ಕಳೆದುಕೊಂಡಾಗಲೇ ಪಡೆದುಕೊಳ್ಳುವುದು !: ಡಾ. ಹೆಚ್ ಎನ್ ಮಂಜುರಾಜ್,

ಸಾಧನೆ ಎಂದರೆ ಗಳಿಸಿಕೊಳ್ಳುವುದಲ್ಲ; ಕಳೆದುಕೊಳ್ಳುವುದು ಎಂದರು ಗುರುಗಳು. ನನಗೆ ಅಚ್ಚರಿಯಾಯಿತು. ಲೌಕಿಕಾರ್ಥದಲ್ಲಿ ಇದನ್ನು ಹೇಳುತ್ತಿಲ್ಲ ಎಂದೂ ಮನದಟ್ಟಾಯಿತು! ಮಗುವೊಂದು ಹುಟ್ಟುತ್ತಲೇ ವಿಶ್ವಮಾನವ. ಬೆಳೆಯುತ್ತ ಅಲ್ಪಮಾನವ ಆಗುತ್ತದೆ; ಮತ್ತೆ ಏನೆಲ್ಲ ಸಂಕೋಲೆಗಳನ್ನು ಕಳಚಿಕೊಂಡು ವಿಶ್ವಮಾನವರಾಗಬೇಕು ಎಂದು ಕುವೆಂಪು ಅವರು ಹೇಳುತ್ತಿದ್ದುದು ಈ ಅರ್ಥದಲ್ಲೇ ಎಂದುಕೊಂಡೆ!! ಆಗವರು ಹೇಳಿದರು. ಸರಿಯಾಗಿ ಗುರುತಿಸಿದೆ. ಹಾಗೆ ನೋಡಿದರೆ ಇರುವುದು ಒಂದೇ ಲೋಕ. ಲೌಕಿಕ, ಅಲೌಕಿಕ, ಪಾರಲೌಕಿಕ ಅಂತೆಲ್ಲ ಇರುವುದಿಲ್ಲ. ಇದು ನಮ್ಮ ಮಾನಸಿಕ ಭ್ರಮೆ. ಹೇಗೆ ನೋಡುವುದೆಲ್ಲ ಮತ್ತು ಕೇಳುವುದೆಲ್ಲ ಸತ್ಯವಲ್ಲವೋ ಹಾಗೆ. ಪ್ರತಿಯೊಬ್ಬರಿಗೂ ಅಂತರ್ದನಿ, ಅಂತರಾವಲೋಕನ, ಅಂತರ್ದೃಷ್ಟಿ ಅಂತೆಲ್ಲ ಇರುತ್ತದೆ. ಸೂಕ್ಷ್ಮವಾಗಿ ಮತ್ತು ಸಂವೇದನಾಶೀಲವಾಗಿ ನಮ್ಮೊಳಗಿಳಿದು ತದೇಕವಾದಾಗ ಇವೆಲ್ಲ ಅನುಭವಕ್ಕೆ ಬರುತ್ತದೆ. ಸಾಧನೆ ಎಂಬುದು ಇದೇ. ನಮ್ಮನ್ನು ನಾವರಿಯುವುದು; ನಮ್ಮೊಳಗಿಳಿದು ಧ್ಯಾನಸ್ಥರಾಗುವುದು ಎಂದರು.

