ನನ್ನೆದೆಯ ಒಲವಿನ ಒಡತಿಗೆ,
ಮೂಗಿನತ್ತದ ಸಿಂಗಾರವಿಲ್ಲದಿದ್ದರೂ ಮೂಗಿನ ಮೇಲೆಯೇ ಕೋಪವೆಂಬ ಆಭರಣದ ಅಲಂಕಾರದಿಂದ ಮುದ್ದಾಗಿ ಮಿನುಗುವ ಪ್ರೀತಿಯ ಕೋಪದ ಸುಂದರಿಯೆ,
ಕೋಪದ ಹೆಸರನ್ನಿಟ್ಟು ಯಾಕೆ ಕರೆಯುತ್ತಿದ್ದಾನೆ ಅಂತ ಆಶ್ಚರ್ಯವಾಗಿರಬೇಕಲ್ಲ? ನಿನ್ನ ಪೆದ್ದು ಕೋಪದಲ್ಲಿ ಅವಿತಿರುವ ನಿನ್ನ ಪ್ರೀತಿಗೆ ಸೆಳೆತಗೊಂಡವನು ನಾನು, ನನ್ನ ಪ್ರೇಮದ ಭಾವನೆಗಳನ್ನ ನೀನು ಅರಿತರು ಏನೂ ತಿಳಿಯದವಳಂತೆ ಪ್ರೀತಿಯ ಕೋಪದಲ್ಲಿ ನನ್ನ ತುಂಟ ಪ್ರಶ್ನೆಗಳಿಗೆ ಉತ್ತರ ಕೊಟ್ಟಾಗ ನೀನೆಷ್ಟು ಚೆಂದ… ನಿನ್ನ ತುಟಿಯ ಹಿಂದಿನ “ಆ” ಮಾತನ್ನು ನೀನು ಹೇಳದೆಯೇ ಬಲ್ಲವನು ನಾನು. ಆದರು ನಿನಗಿರುವ ಸಾಮಾಜಿಕ ಭಯವನ್ನು ಗೌರವಿಸಿ ಹಿಂದೆ ಸರಿಯುವಂತೆ ಮಾಡಿರುವುದೇ ನಿನ್ನ ಪ್ರೇಮದ ಶಾಲೆ. ಆ ಶಾಲೆಯಲ್ಲಿ ನನ್ನ ಪ್ರೀತಿಯ ಗುರುವಿಗೆ ಗೌರವ ನೀಡುವುದೆ ನನ್ನ ಕರ್ತವ್ಯ.
ನಿನ್ನ ಪರಿಚಯ ಆಕಸ್ಮಿಕವಾದರು ಅದು ಮಂದಸ್ಮಿತ, ಏನೂ ಅರಿವಿಲ್ಲದಂತೆ ಇದ್ದ ಈ ಜೀವಕ್ಕೆ ಎಲ್ಲವನ್ನೂ ನೀಡಿ ದಂಡೆತ್ತಿ ಬಂದ ರಾಣಿ ನೀನು. ಬರಿ ಕನಸುಗಳನ್ನೇ ಹೊತ್ತು ಹೊರಟಿದ್ದ ಈ ಜೀವನದ ಕಾರ್ಯಕ್ರಮಕ್ಕೆ ನಿರೂಪಕಿಯಾಗಿ ನೀನು ಬಂದಿರುವೆ. ಬಯಸದೆ ಬಂದ ನಿನ್ನ ಸ್ನೇಹದಿಂದ ಪ್ರೇಮದ ಬರವಣಿಗೆಯನ್ನೇ ನನಗೆ ಬಳುವಳಿಯಾಗಿ ನೀಡಿರುವೆ. ಪದಗಳನ್ನೇ ಮೀರಿದ ಸ್ವರಗಳನ್ನೇ ದಾಟಿದ ನನ್ನ ಪ್ರೀತಿಯಾಕ್ಷರಗಳಿಗೆ ಕಾರಣ ನೀನೆಂದರೆ ತಪ್ಪಾಗಲಾರದು. ನನ್ನಲ್ಲೊಬ್ಬ ಪ್ರೀತಿಯ ಕವಿಯನ್ನೇ ಹಡೆದು ಮುದ್ದಾದ ಪ್ರೇಮದ ಬಲೆಯಲ್ಲಿ ಸಿಲುಕಿಸಿರುವೆ.
