ದೇವರ ಹುಂಡಿಯೂ ಮತ್ತು ರಾಚಪ್ಪನೂ…: ಶ್ರೀ ಕೊಯ.

ಈ ಬಾರಿಯ ಜಾತ್ರೆಯಲ್ಲಿ ಆ ದೇವರ ಹುಂಡಿಗೆ ಹೇರಳವಾಗಿ ಧನ, ಕನಕಗಳು ಬಂದು ಹುಂಡಿ ತುಂಬಿತ್ತು. ಇದು ದೇವಿಯ ಸನ್ನಿಧಾನಕ್ಕೆ ವರುಷದ ಕಾಣಿಕೆಯಾಗಿ ಬರುವ ಹುಂಡಿ ಆದಾಯ. ಇದಲ್ಲದೆ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಹರಿದು ಬರುವ ಹಣ ಹೇರಳವಾಗಿ ಶೇಖರಣೆ ಆಗುತ್ತದೆ. ಇಲ್ಲಿಯ ಜನ, ದೇವರ ಕೈಂಕರ್ಯ ಕೈಗೊಂಡು ಪುಣ್ಯ ಪಡೆಯಲು ದೇವರ ಕಾಣಿಕೆಯನ್ನು ಎಣಿಸುವ ಮತ್ತು ವಿಂಗಡಿಸುವ ಕಾರ್ಯವನ್ನು ಮಾಡಲು ಕಾತರಿಸುತ್ತಾರೆ. ಆಡಳಿತ ಮಂಡಳಿ ಕಳೆದ ಬಾರಿ ಹುಂಡಿಯ ಎಲ್ಲಾ ಹಣವನ್ನು ಎಣಿಕೆ ಮಾಡಿ, ಒಟ್ಟು ಒಂದೂವರೆ ಕೋಟಿ ಧನ ಬಂದು ಸೇರಿದ್ದಕ್ಕೆ ಬಹಳ ಸಂತಸ ಹೊಂದಿತ್ತು. ಹಾಗೆ ಬಂದ ಆದಾಯದಿಂದ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ಪ್ರಾರಂಭಿಸಿತ್ತು ದೇವಸ್ಥಾನದ ಆಡಳಿತ ಮಂಡಳಿ. ಈ ದೇವಸ್ಥಾನ ಮತ್ತು ಇಲ್ಲಿಯ ದೇವರ ಪರಿಚಯ ಹೀಗೆ ಸಾಗುತ್ತದೆ.

ಅದೊಂದು ಅಷ್ಟೇನೂ ದೊಡ್ಡ ಊರಲ್ಲ. ಊರಿನ ಮಧ್ಯದಲ್ಲಿ ಅನಾದಿ ಕಾಲದಿಂದಲೂ ತಲೆ ಎತ್ತಿ ನಿಂತು ಹತ್ತಾರು ಶತಮಾನಗಳನ್ನು ಕಂಡು ಮಳೆ, ಗಾಳಿ, ಚಳಿ ಮತ್ತು ಬಿಸಿಲಿಗೆ ಮೈ ಒಡ್ಡಿ ನಿಂತಿರುವ ಎತ್ತರದ ಗೋಪುರವನ್ನೂ ಮತ್ತು ಅದರ ಅರ್ಧ ಎತ್ತರದ ಗರುಡುಗಂಬ ಹೊಂದಿರುವ ದೇವರ ಸ್ಥಾನವಿದು . ಬಹಳ ಪ್ರಾಚೀನವಾದ ದೇವಾಲಯ ಇದು. ದೇವಸ್ಥಾನದ ಸುತ್ತಲೂ ಇರುವ ಪುರಾತನವಾದ ಕಟ್ಟಡಗಳಲ್ಲಿ ಸರ್ಕಾರಿ ಶಾಲೆಗಳು, ಪೋಸ್ಟ್ ಆಫೀಸ್ ಮತ್ತು ತಾಲೊಕ್ಕು ಕಚೇರಿ ಬೀಡು ಬಿಟ್ಟಿವೆ. ದೇವಸ್ಥಾನದ ಸುತ್ತಲೂ ಸುರುಗಿ ಹೂವಿನ ಮರಗಳು ಬೃಹದಾಕಾರವಾಗಿ ಬೆಳೆದು ನಿಂತು ದೇವಸ್ಥಾನದ ಪ್ರಾಕಾರಕ್ಕೆ ಹೂವಿನ ಪರಿಮಳವನ್ನು ಪಸರಿಸಿ ತಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಂಡಿವೆ. ಇಲ್ಲಿ ತಿಬ್ಬಾ ದೇವಿಯ ಅಲಂಕಾರಕ್ಕೆ ಸುರುಗಿ ಹೂವು ಎಲ್ಲ ಹೂವುಗಳಿಗಿಂತ ಅತಿ ಶ್ರೇಷ್ಠ ಸ್ಥಾನವನ್ನು ಪಡೆದಿದೆ.

ದೇವಸ್ಥಾನ ಪುರಾತನ ಕಾಲದ್ದು. ಹಾಗೆಯೇ ಬೃಹತ್ತಾದುದ್ದು. ದೇವಸ್ಥಾನದ ಪ್ರಾಕಾರವನ್ನು ಸುತ್ತಲೂ ಸುಮಾರು ಅರ್ಧ ಗಂಟೆಯೇ ಬೇಕಾಗುತ್ತದೆ. ಹೊಯ್ಸಳರ ಶಿಲ್ಪ ಕಲಾಕೃತಿಗಳನ್ನು ಒಳಗೊಂಡಿರುವ ದೇವಸ್ಥಾನವಿದು. ಒಳಗಿನ ಗರ್ಭ ಗುಡಿ ಅಂದಿನ ವರ್ಚಸ್ಸನ್ನು ಹಾಗೆಯೇ ಉಳಿಸಿಕೊಂಡಿದೆ. ಅದರ ಹೊರ ಭಾಗ ಆಗಿಂದ್ದಾಗ್ಗೆ ಜೀರ್ಣೋದ್ದಾರಕ್ಕೆ ಒಳಪಟ್ಟು ಪುರಾತನದ ಕಸುವು ಕಳೆದುಕೊಂಡಿದೆ. ಅದೇನೇ ಆದರೂ ದೇವಸ್ಥಾನದ ಪ್ರಾಮುಖ್ಯತೆಯನ್ನು ಉಳಿಸಿಕೊಂಡ ಗುಡಿ ಇದು ಎಂದೇ ಹೇಳಬಹುದು. ಮುಜರಾಯಿ ಇಲಾಖೆ ಇದನ್ನು ಸುಪರ್ಧಿಗೆ ತೆಗೆದುಕೊಂಡಿದ್ದರೂ ಈ ಊರಿನ ಜನ, ದೇವಸ್ಥಾನದ ಮೇಲಿನ ಭಾವನಾತ್ಮಕ ಸಂಬಂಧ ಬಿಟ್ಟುಕೊಟ್ಟಿಲ್ಲ. ಸರ್ಕಾರದ ಹಕ್ಕು ಅದೇನೇ ಇದ್ದರೂ ಊರಿನ ದೊಡ್ಡ ತಲೆಗಳು, ತಲೆಮಾರಿನಿಂದ ನಡೆದು ಬಂದ ಪದ್ದತಿಯಂತೆ, ಯಾವುದೇ ಆಚರಣೆಯನ್ನು ನಿಲ್ಲಿಸದೆ ದೇವಸ್ಥಾನದ ಪೂರ್ವಿಕರು ಪಾಲಿಸುತ್ತಿದ್ದ ಆಚರಣೆಯನ್ನು ಚಾಚೂ ತಪ್ಪದೆ ನಡೆಸುತ್ತಾ ಬಂದಿದ್ದಾರೆ. ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಕಂಡು ಬರುವ ಆಡಳಿತ ಮಂಡಳಿಯ ರಾಜಕೀಯ ಇಲ್ಲಿಯೂ ಇದೆ! ಊರಿನ ಜಾತ್ರೆಯಲ್ಲಿ ಮಾತ್ರ ಒಂದಾಗುವ ಜನ ಮತ್ತೆ ತಮ್ಮದೇ ಹಳೆಯ ರಾಗದಲ್ಲಿ ಮುಂದುವರೆಯುತ್ತಾರೆ.

ಪ್ರತಿ ವರುಷವೂ ಇಲ್ಲಿನ ದೇವಸ್ಥಾನ ದಲ್ಲಿ ಜರಗುವ ಜಾತ್ರೆ ಸುತ್ತುಮುತ್ತಲಿನ ಹಲವಾರು ಹಳ್ಳಿಗಳಿಂದ ಜನರನ್ನು ಆಕರ್ಷಿಸುತ್ತದೆ. ಈ ರೀತಿಯ ಆಕರ್ಷಣೆ ಆ ದೇವಸ್ಥಾನದ ಮುಖ್ಯ ದೇವರಾದ ‘ತಿಬ್ಬಾ’ ದೇವಿಯದೆ ಎಂದು ಹೇಳಿದರೆ ತಪ್ಪಾಗಲಾರದು. ಊರಿನ ಇತರೆ ದೇವಸ್ಥಾನಗಳಿಗಿಲ್ಲದ ಪ್ರಾಶಸ್ತ್ಯ ಈ ದೇವಸ್ಥಾನಕ್ಕೆ ಸಂದಿದೆ. ಈ ಊರಿನ ಜಾತ್ರೆಯ ಮತ್ತೊಂದು ವಿಶೇಷವೆಂದರೆ ; ಹೋರಿಗರುಗಳ ಓಟದ ಸ್ಪರ್ಧೆ. ಜೋಡು ಹೋರಿಗರುಗಳನ್ನು ನೊಗಕ್ಕೆ ಕಟ್ಟಿ ಅವುಗಳನ್ನು ನಿಗದಿತ ಜಾಗದಿಂದ ಓಡಿಸಿ ಗೆಲ್ಲುವ ಈ ಸ್ಪರ್ಧೆ ಸುತ್ತುಮುತ್ತಲ ಜನರನ್ನು ಸೆಳೆಯುತ್ತದೆ. ಸ್ಪರ್ಧೆಗೆಂದೇ ತಮ್ಮ ಹೋರಿಗರುಗಳನ್ನು ತಯ್ಯಾರಿ ಮಾಡಿಕೊಂಡು ಬರುವ ರೈತರಿಗೇನು ಕಮ್ಮಿ ಇಲ್ಲ ಇಲ್ಲಿ. ಸುಮಾರು ಹತ್ತು ಹಳ್ಳಿಗಳಿಂದ ಬರುವ ಸ್ಪರ್ಧೆಯ ಹೋರಿಗರುಗಳನ್ನು ಗುಂಪಾಗಿ ಕಾಣುವುದೇ ಒಂದು ವಿಶೇಷ. ಇನ್ನೂ ರಸ್ತೆಗೆ ಪಳಗಿರದ ಹೋರಿಗರುಗಳು ಓಟ ಕಿತ್ತರೆ ಅವುಗಳನ್ನು ಹಿಡಿಯುವುದೇ ಒಂದು ಸವಾಲಾಗುತ್ತದೆ ಅವುಗಳ ಮಾಲೀಕರಿಗೆ. ಅದೆಷ್ಟೋ ಬಾರಿ ಹೋರಿಗರುಗಳು ಮಾಲೀಕರನ್ನೇ ತಳ್ಳಿಕೊಂಡು ಓಡಿ ಹೋದ ಪ್ರಸಂಗಗಳೂ ಇವೆ. ಜಾತ್ರೆಗೆ ಬಂದ ಮಾಲೀಕರು ಹೋರಿಗರುಗಳನ್ನು ಮಾರಾಟಕ್ಕೆ ಇಡುವುದೂ ಉಂಟು.

