ಪ್ರೇಮ ಪತ್ರಗಳು

ಕನಸೆಂದರೆ ಅದು ನೀನೆ ತಾನೇ?: ಸರಿತಾಮಧುಕುಮಾರ್

ಪ್ರೀತಿಯ ಹನಿ (ಮಧು),

ಮೊದಲ ಪ್ರೇಮ ಪತ್ರ ಬರೆಯೋ ಅವಕಾಶವೇ ಇರಲಿಲ್ಲ ನನಗೆ. ಕಾರಣ ಸದಾ ಜೊತೆಯಲ್ಲಿ ನನ್ನೊಂದಿಗೆ ನೀನಿದ್ದೆಯಲ್ಲ. ಅದು ನಿನಗೂ ಗೊತ್ತು. ಏನೆಂದು ಹೇಳಲಿ ನಲ್ಲ ಮೊದಲ ಭೇಟಿಯ ತವಕ ನನಗಿಂತಲೂ ನಿನಗೇ ಹೆಚ್ಚಿತ್ತು, ಅಲ್ವಾ? ನಮ್ಮ ಭೇಟಿ ನಿರೀಕ್ಷಿತವಾಗಿದ್ದರೂ ಅದು ವಿಶೇಷ ವಾಗಿತ್ತು. ಅದಕ್ಕಾಗಿ ನೀನು ಚಾತಕಪಕ್ಷಿಯಂತೆ ಕಾದಿದ್ದು ನನಗೆ ತಿಳಿದಿದೆ. ಹೀಗಂತ ಅದೆಷ್ಟೋ ಸಲ ನನ್ನ ಬಳಿ ಹೇಳಿದರೂ ಮತ್ತೆ ಮತ್ತೆ ಕೇಳುವಾಸೆ ಈ ಹೃದಯಕೆ.

ನೀನಾಡಿದ ಮಾತು ಪ್ರತಿಧ್ವನಿಸುತ್ತಿದೆ , ಬೀಸೋ ಗಾಳಿಯಲ್ಲಿ, ಹರಿಯೋ ನೀರ ಅಲೆಯಲ್ಲಿ , ತುಂತುರು ಮಳೆಯಲ್ಲಿ , ಕಂಪಿಸುವ ತರಂಗದಲ್ಲಿ, ಘಂಟೆಗಳ ದನಿಯಲ್ಲಿ, ಸಂಗೀತ ಸ್ವರಗಳಲ್ಲಿ ಹೊಮ್ಮುವ ನಾದದ ನಿನಾದ ನಿನ್ನದೇ ತಾನೇ? ನನ್ನೆಲ್ಲಾ ಕನಸುಗಳಲ್ಲೂ ನೀನೇ . . . . ನೀನು. . . ಕನಸೆಂದರೆ ಅದು ನೀನೆ ತಾನೇ? ನಿನ್ನ ಹೊರತಾದ ಆ ಕನಸಾದರೂ ನನಗೆ ಏಕೆ ಬೇಕು? ಅದು ಸತ್ಯವೂ ಹೌದು. ಆದರೂ ಕನಸಲಿ ಕಂಡವನು ಕ್ಷಣದಲ್ಲೇ ಮರೆಯಾದೆ ಏಕೆ? ಕೈಚಾಚಿ ಕರೆದರೂ ಕೇಳಲಿಲ್ಲವೇಕೆ? ನಿನಗೆ ಗೊತ್ತಾ. . . ನನ್ನೆದೆಯ ಅಂಗಳದಿ ನಿನ್ನದೇ ದಿಬ್ಬಣ ನಡೆಯುವುದು ಸದಾ. ಆ ಅಪ್ರತಿಮ ನೋಟಕೆ ನಿಬ್ಬೆರಗಾಗಿ , ನಸುನಗು ನಾಚಿಕೆಯಾಗಿ ಅದಾವಾಗ ಮೂಡುವುದೋ ನನಗರಿವಿರುವುದಿಲ್ಲ. ನಿನ್ನ ಪ್ರೀತಿಯ ಗಾಢತೆಯೇ ಮಿಗಿಲೆನಗೆ ಗೆಳೆಯಾ, ಏಕೆಂದರೆ ಕಣ್ಣೆದುರು ಇದ್ದರೂ , ಇರದಿದ್ದರೂ ಮನ ಬಯಸುವುದು ನಿನ್ನೊಲವು , ಕೇವಲ ನಿನ್ನೊಲವು ಮಾತ್ರ!

