ಕೊರಳ ಕರೆ
ಯಾವ ದಾರಿಯಲಿ ಹೇಗೆ ಸಾಗಿದರು
ಬಂದು ಸೇರುವೆ ಇಲ್ಲಿಗೆ
ದುಂಬಿ ಕಳವಳ ಹೂವು ಬಲ್ಲದು
ಕರೆಯದಿರುವುದೆ ಮೆಲ್ಲಗೆ?
ರಾತ್ರಿ ರಮಣಿಯ ಚಂದ್ರ ಬಿಡುವನೆ
ಎಳೆದು ತರುವನು ಗಲ್ಲಿಗೆ
ಚಂದ್ರಿಕೆಯ ಆ ಇರುಳ ಹೆರಳಿಗೆ
ಮುಡಿಸದಿರುವನೆ ಮಲ್ಲಿಗೆ?
ಕಡಲ ಚುಂಬನ ಮಧುರ ಬಂಧನ
ಬಿಡದೆ ಇರಿವುದು ಎನ್ನೆದೆ
ರಾಗರಂಜಿನಿ ಗುಪ್ತಗಾಮಿನಿ
ಬಿಡುವುದೇನೆ ನಿನ್ನೆದೆ?
ಒಲವಗಾಳಿಯು ಸೆರಗು ಹಾಸಿದೆ
ಭಾವ ಬೆಸೆದಿದೆ ಹರುಷದೆ
ಬಾರದಿರುವ ಮಳೆಯ ತಂದು
ಸುರಿಸೆಯೇನೆ ಸರಸದೆ?
ನಮ್ಮ ನಡುವಿನ ಹಮ್ಮುಬಿಮ್ಮು
ತೂರಿ ಹೋಗಲಿ ಬಾರದೆ
ಬಮ್ಮ ಹಾಕಿದ ನಮ್ಮ ಗಂಟನು
ನಮಗೆ ಅದನು ತೋರದೆ
ತಾಕುಗಣ್ಣಿನ ದುರುಳ ನೋಟವು
ಇಂಗಿಹೋಗಲಿ ಉಳಿಯದೆ
ಉಸಿರಿಗುಸಿರನು ಬೆರೆಸಿ ಬದುಕುವ
ನಾಕ ನರಕವನಳೆಯದೆ
*ಗಲ್ಲಿಗೆ=ಓಣಿಗೆ
-ನೀ. ಶ್ರೀಶೈಲ ಹುಲ್ಲೂರು
ಸೂರ್ಯನ ನಂಬಿ
ಪ್ರಶ್ನೆಗಳಿದ್ದವು
ಅವಳೆದೆಯೊಗೆ
ಯಾರಿಗೂ ಕೇಳಲಾಗದ
ಯಾರಿಗೂ ಹೇಳಲಾಗದ
ಉತ್ತರ ನಿರೀಕ್ಷಿಸಲಾಗದಂತವು
ಉತ್ತರವಾಗುತ್ತೇನೆಂದು ಬಂದವ
ಸ್ಖಲಿಸಿದ
ಮರುಕ್ಷಣವೇ ಮಾಯವಾದ
ಪ್ರಶ್ನೋತ್ತರ ಚಿಹ್ನೆಯಾಗಿ!
ಈಗ ತನ್ನಪ್ರಶ್ನೆಗಳು ಸಾಲದೆಂದು
ಅವನನ್ನೂ
ಮತ್ತೊಂದು ಪ್ರಶ್ನೆಯಾಗಿಸಿಕೊಂಡು
ಕೂತಿದ್ದಾಳೆ
ಉತ್ತರ ಸಿಗಬಹುದೆಂಬ ಭ್ರಮೆಯಲಿ
ಕಾಲದ ಕತ್ತಿಯ ಮಸೆಯುತ್ತ.