ಇಲ್ಲಿನ ತಿಬ್ಬಾ ದೇವಿ, ಮೂಲದಲ್ಲಿ ಪಾರ್ವತಿಯ ಅವತಾರದಿಂದ ಶಕ್ತಿಯಾಗಿ ದಾನವರನ್ನು ಕೊಂದು ಮಾನವರನ್ನು ಕಾಪಾಡಿದ ದೇವತೆಯೆಂದು ಜನ ಮಾನಸದಲ್ಲಿ ಪ್ರಖ್ಯಾತಿ ಹೊಂದಿದ ದೇವತೆ. ಈಕೆ ಇಲ್ಲಿಯ ಆದಿ ದೇವತೆಯೂ ಹೌದು. ಇಲ್ಲಿ ಮುಖ್ಯ ದೇವತೆಯಾದ ತಿಬ್ಬಾ ದೇವಿಯದೇ ಮೇಲುಗೈ. ಪರ ಊರಿನಿಂದ ಬಂದ ಜನರೂ ಸೇರಿದಂತೆ ಊರಿನ ಜನ, ತಿಬ್ಬಾ ದೇವಿಯ ದರುಶನ ಪಡೆಯದೇ ಇರಲಾರರು. ಅದು ಅವರ ‘ ಭಯ ‘ ದ ಭಕ್ತಿ ಆಗಿರದೆ, ಜನ ತಿಬ್ಬಾ ದೇವಿಯನ್ನು ಅತ್ಯಂತ ಪ್ರೀತಿಯಿಂದ, ತಮ್ಮ ಮನೆಯ ಹಿರಿ ಮಗಳಂತೆ ಕಾಣುವ ವಿಶ್ವಾಸದ ‘ಭಕ್ತಿ’ ಯೇ ಆಗಿದೆ. ಕುಟುಂಬದಲ್ಲಿ ಏನೇ ಸಮಸ್ಯೆ ತಲೆದೋರಿದ ರೂ ತಾಯಿ ತಿಬ್ಬಾ ದೇವಿಯ ಮುಂದೆ ಎಲ್ಲವನ್ನೂ ನಿರ್ವಚನೆಯಿಂದ ಅರುಹುತ್ತಾರೆ ಇಲ್ಲಿಯ ಜನ ! ಆಕೆ ಏನೇ ಪ್ರಸಾದ ದಯಪಾಲಿಸಿದರೂ ಅದನ್ನು ಸ್ವೀಕರಿಸಿ ಪಾಲಿಸುತ್ತಾರೆ ಅವರು. ಇಲ್ಲಿ ದೇವತೆ ಮತ್ತು ಜನರ ನಡುವೆ ಒಂದು ರೀತಿಯ ಹೇಳಿಕೊಳ್ಳಲಾಗದ ಆವಿರ್ನಾಭಾವ ಸಂಬಂಧ ಏರ್ಪಟ್ಟಿದೆ. ಇಲ್ಲಿಯ ದೇವಸ್ಥಾನದಲ್ಲಿ ದೇವತೆಗಳ ಪರಿವಾರವೇ ಆವಿರ್ಭವಿಸಿ, ಒಟ್ಟಾಗಿ ದೇವತೆಗಳನ್ನು ಕಾಣುವ ಭಾಗ್ಯ ಜನರಿಗೆ ದೊರಕಿದೆ ಎಂದರೆ ತಪ್ಪಾಗಲಾರದು.

ದೇವತೆಗಳೇ ಇರುವ ಈ ದೇವಸ್ಥಾನದಲ್ಲಿ ಅವರಿಗೆ ಪಾದುಕಾಪಾಗಿ ಗಂಡು ದೇವರುಗಳು ಇಲ್ಲಿ ಸ್ಥಾಪನೆಗೊಂಡಿದ್ದಾರೆ. ಆದರೆ ಜನರ ಆಕರ್ಷಣೆ, ದೇವತೆಗಳ ಕಡೆಗೆ ಇರುವುದರಿಂದ ಇಲ್ಲಿಯ ಗಂಡು ದೇವರುಗಳಿಗೆ ಹೇಳಿಕೊಳ್ಳುವಂತಹ ಪ್ರಾಮುಖ್ಯತೆ ತಪ್ಪಿ ಹೋಗಿದೆ. ಆದರೂ ಈಶ್ವರನ ರೂಪದ ಭೈರವೇಶ್ವರ ಮಾತ್ರ ತನ್ನ ಪ್ರಾಶಸ್ತ್ಯವನ್ನು ಉಳಿಸಿಕೊಂಡ ದೇವರಾಗಿ ಜನರಿಗೆ ಧೈರ್ಯ, ಶೌರ್ಯ ವನ್ನು ದಯಪಾಲಿಸುತ್ತ ಎಲ್ಲರಿಂದಲೂ ಪೂಜಿಸಲ್ಪಡುವ ದೇವನಾಗಿದ್ದಾನೆ. ದೇವತೆಯಾದ ತಿಬ್ಬಾ ದೇವಿ ಭಕ್ತರಿಗೆ ವರ ಪ್ರಧಾಯಿನಿಯಾದರೆ, ಭೈರವೇಶ್ವರ ಅವರನ್ನು ಕಷ್ಟಗಳಿಂದ ಕಾಪಾಡುವ ದೇವನಾಗಿ ಮತ್ತು ಊರನ್ನು ರಕ್ಷಿಸುವ ದೇವರಾಗಿ ಕೊಂಡಾಡಿಸಿಕೊಳ್ಳುತ್ತಾನೆ.

ಭೈರವೇಶ್ವರ ಎಂದೊಡನೆ ಎತ್ತರದ, ಅಜಾನುಬಾಹು ದೇವರ ಆಕೃತಿ ಕಣ್ಣಿಗೆ ಬರುತ್ತದೆ. ಇಲ್ಲಿಯ ಸ್ಥಳ ಪುರಾಣದಂತೆ ಭೈರವೇಶ್ವರ, ದಿನವೂ ರಾತ್ರಿಯ ಸರಿ ಹೊತ್ತಿನಲ್ಲಿ ಊರಿನಲ್ಲಿ ಸಂಚರಿಸುತ್ತಾ, ಊರಿಗೆ ಯಾವುದೇ ರೀತಿಯ ಅನಿಷ್ಟಗಳು ಮತ್ತು ತೊಡುಕುಗಳು ಬರದಂತೆ ಕಾಪಾಡುತ್ತಾ, ಬೆಳಗಿನ ವೇಳೆಗೆ ತನ್ನ ಸನ್ನಿಧಾನಕ್ಕೆ ಬಂದು ಸೇರುತ್ತಾನೆಂದು ಪ್ರತೀತಿ. ರಾತ್ರಿಯ ವೇಳೆ ತಿರುಗಾಡಲು ಹೊರಡುವಾಗ ತನ್ನ ಬೃಹತ್ತಾದ ಪಾದರಕ್ಷೆಗಳನ್ನು ಧರಿಸಿ ಹೊರಡುವ ಭೈರವೇಶ್ವರ ಅವುಗಳನ್ನು ಬೆಳಗಿನ ಜಾವ ತನ್ನ ಗರ್ಭ ಗುಡಿಯ ಬಳಿ ಬಿಟ್ಟು ಅಂತರ್ಧಾನ ಆಗುವುದು ನಡೆದು ಬಂದಿರುವ ವಾಡಿಕೆ. ಆ ದೇವರ ಪಾದ ರಕ್ಷೆಗಳು ಸುಮಾರು ಎಂಟು ಗಂಡಸರ ಕಾಲು ತೂರಿಸಿವಷ್ಟು ಅಗಲ ಮತ್ತು ನಾಲ್ಕು ಅಡಿಗಳ ಉದ್ದ ಇರುತ್ತದೆ. ಬಣ್ಣ ಬಣ್ಣದ ಮೇಲು ಪಟ್ಟಿಗಳಿಂದ ಕೂಡಿರುವ ಆ ಪಾದ ರಕ್ಷೆಗಳು ನೋಡಲು ಬಹು ಸುಂದರವಾಗಿ ಕಾಣುತ್ತಿರುತ್ತದೆ. ಮೇಲಿನ ಪಟ್ಟೆಗಳಿಗೆ ತೆಳುವಾದ ಚಿನ್ನ ಲೇಪಿತ ಹಾಳೆಯನ್ನು ಅಂಟಿಸಿ ಅದು ಮಿರ , ಮಿರನೇ ಹೊಳೆಯುವಂತೆ ಕಾಣುತ್ತದೆ. ದಿನವೂ ಬಳಸುವ ಆ ದೇವನ ಪಾದ ರಕ್ಷೆಗಳು ಜಾತ್ರೆ ಸಮೀಪಿಸುತ್ತಿದ್ದಂತೆ ಸವೆದು, ಹರಿದು ಹಳೆಯ ಪಾದ ರಕ್ಷೆಗಳಾಗಿ ಬಿಡುತ್ತವೆ. ಪ್ರತಿ ಜಾತ್ರೆಯ ದಿನದಂದು ಸ್ವಾಮಿಗೆ ಹೊಸ ಪಾದ ರಕ್ಷೆಯನ್ನು ಅರ್ಪಿಸಲಾಗುತ್ತದೆ. ಜಾತ್ರೆಯ ತೇರಿನ ಬಳಿ ಹೊಸ ಪಾದುಕೆಯನ್ನು ಊರಿನ ಎಲ್ಲ ಜನರ ಮುಂದೆ ದೇವರಿಗೆ ಅರ್ಪಿಸಲಾಗುವುದು. ಸ್ವಾಮಿಯ ಪಾದ ರಕ್ಷೆಗಳನ್ನು ಸಿದ್ದ ಪಡಿಸಿ ಕೊಡುವುದು ಅದೇ ಊರಿನ ರಾಚಪ್ಪನ ಕುಟುಂಬಕ್ಕೆ ಸೇರಿದ ಕಾಯಕವಾಗಿದೆ. ಆ ಕಾಯಕ ರಾಚಪ್ಪನ ಕುಟುಂಬದ ಹಿಂದಿನ ತಲೆಮಾರುಗಳಿಂದ ನಡೆದು ಬಂದ ಪದ್ದತಿಯೇ ಆಗಿದೆ. ದೇವರ ಪಾದುಕೆಗಳನ್ನು ತಯ್ಯಾರಿಸಿ ಕೊಡುವುದು ಎಂದರೆ ಏನು ಕಮ್ಮಿಯ ಕೆಲಸವೇ? ಅದೊಂದು ಅತಿ ದೊಡ್ಡ ಪುಣ್ಯದ ಕೆಲಸವೆಂದೇ ಭಾವಿಸಲಾಗುವುದು. ಸುಮಾರು ಮೂರು ತಿಂಗಳ ಕೆಲಸ ಹಿಡಿಸುತ್ತದೆ. ಕೆಲಸಕ್ಕಿಂತ ಅದನ್ನು ಸಿದ್ದ ಪಡಿಸುವಾಗ ಅನುಸರಿಸುವ ಆಚರಣೆ ಹಲವಾರು ಬಾರಿ ದೊಡ್ಡ ಆತಂಕವನ್ನೇ ತಂದೊಡ್ಡುತ್ತದೆ. ದೇವರ ಪಾದುಕೆಗಳನ್ನು ಸಿದ್ದ ಪಡಿಸುವ ಆಸಾಮಿ ಮಾಂಸ, ಮಧಿರಾದಿಗಳನ್ನು ತೊರೆದು ಸಾತ್ವಿಕ ಆಹಾರವನ್ನು ಸೇವಿಸುತ್ತಾ ದಿನವೂ ಸ್ನಾನ ಮಾಡಿ ಶುಚಿಯಾಗಿ ಏಕ ಮನಸ್ಸಿನಿಂದ ಪಾದುಕೆಗಳ ಕಾಯಕವನ್ನು ಮಾಡಬೇಕು. ಅದೊಂದು ವ್ರತದಂತೆ ಮಾಡುವ ಜವಾಬುದಾರಿ ಅದನ್ನು ಕೈಗೊಳ್ಳುವ ಆಸಾಮಿಯ ಮೇಲೆ ಇರುತ್ತದೆ. ರಾಚಪ್ಪನ ತಂದೆಯಂತೂ ಅದರಲ್ಲಿ ಸಿದ್ಧ ಹಸ್ತನಾಗಿದ್ದ. ರಾಚಪ್ಪನೂ ಏನೂ ಕಮ್ಮಿ ಇಲ್ಲದಂತೆ ಆ ಕೈಂಕರ್ಯವನ್ನು ನಡೆಸಿ ಬರುತ್ತಿದ್ದ. ಹಿಂದೆ ಅದನ್ನು ಅವರ ಕುಟುಂಬದಿಂದ ಮತ್ತೊಂದು ಕುಟುಂಬಕ್ಕೆ ವರ್ಗಾಯಿಸುವ ಹುನ್ನಾರು ನಡೆದು, ಒಂದು ದೊಡ್ಡ ಕಾಳಗವೇ ಜರುಗಿತ್ತು. !

