ಕರೋನಾ ಕೋಲ್ಮಿಂಚು: ರವಿ ಶಿವರಾಯಗೊಳ

ನಮ್ಮೂರಿನ ಒಣಿಯ ಮನೆಯೊಂದರ ಜಗುಲಿಯಲ್ಲಿ ಕೂತ ಎರಡು ಪುಟಾಣಿ ಮಕ್ಕಳು ತಮ್ಮ ತೊದಲು ನುಡಿಯಲ್ಲೇ ಜುಗಲ್ಭಂದಿ ನಡೆಸುತಿದ್ದರು ಅದು ಹೀಗಿತ್ತು.

“ಕರೋನಾ ಬಂತು ಕರೋನಾ” ಒಂದು ಮಗು ಅಂತು.
‘ಜೀವನ ಆಯ್ತು ಹೈರಾಣ ’ ಮತ್ತೊಂದು ಮಗು ನುಡಿಯಿತು.

ಮುಂದೆನ್ಮಾಡ್ತು ಕರೋನಾ
ದಾರಿ ಬದಿಯಲ್ಲಿ ಶೌಚ ಮಾಡೋವರ್ನ್ನ ಓಡಿಸಿ ಬಿಟ್ತು ನೋಡಣ್ಣ.

ಆ ಕ್ಷಣದಲ್ಲಿ ಅವರಿಬ್ಬರ ಆ ಜುಗಲ್ಭಂದಿ ಕೇಳಿದಾಗ ನಗು ಬಂತಾದರೂ ಅವರ ಮಾತು ಸತ್ಯವಾದವುಗಳು ಎಂದು ಅನ್ನಿಸದೇ ಇರಲಿಲ್ಲ. ಹೇಳಲಿಕ್ಕೆ ನನಗೆ ಮುಜುಗರ ಇಲ್ಲ ಓದಲಿಕ್ಕೆ ನಿಮಗೆ ಮುಜುಗರವಾದರೆ ನಾನು ಜವಾಬ್ದಾರನಲ್ಲ. ಆದರೂ ನಾನು ಹೇಳಲು ಹೊರಟ ವಿಷಯ ಮುಜುಗರ ತರುವಂತದ್ದೆ ಅಂದರೂ ಅತಿಶಯೋಕ್ತಿ ಆಗಲಾರದು. “ಸ್ವಚ್ಛ ಭಾರತ ಅಭಿಯಾನ” One step towards cleanliness ಸ್ಲೋಗನದೊಂದಿಗೆ 2 ಅಕ್ಟೊಬರ್ 2014 ರಲ್ಲಿ ಬಿಡುಗಡೆ ಮಾಡಲಾಯಿತು. ಭಾರತವನ್ನು ಸ್ವಚ್ಚವಾಗಿ ಇಡುವುದು ಎಲ್ಲರ ಕರ್ತವ್ಯ ಆಗಬೇಕಾಗಿತ್ತು. ಆದರೆ ಅದು ಸಂಪೂರ್ಣವಾಗಿ ಕಾರ್ಯರೂಪ ಪಡೆದಿಲ್ಲ ಎನ್ನುವುದು ಮಾತ್ರ ವಾಸ್ತವದ ಸಂಗತಿ. ಎರಡು ಸಾವಿರದ ಹತ್ತೊಂಬತ್ತನೇ ಇಸವಿಯ ಕೊನೆಯ ತಿಂಗಳಲ್ಲಿ ನಮ್ಮ ಹಳ್ಳಿಗೆ ಪಟ್ಟಣದ ಸ್ನೇಹಿತರೊಬ್ಬರು ಅಥಿತಿಗಳಾಗಿ ಬಂದಿದ್ದರು. ವೆಸ್ಟರ್ನ್ ಟಾಯ್ಲೆಟ್, ಇಂಡಿಯನ್ ಟಾಯ್ಲೆಟ್ ನಲ್ಲಿ ಬಹಿರ್ದೆಸೆ ಮುಗಿಸುವ ಅವರಿಗೆ ಹಳ್ಳಿಗಳಲ್ಲಿಯ ದಾರಿ ಪಕ್ಕದಲ್ಲಿ ನಾಚಿಕೆ ಇಲ್ಲದೆ ಪ್ಯಾಂಟ್ ಕಳಚಿಕೊಂಡು ಟಾಯ್ಲೆಟ್ ಮಾಡುವವರನ್ನು ಕಂಡಾಗ ಹೇಗಾಗಿರ್ಬೇಡ! “ಏನ್ರೀ ಇದು? ಇವರಿಗೆಲ್ಲಾ ಮನೆಯಲ್ಲಿ ಟಾಯ್ಲೆಟ್ ಸೌಲಭ್ಯ ಇಲ್ಲವೋ?” ಅಂತ ಕೇಳಿದರು. ಅವರ ಮಾತಿಗೆ ಏನು ಉತ್ತರಿಸಬೇಕೆಂದು ತಿಳಿಯದೆ ಪೆಚ್ಚಾಗಿ ಹೋದೆ ಆದರೂ ಸಾವರಿಸಿಕೊಂಡು ಏನಾದರೂ ಸಮರ್ಥನೆ ನೀಡಬೇಕಾಗಿ ಬಂತು. ‘ ಅವರೆಲ್ಲ ಅವಿದ್ಯಾವಂತರು, ಮೊದಲಾಗಿ ಹಿಂದಿನ ಜಮಾನದವರು ಅವರು ಬಹಿರ್ದೆಸೆಗೆ ಹೊರಗೆ ಹೋಗುವುದೇ ಪರಿಪಾಠ ಮಾಡಿಕೊಂಡು ಬಂದವರು ಹಾಗಾಗಿ ನಮ್ಮ ಜನರೇಶನ್ ಗೆ ಒಗ್ಗಿಕೊಳ್ಳಲು ಸಮಯ ಹಿಡಿಯುತ್ತೆ ” ಎಂದೆ. ಆದರೆ ನನ್ನ ಸಮರ್ಥನೆಗೆ ಒಪ್ಪಿಕೊಂಡು ಸರಿ ಅನ್ನುವ ಮನಸ್ಥಿತಿ ಅವರಿಗಿರಲಿಲ್ಲ ಯಾಕಂದರೆ ಅವರು ಆಗಲೇ ದಾರಿ ಬದಿಯಿಂದ ಬರುವ ವಾಸನೆ ತಡೆಯಲು ಆಗದೆ ಗಟ್ಟಿಯಾಗಿ ಮೂಗು ಮುಚ್ಚಿಕೊಂಡು ನಡೆಯುತಿದ್ದರು. ಮೂಗು ಮಚ್ಚಿಕೊಂಡೆ “stupid fellows” ಅಂತ ಉಸಿರಿದ್ದು ಮಾತ್ರ ನನಗೆ ಕೇಳಿಸದೆ ಇರಲಿಲ್ಲ. ಆದರೆ ನನಗೆ ಮಾತ್ರ ಸಿಟ್ಟು ಬರಲಿಲ್ಲ ಸ್ನೇಹಿತನ ವಿರುದ್ಧ ದಿಕ್ಕಿನಲ್ಲಿ ಮುಖ ತಿರುಗಿಸಿ ಕಿಸ್ಸಕ್ ಅಂತ ನಕ್ಕು ಬಿಟ್ಟೆ.

ರಾತ್ರಿಯಲ್ಲಿ ನಮ್ಮ ಮನೆಯಲ್ಲಿಯೇ ಉಳಿದುಕೊಂಡ ಮಿತ್ರರು ‘ನಾನು ದಿನಾ ಮುಂಜಾನೆ ವಾಕ್ ಮಾಡ್ತೇನೆ, ನನಗೆ ಊರು ಹೊಸತು ಹಾಗಾಗಿ ಮುಂಜಾನೆ ಬೇಗ ಎದ್ದು ಇಬ್ಬರು ವಾಕ್ ಹೋಗೋಣ’ಎಂದರು. ತೋಟದಲ್ಲಿ ರಾಶಿ ರಾಶಿ ಕೆಲಸ ಮಾಡಿ ಬಿಸಿಲಲ್ಲಿ ಬೆವರು ಸುರಿಸಿ ಸಾಯಂಕಾಲ ಮನೆಗೆ ಬಂದು ಏಳು ವರೆಯೋ ಎಂಟು ಗಂಟೆಗೋ ಇದ್ದದ್ದನ್ನು ತಿಂದು ಮಲಗಿದರೆ ಮತ್ತೆ ಮುಂಜಾನೆ ಎದ್ದು ತೋಟದ ಕೆಲಸಕ್ಕೆ ಹಾಜರಾಗುವವರಿಗೆ ವಾಕ್ ಯಾಕೆ ಬೇಕು? ಎಂದೆನಿಸಿದರೂ ‘ಅಥಿತಿ ದೇವೋ ಭವ್ ’ಎಂಬಂತೆ ಮನೆಗೆ ಬಂದ ಅಥಿತಿಯನ್ನು ದೇವರಂತೆ ಕಾಣುವುದು ಭಾರತೀಯ ಸಂಸ್ಕೃತಿ ಆಗಿರುವುದರಿಂದ ಅಥಿತಿಯನ್ನು ಚೆನ್ನಾಗಿ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಅಲ್ಲವೇ? ಮಿತ್ರರಿಗೆ ಸಮ್ಮತಿ ಸೂಚಿಸಿ ಮಲಗಿದ್ದೆ.

ಮಾರನೆಯ ದಿನ ಬೆಳಿಗ್ಗೆ ಮಿತ್ರರು ನನ್ನನ್ನು ಎಬ್ಬಿಸಿದರು ಆದರೆ ಚೂರು ನಸುಕಿನಲ್ಲಿ ಒಬ್ಬರ ಮುಖ ಮತ್ತೊಬ್ಬರಿಗೆ ಸ್ಪಷ್ಟವಾಗಿ ಕಾಣುತಿರಲಿಲ್ಲ. ನಾನು ಟಾರ್ಚ್ ತೆಗೆದುಕೊಂಡು ಮುಂದೆ ನಡೆಯುವುನ್ನೇ ಮಿತ್ರರೂ ಹಿಂಬಾಲಿಸುತಿದ್ದರು. ನನಗೆ ಚಕ್ಕನೆ ನೆನಪಾಯ್ತು ‘ಅಯೋ! ಈಗ ಬೆಳಗ್ಗಿನ ಐದು ಗಂಟೆ ಸಮಯ ಒಣಿಯ ಹೆಂಗಸರು ರೋಡ್ ಬದಿಯಲ್ಲಿ ಶೌಚಕ್ಕೆ ಕೂತಿರ್ತಾರೆ ಅವರ ಮದ್ಯದಿಂದ ಹೋಗೋದು ಹ್ಯಾಗೆ? ಅದು ನಡೆದುಕೊಂಡು? ಬೇರೊಂದು ಉಪಾಯ ಹೊಳೆಯಲಿಲ್ಲ. ಪಟ್ಟಣದಿಂದ ಬಂದ ಮಿತ್ರನಿಗೆ ಈ ವಿಷಯವನ್ನು ಹೇಳಲಿಕ್ಕೂ ಸಂಕೋಚ. ಒಬ್ಬೇ ಒಬ್ಬ ಮನುಷ್ಯ ಶೌಚಕ್ಕೆ ಕೂತದ್ದನ್ನು ನೋಡಿ ಮುಖ ತಿರುಗಿಸಿದ್ದವರು ಇನ್ನೂ ಬ್ಯಾಂಕ್ ಮುಂದೆ ಕ್ಯೂ ಕೂರುವಂತೆ ಶೌಚಕ್ಕೆ ಕೂರುವ ಹೆಂಗಸರ ಸಾಲು ನೋಡಿದರೆ ಏನಂದಾರು? ಎಂಬ ಗೊಂದಲ ಶುರುವಾಯಿತು. ಆದರೆ ಮಾಡೋದು ಏನು? ” ಕಾಲೈ ತಸ್ಮೈ ನಮಃ ” ವಾಕ್ಯಾನುಸಾರವಾಗಿ ಎಲ್ಲದಕ್ಕೂ ಕಾಲವೇ ಉತ್ತರಿಸಬೇಕು ಎಂದು ಸಮ್ಮನೇ ಅವರ ಮುಂದೆ ಮುಂದೆ ನಡೆದು ಹೊರಟೆ.

ನಮ್ಮ ಬೀದಿಗಳಲ್ಲಿ ನಡೆದು ಮುಖ್ಯ ರಸ್ತೆಯಲ್ಲಿ ಸಾಗುವಾಗ ದಾರಿ ಬದಿಯ ಹೆಣ್ಣಾಕೃತಿಗಳು ದಡದಡ ಎದ್ದು ನಿಂತರು ಅದನ್ನು ನೋಡಿದ ಮಿತ್ರರು ಅವ್ವಾಕ್ಕಾಗಿ ನನ್ನನ್ನು ನೋಡಿ “ಏನಯ್ಯ ಇದು ಇವರೆಲ್ಲರೂ ನಮ್ಮನ್ನ ಸ್ವಾಗತ ಮಾಡುವವರಂತೆ ಹೀಗೆ ನಿಂತರಲ್ಲ ಏನ ನಡಿತಿದೆ ಇಲ್ಲಿ?, ಊರಲ್ಲಿ ಏನಾದರೂ ಹಬ್ಬ ಉಂಟೆ?’ ಎಂದರು. ಮರುಕ್ಷಣವೇ ಅವರಿಗೆ ಶೌಚದ ವಾಸನೆ ಮೂಗಿಗೆ ಅಡರಿಕೊಂಡು ನಾನು ಹೇಳುವ ಮೊದಲೇ ವಾಸ್ತವ ಅರಿವಿಗೆ ಬಂದಿತ್ತು. ಅಲ್ಲಿ ನಿಲ್ಲದೆ ದುರುದುರನೆ ನಡೆದು ಮುಂದೆ ಸಾಗಿದೆವು. ಇಬ್ಬರೂ ಮೌನವಾಗಿಯೇ ವಾಕ್ ಮುಗಿಸಿ ಮನೆ ಸೇರಿದೇವು. ಮಧ್ಯಾಹ್ನ ಅವರು ಮರಳಿ ಊರಿಗೆ ಹೋಗುವುದಾಗಿ ತಿಳಿಸಿದರು. ನಾನು ‘ ನಮ್ಮೂರಿನ ವಾಸ್ತವ ಹೀಗಿದೆ ಅಂತ ಏನು ಅನ್ಕೊಬೇಡಿ. ಎಷ್ಟು ಹೇಳಿದರು ಜನ ಕೇಳಲ್ಲ. ಮನೆಯಲ್ಲಿಯೇ ಶೌಚಾಲಯ ಇದ್ದರೂ ಬಳಸಲು ಇಷ್ಟ ಪಡಲ್ಲ. ಏನ ಮಾಡೋದು ಹೇಳಿ? ಅಂತ ” ಅವರಲ್ಲಿ ಕ್ಷಮೆಯಾಚಿಸಿದೆ. ಅವರಿಗೂ ಅದು ಹೊಸ ಅನುಭವಾದ್ದರಿಂದ ಒಲ್ಲದ ಮನಸಲ್ಲಿ ‘ಪರ್ವಾಗಿಲ್ಲ ನಾನೇನು ಅಂದುಕೊಳ್ಳಲ್ಲ ಬಿಡಿ, ಊರೆಲ್ಲಾ ಹೀಗೆ ರೋಡ್ ಬದಿಯಲ್ಲಿ ಬಹಿರ್ದೆಸೆ ಮಾಡಿದರೆ ನೀವೋಬ್ಬರೆ ಏನ ಮಾಡೀರಿ. ಕಾಲಾಂತರದಲ್ಲಿ ಸರಿ ಹೋಗಬಹುದು ”ಅಂತೇಳಿ. ತಮ್ಮ ಊರಿಗೆ ವಾಪಸ್ಸಾದರು.


ಸಾಮಾನ್ಯವಾಗಿ ಪಟ್ಟಣದ ನಿವಾಸಿಗಳು ಹಳ್ಳಿಗಳಲ್ಲಿಯ ಜನರನ್ನು ದಡ್ಡರೆಂದು ಭಾವಿಸುತ್ತಾರೆ ಆದರೆ ಹಳ್ಳಿಯ ಜನರು ದಡ್ಡರಲ್ಲ ; ಮಗ್ಧರೆಂದರೆ ಸರಿಹೋದೀತು. ಮೊದಲೆಲ್ಲಾ ಹಳ್ಳಿಗಳಲ್ಲಿ ಪಟ್ಟಣದಲ್ಲಿ ವಾಸಿಸುವವರನ್ನು ಕಂಡರೆ ಮೂಗು ಮುರಿಯುದು ಸಾಮಾನ್ಯವಾಗಿತ್ತು “ ತಿನ್ನೋದು ಅಲ್ಲೆ ಹೇಲೋದು ಅಲ್ಲೆ ಮಾಡ್ತಾವಂತೆ ” ಅನ್ನುತಿದ್ದವರು ಕಾಲಾಂತರದಲ್ಲಿ ಪ್ರತಿ ಮನೆಗೊಂದು ಶೌಚಾಲಯ ನಿರ್ಮಾಣ ಮಾಡಬೇಕು ಇಲ್ಲದಿದ್ದಲ್ಲಿ ಸರ್ಕಾರದಿಂದ ಪಡೆಯುವ ರೇಶನ್ ಪಡೆಯಲು ಅರ್ಹರಾಗಿರುವುದಿಲ್ಲ ಎಂಬುದು ಅರಿತಾಗ ಮನೆಗೊಂದು ಶೌಚಾಲಯ ನಿರ್ಮಾಣವಾಯಿತು. ನನಗಾಗ ಅನ್ನಿಸಿದ್ದು “ ಆಯಿತಲ್ಲ ಇನ್ನೇನು ಮನೆಗೊಂದು ಶೌಚಾಲಯ, ಊರ ಬದಿಯ ದಾರಿ ಸ್ವಚ್ಛವಾಗಿರುತ್ತದೆ, ವಾಸನೆ ಬರುವುದಿಲ್ಲ, ಹೆಣ್ಮಕ್ಕಳು ಆರಾಮಾಗಿ ಶೌಚ ಮಾಡಬಹುದು, ಮನೆಯಲ್ಲೇ ಶೌಚಾಲಯ ಇರುವಾಗ ಇಷ್ಟು ದೂರ ನಡೆದು ಬಂದು ಶೌಚ ಯಾರು ಮಾಡುತ್ತಾರೆ? ಇಂತಹದೊಂದು ನಿರ್ಣಯ ಸರ್ಕಾರ ತೆಗೆದುಕೊಂಡದ್ದು ಸ್ವಾಗತಾರ್ಹ’ ಎಂದು ಭಾವಿಸಿದ್ದೆ. ಆದರೆ ‘ತಾನೊಂದು ಬಗೆದರೇ ಧೈವವೊಂದು ಬಗೆಯಿತು ’ ಎಂಬಂತೆ ಊರಿನ ಯಾವ ದೊಣ್ಣೆನಾಯಕನು ಶೌಚಾಲಯದ ಬಾಗಿಲು ತೆರೆಯಲಿಲ್ಲ, ಒಳಗೋಗಿ ಕೂರಲಿಲ್ಲ, ಅಷ್ಟಕ್ಕೂ ಹೆಣ್ಣುಮಕ್ಕಳಾದರೂ ಉಪಯೋಗಿಸಿದರೇ? ಉಹುಂ. ಅವರು ಕೈಯಲೊಂದು ತಂಬಿಗೆ ಹಿಡಿದು ಗುಂಪು ಗುಂಪಾಗಿ ನಡೆದು ಹೋಗುತಿದ್ದರೆ ಊರಿನ ಯಾರದೋ ಮನೆಯ ಬೆಡ್ರೂಮ್ ನಿಂದ ಹಿಡಿದು ದಾರಿ ಬದಿಯಲ್ಲಿ ಕೂರುವ ಶೌಚದ ತನಕದ ಸುದ್ದಿಗಳ ಸಮಾಗಮ ನಡೆಯುತ್ತದೆ ಅಂತಹ ಮನರಂಜನಾ ಕೂಟವನ್ನು ಯಾರು ಕಳೆದು ಕೊಳ್ಳುತ್ತಾರೆ ಹೇಳಿ? ನೋ ಒನ್.

ಹೀಗೆ ದಾರಿ ಬದಿಯಲ್ಲಿ ಶೌಚಕೆಂದು ತೆರಳುವ ಹೆಣ್ಣುಮಕ್ಕಳಹೆಣ್ಣುಮಕ್ಕಳು ಸೇಪ್? ಉಹುಂ. ಅದೆ ಸಮಯದಲ್ಲಿಯೇ ತಂಬಿಗೆ ಹಿಡಿದು ಕೊಂಡು ಅದೆ ದಾರಿಯಲ್ಲಿ ತೆರಳುವ ವಿಠಪುರಷರು ತಮ್ಮ ಕಾಮುಕ ಕಣ್ಣುಗಳಿಂದ ಹೆಣ್ಣನ್ನು ಪೀಡಿಸುವುದು ಸಾಮಾನ್ಯ ಸಂಗತಿಯಾಗಿತ್ತು. ಊರಿದ್ದಲ್ಲಿ ಪುಂಡಪೋಕರಿಗಳ ಗುಂಪೊಂದು ಇದ್ದೆ ಇರುತದಲ್ಲಾ ಅಂತಹ ಪುಂಡಪೋಕರಿಗಳ ಗುಂಪು ಬಹಿರ್ದೆಸೆಗೆ ಬಂದ ಹೆಂಗಸರನ್ನು ಕೆಕ್ಕರಿಸಿ ನೋಡುವುದು, ಬೀದಿಯಲ್ಲಿ ನಿಂತು ಚುಡಾಯಿಸೋದು ನಡದೇ ಇತ್ತಾದರೂ ಊರಿನ ಯಾವ ಹೆಣ್ಣುಮಕ್ಕಳು ತಮ್ಮ ಮನೆಯಲ್ಲಿಯೇ ಇದ್ದ ಶೌಚಾಲಯ ಬಳಸಲಿಲ್ಲ. ಪರ ಊರಿನಲ್ಲಿ ಅಂತಹದೊಂದು ಘಟನೆ ನಡದೇ ಹೋಯಿತು. ಆಕೆ ಎರಡು ಮಕ್ಕಳ ತಾಯಿ ವಯಸ್ಸಿನಲ್ಲಿ ಚಿಕ್ಕವಳಾದರೂ ಬೇಗ ಮದುವೆ ಆಗಿದ್ದರಿಂದ ತಾಯಿ ಪಾತ್ರ ನಿಭಾಯಿಸಬೇಕಿತ್ತು. ಆದರೆ ಅವಳಿಗೆ ಅದೆಲ್ಲಿಂದ ಪ್ರೇರಣೆ ಬಂತೋ ಕಾಣೆ. ಪರ ಪುರಷನೊಬ್ಬನನ್ನು ಪ್ರೇಮಿಸಲು ಶುರುಮಾಡಿದ್ದಳು. ಹೀಗೆ ಬಹಿರ್ದೆಸೆ ಹೋಗುವಾಗೆಲ್ಲಾ ಅವರಿಬ್ಬರ ಬೇಟಿ ಆಗುತಿತ್ತಂತೆ. ಅವರಿಬ್ಬರ ಪ್ರೀತಿ ಪ್ರೇಮದ ವಿಷಯ ಆ ಊರಲ್ಲಿ ಯಾರಿಗೂ ತಿಳಿದಿರಲಿಲ್ಲ ಎಲ್ಲಿಯವರೆಗೆ ಅಂದ್ರೆ ಅವರಿಬ್ಬರೂ ತಮ್ಮತಮ್ಮೊಳಗೆ ಮಾತಾಡಿಕೊಂಡು ಮನೆ ತೊರೆದು ಓಡಿ ಹೋಗುವವರೆಗೆ. ಯಾವಾಗ ಅದೊಂದು ನಸುಕಿನಲ್ಲಿ ಶೌಚಕ್ಕೆ ಹೋದ ಹೆಂಡತಿ ಮನೆಗೆ ವಾಪಸ್ ಆಗಲಿಲ್ಲವೋ ಆಗಲೇ ಗೊತಾಗಿದ್ದು ಅವಳು ಇನ್ನೊಬ್ಬ ಗಂಡಿಸಿನೊಂದಿಗೆ ಓಡಿ ಹೋಗಿದ್ದಾಳೆಂದು. ಊರೆಲ್ಲಾ ಅದೆ ವಿಷಯ ಗುಲ್ಲೋ ಗುಲ್ಲು ಆಯ್ತು. ಅದಾದ ನಂತರದ್ದಲ್ಲಿಯೂ ಮನೆಯ ಶೌಚಾಲಯಗಳು ಬಳಕೆಗೆ ಬರಲಿಲ್ಲ ಎನ್ನುವುದು ವಿಷಾದದ ಸಂಗತಿ.


ಆಗಲೇ ಹೇಳಿದಂತೆ ‘ಕಾಲೈ ತಸ್ಮೈ ನಮಃ’ ಕೆಲವೊಮ್ಮೆ ಕಾಲವೇ ಉತ್ತರಿಸುತ್ತದೆ. ಮನುಷ್ಯನನ್ನು ಸರಿ ದಾರಿಗೆ ತರುವುದು ಕಾಲಕ್ಕೆ ಇರುವಷ್ಟು ತಾಕತ್ತು ಮತ್ಯಾವುದಕ್ಕಿದೆ. ಎರಡು ಸಾವಿರದ ಇಪ್ಪತ್ತರ ಮಾರ್ಚ ತಿಂಗಳಲ್ಲಿ ಭಾರತಕ್ಕೆ ಬಂದ ಕರೋನಾ ಪ್ರತಿಯೊಬ್ಬರಿಗೂ ಸರಿಯಾದ ಪಾಠ ಕಲಿಸಿತು ಎಂದರೆ ತಪ್ಪಾಗಲಾರದು. ಒಬ್ಬರಿಗೊಬ್ಬರು ಅಂತರ ಕಾಪಾಡಿಕೊಳ್ಳುವುದು, ಸ್ವಚ್ಚವಾಗಿ ಪದೆ ಪದೆ ಕೈ ತೊಳೆದು ಕೊಳ್ಳುವುದು, ಮುಖಕ್ಕೆ ಮಾಸ್ಕ್ ಧರಿಸಿಕೊಂಡೇ ತಿರುಗಾಡುವುದು, ಮನೆಯಿಂದಾಚೆ ಬರುವುದು ನಿಷಿದ್ಧ ಎಂಬಂತಹ ಹಲವಾರು ನಿರ್ಬಂಧಗಳನ್ನ ಜನರು ವಿಧಿಯಿಲ್ಲದೆ ಪಾಲಿಸಬೇಕಾಗಿ ಬಂತು. ಹಳ್ಳಿ ಹಳ್ಳಿಗಳಲ್ಲಿ ಅರಕ್ಷಕರು ಬಿಡಾರ ಹೂಡಿ ಜನರನ್ನು ಮನೆಯಿಂದಾಚೆ ಬರುವುದು ತಡೆಗಟ್ಟಲಾಯಿತು. ಯಾವ ಊರಿನ ಜನರು ಮನೆಯಲ್ಲಿಯೇ ಶೌಚಾಲಯ ವ್ಯವಸ್ಥೆ ಇದ್ದರೂ ಹೊರಗಡೆ ಹೋಗಿ ಬರುತಿದ್ದರೋ ಅವರಿಗೆಲ್ಲಾ ಬ್ರೇಕ್ ಬಿದ್ದಿತ್ತು. ಅಷ್ಟಕ್ಕೂ ಕಾನೂನು ಮೀರಿ ನಿಲ್ಲುವ ಪೋಕರಿಗಳಿಗೆ ಪೋಲಿಸರ ಲಾಟಿ ರುಚಿ ತೋರಿಸಿತು.

ಇನ್ನೂ ಕರೋನಾ ಬರದೇ ಇರುವ ಕಾಲದಲ್ಲಿ. “ ರೋಡ್ ಮೇಲೆ ಹೀಗೆ ಶೌಚಕ್ಕೆ ಕೂರಬಾರದು, ರೋಗ ರುಜಿನಗಳು ಹುಟ್ಟಿಕೊಳ್ಳುತ್ತವೆ. ದೊಡ್ಡವರಾದ ನಾವೇ ಹೀಗೆ ಮಾಡಿದ್ರೆ ಮಕ್ಳು ಅದೆ ದಾರಿ ಹಿಡಿತಾರೆ, ಮನೆಗೊಂದು ಶೌಚಾಲಯ ಇದೆಯಲ್ಲಾ ಅದನ್ನೇ ಬಳಸಿಕೊಳ್ಳಿ ” ಅಂತ, ಪ್ರವಚನ ಹೇಳಲು ಊರಿಗೆ ಬಂದ ಹಿರಿಯ ಸ್ವಾಮಿಜೀ ಒಬ್ಬರು ಒತ್ತಿ ಒತ್ತಿ ಹೇಳಿದ್ದರು. ಪ್ರವಚನ ಕೇಳಲಿಕ್ಕೆ ಸಾವಿರಾರು ಜನ ಕೂಡಿದ್ದರು ಆ ಕ್ಷಣಕ್ಕೆ ಸ್ವಾಮಿಜೀ ಗಳ ಮಾತು ಎಲ್ಲರ ಮನ ಮುಟ್ಟಿತಾದರೂ ಮನೆಗೆ ಬರುವಷ್ಟರಲ್ಲಿ ಮರೆತೆ ಬಿಟ್ಟದ್ದರು. ಇಂತಹ ಧೈವಾನು ಸಂಭೂತರಾದ ಸ್ವಾಮಿಜೀ ಮಾತುಗಳನ್ನೇ ಪಾಲಿಸುವುದಿಲ್ಲ ಎಂದಮೇಲೆ ಊರು ಬಿಟ್ಟು ನಾಲ್ಕು ದಿನ ಕಾಲೇಜು ಓದಿ ಬಂದ ನಾವು ಹೇಳಿದರೆ ಕೇಳುತ್ತಾರೆಯೇ ಅಂತ ಯುವ ಪೀಳಿಗೆ ಮಾತಾಡಿಕೊಳ್ಳುತಿದ್ದರು. ಯಾವಾಗ ಕರೋನಾ ಮಹಾಮಾರಿಯ ಸುದ್ದಿ ಊರು ತಾಲುಕು, ಜಿಲ್ಲೆ, ದೇಶದೆಲ್ಲೆಡೆ ಹರಡಿತೋ ಅವಾಗಲೇ ಊರಿನ ದಾರಿಗಳು ಸ್ವಚ್ಚವಾದವು. ಈ ರೋಗಕ್ಕೆ ಹೆದರಿ ಯಾರೂ ದಾರಿ ಯಲ್ಲಿ ಶೌಚಕ್ಕೆ ಕೂರಲು ಹಿಂದೆ ಸರಿದರು. ಅಲ್ಲಿಯವರೆಗೆ ಅನಾಥ ಮಗುವಿನಂತೆ ಉಳಿದುಕೊಂಡ ಶೌಚಾಲಯಗಳಿಗೆ, ಎಂದೂ ಹನಿ ನೀರು ಕಾಣದ ಶೌಚಾಲಯಗಳಿಗೆ, ಒಂದು ಬಾರಿಯೂ ಬಾಗಿಲು ತೆರೆಯದ ಶೌಚಾಲಯಗಳಿಗೆ ಇದ್ದಕ್ಕಿದ್ದಂತೆ ಕರೋನಾ ಕಾರಣದಿಂದ ಅವುಗಳ ನಶೀಬ್ ತೆರೆಯಿತು. ಎಲ್ಲರೂ ತಮ್ಮ ಮನೆಯ ಶೌಚಾಲಯ ಬಳಸಲು ಪ್ರಾಬಿಸಿದರು, ಇದುವರೆಗೆ ಶೌಚಾಲಯ ಇಲ್ಲದವರು ಶೌಚಾಲಯ ಕಟ್ಟಿಸಿ ಅದನ್ನು ಉಪಯೋಗಿಸಿದರು. ಕರೋನಾ ಎಂಬ ಕೋಲ್ಮಿಂಚು ಹೊಡೆಯದೆ ಇದ್ದರೆ ಇಂತಹದೊಂದು ಬದಲಾವಣೆ ಕಾಣುವುದು ಅಸಾಧ್ಯ ಆಗಿತ್ತು. ಬಹುಶಃ ಸ್ವಚ್ಛ ಭಾರತಕ್ಕೆ ಒಂದು ಪೃಷ್ಠಿ ಕೊಟ್ಟಂತಾಯಿತು ಈ ಕರೋನಾ.

ಇದೆ ಕರೋನಾ ಸಮಯದಲ್ಲಿ ನನ್ನ ಮಿತ್ರರಿಗೆ ಪೋನ್ ಮಾಡಿ
‘ಈಗ ಬನ್ನಿ ನಮ್ಮೂರಿಗೆ ಒಂದು ಬಾರಿ ನೋಡಿ ಹೋಗುವಿರಂತೆ ’ ಅಂತ ಹೇಳ್ದಾಗ.

‘ದಾರಿಯಲ್ಲಿ ಈಗಲೂ ಕೂರುತ್ತಾರೆಯೇ ’ಎಂದರು.

ಇಲ್ಲ ಇಲ್ಲ! ಅದೆಲ್ಲಾ ಮುಗಿದೋದ ಕಥೆ, ಕರೋನಾ ಬಂದಿದೆ ಯಾರು ಮನೆಯಾಚೆಗೆ ಬರಲ್ಲ. ಮನೆಯ ಶೌಚಾಲಯ ಬಳಸಿಕೊಳ್ಳುತಿದ್ದಾರೆ. ಎಂದೆ.

‘ಓಹೋ! ಪ್ರಕೃತಿಯೇ ಪಾಠ ಕಲಿಸಿತು ನೋಡಿ ಮನುಷ್ಯರಿಗೆ ’ಎನ್ನುತ್ತ ನಕ್ಕರು.

‘ಕರೋನಾ ಕೊಲ್ಮಿಂಚು ಅನ್ನಬಹುದೇ’ ಎಂದೇ ನಾನು ನಗುತ್ತಾ.

‘ಎಸ್ ಎಸ್ ಯು ಆರ್ ಕರೆಕ್ಟ್’ ಎನ್ನುತ್ತ ಪೋನ್ ಇಟ್ಟರು.

-ರವಿ ಶಿವರಾಯಗೊಳ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x