ಪ್ರೀತಿಯ? ಹುಡಗಿ.
ನಾನಿಲ್ಲಿ ಕ್ಷೇಮವೋ! ಅಲ್ಲವೋ! ನಿನಗೆ ತಿಳಿಯದ ವಿಷಯ. ಆದರೂ ನಾನು ಕ್ಷೇಮ. ನೀನು ಹೋದ ಮರುಗಳಿಗೆಯಿಂದ ಒದ್ದಾಡಿದೆ , ಚಡಪಡಿಸಿದೆ, ಊಟ ಸೇರಲಿಲ್ಲ , ನಿದ್ದೆ ಬರಲಿಲ್ಲ, ಹಿಮಾಲಯದ ಸನ್ಯಾಸಿಯಂತೆ ಮುಖದ ತುಂಬೆಲ್ಲಾ ಗಡ್ಡ ಬೆಳೆದವು, ನೀರು ಕಾಣದ ಮುಖ ಕಪ್ಪಿಟ್ಟಿತು, ನನ್ನ ನೋಡಿದವರು ಹುಚ್ಚನೆಂದರು, ಇನ್ನೂ ಕೆಲವರು ಅನಾಥನೆಂದರು, ಉಳಿದವರು ಮಾನಸಿಕ ಅಸ್ವಸ್ಥನೆಂದರು. ಆದರೆ ನಾನೇನಾಗಿದ್ದೆ ? ಉಹುಂ ನನಗೂ ತಿಳಿಯದು. ಅವರೆಲ್ಲರೂ ಕೊಟ್ಟ ಸರ್ಟಿಫಿಕೇಟ್ ನಲ್ಲಿ ಯಾವುದಾದರೂ ಒಂದು ವ್ಯಕ್ತಿತ್ವ ಇರಬಹುದೇನೋ! ಅಲ್ಲವಾಗಿದ್ದರೆ ನೋಡುಗರ ದೃಷ್ಟಿಯಲ್ಲಿ ಅವರವರ ದೃಷ್ಟಿಯಂತೆ ನಾನಾಗಿದ್ದೆ. ಇಂದೋ ನಾಳೆಯೋ ನೀನು ಮತ್ತೆ ನನ್ನೆದೆಯ ಕದ ತಟ್ಟುವೆಯೆಂದು ಚಾತಕ ಪಕ್ಷಿಯಂತೆ ಕಾದು ಕಾದು ಕಣ್ಣುಗಳು ಮಂಜಾದವು ನೀನು ಬರಲೇ ಇಲ್ಲ ನೋಡು! ಎಷ್ಟೊಂದು ವಿರಹದ ಕ್ಷಣಗಳು ಅನುಭವಿಸಿದೆ; ಅದು ನಿನಗಾದರೂ ಹೇಗೆ ಅರ್ಥವಾದೀತು? ನನ್ನ ಕಂಡು ಅದೆಷ್ಟು ದಿನಗಳು ಕಳೆದವು ನಿನಗೆ. ಇಷ್ಟು ವರುಷ ಕಳೆದರು ನಿನ್ನ ನೆನಪು ಮಾತ್ರ ಮರೆಯಲು ಆಗ್ಲಿಲ್ಲ ಈ ನಿನ್ನ ಭಗ್ನ ಪ್ರೇಮಿಗೆ! ಹಾಗಾಗಿಯೇ ಈಗೊಂದು ಪತ್ರ ಬರೆಯೋದಕ್ಕೆ ಕೂತಿದ್ದವನಿಗೆ ಸಹಸ್ರ ನೆನಪುಗಳ ಮಳೆಯೇ ಸುರಿಯುತ್ತಿದೆ, ಬರೆಯುವ ಪತ್ರದಲ್ಲಿ ಯಾವುದನ್ನು ದಾಖಲಿಸಲಿ ಅನ್ನುವುದೇ ತಿಳಿಯುತ್ತಿಲ್ಲ.
ಆದರೂ ಒಂದಿಷ್ಟು ವಿಷಯಗಳನ್ನು ಕೇಳಲೇಬೇಕು ನಾನು. ಮೊದಲ ಸಲ ಪ್ರೇಮ ನಿವೇದನೆ ಮಾಡಿದಾಗ ತೊಟ್ಟುಕೊಂಡು ಬಂದಿದ್ದಿಯಲ್ಲ ಆ ಕೆಂಪು ಲಂಗ ಅದು ಈಗಲೂ ನಿನ್ನ ಬಳಿ ಇದೆಯೇ? ಇದ್ದರೆ ; ಅದನ್ನು ನೋಡಿದಾಗ ನನ್ನ ನೆನಪು ನಿನಗೆ ಬರಲಿಲ್ಲವೋ? ಅಥವಾ ನನ್ನ ತೊರೆದ ದಿನ ಲಂಗವನ್ನು ಬಿಸಾಕಿ ಬಿಟ್ಟೆಯೇ? ಇಲ್ಲ ಇಲ್ಲ ಹಾಗೆ ಮಾಡಿರಲಾರೆ. ಅಷ್ಟಕ್ಕೂ ನಮ್ಮಿಬ್ಬರ ಪ್ರೀತಿಗೆ ಸಾಕ್ಷಿ ಏನಿತ್ತು? ಸಮುದ್ರದ ಸಣ್ಣ ಮರಳು ಮತ್ತು ಅಲೆಗಳು ಅಲ್ಲವೇ! ಅವಕ್ಕಾದರೂ ಏನು ಗೊತ್ತಿತ್ತು ಎಲ್ಲಿಂದಲೋ ಬಂದ ಜೋಡಿ ಹಕ್ಕಿಗಳು ಕೆಲವೆ ದಿನಗಳಲ್ಲಿ ವಿರುದ್ಧ ದಿಕ್ಕಿಗೆ ಒಂದನೊಂದು ತೊರೆದು ಚಲಿಸುತ್ತವೆಂದು. ಗೊತ್ತಿದ್ದರೂ ಅಲೆಗಳಾದರೂ ಏನು ಮಾಡ್ಯಾವು ನಮ್ಮಂತಹ ಪ್ರೇಮಿಗಳು ವರುಷಕ್ಕೆ ಸಾವಿರ ಸಾವಿರ ಸಂಖ್ಯೆಯಲ್ಲಿ ಬರುತಿರುತ್ತಾರೆ-ಹೋಗುತಿರುತ್ತಾರೆ. ನನಗೆ ನಿನ್ನನ್ನು ಪ್ರೀತಿಸುವುದಷ್ಟೆ ಗೊತ್ತಿತ್ತು- ಆದರೆ ನಿನಗೆ! ನನ್ನನ್ನು ಬಿಟ್ಟು ಹೋಗುವುದು ಗೊತ್ತಿತ್ತು. ಆದರೂ ನೀನು ವಂಚಕಿ ಅಲ್ಲ. ಮೋಸಗಾತಿ ಅಲ್ಲ, ನಿರ್ದಯಿ ಹೆಣ್ಣಲ್ಲ, ನೀನೊಬ್ಬಳು ಮಾಟಗಾತಿ ಅಲ್ಲ -ಇದ್ಯಾವುದೂ ನೀನಲ್ಲದೆ ಹೋದರೆ ನೀನ್ಯಾರು? ನೀನೇ ಹೇಳಬೇಕು. ಈಗೇನು ನಿನ್ನ ಕಾಯಕ, ಯಾವ ದಾರಿಯಲ್ಲಿ ಒಬ್ಬಳೇ ಹೆಜ್ಜೆ ಹಾಕುತ್ತಿರುವೆ, ನನ್ನ ತೊರೆದು ಹೋದ ಮೇಲೆ ಸಂಕಟವಾಯ್ತೇ, ಇಲ್ಲ ಕೊಳೆಯಾದ ಬಟ್ಟೆಯನ್ನು ಕಳಚಿಕೊಂಡಂತಾಯಿತೇ, ಇದ್ಯಾವುದೂ ನನಗೆ ತಿಳಿಯದು. ಆದರೆ ನಿನಗೊಂದು ಮಹತ್ತರ ವಿಷಯ ಹೇಳಲಿಕ್ಕೆ ಪತ್ರ ಬರೆಯಲು ಕೂತು ಇಷ್ಟೆಲ್ಲಾ ಮಾತಾಡಿದೆ. ಈಗ ಹೇಳ್ತೀನಿ ಕೇಳು. . .