ದೇವರ ಪಾದುಕೆಗಳು ತನ್ನಂತೆ ತಾನೇ ಸವೆಯಲು ಕಾರಣ ಹುಡುಕಿ ಕೆಲವು ಕಾಲೇಜು ಮೆಟ್ಟಿಲು ಹತ್ತಿದ್ದ ಪಡ್ಡೆ ಹೈಕಳು ಜನರ ಕೆಂಗಣ್ಣಿಗೆ ಪಾತ್ರವಾದದ್ದು ಉಂಟು. ಅವರ ಅಂಬೋಣದಂತೆ; ದಿನವೂ ಬರುವ ಭಕ್ತಾದಿಗಳ ತಲೆಯ ಮೇಲೆ ಪೂಜಾರಪ್ಪ ದೇವರ ಪಾದಗಳಿಂದ ಆಶೀರ್ವದಿಸುವುದು ಪಾದುಕೆಗಳು ಹರಿಯಲು ಒಂದು ಕಾರಣ ಎಂದು. ಒಟ್ಟಿನಲ್ಲಿ ವರುಷದ ಕೊನೆಯಲ್ಲಿ ಅಂದರೆ, ಜಾತ್ರೆಯ ದಿನದಂದು ಅದೇ ಊರಿನ ರಾಚಪ್ಪ, ಸ್ವಾಮಿಯ ಪಾದುಕೆಗಳನ್ನು ಸಿದ್ದ ಮಾಡಿ ದೇವರಿಗೆ ಅರ್ಪಿಸಬೇಕು. ಅದರ ಖರ್ಚು ವೆಚ್ಚಗಳನ್ನು ಆಡಳಿತ ಮಂಡಳಿ ಭರಿಸುತ್ತದೆ. ಈ ದೇವರ ಹುಂಡಿಗೆ ಹಣದ ಜೊತೆಗೆ ಕಾಣಿಕೆಯಾಗಿ ಚಿನ್ನದ ಸರ, ಬಳೆ, ಡಾಬು, ಕಾಲಿನ ವಂಕಿ, ಕಾಲು ಗೆಜ್ಜೆ, ತೋಳು ಬಳೆ, ಕಾಸಿನ ಸರ, ತೋಮಾಲೆ, ಚಿನ್ನದ ಸಣ್ಣ ಬಾಚಣಿಗೆ, ಗಂಡಸರ ಚಿಕ್ಕ ಬಾಚಣಿಗೆ ಮತ್ತು ಇನ್ನೂ ಮುಂತಾದ ಆಭರಣಗಳು ಮತ್ತು ಚಿತ್ರ ವಿಚಿತ್ರವಾದ ಹೊನ್ನಿನ ಕಾಣಿಕೆಗಳು ಬಂದು ಬೀಳುತ್ತದೆ. ಹುಂಡಿ ತುಂಬಿ, ಕಂಠದ ವರೆಗೆ ತುಳುಕಾಡುತ್ತದೆ. .

ಧನ ಕನಕಗಳೇನೋ ಸರಿ ಆದರೆ ಹೇರಳವಾಗಿ ಶೇಖರಣೆಯಾದ ಗಂಡಸರ ಚಿನ್ನದ ಚಿಕ್ಕ ಬಾಚಣಿಗೆ ಏಕೆ ? ಎಂಬ ಕುತೂಹಲ ದೇವರಿಗೂ ಬರಬಹುದು. ಅದಕ್ಕೆ ಕಾರಣ ಇಲ್ಲದ್ದಿಲ್ಲ. ಒಂದು : ಇತ್ತೀಚಿಗೆ ದುಡಿಮೆಯ ಎಲ್ಲ ಕ್ಷೇತ್ರದಲ್ಲಿಯೂ ಹೆಚ್ಚಾಗುತ್ತಿರುವ ಗಣಕೀಕರಣ, ಹೆಚ್ಚು ಟೆಕೀಗಳನ್ನು ಸೃಷ್ಟಿಸುತ್ತಿದೆ. ಸುಮಾರು ಶೇಕಡಾ ಅರವತ್ತು ಜನ ಟೆಕಿಗಳು ಅತಿಯಾದ ಕೆಲಸದ ಒತ್ತಡದಿಂದ ತಮ್ಮ ತಲೆಯ ಕೂದಲನ್ನು ಚಿಕ್ಕ ವಯಸ್ಸಿನಲ್ಲಿಯೇ ಕಳೆದುಕೊಂಡು ಬಿಡುತ್ತಾರೆ. ಯವ್ವನಿಗರು ಮುದುಕರಂತೆ ಕಾಣುತ್ತಾರೆ. ಇದರಿಂದ ಇತ್ತೀಚಿಗೆ ತಲೆಗೂದಲನ್ನು ನಾಟಿ ಮಾಡುವ ವೈದ್ಯರೂ ಹುಟ್ಟಿಕೊಂಡಿದ್ದಾರೆ. ಇನ್ನುಳಿದಂತೆ ಸುಮಾರು ಗಂಡಂದಿರ ಜುಟ್ಟು ಅವರ ಹೆಂಡತಿಯಾ ಕೈ ಸೇರಿರುತ್ತದೆ ಎಂದು ಅಂದಾಜಿಸಿದರೆ ಶೇಕಡಾ ನೂರು ತುಂಬುತ್ತದೆ!. ಹೀಗೆ ಕೂದಲು ಕಳೆದುಕೊಂಡ ಗಂಡಸರು ತಮ್ಮ ಬಕ್ಕ ತಲೆಯನ್ನು ಹಸಾನಾಗಿಸಿಕೊಳ್ಳಲು ದೇವರ ಮೊರೆ ಹೋಗುತ್ತಾರೆ. ಹಾಗಾಗಿ ದೇವರ ಹುಂಡಿಯಲ್ಲಿ ಚಿನ್ನದ ಗಂಡಸರ ಬಾಚಣಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸೇರಿರುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಗಂಡಸರ ಬಾಚಣಿಗೆಯನ್ನು ಹುಂಡಿಗೆ ಸಮರ್ಪಿಸಲು ದೂರದ ಬೆಂಗಳೂರು, ಮೈಸೂರು ಪಟ್ಟಣಗಳಿಂದ ವಾರಾಂತ್ಯದಲ್ಲಿ ಬರುವ ‘ಟೆಕಿ’ ಗಳು ತಮ್ಮ ಸಂಸಾರದ ಜೊತೆಗೆ ಬರುವುದೇ ಆಗಿದೆ. ತಿಬ್ಬಾದೇವಿಯಲ್ಲಿ, ತಾವು ಕಳೆದುಕೊಂಡಿರುವ ತಲೆಯ ಕೂದಲು ಮರು ಹುಟ್ಟಲೆಂದು ಗಂಡಸರು ಮೊರೆ ಹೋಗುತ್ತಾರೆ . ದೇವಿಯ ಬಳಿ ಇವರು ತಮ್ಮ ಈ ವಿಶಿಷ್ಟ ಪ್ರಾರ್ಥನೆ ಇಡಲು ಕಾರಣ; ತಿಬ್ಬಾ ದೇವಿಯ ಹೆಂಗರುಳು. ಯಾರು ಏನು ಕೇಳಿದರೂ ದಯಪಾಲಿಸುವ ಕರುಣಾಮಯಿ ಎಂಬ ಹೆಗ್ಗಳಿಕೆಗೆ ಪಾತ್ರ್ತಳಾದವಳಲ್ಲವೇ ಅವಳು? ಇನ್ನು ಹೆಂಗೆಳೆಯರದ್ದು; ಮಾಮೂಲಿನಂತೆ ನಿಸ್ವಾರ್ಥ ಹರಕೆಗಳು ನಾನಾ ತೆರನಾಗಿ ಇರುತ್ತವೆ. ಈ ದೇವರ ಹುಂಡಿ ಹಿಂದೆ ಕಳುವಾಗಿತ್ತು! ಊರಿನ ಜನ, ಪೊಲೀಸರು ಎಲ್ಲೆಲ್ಲೂ ಹುಡುಕಿದರೂ ಆ ಹುಂಡಿಯ ಸುಳಿವೇ ಇರಲಿಲ್ಲ. ಅದೊಂದು ಪವಾಡದಂತೆ ಊರ ಹೊರಗಿನ ದೊಡ್ಡಾಲದ ಮರದ ಬಳಿ ಕುರಿ ಮೇಯಿಸುತ್ತಿದ್ದ ಹೈದನ ಕಣ್ಣಿಗೆ ಮಣ್ಣಿನಲ್ಲಿ ಹೂತಿದ್ದ ಹುಂಡಿ ಕಂಡಿತ್ತು. ಹೂತಿದ್ದ ಹುಂಡಿಯನ್ನು ಒಡೆದು ಪರೀಕ್ಷಿಸಿದರೆ ಅದರಲ್ಲಿದ್ದ ಒಂದೇ ಒಂದು ಬಿಡಿಗಾಸು ಕಳ್ಳರ ಕೈ ಸೇರಿರಲಿಲ್ಲ. ಅದೊಂದು ಪ್ರಶ್ನೆಯಾಗಿಯೇ ಉಳಿದಿತ್ತು, ದೇವರ ಮಹಿಮೆ ಹೆಚ್ಚಿಸಿತ್ತು.

ಪ್ರತಿ ಜಾತ್ರೆಯ ಸಮಯದಲ್ಲಿ ತುಂಬಿ ತುಳುಕಾಡುವ ಇಂತಹ ಹುಂಡಿಯ ಮೇಲೆ ಕಳ್ಳರ ಕಣ್ಣು ಬೀಳದೆ ಇರುವುದೇ ? ದೇವರ ಹುಂಡಿಗೆ ಕೈ ಹಾಕಿ ಕದಿಯುವ ಅವರು ಅದೆಷ್ಟು ದೈರ್ಯವಂತರಾಗಿರಬೇಕು ಅಲ್ಲವೇ? ಕಲಿಯುಗದ ದೇವರುಗಳ ವಿಧಿ ಹೇಗೆಂದರೆ; ಹುಂಡಿ ಕದಿಯುವ ಕಳ್ಳ ತನ್ನ ಕಸುಬಿಗೆ ಹೊರಡುವ ಮುನ್ನ ದೇವರಿಗೆ ಗಂಧದ ಕಡ್ಡಿ ಹಚ್ಚಿ ಕೈ ಮುಗಿದು ಮನೆಯ ಹುಂಡಿಗೆ ಕದ್ದ ಕಾಸಿನಲ್ಲಿ ಮಿಕ್ಕಿರುವ ಚಿಲ್ಲರೆ ಹಾಕಿ, ಕೆಲಸ ಸುಗಮವಾಗಲಿ ಎಂದು ಬೇಡಿಕೊಳ್ಳುತ್ತಾನೆ! ಎಲ್ಲರಂತೆ ಕಳ್ಳರೂ ಮನುಷ್ಯರು ತಾನೇ? ದೇವರ ಬಗೆಗೆ ಭಯ ಇರುತ್ತದೆ. ಆದರೆ ದೇವರು ತೋರಿಸಿದ ಜೀವನದ ದಾರಿ ‘ ಕಳ್ಳತನದ ‘ ಹಾದಿ ಎಂದು ಅವರಲ್ಲಿ ಅಚಲವಾದ ನಂಬಿಕೆ! ನಂಬಿಕೆ ಇದ್ದರೆ ಧೈರ್ಯವೂ ತಾನೇ ಬರುತ್ತದೆ ಅಲ್ಲವೇ? ಅವರು ಮಾಡುತ್ತಿರುವುದು ಸರಿಯೇ? ಅಥವಾ ತಪ್ಪೇ ಎಂಬುದನ್ನು ತರ್ಕ ಮಾಡಲು ಅವರು ಹೋಗುವುದೇ ಇಲ್ಲ. ಐಷಾರಾಮದ ಜೀವನ ಅವರನ್ನು ಕಳ್ಳತನದ ಹಾದಿಗೆ ನೂಕಿರುತ್ತದೆ. ಜೀವನದಲ್ಲಿ ಮೂರ್ಖತೆ ಹೆಚ್ಚಾದರೆ ವಿವೇಕ ಮಾಯವಾಗುತ್ತದೆ. ಎಲ್ಲ ಕಳ್ಳರ ಸ್ಥಿತಿಯೂ ಹಾಗೆಯೇ.

ಬೇರೆ ಸ್ಥಳದಲ್ಲಿ ಮಾಡುವ ಕಳ್ಳತನದಂತಲ್ಲ ದೇವಸ್ಥಾನದ ಹುಂಡಿ ಕದಿಯುವುದು? ಮಾಮೂಲಿನಂತೆ ಕಸುಬಿಗೆ ಹೊರಡುವ ಮುನ್ನ ಸೇಂದಿ ಏರಿಸಿ ಹೊರಡುವಂತಿಲ್ಲ! ಕುಡಿದು ದೇವಸ್ಥಾನದ ಒಳಗೆ ಪ್ರವೇಶ ಸಲ್ಲ ಎಂಬುದು ಪ್ರತಿ ಕಳ್ಳನ ಒಂದು ರೀತಿಯ ಶಿಸ್ತು ಮತ್ತು ಸುಪ್ತ ಮನಸ್ಸಿನ ಕೂಗೂ ಆಗಿರುತ್ತದೆ. ಬದಲಾಗಿ, ಸ್ನಾನ ಮಾಡಿ ಶುಚಿಯಾದ ಬಟ್ಟೆ ಧರಿಸಿ ಹೊರಡಬೇಕು ಎಂಬ ಪ್ರಜ್ಯೆ ಅವರಲ್ಲಿ ಜಾಗೃತರವಾಗಿರುತ್ತದೆ. ಈ ತೆರನಾದ ಶಿಸ್ತನ್ನು ಪಾಲಿಸದೆ ದಂಧೆಗೆ ಹೋದರೆ, ಏನಾದರೊಂದು ಎಡವಟ್ಟು ಕಾದಿರುತ್ತದಂತೆ. ಅಶಿಸ್ತಿನಿಂದ ನಡೆದುಕೊಂಡ ಒಂದು ಗ್ಯಾಂಗಿನ ಕಥೆ, ಕಳ್ಳರ ಗುಂಪಿನಲ್ಲಿ ಪ್ರಸಿದ್ಧಿಯಾಗಿಬಿಟ್ಟಿದೆ. ಒಮ್ಮೆ ಐದು ಜನರಿದ್ದ ಒಂದು ಕಳ್ಳರ ಗುಂಪು ಯಾವುದೋ ಒಂದು ದೇವಸ್ಥಾನದ ವಿಗ್ರಹ ಕಳುವು ಮಾಡಲು ಹೊರಟರಂತೆ. ಮಾಮೂಲಿನಂತೆ ಎಲ್ಲರು ಗಡದ್ದಾಗಿ ತಿಂದು, ಹೆಂಡ ಕುಡಿದು ತಮ್ಮ ಕಸುಬಿಗೆ ಧಾವಿಸಿದರು. ದೇವಸ್ಥಾನಕ್ಕೆ ಪ್ರವೇಶ ಗಿಟ್ಟಿಸಿ ಇನ್ನೇನು ವಿಗ್ರಹಗಳನ್ನು ಕೀಳಲು ಹಾರೆ ಮೀಟಿದೊಡನೆ , ಅದೆಲ್ಲಿದ್ದವೋ ಕರಿ ನಾಗರ ಹಾವುಗಳು ಪ್ರತ್ಯಕ್ಷವಾಗಿ ಬುಳುಬುಳನೆ ಅವರೆಡೆಗೆ ಹರಿಯತೊಡಗಿತ್ತಂತೆ. ಕದಿಯಲು ಹೋದ ಆ ಕಳ್ಳರು ಅದನ್ನು ಕಂಡು ಕಂಗಾಲಾದರು. ಬುಸುಗುಟ್ಟಿ ಬರುತ್ತಿದ್ದ ಹಾವುಗಳಿಂದ ತಪ್ಪಿಸಿ ಮುಖ್ಯ ದ್ವಾರಕ್ಕೆ ಓಡಿದರೆ ಅವರು ಒಳಬಂದ ದ್ವಾರ ಮುಚ್ಚಿಹೋಗಿತ್ತು! ಅವರಿಗೆ ದಾರಿ ತೋಚದೆ ಪ್ರಾಕಾರದೊಳಗೆ ಅಡ್ಡಾ ದಿಡ್ಡಿ ಓಡಾಡಿ ಆಯಾಸಗೊಂಡು ಹಾವುಗಳ ಕಡಿತಕ್ಕೆ ಒಳಗಾದರಂತೆ. ಒಬ್ಬನೂ ಉಳಿಯದೆ ಇಡೀ ಗ್ಯಾಂಗೇ ಸತ್ತು ಬಿದ್ದಿದ್ದರಂತೆ.

ಮರು ದಿನ ಆ ಗ್ರಾಮದ ಜನರು ದೇವಸ್ಥಾನಕ್ಕೆ ಬಂದು ಆ ಅವಘಡವನ್ನು ಕಂಡು ದೇವರಿಗೆ ಕೈ ಮುಗಿದು, ದೇವರ ಮಹಿಮೆಯನ್ನು ಕೊಂಡಾಡಿದರಂತೆ. ಆ ಗ್ರಾಮದ ದೇವರ ಮಹಿಮೆ ಸುತ್ತಲಿನ ಹಳ್ಳಿಗಳಿಗೆ ಪಸರಿಸಿ ಎಲ್ಲ ಕಳ್ಳರಲ್ಲಿ ಭಯ ಹುಟ್ಟಿಸಿತು. ಆ ದೇವಸ್ಥಾನದ ಗೊಡವೆಗೆ ಯಾವ ಕಳ್ಳನೂ ಹೋಗುತ್ತಿರಲಿಲ್ಲವಂತೆ. ಯಾವುದೇ ಸಂಗತಿಯಾದರೂ ದಿನಗಳು ಕಳೆದಂತೆ ಹಳತನ್ನು ಮರೆತು ಹೊಸದನ್ನು ಅಪ್ಪಿಕೊಳ್ಳುವುದು ಮನುಷ್ಯನ ಸಹಜ ಗುಣ ಅಲ್ಲವೇ ? ಜನರು ಆ ಘಟನೆಯನ್ನು ಮರೆತರು. ಕಳ್ಳರೂ ಸಹ. ಯಾವುದೇ ದೇವಸ್ಥಾನದ ಹುಂಡಿ ಕದಿಯುವುದೆಂದರೆ ಸಾಮಾನ್ಯದ ಸಂಗತಿಯೇ? ಕರಾರುವಾಕ್ಕು ಯೋಜನೆಯ ಅಗತ್ಯ ಇರುತ್ತದೆ. ಯೋಜನೆಯ ರೀತಿ ನಡೆದುಕೊಳ್ಳುವ ಅನಿವಾರ್ಯತೆಯೂ ಇರುತ್ತದೆ.


ಆ ಊರಿನ ವರುಷದ ಜಾತ್ರೆಯ ತಯಾರಿ ಭರದಿಂದ ಆರಂಭವಾಗಿತ್ತು. ದೇವಸ್ಥಾನದ ಧರ್ಮದರ್ಶಿಗಳು ಅವರ ಸಹೋದ್ಯೋಗಿಗಳೊಡನೆ ಬಿರುಸಿನಿಂದ ಹಲವಾರು ಚಟುವಟಿಕೆಗಳನ್ನು ಪ್ರಾರಂಭಿಸಿದ್ದರು. ಅವರನ್ನು ಸುತ್ತುವರೆದು ಸುಮಾರು ಆಳುಕಾಳುಗಳು ಅವರ ಸಲಹೆಗಳನ್ನು ತೆಗೆದುಕೊಳ್ಳುವಲ್ಲಿ ತಲ್ಲೀನರಾಗಿದ್ದರು. ಮುಖ್ಯ ಅರ್ಚಕರ ಸಮೇತ ಇಡೀ ಪೂಜಾರಿ ವೃಂದ ಅಲ್ಲಿ ನೆರೆದಿತ್ತು. ಎಲ್ಲರೂ ಜಾತ್ರೆಯ ಸಿದ್ದತೆಯ ಅಂಶಗಳನ್ನು ಮನನ ಮಾಡಿಕೊಳ್ಳುತ್ತಿದ್ದರು. ದೇವಸ್ಥಾನದ ಹೊರಗಿನ ಸಿದ್ಧತೆಗಳನ್ನು ಆಳುಗಳು ಮಾಡಿ ಮುಗಿಸುವ ಹಾಗೆ ಗುಡಿಯ ಒಳಗಿನ, ಅದರಲ್ಲೂ ಗರ್ಭ ಗುಡಿಯ ಅಲಂಕಾರದ ಜವಾಬುದಾರಿ ಅರ್ಚಕರದ್ದು . ಜಾತ್ರೆಯ ದಿನದಂದು ತಿಬ್ಬಾ ದೇವಿಗೆ ಚಿನ್ನದ ಕಿರೀಟವಿಟ್ಟು, ಚಿನ್ನದ ಕತ್ತಿಯನ್ನು ಇಟ್ಟು ಪೂಜೆಯನ್ನು ಸಲ್ಲಿಸುವ ಪದ್ಧತಿ ಹಿಂದಿನಿಂದಲೂ ನಡೆದು ಬರುತ್ತಿದೆ. ಜಾತ್ರೆಯ ಮಟ್ಟಿಗೆ ಊರಿನ ಪಕ್ಕದ ಟೌನಿನಿಂದ ದೇವರ ಚಿನ್ನದ ಆಭರಣಗಳನ್ನು ತಹಶೀಲ್ದಾರ್ ಕಚೇರಿಯ ಖಜಾನೆಯಿಂದ ತರಲಾಗುತ್ತದೆ. ಜಾತ್ರೆ ಮುಗಿದ ಅದೇ ದಿನ ಎಲ್ಲ ಆಭರಣಗಳನ್ನು ಖಜಾನೆಗೆ ತಲುಪಿಸಲಾಗುತ್ತದೆ. ಆಭರಣವನ್ನು ತರುವ ದಿನ ಮತ್ತು ಅದನ್ನು ಮತ್ತೆ ಖಜಾನೆಗೆ ಒಯ್ಯುವ ವೇಳೆ ಪೊಲೀಸ್ ಬಂದೋಬಸ್ತ ಇಡಲಾಗುತ್ತದೆ. ಈ ಪದ್ಧತಿ ಆ ಊರಿಗೆ ಮತ್ತು ಸುತ್ತು ಮುತ್ತಲೂ ಇರುವ ಊರುಗಳಿಗೆ ತಿಳಿದಿರುವ ವಿಷಯವೇ ಆಗಿದೆ. ದೇವಿಯ ಅಲಂಕಾರಕ್ಕೆ ಖಜಾನೆಯಿಂದ ಆಭರಣಗಳು ದೇವಸ್ಥಾನಕ್ಕೆ ಬಂದು ಸೇರುವ ಸಮಯದಲ್ಲಿ ಭೈರವೇಶ್ವರನ ಹೊಸ ಪಾದುಕೆಗಳು ದೇವಸ್ಥಾನ ಸೇರುವ ಪದ್ದತಿ ಹಿಂದಿನಿಂದಲೂ ನಡೆದು ಬರುತ್ತಿದೆ.

