ಎಲ್ಲರೂ ನನ್ನ ಬಹಳ ಮಾತುಗಾರನೆನ್ನುತ್ತಾರೆ ಆದರೆ ಅದೇಕೊ ಗೊತ್ತಿಲ್ಲ ನಿಮ್ಮನ್ನು ಕಂಡೊಡನೆ ಹೃದಯದಲ್ಲಿ ಕಂಪನಗಳು ಶುರುವಾಗಿಬಿಡುತ್ತವೆ. ಅದ್ಯಾವುದೋ ಆತಂಕ, ಹೇಳಿಕೊಳ್ಳಲಾಗದ ಭಯ ಆವರಿಸಿ ಮನಸು ತನ್ನ ಸ್ಥಿಮಿತವನ್ನೇ ಕಳೆದುಕೊಂಡು ಮೌನಕ್ಕೆ ಶರಣಾಗಿಬಿಡುತ್ತಿದೆ. ಅತ್ತ ಹೇಳಲಾಗದೆ ಇತ್ತ ಸುಮ್ಮನಿರಲಾರದೆ ಚಡಪಡಿಸುತ್ತಾ ಉಳಿದ ಮಾತುಗಳೆಲ್ಲಾ ದಿನೇ ದಿನೇ ಹೃದಯವನ್ನು ಭಾರವಾಗಿಸುತ್ತಾ ಹೋಗಿವೆ. ಹಾಗಾಗಿಯೇ ಈ ಪತ್ರದ ಮೂಲಕ ನನ್ನ ಮನದ ಮಾತುಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿರುವೆ. ನೀವು ಸುಸಂಸ್ಕೃತ ಕುಟುಂಬದಿಂದ ಬಂದವರು. ಈ ಪತ್ರ ಕಂಡೊಡನೆ ನಿಮಗೆ ಕೋಪ ಬರಬಹುದು ಅಥವಾ ನನ್ನ ಮೇಲೆ ದ್ವೇಷ ಉಂಟಾಗಬಹುದು ಆದರೆ “ಪತ್ರವನ್ನು ಪೂರ್ತಿ ಓದಿ ತದನಂತರ ನಿಮ್ಮ ಮನದ ಯಾವುದೇ ಭಾವವನ್ನು ನಾನು ಮುಕ್ತವಾಗಿಯೇ ಸ್ವೀಕರಿಸುತ್ತೇನೆ”
ನಿಮ್ಮನ್ನು ಮೊದಲು ನಾನು ನೋಡಿದ್ದು ಕಾಲೇಜಿನಲ್ಲಿ ಆದರೆ ಅಂದಿನ ದಿನ ನಿಮ್ಮನ್ನು ಸರಿಯಾಗಿ ಗಮನಿಸಿರಲಿಲ್ಲ. ನೀವು ಯಾರು, ನಿಮ್ಮ ಹೆಸರೇನು, ನೀವು ಎಲ್ಲಿಯರು ಎನ್ನುವುದನ್ನೂ ತಿಳಿಯುವ ಕೂತೂಹಲವೂ ಸಹ ನನ್ನಲ್ಲಿ ಇರಲಿಲ್ಲ. ಕಾರಣ… ಎಲ್ಲರಂತೆ ನಾನು ಹರೆಯದ ಬಣ್ಣ ಬಣ್ಣದ ಕನಸುಗಳಿಗಿಂತ ಭವಿಷ್ಯದ ಕನಸು ಬಗ್ಗೆ ತುಸು ಹೆಚ್ಚಾಗಿಯೇ ಆಲೋಚಿಸುತ್ತಿದ್ದವನು. ನಮ್ಮಿಬ್ಬರದ್ದೂ ಒಂದೇ ಕಾಲೇಜು, ಒಂದೇ ತರಗತಿಯಾಗಿದ್ದರಿಂದ ನಿಮ್ಮ ಬಗ್ಗೆ ತಿಳಿದುಕೊಳ್ಳಲು ಹೆಚ್ಚೇನು ಸಮಯವೂ ಸಹ ಹಿಡಿಯಲಿಲ್ಲ. ಅದರಲ್ಲೂ ಓದಿನಲ್ಲಿ ಪೈಪೋಟಿ ನೀಡುತ್ತಿದ್ದ ನಿಮ್ಮ ಮೇಲೆ ಅದ್ಯಾವ ಗಳಿಗೆಯಲ್ಲಿ ಕುತೂಹಲ ಹುಟ್ಟಿತೋ ಅದೂ ಸಹ ಅರಿವಾಗಲಿಲ್ಲ. ನಿಮಗಿಂತ ಓದಿನಲ್ಲಿ ಮುಂದಿರಬೇಕು ಎನ್ನುವ ಹಠ ಸದಾ ನಿಮ್ಮ ಮುಖವನ್ನು ನೆನಪಿಸುತ್ತಿತ್ತು. ನಿಮಗಿಂತ ನಾನು ಯಾವತ್ತೂ ಕಡಿಮೆಯಿರಬಾರದೆಂಬ ಅಹಂ ನಿಮ್ಮ ಚಲನವಲನಗಳನ್ನು ಗಮನಿಸುವಂತೆ ಮಾಡಿತು. ಈ ನನ್ನ ಪ್ರತಿಯೊಂದು ಸ್ವಾರ್ಥದೊಳಗೆ ನುಸುಳಿದ ನೀವು ನನ್ನ ಪ್ರತಿದಿನದ ದಿನಚರಿಯಲ್ಲಿ ಮೊಟ್ಟ ಮೊದಲು ನೆನಪಾಗುವ ವ್ಯಕ್ತಿಯಾಗಿ ಹೋದಿರಿ.