ಒಲವಿನೊರತೆಯಲಿ ಮಿಂದಿರುವ ಮನಕೆ ಮತ್ತೇನನ್ನೋ ನಿರೀಕ್ಷಿಸುವ ಮನಸಿಲ್ಲ. ಇರುವಷ್ಟು ಕಾಲವೂ ರಮಿಸುವ ಬಯಕೆ ನನ್ನದು . ಪ್ರತಿದಿನವೂ ಪ್ರೇಮೋತ್ಸವ ನನ್ನ ಪಾಲಿಗೆ , ನೀ ಜೊತೆಯಿರಲು.

ನನ್ನ ನಂಬಿಕೆಯೊಂದೇ ಆ ನೀಲಾಂತರಿಕ್ಷದಲ್ಲಿ ಹೊಳೆವ , ಬಾಳಿನೇರಿಳಿತಗಳಲ್ಲಿ ಕುಗ್ಗದೇ ನಿಲುವ ಅಪ್ರತಿಮ ಸಾಂಗತ್ಯ ನಮ್ಮೊಲವು ಅಲ್ವಾ? ನಿನಗೂ ಹೀಗೆ ಅನ್ಸಿದೆ ಅಂತ ಗೊತ್ತು , ಆದ್ರೆ ನೀ ಸದಾ ಮೌನಿಯಾಗಿರುವೆ . ನಮ್ಮೀರ್ವರಲ್ಲಿ ಮುನಿಸೂ ಇಲ್ಲ , ಜಗಳವೂ ಇಲ್ಲ. ಇದ್ದರೂ ಕೆಲ ಕ್ಷಣಗಳಲ್ಲೇ ನನ್ನುಸಿರಿಗೆ ನಿನ್ನುಸಿರ ಬೆರೆತ ನಲ್ಮೆಯ ಹಾಡಾಗುವುದು. ಅದೇನೇ ಆದರೂ ನಿನ್ನಷ್ಟು ಅಂತಃರ್ಮುಖಿ ನಾನೆಂದಿಗೂ ಆಗಲಾರೆ. ಮೌನ ಹಾಗೂ ಮಾತು ಈ ಎರಡೂ ಭಿನ್ನತೆಗಳ ನಡುವೆ ನಮ್ಮ ಸಂಸಾರ ನೌಕೆಯ ಪಯಣ ಸಾಗುತಿದೆ. ನನ್ನೆಲ್ಲಾ ಮಾತುಗಳಿಗಿರದ ಅದಮ್ಯ ಶಕ್ತಿ ನಿನ್ನ ಮೌನದಲ್ಲಿದೆ. ಹಾಗಾಗಿ ನಾ ಶರಣಾಗಲೇಬೇಕು.

ಕನಸುಗಳ ಬೆಂಬತ್ತಿ ಹೊರಟ ನನಗೆ ಕಾಡಿದ ಪ್ರಶ್ನೆಗಳು ಅನೇಕ . ಸೋಲಿತಿಹೆ ನಾನು ಉತ್ತರ ಹುಡುಕಲು ಗೆಳೆಯಾ,

ನಾನು ಮೌನವಾಗಿ ಕುಳಿತಷ್ಟೂ
ನಿನ್ನದೇ ನೆನಪುಗಳ ಚಾರಣ.
ಮೌನತಬ್ಬಿ ತಂಗಾಳಿಯ ಸವಿದಷ್ಟೂ
ನಿನ್ನದೇ ಕನಸುಗಳ ರಿಂಗಣ.