ರಾಚಪ್ಪನ ಮನೆಯನ್ನು ತಲಪುವ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಸಿದ್ದವಾಗಿರುವ ಪಾದುಕೆಯನ್ನು ಪೂಜಿಸಿ ಒಂದು ಚಿಕ್ಕದಾದ ಮಂಟಪದಲ್ಲಿ ಇಟ್ಟು ವಾಲಗ ಮತ್ತು ಡೋಲಿನ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ತರುತ್ತಾರೆ. ಅಂದು ರಾಚಪ್ಪನ ಸಂತಸಕ್ಕೆ ಎಣೆಯೇ ಇಲ್ಲ. ದೇವರ ಕಾರ್ಯ ಮುಗಿಸಿದ ಹರುಷ ಅವನಿಗೆ ಮತ್ತು ಅವನ ಕುಟುಂಬದವರಿಗೆ. ಜಾತ್ರೆಯ ದಿನದ ಅಲಂಕಾರ ಮಾಮೂಲಿ ದಿನಗಳ ಅಲಂಕಾರ ಆಗಿರದೆ ವಿಶೇಷ ಅಲಂಕಾರ ಮಾಡುವ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವ ಜವಾಬ್ದಾರಿ ಮುಖ್ಯ ಅರ್ಚಕರಿಗೆ ವಹಿಸಲಾಗಿತ್ತು. ಅಂದು ಎಲ್ಲದಕ್ಕಿಂತ ಮುಖ್ಯವಾಗಿ ಗುಡಿಯ ಒಳ ಬರುವ ಭಕ್ತರನ್ನು ಸಮಾಳಿಸುವ ಕೆಲಸವೂ ಅರ್ಚಕ ವೃಂದ ಮತ್ತು ನಂಬಿಕಸ್ತ ಆಳುಗಳದ್ದೇ ಆಗಿರುತ್ತದೆ. ಅಂದು, ಪ್ರತಿ ದಿನದಂತೆ ಭಕ್ತರನ್ನು ಗರ್ಭ ಗುಡಿಯ ಬಾಗಿಲಿನವರೆಗೂ ಬಿಡದೆ ಅನತಿ ದೂರದಲ್ಲಿಯೇ ನಿಲ್ಲಿಸಿ ಸೇವೆಗೆ ಅವಕಾಶ ಮಾಡಿಕೊಡಬೇಕಿತ್ತು. ಅದಕ್ಕೆ ಬೇಕಾಗುವ ತಡೆ ಕಂಬಿಗಳನ್ನು ಕಟ್ಟಿಸಿ ಯಾವ ಭಕ್ತರೂ ಅದನ್ನು ಮೀರಿ ಒಳ ಬರದಂತೆ ತಡೆಯಬೇಕಿತ್ತು. ಅಂದು ಭಕರಿಗೆ ಬರಿಯ ದೇವರ ದರುಶನ. ಅಂದು ದೇವರ ತೀರ್ಥ, ಪ್ರಸಾದಗಳು ಇರುವುದಿಲ್ಲ. ಊರಿನ ಜಾತ್ರೆ ಹತ್ತಿರ ಬರುತ್ತಿದ್ದಂತೆ ಎಲ್ಲರ ಮನೆಯಲ್ಲೂ ದೇವರ ಕೆಲಸ ಒಂದಿಲ್ಲ ಒಂದು ರೀತಿ ಪ್ರಾರಂಭವಾಗಿ ಬಿಡುತ್ತದೆ.

ಇನ್ನು ಊರ ಹೈಕಳೆಲ್ಲ ಗುಡಿಯ ಒಳಗೆ ಮತ್ತು ಹೊರಗೆ ಹುಚ್ಚೆದ್ದು ಮನ ಬಂದಂತೆ ಅಡ್ಡಾಡಲು ಶುರು ಮಾಡುತ್ತವೆ . ದೇವಸ್ಥಾನದ ಪಕ್ಕದಲ್ಲಿಯೇ ಇರುವ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳೆಲ್ಲವೂ ಶಾಲೆ ತೊರೆದು ದೇವಸ್ಥಾನದ ಒಳಗೆ ಆಡುತ್ತವೆ. ಗುಡಿಯ ಮೇಲ್ವಿಚಾರಕ ಗೂಣಪ್ಪನಿಗೆ ಆ ಹೈಕಳನ್ನು ಹೊರಗೆ ಅಟ್ಟುವುದೇ ಕೆಲಸವಾಗುತ್ತದೆ. ಅದೆಷ್ಟು ಬಾರಿ ಗದರಿದರೂ ಹೊರಗೆ ಹೋಗದ ಹುಡುಗರು ಗೂಣಪ್ಪನ ಬೆತ್ತಕ್ಕೆ ಹೆದರಿ ಆ ಕ್ಷಣಕ್ಕೆ ಚೆಲ್ಲಾಪಿಲ್ಲಿಯಾದರೂ , ಬೆಲ್ಲಕ್ಕೆ ಮುತ್ತುವ ನೊಣಗಳಂತೆ ಮತ್ತೆ ಬಂದು ನೆರೆಯುತ್ತಿದ್ದವು. ಇದು ಪ್ರತಿ ಸಲ ದೇವಸ್ಥಾನದ ವಿಶೇಷ ಪೂಜೆ ನಡೆಯುವಾಗ ಹೈಕಳ ದೊಂಬಿ ದೇವಸ್ಥಾನದ ಒಳಗೆ ನುಗ್ಗಿ ಮಾಡುವ ಧಾಂದಲೆ ರೂಢಿಯಾಗಿತ್ತು ಗೂಣಪ್ಪನಿಗೆ!


ಜಾತ್ರೆಯ ದಿನ ಬಂದೇ ಬಿಟ್ಟಿತು. ರೂಢಿಯಂತೆ ಖಜಾನೆಯಿಂದ ದೇವಿಯ ಆಭರಣಗಳು ಬಂದವು ಆದರೆ ಭೈರವೇಶ್ವರನ ಪಾದುಕೆಗಳು ? ರಾಚಪ್ಪನ ಮನೆಯನ್ನು ತಲುಪಿದ ದೇವಸ್ಥಾನದ ಆಡಳಿತ ಮಂಡಳಿಯ ಸಧಸ್ಯರಿಗೆ ದೊಡ್ಡ ನಿರಾಶೆಯೇ ಕಾದಿತ್ತು. ದೇವರ ಪಾದದ ಒಂದು ಪಾದುಕೆ ರಾಚಪ್ಪನ ಮನೆಯಿಂದ ಕಾಣೆಯಾಗಿತ್ತು. ದೇವರ ಒಂದು ಪಾದುಕೆ ಕಾಣೆಯಾದುದ್ದು ಮಿಂಚಿನಂತೆ ಊರಿನಲ್ಲೆಲ್ಲಾ ಹಬ್ಬಿತು. ಊರಿನ ಎಲ್ಲ ಮುಖಂಡರೂ, ಧರ್ಮದರ್ಶಿಗಳು ಮತ್ತು ಊರಿನ ಜನರು ರಾಚಪ್ಪನ ಮೇಲೆ ಮುಗಿ ಬಿದ್ದರು. ರಾಚಪ್ಪ ಆ ದಿನ ಬೆಳಗಿನಿಂದಲೇ ಅವನ ಹೆಂಡತಿಯ ಮೇಲೆ ಹಲ್ಲು ಮಸೆಯುತ್ತಾ ಕೋಪದ್ರಿಕ್ತನಾಗಿದ್ದ. ರಾಚಪ್ಪನಿಗೆ ಅದು ಎರಡನೆಯ ಮದುವೆ. ನಲವತ್ತೈದು ವರುಷದ ರಾಚಪ್ಪನಿಗೆ ದೊರಕಿದ್ದು ಇಪ್ಪತ್ತರ ತರುಣಿ.

ಮೊದಲು ಬಹಳ ಮರ್ಯಾದೆಯಿಂದ ನಡೆದುಕೊಂಡ ಅವಳು ಸಮಯ ಕಳೆದಂತೆ ಅವನನ್ನು ಕಡೆಗಣಿಸಿಲು ಪ್ರಾರಂಭಿಸಿದ್ದಳು. ಕಾರಣ, ಅವಳು ರಾಚಪ್ಪನಿಂದ ಪಡೆಯಲಾರದ ದೈಹಿಕ ಸುಖವೋ ಅಥವಾ ಅವಳ ಶ್ರೀಮಂತಿಕೆಯ ಕನಸೋ ಬಲ್ಲವರಿಲ್ಲ. ಚಿಕ್ಕ ವಯಸ್ಸಿನ ಹುಡುಗಿಯಾದ ರಾಚಪ್ಪನ ಹೆಂಡತಿಗೆ ಮನೆಯಲ್ಲಿ ಆದಾಯವೇ ಇಲ್ಲದ ಗಂಡನಿಂದ ಏನನ್ನೂ ಪಡೆಯಲಾರದೆ ಚಡಪಡಿಸ ಹತ್ತಿದಳು. ಪಕ್ಕದ ಮನೆಯ ಯುವಕ ಗೌರೀಶ ಅವಳಿಗೆ ಆಪ್ತನಾದ. ಹೆಂಡತಿಯು ಪಕ್ಕದ ಮನೆಯ ಯುವಕ , ಗೌರೀಶನೊಡನೆ ಹೊಂದಿದ್ದ ಒಡನಾಟ ರಾಚಪ್ಪನನ್ನು ರೊಚ್ಚಿಗೆಬ್ಬಿಸಿತ್ತು. ದೈಹಿಕವಾಗಿ ಗೌರೀಶನಿಗೆ ಸರಿ ಸಮಾನನಲ್ಲದ ರಾಚಪ್ಪ, ಗೌರೀಶನನ್ನು ದೂರವಿಡಲು ‘ದೇವರು’ ಮೈ ಮೇಲೆ ಬರಿಸಿಕೊಳ್ಳುವುದನ್ನು ರೂಡಿ ಮಾಡಿಕೊಂಡಿದ್ದ ! ಒಮ್ಮೆ ಒಂದು ಅಮಾವಾಸ್ಯೆಯ ದಿನ ಅವನ ಮೈ ಮೇಲೆ ‘ದೇವಿ’ ಬಂದು, ಗೌರೀಶನನ್ನು ಊರೆಲ್ಲಾ ಅಟ್ಟಾಡಿಸಿ ಹೊಡೆದಿತ್ತು. ಊರಿನ ಜನ ಗೌರೀಶ ಏನೋ ತಪ್ಪು ಎಸಗಿದ್ದಾನೆಂದು ಅವನಿಂದ ದಂಡ ವಸೂಲಿ ಮಾಡಿದ್ದರು. ಗೌರೀಶ ಅಂದಿನಿಂದ ರಾಚಪ್ಪನ ಶತ್ರುವಾದ.