ಪ್ರಶ್ನೋತ್ತರಗಳ ಗೋಜಲಿನಲ್ಲಿ
ಮುಟ್ಟುನಿಂತು ಹೋಗಿರುವುದನ್ನೇ ಮರೆತು
ಖರೀಧಿಸುತ್ತಾಳೆ
ಸ್ಯಾನಿಟರಿ ನ್ಯಾಪ್ ಕಿನ್ನುಗಳ
ವ್ಯರ್ಥವಾಗಿ
ಮತ್ತೀಗ ಅವರಮ್ಮನಂತೆಯೇ
ಬೇಕಂತಲೇ ಶಬ್ದ ಮಾಡಿ ನಗುತ್ತಾಳೆ
ಅಳುವನ್ನು ಕೊರಳೊಳಗೇ ತಡೆ ಹಿಡಿದು
ಅವಳೀಗ
ಗೋಡೆ ಮೇಲಿನ ಗಡಿಯಾರ ಕ್ಯಾಲೆಂಡರುಗಳ
ಕಿತ್ತೆಸೆದು
ಕಾಲದ ಹಂಗಿಲ್ಲದೆಯೇ
ಬದುಕುತ್ತಿದ್ದಾಳೆ
ಪೂರ್ವಕ್ಕು ಪಶ್ಚಿಮಕ್ಕು
ಅಲೆದಾಡುವ ಸೂರ್ಯನ ನಂಬಿ!
-ಕು.ಸ.ಮಧುಸೂದನ ರಂಗೇನಹಳ್ಳಿ
ಬಿಡು-ಬಿಡದ ಮಾಯೆ
ನೀ ಅಲ್ಲಿ ಮನದ ಧರೆಯನು ಹಗೆದು
ನೆನಪ ಬೀಜಗಳ ಬಿತ್ತಿದರೆ
ಇಲ್ಲಿ ಮನದ ತೋಟದ ತುಂಬಾ
ನಳ ನಳಿಪ ಪರಿಮಳದ ಕುಸುಮಗಳು //
ನೀ ಅಲ್ಲಿ ಪ್ರೇಮ ತೈಲವನೆರೆದು
ಒಡಲ ಹಣತೆಯ ದೀಪ ಹಚ್ಚಲು
ಇಲ್ಲಿ ಮನದ ಅಂಧಕಾರ ಓಡಿ
ಮೂಡಿವೆ ಹೊಂಬೆಳಕ ಕಿರಣಗಳು //
ನೀ ಅಲ್ಲಿ ನನ್ನ ನೆನಪಲಿ ನಲುಗಿ
ನಿದುರೆ ಇಲ್ಲದೆ ನರಳಲು
ಈ ಒಡಲ ಅನಿದ್ರಾವಸ್ಥೆಯಲಿ
ಗೋಜಲು ಗೋಜಲು ಕನವರಿಕೆಗಳು//
ಅಲ್ಲಿ ನಿನ್ನ ಮನದಾಗಸದ ತುಂಬಾ
ಮಂದ ಮೋಡಗಳ ನೋವಾದರೆ
ಇಲ್ಲಿ ಮನದ ವಸುಂಧರೆಯ ತುಂಬಾ
ಭೋರಿಡುವ ಕಣ್ಣ ಹನಿಗಳು//
ನಾ ಬಿಟ್ಟೆನೆಂದರೂ ನೀ ಬಿಡದ ಮಾಯೆ//
-ವಿಶಾಲಾ ಆರಾಧ್ಯ ರಾಜಾಪುರ
ವಿಳಾಸವಿಲ್ಲದ ಸಂದೇಶ
ಒಲವಿಂದ ಬರೆದ
ಸಂದೇಶ ಎದೆಯಲ್ಲಿ
ಕರಡು ಪ್ರತಿಯಾಗಿ
ಉಳಿದಿದೆ ನೋಡು
ಪದೆ ಪದೆ ಕಳಿಸಲು ಮನಸಿಲ್ಲ..!!
ಇಂದೇಕೋ ಉತ್ಸಾಹವದು
ಕೊನರಿ ಟೈಪಿಸಿದ್ದೇನೆ
ಒಡಲ ಒಳಗಿನ
ಭಾವಗಳ ತುರುಕಿ
ನಡೆದಿದ್ದೇನೆ
ಸಂತಸದ ಚಣದಲ್ಲಿ
ಯಾಕೋ ಸಂದೇಶ
ಪದೇ ಪದೇ ಕಳಿಸಲು ಮನಸ್ಸಿಲ್ಲ..!!
ದುಗುಡವದು ಕೊರೆದು
ಹಗುರವಾಗದ ಮನದಿ
ಬರೆದು ಕೂತಿದ್ದೇನೆ
ಕಳಿಸಲು ಪ್ರಯತ್ನ ಪಟ್ಟೆ
ಹೋಗಲೆ ಇಲ್ಲ ಸಂದೇಶ
ಪದೇ ಪದೆ ಕಳಿಸಲು ಮನಸ್ಸಿಲ್ಲ..!!
ನೆತ್ತರಿನ ಆಳದಲಿ
ನಿನ್ನ ನೆನಪುಗಳು
ಕುದಿಯುತ್ತಿವೆ ಪ್ರೇಮ
ದಾಂಗುಡಿಯಿಟ್ಟು
ಧಾಷ್ಟ್ಯತನದಿ ಸಾಗಿಬಂದ
ಕನಸುಗಳ ಎಣಿಕೆಗಳಲ್ಲಿ
ಪದೆ ಪದೆ ಕಳಿಸುವ ಮನಸ್ಸಿಲ್ಲ…!!
ಕಳಿಸಲೆ ಬೇಕೆಂದು
ನಿರ್ಧಾರ ತಗೆದುಕೊಂಡೆ
ಧಾವಂತದಿ ವಿಳಾಸವನು
ಮರೆತು ಹೋಗಿದ್ದೇನೆ
ಏಕೆ ಹೀಗೆ ನಲ್ಲೆ ಇದು
ನಿಜವೇ ಅಥವಾ ಸುಳ್ಳೆ
ಗೊತ್ತಾಗದ ಯಕ್ಷಪ್ರಶ್ನೆ
ಉತ್ತರ ಸಿಗುವ ತನಕ
ಪದೇ ಪದೇ ಕಳಿಸುವ ಮನಸಿಲ್ಲ..!!
ಶಂಕರಾನಂದ ಹೆಬ್ಬಾಳ
ಮಳೆಯ ಹಾಡು
ಕಾನನದ ಊರಿದು ದಟ್ಟ ಹಸಿರಿನ ನೆರಳು
ಕಾಲಿಟ್ಟ ಕಡೆಯೆಲ್ಲ ಚಿಗುರು ಚಿಗುರು;
ಮಳೆ ಬಂದು ಮುದ್ದಿಸಿ ಸಿಹಿ ಪ್ರಣಯ ಸಂಭವಿಸಿ
ನೆಲಕನ್ಯೆಯವಳೀಗ ತುಂಬು ಬಸಿರು.
ಒಣ ಕೂಪದೆದೆಯಲ್ಲಿ ತುಂಬಿಕೊಂಡೆಯ ಜಲವೆ
ಹರಿದು ಬಂದೆಯ ಬಿರಿದ ದಾರಿಯಲ್ಲಿ?
ಬೆಳೆಯಾಗಿ, ಹೊಳೆಯಾಗಿ, ಬಾಯಾರಿದೊಡಲಾಗಿ
ಕಾದು ನಿಂತೆವು ನಿನಗೆ ನಾವು ಇಲ್ಲಿ.
ಹನಿ ಸೋಕಿದಲ್ಲೆಲ್ಲ ದನಿಗಳಿಗೆ ಮರುಜೀವ
ಒರಟು ಬಂಡೆಯ ಮೇಲೂ ಸೃಷ್ಟಿಯೊಲುಮೆ;
ಮುರಿದ ಕೊರಡಿಗೆ ಕೂಡ ಚಿಗುರಿನ ಹೊಸ ಜನ್ಮ
ಹೇಳು ಮಳೆಯೇ ನಿನದು ಎಂಥ ಕರುಣೆ!
ಯಂತ್ರಮಾನವರಾಗಿ ನಿಂತ ಮನುಜನ ಬಾಳು
ಚೈತ್ರ-ಮಾಘಗಳಾಚೆ ನಡೆಯುತಿಹುದು;
ಒಡ್ಡು-ಕಟ್ಟನು ಬಿಗಿದು ನಿನ್ನ ಮಮತೆಯ ನದಿಗೆ
ನೋಡು ನಮ್ಮೆಯ ಬಾಳೇ ಮುಳುಗುತಿಹುದು.
-ವಿನಾಯಕ ಅರಳಸುರಳಿ,