ಲೋ ಕರಿಯ,
ಹೀಗೆ ಅಲ್ಲವೆ ನಿನ್ನನ್ನು ನಾನು ಅಂದು ಕರೆಯುತ್ತಿದ್ದು. ಗೋದಿ ಬಣ್ಣದ ನೀನು ಅದೆಷ್ಟು ಕೋಪಿಸಿಕೊಳ್ಳುತ್ತಿದ್ದೆ. ಪ್ರೀತಿಯನ್ನ ಅರ್ಥೈಸಲು, ವ್ಯಾಖ್ಯಾನಿಸಲು ನನಗೆ ಬರುವುದಿಲ್ಲ ಆದರೆ ನಿನ್ನ ಮೇಲಿನ ಪ್ರೀತಿಯಲ್ಲಿ ಒಡಮೂಡುವ ನಾನಾ ಪರಿಯ ಬಯಕೆ, ಹಂಬಲಗಳನ್ನ ನಿರೂಪಿಸಬಲ್ಲೆ. “ಇಂದು ನಾನು ನನ್ನ ದಿನವನ್ನು ಅತ್ಯಂತ ಖುಷಿಯಿಂದ ಕಳೆಯುತ್ತೇನೆ” ಎಬೊಂದು ಅಸ್ಥಿರವಾದ ಸಾಲನ್ನೇಳಿಕೊಂಡು ಮಧುರ ಮುಂಜಾವಿಗೆ ಹೆಜ್ಜೆ ಇಡುತ್ತಿದ್ದ ನನ್ನನ್ನ ಹಾದಿ ತಪ್ಪಿಸಿ ನಿನ್ನ ನೆನಪೆ ಸುಮದುರ ಶುಭಾಶಯ ಕೊರುವ ಹಾಗೆ ಮಾಡುಬಿಟ್ಟೆಯಲ್ಲ ಕರಿಯ.
ನನ್ನ ನಿನ್ನ ಸಾಂಗತ್ಯ ಬೇರೆಂಬ ಹೂವಿಗೂ ರಸ ಹೀರುವ ಮಣ್ಣಿಗೆ ಇರುವ ಹಾಗೆ ಎಂದು ಒಮ್ಮೆ ಹೇಳಿದಾಗಲೇ ಅಲ್ಲವ ನೀನು ನನ್ನ ಪೆದ್ದು ಅಂತ ಕರೆಯಲು ಶುರು ಮಾಡಿದ್ದು. ನೆನಪಿದೆ ನನಗೆ. ಈಗ ಪತ್ರವನ್ನೋದಿಯೂ ಹಾಗೆಯೆ ಕರೆಯಬೇಡ ಕಣೋ ಪ್ಲೀಸ್. ಆದರೆ ಒಂದೇ ಊರಿನವರಾದ, ಎದುರು ಮನೆಯವರಾದ ನಮ್ಮಿಬ್ಬರಿಗೂ ಪ್ರೇಮ ಪತ್ರದ ಹಂಗೇಕೆ ಎಂದು ಕೇಳಬೇಡ ಮತ್ತೆ.