ರಾಚಪ್ಪನ ಮೈ ಮೇಲೆ ದೇವರು ಬಂದು ಹೋದ ಮೇಲೆ ಅವನ ಮರ್ಯಾದೆ ಹೆಚ್ಚಿತ್ತು. ಅವನು ಹೋದೆಡೆಯೆಲ್ಲ ಜನರು ಅವನನ್ನು ಗುರುತಿಸಹತ್ತಿದ್ದರು. ಆದರೆ ಅದು, ಅವನ ಕಾಯಕವಾದ ಚಪ್ಪಲಿ ಹೊಲಿಯುವ ಕೆಲಸಕ್ಕೆ ಕುತ್ತು ತಂದಿತ್ತು. ದೇವರು ಮೈ ಮೇಲೆ ಬರುವ ಮುನ್ನ ತಮ್ಮ ಚಪ್ಪಲಿಗಳನ್ನು ಹೊಲಿಸಲು ಬರುತ್ತಿದ್ದ ಜನರು ಅದಾದ ನಂತರ ಅವನ ಬಳಿ ಬರಲು ದಿಗಿಲು ಬೀಳುತ್ತಿದ್ದರು! ಜನರಲ್ಲಿ ಪಾಪ ಪ್ರಙ್ಯೆ ಮೂಡಿ, ‘ದೇವರ’ ಕೈಲಿ ಚಪ್ಪಲಿ ಮುಟ್ಟಿಸುವುದು ‘ಅಪರಾಧ’ ಎಂದೇ ತಿಳಿಯುತ್ತಿದ್ದರು. ರಾಚಪ್ಪನಿಗೆ ಬರುತ್ತಿದ್ದ ಆದಾಯ ಕುಸಿದಿತ್ತು. ರಾಚಪ್ಪ ತನಗಾದ ಅನ್ಯಾಯವನ್ನು ದೂರ ಮಾಡಲು ತಾನು ‘ದೇವರು’ ಕಟ್ಟುವ ಆಟ ಆಡಿದರೆ, ಈ ಜನರು ತನ್ನ ಹೊಟ್ಟೆಯ ಮೇಲೇ ಹೊಡೆದರೆಂದು ಅವನು ಬೇರೊಂದು ಯೋಜನೆಯನ್ನು ಮನದಲ್ಲಿ ಲೆಕ್ಕ ಹಾಕುತ್ತಿದ್ದ. ಅದೇನೇ ಕಷ್ಟ ಬಂದರೂ ದೇವರಿಗೆ ಪಾದುಕೆ ಹೊಲಿಯುವ ಕಾಯಕವನ್ನು ಚಾಚು ತಪ್ಪದೆ ಮುಂದುವರೆಸಿದ್ದ. ಒಟ್ಟಿನಲ್ಲಿ ಕಾರಣ ಏನೇ ಇದ್ದರೂ ಅವನ ಹೆಂಡತಿ ಮಾತ್ರ ಅವನಿಂದ ದೂರವಾದಳು. ಜಾತ್ರೆಯ ಹಿಂದಿನ ದಿನ ಅವಳು ಗೌರೀಶನೊಡನೆ ದೌಡಾಯಿಸಿಬಿಟ್ಟಳು. ರಾಚಪ್ಪ ಒಂಟಿಯಾದ. ಅವನ ಹೆಂಡತಿ ಓಡಿ ಹೋಗುವಾಗ ರಾಚಪ್ಪ ಸಿದ್ದ ಪಡಿಸುತ್ತಿದ್ದ ದೇವರ ಒಂದು ಪಾದುಕೆಯನ್ನು ಕದ್ದೊಯ್ದಿದ್ದಳು. ಅವಳು ರಾಚಪ್ಪನ ಮೇಲೆ ಹೇಗಾದರೂ ದ್ವೇಷ ತೀರಿಸಿಕೊಳ್ಳಬೇಕೆಂಬ ಯೋಜನೆ ಹಾಕಿ ಹೀಗೆ ಮಾಡಿದ್ದಳು. ಅದೂ ಅಲ್ಲದೆ ಪಾದುಕೆಯ ಅಂಚಿನಲ್ಲಿ ಬಳಸಿದ್ದ ಚಿನ್ನದ ಲೇಪನದ ಪಟ್ಟಿಗಳು ಅವಳನ್ನು ಹುಚ್ಚಿಯಾಗಿಸಿತ್ತು.

ರಾಚಪ್ಪ ಅವಳು ಓಡಿ ಹೋದ ವಿಷಯ ಯಾರ ಬಳಿಯೂ ನುಡಿಯಲಿಲ್ಲ, ಸಿಕ್ಕ ಸಿಕ್ಕವರ ಮೇಲೆ ಹರಿಹಾಯ್ದು ಗಲಾಟೆಯನ್ನೂ ಮಾಡಿದ್ದ. ಆದರೆ ಒಂದು ಪಾದುಕೆ ಕಳೆದು ಹೋದ ಬಗ್ಗೆ ಯಾರಲ್ಲಿಯೂ ಬಾಯಿ ಬಿಡಲಿಲ್ಲ. ಪ್ರತಿ ವರುಷದಂತೆ ಈ ಬಾರಿಯೂ ತಿಬ್ಬಾ ದೇವಿಯ ಜಾತ್ರೆ ಊರಿನ ಎಲ್ಲ ಪ್ರಮುಖರ ಸಾನ್ನಿಧ್ಯದಲ್ಲಿ ಅದ್ದೂರಿಯಾಗಿಯೇ ನಡೆಯಿತು. ಜಾತ್ರೆಯಲ್ಲಿ ಎಲ್ಲರೂ ಭಾಗಿಗಳಾದರು . ಆದರೆ ಭೈರವೇಶ್ವರನ ಪಾದುಕೆಗಳು ಮಾತ್ರ ಬರಲೇ ಇಲ್ಲ. ಎಲ್ಲರೂ ನಿರಾಶೆಯಿಂದ ಊರಿಗೆ ಏನಾದರೂ ಕೇಡಾಗುವುದೋ ಎಂದು ಚಿಂತಿತರಾದರು. ಊರಿನ ಮುಖಂಡರು ಮತ್ತು ಊರಿನ ಜನ ರಾಚಪ್ಪನಿಗೆಬಹಿಷ್ಕಾರ ಹಾಕಬೇಕೆಂದು ತೀರ್ಮಾನಿಸಿ ಅಂದಿನ ಜಾತ್ರೆಯನ್ನು ಚಾಲೂ ಮಾಡಿದರು. ಎಲ್ಲರೂ ಜಾತ್ರೆಯಲ್ಲಿ ಭಾಗಿಯಾದರು. ದೇವಸ್ಥಾನದ ದರೋಡೆ ಮಾಡುವ ಕಳ್ಳರೂ ಸಹ. ಅವರು ಯಾರ ಕಣ್ಣಿಗೂ ಬೀಳದೆ ತಮಗೆ ಬೇಕಿದ್ದ ಫೋಟೋಗಳನ್ನು ತಮ್ಮ ಮೊಬೈಲಿನಲ್ಲಿ ಕ್ಲಿಕ್ಕಿಸಿಕೊಂಡರು. ಈ ಬಾರಿ ಟೌನಿನಲ್ಲಿ ರೈತರ ಹರತಾಳ ನಡೆಯುತ್ತಿದ್ದರಿಂದ ತಹಶೀಲ್ದಾರರ ಕಚೇರಿಯಲ್ಲಿರುವ ಖಜಾನೆಗೆ ಬೀಗ ಜಡಿದಿದ್ದರು. ಜಾತ್ರೆ ಮುಗಿದ ನಂತರ ದೇವಿಯ ಆಭರಣಗಳನ್ನು ದೇವಸ್ಥಾನದ ತಿಜೋರಿಯಲ್ಲಿ ಧರ್ಮದರ್ಶಿಗಳು ಮತ್ತು ಪ್ರಧಾನ ಅರ್ಚಕರ ಸಮ್ಮುಖದಲ್ಲಿ ಒಂದು ದಿನದ ಮಟ್ಟಿಗೆ ಇರಿಸಲಾಗಿತ್ತು.

ಮೇಲಿನ ಸುದ್ದಿ ಕಳ್ಳರಿಗೆ ಹಾಲುಂಡಂತಾಗಿತ್ತು.


ಜಾತ್ರೆ ಮುಗಿದ ಆ ದಿನ ಊರೆಲ್ಲ ಜಾತ್ರೆಯ ವಿಷಯವನ್ನು ಮಾತನಾಡಿಕೊಳ್ಳುವಾಗ, ತಾವು ದೇವಸ್ಥಾನದ ಒಳಗೆ ತೆಗೆದುಕೊಂಡಿದ್ದ ಫೋಟೋಗಳನ್ನು ನಾನಾ ಭಂಗಿಯಲ್ಲಿ ತಿರುಗಿಸಿ ನೋಡುತ್ತಿದ್ದರು ಆ ಕಳ್ಳರು! ಜಾತ್ರೆಯ ಆ ರಾತ್ರಿಯೇ ತಮ್ಮ ಕಾರ್ಯಾಚರಣೆಯನ್ನು ಮಾಡಲು ತೀರ್ಮಾನಿಸಿದ್ದರು ಅವರು. ಅದಕ್ಕೆ ಕಾರಣವೂ ಇತ್ತು. ಪ್ರತಿ ಬಾರಿ ಜಾತ್ರೆಯ ದಿನವೇ ಚಾಚೂ ತಪ್ಪದೆ ದೇವಿಯ ಆಭರಣಗಳನ್ನು ತಹಶೀಲ್ಧಾರ್ ಅವರ ಕಚೇರಿಯ ಖಜಾನೆಯಲ್ಲಿ ಇರಿಸುವ ಬದಲು ದೇವಸ್ಥಾನದ ಸುಪರ್ಧಿಯಲ್ಲಿ ಅವುಗಳನ್ನು ಇರಿಸಿದ್ದ ಸಿಹಿ ಸುದ್ದಿಯನ್ನು ಕಳ್ಳರು ಕಲೆ ಹಾಕಿದ್ದರು. ಮತ್ತೊಂದು ಮುಖ್ಯ ಕಾರಣವೇನೆಂದರೆ, ಜಾತ್ರೆಯ ಆಯಾಸದಿಂದ ದೇವಸ್ಥಾನದ ಕಾವುಲುಗಾರರು ತಮ್ಮ ಕರ್ತವ್ಯದಲ್ಲಿ ಎಚ್ಚರ ತಪ್ಪುವರೆಂದು ಖಾತ್ರಿಯಾಗಿ ಆ ಕಳ್ಳರು ಊಹಿಸಿದ್ದರು.

ಜಾತ್ರೆಯ ರಾತ್ರಿ, ಊರು ತನ್ನ ಮಾಮೂಲು ವ್ಯವಹಾರವನ್ನು ಮುಗಿಸಿ ರಾತ್ರಿ ಹನ್ನೊಂದಕ್ಕೆ ಮಲಗಿತ್ತು. ಊರಿನ ಜಾತ್ರೆಯ ಬೆಳಗಿನ ದಿನದಂದು ಮುಚ್ಚಿದ್ದ ವೈನ್ ಶಾಪ್ ರಾತ್ರಿ ಇನ್ನೂ ದೀಪ ಆರಿಸಿರಲಿಲ್ಲ. ಅಲ್ಲಿಯ ಕೊನೆಯ ಹಂತದ ವಹಿವಾಟು ಭರದಿಂದ ಸಾಗುತ್ತಿತ್ತು. ಅಂದು ಬೆಳಗಿನಿಂದ ದೇವರ ಪಾದುಕೆ ಕಾಣೆಯಾದ ವಿಷಯದ ಜೊತೆ ಹೆಂಡತಿ ಹೀಗೆ ತನ್ನ ಮರ್ಯಾದೆ ತೆಗೆಯುವ ಕೆಲಸ ಮಾಡಿದಳೆಂದು ರಾಚಪ್ಪ ಖಿನ್ನತೆಗೆ ಒಳಗಾಗಿದ್ದ. ತಲೆ ತಲಾಂತರದಿಂದ ನಡೆದು ಬಂದಿದ್ದ ಪದ್ದತಿಯನ್ನು ಹಾಳಾದವಳು ತಪ್ಪಿಸಿದಳಲ್ಲ ಎಂದು ಅವನ ಕೋಪ ನೆತ್ತಿಗೇರಿತ್ತು. ಅವಳು ಗೌರೀಶನೊಡನೆ ಹಾಳಾಗಿ ಹೋಗಿದ್ದಕ್ಕೆ ಅವನು ಚಿಂತೆ ಪಡುತ್ತಿರಲಿಲ್ಲ. ದೇವರ ಕೆಲಸವನ್ನು ತಪ್ಪಿಸಬಿಟ್ಟಳಲ್ಲ ಎಂದು ಭಾವುಕನಾಗಿ ಕೋಪಗೊಂಡಿದ್ದ. ಈಗ ಮೂರು ತಿಂಗಳಿನಿಂದ ನೇಮವಾಗಿ ನಡೆದು, ಇನ್ನೇನು ಪಾದುಕೆಯ ಕೆಲಸ ಮುಗಿದು ಜಾತ್ರೆ ನಡೆಯುವಾಗ ಹೀಗೊಂದು ಘಟನೆಗೆ ತಾನು ನೆಪವಾದೆನೆ ಎಂದು ತೀರಾ ಖಿನ್ನನಾದ. ಇಷ್ಟು ದಿನ ಹೆಂಡ ಮುಟ್ಟದ ಅವನ ಕೈ, ಮನ ಬಂದಂತೆ ಬಾಟಲಿಗಳ ಮೇಲೆ ಆಡಿತ್ತು. ರಾತ್ರಿ ಹನ್ನೊಂದು ಗಂಟೆ ಹೊಡೆದಿದ್ದರಿಂದ ವೈನ್ ಶಾಪು ಬಾಗಿಲು ಬಂದು ಮಾಡಿದರು. ರಾಚಪ್ಪ ತೂರಾಡುತ್ತಾ ತನ್ನ ಜೋಪಡಿಯ ಕಡೆಗೆ ಹೊರಟಿದ್ದ.

ಮಾಮೂಲು ದಿನಗಳಲ್ಲಿ ರಾಚಪ್ಪನ ಜೋಪಡಿಗೆ ಹೋಗಲು ಹಲವಾರು ದಾರಿ ಇದ್ದರೂ ಅವನು ತನ್ನ ದಿನ ನಿತ್ಯದ ಎಣ್ಣೆ ಕಾರ್ಯಕ್ರಮ ಮುಗಿಸಿ ದೇವಸ್ಥಾನದ ಮುಂದೆ ಬಂದು, ಅಂದಿನ ದುಡಿಮೆಯ ಉಳಿದ ಕಾಸನ್ನು ದೇವಸ್ಥಾನದ ಮುಚ್ಚಿದ್ದ ಬಾಗಿಲಿನ ಮುಂದೆ ಎಸೆದು, ಅಂದಿನ ತಪ್ಪನು ಮನ್ನಿಸು ಎಂದು ಕಾಲಿನಿಂದ ದೂರಕ್ಕೆ ರಾಚಿದ್ದ ಚಪ್ಪಲಿಯನ್ನು ಹುಡುಕಿ ಮೆಟ್ಟಿ ತನ್ನ ಜೋಪಡಿಯತ್ತ ಹೆಜ್ಜೆ ಹಾಕುತ್ತಾನೆ. ಅವನು ನಿರ್ಲಿಪ್ತನಾಗಿಯೇ ಬದುಕಲು ಕಲಿತಿದ್ದ. ಅವನು ವೈನ್ ಶಾಪನ್ನು ಹನ್ನೊಂದಕ್ಕೆ ಬಿಟ್ಟರೂ ಮನ ಬಂದಂತೆ ತೂರಾಡುತ್ತ ದೇವಸ್ಥಾನದ ಬಳಿ ಬರುವಾಗ ರಾತ್ರಿ ಎರಡು ದಾಟಿರುತ್ತದೆ. ಎಲ್ಲ ಜನರೂ ನಿದ್ರೆಗೆ ಜಾರಿರುವ ಸಮಯ. ರಾತ್ರಿಯ ನೀರವತೆಯಲ್ಲಿ ರಾಚಪ್ಪನ ದನಿ ನಾಯಿಗಳ ಬೊಗಳುವಿಕೆಯಲ್ಲಿ ಲೀನವಾಗಿ , ರಾಚಪ್ಪನ ಅವಾಂತರ ಯಾರ ಗಮನಕ್ಕೂ ಬರುವುದೇ ಇಲ್ಲ. ಅವನು ರಾತ್ರಿಯಲ್ಲಿ ತಿರುಗುವ ನಿಶಾಚರ ಪ್ರಾಣಿಯ ಹಾಗೆ ತನ್ನ ಜೋಪಡಿಯತ್ತ ಭಾರದ ಕಾಲುಗಳನ್ನು ಹಾಕುತ್ತ ಹೋಗುತ್ತಾನೆ. ಅದು ಅವನ ನಿತ್ಯದ ದಿನಚರಿ.

ದೇವರ ಪಾದುಕೆಯ ಬಗ್ಗೆ ಆಲೋಚಿಸುತ್ತಾ ಅಂದು ದೇವಸ್ಥಾನದ ಬಳಿ ಬರುವ ವೇಳೆಗೆ ಅವನ ಮನಸ್ಸು ಬಹಳ ಖರಾಬ್ ಆಗಿತ್ತು. ದೇವಸ್ಥಾನದ ಮುಂದೆ ಲಾರಿಯೊಂದು ಪಂಚರ್ ಆಗಿ ಕೆಟ್ಟು ನಿಂತಿತ್ತು. ಲಾರಿಯ ಕ್ಲಿನರ್ ಹುಡುಗ ಟೈರಿನ ಸ್ಟೆಪಿಣಿಯನ್ನು ಏರಿಸಲು ಜಾಕ್ ಗೆ ಸುತ್ತಿಗೆಯಿಂದ ಹೊಡೆಯುತ್ತಿದ್ದ. ರಾಚಪ್ಪ ಕುಡಿದು ನಶೆಯಲ್ಲಿದ್ದರೂ ಅವನಿಗೆ ಅಲ್ಲಿ ಏನೋ ಅಸಂಬದ್ದವಾದದ್ದು ನಡೆಯುತ್ತಿದೆ ಎಂದೆನಿಸಿತ್ತು. ಆ ಕ್ಲಿನರ್ ಹುಡುಗ ಸುತ್ತಿಗೆಯಿಂದ ಜಾಕ್ ಗೆ ಬಾರಿಸುತ್ತಿದ್ದ ಹೊಡೆತ ದೇವಸ್ಥಾನದ ಒಳಗೆ ಹೊಕ್ಕು, ಹೊರಗೆ ಬಂದಂತೆ ಕೇಳಿಸುತ್ತಿತ್ತು. ‘ಇದೇಕೆ ಹೀಗೆ’ ಎಂದು ಅವನು ಲೆಕ್ಕಾಚಾರ ಹಾಕುವಷ್ಟರಲ್ಲಿ, ‘ಇದೇನು ಮನೆ ಇಷ್ಟು ಜಲ್ದಿ ದೊರಕಿತೆಂದು’ ತೆರೆದಿದ್ದ ದೇವಸ್ಥಾನದ ಕಿಂಡಿಯ ಬಾಗಿಲಿನಲ್ಲಿ ತೂರಿ ಅಲ್ಲಿಯೇ ದೊಪ್ಪನೆ ಬಿದ್ದು ನಿದ್ರಾ ದೇವಿಗೆ ಶರಣಾದ.


ಲಾರಿಯ ಜಾಕ್ ಗೆ ಬಾರಿಸುತ್ತಿದ್ದ ಸದ್ದು ಮತ್ತು ದೇವಸ್ಥಾನದ ಒಳಗಿನಿಂದ ಹೊಮ್ಮುತ್ತಿದ್ದ ಶಬ್ದ ಸಂಗೀತದ ತಾಳದಂತೆ ರಾಚಪ್ಪನಿಗೆ ನಿದ್ರೆಯಲ್ಲಿ ಕೇಳಿಸುತ್ತಲೇ ಇತ್ತು. ಅದು ತಾಳದಂತೆ ಅವನಿಗೆ ಕೇಳುತ್ತಿದ್ದಂತೆಯೇ ಅವನೊಂದು ಕನಸು ಕಂಡ. ಮಧ್ಯ ರಾತ್ರಿಯ ಆ ಕನಸಿನಲ್ಲಿ ರಾಚಪ್ಪ ಗೌರೀಶನನ್ನು ಕಂಡ. ಅವನು ತನ್ನ ಹೆಂಡತಿಯೊಡನೆ ಲಲ್ಲೆಗರೆಯುತ್ತಿದ್ದನ್ನೂ ನೋಡಿದ . ಅವನು ಎಚ್ಚರಗೊಂಡ . ಅವನು ಮಲಗಿದ್ದ ಹಾಗೇ ನಡುಗತೊಡಗಿದ, ಮುಲು ಗುಟ್ಟ ತೊಡಗಿದ. ಕೈಗಳನ್ನು ಮೇಲೆತ್ತಿ, ಕಾಲುಗಳನ್ನು ನೆಲಕ್ಕೆ ಬಡಿದು ಎದ್ದು ಕೂತ. ಮತ್ತೆ ದೊಪ್ಪನೆ ಮಲಗಿದ. ಮಲಗಿದೊಡನೆ ಮೈಯಲ್ಲಿ ಎಂತದೋ ಒಂದು ಶಕ್ತಿ ಹೊಕ್ಕಂತೆ ಆಗಿತ್ತು ಅವನಿಗೆ. ಅವನು ಮಲಗಿದ್ದಲ್ಲಿಂದಲೇ ಆಕಳಿಸಿದ. ಅವನ ಆಕಳಿಕೆಯ ಸದ್ದು ಗುಡುಗನ್ನು ಮೀರಿಸುವಂತೆ ಇತ್ತು. ಅವನು ಆಕಳಿಸಿದ ಆ ಸದ್ದು ಮುಂಗಾರಿನ ಸಿಡಿಲಿನಂತೆ ಹುಂಡಿಯನ್ನು ಆಗೆಯುತ್ತಿದ್ದ ಕಳ್ಳರಿಗೆ ಕೇಳಿತು. ಮಳೆಗಾಲವಿಲ್ಲದಿದ್ದರೂ ಸಿಡಿಲು ಹೇಗೆ ಎರಗಿ ಬಂತು ಎಂದು ಕಳ್ಳರು ಆಗಸದತ್ತ ಮೊಗ ಮಾಡಿ ನಿಂತರು. ಆಗಸದ ತುಂಬಾ ಮಿನುಗುವ ನಕ್ಷತ್ರಗಳು ಹಾಲಿನ ಬಿಳುಪು ದಾರಿ ತೋರುತ್ತಿವೆ. ಮೋಡಗಳೇ ಇಲ್ಲ. ಇನ್ನು ಗುಡುಗು ಮತ್ತು ಸಿಡಿಲು ಹೊಡೆಯಲು ಹೇಗೆ ಸಾಧ್ಯ? ಅವರಿಗೆ ಅರ್ಥವಾಗಲೇ ಇಲ್ಲ. ತಮ್ಮ ಕೆಲಸ ಮುಂದುವರೆಸಿದರು. ಮಳೆಯಾದರೇನು, ಬೆಳೆಯಾದರೇನು? ತಮ್ಮ ಕೆಲಸ ತಮಗೆ ಎಂದು, ಕಳ್ಳರು ಹುಂಡಿ ಆಗೆಯುವುದನ್ನು ಮುಂದುವರೆಸಿದರು. ದೇವಸ್ಥಾನದ ಹೊರಗೆ ಲಾರಿಯ ಜಾಕ್ ಗೆ ಬಾರಿಸುತ್ತಿದ್ದ ಸದ್ದು ಅದರೊಡನೆ ಹೊಂದಿಕೊಂಡಿತ್ತು.

ಮಿಂಚೊಂದು ಕೋರೈಸಿದಂತೆ ಕಾಣಲು ಹುಂಡಿ ಅಗೆಯುತ್ತಿದ್ದ ಕಳ್ಳರು ಒಮ್ಮೆಲೇ ಅತ್ತ ತಿರುಗಿದರು. ಕಣ್ಣು ಕೋರೈಸುವ ಬೆಳಕು ದೇವರ ಗರ್ಭ ಗುಡಿಯಿಂದ ಇತ್ತಲೇ ಬರುತ್ತಿತ್ತು. ಲಾರಿಯ ಜಾಕ್ ಗೆ ಹೊಡೆಯುತ್ತಿದ್ದ ಸದ್ದು ನಿಂತಿತ್ತು. ಚಿನ್ನದ ಕಿರೀಟ ಧರಿಸಿ, ಕಾಸಿನ ಸರ, ಮುತ್ತಿನ ಬೆಂಡೋಲೆ, ಅಡ್ಡ್ಯಾನ , ಡಾಬು, ಭುಜ ಕೀರ್ತಿ ಧರಿಸಿ ಕೈಯ್ಯಲ್ಲಿ ಹೊಳೆಯುತ್ತಿರುವ ಚಿನ್ನದ ತ್ರಿಶೂಲ ಹಿಡಿದು, ಕೆಂಪು ಸೀರೆ ಉಟ್ಟು, ಹಸಿರು ಜರಿತಾರಿ ರವಿಕೆ ತೊಟ್ಟು, ಹಣೆಗೆ ಊರಗಲ ಕುಂಕುಮವಿಟ್ಟು ಸಾಕ್ಷಾತ್ ದೇವಿಯೇ ಎದ್ದು ಬಂದಂತೆ ಬರುತ್ತಿರುವ ‘ದೇವಿ’ ಯಾರು? ಎಂಬುದು ಹುಂಡಿ ಅಗೆಯುತ್ತಿದ್ದ ಕಳ್ಳರಿಗೆ ಭಯ ಮೂಡಿಸಿತು. ರಾಚಪ್ಪ ದೇವಿಯಂತೆ ನರ್ತಿಸುತ್ತಾ, ಕುಣಿಯುತ್ತಾ, ಒಮ್ಮೊಮ್ಮೆ ಬಗ್ಗುತ್ತಾ ಗಹಗಹಿಸಿ ನಗುತ್ತಾ, ಕೆನ್ನಾಲಿಗೆಯನ್ನು ಚಾಚುತ್ತಾ ತ್ರಿಶೂಲವನ್ನು ಝಳಪಿಸುತ್ತಾ ಕಳ್ಳರ ಗುಂಪಿನ ಕಡೆಗೆ ನುಗ್ಗ ಹತ್ತಿದ. ಗೌರೀಶನನ್ನು ಸೇರಿ ನಾಲ್ಕು ಜನರಿದ್ದ ಕಳ್ಳರ ಗುಂಪು ತಮ್ಮ ಆಯುಧಗಳನ್ನು ನಡುಗುವ ಕೈಗಳಿಂದಲೇ ಗಟ್ಟಿಯಾಗಿ ಹಿಡಿಯ ಹತ್ತಿದರು. ದೇವಿಯ ಅವತಾರ ಕಂಡು ಅವರು ತಪರಗುಟ್ಟುತ್ತಾ, ಇರುವ ಧೈರ್ಯವನ್ನು ಒಗ್ಗೂಡಿಸಿಕೊಂಡು ನಿತ್ರಾಣರಾಗಿ ದೇವಿ ಯಾವ ಕಡೆಗೆ ವಾಲುತ್ತದೋ ಅವರೂ ಅತ್ತಲೇ ವಾಲುತ್ತಾ, ಅದು ಬಗ್ಗಿದರೆ ತಾವೂ ಬಗ್ಗುತ್ತಾ, ಅದು ಗೋಣು ಆಡಿಸಿದರೆ ತಾವೂ ಆಡುತ್ತಾ ನಿಂತಿದ್ದರು. ವಶೀಕರಣಕ್ಕೆ ಒಳಗಾದವರಂತೆ ಎಲ್ಲ ನಾಲ್ಕು ಜನರೂ ಆಡತೊಡಗಿದರು.

ಅವರು ಕಳ್ಳರಾದರೂ, ಬಂಡ ಧೈರ್ಯ ತೋರುತ್ತಿದ್ದರೂ ದೇವಿಯ ಮುಂದೆ ಅದು ನಡೆಯುವುದಿಲ್ಲವೆಂದು ಅವರಿಗೆ ಚೆನ್ನಾಗಿಯೇ ತಿಳಿದಿತ್ತು. ದೇವಿ ತಮ್ಮತ್ತ ನಡೆದು ಬರುತ್ತಿದ್ದಂತೆ ಅವರು ದೈಹಿಕವಾಗಿ ಗಟ್ಟಿಮುಟ್ಟಾಗಿದ್ದರೂ ಮಾನಸಿಕವಾಗಿ ಮುದುಡಿ ಹೋದರು. ಕಳ್ಳರ ಗುಂಪಿನಲ್ಲಿ ರಾಚಪ್ಪನ ಕಣ್ಣಿಗೆ ಗೌರೀಶ ಬಿದ್ದ. ಕಳ್ಳರ ನಡುವೆ ಹುಂಡಿ ಅಗೆಯುತ್ತಿದ್ದವರಲ್ಲಿ ಅವನೂ ಒಬ್ಬನಾಗಿದ್ದ. ರಾಚಪ್ಪನಿಗೆ ಅಗಾಧ ಶಕ್ತಿ ಮೈಮೇಲೆ ಬಂದೇ ಬಿಟ್ಟಿತು. ರಾಚಪ್ಪನ ಮೇಲೆ ದೇವಿ ಬಂದಿತ್ತು! ರಾಚಪ್ಪ ಕಳ್ಳರ ಗುಂಪಿನ ಕಡೆಗೆ ಹೆಜ್ಜೆ ಹಾಕತೊಡಗಿದ. ದೇವಿ ಹತ್ತಿರ ಬಂದೇ ಬಿಟ್ಟಿತು. ಕಳ್ಳರ ಕೈಲಿದ್ದ ಆಯುಧಗಳು ತಮ್ಮಂತೆ ತಾವೇ ತೊಟ್ಟು ಕಳಚಿ ಬೀಳುವ ಕಳಿತ ಮಾವಿನ ಹಣ್ಣುಗಳಂತೆ ನೆಲಕ್ಕೆ ಬಿದ್ದವು. ಆಯುಧಗಳು ಬಿದ್ದ ಸದ್ದು ದೇವಿಯ ನರ್ತನದ ಗೆಜ್ಜೆಯ ಸಪ್ಪಳದಲ್ಲಿ ಲೀನವಾಗಿತ್ತು. ಕಳ್ಳರು ಅಗೆಯುತ್ತಿದ್ದ ಹುಂಡಿಯನ್ನು ಬಿಟ್ಟು ಓಡ ಹತ್ತಿದರು. ದೇವಿ ಅವರನ್ನು ಅಟ್ಟಿಸಿ ಓಡಿತ್ತು. ಇದ್ದ ನಾಲ್ಕು ಕಳ್ಳರಲ್ಲಿ ದೇವಿ ಗೌರೀಶನನ್ನು ಹಣ್ಣುಗಾಯಿ ನೀರುಗಾಯಿ ಮಾಡಿ ತನ್ನ ಕಾಲುಗಳಿಂದ ಒದೆಯುತ್ತಿತ್ತು. ಇನ್ನುಳಿದ ಕಳ್ಳರಿಗೂ ಮೈ ಮುರಿಯುವಂತೇ ಹೊಡೆತಗಳು ಬಿದ್ದವು. ಮೂವರು ಕಳ್ಳರು ಅಲ್ಲಿಂದ ಪಲಾಯನ ಗೈದರು. ಗೌರೀಶನಿಗೆ ಮೇಲೇಳಲು ಸಾಧ್ಯವಾಗದಷ್ಟು ಒದೆಗಳನ್ನು ರಾಚಪ್ಪನ ಮೈ ಮೇಲೆ ಬಂದ ‘ ದೇವಿ ‘ ಕೊಟ್ಟಿದ್ದಳು.

ಬೆಳಕು ಹರಿದಿತ್ತು. ಕತ್ತಲೆ ಮಾಯವಾಗಿತ್ತು. ರಾಚಪ್ಪ ದೇವಿಯ ಉಡುಗೆ ತೊಡಿಗೆಯಲ್ಲಿ ಜ್ಯಾನ ತಪ್ಪಿ ದೇವರ ಗರ್ಭ ಗುಡಿಯ ಬಳಿ ಬಿದ್ದಿದ್ದ. ಗೌರೀಶ ದೇವಸ್ಥಾನದ ಮುಂಬಾಗಿಲಿನ ಕಿಂಡಿ ದ್ವಾರದ ಬಳಿ ನರಳುತ್ತಾ ಬಿದ್ದಿದ್ದ. ದೇವಸ್ಥಾನದ ಬಾಗಿಲು ತೆರೆಯಲು ಬಂದ ಅರ್ಚಕರು ಕಿಂಡಿ ದ್ವಾರದ ಬಳಿ ರಕ್ತಸಿಕ್ತನಾಗಿ ಬಿದ್ದಿದ್ದ ಗೌರೀಶನನ್ನು ಕಂಡು ಅರುಚುತ್ತಾ ಸಹಾಯಕ್ಕಾಗಿ ಜನರನ್ನು ಕರೆಯತೊಡಗಿದರು. ಜನರೆಲ್ಲರೂ ಸೇರಿದರು. ಅರ್ಧ ಮೀಟಿ ಒಡೆದಿದ್ದ ಹುಂಡಿಯನ್ನು ಕಂಡು ಎಲ್ಲರೂ ನಿಬ್ಬೆರಗಾದರು. ರಾಚಪ್ಪನನ್ನುಎಲ್ಲರೂ ಮೇಲೆತ್ತಿ ಕೂರಿಸಿದರು. ರಾಚಪ್ಪ ಒಮ್ಮೆ ಕಣ್ಣು ಬಿಟ್ಟು ಮತ್ತೆ ಕಣ್ಣು ಮುಚ್ಚಿ ಆಕಳಿಸಿದ. ಅವನ ಆಕಳಿಕೆ ಮಾಮೂಲಾಗಿತ್ತು. ‘ದೇವಿ’ ಅವನ ಮೈ ಬಿಟ್ಟು ಮಾಯವಾಗಿತ್ತು! ಪೊಲೀಸರು ಬಂದರು. ದೇವಸ್ಥಾನದ ಒಳಗೆ ನೆರೆದಿದ್ದ ಜನರನ್ನು ಹೊರಗೆ ಅಟ್ಟಿದರು. ದೇವಸ್ಥಾನದ ಒಳಗೆ ಪೊಲೀಸ್ ಮಹಜರ್ ನಡೆಯುತ್ತಿದ್ದರಿಂದ ಯಾರನ್ನು ಒಳಗೆ ಬಿಡಲಿಲ್ಲ ಪೋಲಿಸಿನವರು . ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಮತ್ತು ಅರ್ಚಕರು ಮಾತ್ರ ದೇವಸ್ಥಾನದ ಒಳಗೆ ಉಳಿದರು. ಉಳಿದಂತೆ ಎಲ್ಲ ಜನರೂ ಹೊರಗೇ ಉಳಿದರು.

ಜನರೆಲ್ಲರೂ ಸೇರಿ ರಾಚಪ್ಪನಿಗೆ ಮಂಗಳಾರತಿ ಮಾಡಿ ಹಣ್ಣು ಕಾಯಿ ಒಡೆಯ ಹತ್ತಿದರು. ಎಲ್ಲರೂ ಆ ರಾತ್ರಿ ನಡೆದ ಹುಂಡಿಯ ಪವಾಡವನ್ನು ಕಣ್ಣು ತುಂಬಿಕೊಳ್ಳಲು ಜಾತ್ರೆಗೆ ನೆರೆದಂತೆ ದೇವಸ್ಥಾನದ ಮುಂದೆ ಬಂದು ನೆರೆದರು. ಇಡೀ ಊರೇ ರಾಚಪ್ಪನನ್ನು ಹೊಗಳತೊಡಗಿತ್ತು. ಅವನೊಬ್ಬ ಹೀರೋ ಆಗಿಬಿಟ್ಟ. ನರಳುತ್ತಿದ್ದ ಗೌರೀಶನಿಗೆ ಎಲ್ಲರೂ ಹಿಡಿ ಶಾಪ ಹಾಕುತ್ತಿದ್ದರು. ಅಲ್ಲಿಗೆ ಬಂದ ಪೊಲೀಸ್ ವ್ಯಾನಿನಲ್ಲಿ ಗೌರೀಶನನ್ನು ಅನಾಮತ್ತಾಗಿ ಎತ್ತಿ ಹಾಕಿಕೊಂಡು ಪೊಲೀಸ್ ಜೀಪು ಮಾಯವಾಗಿತ್ತು. ಪೊಲೀಸ್ ಜೀಪು ಅತ್ತ ಹೋದೊಡನೆ ರಾಚಪ್ಪ ಹರುಷದಿಂದ ಕುಣಿದಾಡಿದ.

ಕಾರಣ :
ಗೌರೀಶ ಜೈಲಿಗೆ ಹೋದನೆಂದೋ ಅಥವಾ ಅವನ ಹೆಂಡತಿ ಮತ್ತೆ ಸಿಗುವಳೆಂದೋ ಅಥವಾ ಅವಳು ಹೊತ್ತೊಯ್ದಿದ್ದ ದೇವರ ಪಾದುಕೆ ತಿರುಗಿ ಸಿಗುವುದೆಂದೋ ; ಆ ತಿಬ್ಬಾದೇವಿಗೆ ಮಾತ್ರಾ ತಿಳಿದಿತ್ತು.

-ಶ್ರೀ ಕೊಯ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x