ಪಿಜ್ಜಾ ಹುಡುಗಿಗೆ: ವಿಜಯ್ ದಾರಿಹೋಕ

ನನ್ನ ಪ್ರೀತಿಯ ಪಿಜ್ಜಾ ಹುಡುಗಿಗೆ,
ಸದಾ ಅಂತರಂಗದಲ್ಲಿ ಸ್ಫುರಿಸುತ್ತಿರುವ ಪ್ರೇಮ, ವ್ಯಾಲೆಂಟೈನ್ಸ್ ಡೇ ಬರುವ ಹೊತ್ತಿಗೆ ಅಕ್ಷರ ರೂಪದಲ್ಲಿ ಇಣುಕುವ ಹಂಬಲ ತೋರುತ್ತಿದೆ. ಹಿಂದೆಲ್ಲ ಪ್ರೇಮ ಪತ್ರಗಳನ್ನು ಬರೆದು ಪಾರಿವಾಳ ಇಲ್ಲವೇ ದೂತನ, ಅಂಚೆ ಮಾಮನ ಮೂಲಕ ತಲುಪಿಸುತ್ತಿದ್ದುದನ್ನು ನೀನು ಕೇಳಿಯೇ ಇರುತ್ತಿ.. !.. . ಈಗೆಲ್ಲ, ಕೆಲ ವರ್ಷಗಳಿಂದ ಎಂದಿನಂತೆಯೇ ನಾನು ನಿನ್ನ ವಾಟ್ಸಪ್ಪ್ ನಂಬರಿಗೆ ನೇರವಾಗಿ ಕಳಿಸುತ್ತಿರುವೆ…. . ! ಒಮ್ಮೆ ಓದಿ ನೋಡು.. ಆ ದಿನ ಸ್ಪಷ್ಟವಾಗಿ ನೆನಪಿದೆ. ವೀಕೆಂಡ್ ನ ಶುಕ್ರವಾರದ ಸಂಜೆ , ಇನ್ ಓರ್ಬಿಟ್ ಮಾಲ್ ನ ಎರಡನೇ ಫ್ಲೋರ್ ನ ಫುಡ್ ಕೋರ್ಟ್ ಕಿಕ್ಕಿರಿದು ತುಂಬಿತ್ತು. ನಾನು ನನ್ನ ಸಹೋದ್ಯೋಗಿಗಳ ಜೊತೆಗೆ ಪಿಜ್ಜಾ ಹಟ್ ನಲ್ಲಿ ಆರ್ಡರ್ ಮಾಡಲು ನಿಂತಾಗ ಆರ್ಡರ್ ಡೆಸ್ಕಿನಲ್ಲಿ ನೀನು. ಕ್ಯೂ ಉದ್ದವಾದದ್ದನ್ನು ನೋಡಿ ಅತ್ತಿತ್ತ ಅಸಹನೆಯಲ್ಲಿ ತಲೆಯಾಡಿಸುತ್ತಿದ್ದವನಿಗೆ ಅನಾಮತ್ತಾಗಿ ಕಂಡಿದ್ದು ನಿನ್ನ ಮೊಗ ..!

ಸಾಮಾನ್ಯವಾಗಿ ಸುತ್ತೆಲ್ಲ ಚೆಂದದ ಮುಖಗಳಿಗೇನು ಕಮ್ಮಿ.. ಅವತ್ತೇಕೆ ಆ ಸೆಳೆತ ನಿನ್ನ ಕಂಡಾಗ .. ! ಯಾವ ಕಾಲಪುರುಷನ ಸಂಚು ಅದು .. ! ನಿನ್ನ ದಣಿವರಿಯದ ಮೊಗದ ತುಂಬಾ ಮಂದಹಾಸ .. ಕೆಂಪು ಸಮವಸ್ತ್ರದ ರಂಗಿನ ನೆರಳು ಕೆನ್ನೆಗೂ..? ನನ್ನ ಆರ್ಡರ್ ತೆಗೆದುಕೊಂಡು ಅತ್ತಿತ್ತ ನೋಡುವಾಗ ನಿನ್ನ ಕಿವಿಗಳ ಪೆಂಡುಲಂ ಲೋಲಕಗಳ ಮೆಲುವಾದ ಕುಣಿತ..