ಹೊರಗಿನ ಸಾಧನೆ, ಯಶಸ್ಸು, ಕೀರ್ತಿ, ಪದವಿ, ಪ್ರತಿಷ್ಠೆ, ಜನಪ್ರಿಯತೆ ಇವೆಲ್ಲವೂ ಒಂದು ಹಂತ ಕಳೆದ ಮೇಲೆ ಸಾಕೆನಿಸುವುದು. ಹೀಗೆ ಅನಿಸುತ್ತಿದೆ ಎಂದರೆ ಅದು ನಮ್ಮೊಳಗಿಳಿಯಲು ಸಕಾಲ ಎಂದರ್ಥ. ಅದಕಾಗಿಯೇ ಲೋಕದಲಿ ಹಲವು ವೈಚಿತ್ರ್ಯಗಳು ಆಗಿಂದಾಗ್ಗ್ಯೆ ಸಂಭವಿಸುತ್ತಿರುತ್ತವೆ. ಹಲವು ಕೋಟಿಗಳ ಒಡೆಯನ ಮಗ ಎಲ್ಲವನೂ ಬಿಟ್ಟು ಸಂನ್ಯಾಸಿಯಾಗುವುದು. ಬಹು ದೊಡ್ಡ ರಾಜಕಾರಣಿಯ ಮಕ್ಕಳು ಯಾರ ಹಂಗೂ ಇಲ್ಲದೆ ಏಕಾಂಗಿಯಾಗಿ ತಮ್ಮ ಖುಷಿಯಂತೆ ಇದ್ದು ಬಿಡುವುದು. ಎರಡು ಮದುವೆಯಾದ ಶ್ರೇಷ್ಠ ವಿದ್ವಾಂಸರೊಬ್ಬರ ಮಗ ಜೀವನಪರ್ಯಂತ ಅವಿವಾಹಿತನಾಗಿದ್ದು, ಅನಾಥರಿಗೆ ದೀನಬಂಧುವಾಗುವುದು. ಅಂದರೆ ಅಂತರಾತ್ಮದ ಕೂಗನ್ನು ಸಕಾಲದಲ್ಲಿ ಆಲಿಸಿದವರು ಇವರು. ಜೀವನದ ನಿಜವಾದ ಸಾರ್ಥಕ್ಯವನ್ನು ಸಾಧನೆಯನ್ನಾಗಿಸಿಕೊಂಡವರು!

ಬಹು ಕಾಲ ತಪಿಸಿದ್ದ, ತಪಸ್ಸಿನಂತೆ ಧ್ಯಾನಿಸಿದ್ದ ನಮ್ಮ ಕೆಲವೊಂದು ಆಸೆ ಆಕಾಂಕ್ಷೆ-ಬಯಕೆ, ಗುರಿ, ಯಶಸ್ಸುಗಳನ್ನು ಗಳಿಸಿದ ಮೇಲೆ ಒಂದು ಹಂತದಲ್ಲಿ ಮನಸು ಪೆಚ್ಚಾಗಿ, ಅದರಲೆಲ್ಲ ನಮ್ಮತನವನು ಹುಡುಕಿ, ನಿರಾಶರಾಗಿ ಏನೋ ಎಡವಟ್ಟಾಯಿತಲ್ಲ ಎಂದೆನಿಸುವುದು. ಎಲ್ಲರಿಗೂ ಅಲ್ಲದಿರಬಹುದು; ಕೆಲವರಿಗಂತೂ ಹೀಗೆ ಅನಿಸಿದ್ದು ಲೋಕದಲಿ ಉಂಟು. ಛೇ, ಇಷ್ಟೆಯೇ ಜೀವನ? ಇದೇನಾ ನಾನು? ಇದಕ್ಕಾಗಿ ನಾನು ಹೋರಾಟ ಮಾಡಿದ್ದಾ? ಎಂದು ಅಲವತ್ತುಕೊಳ್ಳಲು ಶುರುವಾಗುವುದು. ಅದು ಗಳಿಸಿದ ಪದವಿ, ಹುದ್ದೆಗಳೇ ಇರಬಹುದು. ಹೊಂದಿದ ಸಿರಿವಂತಿಕೆಯೇ ಇರಬಹುದು. ಬಯಸಿದ್ದ ಭೋಗಗಳೇ ಇರಬಹುದು. ಕಾಣಲು ಹಂಬಲಿಸಿದ ಊರುಗಳೇ ಇರಬಹುದು. ಒಂದು ಹಂತದಲ್ಲಿ ಹತಾಶೆ ಮತ್ತು ನಿರಾಶೆಗಳು ಮೂಡಿ, ‘ಇದೆಲ್ಲ ಇನ್ನು ಬೇಡ, ಸಾಕು’ ಎಂದೆನಿಸಿಬಿಡಬಹುದು! ಅಪಾರ ಭೋಗ ಭಾಗ್ಯಗಳನ್ನು ಎಗ್ಗಿಲ್ಲದೆ ಅನುಭವಿಸುತಿದ್ದ ಸಾವಿರ ವರುಷಗಳ ಆಯಸ್ಸುಳ್ಳ ಓರ್ವ ಜೈನ ಚಕ್ರವರ್ತಿಗೆ ಒಮ್ಮೆ ಗಡ್ಡದಲಿ ಬಿಳಿಕೂದಲು ಕಾಣಿಸಿಕೊಂಡಾಗ ಅವನಲ್ಲಿ ವೈರಾಗ್ಯ ಮೂಡಲು ಅದೇ ಮೂಲ ಕಾರಣವಾಗಿ ಬಿಟ್ಟಿತು! ನೃತ್ಯ ಮಾಡುತಿದ್ದ ನೀಲಾಂಜನೆಯ ಪ್ರಾಣವು ಅರ್ಧದಲ್ಲೇ ಹೋಗಿದ್ದು ಆದಿನಾಥ ವೃಷಭದೇವನಿಗೆ ಗೊತ್ತಾಗಿ ಬದುಕಿನ ನಶ್ವರತೆ ಮನವರಿಕೆಯಾಯಿತು. ಯಾರಿಗೆ ಯಾವಾಗ ಹೇಗೆ ಜ್ಞಾನೋದಯವಾಗುತ್ತದೆಂಬುದು ಮಾತ್ರ ಲೋಕದ ಬಹು ದೊಡ್ಡ ವಿಸ್ಮಯ! ತನ್ನರಸಿ ಅಮೃತಮತಿಯು ಆನೆಲಾಯದ ತಿರುಬೋಕಿ ಅಷ್ಟಾವಂಕನೆಂಬ ಬದಗನಲ್ಲಿ ಅನುರಕ್ತಳಾದ ದೃಶ್ಯವನ್ನು ಕಂಡ ರಾಜ ಯಶೋಧರನು ಇಬ್ಬರನೂ ಅಲ್ಲಿಯೇ ಸಿಗಿದು ಹಾಕಲು ಹೊರಟನು. ಅವನ ಕೈಗಳು ಆಯಾಚಿತವಾಗಿ ಕತ್ತಿಯತ್ತ ಚಲಿಸಿದವು.