ನಾ ಬರೆಯಲು ಕಾರಣ ಬೇಕಿಲ್ಲ ಕಣೋ , ನೆಪಗಳು ಸಾಕೆನಗೆ . ಯಾವಾಗಲೂ ನೀನೆ ಕಣ್ಮುಂದೆ ಬರ್ತೀಯಾ, ನನ್ನೊಲವ ಇಡಿಯಾಗಿ ಬಂಧಿಸಿ ಖುಷಿಯ ಇಮ್ಮಡಿಗೊಳಿಸಿ, ಆಗಸದಲ್ಲಿ ಅಪರೂಪಕ್ಕೆ ಮೂಡೋ ಕಾಮನಬಿಲ್ಲಿನ ರಂಗಿನ ಮೆರುಗನ್ನು ನನ್ನ ಪಾಲಿಗೆ ಪ್ರತಿಕ್ಷಣವೂ ನೀಡುವವ ನೀನೆ ತಾನೇ? ಹೊಂಬಣ್ಣವನು ಕದಪುಗಳ ಮೇಲೆ ತರುವವನು ನೀನೇ, ಕೆಂದುಟಿಗಳಿಗೆ ನಾಚಿಕೆಯ ತರುವವನು ನೀನೇ, ಹೃದಯದ ಮಿಡಿತಕೂ ತಾಳ-ಮೇಳಗಳ ನುಡಿಸುವವನು ನೀನೇ, ನೀನೇ ತಾನೇ ನನ್ನೆಲ್ಲಾ ಕನಸುಗಳಿಗೂ ಒಡೆಯ . ಆ ಕನಸಿನಲ್ಲಿ ಒಲವಿನ ತೇರನೇರಿ ನಿನ್ನೊಡನೆ ಸಾಗುವ ಬಯಕೆ ನನ್ನದು.

ಬೇಂದ್ರೆಯವರ ಪ್ರಕಾರ ” ಮುತ್ತು ಕೊಟ್ರೆ ಮುತ್ತು ತಗೊಂಡಂತೆ” , ” ಕೊಡುವುದೇ ಇಲ್ಲಿ ಕೊಂಬುದು”
ಪ್ರೀತಿಸಿದರೆ ಮಾತ್ರ ಪ್ರೀತಿ ಸಿಕ್ಕಂತೆ , ಪ್ರೀತಿಯ ಯಾಚನೆಯಷ್ಟೇ ಸಾಲದು ಗೆಳೆಯಾ.

ನನ್ನ ಪಾಲಿಗೆ ನೀನೆಂದರೆ ಎಡೆಬಿಡದೇ ಸುರಿವ ಸೋನೆ ಮಳೆ , ಮನಸಿಗೆ ಹರ್ಷ ತರುವೆ, ಉಲ್ಲಾಸ – ಉತ್ಸಾಹ ಮೂಡಿಸುವೆ. ಒಮ್ಮೆಲೇ ಸುರಿದು ನೆನಪುಗಳ ಕೊಚ್ಚಿ ಹೋಗಿಸುವ ಜಡಿ ಮಳೆಗಿಂತ ನನ್ನೆದೆಯ ಆಳಕ್ಕೆ ಇಳಿದ ತುಂತುರು ಸೋನೆಮಳೆಯೇ ಚೆಂದವೆನಗೆ. ಆ ಮಳೆಯ ಹನಿಗಳ ನಡುವೆ ಎವೆಯಿಕ್ಕದೇ ನಿನ್ನನ್ನೇ ದಿಟ್ಟಿಸುವಾಸೆ ನನಗೆ. ವರ್ಷ ಧಾರೆಯಲಿ ಮೈಯೊಡ್ಡಿ ನಿಲುವಂತೆ ಪುಳಕವೆನಗೆ , ನಿನ್ನೊಡನೆ ಕಳೆವ ಪ್ರತಿ ಕ್ಷಣವೂ.

