ಸಿದ್ರಾಮ್ ಪಾಟೀಲರ ಜಂಗಮಕ್ಕಳಿವಿಲ್ಲ ಪುಸ್ತಕದ ವಿಮರ್ಶೆ: ಭಾರ್ಗವಿ ಜೋಶಿ

ಇತ್ತೀಚಿಗೆ ಓದಿದ ಪುಸ್ತಕ. ಪುಸ್ತಕದ ಹೆಸರು ನೋಡಿದ ಕೂಡಲೇ ಓದಬೇಕು ಅನಿಸಿತು. ಜಂಗಮಕ್ಕಳಿವಿಲ್ಲ ಅನ್ನೋದೇ ಒಂದು ದೊಡ್ಡ ವಿಷಯ. ಅರ್ಥ ಮಾಡಿಕೊಳ್ಳೋಕೆ ತುಂಬಾ ವಿವೇಕ ಇರಬೇಕು. ಇನ್ನು ಆ ಶೀರ್ಷಿಕೆ ಹೊತ್ತ ಪುಸ್ತಕದಲ್ಲಿನ ಕಥೆಗಳು ಹೇಗೆ ಇರಬಹುದು ಅನ್ನೋ ಕುತೂಹಲದಿಂದಲೇ ಪುಸ್ತಕ ಕೊಂಡುಕೊಂಡೆ. ಖಂಡಿತ ನನ್ನ ಊಹೆ ಸುಳ್ಳಾಗಲಿಲ್ಲ. ಹನ್ನೆರೆಡು ವೈವಿಧ್ಯಮಯ ಕಥೆಗಳನ್ನು ಹೊಂದಿದ ಈ ಪುಸ್ತಕ ನಿಜಕ್ಕೂ ತುಂಬಾ ಅರ್ಥ ಗರ್ಭಿತ ಕಥೆಗಳು. ಮೊದಲನೇ ಕಥೆ ಬಿಡಿ-ಕೊಂಡಿಗಳು. ತಂದೆ, ತಾಯಿ ಅಸೆ, ಕನಸುಗಳು, ಅವುಗಳನ್ನು ಮಿರಿ ಸ್ವೇಚ್ಛಾಚಾರದಿಂದ ಬೆಳೆಯುತ್ತಿರುವ ಮಕ್ಕಳು. ಈ ವಿಷಯದ ಸುತ್ತ ಹೆಣೆದ ಕಥೆ. ದತ್ತು ಮಗನನ್ನು ಸ್ವಂತ ಮಗನಂತೆ ಸಾಕಿದವರು ಒಂದು ಕಡೆ, ಹೆತ್ತ ತಂದೆ ತಾಯಿಯರನ್ನು ಕಡೆಗಣಿಸುವ ಮಕ್ಕಳು ಒಂದುಕಡೆ. ಗಂಡ ಹೆಂಡತಿಯ ನಡುವಿನ ಪ್ರೀತಿ ಅಕ್ಕರೆ ಒಂದು ಕಡೆ. ಈ ಎಲ್ಲವು ಒಂದೇ ಸರಪಳಿಯ ಕೊಂಡಿಗಳು. ಆದರೆ ಸಮಯದ ಸುಳಿಯಲ್ಲಿ ಬಿಡಿ ಬಿಡಿಯಾಗಿವೆ. ಕಣ್ಣಿಗೆ ಕಟ್ಟುವ ಹಾಗೆ ಬರೆದಿದ್ದಾರೆ ಲೇಖಕರು. ಅಂತ್ಯವಂತೂ ಮನಸ್ಸನ್ನು ಕದಡುತ್ತದೆ.

