“ಸಂಗಾತಿ” ಬೇಕಾಗಿರುವುದು ಮನಸ್ಸಿಗೊ ದೇಹಕ್ಕೊ.. ಇದನ್ನು ಅರ್ಥ ಮಾಡಿಕೊಂಡರೆ ಈ ಸಂಗಾತಿ ಅನ್ನುವ ಪದಕ್ಕೊಂದು ಅರ್ಥ ಸಿಗುತ್ತದೆ. ಯಾವಾಗ ನಾವು ಈ ಸಂಗಾತಿಯ ಅನ್ವೇಷಣೆಯನ್ನು ಮಾಡುತ್ತೇವೆ.? ನಮ್ಮ ಮನಸ್ಸು ಒಂಟಿತನದ ಬೇಗೆಯಲ್ಲಿ ಬೇಯುವಾಗ ಮನಸ್ಸಿಗೊಂದು ಆಸರೆಬೇಕು ಅನಿಸುತ್ತದೆ. ನಿಜವಾಗಿಯೂ ಮಾಗಿದ ವಯಸ್ಸು ಬಯಸುವ ಸಂಗಾತಿ ಅದು ದೇಹಕ್ಕಲ್ಲ. ತನ್ನ ಮನಸ್ಸಿಗೆ. ಯಾರು ಇಲ್ಲದಾಗ ತನಗಾಗಿ ಮಿಡಿಯುವ ಆತ್ಮೀಯ ಜೀವವೊಂದು ಬೇಕು ಅನಿಸುತ್ತದೆ. ಕೆಲವರು ಇದನ್ನು ಹೇಳಲಾಗದೆ ಮಾನಸಿಕವಾಗಿ ಕುಗ್ಗುತ್ತಾರೆ. ಬೆಳೆದ ಮಕ್ಕಳು ಅವರವರ ವೈಯಕ್ತಿಕ ಜೀವನದಲ್ಲಿ ಬ್ಯುಸಿ ಆಗಿರುತ್ತಾರೆ. ಒಂಟಿಯಾದ ತಂದೆಯೋ ತಾಯಿಯೋ ಇಲ್ಲಿ ಈ ಒಂಟಿತನದಿಂದ ನರಳುತ್ತಿರುತ್ತಾರೆ. ಅಲ್ಲಿಂದ ಅವರೊಳಗಿನ ಮಗುವಿನಂತ ಮುಗ್ಧ ಮನಸ್ಸು ರೋಧಿಸ ತೊಡಗುತ್ತದೆ. ತನ್ನ ನೋವನ್ನು ಹಂಚಿಕೊಳ್ಳಲು ಒಂದು ಜೀವ ಜೊತೆಗಿರಬೇಕು ತನ್ನ ಬೇಕು ಬೇಡಗಳಿಗೆ ದನಿಯಾಗುವ ಒಂದು ಮನಸ್ಸು ಜೊತೆಗಿರುತ್ತಿದ್ದರೆ ಹಾಯಾಗಿ ಇರಬಹುದಿತ್ತು ಅನ್ನುವ ಭಾವನೆ ಅವರೊಳಗಿರುತ್ತದೆ. ಸಂಗಾತಿ ಬೇಕು ಎಂದು ಬಯಸುವುದು ತಪ್ಪಲ್ಲ. ಅದಕ್ಕೆ ವಯಸ್ಸಿನ ಅಂತರವಿಲ್ಲ. ಪ್ರತಿಯೊಬ್ಬರಿಗೂ ಈ ಏಕಾಂಗಿತನ ಒಂದು ಶಿಕ್ಷೆಯಾಗಿ ಕಾಡುತ್ತದೆ.