ಎದೆಯೊಳಕ್ಕೆ ಮೂಡಿಸಿತು ಹಿತವಾದ ಮಿಡಿತ.. ನೀನು ನೆಕ್ಸ್ಟ್ ಪ್ಲೀಸ್, ಅಂತ ಹೇಳದಿದ್ದರೆ, ಅಲ್ಲಿಂದ ಕದಲುತ್ತಿರಲಿಲ್ಲ ..!. ಆ ದಿನ ಪೂರ್ತಿ ಮನದೊಳಗೆ ಬೇಸಗೆಯ ಧಗೆ.. ಮತ್ತೆ ಬಂತು ಶುಕ್ರವಾರ.. ಹತ್ತಿರದ ಆಫೀಸು ಮುಗಿಸಿ ಬಂದೆ.. ಮತ್ತದೇ ನೀನು.. ಅದೇ ಮಂದಹಾಸ.. ವನ್ ಮಾರ್ಗೆ ರೀತಾಹ್ ಪ್ಲೀಸ್ ಎಂದೆ .. . ಮತ್ತೆ ದಿಟ್ಟಿಸಿದೆ , ನೀನೋ ಬಿಲ್ಲಿಂಗ್ ನಲ್ಲಿ ಮಗ್ನ.. ಎಂಥ ಮುಗ್ಧ, ಆರ್ದ್ರ ದುಂಡಗಿನ ಕಣ್ಣುಗಳು ನಿನ್ನವು !.. ತಿದ್ದಿ ತೀಡಿದ , ದೂರ ದೂರ ಸರಿದ ರೆಪ್ಪೆಯ ನವಿರು ಕೂದಲು..ಸ್ವಲ್ಪ ಲೈಟ್ ಆಗಿ ಕಪ್ಪು ಕಾಡಿಗೆ ಕೂಡ ಹಾಕಿದ್ದಿ ಅನ್ಸುತ್ತೆ.. ಪಿಂಕು ರಬ್ಬರ್ ಬ್ಯಾಂಡ್ ನಿಂದ ನಸು ಕೆಂಪು ಕೂದಲುಗಳನ್ನು ಒಪ್ಪವಾಗಿ ಕಟ್ಟಿದ್ದು..ನಿಚ್ಚಳ ನೆನಪಿದೆ..ಹುಡುಗಿ, ನೆನಪಿದೆಯಾ .. ..

ಪ್ರತಿ ವಾರಾಂತ್ಯ ಬರ ತೊಡಗಿದೆ.. ಪಿಜ್ಜಾ ನಿಧಾನವಾಗಿ ತಿನ್ನುತ್ತಾ, ತಣ್ಣಗಾಗುವರೆಗೂ .. ನೋಡುತ್ತಿದ್ದೆ ನಿನ್ನ.. ಕದ್ದು ಮುಚ್ಚಿ..ಎಷ್ಟು ಶುಕ್ರವಾರಗಳು ಕಳೆದವು..ಲೆಕ್ಕ ಇಟ್ಟಿಲ್ಲ .. ನಮ್ಮ ಕಣ್ಣುಗಳು ಎಷ್ಟು ಸಾರಿ ಸಂಧಿಸಿಲ್ಲ ಹೇಳು..ಆದರೂ ನಿನ್ನಲ್ಲಿ ಯಾವ ವ್ಯತ್ಯಾಸವೂ ಇಲ್ಲ.. .. ನೀನಾಯ್ತು, ನಿನ್ನ ಕೆಲಸ,ಮತ್ತೆ ಅದೇ ಮಂದಹಾಸ.. ಬೇರೆ ಸಮಯ ನೀನು ಹೆಚ್ಚು ಕಮ್ಮಿ ಮೂಕಿ ಅಂದರೆ ನಂಬಬಹುದಿತ್ತು, ಅಷ್ಟು ಮಿತಭಾಷಿ.. ಜಗತ್ತಿನ ಗದ್ದಲಕ್ಕೆ ಪೂರ್ಣ ಕಿವುಡಾದರೆ ಮಾತ್ರ ಇಂತ ನಿರುಮ್ಮಳ ,ಪ್ರಸನ್ನ ಮುಖ ಚರ್ಯೆ ಸಾಧ್ಯ… ! ಅದೊಂದು ದಿನ ರಾತ್ರಿ, ಹತ್ತು ಗಂಟೆ ಮೀರಿದೆ.. ಮಾಲ್ ನ ಅಂಗಡಿಗಳು ಒಂದೊಂದಾಗಿ ಮುಚ್ಚಲು ಶುರುವಾದವು.. ನೀನು ಕೂಡ ಮನೆಗೆ ಹೋಗಲು ಹವಣಿಸುತ್ತಿದ್ದೆ. ಪುಟ್ಟ ಬ್ಯಾಗ್ ಏರಿಸಿ ಹೊರಟೆ.. ನನ್ನನ್ನು ನೋಡಿದರೂ ನೋಡದಂತೆಯೇ.. ! ನಿನ್ನ ಹಿಂದೆಯೇ ಸಹಜವಾಗಿ ತುಸು ದೂರದಿಂದ ಹಿಂಬಾಲಿಸಿದೆ.. . ಮಾಲ್ ನ ಎಸ್ಕಲೇಟರ್ ಇಳಿಯುತ್ತಿದ್ದಂತೆ ಹೊರಗೆ ರಭಸದ ಮಳೆ ಬರುತ್ತಿದ್ದುದು ಕಾಣಿಸಿತು. ಎಕ್ಸಿಟ್ ನಲ್ಲಿ ಜನ ಕಲೆತು ಗುಂಪಾಗಿದ್ದರು. ತುಂಬಾ ಸಮಯದ ವರೆಗೆ ಮಳೆ ನಿಲ್ಲುವ ಲಕ್ಷಣ ಕಾಣಿಸಲಿಲ್ಲ. ಗುಂಪಿನಲ್ಲಿ ನಿನ್ನ ಹುಡುಕಿದೆ.. ಅದೋ ಅಲ್ಲಿ.. ಹನಿವ ಬಾನು ಮತ್ತೆ ಹರಿಯುವ ನೀರು ಎರಡನ್ನೂ ದಿಟ್ಟಿಸುವ ನಿನ್ನ ಕಂಗಳು ಕಾಣಿಸಿದವು.. ! ಆಗಾಗ ಪುಟ್ಟ ಕೈ ಹೊರ ಚಾಚಿ ಮಳೆಯ ತೀವ್ರತೆ ಅರಿಯುವ ಸಾಹಸ ಬೇರೆ.. ! 🙂

“ತುಂಬಾ ಮಳೆ ಬರ್ತಿದೆ ಅಲ್ಲವೇ.”.
ಒಮ್ಮೆ ನೋಡಿ ..ಮತ್ತೆ ಹೊರಗೆ ದಿಟ್ಟಿಸತೊಡಗಿದೆ ನೀನು .. “ಹಾಂ .. .. ಹೌದು ..”.. ಅಂದಿದ್ದೆ.
ಮನಸ್ಸಲ್ಲೇ ತೊಯ್ದಿದ್ದ ನನ್ನ ಈ ಹೊರಗಿನ ಮಳೆ ಏನು ಮಹಾ ಮಾಡೀತು .
ಕೆಲ ಹೊತ್ತಲ್ಲಿ ಮಳೆ ನಿಂತಿತು. ಮಾಲ್ ಗೆ ಬಂದಿದ್ದ ಜನ ತಮ್ಮ ತಮ್ಮ ಕಾರುಗಳಲ್ಲಿ ಬುರ್ರನೆ ಹೊರಡುವ ಧಾವಂತ ತೋರಿಸಿದರು.. ಮತ್ತು ಗಾರ್ಡ್ ಗಳ ವಿಶಲ್ಲುಗಳು . . ನೀನು ನಿಧಾನವಾಗಿ ರಸ್ತೆಯ ಬದಿಯ ಆಟೋ ಹತ್ತಿರ ಹೋದರೆ..ಉಹ್ಞೂ. ಮಳೆಯಿಂದಾಗಿ ಸಿಕ್ಕಾಪಟ್ಟೆ ರಸ್ತೆ ಜಾಮ್ ಅಂತೆ. ಆಟೋ ಬಾಡಿಗೆ ಕೇಳುವ ಮಾತೇ ಇಲ್ಲ. .

ನಿನಗೆ ದಿಕ್ಕೇ ತೋಚದಾಗ ನಾನು ಬಳಿ ಬಂದು ಸ್ವಲ್ಪ ಅಳುಕುತ್ತಾ ಕೇಳಿದೆ.. “ಯಾವ ಕಡೆ ಹೋಗಬೇಕು .”.
“ಮಾದಾಪುರದ ಕಡೆಗೆ ..”
