ಪ್ರೇಮ ಪತ್ರಗಳು

ಮನಸ್ಸಿನಾಳದ ಪ್ರೀತಿ: ನಾಗರತ್ನಾ ಗೋವಿಂದನ್ನವರ.


ಜೀವದ ಗೆಳೆಯಾ,

ನೀನು ಹೇಗಿರುವೆ? ಬಾಲ್ಯದಿಂದ ಸ್ನೇಹಿತೆಯಾಗಿದ್ದವಳು, ಪ್ರೇಮಿಯಾಗಿ, ಬದುಕಿಗೆ ಬಾಳ ಸಂಗಾತಿಯಾಗಿ ನಿನ್ನನ್ನು ಅದೆಷ್ಟು ಹಚ್ಚಿಕೊಂಡಿರುವೆ, ನೀನಂದ್ರೆ ನಂಗೆ ಅದೆಷ್ಟು ಇಷ್ಟಾ ಎಂದು ಹೇಳೋಕೆ ಶಬ್ದಗಳಿಲ್ಲಾ. ಒಂದೆ ಮಾತಲ್ಲಿ ಹೇಳುವುದಾದರೆ ನನ್ನ ಹೃದಯದಲ್ಲಿ ಮೊಳಕೆಯೊಡೆದ ಮೊದಲ ಹಾಗೂ ಕೊನೆಯ ಪ್ರೀತಿ ನೀನು. ನನ್ನ ತುಂಟಾಟಗಳು ಕೆಲವೊಂದು ಸಲ ನಿನಗೆ ಇಕ್ಕಟ್ಟಿಗೆ ಸಿಲುಕಿಸಿದ್ದು ನಿಜ, ಆಗ ಮದುವೆಯಾದ ಮೇಲಾದರೂ ನಿನ್ನ ತುಂಟತನ ಬಿಡು ಎಂದು ಹುಸಿಮುನಿಸು ತೋರಿದ್ದೆ. ಮದುವೆಯಾದ ಮೇಲು ಪ್ರೇಮಿಗಳಾಗಿಯೆ ಇರಬೇಕು ಎಂದಿದ್ದೆ ಅದಕ್ಕೆ ನೀನು ಒಪ್ಪಿಕೊಂಡಿದ್ದೆ, ಹಾಗೇಯೆ ಇದ್ವಿ ಕೂಡ. ನೀನೆ ನನ್ನ ಪುಟ್ಟ ಪ್ರಪಂಚ ಆಗಿದ್ದೆ ಆದರೆÉ ನಮ್ಮ ಪ್ರೀತಿ ಕಂಡು ಆ ದೇವರಿಗೆ ಅಸೂಯೆ ಆಗಿರಬೇಕು ಅನಿಸ್ತಿದೆ. ಕಾರಣವಿಲ್ಲದೆ ನೀನು ನನ್ನ ಮೇಲೆ ಕೋಪಿಸಿಕೊಂಡೆ, ನನ್ನನ್ನು ಬೈದೆ, ಅವಮಾನ ಮಾಡಿದೆ ಆದರೂ ನಿನ್ನ ಮೇಲೆ ಒಂದು ಕ್ಷಣಕ್ಕೂ ನನಗೆ ಬೇಸರವಾಗಲಿ, ಕೋಪವಾಗಲಿ ಬರಲಿಲ್ಲ ಏಕೆಂದರೆ ಈ ಹೃದಯದ ತುಂಬಾ ನಿನಗಾಗಿ ತುಂಬಿರೋದು ಅಪಾರವಾದ ಪ್ರೀತಿಯೆ ಹೊರತು ಕೋಪಕ್ಕೆ, ಬೇಸರಕ್ಕೆ ಸ್ಥಳವಿಲ್ಲ.