ಆಗಳ್ ಬಾಳ್ ನಿಮಿರ್ದುದು ತೋಳ್
ತೂಗಿದುದು ಮನಂ ಕನಲ್ದು ದಿರ್ವರುಮನೆರ
ಳ್ಬಾಗಂ ಮಾಡಲ್ ಧೃತಿ ಬಂ
ದಾಗಳ್ ಮಾಣೆಂಬ ತೆರದೆ ಪೇಸಿದನರಸಂ

ಒಡನೆಯೆ ಆ ಯಶೋಧರ ನೃಪನ ಕೈಯ ಖಡ್ಗವು ಮೇಲೆದ್ದಿತು ; ತೋಳು ತೂಗಿತು. ಮನಸ್ಸು ಕಿಡಿಕಾರಿತು. ಒಂದೇ ಏಟಿಗೆ ಇಬ್ಬರನ್ನೂ ಎರಡು ಭಾಗ ಮಾಡಿ ಬಿಡುವ ನಿರ್ಧಾರಕೆ ಬರುತಿದ್ದಂತೆ ತಟಕ್ಕನೆ ಸಂಯಮ ತಲೆದೋರಿ, ಚಿಃ ಸಲ್ಲದು! ಎಂದು ಅರಸನ ಮನಸ್ಸು ಹೇಸಿತು.
ಹೀಗೆ ವಿರಾಗ ಮೂಡಲು ಇಂಥದೇ ಸಂ-ಘಟಿಸಬೇಕೆಂದೇನಿಲ್ಲ. ಯಾವುದಾದರೂ ಆದೀತು! ಆದರೆ ನಮ್ಮ ಬುದ್ಧಿ ಮತ್ತು ಭಾವಗಳು ಪಕ್ವಗೊಂಡಿರಬೇಕಷ್ಟೇ.