ಹೀಗೆ ಒಂಟಿಯಾದ ಜೀವಗಳು ಪಾರ್ಕಿನಲ್ಲಿ ಇಲ್ಲವೇ ಜನ ಸಂದಣಿ ಇಲ್ಲದೆ ಕಡೆ ಒಬ್ಬರೇ ಕುಳಿತು ಅವರಷ್ಟಕ್ಕೆ ಒಂಟಿಯಾಗಿ ಇರುತ್ತಾರೆ. ಇನ್ನು ಕೆಲವರು ತಮ್ಮ ವಯಸ್ಸಿನವರ ಜೊತೆ ಮಾತಿಗಿಳಿಯುತ್ತಾರೆ. ಸಂಜೆಯ ಓಡಾಟ ಅವರಿವರ ಜೊತೆ ಆತ್ಮೀಯ ಮಾತು ಹೀಗೆ ಹೇಗಾದರೂ ಮಾಡಿ ತಮ್ಮ ಸಮಯ ಕಳೆಯುತ್ತಾರೆ. ಮತ್ತೆ ಮನೆಗೆ ಹಿಂತಿರುಗಿ ಬಂದಾಗ ಅವರಿಗೆ ಏಕಾಂತದ ನೋವು ಕಾಡಲು ಶುರುವಾಗುತ್ತದೆ. ಹೀಗೆ ವಯಸ್ಸಾದವರ ಭಾವನೆಗಳು ಅದೆಷ್ಟೆ ಪ್ರಬುದ್ಧವಾಗಿದ್ದರೂ ಅವರೊಳಗಿನ ಮನಸ್ಸು ಮಾತ್ರ ಮುಗ್ಧ ಮಗುವಿನಂತೆಯೇ ಇರುತ್ತದೆ. ಇನ್ನು ಹರೆಯದವರ ಒಂಟಿತನದ ನೋವು ಇನ್ನೊಂದು ರೀತಿಯಾದ್ದಾಗಿರುತ್ತದೆ. ಇವರ ಮನಸ್ಸಿಗೆ ನೋವಾದಾಗ ಯಾರಾದರೂ ಮೋಸ ಮಾಡಿದಾಗ ಬಯಸಿದ ಸಂಗಾತಿ ದೂರವಾದಾಗ ಒಬ್ಬಂಟಿತನದಿಂದ ಬಳಲುತ್ತಿರುತ್ತಾರೆ. ಕೆಲವರು ಮಾನಸಿಕವಾಗಿ ತುಂಬಾ ಕುಗ್ಗುತ್ತಾರೆ. ಇನ್ಯಾವತ್ತು ಯಾರನ್ನು ನಂಬಬಾರದು. ಜೊತೆಯಲ್ಲಿ ಬರುವವರೆಲ್ಲ ನೋವು ಕೊಡುವವರು. ಯಾರು ಇಲ್ಲದೆಯೂ ನಾನು ಒಬ್ಬಂಟಿಯಾಗಿ ಬದುಕಬಲ್ಲೆ ಅನ್ನುವ ಧೃಢ ನಿರ್ಧಾರದ ಶಪಥವನ್ನು ಮಾಡಿಕೊಂಡಿರುತ್ತಾರೆ. ಆದರೆ ಇದೆಲ್ಲ ಕ್ಷಣಿಕವಾದ ನಿರ್ಧಾರಗಳಷ್ಟೆ. ಯಾರು ಎಷ್ಟೆ ಒಂಟಿಯಾಗಿರಬೇಕು ಅಂತ ಅಂದುಕೊಂಡರು ಅದು ಧೀರ್ಘಕಾಲದವರೆಗೆ ಸಾಧ್ಯವಿಲ್ಲ. ಜೀವಕ್ಕೊಂದು ಸಂಗಾತಿಯ ಅವಶ್ಯಕತೆ ಎಲ್ಲರಲ್ಲೂ ಇರುತ್ತದೆ.