ನಿನ್ನ ನಗುವಿನ ಅಲೆಗಳ ಕಲರವಕ್ಕೆ ಬೆರಗಾದ ನಾನು, ನಿನ್ನ ಹೆಸರನ್ನು ಕಂಡರೆ ಸಾಕು ನೀನೆ ಕಂಡತೆ ಏನೋ ಸಂತಸದ ಸಾಗರ ನನ್ನಲ್ಲಿ ಘರ್ಜಿಸುತ್ತಿರುತ್ತದೆ. ನಿನ್ನ ನೋಡದ ಆ ದಿನ, ನಿನ್ನ ನಗುವೆಂಬ ಅಮೃತ ಕಳಶವನ್ನು ಒಲವೆಂಬ ಹುಣ್ಣಿಮೆಯ ನಿನ್ನ ಮುಖದ ಮೇಲೆ ದರ್ಶನವಾಗದಿದ್ದರೆ ನನ್ನ ಜೀವನದ ಆ ದಿನ ವ್ಯರ್ಥವೆಂದು ಭಾಸವಾಗುತ್ತಿರುತ್ತದೆ.
ಹಸುಗೂಸಿನಂತೆ ಇಡುವ ನಿನ್ನಂದದ ಹೆಜ್ಜೆ, ಅಲ್ಲಿ ಝೇಂಕರಿಸುವ ಗೆಜ್ಜೆಯ ನಾದಕ್ಕೆ ನನ್ನ ಕಿವಿಗಳು ಸದಾ ಚಾತಕ ಪಕ್ಷಿಯಂತೆ ಕಾದು ಕುಳಿತಿರುತ್ತವೆ. ಎದುರಿಗೇ ಕುಳಿತು ನಿನಗೇ ಅರಿವಿಲ್ಲದಂತೆ ಸರಿಸುವ ನಿನ್ನ ಮುಂಗುರುಳ ಅಂದಕ್ಕೆ ಮನ ಸೋಲದಿರುವ ಕ್ಷಣವೇ ಇಲ್ಲ ಅದನ್ನರಿತು ನೀನು ತೋರುವ ಮುಗ್ದ ತುಂಟ ನಗುವಿಗೆ ನಾನೆಂದೂ ಆಭಾರಿ. ಆ ನಗುವಿಗೆ ಎಂದಿಗೂ ನಾನೇ ಕಾರಣೀಕರ್ತನಾಗಿರಬೇಕು ಎಂಬ ಮಹದಾಸೆ, ಹಾಗೂ ಈ ವಿಷಯದಲ್ಲಿ ನಾನೂ ಸ್ವಾರ್ಥಿಯೂ ಹೌದು.
ಈ ಜೀವಕ್ಕೆ ಎಲ್ಲವೂ ನೀನೆ ಎಂಬ ಭಾವನೆ ದಿನಗಳು ಕಳೆದಂತೆ ಹೆಮ್ಮರವಾಗುತ್ತಿವೆ. ನಿನ್ನ ಕಾಲಿಗೆ ಕಾಲ್ಗೆಜ್ಜೆ ಕಟ್ಟಬೇಂಕೆಂಬ ಆಸೆ, ಫಳ ಫಳ ಹೊಳೆವ ಸನ್ನೆಯಲ್ಲೆ ಸೆಳೆವ ನಿನ್ನ ಕಣ್ಣಿಗೆ ಕಾಡಿಗೆ ಹಚ್ಚಬೇಕೆಂಬ ಬಯಕೆ. ನಿನ್ನ ಮುಗಿಲಂತ ಕೆನ್ನೆಗೆ ನನ್ನ ತುಟಿಗಳಿಂದ ದೃಷ್ಟಿ ಬೊಟ್ಟೊಂದು ಇಡಬೇಕೆಂಬ ಹಂಬಲ. ಈ ಭಾವನೆಗಳಿಗೆಲ್ಲಾ ಕಾರಣ ನನ್ನದೆಯ ಒಲವೆಂಬ ಹೊಲದಲ್ಲಿ ನೀನೆಟ್ಟಿರುವ ಪ್ರೀತಿಯ ಬಳ್ಳಿ, ಆ ಬಳ್ಳಿ ಮರವಾಗಿ ಬೆಳದಿಂಗಳಂತೆ ಬೆಳೆದು ಪ್ರೇಮದ ಫಲ ನೀಡಲು ನಿನ್ನ ಬರುವಿಕೆಗಾಗಿ ಹಾತೊರೆಯುತ್ತಿದೆ. ನೀನು ನನ್ನ ಜೀವನದ ಗೆಳತಿಯಾಗಿ ಬಂದ ದಿನಗಳಿಂದ ನನ್ನಲ್ಲಾದ ಬದಲಾವಣೆಗಳಿಗೆ ಮಿತಿಯೇ ಇಲ್ಲ ಶಿಸ್ತಿನ ಸಿಪಾಯಿಯಂತೆ ನನ್ನ ಮಾರ್ಪಾಡು ಮಾಡಿರುವೆ, ನನ್ನ ಮನವನ್ನು ಗೆದ್ದು ನಿನ್ನ ಗುಂಗಲ್ಲೇ ಕಳೆಯುವಂತೆ ಸೆಳೆದಿರುವೆ, ಇವಕ್ಕೆಲ್ಲಾ ನಿನಗೆ ಜೀವನ ಪೂರ್ತಿ ಧನ್ಯವಾದಗಳನ್ನು ಅರ್ಪಿಸಬೇಕಾಗಿದೆ.
ನಾನು-ನೀನು ಕಳೆದ ಕ್ಷಣಗಳನ್ನು ನೆನೆದರೆ, ಏನೋ ಪಡೆದಷ್ಟು ಸಂತಸ ಕಾರ್ಮೊಡಗಳನ್ನು ಸರಿಸಿ ಕಾಮನಬಿಲ್ಲಿನಂತೆ ಹೊಳೆಯುತ್ತಿರುತ್ತದೆ. ನಿನ್ನ ಗಲ್ಲವನ್ನು ಮುಟ್ಟಿ ನಿನಗೆ ಮಾಡಿದ ಸಾಂತ್ವನ ನೆನೆದರೆ ರೋಮಾಂಚನದ ಕ್ಷಣಗಳು ಕಾಡಲು ಶುರು ಮಾಡುತ್ತವೆÉ. ನಿನ್ನ ಕೆನ್ನೆಯನ್ನು ಮಗುವಿನಂತೆ ಮುಟ್ಟಿದಾಗ ನೀ ತೋರುವ ಮುಗ್ಧ ಮುಗುಳ್ನಗೆ, ತುಂಟತನದ ಮಾತುಗಳು ಹೃದಯವನ್ನು ಆವರಿಸಿ ಕುಳಿತಿವೆ. ಮಳೆಯಲಿ ನಿನ್ನೊಂದಿಗೆ ನೆನೆದ ಕ್ಷಣಗಳನ್ನು ಮನದಲ್ಲಿ ತಂದರೆ ಈ ಬೇಸಿಗೆ ಕಾಲದ ಮೇಲೆ ದ್ವೇಷ ಶುರುವಾಗುತ್ತಿದೆ. ಆದರೂ, ಸೂರ್ಯೊದಯ-ಸೂರ್ಯಾಸ್ತದಲ್ಲಿ ನಿನ್ನ ಕೈಹಿಡಿದು ನಡೆಯುವ ಕನಸಿಗೆ ಸೂರ್ಯನು ನೋಡಲು ಕಾದು ಕುಳಿತ್ತಿರುತ್ತಾನೆ.
ಸ್ವರ್ಗದಂತೆ ತುಂಬಿರುವ ನಮ್ಮ ಕುಟುಂಬಕ್ಕೆ ಪ್ರೀತಿಯ ದೀಪವಾಗಿ ನೀನು ಬರಬೇಕು. ನಮ್ಮ ಮನೆಯನ್ನು ಬೆಳಗಿಸುವ ಸೌಂದರ್ಯದ ಸೊಸೆ ನೀನಾಗಬೇಕು. ಸುಖವಿರಲಿ, ದುಃಖವಿರಲಿ ಮೊದಲು ನೀನು ನೆನಪಾಗೋ ಈ ಜೀವಕ್ಕೆ, ಕಷ್ಟ-ಸುಖಕ್ಕೆ ಸ್ಪಂದಿಸೋ ಗೆಳತಿ, ಮಡದಿ, ಸಹೋದರಿ, ಮುದ್ದಾಡೋ ತಾಯಿಯಾಗಿ ನನ್ನ ಬಾಳಿಗೆ ದಾರಿ ದೀಪವಾಗಬೇಕು. ಸ್ವರ್ಗಕ್ಕಿಂತ ಮಿಗಿಲಾದ ನಿನ್ನ ಮಡಿಲಲ್ಲಿ ಮಲಗಿ ಎಳೆ ಕಂದನಂತೆ ನಾನು ನಿದ್ರೆಗೆ ಜಾರಬೇಕು. ನಿನ್ನ ಪ್ರೀತಿಯ ಉಸಿರಿನಲ್ಲಿ ಬೆರೆÉಯಬೇಕು. ನೀ ಬಯಸಿದಂತೆ, ಕಾವೇರಿ ನದಿ ತೀರದಲ್ಲಿ ಕುಳಿತು ನಿನಗೆ ಕಾಲುಂಗುರ ತೊಡಿಸಬೇಕು. ನಿಶ್ಯಬ್ದವಾಗಿ, ನಿಶ್ಕಲ್ಮಶವಾದ ಮಲೆನಾಡ ಮೈಸಿರಿಯಲ್ಲಿ ನಿನ್ನೊಟ್ಟಿಗೆ ಏಕಾಂತದ ನಡಿಗೆಯನ್ನು ನಡೆಯಬೇಕು. ನಮ್ಮ ಪ್ರೀತಿಗೆ ಸಾಕ್ಷಿಯಾಗಿ ಜನಿಸೋ ಮಗುವಿನೊಂದಿಗೆ ಸಮುದ್ರ ತೀರದ ಮರಳಿನಲ್ಲಿ ಆಟವಾಡಬೇಕು, ಬಹುಶಃ ಸ್ವರ್ಗಕ್ಕಿಂತ ಮಿಗಿಲಾದ ನಿನ್ನ ಪ್ರೀತಿಯಲ್ಲಿ ಜೀವನವನ್ನೇ ಕಳೆಯಬೇಕು. ನಿನ್ನ ಪ್ರೀತಿಯ ಕೈಗಳಿಂದ ತಿನ್ನಿಸುವ ಕೈತುತ್ತನ್ನು ತಿನ್ನಲು ನಾನು ಅದೃಷ್ಠವಂತನೇ ಸರಿ ಕಣೆ.
ಪ್ರೀತಿಯ ಹೃದಯದ ಸ್ವರಗಳನ್ನೇ ತುಂಬಿರುವ ನಿನ್ನೊಂದಿಗೆ ಮಾಡುವ ಪುಟ್ಟ ಸಂಸಾರದಲ್ಲಿ, ಪುಟ್ಟ ಪುಟ್ಟ ಜಗಳ, ಮುನಿಸು, ಒಲವಿನ ಕೋಪಗಳೊಂದಿಗೆ ಮುಗಿಲನ್ನು ಮುಟ್ಟುವ ಸಾಗರದಾಳವನ್ನು ತಾಗುವ ಒಲವನ್ನು ತೋರಿ ಆಸರೆಯಾಗುತ್ತೇನೆ. ನಿನ್ನ ಎಲ್ಲಾ ಆಗು ಹೋಗುಗಳಲ್ಲಿ ನಾನು ಪ್ರತಿಬಿಂಬವಾಗಿರುತ್ತೇನೆ. ಸೌಗಂಧವೇ ತುಂಬಿರುವ ಹೂದೋಟದ ಗುಲಾಬಿಯಂತೆ ಸದಾ ಹೊಳೆಯುವಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ.
ನಿನ್ನ ಗೆಳತಿಯಾಗಿ ಪಡೆಯಲು ಎಷ್ಟೋ ಜನ್ಮಗಳಿಂದ ನಾನು ಮಾಡಿದ ಪುಣ್ಯವೇನೋ, ಇನ್ನೂ ಮಾನವ ಜನ್ಮ ತಾಳಿದರೆ ನಿನ್ನ ಸಂಗಾತಿಯಾಗಿಯೇ ಹುಟ್ಟಬೇಕು ನಾನು. ಬಹು ಜನ್ಮಗಳ ಬಂಧನದಂತೆ ಜೊತೆಯಾಗಿ ಬಾಳಲು ಅವಕಾಶ ಮಾಡಿಕೊಡುತ್ತೀಯಾ ಅಲ್ವಾ? ನನ್ನ ಭಾವನೆಗಳು ನಿನಗೆ ಅರ್ಥವಾಗಿದೆ ಎಂದರಿತು ನನ್ನ ಬಾಳಲ್ಲಿ ಕೈ ಜೋಡಿಸು ಗೆಳತಿ ಎಂದು ಮನವಿ ಮಾಡಲು ಯಾವ ಹಿಂಜರಿಕೆಯೂ ಇಲ್ಲ. ನಿನ್ನ ಪ್ರೀತಿಯ ಕೊಡುಗೆಗಾಗಿ ಕೈ ಚಾಚುತ್ತಿದ್ದೇನೆ. ಪ್ರೇಮದ ಉಡುಗೊರೆಯೊಂದಿಗೆ ಕೈಜೋಡಿಸು, ಕೈಬಿಡದ ಜೊತೆಗಾರನಾಗಿರುತ್ತೇನೆ. ನನ್ನ ಪ್ರೀತಿಯ ಸಾಮ್ರಾಜ್ಯಕ್ಕೆ ಒಡತಿ ಯಾವಾಗಲಿದ್ದರು ನೀನೆ ಕಣೆ, ಬದುಕೆಂಬ ಸಾಗರದಲ್ಲಿ ಒಲವೆಂಬ ಆಸರೆಯೊಂದಿಗೆ ದಡ ಸೇರಿಸುವ ಜವಾಬ್ದಾರಿ ನನ್ನದು. ನನ್ನ ಪ್ರೇಮದರಮನೆಗೆ ಉತ್ತರಾದಿಕಾರಿಯಾಗಿ ಯಾವಾಗ ಬರುತ್ತಿಯಾ ಎಂದು ನಿನ್ನ ಉತ್ತರಕ್ಕಾಗಿ ಕಾದು ಕುಳಿತಿರುವೆ.
ಇಂತಿ
ನಿನ್ನವ