ನು ಗ್ರಹಿಸಿಕೊಂಡು ಇರುವಷ್ಟು ಸಮಯವನ್ನ ಸಂತೋಷದಿಂದ, ಸಡಗರದಿಂದ ಕಳೆಯುವುದನ್ನ ಕಲಿತುಕೊಳ್ಳಬೇಕು. ಆಗಷ್ಟೇ ಗೆಲುವು ತಾನಾಗಿಯೇ ಒಲಿಯುವುದು. ಅದನ್ನು ಬಿಟ್ಟು ಯಾವುದೋ ಒಂದು ದುಸ್ಥಿತಿಗೆ ಕಟ್ಟು ಬಿದ್ದು ಗೋಳಾಟದಲ್ಲೇ ಬದುಕನ್ನು ಕಳೆವ ವ್ಯಕ್ತಿ ನಿಜವಾಗಿಯೂ ಇನ್ನಷ್ಟು ಅಧೋಗತಿಗೆ ಇಳಿದುಬಿಡುತ್ತಾನೆ. ಆದರಿಂದ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿಕೊಂಡು ಜೀವನವನ್ನು ನಡೆಸಬೇಕೆಂಬುದು ಕವಿಯ ಕಿವಿಮಾತು. ಅಲ್ಲದೇ ಮನುಷ್ಯನ ಜೀವನ ನಶ್ವರ ಎನ್ನುವ ಕವಿ ಮತ್ತೊಂದು ಸಾಲಿನಲ್ಲಿ ಅದನ್ನು ಹೀಗೆ ಅರ್ಥೈಸುತ್ತಾರೆ.
ಕುಡುಕನ್ ಕೈಲಿ ಕಾಸ್-ಗೀಸ್ ಏನ್ರ
ನಿಂತ್ರು ನಿಲ್ಬೌದಣ್ಣ;
ಮನ್ಸನ್ ಜೀವ ಮಾತ್ರ ಮುಳಗೋ
ಸಂಜೆ ಮೋಡದ್ ಬಣ್ಣ !
(ಕವಿತೆ : ನಾಳೆ)
ಪ್ರಸ್ತುತ ಸಾಲುಗಳಲ್ಲಿ ಕವಿಯ ವಿಚಾರವನ್ನು ಬಹಳ ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ಏಕೆಂದರೆ ಸಮಾಜದಲ್ಲಿ ಕುಡುಕರೆಂದರೆ, ಬೆಳಿಗ್ಗೆಯಿಂದ ಸಂಜೆವರೆಗೂ ಒಂದೇ ಸಮನೆ ದುಡಿದು, ದುಡಿದ ಹಣವನ್ನೆಲ್ಲಾ ಸಾರಾಯಿಗಂತ ಸುರಿದು, ಬರಿಗೈಲಿ ಮನೆಗೆ ಬರುತ್ತಾರೆಂಬ ಅಪಾದನೆ. ಇಂತಹ ಕುಡುಕರ ಕೈಯಲ್ಲೂ ಹಣ ಅನ್ನೋದು ಉಳಿದ್ರು ಉಳಿಯಬಹುದು. ಆದ್ರೆ ಮನುಷ್ಯನ ಜೀವ ಇದೆಯಲ್ಲ ಅದು ಶಾಶ್ವತವಾಗಿ ಉಳಿಯುವಂತದ್ದಲ್ಲ. ಸೂರ್ಯ ಮುಳುಗುವ ಹೊತ್ತಿನಲ್ಲಿ ಹೇಗೆ ಆಕಾಶದ ಬಣ್ಣ ರಂಗೇರಿ ಮಂಕಾಗುತ್ತದೆಯೋ ಆಗೇ ಮನುಷ್ಯನ ಜೀವವೂ ಕೂಡ. ಇಲ್ಲಿ ಆತನಾಗಲಿ, ಆತನ ಜೀವವಾಗಲಿ ಶಾಶ್ವತವಲ್ಲ ಎಂಬುದನ್ನು ಕವಿ ಸ್ಪಷ್ಟಪಡಿಸಿದ್ದಾರೆ.