ಎರೆಡನೇಯ ಕಥೆಯೇ ಜಂಗಮಕ್ಕಳಿವಿಲ್ಲ. ಜಂಗಮ ಎಂದರೆ ಆತ್ಮ. ನಾ ಅಳಿದ ಮೇಲೆ ಅದೇ ಪರಮಾತ್ಮ. ಅದೆಷ್ಟೋ ಬಾರಿ ಸರಿ ತಪ್ಪು ಗಳ ಗೊಂದಲಗಳಲ್ಲಿ ನಮ್ಮ ತಪ್ಪನ್ನು ಮನಸಿನ ಮೇಲೆ ಹಾಕಿ ನಾವು ಜಾರಿಕೊಳ್ಳುವ ಪ್ರಯತ್ನವನ್ನು ಮಾಡಿರುತ್ತೇವೆ. ಈ ಭಾವವನ್ನು ತೋರಿಸಿಕೊಡುವ ಪಾತ್ರಗಳು ಕರ್ಣ ಮತ್ತು ದ್ರೌಪದಿ. ಅವರ ಮಧ್ಯದ ಅನುರಾಗದ ಬಗ್ಗೆ ಕಥೆ ಓದಿದ್ದೆ. ಆದರೆ ಈ ಕಥೆ ವಿಭಿನ್ನವಾಗಿದೆ. ದ್ರೌಪದಿಯ ವರ್ಣನೆ, ವೀರಕರ್ಣನ ವರ್ಣನೆ ಕೂಡಾ ಸುಂದರವಾಗಿ ಮೂಡಿ ಬಂದಿದೆ. “ಸುಕನ್ಯಾ ಸಿಸ್ಟರ್” ನರ್ಸ್ ಒಬ್ಬರ ಜವಾಬ್ದಾರಿ, ಕಾರ್ಯದಕ್ಷತೆ, ಶ್ರದ್ಧೆ ಬಗ್ಗೆ ಹೆಣೆದ ಕಥೆ. ವೈದ್ಯ ಲೋಕದ, ಅದರಲ್ಲೂ ಡೆಲಿವರಿ ಸಮಯದ ಸೂಕ್ಷ್ಮ ಹೆಜ್ಜೆಗಳು ಚಿಕಿತ್ಸೆಗಳ ಬಗ್ಗೆ ಬರಹದಲ್ಲಿ ಬೆಳಕು ಚಲ್ಲಿದೆ. ತನ್ನ ಹುಟ್ಟಿದ ಹಬ್ಬದ ದಿನ ಹುಟ್ಟಿದ ಮಗುವಿನ ಜೊತೆ ಕೇಕ್ ಕಟ್ ಮಾಡಿದ ಸುಕನ್ಯಾ ಸಿಸ್ಟೆರ್ ನಿಜಕ್ಕೂ ಎಲ್ಲರಿಗೂ ಮಾದರಿ ಆಗುತ್ತಾರೆ. ನಾಲ್ಕನೇ ಕಥೆಯೇ “ಸ್ಥಿತ್ಯಂತರ” – ಅಬ್ಬಾ ಇಡೀ ಪುಸ್ತಕದಲ್ಲಿ ಸೆಂಟರ್ ಒಫ್ ಅಟ್ರಾಕ್ಷನ್ ಅನಿಸ್ತು ನನಗೆ. ಒಮ್ಮೆ ಓದಿದರೆ ತಿಳಿಯಲಿಲ್ಲ. ಮತ್ತೊಮ್ಮೆ ಓದಿದೆ. ಒಂದೊಂದೇ ಸಾಲುಗಳನ್ನು ಓದಿ ಅದಕ್ಕೆ ಮುಂದೆ ಕಥೆಯಲ್ಲಿ ಇರುವ ಲಿಂಕ್ ಅರ್ಥಮಾಡಿಕೊಳ್ಳೋದು ಒಂದು ಚಾಲೆಂಜ್ ನೇ. ದೇಶ ಅನ್ನೋ ದೊಡ್ಡ ವಿಷಯಗಳು ಸಾಧಾರಣ ವ್ಯಕ್ತಿ ಜೀವನಕ್ಕೆ ಸಂಬಂಧ ಹುಡುಕುವಂತೆ ಬರೆದ ಬರಹ ಲೇಖಕರ ಸೃಜನಶೀಲತೆಗೆ ಹಿಡಿದ ಕನ್ನಡಿ. ಪ್ರತಿಯೊಬ್ಬರೂ ಮಿಸ್ ಮಾಡದೇ ಓದಬೇಕಾದ ಕಥೆ ಅಂತ ಹೇಳಬಲ್ಲೆ.