ಅದೊಂದು ಸಂದರ್ಭದಲ್ಲಿ ನೀವು ಎರಡು ಮೂರು ದಿನ ಕಾಲೇಜಿಗೆ ಬರಲಿಲ್ಲ. ಆ ಎರಡು ಮೂರು ದಿನಗಳು ಇಡೀ ತರಗತಿಯಲ್ಲಿ ನನಗ್ಯಾರೂ ಪೈಪೋಟಿಯೇ ಇಲ್ಲ ಎಂಬ ಅಹಂಕಾರ ಮೇಲ್ನೋಟಕ್ಕೆ ಕಂಡರೂ.. ಪೈಪೋಟಿ ಇಲ್ಲದ ಜೀವನವು ಉಪ್ಪಿಲ್ಲದ ಊಟದಂತೆ ರುಚಿಗೆಟ್ಟ ಮೊದಲ ಅನುಭವ ನೀವು ರಜೆ ಹಾಕಿದ್ದ ದಿನ ಕಣ್ಣೆದುರಿಗೆ ಕಂಡಿತ್ತು. ಬದುಕನ್ನು ಸದಾ ಚಲನಶೀಲತೆಯಲ್ಲಿಡಲು ಒಬ್ಬ ಸಮರ್ಥ ಪೈಪೋಟಿದಾರ ಬದುಕಿನಲ್ಲಿ ಇರಬೇಕು ಎಂಬ ಜೀವನ ಸತ್ಯ ಅಂದು ಮನವರಿಕೆಯಾಗಿತ್ತು. ಮರಳಿ ನೀವು ಕಾಲೇಜಿಗೆ ಬಂದ ದಿನವಂತೂ ನನ್ನ ಮನದಲ್ಲಿ ನೂರು ಕೋಗಿಲೆಗಳು ಒಟ್ಟಿಗೆ ಹಾಡಿದಷ್ಟು ಸಂತೋಷವಾಗಿತ್ತು. ಅಲ್ಲಿಂದಲೇ ನಿಮ್ಮ ಮೇಲಿನ ಭಾವನೆಗಳು ಗರಿಗೆದುರಲು ಶುರುವಾಗಿದ್ದು. ನೀವಿಲ್ಲದ ಒಂದು ದಿನದ ತರಗತಿಯು ಯುಗದಂತೆ ಭಾಸವಾಗುತ್ತಿತ್ತು, ನಿಮ್ಮ ಧ್ವನಿ ಕೇಳದ ಒಂದೊಂದು ಕ್ಷಣವೂ ನನ್ನನ್ನೆ ಕಳೆದುಕೊಂಡ ಅನುಭವಾಗುತ್ತಿತ್ತು.