ನನಗಿಷ್ಟವೆಂದು ನೀನಂದು ಕದ್ದು ತರುತ್ತಿದ್ದ ನೇರಳೆ, ಈಚಲ ಹಣ್ಣುಗಳು ಬೀಜಗಳು ಮೊಳೆತು ವೃಕ್ಷವಾಗುವ ಧಾವಂತದಲ್ಲಿವೆ ನಮ್ಮ ಪ್ರೀತಿಯ ಹಾಗೆ. ಅದಕ್ಕೆ ನಾನು ನೀನು ಹರಟುತ್ತಾ ಕಾಲ ಕಳೆಯುತ್ತಿದ್ದ ಬಾಗಿದ ತೆಂಗಿನ ತೋಪೆ ಸಾಕ್ಷಿ. ಅಮ್ಮ ಮಾಡಿದ ಮಾವುಡು, ಚಿಗುಳಿ, ಪುರಿ ಉಂಡೆ ಕೊಟ್ಟರೆ ನನಗೂ ಬಿಡದ ಹಾಗೆ ಮುಕ್ಕುತ್ತಿದ್ದೆಯಲ್ಲ ಮಾರಾಯ. ಗೊತ್ತಿಲ್ಲದ ಹಾಗೆ ನಿನಗೆ ಹಚ್ಚಿದ ತುರಿಕೆಯ ಸೊಪ್ಪು, ನಾ ಎಡವಿ ಬಿದ್ದಾಗ ನೀನಾಕುತ್ತಿದ್ದ ಗರಿಕೆ ರಸ, ಜಾತ್ರೆಯಲ್ಲಿ ಕೊಡಿಸುತ್ತಿದ್ದ ಬಲೂನು, ಗಿರಗಿಟ್ಲೆ, ನಿನ್ನೊಡನೆ ಆಟದಲ್ಲಿ ಸೋತಾಗ ನಿಮ್ಮಮ್ಮನ ಬಳಿ ಚಾಡಿ ಹೇಳಿ ಹೊಡೆಸಿದ್ದು, ನೀನೇಳಿ ಕೊಡುತ್ತಿದ್ದ ತಪ್ಪು ಕಂಗ್ಲಿಷ್ ಪದಗಳು, ಇಬ್ಬರು ಜೊತೆಯಾಗಿ ಗೋಲಿ, ಗಿಡಮಂಗನಾಟ, ಗುಡು-ಗುಡು ಚೆಂಡಕ್ಕೇ ಆಟವಾಡುತ್ತಾ ಮೈಮರೆತ ಆ ಕಚಗುಳಿಯ ಕಂಪಿನ ದಿನಗಳನ್ನು ಮರೆಯಲು ಸಾಧ್ಯವೆ.
ಒಮ್ಮೆ ನಮ್ಮ ಪ್ರೀತಿಯ ಗೌರಿ ಕರುವಿಗೆ ಜನ್ಮವಿತ್ತಾಗ ಇಬ್ಬರೂ ಕದ್ದು ಗೌರಿಗೆ ಹಾಲುಣಿಸಲು ಬಿಟ್ಟು ಸಂಭ್ರಮ ಪಟ್ಟದು. ಹಾಳು ಹುಡುಗರಿಗೆ ಅದೆಂತಹ ಕುತೂಹಲವೋ ಅಂದು ಬಂದವನೇ “ದೊಡ್ಡವಳಾಗುವುದು ಎಂದರೇನು” ಎಂದು ಕೇಳಿದಾಗ ನಾನೆಷ್ಟು ನಾಚಿದ್ದೆ ಗೊತ್ತಾ. ಹೇಳಲಾಗದೆ ನಿನಗೆ ಬೈದದ್ದು, ನೀನು ಮಾತು ಬಿಟ್ಟದ್ದು. ಒಂದಾ ಎರಡಾ ನಿನ್ನ ಕುಚೇಷ್ಟೆಗಳು, ಅನುಬಂಧಗಳು, ನೆನಪುಗಳು. ಅಂದು ನಿಮ್ಮಪ್ಪ ನಿನ್ನ ಪದವಿ ಪೂರ್ವ ಕಾಲೇಜಿಗೆ ಸೇರಿಸಲು ಹಾಸ್ಟೆಲ್ಲಿಗೆ ಸೇರಿಸುವ ಹಿಂದಿನ ದಿನ ಮಾರಿ ಗುಡಿಯ ಹಿಂದೆ ನನ್ನೊಡನೆ ಅತ್ತು ಹೋಗುವುದಿಲ್ಲ ಎಂದು ಹಠ ಹಿಡಿದಿದ್ದೆಯಲ್ಲ. ಕೊನೆಗೆ ಹೊರಡಲುನುವಾಗಲು ಅದಾವ ಮಾಯೆಯಲ್ಲೋ ನನ್ನ ಕೆನ್ನೆಗೆ ತುಟಿ ತಾಗಿಸಿ ತಿರುಗಿಯೂ ನೋಡದ ಹಾಗೆ ಮೊದಲ ಮುತ್ತು ನೀಡಿ ಹೋದೆಯಲ್ಲ. ಎಂತಹ ಧೈರ್ಯ ನಿನಗೆ. ಆದರೆ ಕಳೆದ ತಿಂಗಳು ಬಂದಾಗ ಸಹಜವಾಗಿ ಮಾತನಾಡಿದರು ಸಂಕೋಚದ ಪರದೆ ಸರಿಸಿ ಆರ್ದ್ರತೆಯ ಮಾತಿಗಿಳಿಯಲಿಲ್ಲವಲ್ಲ ನೀನು ಅದೆಷ್ಟು ಶೋಕ ಗೀತೆ ಹಾಡಿದ್ದೇನೆ ಮನದಲ್ಲಿ ತಿಳಿದಿತಾ ನಿನಗೆ.