“ಹೌದಾ , ನಾನು ಅಲ್ಲೇ ಇರೋದು.. (ಹಸೀ ಸುಳ್ಳು). ಆಟೋ ಸಿಕ್ಕುವ ಲಕ್ಷಣ ಕಾಣುತ್ತಿಲ್ಲ. ಹೀಗೆ ಆದರೆ ಮಧ್ಯರಾತ್ರಿಯೂ ಕಳೆದೀತು.. ಬನ್ನಿ ಹಾಗೆ ನಡೆದರೆ ತಲುಪಿಬಿಡ್ತಿವಿ. …
ನೀನು ಸ್ವಲ್ಪ ಸಮಯ ಅತ್ತಿಂದಿತ್ತ ನೋಡಿ ತಲೆಯಾಡಿಸಿದೆ. ..

ಇಷ್ಟು ಮಳೆ ಬರಬಹುದು ಅಂತ ಅಂದ್ಕೊಂಡಿರಲಿಲ್ಲ.. ಮಾತು ಆರಂಭಿಸಿದೆ..
ನೀನೋ ಬೆದರಿನ ಹರಿಣಿ..ಆದರೂ ಮಂದಹಾಸ..ಇದೇನಪ್ಪ, ಬೈ ಬರ್ತ್, ಬೈ ಡೀಫಾಲ್ಟ್ ನಗು ವನ್ನು ಮೊಗದಲ್ಲಿಟ್ಟುಕೊಂಡೇ ಹುಟ್ಟಿದವಳು ಇರಬೇಕು ಈಕೆ ಅಂದುಕೊಂಡೆ. ..
ಮಳೆ ನಿಂತ ಮೇಲೆ ಬೀಸುವ ತಂಗಾಳಿಗೆ ನಿನ್ನ ಕೂದಲು ಸ್ವಲ್ಪ ಚದುರಿತ್ತು. ನನ್ನ ಹೆಸರು ನಿಮಗೆ ಹೇಗೆ ಗೊತ್ತು ಎಂದು ಕೇಳದ ಬುದ್ಧಿವಂತಿಕೆ ಇತ್ತು ಸಧ್ಯಕ್ಕೆ ಪಿಜ್ಜಾ ಅಂಗಡಿಯ ಹುಡುಗಿಗೆ..
ಇವತ್ತು ಕೊಡೆ ಮರೆತಿದ್ದೆ .. ಅದನ್ನು ಹೇಳುವಾಗಲೂ ಕಣ್ಣುಗಳಲ್ಲಿ ಸಾಮಾನ್ಯವಾಗಿ ವಿಷಾದದ ಬದಲಿಗೆ ಮುಗ್ಧ ನಗೆ ತುಂಬಿಕೊಂಡಿದ್ದು ಕಂಡು ಕರಗಿ ಹೋದೆ.. …
ಮಳೆ ನಿಜಕ್ಕೂ ಪೂರ್ತಿ ನಿಂತಿರಲಿಲ್ಲ ..ಹಾಗೆ ನೋಡಿದರೆ ನನ್ನ ಆಫೀಸು ಬ್ಯಾಗ್ ನಲ್ಲಿ ಚಿಕ್ಕ ಛತ್ರಿ ಇದ್ದರೂ ಹೊರ ತೆಗೆಯದ ವಿಷಯ ಗೊತ್ತಾ?.. ನಗುವೆ ನೀನು.. !
ಮತ್ತೆ ಸುಮಾರು ನಿಮಿಷ ಮಾತಿಲ್ಲ.. ಈ ದಾರಿ ಇನ್ನಷ್ಟು ಹಿಗ್ಗುತ್ತಾ ಹೋಗಬಾರದೇ ಅಂದುಕೊಂಡೆ..
“ನಿಮ್ಮ ಹೆಸರು? ಏನು ಮಾಡ್ತೀರಿ ? “ನೀನು ಕೇಳಿದೆ..
ಅಬ್ಬಾ, ಪಿಜ್ಜಾ ಒರ್ಡರ್ ಬಿಟ್ಟು ಬೇರೆ ವಿಷಯವೂ ಮಾತಾಡಲು ಬರುತ್ತೆ ಇವಳಿಗೆ… !
“ಇಲ್ಲೇ ಹೈಟೆಕ್ ಸಿಟಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದೀನಿ ಹೊಟ್ಟೆ ಪಾಡಿಗೆ .. “
“ಓಕೆ .. ಗುಡ್”ಅಂದು ಸುಮ್ಮನಾದೆ ನೀನು..
ದಾರಿ ಉದ್ದಕ್ಕೂ ಮಾತಿಗಿಂತ, ನೀರು, ತಂಗಾಳಿ ಯ ಸದ್ದು ಕೇಳಿದ್ದೆ ಬಹು ಪಾಲು.. ಆಗಾಗ ಆಕಾಶದಲ್ಲಿ ಮಿಂಚು … ಅಷ್ಟೇ..!

ಅಂತೂ ನನ್ನಿಂದ ಬೀಳ್ಕೊಡುವ ಜಾಗ ಬಂತು.
“ನಿಮಗೆ ತುಂಬಾನೇ ಧನ್ಯವಾದಗಳು..” ಎಂದು ಹೇಳುವಾಗ ನಿನ್ನ ಕಣ್ಣುಗಳು ನನ್ನನ್ನು ದಿಟ್ಟಿಸುತ್ತಿರಲಿಲ್ಲ. ಮನೆ ಎಲ್ಲಿ ಎಂದು ಹೇಳಲಿಲ್ಲ ನೀನು ಆಗ. ನನ್ನನ್ನು ಅಲ್ಲಿಯೇ ಬಿಟ್ಟು, ತಿರುಗಿ ಕೂಡ ನೋಡದೆ ಇನ್ನೊಂದು ಬೀದಿಯತ್ತ ಬಿರ ಬಿರನೇ ಹೊರಟು ಬಿಟ್ಟೆ..
ನೀನುಟ್ಟಿದ್ದ ಸಲ್ವಾರ್ ಕಮೀಜ್ ನ ಶಾಲು ಮಾತ್ರ ಹೊರಡಲು ಮನಸ್ಸಿಲ್ಲದೆ ಬಾರಿ ಬಾರಿ ನನ್ನೆಡೆಗೆ ತಿರುಗಿ ನೋಡಿದ ಹಾಗೆ ಭಾಸವಾಯ್ತು ನನಗೆ…! ಮತ್ತೆ ದಿನವೂ ಹೀಗೆ ಮಳೆಯಾಗಲಿಲ್ಲ..ಪಿಜ್ಜಾ ಹಟ್ ನಲ್ಲಿ ದೂರದಿಂದ ನಿನ್ನ ಆಗಾಗ್ಗೆ ನೋಡುತ್ತಿದ್ದೆ. ನಿನ್ನಲ್ಲಿ ಏನೂ ವ್ಯತ್ಯಾಸ ಕಾಣಲಿಲ್ಲ, ಎಕ್ಸ್ಟ್ರಾ ಅಂತ ಕಂಡಿದ್ದು ಆರ್ದ್ರ ಕಣ್ಣುಗಳು ಸೂಸುವ ಧನ್ಯತೆ ಮತ್ತು ಆ ದಿವ್ಯ ಮಂದಹಾಸ ಮಾತ್ರ .. ! ಯಾಕಷ್ಟು ಸತಾಯಿಸಿದೆ ನೀನು.. ಡ್ಯೂಟಿ ಮುಗಿಸಿ ಆಟೋ ಹಿಡಿದು ತನ್ನ ಪಾಡಿಗೆ ತಾನು ಹೋಗಿಬಿಡುತ್ತಿದ್ದಿ.. ನನ್ನೊಂದಿಗೆ ತುಸು ಮಾತಾಡುವ ಮನಸು ತೋರಲಿಲ್ಲ ಅಂದು ?. ಒಂದು ವಾರ ನನಗೆ ಬೇರೆ ಎಲ್ಲೋ ಪ್ರಯಾಣ ಮಾಡುವ ಅನಿವಾರ್ಯತೆ ಎದುರಾಗಿತ್ತು. ಮತ್ತೆ ಮರು ವಾರಕ್ಕೆ ಜ್ವರ ಹಿಡಿದು ಮಲಗಿಬಿಟ್ಟೆ. ರೂಮ್ ಮೇಟ್ಸ್ ಗಳು ಒಂದು ಪ್ಯಾರಾ ಸಿಟಾ ಮೋಲ್ ತಂದು ಕೊಡ್ರೋ ಅಂದ್ರೆ ಜೊತೆಗೆ ಓಲ್ಡ್ ಮಾಂಕ್ ರಮ್ ತಂದಿಟ್ಟು ಹೋಗಿದ್ರು ಬಡ್ಡಿ ಮಕ್ಕಳು..

ಸರಿ , ಹುಷಾರಾದ ಮರು ವಾರ ವೀಪರೀತ ಕೆಲಸ. ಒಂದು ತಿಂಗಳ ಬಳಿಕ ತಡೆಯಲಾಗಲಿಲ್ಲ.. ಆಫೀಸು ಮುಗಿಸಿ ಮತ್ತೆ ನಿನ್ನ ನೋಡಲು ಹೆಚ್ಚು ಕಮ್ಮಿ ಓಡಿ ಯೇ ಬಂದಿದ್ದೆ.. ಸಿಕ್ಕಾಪಟ್ಟೆ ಜನ.. ಗ್ರಾಹಕರು.. ನಿನ್ನನ್ನು ದೂರದಲ್ಲಿ ನೋಡಿ ಸಮಾಧಾನವಾದರೂ ಯಾಕೋ ಮುಂದೆ ಬರುವ ಮನಸ್ಸಾಗಲಿಲ್ಲ. ನಿನ್ನ ಡ್ಯೂಟಿ ಮುಗಿಯುವವರೆಗೂ ಕಾದು, ಆಟೋ ಹತ್ತುವ ಸ್ಥಳದಲ್ಲಿ ನಿಂತಿದ್ದೆ. ಬಿರ ಬಿರನೇ ಬರುತ್ತಿದ್ದ ನೀನು ನನ್ನ ನೋಡಿ ಒಮ್ಮೆಲೇ ನಿಂತು ಬಿಟ್ಟೆ .. ನೆನಪಿದೆಯೇ.. ಮುಖ ತಿರುಗಿಸಿ ಮುಂದೆ ಸಾಗುತ್ತಿ ಅಂತ ಅಂದ್ಕೊಂಡವನಿಗೆ ಒಂದೆರಕ್ಷಣ ನಿನ್ನ ಮೊಗದ ಮೇಲೆ ಯಾಕೋ ಸುತ್ತಲಿನ ದೀಪಗಳ ಬೆಳಕಿನ ಕಿರಣಗಳು ಚೆದುರಿ ಪ್ರತಿಫಲಿಸಿದ ಹಾಗೆ ತೋರಿತು…ಇನ್ನಷ್ಟು ನಿನ್ನ ಹತ್ತಿರಕ್ಕೆ ಬಂದು ದಿಟ್ಟಿಸಿದೆ.. ಹೌದು ನಿನ್ನ ಎರಡು ಕಣ್ಣಲ್ಲೂ ಸಣ್ಣಗೆ ಜಿನಗುತ್ತಿದ್ದ ನೀರು.. ! ಅಲ್ಲ ಮಾರಾಯ್ತಿ, ಅಳು ಬಂದರೂ ಮಂದಹಾಸ ಬಿಡಲ್ವೇ..! ಹ ಹ್ಹ… ಅದಾದ ಮೇಲೆ, ಜಗದ ತುಂಬ ಒಲವ ಬಿಂಬ.. .ನೆನಪಿದೆಯೇ , ನಿನ್ನ ಹಿಂಜರಿವ ಕೈಗಳ ಮೊದಲ ಬಾರಿ ನನ್ನ ಕೈಯಲ್ಲಿ ಬಚ್ಚಿಟ್ಟು ನಡೆದ ಕ್ಷಣ..
.. ನನ್ನ ಉಷ್ಣ ಪ್ರಕೃತಿಯ ತುಸು ಬಿಸಿಯ ಕೈ ಯಲ್ಲಿ ನಿನ್ನ ತಣ್ಣನೆ ಮೆದುವಾದ ಹಸ್ತ, ಒಂದಿಷ್ಟು ಮೌನ ಮತ್ತು ನಿನ್ನ ಮಂದಸ್ಮಿತ … ..
“ನೀನಿರಲು ಜೊತೆಯಲ್ಲಿ, ಬಾಳೆಲ್ಲ ಹಸಿರಾದಂತೆ..” ಹಾಡು ಗುನು ಗುನಿ ಸಿದ್ದು ನೆನಪಿದೆಯಾ ಹುಡುಗಿ .. ?

ಹಾಗೂ ಹೀಗೂ ಎಲ್ಲರ ಒಪ್ಪಿಸಿ ಮದುವೆಯಾದೆವು.. ನೀನು ಪಿಜ್ಜಾ ಹಟ್ ಕೆಲಸ ಬಿಟ್ಟೆ. ನಾವು ಫ್ಲಾಟ್ ಕೊಂಡೆವು.. ಜನ ಸಂಸಾರ ಶುರು ಆಯ್ತೆ, ಶುಭವಾಗಲಿ ಎಂದು ಹಾರೈಸಿದರು.. ಮದುವೆಯ ಬಳಿಕವೂ ನೀನು ಅಂತೆಯೇ ಮಿತ ಭಾಷಿ , ಮಂದಸ್ಮಿತೆ..ಯಾವುದಕ್ಕೂ ಬೇಸರ ಇಲ್ಲ, ಓರಗೆಯವರಿಗೆಲ್ಲ ನಿನ್ನನ್ನು ಕಂಡರೆ ಎಷ್ಟು ಗೌರವ, ಹಿಗ್ಗು.. ಎಲ್ಲಿಂದ ತಂದೆ ಆ ನಿಷ್ಕಲ್ಮಶ ನಗುವನ್ನ ಅಂತ ಪಕ್ಕದ್ಮನೆ ಆಂಟಿ, ಅಂಕಲ್ ಕೇಳಿದ್ದು ನೆನಪಿದೆಯಾ? .. . ಒಮ್ಮೊಮ್ಮೆ ನೀನು ಗಾಢವಾಗಿ ನಿದ್ರಿಸುವಾಗ ದಿಟ್ಟಿಸುತ್ತೇನೆ.. ಆಗಲೂ ತುಟಿಯಂಚಿನಲ್ಲಿ ಕಿರುನಗೆ.. ನಿಧಾನವಾಗಿ ನಿನ್ನನ್ನು ಎಬ್ಬಿಸದೆ ಮೆಲುವಾಗಿ ನನ್ನ ತುಟಿ ನಿನ್ನ ತುಟಿಗೆ, ,ಹಣೆಗೆ , ಕಣ್ಣಿಗೆ ತಾಗಿಸಿ.. ನಿಟ್ಟುಸಿರು ಬಿಡುವೆ.. ಸಖಿ ನೀನು, ಸುಖಿ ನಾನು..! ಪ್ರತಿ ವ್ಯಾಲೆಂಟೈನ್ಸ್ ಡೇ ಗೂ ನಿನಗೊಂದು ಪ್ರೇಮ ಪತ್ರ..ಜೊತೆಗೆ ಹೂ ಗುಚ್ಛ , ಯಾಕೆ ಈ ಫಾರ್ಮಾಲಿಟಿ?.. ನೀನಿರಲು ಬೇರೆ ಏನೂ ಖುಷಿ ಕೊಡದು ಅಂದಿದ್ದೆ ನೀನು.. ಇಬ್ಬರೂ ಅದೇ ಪಿಜ್ಜಾ ಹಟ್ ಗೆ ಹೋಗಿ ಪಿಜ್ಜಾ ಆರ್ಡರ್ ಮಾಡ್ತೀವಿ … ಪ್ರತೀ ವರ್ಷ .. ಹಳೆಯ ನೆನಪುಗಳು ಎಷ್ಟು ಮಧುರ, ರೋಮಾಂಚನ..ಅಲ್ಲವೇ ಹುಡುಗಿ ?

ಇವತ್ತು ೨೦೨೧ ಫೆಬ್ರವರಿ ೧೪, ವಾಲೈಂಟನ್ಸ್ ಡೇ ದಿನ ಎಲ್ಲವನ್ನೂ ಮತ್ತೆ ಮತ್ತೆ ನೆನಪಿಸಿ ವಾಟ್ಸಾಪ್ ನಲ್ಲಿ ಕಳಿಸುತ್ತಿದ್ದೇನೆ. ಇನ್ನೂ ನಲವತ್ತು ದಾಟಿಲ್ಲ ನನಗೆ .. ಯಾಕ್ ಹೀಗೆ ಕೈ ನಡುಗುತ್ತಿದೆ ಟೈಪ್ ಮಾಡುವಾಗ? ಇರಲಿ ಬೇಗ ನಿನ್ನ ವಾಟ್ಸಪ್ಪ್ ಓಪನ್ ಮಾಡಿ ನನ್ನ ಮೆಸ್ಸೇಜ್ ಓದು ಪ್ಲೀಸ್.. ನೀನು ಓದಿದೆ ಎಂದು ಬ್ಲೂ ಟಿಕ್ ಬರುವುದನ್ನೇ ಕಾಯುತ್ತಿದ್ದೇನೆ. ಕಾದರೇನು ಬಂತು .. .. ಅದೋ ನೋಡು ನಿನ್ನ ಮೊಬೈಲ್… ಅದು ಕೂಡ ನನ್ನ ಬಳಿಯೇ ಇದೆ, ತಣ್ಣಗೆ. .. ನೀನು ಕ್ಯಾನ್ಸರ್ ಗೆ ಬಲಿಯಾಗಿ ಮೂರು ವರ್ಷ ಕಳೆದರೂ ನನಗೆ ನಂಬಲಾಗುತ್ತಿಲ್ಲ. ಈಗಷ್ಟೇ ಮತ್ತೆ ಮನೆಯ ಎಲ್ಲ ಕೋಣೆಗಳನ್ನು ಒಮ್ಮೆ ಹುಡುಕಿ ಬಂದೆ. . ಎಲ್ಲೋ ಹೊರಕ್ಕೆ ಹೋಗಿದ್ದೀಯಾ ಬರಬಹುದು ಅಂದುಕೊಳ್ಳುತ್ತೇನೆ.. ಸುಖಾ ಸುಮ್ಮನೆ.. !

