ಭಾವಭಿತ್ತಿಯಲ್ಲಿ ಅಚ್ಚೊತ್ತಿದ ಮುದ್ದೂ,
ಹೃದಯದೂರಿನ ಭಾವ ಬೀದಿಗಳೆಲ್ಲ
ಬಿಕೋ ಎನ್ನುತ್ತಿವೆ ಗೆಳೆಯ
ಇಂದು ನೀನಿಲ್ಲದೆ , ನಿನ್ನ ಬಿಸಿ ಉಸಿರಿಲ್ಲದೆ , ನಿನ್ನ
ಕನಸಿಲ್ಲದೆ, ನಿನ್ನನ್ನೇ ನೆನೆಸಿದ ನನ್ನ ಮನಸಿಲ್ಲದೆ. .
ಒಲವೇ, ಬೇಡ ಬೇಡವೆಂದರೂ ಕೇಳದೆ ನನ್ನ ಮನಸ್ಸು ಲೇಖನಿಯಲ್ಲಿ ಭಾವನೆಗಳ ಚಿತ್ರ ಬಿಡಿಸೋಕೆ ಹೇಳಿ ಒತ್ತಾಯದಿಂದ ಕೂರಿಸಿದೆ. ಈಗ ರಾತ್ರಿ 12.00 ಗಂಟೆ. ನಿದ್ರೆ ಕಣ್ಣೆವೆಗಳನ್ನು ಮುತ್ತಿಡುವ ಸಮಯ. ಆದರೂ ಅದರ ಸುಳಿವೇ ಇಲ್ಲದಂತೆ ಮಾಡಿಬಿಟ್ಟಿದೆ ನಿನ್ನ ನೆನಪು. ಅದರ ಒನಪು. ನಿನಗೆ ಗೊತ್ತಿದೆ ನಾನು ಭಾವುಕ ಜೀವಿ.. ಭಾವನೆಗಳೇ ನನ್ನ ಸಕಲವೂ ಅನ್ನೋದು. ಅವುಗಳೇ ಅಲ್ಲವೇ ನಮ್ಮಿಬ್ಬರನ್ನೂ ಈ ನಲವಿನ ಬಂಧೀಖಾನೆಯಲ್ಲಿ ಕೂಡಿಹಾಕಿದ್ದು. ಕಣ್ಣೆದುರಿನಲ್ಲೇ ಇದ್ದರೂ ಅಪರಿಚಿತನ ಹಾಗೆ ಓಡಿಯಾಡುತ್ತಿದ್ದ ನಿನ್ನ ಮನದಂಗಳದಲ್ಲಿ ನನ್ನ ಒಲವಿಗೂ ಒಂದಷ್ಟು ಜಾಗ ಕೊಟ್ಟು ಕೂರುವಂತೆ ಮಾಡಿದ್ದು.
ಬಾನಾಚೆಯಲ್ಲೆಲ್ಲೋ
ಸುರಲೋಕವಿಹುದಂತೆ
ಇರಲಾರದು ಅಂತ ಲೋಕವೊಂದು
ನಿನ್ನ ಜೊತೆಯಿರುವಾಗ
ಅದುವೆ ಸ್ವರ್ಗವು ಎನಗೆ
ಮನದಿ ವೀಣೆಯ ನುಡಿಸು ಪ್ರೇಮಬಂಧು
ಅನ್ನುತ್ತ ಹಾಡುವಂತೆ ಮಾಡಿದ್ದು. ಗೆಳೆಯಾ, ಈ ಜಗತ್ತಿನಲ್ಲಿರುವ ಹುಟ್ಟು, ಸಾವು, ರೋಗ, ಕಷ್ಟ, ಕಣ್ಣೀರು ಅಸಹಾಯಕತೆಗಳಂತಹ ವಿಚಾರಗಳ ನಡುವೆಯೇ ಅಪರೂಪದ ಒಂದು ಪ್ರೀತಿ, ಸೆಳೆತ, ಅನುಬಂಧ ಸೆಲೆ ಚಿಮ್ಮುವಂತೆ ಮಾಡಿದ್ದು. ನಾನು ನಿನ್ನ ಮನದೊಳಗೂ, ನೀನು ನನ್ನ ಮನದೊಳಗೂ ಒಲವ ಪರಿಮಳವ ಹೀರುತ್ತ ಅದರ ಕಂಪಿಗೆ ಮನ ಸೋಲುವಂತೆ ಕಾಡಿದ್ದು. ಅದಕ್ಕೇ ನಾನು ಆ ಭಾವನೆಗಳನ್ನ ಪ್ರೀತಿಸುತ್ತೇನೆ ಗೆಳೆಯಾ ನಿನ್ನಂತೆಯೇ. ನಿನಗೆ ಗೊತ್ತಲ್ಲವೇ ? ಮಾನವ ಜೀವನದ ಯಾವ ಮಗ್ಗುಲನ್ನು ಹೊರಳಿಸಿ ನೋಡಿದರೂ ಅಲ್ಲೊಂದು ಪ್ರೀತಿಯ ಕುರುಹು ಇದ್ದೇ ಇರುತ್ತದೆ. (ಪ್ರೀತಿಯೇ ಸುಳ್ಳೆಂದವರೂ ಆ ಪ್ರೇಮದ ಜಿದ್ದಿಗೆ ಬಿದ್ದವರ ಹೊಟ್ಟೆಯೊಳಗೇ ಹುಟ್ಟಿರುತ್ತಾರೆ. .! ) ಆದರೆ ಅದಕ್ಕೆ ಬೇರೆ ಬೇರೆ ರೂಪಗಳು ಮಾತ್ರ. ಅವೆÉಲ್ಲವುಗಳ ಪ್ರೀತಿಯನ್ನೂ ನಿವಾಳಿಸಿ ಹಾಕಬಲ್ಲ ಹಾಗೆಯೇ ನನ್ನನ್ನು ನೀನು ಪ್ರೀತಿಸಿದೆ. ಆ ಪ್ರೀತಿಗೇ ನಾನು ಸೋತು ಸುಣ್ಣವಾಗಿ ನನ್ನೊಳಗಿನ ನೋವು ಕಣ್ಣೀರಾಗಿ ಹರಿಯಲಿಕ್ಕಾದದ್ದು. ನೀರನ್ನೇ ಕಾಣದವನಿಗೆ ಮೃಷ್ಟಾನ್ನ ಭೋಜನವನ್ನು ತಂದು ಮುಂದಿರಿಸಿದಂತಾಗಿತ್ತು ನನ್ನ ಸ್ಥಿತಿ ನೀನು ಬಂದು ನನ್ನ ಬದುಕ ಬಾಗಿಲ ತೆರೆದು ಮನದೊಳಗೆ ಸೇರಿಕೊಂಡಾಗ. ನಾನೇ ನಿನಗೆ ಎಲ್ಲವೂ ಆಗುತ್ತೇನೆ ಅಂದಿದ್ದೆಯಲ್ಲವೇ ಅದೊಂದೇ ಮಾತಿಗೆ ನಾನು ಕರಗಿಹೋಗಿದ್ದು. ಆ ಒಂದು ನಂಬಿಕೆಯೊಂದಿಗೇ ಇಡೀ ಜೀವನ ನಿನ್ನೊಂದಿಗಿರಲು ನಾನು ಬಯಸಿದ್ದೆ. ಆದರೆ. . .
ಒಲವೇ ಬದುಕೆನ್ನುವುದು ನದಿಯ ಹಾಗೆ . ನಿರಂತರ. . ನಿರ್ಮಲವಾಗಿ ತನ್ನ ಪಾಡಿಗೆ ಸಾಗುತ್ತಲೇ ಇರುತ್ತದೆ. ಅದರದ್ದು ಸಾಗರವನ್ನು ಮುಟ್ಟುವ ತನಕ ಕೊನೆಯಿಲ್ಲದ ಪಯಣ. ಮಧ್ಯೆ ಸಿಕ್ಕ ನಾನು, ನನ್ನಂಥವರು ಎಲ್ಲರೂ ನದಿ ಸಾಗುವ ದಡಗಳು ಮಾತ್ರ. ನದಿ ಮುಂದೆ ಸಾಗುತ್ತಿದ್ದ ಹಾಗೆ ನಾವೂ ಬದುಕೆಂಬ ನದಿಯಲ್ಲಿ ದೂರಾಗುತ್ತೇವೆ. (ಆದರೆ ನಾನು ಮಾತ್ರ ಪ್ರೀತಿಯ ಅಣೆಕಟ್ಟು ಕಟ್ಟಿ ನಿನ್ನನ್ನು ಉಳಿಸಿಕೊಳ್ಳಲು ಬಯಸಿದ್ದೆ) ಆದರೆ ನೆನಪುಗಳದ್ದು ಮಾತ್ರ ಪ್ರಮುಖ ಪಾತ್ರ. ಕೆಲವು ನೆನಪುಗಳು ಗಾಢವಾಗಿರುತ್ತವೆ. ನಮ್ಮನ್ನೇ ಮರೆಸುವಷ್ಟು. ಅದರ ಧ್ಯಾನದಲ್ಲೇ ಮೈಮರೆಯುವಷ್ಟು. ಅಂತಹ ಗಾಢ ನೆನಪುಗಳು ಮಾತ್ರ ಬದುಕಿನ ಒಂದಷ್ಟು ಕ್ಷಣಗಳನ್ನು ಹಸಿರಾಗಿಸಿ, ಚೈತನ್ಯದ ಚಿಲುಮೆಯಾಗುತ್ತವೆ, ಒಲವಿನ ಗಣಿಯಾಗುತ್ತವೆ, ಮುದ್ದಿನ ಮಣಿಯಾಗುತ್ತವೆ. ಪ್ರತಿಯೊಬ್ಬರ ಜೀವನದಲ್ಲೂ ಅಂತಹ ಘಳಿಗೆಗಳು ಬೇಕು ಕಣೋ ಇರಲೇ ಬೇಕು. ನಮ್ಮ ಆಲಸ್ಯವನ್ನ, ದುಃಖವನ್ನ ಕಷ್ಟವನ್ನ ಸಮಸ್ಯೆಗಳನ್ನ ಮರೆಸುವಷ್ಟಾದರೂ ಒಳ್ಳೆಯ ನೆನಪುಗಳು ಬೇಕು. ಹ್ಮ . . .ತಮಾಷೆಯೆಂದರೆ ದೂರಾಗುತ್ತೇವೆಂದು ಗೊತ್ತಿದ್ದರೂ ಗಾಢವಾಗಿ ಪ್ರೀತಿಸಿಬಿಡುತ್ತೇವೆ. ಆಮೇಲಿನದು ಬರೀ ವಿರಹ ವೇದನೆಯೇ. ಆದರೂ ನೀನು ಸಿಕ್ಕ ಕೆಲವೇ ದಿನಗಳಿಗೆ ನನಗೆ ಅರಿವಿಲ್ಲದೆಯೇ ಒಂದು ದೊಡ್ಡ ಕನಸನ್ನು ಕಟ್ಟಿಕೊಂಡುಬಿಟ್ಟೆ.
ನಿನ್ನ ಮಗ್ಗುಲಲ್ಲಿ ಮಲಗಿ
ನಿನ್ನ ತೋಳನ್ನೇ ತಲೆದಿಂಬಾಗಿಸಿಕೊಂಡು
ಆಗಸದಾಚೆ ಕಾಣುವ ತಾರೆಗಳನ್ನೇ
ಎಣಿಸುತ್ತಾ ದಿಟ್ಟಿಸಿ ನೋಡುತ್ತೇನೆ ಗೆಳೆಯ
ನಿನ್ನ ಅನನ್ಯ ಪ್ರೀತಿಗೆ ಅವು ಸಾಟಿಯೇ?
ಅಂತ ಹಾಡುತ್ತಲೇ ನನ್ನ ನಿನ್ನ ನಡುವಿನ ಸಂಬಂಧದ ಗೂಡು ಕಟ್ಟಿದ್ದೆ. ಹಾಗೆ ಕಟ್ಟಿದ ಸಂಬಂಧದ ಗೂಡನ್ನು ಜೋಪಾನ ಮಾಡುವುದು ನನ್ನದೇ ಕರ್ತವ್ಯವೆಂದು ಭಾವಿಸಿದ್ದೆ. ನಿಂಗೊಂದು ವಿಷ್ಯ ಗೊತ್ತಾ ? ಯಾವತ್ತೂ ಇಂತಹ ಪ್ರೀತಿಗೆ ಬಿದ್ದವಳೇ ಅಲ್ಲ ನಾನು. ಮನದ ಮೂಲೆಯಲ್ಲಿ ಯಾರಿಗೂ ಕಿಂಚಿತ್ತೂ ಜಾಗ ನೀಡಿರಲಿಲ್ಲ ಕಣೋ. . ನೀನು ಬರುವ ತನಕ! ಅದು ಹೇಗೆ ಬಂದು ನನ್ನ ಎದೆಯಾಳದಲ್ಲಿ ಒಲವಿನ ತರಂಗಗಳನ್ನೆಬ್ಬಿಸಿ ಕಣ್ಣಿಗೊಂದಷ್ಟೂ ನಿದ್ರೆ ಬಾರದ ಹಾಗೆ, ಹಸಿವೆಯೇ ಆಗದ ಹಾಗೆ ಮಾಡಿಬಿಟ್ಟೆ. ಕಣ್ತೆರೆಯಲಿ, ಮುಚ್ಚಲಿ, ನಿನ್ನ ನಲವಿನ ನೆನಪೇ ಅಲ್ಲಿ ಮೆರವಣಿಗೆ ಮಾಡುತ್ತಿವೆ. ನೀನು ಏನು ಮಾಡಿದರೂ ನಿನ್ನ ಮೇಲೆ ನನಗೆ ಅಗಾಧವಾದ ನಂಬಿಕೆ. ನೀನಾರ ಬಗೆಗಾದರೂ ನಂಬಿಕೆ ಇಟ್ಟುಕೊಂಡಿದ್ದೀ ಅಂದರೆ ಅಲ್ಲೊಂದು ಪ್ರೀತಿ ಬೆಚ್ಚಗೆ ಕುಳಿತಿರುತ್ತದೆ. ದ್ವೇಷ ಮಾತ್ರವೇ ಅಪನಂಬಿಕೆಯ ಅವ್ವ. ಗೆಳೆಯಾ . . ಬದುಕು ಎನ್ನುವುದು ಎಷ್ಟು ದಿನವಿರುವುದೋ ಬಲ್ಲವರಾರು? ಸಿಕ್ಕಿದಷ್ಟೂ ಹೊತ್ತು ತುತ್ತು ತುತ್ತು ಪ್ರೀತಿಯನ್ನು ನೆಮ್ಮದಿಯಾಗಿ ಸವಿಯೋಣ. ಒಲವಿನ ಅನುಬಂಧಕ್ಕೆ ಬಂಧಿಯಾಗೋಣ. ಇಷ್ಟೆಲ್ಲದರ ನಡುವೆ ಇನ್ನೂ ಒಂದು ಆಸೆ ಇದೆ ಗೆಳೆಯಾ. . ಆ ಮಾತೆತ್ತಿದರೆ ನೀನು ಗದರಿಬಿಡುತ್ತೀ ಅಂತ ಗೊತ್ತಿದ್ದರೂ ಹೇಳುತ್ತೇನೆ. ಅದೂ. . . ನಾನು ಸಾವಿನಂಚಿನಲ್ಲಿರುವಾಗ, ನೋವಿನ ಕ್ಷಣಗಳನ್ನು ಅನುಭವಿಸುವಾಗ ಇನ್ನೇನು ಕೆಲವೇ ನಿಮಿಷಗಳು ಮಾತ್ರವೇ ನನ್ನ ಪಾಲಿಗಿದೆ ಅನ್ನುವಾಗ ಆ ಕೊನೆಯ ಅಮೂಲ್ಯ ಕ್ಷಣಗಳಲ್ಲಿ ನೀನು, ನೀನೊಬ್ಬ ಮಾತ್ರ ನನ್ನ ಪಕ್ಕದಲ್ಲಿ ಕುಳಿತು. ಅಲ್ಲಲ್ಲ. . ಕುಳಿತ ನಿನ್ನ ಮಡಿಲಲ್ಲಿ ನನ್ನ ದೇಹವ ಚೆಲ್ಲಿ ನೀನಾಡುವ ಅರ್ತಿಯ ಮಾತುಗಳನ್ನು ಕೇಳುತ್ತ ಕೇಳುತ್ತ, ನಿನ್ನೊಲವಿನ ರಾಗದಲ್ಲಿ ಮೀಯುತ್ತ ಮೀಯುತ್ತ, ನಿನ್ನ ಅಪ್ರತಿಮ ಅನುರಾಗ ಸೂಸುವ ಕಣ್ಣುಗಳನ್ನೇ ನೋಡುತ್ತ ನೋಡುತ್ತ, ನನ್ನ ಮುಂಗುರುಳು ನೇವರಿಸುತ್ತ ನಿಂತ ನಿನ್ನ ಕೈಬೆರಳುಗಳನ್ನು ಎಳೆದು ಅದಕ್ಕೊಮ್ಮೆ ಚುಂಬಿಸಿ, ನಿನ್ನ ಮೆಲುದನಿಯಲ್ಲಿ ಹಾಡುವ ಹಾಡು ಕೇಳುತ್ತ ನನ್ನ ಜೀವ ಹೋಗಿಬಿಡಲಿ. ಆಗ ಮಾತ್ರವೇ ನನ್ನ ಈ ಅನಾಥ ಜೀವ ಬದುಕಿದ್ದಕ್ಕೂ ಸಾರ್ಥಕವಾದೀತು. ಹೀಗೆ ನಿನ್ನ ಒಲವಿನ ಬಗ್ಗೆ ಬರೆಯುತ್ತ ಕೂತರೆ ಮೂಡಿದ ಸಾಲುಗಳು ಅನನ್ಯ, ಅನಂತ, ಅಮೋಘವಾಗಿ, ಅರಿವಿಲ್ಲದ ಹಾಗೆ ಹರಿದು ಬಂದವು!
ಅತಿಶಯೋಕ್ತಿಯಲ್ಲ ಒಲವೆ, ಅನುಬಂಧವೋ, ಋಣವೋ
ಅಸದೃಶ ಒಲವ ರೂಪವೋ, ಅಸಂಖ್ಯ ತಾರೆಗಳ ಅಪರೂಪದ ಹೊಳಪೋ
ಅರಿವಿನ ಮನೆಗಾದ ಅಸಾಮಾನ್ಯ ಹುರುಪೋ
ಅಖಿಲ ವಿಶ್ವದೊಳಿರದ ಅಚಿಂತ್ಯದನುಭವವೋ
ಅಶರೀರ ಮನಸುಗಳ ಅನಿತ್ಯ ಅನುಸಂಧಾನವೋ
ತಿಳಿಯದಾದೆನು ಒಲವೆ ನಿನ್ನ ಒಲವಿನೊಳಿಹುದೆ
ಇಂಥ ವಿಶ್ವರೂಪ !!!!!
ಅನ್ನುತ್ತ ಕಾಯುತ್ತಲೇ ಇದ್ದೇನೆ. ನಾಳೆ ಇಳಿ ಸಂಜೆಯ ಹೊತ್ತಿಗೆ ಬರುತ್ತೀಯಲ್ಲವೇ?
ನಿನ್ನೊಲವಿನ, ಪಾಪಚ್ಚಿ. . .