ನನ್ನ ಮನದ ಹೂವಿನಾಗಸದಲ್ಲಿ ಅರಳಿದ ಪುಟ್ಟ ಸೂರ್ಯ ನೀನು. ಆ ನಿನ್ನ ಸುಕೋಮಲ ಬಟ್ಟಲ ಕಂಗಳು, ವಿಪುಲವಾದ ನೆರಿಗೆಯ ಗುಂಗುರು ಕೂದಲು, ಬಿಲ್ಲನ ಹಾಗೆ ಬಾಗಿದ ಹುಬ್ಬು, ಕೊಕ್ಕರೆಯ ದಂತ ಪಂಕ್ತಿ, ನಕ್ಷತ್ರದ ಹಾಗೆ ಮಿನುಗುವ ಆ ನಗು, ಚಿಗುರು ಪರ್ಣದ ನಿನ್ನ ಚಿಗುರು ಮೀಸೆ ಎಲ್ಲವೂ ನನಗಿಷ್ಟ ಕಣೋ ಕರಿಯ. ಸಂಕೋಚದ ಬೇಲಿಯನ್ನ ದಾಟಿ ಅಷ್ಟೂ ದಿನದ ಮನದ ಬಯಕೆಯನ್ನ ಹೀಗೆ ವ್ಯಕ್ತ ಪಡಿಸುತ್ತಿದ್ದೇನೆ ತುಸು ಆಲಿಸು ಇತ್ತ. “ನಾ ನಿನ್ನ ಮನಸಾರೆ ಪ್ರೀತಿಸುತ್ತಿದ್ದೇನೆ ಪ್ರಫು”. ಮನದಲ್ಲಿ ಹಚ್ಚಿಟ್ಟ ಒಲವಿನ ಹಣತೆ ನಿನ್ನ ಹೆಸರ ಮಿಡಿದಿದೆ.
ಸದಾ ಕನಸಿನಲ್ಲಿ ನನ್ನ ಪ್ರತಿಬಿಂಬವೇ ಇರಬೇಕೆಂಬ ಹುಚ್ಚು ಆಸೆಗಳು ಆಗಸದೆತ್ತರ ಮುಟ್ಟಿ ಮುಖಮಾಡಿ ನಿನ್ನ ನೋಡುತ್ತದೆ. ನಿನ್ನ ಘಲ್ ಘಲ್ ಮಾತಿನ ಸದ್ದು ಸದಾ ಎದೆಯಲ್ಲಿ ತುಂಬಿಕೊಳ್ಳುವ ಉತ್ಕಟ ಬಯಕೆ ನನ್ನದು. ಕಲ್ಲು ಕರಗುವ ಸಮಯದಲ್ಲು ನಿನ್ನ ಆಲಾಪನೆಯಲ್ಲಿ ಮುಳುಗಿರುತ್ತೇನೆ. ನನ್ನ ಪ್ರೀತಿಯ ಕೊನರಿಗೆ ನಿನ್ನ ಹೃದಯವೇ ಕಾಮನಬಿಲ್ಲು, ನಿನ್ನ ನೆನಪಿನ ಅಪ್ಪುಗಳೇ ಒಲವಿನ ಗೀತೆಗಳು ಕರಿಯ. ಓ ಹಾಗೆಂದರೆ ಕೋಪವೇನೋ? ಪ್ರೀತಿಸುವ ವ್ಯಕ್ತಿಗಳು ಯಾವುದೇ ಹೆಸರಿನಲ್ಲಿ ಕರೆದರು ಇಷ್ಟ ಪಡುತ್ತಾರಂತೆ. ನನಗೆ ಗೊತ್ತು ನಗುತ್ತಿದ್ದೀಯಾ ಎಂದು. ಆದರೆ ನಾನು ಮಾತ್ರ ಹಾಗೆ ಅಧಿಕಾರದಿಂದ ಕರೆಯುವ ಒಂದು ಪ್ರೀತಿಯ ಹೆಸರನ್ನಿಡಬೇಕು. ನನ್ನ ಬಿಟ್ಟು ಮತ್ತಾರು ಹಾಗೆ ನಿನ್ನ ಸಂಭೋದಿಸಬಾರದೆಂಬ ಹಠಮಾರಿತನ ಅದಕ್ಕೆಂದೇ ಸಾವಿರ ಹೆಸರುಗಳ ತ್ಯಜಿಸಿ ಅಳೆದು ತೂಗಿ ಒಂದು ಹೆಸರನ್ನ ಹುಡುಕಿದ್ದೇನೆ. ಊರಿಗೆ ಬಂದಾಗ ಹೇಳುತ್ತೇನೆ. ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತವಂತೆ. ನನ್ನದು ಹೇಗೋ ತಿಳಿದಿಲ್ಲ. ಆದರೆ ಆ ವಿಧಿಗೆ ಬಂದರು ನನ್ನ ಮನಸ್ಸಿನಲ್ಲಿ ನಿನ್ನ ಬಿಟ್ಟು ಬೇರೆಯವರನ್ನ ಮನ ಒಪ್ಪುವುದಿಲ್ಲ.
ಇದು ಆ ಡೆಸ್ಡಿಮೋನಾಳಷ್ಟೇ ಆಳವಾದ ಪ್ರೀತಿ. ಹಾಗೆಂದು ಉಬ್ಬಿ ಕೊಬ್ಬಿನಿಂದ ಮೇಲೇರಬೇಡವೋ. ನಮ್ಮ ಮಾಲೂರಿಗಾಗುವಷ್ಟು ಜಂಭ ನಿನಗಿದೆ ಎಂಬುದು ನನಗೆ ಗೊತ್ತು. ಆ ನಿನ್ನ ಸ್ಟೈಲಿಶ್ ಸ್ಟಂಟ್‍ಗಳು, ಅಗತ್ಯಕ್ಕಿಂತ ಹೆಚ್ಚಿಗೆಯೇ ಕೊಚ್ಚಿಕೊಳ್ಳುವ ನಿನ್ನ ಮೂರ್ಖತನವನ್ನು, ಅಂಜುಬುರುಕುತನವನ್ನ ಮನಸಾರೆ ಒಪ್ಪಿದ್ದೇನೆ. ಮತ್ತಿನ್ನೇನ್ನು ಹೇಳಲಿ ಕರಿಯ. ಹೇಳಬೇಕಾದ ಮತ್ತು ಹೇಳದಿದ್ದ ಭಾವನೆಗಳನ್ನ ಒಂದೇ ತಕ್ಕಡಿಯಲ್ಲಿ ತೂಗಿದರೆ ಹೇಳದಿದ್ದದ್ದೆ ಕೆಳಕ್ಕೆ ಸಾಗುತ್ತದೆ. ಅದಕ್ಕೆ ಈ ಚೌಕಟ್ಟಾದ ಪತ್ರದ ಸಾಲುಗಳು ನಿಲುಕುವುದಿಲ್ಲ. ಮಾತನಾಡಬೇಕಾದ್ದು, ಹಂಚಿಕೊಳ್ಳುವುದು ಬಹಳಷ್ಟಿದೆ. ಈ ಪತ್ರವನ್ನ ನೋಡಿದ ತಕ್ಷಣ ಊರಿಗೆ ಬಾರೋ. ಹೇಳಬೇಕಾದ್ದು, ಹೇಳಬಾರದಿದ್ದರು ಹೇಳುವುದು ಬಹಳಷ್ಟಿದೆ. ನಿನ್ನ ನೀರಿಕ್ಷೆಯಲ್ಲಿ…
-ಪಲ್ಲವಿ ಬಿ. ಎನ್.