ಮುಂದೊಂದು ಕವಿತೆಯಲ್ಲಿ ಬಡತನದ ಬಗ್ಗೆ ಮಾತನಾಡಿರುವ ಕವಿ ನಿಜವಾದ ಬಡತನವೆಂದರೆ ಯಾವುದು ಎಂಬುದನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ.
ಬಡತನ ಗಿಡತನ
ಏನಿದ್ರೇನ್ ? ನಡೆತೇನ
ಚಂದಾಗಿ ಇಟ್ಕೊಳ್ಳಾದೆ ಅಚ್ಛ !
ಅಂದ್ಕೊಂಡಿ ಸುಕವಾಗಿ
ಕಸ್ಟಕ್ ನಗುಮೊಕವಾಗಿ
ನೆಗೆಯೋದೆ ರತ್ನನ್ ಪರ್ಪಂಚ !
ವಿದ್ಯೆ ಕಡಿಮೆಯಾದರೂ ನಡತೆ ಶುದ್ಧವಾಗಿರಬೇಕು ಎಂಬ ಮಾತಿದೆ. ಜೀವನದಲ್ಲಿ ನಿಜವಾದ ಬಡತನ ಯಾವುದೆಂದರೆ, ಅದು ತನ್ನ ನಡೆತೆಯನ್ನ ಶುದ್ಧವಾಗಿಟ್ಟುಕೊಳ್ಳದೇ ಇರುವುದು. ಇಲ್ಲಿ ನಡೆತೆಯೆಂದರೆ ವ್ಯಕ್ತಿಯ ಚಾರಿತ್ರ್ಯ, ವ್ಯಕ್ತಿತ್ವ; ಆ ವ್ಯಕ್ತಿ ಸಮಾಜದಲ್ಲಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗಿರುವ ರೀತಿ. ಆ ನಡೆತೆಯೊಂದು ಸರಿಯಾಗಿದ್ದರೆ ಎಲ್ಲವೂ ಸರಿಯಾಗಿರಬಲ್ಲದೆನ್ನುವ ಕವಿ ಇರುವುದರಲ್ಲೇ ತೃಪ್ತಿಯನ್ನು ಹೊಂದಿ, ಜೀವನದಲ್ಲಿ ಎಷ್ಟೇ ಕಷ್ಟವಿದ್ದರೂ ನಗುಮುಖದಿಂದ ಬದುಕುವ ರೀತಿಯನ್ನು ರೂಢಿಸಿಕೊಳ್ಳಬೇಕು ಎಂದಿದ್ದಾರೆ.
ಪ್ರತಿಯೊಬ್ಬ ವ್ಯಕ್ತಿಗೂ ಮಾತೆಂಬುದು ವರ. ಅದನ್ನು ಯಾವ ರೀತಿ, ಎಲ್ಲಿ ಹೇಗೆ ಬಳಸಬೇಕೆಂದು ಕೂಡ ಮಹತ್ವದ ವಿಚಾರ. ಕವಿ ಇಲ್ಲಿ ಮಾತಿನ ಮಹತ್ವವನ್ನು ತಿಳಿಸಿಕೊಡುತ್ತಿದ್ದಾರೆ :
ಅರ್ತಾ ಮಾಡ್ಕೊಂಡು ಇಂಗಲ್ಲ್ ಇಂಗೆ
ಅನ್ನೋರ್ ಮಾತು ಗಂಗೆ !
ಅರ್ತ್ ಆಗ್ದಿದ್ರು ಸಿಕ್ದಂಗ್ ಅನ್ನಾದ್
ಚಂದ್ರನ್ ಮುಕ್ಕ್ ಉಗದಂಗೆ.