ಐದು ವರ್ಷಗಳ ನಮ್ಮ ಕಾಲೇಜು ಒಡನಾಟದ ಸ್ನೇಹದ ಹೆಸರಲ್ಲಿ ನಾವು ಮಾತನಾಡಿದ ವಿಷಯಗಳೆಷ್ಟೊ, ಪಠ್ಯದ ವಿಷಯದಲ್ಲಿ ಚರ್ಚಿಸಿದ ವಾದಗಳೆಷ್ಟೋ.. ಈ ನಮ್ಮ ಪರಿಚಯ ಕಾಲೇಜಿನ ಹೊರಗಡೆಯೂ ಉಳಿದು ಬೆಳೆದಿದ್ದು ನೆನೆದರೆ ನಿಜಕ್ಕೂ ಏನೋ ಒಂದು ರೀತಿ ಬಣ್ಣಿಸಲಾಗದ ಖುಷಿಯಾಗುತ್ತದೆ. ಕಾಲೇಜಿನ ಕೊನೆಯ ದಿನ ಎಲ್ಲರ ಕಣ್ಣಲ್ಲೂ ನೀರು ತುಂಬಿತ್ತು, ಎಲ್ಲರೂ ಸ್ನೇಹದ ಅಗಲಿಕೆಯ ನೋವು ಅನುಭವಿಸುತ್ತಿದ್ದರೆ.. ನನ್ನ ಕಣ್ಣಲ್ಲಿ ಸ್ನೇಹದ ಜೊತೆ ನಿಮ್ಮನ್ನೂ ಎಲ್ಲಿ ಶಾಶ್ವತವಾಗಿ ತೊರೆದು ಬದುಕಬೇಕಾಗುವುದೊ ಎಂಬ ಭಯ ಆವರಿಸಿಬಿಟ್ಟಿತ್ತು. ಸದಾ ಪೈಪೋಟಿಯೊಂದಿಗೆ ಜೊತೆಗಿದ್ದ ನಿಮ್ಮನ್ನು ಬಿಟ್ಟುಕೊಡುವ ಮನಸಿಲ್ಲದೆ ಕುಗ್ಗಿಹೋಗಿದ್ದೆ. ನನ್ನ ಕಣ್ಣೀರಿನ ಹಿಂದಿದ್ದ ಆ ಭಾವನೆ ನಿಮಗಂದು ಅರ್ಥವಾಯಿತೋ ಇಲ್ಲವೋ ಗೊತ್ತಿಲ್ಲ. ಕಾಲೇಜು ಬಿಟ್ಟು ಈಗ ವರ್ಷಗಳು ಕಳೆಯುತ್ತಿದೆ. ಕೈಯಲ್ಲಿ ಒಳ್ಳೆಯ ಕೆಲಸವೂ ಇದೆ.. ಆದರೂ ಕಾಲೇಜಿನಲ್ಲಿ ನಿಮ್ಮೊಡನೆ ಕಳೆದ ನೆನಪುಗಳೇ ಸದಾ ಕಣ್ಮುಂದೆ ಬಂದು ಕಾಡುತ್ತಿವೆ. ಪೈಪೋಟಿಯ ರುಚಿ ಕಲಿಸಿದ ನೀವಿಲ್ಲದ ಬದುಕು ನೀರಸವೆನಿಸಿದೆ.
ಎದುರಿಗೆ ನಿಂತು ನನ್ನ ಮನದ ಈ ತುಮುಲವನ್ನು ಹೇಳೋಣವೆಂದರೆ… ಕಾಲೇಜಿನಿಂದ ಒಡನಾಟ ದೂರವಾದ ಹಾಗೆ ನೀವೆಲ್ಲಿ ಸ್ನೇಹದಿಂದಲೂ ಶಾಶ್ವತವಾಗಿ ದೂರವಾಗುವಿರೋ ಎಂಬ ಭಯ ಕಾಡುತ್ತಿದೆ. ಇದು ಸ್ನೇಹವೋ, ಪ್ರೀತಿಯೋ, ಅಥವಾ ಹರೆಯದ ಮನಸಿನ ಭಾವನೆಗಳೋ ನನಗೊಂದೂ ತಿಳಿದಿಲ್ಲ. ಆದರೆ ಪ್ರತಿಕ್ಷಣ ಪ್ರತಿದಿನ ನೀವು ನನ್ನ ಜೊತೆ ಇರಬೇಕು, ನಿಮ್ಮ ಮಾತು, ಚಟುವಟಿಕೆಗಳು ನನ್ನೊಳಗೆ ಸದಾ ಚೈತನ್ಯದ ಚಿಲುಮೆಯಾಗಿರಬೇಕು ಎಂದು ಬಯಸುತ್ತಿದ್ದೇನೆ. ಈ ಸ್ನೇಹ ಅದೆಂದು ಪ್ರೀತಿಯಾಗಿ ಬದಲಾಯಿತೋ ತಿಳಿದಿಲ್ಲ. ನಿಮ್ಮನ್ನು ಪ್ರೀತಿಸಲು ನನ್ನ ಬಳಿ ನಿರ್ಧಿಷ್ಟವಾದ ಕಾರಣವೂ ಇಲ್ಲ. ನಾನು ನಿಮ್ಮ ಬಳಿ ಕೇಳುವುದೊಂದೆ..
