ನಮ್ಮ ಮಹಾ ನಗರದ ಬದುಕು
ಇಂದು
ಒತ್ತಡದ ಜೀವನ
ಯಾಂತ್ರಿಕತೆಯ ಬದುಕು
ಅಪ್ಪ ಅಮ್ಮನ ಇನಿದನಿ
ಸಂಬಂಧ ಪ್ರೀತಿಯ ಛಾಯೆ
ಒಂದ್ಹೊತ್ತಿನ ನೆಮ್ಮದಿ
ಎಲ್ಲವು ಕಾಣದಾಗಿವೆ
ಜನಜಂಗುಳಿಯ ಮುಂದೆ
ಬಿಡುವಿಲ್ಲದ ಕೆಲಸ
ಸಮಯ ಅರಿವಿದ್ದರು
ಬಿಡದ ಧಣಿ , ತಲೆ ಬಿಸಿ
ಅವ ಇನ್ನೆಲ್ಲಿ ಕಾಣಲು ಸಾಧ್ಯ
ಯಾರಾದೋ ಕೀಲಿಕೈಗೆ
ಗಿರಗಿರಗುಟ್ಟುತ್ತ
ಯಂತ್ರವಾಗಿ, ಚಕ್ರದಂತೆ
ತಿರುಗಬೇಕಿದೆ
ಎದ್ದಕೂಡಲೆ ಅವಸರದಲೆ
ಇಸ್ತ್ರೀ ಕಾಣದ ಬಟ್ಟೆ
ಪಾಲಿಶ್ ಇಲ್ಲದ ಬೂಟು ತೊಟ್ಟು
ಸ್ಕೂಟರೋ, ಬಸ್ಸೋ, ಟ್ಯಾಕ್ಸಿಯೋ ಹಿಡಿದು ನಡೆ
ಅಲ್ಲಿ ಬಟ್ಟೆಗುಂಡಿ ಹಾಕಿದಿಯೊ ತಿಳಿಯದು
ಆದರೆ ಬಯೋಮೆಟ್ರಿಕ್ ಗುಂಡಿ ಹಾಕಬೇಕಿದೆ
ಇಲ್ಲವಾದರೆ ಮೇಲವರ ಕಾಟ
ಹೊಟ್ಟೆಗೆ ಅನ್ನ, ನೀರು
ಹೊತ್ತಿಗೆ ನಿದ್ರೆ, ಸೇರದು, ಬಾರದು
ಓಡು ಓಡು ಹಗಲು ಇರುಳೆನ್ನದೆ
ನಿನ್ನಲ್ಲಿ ಶಕ್ತಿಯಿರೋತನಕ
ನೀ ಬಿದ್ದು ಅತ್ತರು
ಯಾರು ಕೇಳರು
ಅವರವರ ಜೀವನ
ಅವರಿಗೆ ಹೇಗೆ ನೋಡಿಯಾರು
ಉಸ್ಸೋ ದಸ್ಸೆಂದು
ಸೋತ ಕೈಕಾಲ ಜೊತೆ
ಸುಣ್ಣವಾದ ಕಣ್ಣಲಿ ಮಂಪರು
ಏನು ನೋಡದು, ಕೇಳದು
ಉಟ್ಟ ಉಡುಗೆಯಲ್ಲೆ ಕೊಣೆ ಸೇರು
ಸಂಬಳವೆನು ಬೇರೆಯವರಷ್ಟು
ಇಲ್ಲದಿದ್ದರೂ ಸ್ವಲ್ಪಮಟ್ಟಿಗೆ
ಜೇಬು ಸೇರಿ, ಮಾರನೆ ದಿನ
ಅವರಿವರ ಕೈಚಾಚೋ ದುಸ್ಥಿತಿ ತಪ್ಪದು
ಯಂತ್ರವೇನೊ ಹೊಸದು
ಆದರೆ ಎಷ್ಟೊತ್ತು ಅಂತ ಓಡುತ್ತದೆ
ಅದಕ್ಕೂ ಆಯಾಸ ದಣಿವು
ಬಿಸಿಯ ತಾಪಕ್ಕೆ ಸಿಡಿಯುವುದಿಲ್ಲವೇ ..!?