(ಕವಿತೆ : ಸೋಸೋರು)
ಒಂದು ಕಡೆ ಕವಿ ಕೆ ಎಸ್ ನರಸಿಂಹಸ್ವಾಮಿ ಅವರು ಹೇಳುತ್ತಾರೆ : “ಮಾತು ಬರುವುದು ಎಂದು ಮಾತನಾಡವುದು ಬೇಡ, ಒಂದು ಮಾತಿಗೆ ಎರಡು ಅರ್ಥವುಂಟು.” ವ್ಯಕ್ತಿ ತನ್ನ ಜೊತೆ ಮತ್ತೊಬ್ಬ ವ್ಯಕ್ತಿ ಮಾತನಾಡುತ್ತಿರುವಾಗ ಆತನ ಮಾತುಗಳಿಗೆ ಕಿವಿಯಾಗಿರಬೇಕಾದದ್ದು ಮುಖ್ಯ. ಸಾಧ್ಯವಾದಷ್ಟೂ ಆತನ ಮಾತುಗಳನ್ನು ಕೇಳಿ ಅರ್ಥಮಾಡಿಕೊಳ್ಳಬೇಕು. ಅರ್ಥವಾಗಿಲ್ಲವೆಂದಾದರೆ ಅರ್ಥವಾಗುವ ರೀತಿಯಲ್ಲಿ ಹೇಳುವಂತೆ ಕೇಳಬೇಕು. ಆದರೆ ಅಲ್ಲಿ ಅಪಾರ್ಥಕ್ಕೆ ಎಡೆಮಾಡಿಕೊಡಬಾರದು. ಇಲ್ಲಿಯೂ ಕವಿ ಮಾತನ್ನು ಅರ್ಥ ಮಾಡಿಕೊಂಡು ಹೀಗಲ್ಲ ಹೀಗೆ ಎನ್ನುವ ವ್ಯಕ್ತಿಯ ಜೊತೆ ಹೇಗೆ ಬೇಕಾದರೂ ವ್ಯವಹರಿಸಬಹುದು. ಆದರೆ ಆಡಿದ ಮಾತುಗಳನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲನಾಗಿ ಬಾಯಿಗೆ ಬಂದಂತೆ ಹರಟುವುದಿದೆಯಲ್ಲ ? ಅದು ಆಕಾಶದಲ್ಲಿರುವ ಚಂದಿರನ ಮುಖಕ್ಕೆ ಉಗಿದಂತೆ ಎಂದಿದ್ದಾರೆ ಕವಿ. ಇಲ್ಲಿ ಚಂದಿರನ ಮುಖಕ್ಕೆ ಉಗಿಯುವುದೆಂದರೆ ತನ್ನ ಮುಖಕ್ಕೆ ತಾನೇ ಉಗಿದುಕೊಂಡಂತಲ್ಲವೆ ? ಅದಕ್ಕಾಗಿಯೇ ಕವಿ “ಮಾತು ಇರಬೇಕು ಮಿಂಚ್ ಒಳದಂಗೆ; ಕೇಳ್ದೋರ್ ‘ಹ್ಙಾ’ ಅನಬೇಕು” ಎಂದಿದ್ದಾರೆ.
ಇನ್ನೂ ಪ್ರಪಂಚದಲ್ಲಿ ಮನುಷ್ಯ ಅಂದ್ಮೇಲೆ ಮತ್ತೊಬ್ಬ ಮನುಷ್ಯನಿಗೆ ನೆರವಾಗಿಯೇ ಬದುಕುವುದು ಮಾನವೀಯತೆ. ಈ ಮಾನವೀಯತೆಯನ್ನ ಮರೆತಿರುವ ಮನುಷ್ಯ ಮನುಷ್ಯರನ್ನೇ ಕೊಂದು ಬದುಕುವ ಮಟ್ಟಕ್ಕೆ ಬಂದು ನಿಂತಿದ್ದಾನೆ. ಈ ವಿಚಾರದ ಬಗ್ಗೆ ವಿಷಾದಿಸಿರುವ ಕವಿ –
ನಾಯ್ನ ನಾಯೇ ತಿಂತಾದಂತೆ
ಮೀನ್ಗೆ ಮೀನೆ ತಿಂಡಿ !