ಅಂತರಂಗಕೆ ನೀ ಚಿರಪರಿಚಿತ ಆದರೂ ನಿನ್ನದೇ ಧ್ಯಾನ ಅನವರತ. ಅದೇನ್ಗೊತ್ತಾ ಹಸಿರು ಮೂಡಿದ ಹಾದಿಯ ಮೇಲೆ ನಮ್ಮಿಬ್ಬರ ಪಯಣಕ್ಕೆ ಇಳಿಸಂಜೆಯ ತಂಗಾಳಿಯೂ ತುಸು ನಿಧಾನಿಸಬೇಕು. ನಿನ್ನ ಕಿರುಬೆರಳ ಸ್ಪರ್ಶಕೆ ರೋಮಾಂಚನಗೊಂಡ ಮನ, ಮಿಂಚುಹುಳದಷ್ಟೇ
ಹೊಳಪನ್ನು ನಿನ್ನ ಕಣ್ಣುಗಳಲ್ಲಿ ನಾ ಕಾಣಬೇಕು ಗೆಳೆಯಾ. ನೀರವತೆಯೂ ಒಮ್ಮೆ ಮೌನದ ಬಾಗಿಲು ತೆರೆಯಬೇಕು ನಮ್ಮೊಲವಿನ ಪರಿಯ ಕಂಡು. ಹಗಲ ತೆರೆ ಸರಿದು ಇರುಳ ಬಾಂದಳಕೆ ನಮ್ಮಿಬ್ಬರದೇ ದಿಬ್ಬಣವಾಗಬೇಕು. ಹೀಗೆ ಕರವಿಡಿದು ಹೆಜ್ಜೆ ಬೆಸೆದು ಸಾಗರ ತೀರದ ಬಳಿ ಸಾಗಬೇಕು. ರಾಶಿ ನಕ್ಷತ್ರಗಳ ಮಿರುಗುಬಣ್ಣವು ಮಂದವೆನಿಸಬೇಕು ನಮ್ಮ ಕಂಗಳ ಕಾಂತಿಯನ್ನು ಕಂಡು. ಮುಖಾರವಿಂದದಲ್ಲಿ ಮೂಡಿದ ಮುಗಳುನಗೆಗೆ ನಾ ಸಾಕ್ಷಿಯಾಗಿರಬೇಕು.

ಕಡಲ ಅಲೆಗಳ ಮೊರೆತವೂ ಕ್ಷಣಕಾಲ ನಿನ್ನ ದನಿಗೆ ಮೌನದೊಳು ಮುಳುಗಿರುವಾಗ ತಂಗಾಳಿಯೂ ಅರೆಗಳಿಗೆ ಅಹಿತವೆನಿಸಿ ಬಯಸಿದೆ ನಿನ್ನ ಬಿಸಿಯಪ್ಪುಗೆ . ನಿನ್ನೊಲವಿನ ಸಿಂಚನದಿ ತನ್ಮಯಳಾಗಿ ತದೇಕಚಿತ್ತದಿ ನಿಟ್ಟಿಸಿದರೂ ಅಗೋಚರ ನೀನು. ಸುತ್ತ ಸುಳಿದಾಡಿದರೂ ಕೈವಶವಾಗಲಿಲ್ಲ. ಒಲವ ಸೆಳೆತಕೆ ಕಡಿವಾಣವಿಲ್ಲ. ನನ್ನೊಲವು ಅದೇ ನೀರ ಅಲೆಯಂತೆ ತಿರು- ತಿರುಗಿ ಕಡಲ ಸನಿಹ ಬಯಸುವಂತೆ ನಿನ್ನೆಡೆಗೆ ನನ್ನ ಪಯಣ.

ನಿರೀಕ್ಷೆ ನನ್ನದು, ನಿರ್ಧಾರ ನಿನ್ನದು. ಉತ್ತರಿಸು ಬೇಗ. ನನ್ನ ಬಾಳ ಬಾಂದಳಕೆ ನೀನೆ ಬೆಳಕು. ಕಾಯಿಸುವ, ಸತಾಯಿಸುವ ಬಯಕೆ ನಿನ್ನದೇನೋ? ನಿನ್ನ ಪತ್ರದ ನಿರೀಕ್ಷೆಯಿದೆ ಗೆಳೆಯಾ, ಕಾರಣ ಎಂದಿಗೂ ನೀನೆಂದರೆ ” ಭರವಸೆ” ಎನಗೆ.

ಇಂತಿ ನಿನ್ನ
ಸಾಥಿ


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *