ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 71): ಎಂ. ಜವರಾಜ್

-೭೧-
ಅವತ್ತು ಸಂದವತ್ಲಿ
ತ್ವಾಟ್ಗೇರಿ ಮಾರಿಗುಡಿಲಿ
ಮರಿಗಿರಿ ಹೊಡ್ದು ಪರ ಮಾಡ್ತಿದ್ರು..

ಅದ ನಾ ಉಣ್ಣಗಿದ್ದಾ..

ಉಣ್ದೆದ್ ಮ್ಯಾಲ
ಇನ್ಯಾಕ ಅನ್ಕಂಡು
ಹಂಗೆ ಬೀಸ್ಕಾಲ ಹಾಕಂಡು
ಬತ್ತಿರವತ್ಲಿ
ಬಸ್ಟ್ಯಾಂಡು ಬಣ್ಗುಡ್ತಿತ್ತು..

ಮ್ಯಾಲ ತಿಂಗ್ಳು ಬೆಳುಗ್ತಿತ್ತು

ಆ ಬೆಳ್ಗ ಬೆಳುಕ್ಲಿ
ಆ ತಿಂಗ್ಳು ತರನೇ ಇರ ಮೊಖ ಕಾಣ್ತು
ಆ ಮೊಖ ನೋಡುದ್ಮೇಲ
ನಂಗ ಎತ್ತಗು ದಿಗ್ಲಾಗ್ದೆ
ಅತ್ತಗ ಇತ್ತಗ ಎಡ್ತಾಕಿ
ಸುಮ್ನ ದಂಡುಕ್ಕ ಹೋಗಿ
‘ಎಲ್ಲಿಗ್ಯಾ’ ಅಂದಿ
ಅವ್ಳು ಸುಮ್ನ ನೋಡಿ ತಿರಿಕಂಡ

ಆಮ್ಯಾಲ ಅವ್ಳೆ
‘ಕಲ್ಲೂರ್ ಮುಳ್ಳೂರ್ ಕಡ ಬಸ್ಸಿಲ್ವ’
ಅಂದ್ಲು

‘ಇಲ್ಲ ಕೇತಳ್ಳಿ ಕೆರ ಹೊಡ್ದು
ಸಂತಮಾಳ್ದಲಿ ನೀರು ತುಂಬ್ಕಂಡು
ರೋಡು ಕೊಚ್ಗ ಹೋಗದ’
ಅಂದಿ

‘ಅಯ್ಯೋ ನಾನೇನ್ಮಾಡ್ಲಿ
ನಾ ಹೆಂಗ್ಯಾ ಊರ್ ಸೇರದು…’

‘ತಿಂಗ್ಳುತರ ಬೆಳುಗ್ತಿರ ನಿನ್ನೆಸ್ರೇನಾ..’
‘ಚಂದ್ರವ್ವ’
‘ಆ ಮ್ಯಾಲುನ್ ತಿಂಗ್ಳೆ ನೀನು ಅನ್ಸುತ್ತಾ..’

ಅದೆವತ್ಗ ಕಾಲ ಕಾಣುಸ್ಕಂಡು
‘ಅಯ್ನೋರಾ..’ ಅಂದ
ಆಮ್ಯಾಲ ಅವ್ಳ್ ಕಡ ತಿರುಗಿ,
‘ಚಂದ್ರವ್ವ ಇದ್ಯಾಕವ್ವ ಒಬ್ರೆ ಇಲ್ಲಿ
ಅಪ್ಪವ್ರು ಬರ್ನಿಲ್ವ ಅಳಿ’ ಅನ್ನದಾ..

ನಾನು ಬೆಬುಗುಟ್ತ
ಅದ ತೋರುಸ್ದೆ ಮೀಸ ತಿರಿತಾ
‘ಏನ್ಲಾ ಪರಲಿ ಉಣ್ಕ ಬಂದಗದ..’ ಅಂದಿ
ಕಾಲ ತಲ ಕೆರಿತಾ
ಉಂಡು ತೇಗುದ್ದ ಹೇಳ್ತಿದ್ದಂಗೆ
ಕೇಳ್ದಿ
‘ನಿಂಗೆಗ್ಲ ಗೊತ್ತು’
‘ಅಯ್ನೋರಾ ಇವ್ರು ಇಲ್ಲೆ ಓದದು
ಇವ್ರಪ್ಪೋರು ಮೆಟ್ಟು ಬೇಕಾದ್ರ ನಂತವ್ಕೆ ಬರದು
ಇವ್ರು ನಿಮ್ಮೋರೆ ನಿಮ್ ಜನಾನೆ ಅಳಿ’ ಅಂದ
‘ಹಂಗಾರ ಬುಡು ನಿಂಗೊತ್ತಿದ್ಮೇಲ’
ಅಂತ ಅವ್ಳ ನೋಡ್ತ,
‘ಬಂದ್ರ ದಡ ಮುಟ್ಟುಸ್ತಿನಿ ಚಂದ್ರವ್ವಾ..
ಅದೇನ ಬ್ಯಾಗ್ನ ಸನ್ನ ಮಾಡೇಳು’
ಅಂತ ಕತ್ತೆತ್ತಿ ಹಂಗೇ ಮ್ಯಾಲುಕ್ಕ ಕೆಳುಕ್ಕ
ಅತ್ತಗ ಇತ್ತಗ ಉರುಗಿಸಿ ತಿರುಗಿಸಿ ಕಣ್ಣಾಡುಸ್ತ
ಕಾಲುನ್ ಹೆಗುಲ್ಗ ಕೈಯಾಕ್ದಿ

ಮ್ಯಾಲ ತಿಂಗ್ಳು ಬೆಳುಗ್ತ
ಆ ಬೆಳುಗ್ತಿದ್ ಬೆಳುಕ್ಲಿ
ಅವ್ಳು ನನ್ ಮೀಸನೆ ನೋಡ್ತಿರದು ಕಾಣ್ತು

ಆಗ ಮಿಂಚ್ತರ ನಂಗೊಂದೊಳಿತು
ಆ ಗಳುಗ್ಗೇ ಕಾಲುನ್ಗ ಸನ್ನ ಮಾಡ್ದಿ

ಕಾಲ ಎಕ್ಡಗಿಕ್ಡ ಹೊಲ್ಕಂಡು
ಸಂತಮಾಳ್ದಲಿ ಇದ್ದಂವ
ಅದು ಯಾರುಗ್ಗೊತ್ತಿಲ್ಲಾ ಹೇಳು…
ನಂಗಲ್ದೆ
ಅದು ನಿಂಗು ಗೊತ್ತು ಕಲ ಮಾರ
ಅದು ಎಲ್ರುಗು ಗೊತ್ತು ಕಲ ಮಾರ
ಅದು ಅವ್ಳುಗು ಗೊತ್ತು ಕಲ ಮಾರ
ಆ ಕಾಲ ಆ ಕಾಲುನ್ ಕೆಲ್ಸ
ಕಾಲ ಕಾಲುಕ್ಕು ಗೊತ್ತಿರದೆ ಬುಡು ಮಾರ

ಸರಿ ನನ್ ಸನ್ನುಕ್ಕ
ಅಂವ ಚಂಗಂತ ನೆಗ್ದು ಮಾಯ್ವಾಗಿ
ಅದೆ ಮಾಯ್ದಲ್ಲಿ ದಡದಡ ದಡಗುಟ್ಗಂಡು
ಎತ್ತುನ್ ಗಾಡಿ ಬುಟ್ಕ ಬಂದೇ ಬುಟ್ನಾ…

ನಾನು ಮೂಕಿ ಹಿಡ್ದು ಬಗ್ಗುಸ್ದಿ…
ಅವ್ಳ್ ಚೆಂದುಳ್ಳಿ ಕಾಲು
ನನ್ ಗಾಡಿಗ ತಾಕ್ತು ಕಲ ಮಾರ..
ಆಗ್ಲೆ ಮಾರ,
ಅವ್ಳ್ ಪಾದದ ಗುರ್ತು ನನ್ನೆದಮ್ಯಾಲ
ಅಸುಲು ಉಯ್ದಂಗಾಗಿ ಉಳ್ಕತು ಕಲ ಮಾರ

ಚಂದ್ರವ್ವ ಕಾಲೂರಿ
ಗಾಡಿ ಮ್ಯಾಲ ಕುಂತ್ಕಂಡು
‘ಈ ಗಾಡಿ ಈ ಹಸ ನಿಮ್ದ’ ಅಂದ್ಲು
‘ಹ್ಞೂ ನಮ್ದೆ
ಇಂವ ಎಕ್ಡ ಹೊಲುದ್ರು ಒಳ್ಳಿ ಮನ್ಸ
ನಮ್ಮೂರ್ ಕೆಳುಗುಲ್ ಕೇರಿಲಿ
ಜಾಗ ಕೊಟ್ಟು ತಡಿ ಕಟ್ಟುಸ್ಕೊಟ್ಟಿನಿ
ಈಗ್ತಾನೆ ಮದ್ವ ಆಗನ’ ಅಂದಿ
‘ಅವ್ರೆನ್ ಕಮ್ಮಿನವ್ವಾ..
ಕುಬೇರ ಕುಬೇರ ನಮ್ಮೂರ್ಗ
ಮುಟ್ಟಿದ್ದೆಲ್ಲ ಚಿನ್ನಕವ್ವಾ..’
ಅಂತಂತ,
ಆ ಕಾಲ ಮೂಕಿ ಮ್ಯಾಲ ಕುಂತ್ಕಂಡು
ಹಸುನ್ ಬಾಲ ಮುರಿತಾ ವಟಗುಟ್ತಿದ್ದ.

ಕೇತಳ್ಳಿ ಕೆರ ಹೊಡ್ದು ಹರಿತಾ
ಸಂತಮಾಳ್ಯಾಗಿದ್ ಸಂತಮಾಳ್ದಲ್ಲೆಲ್ಲ
ಬರೀ ನೀರೇ..
ಹರಿತಿರ ಆ ನೀರ ದಾಟ್ತ
ಗಾಡಿ ಚಕ್ರ ದಡಕ್ ಬಡಕ್ ಅಂತು
ಆಗ ಚಂದ್ರವ್ವ ನನ್ ಮ್ಯಾಲ ಬಿದ್ದಂಗಾಯ್ತು
ನಂಗ ಅದೇನ ಒಂಥರ ಆಗಿ
‘ಏಯ್ ಕಾಲ ಅದೇನ್ಲ
ಗಾಡಿನ ಹಳ್ಳಕ್ಕು ಗಿಳ್ಳುಕ್ಕು ಬುಡ್ತ
ಹಂಗ ದಡ್ಕದಡ್ಕ ಅನ್ನುಸ್ದೈ
ಇಲ್ಲಿ ನಮ್ಗ ಬೀಳಂಗಾಯ್ತುದ’ ಅಂದಿ

ಚಂದ್ರವ್ವ ನನ್ ಮಾತ್ಗ ನಗ್ತಾ
ಹಸ್ಗಳ ಗೆಜ್ಜ ಸದ್ದು ಗಲಕಾಕ್ತ
ಮ್ಯಾಲ ಬೆಳಗ್ತಿದ್ದ ತಿಂಗ್ಳೂ
ನಮ್ಜೊತ ಜೊತಗೂಡ್ಕಂಡು ಓಡ್ಬತ್ತಾ….

ಅಯ್ನೋರು ಹೇಳ್ತಾ ಹೋದ್ರು
ಆ ಮಾರ ಹೂಂಕಂತಿದ್ದ..

ಆದ್ರಾ ,
ಈ ಅಯ್ನೋರು
ಆ ಮಾರುನ್ ಮಾತ್ಗ ಉತ್ತುರುವಾಗಿ
ನಾ ಹೆಂಗೆ ಚಂದ್ರವ್ವುನ್ ಕಾಣ್ಕ ಆದಿ..