ಹರೆಯದ ಆಕರ್ಷಣೆಯನ್ನೂ ಮೀರಿ ಸ್ವಂತ ಕಾಲ ಮೇಲೆ ನಿಂತಿರುವ ಈ ಸಂದರ್ಭದಲ್ಲೂ ಸಹ ನೀವಿದ್ದರೆ ನನ್ನ ಬದುಕು ಸಂತೋಷವಾಗಿರುತ್ತದೆ ಎಂಬ ಆಲೋಚನೆಗಳು ಪ್ರತಿದಿನ ನನ್ನಲ್ಲಿ ಹೆಚ್ಚಾಗುತ್ತಲೇ ಹೋಗುತ್ತಿದೆ. ನೆನಪುಗಳೊಳಗೆ ಸುಳಿದಾಡುವ ನಿಮ್ಮ ಮುಖ ಪ್ರತಿ ನಿಮಿಷವೂ ನನ್ನ ಜೀವ ಹಿಂಡುತ್ತಿದೆ.. ಹೇಗಾದರೂ ಮಾಡಿ ಆಕೆಯನ್ನು ನಿನ್ನವಳಾಗಿಸಿಕೊ ಎಂದು ಮನಸ್ಸು ರಚ್ಛೆ ಹಿಡಿದ ಮಗುವಿನಂತೆ ಕಾಡುತ್ತಿದೆ. ನನ್ನ ಮನದ ಈ ಪ್ರತಿಯೊಂದು ಗೊಂದಲಕ್ಕೂ ಉತ್ತರ ನೀವು.. “ಅದು ನೀವು ಮಾತ್ರ” ಪೈಪೋಟಿಯಿಂದ ಆರಂಭವಾದ ನಮ್ಮ ಪರಿಚಯ ಇಂದು ಒಬ್ಬರನ್ನೊಬ್ಬರು ಅರಿತು ಸ್ನೇಹದ ಆನಂದವನ್ನೂ ಮೀರಿ ನನಗೆ ನೀನು ನಿನಗೆ ನಾನು ಎನ್ನುವಷ್ಟರ ಮಟ್ಟಿಗೆ ಆತ್ಮೀಯತೆ ಬೆಳೆದು ಹೆಮ್ಮರವಾಗಿದೆ. ಅದಕ್ಕಿಂತಲೂ ಹೆಚ್ಚಾಗಿ “ಬದುಕನ್ನು ಸುಲಭವಾಗಿ ಕೈ ಚೆಲ್ಲದ ನಮ್ಮಿಬ್ಬರ ಗುಣವೂ ಒಂದೇ ಆಗಿದೆ”. “ಓದಿನಲ್ಲಿ ಪೈಪೋಟಿಗೆ ಬಿದ್ದು ಬದುಕಿನಲ್ಲಿ ಗೆದ್ದ ನಾವಿಬ್ಬರು, ಪ್ರೀತಿಯಲ್ಲಿ ಸೋತು ಒಂದಾಗಿ ಬಾಳೋಣ ಎನಿಸುತ್ತಿದೆ”.
“ಇಬ್ಬರೂ ದೂರವಾಗಿ ಆಗಾಗ ಕಾಡುವ ನೆನಪುಗಳೊಂದಿಗೆ ಬೇಯುವುದಕ್ಕಿಂತ, ಇಬ್ಬರೂ ಒಂದಾಗಿ ಓಡುವ ಕಾಲದ ಜೊತೆ ನೆರಳಾಗಿ ಒಬ್ಬರನ್ನೊಬ್ಬರು ಕಾಯುತ್ತಾ ಬಾಳುವುದೇ ಜೀವನ”
ಮಾತಿಗೆ ಸೋತೆನೋ
ನೋಟಕ್ಕೆ ಸೋತೆನೋ
ಒಡನಾಟಕ್ಕೆ ಸೋತೆನೋ ತಿಳಿಯದು
ನಿಮಗಾಗಿ ನಾ ಸೋತಿರುವುದಂತೂ ಸತ್ಯ
ನನ್ನ ಬಾಳ ಪಯಣದ ಪ್ರತಿಕ್ಷಣಲ್ಲೂ,
ಪ್ರತಿ ಹೆಜ್ಜೆಯಲ್ಲೂ ನೀವು ಜೊತೆಗಿದ್ದರೆ
ನನ್ನ ಪ್ರೀತಿಗೆ ಗೆಲುವು ಪ್ರತಿನಿತ್ಯ.
ಸ್ನೇಹದ ಕಡಲನು ದಾಟಿ
ಪ್ರೇಮದ ತೀರವನು ಸೇರಿ
ಬಾಳಿನ ಸವಿಯನು ಜೊತೆಯಾಗಿ ಸವಿಯಲು
ನಿಮಗಾಗಿ ಕಾಯುವ..
ಇಂತಿ
ನಿಮ್ಮನ್ನು ಸದಾ ಪ್ರೀತಿಸುತ್ತಲೇ ಇರುವ “ಹೃದಯ”