ಹಾಳಾದ್ದು ಈ ಕಣ್ಣೀರು ಈಗ ಬತ್ತಿತು, ಮುಗೀತು ಅನ್ನುವ ಮಾತೆ ಇಲ್ಲ. ಮತ್ತೆ ಮತ್ತೆ ಕಣ್ಣಾಲಿಗಳು ತುಂಬಿಕೊಳ್ಳುತ್ತವೆ. ಏನು ಮಾಡಲಿ. .. ಆಪ್ ಸೆ ಮಿಲ್ ಕರ್ ಹಮೆ ಯೇ , ಜಿಂದಗಿ … ಅಚ್ಚಿ ಲಗಿ…! ಭೂಪಿಂದರ್ ಹಾಡಿದ ಗಝಲ್ ಹಾಡು ಮತ್ತೆ ರಿಪೀಟ್ ಮಾಡುವುದು ಅಲೆಕ್ಸಾ ಗೆ ಅಭ್ಯಾಸವಾಗಿ ಹೋಗಿದೆ. … ಯಾವತ್ತೂ ಎದೆಯೊಳಕ್ಕೆ ಇರುತ್ತೀಯ ಅಂದುಕೊಂಡರೂ,ಯಾಕೆ ಸುಳ್ಳು ಹೇಳಲಿ.. ಅರೆ ಕ್ಷಣ ನಿನ್ನ ಮಂದ ಹಾಸ ಕಣ್ಣಾರೆ ನೋಡುವ, ನಿನ್ನ ಕೈ ಮನಸಾರೆ ಮುಟ್ಟುವ ಅದಮ್ಯ ಆಸೆಯಿದೆ ಹುಡುಗಿ … ! ಒಮ್ಮೆ ತೋರಿ ಮಾಯವಾದರೆ ಎಂಥ ತೊಂದರೆ ನಿನಗೆ? ಕೊನೆಯ ದಿನ ನೀನು ಹೊರಡುವಾಗ ನಿನ್ನ ಕೈ ನನ್ನ ಹೃದಯ ದ ಮೇಲಿನ ಶರ್ಟನ್ನು ಗಟ್ಟಿಯಾಗಿ ಹಿಡಿದಿತ್ತು .. ನನ್ನ ಬಿಟ್ಟು ಹೋಗುವ ಸುತಾರಾಂ ಮನಸು ನಿನಗಿರಲಿಲ್ಲ ಎಂದು ನೆನೆಸಿಯೇ ಕಣ್ಣೀರಾಗುತ್ತೇನೆ..

ನನ್ನ ಪ್ರೀತಿಯ ಪಿಜ್ಜಾ ಹುಡುಗಿ
ರಾಶಿ ರಾಶಿ ಪ್ರೀತಿ ನೀಡಿ
ಬಿಲ್ಲು ಮಾತ್ರ ಉಳಿಸಿಕೊಂಡು
ಮಾಯವಾದದ್ದೆಲ್ಲಿಗೆ ?.. !
ಇಳಿದು ಇಳೆಗೆ ಬಂದೆ ಬಳಿಗೆ
ಇಷ್ಟೇ ತನ್ನ ಪಾತ್ರ ವೆಂದು
ಹೊರಡುವಾಗ ಕೂಡ ಕಂಡೆ
ಮಂದಹಾಸ ಮಲ್ಲಿಗೆ .. ?..

ನಿನ್ನ ಪ್ರೀತಿಗೆ ಆದರ ರೀತಿಗೆ ಯಾವತ್ತೂ ಗ್ರಾಹಕ ನಾನು ..


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x