ಮನ್ಸನ್ ಮನ್ಸ ತಿಂತಾನ್ ಈಗ
ಜೀವ ಪೂರ ಯಿಂಡಿ !
(ಕವಿತೆ : ಯೆಂಡ ಕುಡಿಯೋರ್ ನಾವು)
ಮನುಷ್ಯನ ಬದುಕೆಂಬುದು ಪ್ರಾಣಿಗಳಿಗಿಂತಲೂ ಕೀಳಾಗಿದೆ. “ಪ್ರಾಣಿಗಳೆ ಗುಣದಲಿ ಮೇಲು; ಮಾನವನದಕ್ಕಿಂತ ಕೀಳು” ಎಂಬ ಚಲನಚಿತ್ರಗೀತೆಯೊಂದರ ಸಾಲು ಇಲ್ಲಿ ನೆನಪಾಗುತ್ತದೆ. ನಾಯಿಗಳು ಆಹಾರಕ್ಕಾಗಿ ನಾಯಿಗಳನ್ನೇ ತಿಂದು ಬದುಕುವ ರೀತಿ, ಮೀನುಗಳು ಮೀನುಗಳನ್ನೇ ತಿಂದು ಬದುಕುವ ರೀತಿ ಮನುಷ್ಯನಾದವನು ಮನುಷ್ಯನನ್ನು ಶೋಷಣೆ ಮಾಡಿ, ನೋಯಿಸಿ, ಕೊಂದು ಜೀವನ ನಡೆಸುತ್ತಿದ್ದಾನೆ. ಇದು ಮುಂದಿನ ಪೀಳಿಗೆಗೆ ಮಾದರಿಯಾದರೆ ಹಾನಿಕಾರಕವೆನ್ನುವ ನೆಲೆಯಲ್ಲಿ ಕವಿ ವಿಷಾದಿಸಿದ್ದಾರೆ.
ಅಳುವ ಗಂಡಸನ್ನು ನಗುವ ಹೆಂಗಸನ್ನೂ ನಂಬಬಾರದೆಂಬ ಗಾದೆ ಮಾತೊಂದಿದೆ. ಆಗದ್ದ ಮಾತ್ರಕ್ಕೆ ಹೆಂಗಸಿಗಷ್ಟೇ ನೋವಿರುತ್ತದೆ, ಗಂಡಸಿಗೆ ಇರುವುದೇ ಇಲ್ಲ ಎಂದಲ್ಲ. ಗಂಡು ಧೈರ್ಯಶಾಲಿ, ಆತ ತನ್ನ ನೋವನ್ನು ತನ್ನೊಳಗೆ ನುಂಗಿ ಬದುಕುತ್ತಾನೆ. ಗಂಡಸಾಗಿ ಹುಟ್ಟಿದ ಮೇಲೆ ಎಷ್ಟೇ ನೋವಿದ್ದರೂ ಅಳಬಾರದೆಂಬುದು ಈ ಗಾದೆ ಮಾತಿನ ಒಳಾರ್ಥ. ಅದನ್ನೇ ಕವಿ ಇಲ್ಲಿ ಪ್ರಸ್ತಾಪಿಸಿದ್ದಾರೆ :
ಅಳಗೀಳೋದ್ ಎಲ್ಲಾನ ಯೆಂಗಿಸ್ಗೆವೊಪ್ತಾದೆ
ನೆಗತಿರಬೇಕ್ ಗಂಡಸ್ರು ಪ್ರಾಣ್ ಓದ್ರೂನೆ
ಬದುಕಿದ್ರೆ ಯೆವ್ತಾರ ಪಡಕಾನೇಗ್ ಓಗ್ ಬೌದು !