ಆ ಪಂಚ ಅಂಚು ಹೇಳಿದ್ದು ಇನ್ನೂ ಗೆಪ್ತಿಲದ:

ಹೆಣ್ಣು ನೋಡಾಕ ಹೋದಾಗ
ತಂಗ ಚಂದ್ರವ್ವ ಬದುಲ್ಗ
ಅಕ್ಕ ದೇವಮ್ಮ ಅಯ್ನೋರ್ ಲಗ್ನ ಆಗಿದ್ದು
ಒಸಗ ರಾತ್ರ ಚಂದ್ರವ್ವನು ಅಯ್ನೋರೂ ಕಾಣ್ದೆ
ಈ ಅಯ್ನೋರೊವ್ವ ಶಂಕ್ರವ್ವೋರು
ಪಂಚ ಅಂಗಿ ಎತ್ಗಂಡು ಬ್ಯಾಗ್ಗ ತುಂಬ್ಕಂಡು
ಕುಲ ಪಂಚಾಯ್ತಿ ಒಪ್ಪಿ ಸೋಸ ಆಗಿರ
ಆ ದೇವಮ್ಮೋರ ಯಾರ ಜುಲ್ಮಿಗು ಬಗ್ದೆ
ರಟ್ಟ ಹಿಡ್ದು ಬುಸುಗುಡ್ತ ಎಳ್ಕ ಬಂದು
ಮನ ತುಂಬುಸ್ಕಂಡದು ಕಳ್ದು ಉಳ್ದು
ಮದ್ವ ಆದ ವರ್ಷ ಆರ್ತಿಂಗ್ಳಾದಮ್ಮೇಲ
ಈ ಅಯ್ನೋರ್ ಬಂದು ದೇವಮ್ಮೋರ್ ಕೂಡ್ಕಂಡು
ಶಂಕ್ರಪ್ಪೋರ್ ಹುಟ್ಗ ಕಾರಣವಾದ್ದು…
*
ಈ ಅಯ್ನೋರು ಮೆಲ್ಗ ಎದ್ದು ಕುಂತ್ಕಂಡು
ನನ್ನ ಜೋಪಾನವಾಗಿ ಎತ್ಕಂಡು ನೋಡ್ತ
ತಿಕುಕ್ ಚುಚ್ಚಿದ್ದ ಕಾರಮುಳ್ಳ ಕೈಲಿ ಸವುರುತ್ತಾ..

‘ಲೋ ಮಾರ ಒಂದೇಳ್ತಿನಿ,
ಆ ಕಾಲ
ಅದೆ ನಿಮ್ ಕಾಲ
ಆ ಬೆಂಕಿಲಿ ಬೆಂದೊದ್ನಲ್ಲ
ಆ ಕಾಲ
ಈ ಮೆಟ್ ಮಾಡ್ಕೊಟ್ನಲ್ಲ ಆ ಕಾಲ
ಅಂವ ನಂಗ ಎಲ್ಲನು ಮುಚ್ಚಿಟ್ನಲ್ಲ..

‘ಅವ್ಳು ನಂಗು ಗೊತ್ತಿಲ್ದಾಗಿ
ಬ್ಯಾಗಿಂದ ಪುಸ್ಕ ತಗ್ದು ಕಾಜ್ಗಲಿ ಗೆರ ಎಳ್ದು
ಈತರ ಬಾಳ್ ಚಂದ್ವಾಗಿ ಒಳ್ಳಿ ಚರ್ಮಲಿ
ನೊರ ನೊರ ಸದ್ದು ಮಾಡ ಗಿರಿಕಿ ಮೆಟ್ಟ
ಅವ್ರ್ ಪಾದ್ಗ ಹಾಕದು ನಿನ್ ಜಬದಾರಿ..

‘ಹಂಗೆ ಗುಡ್ಡಿ ಇಡ್ದಿರ ಚರ್ಮದ ರಾಶಿಲಿ
ಕಾಲುನ್ ಕೈಲಿ ಕೆದ್ಕಿ ಕೆದ್ಕಿ
ಬಾಳ್ಕ ಚರ್ಮನ ಎತ್ತಿಡ್ಸಿ
ಮಾತ ತಕ್ಕಂಡು ಹೋಗಿದ್ಲಂತ ಕಲ ಮಾರ…

‘ಆಮ್ಯಾಲ ಅದೇನ ಆಯ್ತು ಕಲ ಮಾರ..
ಅದು ನಂಗಲ್ದೆ ಇನ್ಯಾರುಗ್ಗೊತ್ತು..
ಅದು ನಿಂಗಂಟ ಯಾಕ್ಬೇಕು…
ಆ ಸಂಕ್ಟ ಇಂದ್ಗೂ ನನ್ನೊಳಗ ಅದ ಕಲ ಮಾರ…