ಬದುಕಿನ ದೋಣಿಗೆ ನಾವಿಕನಿಲ್ಲದೆ ಹೋದರೆ ಅದು ತನ್ನ ಗುರಿಯನ್ನು ಮುಟ್ಟುವುದಾದರೂ ಹೇಗೆ. ಬೀಸಿ ಬರುವ ಅಲೆಗಳನ್ನು ಒಂಟಿಯಾಗಿ ಎದುರಿಸಲಾಗದೆ ಸೋತಾಗ ಬದುಕು ಭಾರವೆನಿಸುತ್ತದೆ ಸಂಗಾತಿ ಇಲ್ಲದ ಜೀವನಕ್ಕೆ ಅರ್ಥವೇ ಇಲ್ಲವೇನೋ ಅನಿಸಲು ಶುರುವಾಗುತ್ತದೆ. ಮಾಗಿದ ಮನಸ್ಸು ತನ್ನ ಮನಸ್ಸಿಗೊಂದು ಸಮಾಧಾನ ಮಾಡುವ ಸಂಗಾತಿಗಾಗಿ ಹುಡುಕಾಡುತ್ತಿರುತ್ತದೆ. ಈ ಒಂಟಿತನ ಮನುಷ್ಯನ ಮನಸ್ಸನ್ನು ಇನ್ನಿಲ್ಲದಂತೆ ಕಾಡಲು ಶುರು ಮಾಡುತ್ತದೆ. ಅದೆಷ್ಟೆ ಒಂಟಿಯಾಗಿರಬೇಕು ಅಂದುಕೊಂಡರು ಅದು ತುಂಬಾ ಕಷ್ಟವಾಗಿ ಬಿಡುತ್ತದೆ. ನಾವು ಅಂದುಕೊಂಡಷ್ಟು ಯಾವುದು ಸುಲಭವಲ್ಲ. ಏಕಾಂತ ಬಯಸುವ ಮನಸ್ಸು ಒಂದೆರಡು ದಿನವಷ್ಟೆ ಏಕಾಂತದ ಸುಖವನ್ನು ಅನುಭವಿಸಬಹುದು. ಮತ್ತೆ ಸಾಧ್ಯವಿಲ್ಲ. ನಮ್ಮನ್ನು ಯಾರು ಕೇಳುವವರಿಲ್ಲ ಅಂತ ಗೊತ್ತಾಗುವಾಗ ಮನಸ್ಸು ಗೊಂದಲದ ಗೂಡಾಗುತ್ತದೆ. ತನಗಾಗಿ ಮಿಡಿಯುವ ಮನಸ್ಸುಗಳ ಅನ್ವೇಷಣೆಗೆ ತೊಡಗುತ್ತದೆ. ಜೀವನಕ್ಕೊಂದು ಸಂಗಾತಿ ಬೇಕು ಅನಿಸುವುದು ತಪ್ಪಲ್ಲ. ಆದರೆ ಆ ಸಂಗಾತಿ ನಮ್ಮ ಜೀವನವನ್ನು ಅದೆಷ್ಟು ಚಂದಾಗಾಣಿಸಿ ಮುನ್ನಡೆಸುತ್ತಾರೆ ಎನ್ನುವುದು ಮುಖ್ಯವಾಗುತ್ತದೆ. ಬದುಕಿನ ಉದ್ದಕ್ಕೂ ಬರಿ ನೋವನ್ನು ಮಾತ್ರ ಕೊಡುವವನ ಸಂಗ ಯಾವತ್ತಿಗೂ ಸಂಘರ್ಷದ ಬದುಕಾಗುತ್ತದೆ.
ವೃತಿಗೊಂದು ನಿವೃತ್ತಿ ಇರಬಹುದು ಆದರೆ ಬದುಕಿಗಲ್ಲ. ಈ ದೇಹ ಬಯಸುವುದು ಮನಸ್ಸಿನ ಸಂಗಾತಿಯನ್ನೇ ಹೊರತು ದೇಹದ ದಾಹಕ್ಕಾಗಿ ಅಲ್ಲ. ಒಮ್ಮೆ ಬದುಕು ಅಸಹನೀಯವಾದರೆ ಮಾನಸಿಕ ನೆಮ್ಮದಿಯು ಕಳೆದು ಹೋಗುತ್ತದೆ. ಯೌವ್ವನದ ಒಂಟಿತನ ಒಂದು ರೀತಿಯದ್ದಾದರೆ ವೃದ್ದಾಪ್ಯದ ಒಂಟಿತನವೇ ಬೇರೆ. ಇಲ್ಲಿ ದೇಹ ಮನಸ್ಸು ಎಲ್ಲವೂ ಮಾಗಿರುತ್ತದೆ. ಆದರೂ ಮಗುವಿನಂತ ಮನಸ್ಸು ತನಗಾಗಿ ಯಾರಾದರೂ ಇದ್ದಾರ ಅನ್ನುವ ಅನ್ವೇಷಣೆಯಲ್ಲಿ ತೊಡಗಿರುತ್ತದೆ. ಅಲ್ಲಿ ಏಕಾಂಗಿತನವನ್ನು ಸಹಿಸುವುದು ಕಷ್ಟ. ಅವರ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು ಒಂದು ಜೀವದ ಅವಶ್ಯಕತೆ ಇರುತ್ತದೆ. ಅದಕ್ಕಾಗಿ ಮನಸ್ಸು ಹಾತೊರೆಯುತ್ತಿರುತ್ತದೆ. ಬದುಕಿನ ಏಳುಬೀಳುಗಳ ಮಧ್ಯೆ ಬಸವಳಿದ ಜೀವಕ್ಕೆ ಬೇಕಾಗಿರುವುದು ಮಾನಸಿಕ ನೆಮ್ಮದಿ ಕೊಡುವ ಸಂಗಾತಿ ಮಾತ್ರ ದೇಹದಲ್ಲಿ ಶಕ್ತಿ ಉಡುಗಿದಾಗ ಮನಸ್ಸು ವಿಶ್ರಾಂತಿಯತ್ತ ವಾಲುತ್ತದೆ. ಆಗ ಈ ಆಸ್ತಿ ಅಂತಸ್ಸು ಯಾವುದು ನೆನಪಿಗೆ ಬರುವುದಿಲ್ಲ. ಆಗ ಮನಸ್ಸು ಬಯಸುವುದು ತನ್ನದು ಅನ್ನುವ ಒಂದು ಜೀವಕ್ಕಾಗಿ. ಇಷ್ಟು ದಿನ ಬಿಡುವಿಲ್ಲದೆ ದುಡಿದ ದೇಹಕ್ಕೆ ಹಾರೈಕೆಯ ಜೊತೆ ಅಕ್ಕರೆಯ ಅವಶ್ಯಕತೆ ಇದೆ ಅನಿಸುತ್ತದೆ. ಇಲ್ಲಿ ನನಗಾಗಿ ಯಾರು ಇಲ್ಲ ಅಂತ ಅರಿವಾದಾಗ ಒಂಟಿತನದ ನೋವು ಕಿತ್ತು ತಿನ್ನುತ್ತದೆ.
ಮನುಷ್ಯ ಎಷ್ಟೆ ಗಟ್ಟಿಗನಾಗಿದ್ದರೂ ಅವನು ಹೇಗೆ ಬದುಕಿದ್ದರೂ ಕೊನೆಯ ಹಂತದಲ್ಲಿ ಮಾತ್ರ ಅವನನ್ನು ಈ ಒಂಟಿತನ ಅತಿಯಾಗಿ ಕಾಡಿಸುತ್ತದೆ. ಎಲ್ಲರೂ ಇದ್ದರೂ ತಾನು ಒಂಟಿ ಎನ್ನುವ ಭಾವವೇ ಅತಿಯಾಗುತ್ತದೆ. ಆದರೆ ಒಂದಂತೂ ಸತ್ಯ ಎಲ್ಲರೂ ಕೊನೆವರೆಗೂ ನಮ್ಮ ಜೊತೆ ಬರಲಾರರೂ. ಸಂಗಾತಿ ಅಂದರೆ ಸಮಧಾನ. ಅದು ನಮ್ಮ ಮನಸ್ಸು.. ಈ ಮನಸ್ಸೆಂಬ ಸಂಗಾತಿಯನ್ನು ನಾವು ಸಮಧಾನ ಮಾಡಿಕೊಂಡರೆ ಎಲ್ಲವೂ ಚಂದ. ಇಲ್ಲದಿದ್ದರೆ ಮಾನಸಿಕವಾಗಿ ತುಂಬಾ ನೋವಾಗುತ್ತದೆ. ಪ್ರೀತಿಯ ಜೊತೆಗಿಷ್ಟು ಸಾಂತ್ವನವನ್ನು ಎಲ್ಲರ ಮನಸ್ಸು