ಸತ್ಮೇಲ್ ಏನೈತಣ್ಣ ? ದೊಡ್ ಸೊನ್ನೇನೆ !
(ಕವಿತೆ : ಸತ್ಮೇಲೆ ಏನೈತಣ್ಣ?)
ಕಣ್ಣೀರು ಹಾಕುವಂತದ್ದು ಹೆಣ್ಣುಮಕ್ಕಳಿಗೆ ಒಪ್ಪುವಂತಹ ವಿಷಯ. ಆಗೆಂದ ಮಾತ್ರಕ್ಕೆ ಇಲ್ಲಿ ಹೆಣ್ಣನ್ನ ಹೀಗಳೆಯುತ್ತಿಲ್ಲ. ಹೆಣ್ಣು ತುಂಬಾ ಸೂಕ್ಷ್ಮ ಮನಸ್ಸುಳ್ಳವಳು ಎಂದರ್ಥ. ಆದರೆ ಗಂಡಸಾದವನು ಸದಾ ನಗು ನಗುತ್ತಾ ಜೀವನವನ್ನ ನಡೆಸಬೇಕು. ಅದು ಎಷ್ಟೇ ಕಷ್ಟವಿದ್ದರೂ ಸರಿ; ಪ್ರಾಣ ಹೋಗುವಂತಹ ಸನ್ನಿವೇಶ ಎದುರಾದರೂ ಸರಿಯೇ. ಇವತ್ತು ಏನನ್ನೋ, ಯಾರನ್ನೋ ಕಳೆದುಕೊಂಡಿದ್ದೇವೆಂದು ಶೋಕಿಸಬಾರದು. ಯಾರಿಗೆ ಗೊತ್ತು ಭವಿಷ್ಯದಲ್ಲಿ ನಾವು ಬದುಕಿದ್ದರೆ ಕಳೆದುಕೊಂಡದ್ದು ಮರಳಿ ದಕ್ಕಬಹುದು. ದುಡುಕಿ ನಿರ್ಧಾರ ಕೈಗೊಂಡು ಆತ್ಮಹತ್ಯೆಯನ್ನ ಮಾಡಿಕೊಂಡರೆ ಏನನ್ನ ಸಾಧಿಸಿದಂತಾಯ್ತು. ಸತ್ತ ಮೇಲೆ ಎಲ್ಲವೂ ಶೂನ್ಯ ಎಂಬುದು ಕವಿಯ ನಿಲುವು. ಇಲ್ಲಿ ಈಸಬೇಕು ಇದ್ದು ಜಯಿಸಬೇಕೆಂಬ ದಾಸರ ವಾಣಿಯೂ ಪ್ರಸ್ತುತ.
ಕೆಲವೊಮ್ಮೆ ಜಗತ್ತು ನಮಗೆ ಕ್ರೂರವೆನಿಸುತ್ತದೆ. ಒಳ್ಳೆಯತನಕ್ಕೆ ಇಲ್ಲಿ ಬೆಲೆಯೇ ಇಲ್ಲವೇ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುತ್ತೇವೆ. ಮತ್ತೆ ಸುಮ್ಮನಾಗುತ್ತೇವೆ. ಆದರೆ ಕವಿ ಈ ಸಮಾಜದಲ್ಲಿ ಜನ ಹೇಗಿದ್ದಾರೆ, ಅವರ ನಡುವೆ ನಾವು ಹೇಗೆ ಬದುಕಬೇಕು ಎಂಬುದನ್ನು ಇಲ್ಲಿ ಪ್ರಸ್ತುತಪಡಿಸಿದ್ದಾರೆ :
ಮನ್ಸ ಎಲ್ಲಿಂದ ಎಲ್ಗೋದ್ರೂನೆ
ಬಾಯ್ ಇತ್ತಂದ್ರೆ ಬದಕ್ದ;
ಮೆತ್ಗಿತ್ತಂದ್ರೆ – ಆಳ್ಗೊಂದ್ ಕಲ್ಲು !