ಹಿಮಾಲಯಕೆ ಹೋಗಿ ಹತ್ತಾರು ವರುಷಗಳ ಕಾಲ ತಪಸ್ಸನ್ನಾಚರಿಸಿ, ಸಾಧನೆ ಮಾಡಿ, ಹಿಂದಿರುಗಿದವರೂ ಇದ್ದಾರೆ. ಅಲ್ಲಿಗೆ ಹೋಗದೆಯೂ ಅಂಥ ಸಾಧನೆ ಮಾಡಿ, ಹೃದಯೋದಯ ಹೊಂದಿದವರೂ ಇದ್ದಾರೆ. ಮುಖ್ಯವಾಗಿ ನಮಗೆ ಬೇಕಾದದ್ದು ಸ್ಥಳ ಅಲ್ಲ, ಮನಸ್ಥಿತಿ. ಎಲ್ಲೇ ಹೋದರೂ ನಮ್ಮ ಕಪಿಬುದ್ಧಿ ಮತ್ತು ಚಂಚಲಚಿತ್ತಗಳಿಂದ ಬದುಕಿದರೆ ಹಿಮಾಲಯ ತಾನೇ ಏನೂ ಮಾಡದು. ವಿವೇಕಾನಂದರು ಜಗತ್ತು ಸುತ್ತಿದರೆ ಅವರ ಗುರುಗಳಾಗಿದ್ದ ಪರಮಹಂಸರು ಕೂತೆಡೆಯೇ ಜಗತ್ತು ಕಂಡರು. ಕವಿ ಕುವೆಂಪು ಅವರೂ ಹಾಗೆಯೇ. ಕುಟೀಚಕರಾಗಿಯೇ ಮೈಸೂರಿನ ಉದಯರವಿಯ ಮನೆಯಲಿದ್ದು ಜಗತ್ತಿನ ವ್ಯಾಪಾರಗಳನೆಲ್ಲ ಗ್ರಹಿಸುತ್ತಾ, ಸ್ಮೃತಿ ಪಟಲದ ಮೂಲಕವೇ ಹಿಂದಿನ ಅನಂತವನ್ನು ಮನಗಂಡು, ತಮ್ಮ ದಾರ್ಶನಿಕತೆಯನ್ನು ಸೃಜನಾತ್ಮಕವಾಗಿ ನ ಭೂತೋ ನ ಭವಿಷ್ಯತ್ತಾಗಿ ಅಭಿವ್ಯಕ್ತಿಸಿದರು. ಇದರಿಂದಾಗಿ ಸ್ಥಳಕಿಂತ ಮನೋರಂಗಸ್ಥಲ ಬಹಳ ಮುಖ್ಯ ಎಂದಾಗುವುದು. ಬೇಂದ್ರೆಯವರಂತೂ ಯಾವ ಮಹಾಕಾವ್ಯವನು ಬರೆಯುವ ಗೋಜಿಗೇ ಹೋಗದೇ ನನ್ನ ಒಂದೊಂದು ಭಾವಗೀತವೂ ಸಹೃದಯನ ಪಾಲಿನ ಮಹಾಕಾವ್ಯ ಎಂದಂದುಬಿಟ್ಟರು!

‘ಜ್ಞಾನೋದಯದ ನಂತರ ನೀನೇನು ಪಡೆದೆ?’ ಎಂದು ಬುದ್ಧರನ್ನು ಜನರು ಕೇಳಿದಾಗ ಆತನು ಕೊಟ್ಟ ಉತ್ತರ ಬೆಚ್ಚಿ ಬೀಳಿಸುವಂತಿತ್ತು. ಸಾಮಾನ್ಯವಾಗಿ ನಾವು ಏನಾದರೊಂದು ಗಳಿಸಲು ನೋಡುತ್ತಿರುತ್ತೇವೆ. ಲಾಭವಿಲ್ಲದೆ ಮೂರ್ಖನೂ ಕೆಲಸ ಮಾಡಲಾರ ಎಂಬ ಸಂಸ್ಕೃತ ಉಕ್ತಿಯೊಂದಿದೆ. ‘ಪ್ರಯೋಜನ ಮನುದ್ದಿಶ್ಯ ನಮಂದೋಪಿ ಪ್ರವರ್ತತೇ!’ ಏನಾದರೊಂದು ಲಭಿಸದಿದ್ದರೆ ಆ ಕೆಲಸವನ್ನೇಕೆ ಮಾಡಬೇಕೆಂದು ನಾವು ಕೇಳಿಯೇ ಕೇಳುತ್ತೇವೆ! ಯಾವ ಲಾಭವೂ ಇಲ್ಲದೆ ಇಂಥದನ್ನು ಕೈಗೊಂಡರೆ ಹಣ ಮತ್ತು ಸಮಯ ಎರಡೂ ನಷ್ಟ ಎಂದೇ ಲೌಕಿಕರ ಅಭಿಪ್ರಾಯ. ‘ನಾನು ಏನನೂ ಗಳಿಸಲಿಲ್ಲ; ಕಳೆದುಕೊಂಡದ್ದೇ ಹೆಚ್ಚು’ ಎಂದುತ್ತರಿಸಿದರಂತೆ ಬುದ್ಧರು. ‘ನನ್ನ ಅಹಮನ್ನು ಕಳೆದುಕೊಂಡೆ, ಬುದ್ಧಿ-ಮನಸು-ಚಿತ್ತಗಳನ್ನು ಕಳೆದುಕೊಂಡೆ. ಲೌಕಿಕ ಸುಖಭೋಗಗಳ ಆಕರ್ಷಕತೆಯನ್ನು ಕಳೆದುಕೊಂಡೆ’ ಎಂದು ಬುದ್ಧರು ಹೇಳುತಿದ್ದಾಗ ಜನರು ಕಕ್ಕಾಬಿಕ್ಕಿಯಾದರು. ಬಹುಶಃ ಬಹಳಷ್ಟು ಮಂದಿಯು ಅನ್ಯಾಯವಾಗಿ ಈತ ತನ್ನ ಆಯುಷ್ಯದ ಅರ್ಧಭಾಗವನ್ನೇ ಕಳೆದುಕೊಂಡನಲ್ಲ ಎಂದು ಪೇಚಾಡಿರಲೂ ಸಾಧ್ಯ!

‘ಅಧ್ಯಾತ್ಮಸಿದ್ಧಿಯನ್ನು ಪಡೆಯಲಿಲ್ಲವೆ? ತಪಸ್ಸಿನ ನಂತರ ವಿಶೇಷ ಶಕ್ತಿಯನ್ನು ಸಂಪಾದಿಸಲಿಲ್ಲವೆ? ಏನನೂ ಗಳಿಸಲಿಲ್ಲವೆ?’ ಎಂದು ಮರುಪ್ರಶ್ನಿಸಿದಾಗ ಸಂಬುದ್ಧರು ನಕ್ಕು ಹೇಳಿದರಂತೆ:
‘ನೀವು ಅದನ್ನು ಸಾಧನೆ ಎನ್ನುವುದಾದರೆ ನಾನೇನು ಹೊಸದನ್ನು ಪಡೆದುಕೊಂಡಿಲ್ಲ. ಅದು ಮೊದಲಿನಿಂದಲೂ ನನ್ನಲೇ ಇತ್ತು. ನಾನು ಅದರತ್ತ ಗಮನ ಹರಿಸಿರಲಿಲ್ಲ ಅಷ್ಟೇ. ಇದೇನು ಹೊಸ ಆವಿಷ್ಕಾರವಲ್ಲ; ಮರು ಸಂಶೋಧನೆ. ವಿಸ್ಮೃತಿಗೆ ಸಂದದ್ದನ್ನು ನೆನಪಿಸಿಕೊಂಡೆ ಅಷ್ಟೇ. ನನ್ನಲಿ ಮಾತ್ರವೇ ಅಲ್ಲ. ನಿಮ್ಮಲೂ ಅದು ಮೊದಲಿನಿಂದಲೂ ಇದೆ. ನೀವದನ್ನು ಕಂಡುಕೊಳ್ಳಬೇಕು ಅಷ್ಟೇ.’ ಇದು ಬುದ್ಧರ ಅಲ್ಟಿಮೇಟ್ ವಿನೀತತೆ ಮತ್ತು ಇದೇ ಅವರ ವಿಶೇಷತೆ. ಜಗತ್ತಿನಲ್ಲಿ ಎಲ್ಲರೂ ಪಡೆದರೆ, ಇವರು ಕಳೆದುಕೊಂಡರು. ಅಹಂಭಾವವನ್ನು ಕಳೆದುಕೊಂಡರು. ಲೋಕದ ಕ್ಷಣಿಕ ಸುಖಭೋಗಗಳ ಮೇಲಿನ ಆಸೆಯನ್ನು ಕಳೆದುಕೊಂಡರು. ಹುಟ್ಟಿನಿಂದ ಲಗತ್ತಾಗಿದ್ದ ಎಲ್ಲ ಬಗೆಯ ತರತಮಗಳನ್ನು ಸಹ ಕಳೆದುಕೊಂಡು ಶುದ್ಧ ಮನುಷ್ಯರಾದರು. ಅವರಿಗಿದ್ದ ರಾಜಪದವಿ, ಹುದ್ದೆ, ಸೈನ್ಯ, ಅಧಿಕಾರ, ಸಿಂಹಾಸನಗಳನ್ನೂ ಕಳೆದುಕೊಂಡರು! ಗಳಿಸಿದಾಗ ಅಲ್ಲ ; ಕಳೆದುಕೊಂಡಾಗ ನಿಜತೃಪ್ತಿ ಉಂಟಾಗುತ್ತದೆ ಎಂಬುದನ್ನು ಲೋಕದಲಿ ಮೊದಲ ಬಾರಿಗೆ ಗೌತಮ ಬುದ್ಧರು ತೋರಿಸಿಕೊಟ್ಟರು.