ಸಿಡಿದ ಮೇಲೆ ಗುಜರಿಯವರಿಗೂ ಬೇಕಿಲ್ಲ
ನಂತರ ಅದರ ಪಾಡೆನು?
-ಆದಿತ್ಯಾ ಮೈಸೂರು
ಸಖೀ,
ನೀ ಸವೆದ ಹಾದಿಯೂ ನನ್ನದರಂತೆಯೇ
ಕಲ್ಲು ಮುಳ್ಳು
ಬಣ್ಣಬಣ್ಣದ ಗುಲ್ಮೊಹರ್ ಹೂಗಳು
ಉದುರಿಬಿದ್ದ ಹಾದಿಯಂತಲ್ಲ ಬದುಕು
ಮುಂದಿರುವುದೂ ಅದೇ.. ಕಲ್ಲು ಮುಳ್ಳು
ಹೆದರಬೇಡ ಸಖೀ, ನನ್ನ ಕೈ ನೀನು ನಿನ್ನ ಕೈ ನಾನು
ಹಿಡಿದು ಜೊತೆಯಾಗಿ ಹೆಜ್ಜೆಯಿಡೋಣ
ಧೋ ಎಂದು ಎಡೆಬಿಡದೆ ಮಳೆ ಸುರಿದರೂ
ಬಿರುಗಾಳಿ ಬೀಸಿ ಬೆದರಿಸಿದರೂ
ಬಿರುಬಿಸಿಲು ಬವಳಿಸಿ ಕೆಡವಿದರೂ
ನಿಂತ ನೆಲವ ಬಿಡದೆ ಗಟ್ಟಿ ನಿಲ್ಲೋಣ
ಹ್ಞೂಂಕರಿಸಿ ಬರುವ ರಕ್ಕಸರಾರೂ ಉಳಿದಿಲ್ಲ
ಹೂ ಮನಸುಗಳು ಹಗುರವಲ್ಲ
ಹೆದೆಯೇರಿಸಿ ನಿಂತ ರಾಮ ಮೆಟ್ಟಿ ನಿಂತ ಭೀಮ
ನಮ್ಮ ಕುಲವೂ ಪರಶುರಾಮನದೇ ಮರೆಯಬೇಡ
ಸಖೀ,
ಕಲ್ಲು-ಮುಳ್ಳು ಬೆಟ್ಟ-ಗುಡ್ಡ ಗುಹೆ-ಗಹ್ವರ
ದಾಟಲಿಕ್ಕೆಂದೇ ಜೊತೆ ಬೇಕು, ಹೂಹಾದಿಗೇಕೆ ಅಲ್ಲವೇ
-ವಿನಯಚಂದ್ರ
“ಪ್ರಖ್ಯಾತ ಕವಿಯೋರ್ವನ ಉದ್ಗಾರಗಳು”
ನಿನ್ನ
ಗೆದ್ದಲು ಹತ್ತಿದ ಕವಿತೆಗಳಿಗೆ
ಮುನ್ನುಡಿ ಬರೆಯಲಾಗದೆಂದು
ಪ್ರಖ್ಯಾತ ಕವಿಯೊಬ್ಬರು
ತಣ್ಣನೆಯ ದನಿಯಲ್ಲಿ
ಉದ್ಗರಿಸುತ್ತಾ..
ಕವಿತೆಯೆಂದರೆ
ಸೂಜಿಯಲ್ಲಿ ಹಾಕಿದ ಕಸೂತಿಯಂತೆ
ಕಲಾತ್ಮಕವಾಗಿರಬೇಕು
ಸುಂದರವಾಗಿರಬೇಕು
ಮನೋಜ್ಞವಾಗಿರಬೇಕು
ನೀನೋ..