ತಕ್ಕೊ ! ಇಡದಿ ತದಕ್ದ !
(ಕವಿತೆ : ಮುನಿಯನ್ ಬೋಣಿ)
ಮನುಷ್ಯ ಬಹಳ ಶಾಂತ ಸ್ವಭಾವದವನಾದರೆ ಈ ಸಮಾಜ ಆತನನ್ನು ನೋಡುವ ಧಾಟಿ ಬೇರೆ ! ವ್ಯಕ್ತಿ ಮುಗ್ಧನಾಗಿದ್ದಷ್ಟೂ ಮೋಸ, ವಂಚನೆಗೆ ತುತ್ತಾಗುತ್ತಾನೆ. ಆದೇ ಯಾವ ವ್ಯಕ್ತಿ ಬಹಳವಾಗಿ ಮಾತನಾಡುತ್ತಾನೋ, ಮಾತುಗಳನ್ನು ಬಲ್ಲನೋ ಆತ ಈ ಪ್ರಪಂಚದಲ್ಲಿ ಎಲ್ಲಿಗೆ ಹೋದರೂ ಜೀವನವನ್ನ ನಡೆಸಬಲ್ಲ. ಆದರೆ ಒಬ್ಬ ವ್ಯಕ್ತಿ ಬಹಳ ಸೌಮ್ಯವಾಗಿದ್ದರೆ “ಹಳ್ಳಕ್ಕೆ ಬಿದ್ದವನಿಗೆ ಅವಳಿಗೊಂದು ಕಲ್ಲು” ಎಂಬಂತೆ ನೆಲಕ್ಕೆ ತುಳಿದು ಬಿಡುತ್ತಾರೆ ಎಂಬುದನ್ನು ಕವಿ ಮೇಲಿನ ಸಾಲುಗಳಲ್ಲಿ ನಿರೂಪಿಸಿದ್ದಾರೆ.
ಇನ್ನೂ ಇವತ್ತಿನ ಬದುಕನ್ನು ಇಂದೇ ಅನುಭವಿಸಿ, ನಾಳೆಯನ್ನು ನಾಳೆಯ ಪಾಲಿಗೆ ಬಿಡಿ ಎನ್ನುವ ಕವಿ ನಾಳೆಯೆಂಬುದು ನಮಗೂ ಆಕಾಶಕ್ಕೂ ಇರುವ ಅಂತರ ಎಂದಿದ್ದಾರೆ :
ನಾಳೇನ್ಕೊಂಡಿ ನರಳೋದೆಲ್ಲ
ಬೆಪ್ಗೋಳ್ ಮನಸಿನ್ ಕನಸು !
ನಾಳೆ ಪಾಡು! ನಾಳೆ ಬಾರ !
ಈವತ್ಗ್ ಇರ್ಲಿ ಮನಸು !
(ಕವಿತೆ : ನಾಳೆ)
ನಾಳೆ ಏನಾಗುವುದೋ ಎಂದು ಕೊರಗುವುದರ ಬದಲು ಇವತ್ತಿನ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುವುದನ್ನ ರೂಢಿಸಿಕೊಳ್ಳಬೇಕು. ನಾಳೆಯ ಬಗ್ಗೆ ಯೋಚನೆ ಮಾಡಿ ನರಳಾಡುವಂತವರು ಮೂರ್ಖರು. ನಾಳೆಯ ಚಿಂತೆಯನ್ನು ಬಿಟ್ಟು ಇವತ್ತಿನ ಬಗ್ಗೆ ಆಸಕ್ತಿ ತೋರೋಣ. ನಿಮ್ಮ ಮನಸ್ಸು ಇವತ್ತಿಗಷ್ಟೇ ಸೀಮಿತವಾಗಿರಲಿ ಎಂಬುದಾಗಿ ರಾಜರತ್ನಂ ಅಭಿಪ್ರಾಯಿಸಿದ್ದಾರೆ.