ಬಯಸುತ್ತದೆ. ಅದಕ್ಕೆವಯಸ್ಸಿನ ಅಂತರವಿಲ್ಲ. ಸಂಗಾತಿಯ ಆಯ್ಕೆ ತಪ್ಪಾಗಿದ್ದಾಗ ಮಾತ್ರ ಬದುಕು ಅಸಹನೀಯವಾಗುತ್ತದೆ. ಹೊಂದಾಣಿಕೆಯ ಕೊರತೆ ಆಸೆ ನಿರಾಸೆಗಳ ಸುತ್ತ ಬದುಕು ಎಲ್ಲೊ ಕುಸಿದು ಹೋಗುತ್ತದೆ. ಮತ್ತೆ ಹೊಸ ಸಂಗಾತಿ ಹೊಸ ಬದುಕು ಅನ್ನುವ ಜಂಜಾಟದಲ್ಲಿ ಬದುಕಿನ ಸ್ವಾರಸ್ಯವೇ ಹೊರಟು ಹೋಗಿರುತ್ತದೆ. ಅದಕ್ಕಾಗಿ ನಾವು ಬಯಸುವ ಸಂಗಾತಿಯ ಆಯ್ಕೆ ಯಾವತ್ತು ತಪ್ಪಾಗದಿರಲಿ. ಬದುಕೆಂಬ ಭಾವಕ್ಕೆ ಸುಂದರ ದನಿಯಾಗುವ ಸಂಗಾತಿ ಕೊನೆವರೆಗೂ ಇರಲಿ. ನೋವು ನಲಿವುಗಳಿಗೆ ಸ್ಪಂದಿಸುವ ಜೀವವೇ ಸಂಗಾತಿ. ಹಾಗಂತ ಸಂಗಾತಿ ಇಲ್ಲದೇ ಜೀವನವೇ ಇಲ್ಲ ಅನ್ನುವ ನೋವು ಯಾವತ್ತು ಯಾರನ್ನು ಕಾಡದಿರಲಿ.
ತನಗಾಗಿ ಯಾರು ಇಲ್ಲ ಅನ್ನುವುದಕ್ಕಿಂತ ಎಲ್ಲರೂ ನನ್ನವರೇ ಜೊತೆಯಲ್ಲಿ ಯಾರು ಬರದಿದ್ದರೂ ಸುತ್ತಮುತ್ತ ತನಗಾಗಿ ಮಿಡಿಯುವ ಸುಂದರ ಮನಸ್ಸುಗಳಿವೆ ಅನ್ನುವ ಜೀವನ ಪ್ರೀತಿಯನ್ನು ನಮ್ಮ ಮನಸ್ಸು ಒಪ್ಪಿಕೊಳ್ಳಬೇಕಿದೆ. ಅದಕ್ಕಾಗಿ ನಮ್ಮ ಮನಸ್ಸನ್ನು ಒತ್ತಡದಿಂದ ದೂರವಿರಸಬೇಕು. ಅತಿಯಾದ ಯೋಚನೆ ಒಳ್ಳೆದಲ್ಲ. ಅತಿಯಾದ ಒಂಟಿತನ ಕಾಡುವಾಗ ಯಾವುದಾದರೂ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಹಿತವಾದ ಸಂಗೀತ ಒಳ್ಳೆಯ ಪುಸ್ತಕ. ಮಿತವಾದ ವ್ಯಾಯಮ. ಹೀಗೆ ಆದಷ್ಟು ನಮ್ಮ ಮನಸ್ಸನ್ನು ನಾವು ಸಮಾಧಾನಚಿತ್ತವಾಗಿ ನೋಡಿಕೊಳ್ಳಬೇಕು. ಈ ಒಂಟಿತನದ ನೋವಿಗೆ ಸಂಗಾತಿಯೇ ಮದ್ದಾಗಬೇಕಿಲ್ಲ. ನಮ್ಮನು ನಾವು ಗಟ್ಟಿಮಾಡಿಕೊಳ್ಳುತ್ತ ಆ ಭಾದೆಯಿಂದ ಮುಕ್ತಿಯಾಗಬೇಕು. ಇರುವಷ್ಟು ದಿನ ಬದುಕಿನ ಬಂಡಿಯನ್ನು ಸ್ವತಂತ್ರವಾಗಿ ಮುನ್ನಡೆಸಬೇಕು.
-ಪೂಜಾ ಗುಜರನ್. ಮಂಗಳೂರು.