ಡಬ್ಬಳದಿಂದ ಹರಕು ಚೀಲಗಳ ಹೊಲಿದಂತೆ
ಸವಕಲು ಪದಗಳಿಂದ
ಕವಿತೆಯ ಅಂದವನ್ನೇ ಹಾಳುಗೆಡವಿರುವೆ..!
ಕನಿಷ್ಠ ನಿನ್ನ ಒಂದೇ ಒಂದು ಕವಿತೆಯಾದರೂ
ಪ್ರಾಸಬದ್ಧವಾಗಿ ಲಯಬದ್ಧವಾಗಿ ಕೂಡಿದೆಯೇ?
ಅಲಂಕಾರಿಕ ಉಪಮೆ ರೂಪಕಗಳಿರದ
ಛಂದೋಬದ್ದ ನಿಯಮಿತ ಸಾಲುಗಳಿರದ
ನಿನ್ನ ಕವಿತೆಗಳು ವಿವರ್ಣವಾಗಿ
ಕವಿತೆಯ ಚೌಕಟ್ಟನ್ನು ಮೀರಿಬಿಟ್ಟಿವೆ..!
ಆಗಾಗಿ ನೀನು ಮೇರುಕವಿಗಳ
ಕವಿತೆಗಳನ್ನೊಮ್ಮೆ ಓದಿ ನೋಡು
ಅಲ್ಲಿ
ಶಿಲ್ಪಿಯೊಬ್ಬನ ಸೂಕ್ಷ್ಮ ಕುಸುರಿ ಕೆತ್ತನೆಗಳಿಂದ
ಕಡೆದು ನಿಲ್ಲಿಸಿದ ಸುಂದರ ಶಿಲ್ಪಗಳಂತೆ
ಕವಿತೆಗಳಿಗೆ ಮೆರುಗು ನೀಡಿದ್ದಾರೆ
ಪದಪುಂಜಗಳೊಂದಿಗೆ ನವಚಿತ್ತಾರ ಮೂಡಿಸಿ
ತಮ್ಮದೇ ಛಾಪು ಹೊತ್ತಿದ್ದಾರೆ
ನೀನೋ
ಬಂಡಾಯದ ಹೆಸರಿನಲ್ಲಿ
ಕವಿತೆಗಳಿಗಿರುವ ಸಭ್ಯತೆಯ ಎಲ್ಲೆಯನ್ನು
ಮೀರಿ ಉದ್ಧಟತನದಿಂದ
“ಕಾಂಡೋಮ್” ಕುರಿತು
ಅಶ್ಲೀಲ ಕವಿತೆಯನ್ನು ಬೇಕಂತಲೇ ಹೆಣೆದಿದ್ದೀಯಾ?
ಇದಕ್ಕೆಲ್ಲಾ ಮೇರು ಕವಿಯಾದ ನಮ್ಮಂಥವರು
ನಿನ್ನ ಈ ಗೆದ್ದಲು ಹಿಡಿದ ಕವಿತೆಗಳಿಗೆಲ್ಲಾ
ಎರಡು ಸಾಲಿನ ಷರಾ ಬರೆಯಬಹುದೇ
ಹೊರತು
ಮುನ್ನುಡಿ ಬೆನ್ನುಡಿಗಳಲ್ಲವೆಂದು
ಸಾರಾಸಗಟಾಗಿ ನಿರಾಕರಿಸುತ್ತಾ
ಪ್ರಖ್ಯಾತ ಕವಿಯೆಂಬ ತಮ್ಮ ಹಣೆಪಟ್ಟಿಯನ್ನು
ಇನ್ನಿಲ್ಲದಂತೆ..
ಜತನವಾಗಿ ಕಾಪಿಟ್ಟುಕೊಂಡರು..!
-ಪ್ರಶಾಂತ್ ಬೆಳತೂರು