‘ದೊಡ್ಡವ್ವ ಬಂದು ಬಂದು ಪೀಡ್ಸಿ
ನೀಲುನ್ ಮದ್ವಿನು ಆದಿ
ಆ ಗಳುಗ್ಗ ಹುಚ್ಚುನ್ತರನು ಆದಿ
ಆಗಿ ಆಗಿ ಮಂಕು ಬಳ್ದಗಾಗಿ
ಕೆಳುಗುಲ್ ಕೇರಿಗೋಗಿ
ಕಾಲುನ್ ಜೊತಲು ಕಾಲ್ನೆಡ್ತಿ ಚೆಲ್ವಿ ಜೊತಲು
ಲಂಗ ಉಟ್ಗಂಡು ಓಡಾಡ್ತಿದ್ದ ಸವ್ವಿ ಜೊತಲು
ಕಾಲ ತಳ್ತ ತಳ್ತ ಎಲ್ಲುಕ್ಕು ಕಾಲ್ನೆ ಬೇಕು ಅನ್ಸದು
ಆಗ ಕಾಲ್ನೆಡ್ತಿ ಚೆಲ್ವಿ ಸಮಾದಾನ ಮಾಡಳು…

‘ಆಮ್ಯಾಲಾಮ್ಯಾಲ ಕಾಲುನ್ ನಡ್ವಳ್ಕಿ ಕಂಡಿ
ಸಂತಮಾಳುಕ್ಕೋಗಿ ನನ್ ಪಾದ್ವ
ಆ ಕಾಲುನ್ ಮುಂದ ಇಟ್ಮೇಲ
ನಕಿಲಿ ಮಾಡ್ತ ಮಾಡ್ತ ಈ ಮೆಟ್ಟ ಮಾಡಿ
ನನ್ ಪಾದುಕ್ಕ ಹಾಕಿದ್ದೇ ಆ ಕಾಲುನ್ ಕೈಗ
ನನ್ ಜೋಬಿಂದ ಚಿಲ್ರ ಉದುರ್ಸಿ ಬಂದಿ ಕಲ..

‘ಒಂದ್ರಾತ್ರ ಕುಡ್ದೊತ್ಲಿ
ಹೆಂಡದ ಬಾಟ್ಲಿನ ಮ್ಯಾಗಿಂದ ಕೆಳಕ ಎತ್ತಿಟ್ಟು
ಮೆಟ್ಟ ಜಾಡ್ಸಿ
ಭೂಮ್ತಾಯಿಗ ಧೂಳೇತರ ಕುಟ್ದಿ ಕಲ ಮಾರ..
‘ಅಯ್ನೋರಾ..
ಅಯ್ನೋರಾ..
ಅಯ್ನೋರಾ..
ಆ ಮೆಟ್ಟ ಭೂಯ್ತಾಯ್ಗ ಕುಟ್ಬ್ಯಾಡಿ
ಚಂದ್ರವ್ವೋರು ಮನುಸ್ಗ ನೋವಾಯ್ತ’
ಅಂತಂತ ಗೋಳಾಡ್ದ ಕಲ ಮಾರ…

‘ಹಂಗಾಗಿ ಇದು ನನ್ ಚಂದ್ರಿ ಕಾಣ್ಕ ಕಲ
ಇದ ಜ್ವಾಪಾನ ಮಾಡುದ್ರ
ನನ್ ಚಂದ್ರಿನೆ ಜ್ವಾಪಾನ ಮಾಡ್ದಂಗೆ ಕಲ
ಆದ್ರ.. ಆದ್ರ.. ಆದ್ರ..
ಅವ್ಳ್ ಕರುಳ್ ಕುಡಿನ…’

ಅಂತಂತ,

ಈ ಅಯ್ನೋರು ನನ್ನ ತಬ್ಬಿಡ್ಕಂಡು
ಕತ ಹೇಳ್ತಾ
ದುಕ್ಕುಳುಸ್ತ ದುಕ್ಕುಳುಸ್ತ
ಮ್ಯಾಕ್ಕ ಮೊಖ ಮಾಡವತ್ಲಿ
ಸೂರ್ಯ ಇಳ್ದು ಕತ್ಲು ಕವುಸ್ಕತು…

-ಎಂ.ಜವರಾಜ್


ಮುಂದುವರಿಯುವುದು…

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x