ನೀನು ಬಿಟ್ಟು ಹೋದ ಒಂದು ವರುಷ ಬಿಕ್ಷುಕನಂತೆ ಅಲೆದಾಡುವ ಬಾಳು ನನ್ನದಾಯಿತು. ಎಲ್ಲಿ ಕೂತು, ಎಲ್ಲಿ ಊಂಡು, ಎಲ್ಲಿ ಮಲಗಿದೇನೋ! ಆದರೆ ಕಾಲ ಚಕ್ರ ಉರುಳುತಿರುತ್ತದಲ್ಲ ಹಾಗೆಯೇ ನನ್ನ ಬದುಕಿನ ತಿರುವುಗಳು ಬದಲಾದವು. ಒಂದು ದಿನ ದಾರಿಯಲ್ಲಿ ನಡೆಯುತಿದ್ದವನಿಗೆ ವೃದ್ಧ ಅಜ್ಜಿಯೊಬ್ಬಳ ಬೇಟಿಯಾಯಿತು. ನಿಲ್ಲಲ್ಲೂ ನಿತ್ರಾಣ ಇಲ್ಲದೆ ಮಲಗಿದ್ದಳು, ಯಾರೋ ಕೊಟ್ಟ ತಂಗಳನ್ನ ಅರ್ಧ ತಿಂದು ಉಳಿದದ್ದು ಹಾಗೆ ಬಿದ್ದಿತ್ತು. ಅದನ್ನೂ ಕಾಗೆ ಗುಬ್ಬಿಗಳು ತಿನ್ನುತಿದ್ದವು. ಕರಳು ಚುರ್ರಂತು ; ಅವಳ ಮೈ ಮುಟ್ಟಿದರೆ ಕೆಂಡದಂತೆ ಸುಡುತಿತ್ತು. ಬಹುಶಃ ಜ್ವರ ಇರಬಹುದು. ಎಷ್ಟು ದಿನವಾಗಿತ್ತೋ ಏನು ಕಥೆಯೋ. ಅವಳ ಮೇಲೆ ಅಂತಃಕರಣ ಹುಟ್ಟಿತು. ಹತ್ತಿರದ ಆಸ್ಪತ್ರೆಗೆ ಅವಳನ್ನು ಎತ್ತಿಕೊಂಡು ನಡೆದು ಅವಳಿಗೆ ಚಿಕಿತ್ಸೆ ಕೊಡಿಸಿದೆ. ಎರಡೋ ಮೂರೋ ದಿನಕ್ಕೆ ಆ ವೃದ್ದೆಗೆ ಜ್ಞಾನ ಬಂತು. ಮಾತಾಡಿಸಿದೆ ಮಾತಾಡಿದಳು. ನಾನು ಚಿಕಿತ್ಸೆ ಕೊಡಿಸಿದ ಕೃತಜ್ಞತೆ ಸಲ್ಲಿಸಲು ಅವಳ ಕಣ್ಣುಗಳು ಕಾತುರದಲ್ಲಿದ್ದವು. ಅವಳು ತನ್ನ ಕಥೆಯನ್ನೆಲ್ಲ ಹೇಳಿದಳು, ತನ್ನಗೊಬ್ಬ ಮಗನಿದ್ದ ಅವನು ಯಾವುದೋ ಹುಡಗಿಯನ್ನು ಪ್ರೀತಿಸಿ ಮದುವೆಯಾಗಿ ದಿಕ್ಕು ದೆಸೆ ಇಲ್ಲದೆ ಹೊರಟೋದ ಅಂತ. ಅವಳ ಕಥೆ ದೊಡ್ಡದು ನಾನೀಲ್ಲಿ ಸೂಕ್ಷ್ಮವಾಗಿ ಹೇಳಿದ್ದೇನೆ. ನಾನು ತನ್ಮಯನಾಗಿ ಕೇಳಿದೆ. ಕಣ್ಣಂಚಿನಲ್ಲಿ ನೀರು ಬರದೇ ಇರಲಿಲ್ಲ. ಅಲ್ಲಿಂದಲೇ ನಾನು ಬದಲಾಗಿದ್ದು ಅಥವಾ ಆ ವೃದ್ದೆ ಬದಲಾಯಿಸಿದ್ದು. ಅವತ್ತೆ ನನ್ನ ಕೊಳೆಯಾದ ಬಟ್ಟೆಗಳನ್ನು ಕಳಚಿ ಹೊಸ ಬಟ್ಟೆ ತೊಟ್ಟೆ. ನಾಲ್ಕೈದು ದಿನ ಅಲೆದಾಡಿ ಕೆಲಸಕ್ಕೆ ಸೇರಿಕೊಂಡು ತಿಂಗಳ ಸಂಬಳದ ನೌಕರನಾದೆ. ಸಣ್ಣದಾದರೂ ಚೊಕ್ಕವಾದ ಕೋಣೆಯೊಂದನ್ನು ಬಾಡಿಗೆ ಪಡೆದೆ ಅದರಲ್ಲಿ ಆ ಹಿರಿಯ ಜೀವವನ್ನು ತಂದಿಟ್ಟು ಅವಳ ಬೇಕು ಬೇಡಗಳನ್ನು ನೋಡಿಕೊಂಡು ನನ್ನ ಊಟ ಬಟ್ಟೆ ಎಲ್ಲವನ್ನೂ ಸುಧಾರಿಸಿಕೊಂಡೆ. ದಿನಕಳೆದಂತೆ ಆ ಕೋಣೆಯಲ್ಲಿ ಹತ್ತು ಜನ ವೃದ್ದೆಯರು ಸೇರಿದರು ಎಲ್ಲರೂ ನಿರ್ಗತಿಕರೆ. ಈಗ ಅವರ ಸಂಖ್ಯೆ ಐವತ್ತಾಗಿದೆ. ಅವರನ್ನು ಬಹಳಷ್ಟು ಪ್ರೀತಿಯಿಂದ ಸಲುಹಿದೆ ಸಲುಹುತಿದ್ದೇನೆ ಮುಂದೆ ಸಲುಹುತ್ತೇನೆ. ಪ್ರೀತಿ ಅರ್ಥ ಅವರೊಂದಿಗೆ ಇದ್ದಾಗ ನನಗೆ ಅರ್ಥವಾಗಿದೆ. ಅವರನ್ನ ಎಷ್ಟು ಪ್ರೀತಿಸುತ್ತೇನೆಂದರೆ. ಬಹುಶಃ ನಿನಗಿಂತಲೂ ಹೆಚ್ಚು.
ಈಗ ಹೊಸದೊಂದು ಜಾಗ ತೆಗೆದುಕೊಂಡು ದೊಡ್ಡದಾದ ಬಂಗಲೆ ಕಟ್ಟಿಸಿದ್ದೀನಿ ಅದು ನನಗಲ್ಲ ನಿರ್ಗತಿಕ ವೃದ್ದೆಯರು ವೃದ್ದರು ಇರುವುದಕ್ಕೆ . ಅದರ ಹೆಸರು ‘ಪ್ರೀತಿ ನಿಲಯ ವೃದ್ಧಾಶ್ರಮ’ ಇನ್ನೂ ಮೂರು ದಿನದಲ್ಲಿ ಅದರ ಉದ್ಘಾಟನಾ ಸಮಾರಂಭ ಇದೆಯಾದ್ದರಿಂದ ನೀನು ಇಲ್ಲಿ ಹಾಜರಾಗಬೇಕು ಎಂದು ಕೇಳಿಕೊಳ್ಳುತ್ತೇನೆ. ಮದುವೆ ಆಗಿದ್ದರೂ ನಿನ್ನ ಮಕ್ಕಳ- ಗಂಡನ ಜೊತೆ ಬರುವಿ ಎಂದು ಭಾವಿಸುತ್ತೇನೆ. ನೆನಪಿರಲಿ ನಿನ್ನ ಮೇಲೆ ನನಗೆ ಮೋಹವಿಲ್ಲ ಪ್ರೀತಿ ಇಲ್ಲ. ಕೇವಲ ಒಬ್ಬ ಒಳ್ಳೆಯ ಸ್ನೇಹಿತ ತನ್ನ ಯಾವದೋ ಸಮಾರಂಭಕ್ಕೆ ಸ್ನೇಹಿತರನ್ನು ಕರೆಯುವಂತೆ ಕರೆಯುತಿದ್ದೇನೆ. ಬರುತ್ತಿ ಅಲ್ಲವೇ?
ಇಂತಿ ನಿನ್ನ ಗೆಳೆಯ