ಯಾವುದೋ ಪ್ಯಾಂಟಿನ ಜೇಬಿನಲ್ಲಿ ಸ್ವಲ್ಪ ದುಡ್ಡಿಟ್ಟು ಮರೆತು ಬಿಟ್ಟಿರುತ್ತೇವೆ. ಅಥವಾ ಮನೆಯ ಯಾವುದೋ ಜಾಗದಲಿ ಹಣವನ್ನು ಇಟ್ಟು ಮರೆತು ಬಿಟ್ಟಿರುತ್ತೇವೆ. ಎಷ್ಟೋ ದಿನಗಳಾದ ಮೇಲೆ ಏನನೋ ಹುಡುಕಲು ಹೋಗಿ ದುಡ್ಡು ಕೈಗೆ ಸಿಕ್ಕಾಗ ಪರಮಾನಂದ ಆಗುತ್ತದೆ. ನಮ್ಮದೇ ದುಡ್ಡು, ಮರೆತು ಬಿಟ್ಟಿದ್ದೆವು ಅಷ್ಟೇ! ಇದನ್ನೇ ಬುದ್ಧರು ಹೇಳುತ್ತಿರುವುದು!!

ನಮ್ಮೊಳಗಿರುವ ಅನಗತ್ಯ ಮತ್ತು ಅನಾವಶ್ಯಕ ಭಾವಗಳಾದ ದ್ವೇಷ, ಅಸೂಯೆ, ಮದ ಮೋಹಗಳು ಮೊದಲಾದ ದುರ್ಗುಣಗಳನ್ನು ಕಳೆದುಕೊಂಡರೆ ನಿಜವಾದ ಸಂತೋಷ ಆಗುತ್ತದೆ. ಮತ್ತೇನನೂ ಪಡೆಯಬೇಕಿಲ್ಲ. ಇವನ್ನು ಕಳೆದುಕೊಂಡ ಜಾಗದಲಿ ನಮಗೇ ಗೊತ್ತಿಲ್ಲದೆ, ದಯೆ, ಸೇವೆ, ಸಹಾಯ, ಸಾಂತ್ವನ, ಸಹಿಷ್ಣುತೆ, ಸಾಮರಸ್ಯ, ಸಮಸ್ಥಿತಿಗಳೇ ಮೊದಲಾದ ಮರೆತಿದ್ದ ಮಾನವೀಯ ಗುಣಗಳು ನೆಲೆಗೊಳ್ಳುತ್ತವೆ. ಇದೇ ನಿಜವಾದ ಸಾಧನೆಯೂ ಆಗುತ್ತದೆ.

ಸಾಧನೆಯೆಂಬುದು ಪರಮ ಪದವೇ! ಆದರೆ ಯಾವಾಗ? ನಮ್ಮೊಳಗಿನ ಸಣ್ಣತನ, ದುಷ್ಟತನ, ನಾನೆಂಬ ಅಹಂತನಗಳನು ಕಳೆದುಕೊಂಡಾಗ!! ಕಳೆದುಕೊಂಡಾಗ ನಮ್ಮಲ್ಲಿ ಏನು ಉಳಿಯುವುದೋ ಅದೇ ಪಡೆದುಕೊಳ್ಳುವಿಕೆ. ಇದನ್ನೇ ಅರಿವು ಎನ್ನುವುದು. ಮರೆವು ಇರುವ ತನಕ ಅರಿವು ಕಣ್ದೆರೆಯುವುದಿಲ್ಲ; ಅರಿವು ಅರಳಿದಾಗ ವಿವೇಕದ ಪರಿಮಳ ಸುತ್ತೆಲ್ಲ; ನಡೆದ ಮತ್ತು ನುಡಿದ ಕಡೆಯೆಲ್ಲ!! ಎರಡು ಮೈನಸ್ಸುಗಳು ಕೂಡಿದಾಗಲೇ ಪ್ಲಸ್ಸಾಗುವುದು; ಅರ್ಥಪೂರ್ಣವಾಗಿ ಒಂದರೊಡನೊಂದು ಹದವಾಗಿ ಬೆರೆತು ಬದುಕಿದಾಗ, ಉದ್ದಗೆರೆಗೆ ಅಡ್ಡಗೆರೆ ಸೇರಿದಾಗ.

-ಡಾ. ಹೆಚ್ ಎನ್ ಮಂಜುರಾಜ್,


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x