ಮುಂದೆ ನೈಜ ಪ್ರೀತಿಯೆಂದರೆ ಹೇಗಿರಬೇಕು ಎಂಬುದನ್ನು ತಮ್ಮ ಕವಿತೆಗಳಲ್ಲಿ ತಿಳಿಯಪಡಿಸಿರುವ ಕವಿ ಗಂಡ – ಹೆಂಡತಿ ಹೇಗೆ ಹೊಂದಿಕೊಂಡು ಜೀವನದಲ್ಲಿ ಹೆಜ್ಜೆಯಿಡಬೇಕೆಂಬುದನ್ನೂ ಬಹಳ ಸೂಕ್ಷ್ಮವಾಗಿ ಕವಿತೆಗಳಲ್ಲಿ ಕಟ್ಟಿಕೊಟ್ಟಿದ್ದಾರೆ :
ಕಸ್ಟ ಸುಕ ಏನ್ ಬಂದ್ರೂನೆ
ನಿಂಗೆ ನಾನೆ ನಂಗೆ ನೀನೆ
ಮುಳುಗೋನ್ ಬೆನ್ನಿನ್ ಬೆಂಡಿದ್ದಂಗೆ
ನಿಂಗ್ ನೆಪ್ಪಿರಲಿ ನಂಜಿ.
ಬಟ್ಟೆ ಒಟ್ಟೇಗ್ ಇಲ್ದಿದ್ರೂನೆ
ನಂನಂ ಪ್ರೀತಿ ಇರೊವರ್ಗೂನೆ
ದೇಆ ಓದ್ರೂ ಮನಸೋಗಾಲ್ಲ
ನಿಂಗ್ ನೆಪ್ಪಿರಲಿ ನಂಜಿ
(ಕವಿತೆ : ನಿಂಗ್ ನೆಪ್ಪೈತ ನಂಜಿ)
ಮೇಲಿನ ಎರಡೂ ಚತುಷ್ಪದಿಗಳನ್ನ ಗಮನಿಸಿದಾಗ, ಇಲ್ಲಿ ಪ್ರೀತಿ ಎಂಬುದು ಕೇವಲ ದೇಹಕ್ಕೆ ಸಂಬಂಧಿಸಿದ ವಿಷಯವಲ್ಲ ಅದು ಮನಸ್ಸಿಗೆ ಸಂಬಂಧಿಸಿದ ವಿಷಯವಾಗಿದೆ ಎಂಬುದನ್ನು ಇಂದಿನ ಪ್ರೇಮಿಗಳು ಅರ್ಥ ಮಾಡಿಕೊಳ್ಳವ ಅಗತ್ಯವಿದೆ. ಪ್ರೀತಿ ಅಂದ್ಮೇಲೆ ಹೊಟ್ಟೆ ಬಟ್ಟೆಗೆ ಇರುತ್ತೊ ಇಲ್ಲವೋ, ಒಬ್ಬರನೊಬ್ಬರು ನೆಚ್ಚಿಕೊಂಡ ಮೇಲೆ ಹೊಂದಿಕೊಂಡು ಹೋಗುವುದೇ ಜೀವನ. ಇವತ್ತಿನ ಮಟ್ಟಿಗೆ ಹಣ, ಆಸ್ತಿ, ಸಂಪತ್ತು ಇದ್ದರೆ ಮಾತ್ರ ಗಂಡ ಹೆಂಡತಿ ಅಥವಾ ಪ್ರೇಮಿಗಳು ಅನ್ಯೋನ್ಯತೆಯಿಂದಿರಲು ಸಾಧ್ಯವೆನ್ನುವ ಎಷ್ಟೋ ಮೂರ್ಖರಿಗೆ ಈ ಕೆಳಗಿನ ಕವಿತೆಯ ಸಾಲುಗಳೇ ಬುದ್ಧಿಮಾತು :
ಮನೆಯಾಗ್ ಒಂದ್ ದಿನ ತಿನ್ನಾಕ್ ಇಲ್ದೆ
ನನಗ್ ಇಲ್ಲಾಂತ ನೀನೂ ಒಲ್ದೆ
ಕರೆದೋರ್ ಅಟ್ಟೀಗ್ ಓಗೋಲ್ಲೆಂದದ್
ನಿಂಗ್ ನೆಪ್ಪೈತ ನಂಜಿ ?
ಆ ವೊತ್ತೆಲ್ಲ ಯಿಟ್ಟೇ ಇಲ್ದೆ
ಸಾಯ್ತಿದ್ರೂನೆ ನೆಗತ ಸೋಲ್ದೆ
‘ಬದುಕೋದ್ ತಿನ್ನಾಕ್ ಅಲ್ಲಾಂತ’ ಅಂದದ್
ನಿಂಗ್ ನೆಪ್ಪೈತ ನಂಜಿ ?
(ಕವಿತೆ : ನಿಂಗ್ ನೆಪ್ಪೈತ ನಂಜಿ ?)
ಒಟ್ಟಾರೆಯಾಗಿ ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ, ಜಿ ಪಿ ರಾಜರತ್ನಂ ಅವರು ತಮ್ಮ ಕವಿತೆಗಳಿಗೆ ವಸ್ತುವಾಗಿ ಆಯ್ದುಕೊಳ್ಳದ ವಿಷಯವೇ ಇಲ್ಲವೆನ್ನಬಹುದು. ನೊಂದ ಜೀವಕ್ಕೆ ತಂಪೆರೆಯುವ, ಪ್ರೀತಿಯ ಗಿಡಕ್ಕೆ ನೀರೆರೆಯುವ ಇವರ ಕವಿತೆಗಳು ಮನುಷ್ಯ ಬದುಕಿನ ಅಪಾರ ವಿಚಾರಗಳನ್ನು ತನ್ನಲ್ಲಿ ಒಂದು ಮಾಡಿಕೊಂಡು ಸಹೃದಯನಿಗೆ ಬದುಕುವ ಧಾಟಿಯನ್ನು, ಬದುಕಿನ ಉದ್ದೇಶವನ್ನು ತೆರೆದಿಡುತ್ತಿವೆ. ಯಾವುದೋ ನೋವಿನಲ್ಲಿರುವ ವ್ಯಕ್ತಿ ಅಥವಾ ನಿರಾಶಾಭಾವದಿಂದ ಕೂಡಿರುವ ವ್ಯಕ್ತಿ ಒಮ್ಮೆ ಇವರ ಬಹುತೇಕ ಕವಿತೆಗಳನ್ನು ಗ್ರಹಿಸಿಕೊಂಡು ಬಿಟ್ಟರೆ, ಮತ್ತೆಂದೂ ದುಃಖಿಸಲಾರ ಅಥವಾ ನಿರಾಶೆಯನ್ನು ಹೊಂದಲಾರ; ಪ್ರೀತಿ ಪ್ರೇಮದ ಬಗ್ಗೆ ಅಪಸ್ವರವೆತ್ತಲಾರ. ಇಂತಹ ಮಹಾನ್ ಚೇತನವೊಂದು ನಮ್ಮ ನಾಡಿನಲ್ಲಿ ಇದ್ದು, ಬರೆದು ಕಣ್ಮರೆಯಾಗಿದೆ ಎಂದರೆ ನಾವೇ ಧನ್ಯರು.
-ಮನು ಗುರುಸ್ವಾಮಿ