“ಲೈಫ್ ಲೈನ್” ಅನ್ನೋ ಕಥೆ ಇಬ್ಬರು ಪ್ರೇಮಿಗಳ ನಡುವಿನ ಪ್ರೊಫೆಷನಲ್ ಇಗೋ, ಪ್ರಾಸ್ಟಿಟ್ಯೂಟ್ ಒಬ್ಬಳ ಬದುಕಿನ ಹೊಸ ತಿರುವು. ಕಥೆಯಲ್ಲಿ ಪ್ರೇಮಿಗಳ ಮನಸಿನ ತಳಮಳದ ಜೊತೆ ಮೆಡಿಕಲ್ ಸೈನ್ಸ್ ನಾ ಕೆಲವು ವಿಷಯಗಳ ಬಗ್ಗೆ ತಿಳುವಳಿಕೆ ನೀಡುತ್ತದೆ.
“ಮಿಸೆಸ್ ಕೆಂಪೇ ಮತ್ತು ಅಶೋಕ್” ಚಂದದ ಕಥೆ. ನಾಯಿ ಸಹವಾಸ ಮತ್ತು ಅದರ ಕಡಿತ, ಅದರ ಲಸಿಕೆಗಳು ಹೀಗೆ ಉತ್ತಮ ವಿಚಾರಗಳನ್ನು ಒಳಗೊಂಡಿದೆ. “ಛೆ ಒಮ್ಮೊಮ್ಮೆ ಹಿಂಗೆಲ್ಲ ಯಾಕಾದ್ರೂ ಆಗತ್ತೋ ” ನನಗೆ ತುಂಬಾ ಇಷ್ಟವಾದ ಕಥೆ. ಕಪ್ಪೆ ಒಂದರ ಬದುಕು, ಪ್ರೀತಿ, ಹಸಿವು ಮತ್ತೆ ಅದರ ಅಂತ್ಯದ ವರೆಗೆ ಎಷ್ಟು ಚನ್ನಾಗಿ ವರ್ಣಿದಿದ್ದರೆ. ಅದರಲ್ಲಿ ಆ ಹುಣ್ಣು ಹಸಿರು ಕಪ್ಪೆಯ ಅಂದ, ಮೈಮಾಟದ ವರ್ಣನೆ, ಎರೆಡು ಕಪ್ಪೆಗಳ ನಡುವಿನ ಪ್ರೀತಿ, ಪ್ರಣಯ ಅಬ್ಬಾ ಹೌದಲ್ಲ ಅವುಗಳಿಗೂ ಹೀಗೆಲ್ಲ ಭಾವನೆ ಇರಬಹುದಲ್ಲ ಅನಿಸುತ್ತದೆ. ಕಾರ್ ಚಕ್ರಕ್ಕೆ ಸಿಲುಕಿ ಒಂದೇ ಕ್ಷಣದಲ್ಲಿ ಪ್ರಾಣ ಕಳೆದುಕೊಳ್ಳುವ ಕಪ್ಪೆ, ಮಾನವನ ಸರ್ವಾಧಿಕಾರ ವರ್ತನೆಗೆ ತಲೆತಗ್ಗಿಸುವಂತೆ ಮಾಡುತ್ತದೆ. ಕಪ್ಪೆ ಯಕಶ್ಚಿತ್… ಮಾನವನ “shit man” ಅನ್ನುವ ಎರೆಡಕ್ಷರದ ಬಾಡಿಗೆ ಭಾಷೆಯ ಅಶ್ರುತರ್ಪಣ ಮಾತ್ರ ಸಲ್ಲುತ್ತದೆ ಅಷ್ಟೇ.. ಕಪ್ಪೆಯಂತೆ ಉಳಿದೆಲ್ಲ ಜೀವಿಗಳಿಗೂ ಅಷ್ಟೇ. ಅನ್ನೋ ಸಾಲುಗಳನ್ನು ಓದಿದಾಗ ನಮ್ಮ ಅಂತರಂಗದಲ್ಲಿ ನಮ್ಮ ಬಗ್ಗೆ ತಿರಸ್ಕಾರ ಮೂಡುತ್ತದೆ. ಪ್ರಾಣಿ ಪಕ್ಷಿಗಳಿಗೂ ನಮ್ಮಂತೆ ಬದುಕುವ ಹಕ್ಕಿದೆಯಲ್ಲವೇ. ಈ ಕಥೆಯ ಮೂಲಕ ಲೇಖಕರು ಪ್ರಾಣಿ ಪಕ್ಷಿಗಳ ಬಗೆಗಿನ ಕಳಕಳಿ ವ್ಯಕ್ತ ಪಡಿಸಿದ ರೀತಿ ಚನ್ನಾಗಿ ಇದೆ.

“ದೌಲತ್ ದರ್ಬಾದ್” ಹಿಂದಿನ ಪೀಳಿಗೆ, ಈಗಿನ ಪೀಳಿಗೆ, ಮುಂದಿನ ಪೀಳಿಗೆ, ಹೀಗೆ ಪ್ರತಿಯೊಬ್ಬರೂ ಓದಲೇ ಬೇಕಾದ ಕಥೆ. ಹಣ, ಅಸ್ತಿ ಗಳ ನಡುವೆ ಸಾಯುತ್ತಿರುವ ಸಂಬಂಧಗಳು, ಮಕ್ಕಳಿಗೆ ಬಳವಳಿಯಾಗಿ ಕೊಡುತ್ತಿರುವುದು ಸಂಬಂಧಗಳ ಪ್ರೀತಿಯನ್ನೆಲ್ಲ ಕೊಂದ ಹಣ, ಆಸ್ತಿಯನ್ನು ಮಾತ್ರ. ಸಂಸ್ಕಾರ ಕೊಡಲು ಮರೆಯುತ್ತಿದ್ದೇವೆ. ಪೋಷಕರು ಈ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳುವ ಅಗತ್ಯ ಇದೆ. ತುಂಬಾ ಚಂದದ ಕಥೆ. ನಾ ಅಂತೂ ಓದಿ, ನನ್ನ ಮಕ್ಕಳಿಗೂ ಹೇಳಿದೆ. “ಇಂಜೆಕ್ಷನ್” ಈ ಕಥೆ ಶುರುವಿನಲ್ಲಿ ಬಂದ ಅಲೆ, ಆ ಭಾಷೆ, ಆಟ ಎಲ್ಲವು ಒಂದು ಬೆಲೆ ಲೋಕ ತೋರಿಸುತ್ತಿರುತ್ತದೆ. ಆದರೆ ಈ ಇಂಜೆಕ್ಷನ್ ಅನ್ನೋ ಧಿಡೀರ್ ಘಟನೆ ಒಮ್ಮೆಲೇ ಬೇರೆಯದೇ ಜಗತ್ತಿಗೆ ಕರೆ ತರುತ್ತದೆ. ವೈದ್ಯರ ಬದುಕಿನ ಇನ್ನೊಂದು ಮುಖ, ಪ್ರತಿ ನಿತ್ಯ ಅದೆಷ್ಟು risk ಗಳ ಜೊತೆ ಅವರು ಬಡಿದಾಡುತ್ತಿರುತ್ತಾರೆ. ಅವರ ಫ್ಯಾಮಿಲಿ ಯವರ ಬಗ್ಗೆ ಕೂಡಾ ಅಷ್ಟೇ ಹೆಮ್ಮೆ ಮೂಡುತ್ತದೆ. ಎಲ್ಲ ವೈದ್ಯಕೀಯ ಸಿಬ್ಬಂದಿಗಳಿಗೂ ಹೃದಯ ಪೂರ್ವಕ ನಮನ ಹೇಳಬೇಕು ಅನಿಸುತ್ತದೆ. ತೀರಾ ಮನಸಿಗೆ ಹತ್ತಿರವಾಗುವ ಕಥೆ. “ನಶೆ ” ಯುವ ಜನತೆಯ, ಈ ಸ್ಮಾರ್ಟ್ ಫೋನ್ ಪೀಳಿಗೆಯ ಜೀವನದ ಒಂದು ಕರಾಳ ಮುಖ. ಲಿವ ಇನ್ ಟುಗೆದರ್ ಅನ್ನೋ ಪದ್ಧತಿ ಯ ಒಳ ಹೊರವು ಎಷ್ಟು ಚನ್ನಾಗಿ ವರ್ಣಿಸಿದ್ದಾರೆ. ಇಲ್ಲೀ ನಶೆ, ಯಾವುದೇ ಆಗಿರಲಿ ಮಧ್ಯ, ಕಾಮ, ಅಥವಾ ಬೇರೆ ಯಾವುದೇ ಆಗಿರಲಿ ಅವು ಕ್ಷಣಿಕ. ಮತ್ತು ಅವುಗಳ ಸುಳಿಯಲ್ಲಿ ಸ್ನೇಹ ಪ್ರೀತಿಗಳು ಕೂಡಾ ವಿಶ್ವಾಸ ಕಳೆದುಕೊಂಡು ಬಿಡುತ್ತವೆ ಅನ್ನೋ ಸಂದೇಶ ತುಂಬಾ ಚನ್ನಾಗಿ ಇದೆ. “ಚಡಪಡಿಕೆ” ಯುವ ಪ್ರೇಮಿಗಳ ಪ್ರೇಮ ವಿವಾಹವನ್ನು ಹಿರಿಯರು ನಿಶ್ಚಯಿಸುವ ಮಧ್ಯದ ಗೊಂದಲಗಳು, ನಾ ಹೆಚ್ಚು, ನಾ ಹೆಚ್ಚು ಅನ್ನೋ ಇಗೋ. ಅದರ ನಡುವೆ ಮದುವೆ ಓಲಗ… ಮುದ್ದಾದ ಕಥೆ..

ಇಷ್ಟು ಒಳ್ಳೆಯ ಹನ್ನೆರೆಡು ಕಥೆಗಳು. ಇಲ್ಲಿನ ಮೂಲ ಆಕರ್ಷಣೆ ಅಲ್ಲಲ್ಲಿ ಬಳೆಸಿದ ನಮ್ಮ ಉತ್ತರ ಕರ್ನಾಟಕ ದ ಭಾಷೆ ಅದರಲ್ಲೂ ನಮ್ಮ ಧಾರವಾಡ ಭಾಷೆ ಸೊಗಸಾಗಿ ಮೂಡಿದೆ. ಅಗತ್ಯಕ್ಕೆ ತಕ್ಕಷ್ಟು ಶೃಂಗಾರದ ವರ್ಣನೆ, ಪದ ಪ್ರಯೋಗ ಓದುಗರನ್ನು ರಂಜಿಸುತ್ತದೆ. “ಚಿಗುರೆಲೆ ಪ್ರಕಾಶನ” ಹುಬ್ಬಳ್ಳಿ ಇಂದ ಪ್ರಕಾಶನಗೊಂಡ ಈ ಪುಸ್ತಕದ ಮುಖಪುಟದಲ್ಲಿ ಆಕರ್ಷಣೀಯವಾಗಿದೆ. ಪೇಜ್ ಕ್ವಾಲಿಟಿ ಕೂಡಾ ಉತ್ತಮವಾಗಿದೆ. ಒಂದು ಸರ್ತಿ ಗೆ ಓದಿ ಮುಗಿಸಿ ಇಡುವಹಾಗಿಲ್ಲ. ಅದೇನೋ ಇತ್ತಲ್ಲ ಅಂತ ನೆನಪು ಮಾಡಿಕೊಂಡು ಮತ್ತೆ ಮತ್ತೆ ಓದುವಂತಹ ಪುಸ್ತಕ. ಲೇಖಕರಿಗೆ ಅಭಿನಂದನೆಗಳು. ಇನ್ನೊ ಒಳ್ಳೊಳ್ಳೆ ಪುಸ್ತಕಗಳು ಬರಲಿ. ಕನ್ನಡ ಸಾಹಿತ್ಯ ಲೋಕಕ್ಕೆ ಅವರ ಸೇವೆ ಹೀಗೆ ಮುಂದುವರೆಯಲಿ ಅಂತ ಆಶಿಸುತ್ತೇನೆ.

-ಭಾರ್ಗವಿ ಜೋಶಿ…..


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x