ನೀನ್ನ ಕೋಪದ ಹಿಂದೆ ನನಗೆ ಕಾಣಿಸಿದ್ದು ಪ್ರೀತಿ. ನಿನ್ನ ಪ್ರತಿ ಮಾತಿನಲ್ಲೂ ನಾನು ಹುಡುಕುತ್ತಿದ್ದದ್ದು ಪ್ರೀತಿ ಮಾತ್ರ. ನಾನು ನಿನ್ನ ಮೇಲಿರುವ ಪ್ರೀತಿಯನ್ನು ಅದು ಹೇಗೆ ವ್ಯಕ್ತ ಪಡಿಸಲಿ. ನನಗೆ ನಿನ್ನನ್ನು ಇಂದ್ರ, ಚಂದ್ರ ಎಂದೆಲ್ಲ ಹೋಗಳೊಕೆ ಬರಲ್ಲಾ . ಕವಿಗಳ ಹಾಗೆ ಕವನದಲ್ಲಿ ವರ್ಣಿಸೊಕು ಬರಲ್ಲಾ ಆದರೆ ನನ್ನ ಹೃದಯದ ಪ್ರತಿ ಬಡಿತವು ನೀನೆ ಆಗಿರುವೆ. ನಿನಗೆ ನೆನಪಿದೆಯಾ ಪ್ರೇಮಿಗಳ ದಿನದಂದು ನೀನು ನನ್ನ ಜೊತೆಯಲ್ಲಿಯೆ ಇರಬೇಕೆಂದು ನಾನು ಹಟ ಮಾಡಿದ್ದೆ ಆದರೆ ನೀನು ಏನೊ ಕೆಲಸ ಎಂದು ಊರಿಗೆ ಹೋಗಿದ್ದೆ. ಆಗ ನಿನ್ನ ಮೇಲೆ ಮೊದಲನೆಯ ಸಲ ನನಗೆ ತುಂಬಾ ಕೋಪ ಬಂದಿತ್ತಾದರೂ ಅದು ಕೇವಲ ಕೆಲವು ಕ್ಷಣಗಳವರೆಗೆ ಮಾತ್ರ ಏಕೆಂದರೆ ನನಗೆ ತಿಳಿದಿತ್ತು ಪ್ರೀತಿಯನ್ನು ವ್ಯಕ್ತಪಡಿಸಲು ಪ್ರೇಮಿಗಳ ದಿನವೆ ಮೀಸಲಲ್ಲಾ. ನೀನು ನನ್ನ ಜೊತೆ ಇರುವ ಪ್ರತಿ ದಿನವು ನನಗೆ ಪ್ರೇಮಿಯ ದಿನವೆ ಎಂದು. ನೀನು ನನ್ನ ಜೊತೆ ಇದ್ದಾಗ ನಿನ್ನನ್ನು ನಾನು ಅದೆಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿದೆ. ನಿನಗೆ ಬಡತನವಿದ್ದರೂ ಪರವಾಗಿಲ್ಲಾ, ನಿನ್ನ ಪ್ರೀತಿಗೆ ಬಡತನವಿಲ್ಲದಿದ್ದರೆ ಸಾಕೆಂದುಕೊಂಡಿದ್ದೆ.

ನೀನು ಹಾಗೆಯೆ ಇದ್ದೆ. ಅದೆಷ್ಟು ಪ್ರೀತಿಸುತ್ತಿದ್ದೆ ನನ್ನ ನೆನಪಿದೆಯಾ ನಿನಗೆ. ಇದ್ದಕ್ಕಿದ್ದ ಹಾಗೆ ನಿನ್ನ ಪ್ರೀತಿಗೂ ಬಡತನ ಬಂದಿತಲ್ಲಾ ಏಕೆಂದು ತಿಳಿಯದಾದೆ. ನಮ್ಮಿಬ್ಬರ ಪ್ರೀತಿಯೆಂಬ ಬೆಳದಿಂಗಳಲ್ಲಿ ನೋವಿನ ಕತ್ತಲು ಜೀವನ ತುಂಬೆಲ್ಲ ತುಂಬಿತಲ್ಲಾ ಇದಕ್ಕೆ ಕಾರಣವೆನೆಂದು ಹೇಳುವೆಯಾ? ನಾನು ಎಂದಾದರೂ ನಿನಗೆ ಬೆಲೆ ಬಾಳುವ ವಸ್ತು ಕೊಡಿಸು ಎಂದು ಕೇಳಿದ್ದಿನಾ? ನಾನು ಕೇಳಿರುವುದು ನನಗಾಗಿ ನಿನ್ನ ಸಮಯ, ನಿನ್ನ ಪ್ರೀತಿ ಅಷ್ಟೆ ಅಲ್ಲವೆ! ಏಕೆಂದರೆ ನನಗೆ ಗೊತ್ತು ಪ್ರೀತಿಗಿಂತ ಅಮೂಲ್ಯವಾದ ವಸ್ತು ಜಗತ್ತಿನಲ್ಲಿ ಬೇರೊಂದಿಲ್ಲವೆಂದು. ಅದಕ್ಕೆ ಅಲ್ಲವೆ ನೀನು ಪ್ರೀತಿಯಿಂದ ನನಗೆ ಒಂದು ಗುಲಾಬಿ ಹೂವು ನೀಡಿದಾಗಲೂ ಅದೆಷ್ಟು ಖುಷಿಪಟ್ಟಿದ್ದೆ. ಆದರೂ ನನ್ನ ಪ್ರೀತಿ ನಿನಗೆ ಬೇಡವಾಯಿತಲ್ಲಾ ಏಕೆಂದು ತಿಳಿಯದಾಗಿದೆ. ಜೊತೆ ಬದುಕೊದಿಕ್ಕೆ ನೂರು ಕಾರಣಗಳು ಬೇಕು ಆದರೆ ದೂರಾ ಆಗೊದಿಕ್ಕೆ ಒಂದೆ ಒಂದು ಸಣ್ಣ ಕಾರಣವು ಸಾಕಾಯಿತಲ್ಲಾ ನಿನಗೆ. ನೀನು ನನ್ನಿಂದ ದೂರ ಹೊರಟು ನಿಂತಾಗ ನಾನು ಓಡಿ ಬಂದು ನಿನ್ನ ಅಪ್ಪಿಕೊಂಡು ಅತ್ತುಬಿಟ್ಟಿದ್ದೆ. ನಿನ್ನ ಬಿಟ್ಟು ಬದುಕಿರಲಾರೆ ಹೋಗಬೇಡವೆಂದು ತಡೆದಾಗ ನೀನು ನನ್ನ ಹಣೆಗೆ ಮುತ್ತಿಟ್ಟು ಏನು ಮಾತನಾಡದೆ ಹೊರಟುಹೋದೆ.

ನೀನು ಹೊರಟುಹೋದ ಆ ಕ್ಷಣ ನಿನ್ನಿಲ್ಲದೆ ಪ್ರಪಂಚವೆ ಶೂನ್ಯವೆನಿಸಿ ನೀರಿನಿಂದ ಆಚೆ ತಗೆದ ಮೀನಿನಂತೆ ನಾನು ಒದ್ದಾಡಿದ ಕ್ಷಣಗಳನ್ನ ಹೇಗೆ ಹೇಳಲಿ ನಿನಗೆ, ದೂರಾಗಿರುವ ನೀನು ಒಂದು ದಿನ ನನ್ನ ಹತ್ತಿರ ಬರುವೆ ಎಂದು ನಾನು ಖಂಡಿತ ನೀರಿಕ್ಷಿಸಿರಲಿಲ್ಲಾ. ಬಂದೆಯೆಲ್ಲಾ ಎಂದು ಒಂದು ಕ್ಷಣ ಖುಷಿ ಪಟ್ಟರೂ ನಿನ್ನ ಕಣ್ಣುಗಳಲ್ಲಿ ನನಗಾಗಿ ಪ್ರೀತಿ ಕಾಣಿಸದೆ ಇರುವುದು ಮನಸ್ಸಿಗೆ ನೋವುಂಟು ಮಾಡಿತು. ಯಾವುದೊ ಸ್ವಾರ್ಥಕ್ಕೆ ನೀನು ಹತ್ತಿರ ಬಂದಿದ್ದೆ ಹೊರತು ನನ್ನ ಮೇಲಿನ ಪ್ರೀತಿಯಿಂದಲ್ಲಾ ಎಂದೆನಿಸಿದಾಗ ನನ್ನ ಕಣ್ಣಂಚಿನಲ್ಲಿ ನೀರು ಜಿನುಗಿತು. ಆ ಕ್ಷಣಕ್ಕೆ ಆ ದೇವರು ಅದೆಷ್ಟು ನಿರ್ದಯಿ ಅನಿಸಿತು. ಪ್ರೀತಿಸುವ ಪ್ರತಿ ಹೃದಯದಲ್ಲೂ ಪ್ರೀತಿ ಕೊನೆಯವರೆಗೂ ಇರುವಂತೆ ಮಾಡಿದ್ದರೆ ಪ್ರಪಂಚದಲ್ಲಿ ಎಲ್ಲ ಪ್ರೇಮಿಗಳು ಸುಖವಾಗಿರುತ್ತಿರಲಿಲ್ಲವೇ! ಎಂದೆನಿಸಿದಾಗ ದೇವರ ಮೇಲು ಕೋಪ ಬಂದಿತ್ತು. ನೀನು ನೂರು ಸುಳ್ಳು ಹೇಳಿ ಜೋತೆಲಿದ್ದರೂ ನಾನು ಕ್ಷಮಿಸಬಹುದಿತ್ತೆನೊ ಆದರೆ ಪ್ರೀತಿಯಿಲ್ಲದ ಒಂದು ಕ್ಷಣವನ್ನು ನಾನು ಸಹಿಸಲಾರೆ ಗೆಳೆಯಾ. ಯಾರ ಆಯಸ್ಸು ಎಷ್ಟು ಎಂದು ಯಾರಿಗೂ ತಿಳಿಯದು, ಈ ಬದುಕಿನ ನಾಲ್ಕು ದಿನಗಳು ಎಲ್ಲರ ಜೋತೆ ಪ್ರೀತಿಯಿಂದ ಇರಬೇಕು ಅಂದುಕೊಂಡಿರೊಳು ನಾನು ಅದಕ್ಕೆ ಅನಿಸತ್ತೆ ನೀನು ನನಗೆ ಎಷ್ಟೆ ನೋವು ಕೊಟ್ಟಿದ್ದರೂ ನನಗೆ ನಿನ್ನ ಮೇಲಿರುವ ಪ್ರೀತಿ ಕಡಿಮೆಯಾಗಿಲ್ಲಾ. ಮನಸ್ಸಿನಾಳದಲ್ಲಿ ಹುಟ್ಟಿರುವ ಪ್ರೀತಿ ಯಾವತ್ತಾದರೂ ಬತ್ತಲು ಸಾಧ್ಯವೇ?

ನೀನು ಎಲ್ಲಾದರೂ ಇರು ಸಂತೋಷವಾಗಿರು. ನಾವಿಬ್ಬರೂ ಜೊತೆಯಲಿ ಕಳೆದ ಪ್ರತಿ ಮಧುರ ಕ್ಷಣಗಳ ಸಿಹಿನೆನಪುಗಳು ಜೀವನವೀಡಿ ನಿನ್ನಿಂದ ದೂರ ಇರೊಕೆ ಸಂಜೀವನಿ ಇದ್ದಂತೆ. ಏನೆ ಆದರೂ ನನಗೊಂದು ಪುಟ್ಟ ಆಸೆ ಇದೆ. ನನ್ನ ಜೀವನದ ಕೊನೆಯ ಕ್ಷಣಗಳಲ್ಲಿ ನಿನ್ನನ್ನು ಕಣ್ತುಂಬ ತುಂಬಿಕೊಳ್ಳುವಾಸೆ, ನಿನ್ನನ್ನು ಬಿಗಿದಪ್ಪಿ ವಿರಹದ ಅಂತ್ಯವನ್ನು ಸಂಭ್ರಮಿಸುವ ಆಸೆ. ನಾವು ಕಳೆದ ಸುಂದರ ಕ್ಷಣಗಳನ್ನು ಮತ್ತೆ ನೆನಪಿಸಿಕೊಳ್ಳುವ ಆಸೆ. ಇನ್ನು ಸಮಯವಿದೆ ನನ್ನ ಪ್ರೀತಿಯನ್ನು ಅರ್ಥ ಮಾಡಿಕೊಳ್ಳುವೆಯೆಂದು ನಂಬಿರುವೆ. ನನ್ನ ಬದುಕಿನ ಕೊನೆಯ ಕ್ಷಣಗಳಲ್ಲಿ ನಿನಗಾಗಿ ಕಾಯುವೆ. ಗೆಳೆಯಾ ನನಗಾಗಿ ನಿನ್ನ ಸಮಯವನ್ನು ನೀಡುವೆಯಾ? ನನ್ನ ಹತ್ತಿರ ಬರುವೆಯಾ?

ಇಂತಿ
ಎಂದೆಂದಿಗೂ ನಿನ್ನವಳು


ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಮನಸ್ಸಿನಾಳದ ಪ್ರೀತಿ: ನಾಗರತ್ನಾ ಗೋವಿಂದನ್ನವರ.

  1. ಅದ್ಭುತವಾದ ಭಾವನೆಗಳು..
    ಪ್ರೀತಿಯಲ್ಲಿ ಇರಲೀ ಹಂಕೆ…ಇರಕೂಡದು ಯಾವುದು ಶಂಕೆ.. ಭಾವನೆಗಳ ಕನಸಲ್ಲಿ ನೀ ಹಾರಿದೆ ಚಂದ್ರಲೋಕಕ್ಕೆ.. ಆದರೆ ಅರ್ಥವಾಗಲಿಲ್ಲ ನಿನ್ನ ಪ್ರೀತಿ ನಿನ್ನವರ ಮನಕ್ಕೆ..ಇದ ನೀ ತಿಳಿದು ಕೋ ಮಂಕೆ… ಆದರೂ ನಿನ್ನ ಪ್ರೀತಿ ಭಾವನೆಗಳಲ್ಲಿ ತುಂಬಿದೆ ಆಶಾವಾದ ತುಂಬಿದ ಲವಲವಿಕೆ..

  2. prem patra spardegoskar baridiro kaalpanika patra adu. nan kalpaneyalli mudi bandirodu ………adaru nim comment ge danyavadgalu

Leave a Reply

Your email address will not be published. Required fields are marked *