ಮೌನ ಮುರಿದು ಬಾರೇ……: ಮೆಹಬೂಬ ಮುಲ್ತಾನಿ

ನನ್ನ ಪ್ರೀತಿಯ ಭುವಿ

ಒಂದು ಕ್ಷಣ ನೀನು ಸಿಕ್ಕರೆ ಏನೆಲ್ಲಾ ಹೇಳಬೇಕಾಗಿದೆಯೋ ಅದ್ನೆಲ್ಲಾ ಹೇಳಲಾಗುವುದಿಲ್ಲವೆಂದು ಹೃದಯದಲ್ಲಿನ ಮಾತುಗಳನ್ನು ಬರವಣಿಗೆ ರೂಪದಲ್ಲಿ ಭಟ್ಟಿ ಇಳಸಿದ್ದೇನೆ. ನನಗೆ ಪತ್ರ ಬರೆಯುವ ಅಭ್ಯಾಸವೇ ಮರೆತುಹೊಗಿದೆ. ದಿನಾಲೂ ನೂರೈವತ್ತು ಮೆಸೇಜು ಮಾಡಿ ರೂಢಿಯಾಗಿರುವ ನನಗೆ ಇದೇ ಮೊದಲ ಪ್ರೇಮಪತ್ರವೆನಿಸಿ, ಬರೆಯಲು ಕೂತು ಕೊನೆಗೆ ಇದೇ ಕೊನೆಯ ಪತ್ರವೂ ಎನಿಸಿದೆ. ಸುಮಾರು ಬಾರಿ ಮನಸು ಬಿಚ್ಚಿ ಮಾತಾಡಿದ್ರೂ ನಮ್ಮ ಪ್ರೀತಿಗೆ ಹೊಸ ಭಾಷ್ಯ ಬರೆಯುವ ಬಗ್ಗೆ ನಿನ್ನ ಮನಸ್ಸೇಕೋ ಹೇಡಿಯಂತೆ ಹೆದರಿ ಓಡುತ್ತಿದೆ. ಇದಕ್ಕೆ ಕಾರಣ ನನ್ನ ಧರ್ಮ. ನೀನು ನನ್ನನ್ನು ಬಿಟ್ಟು ಹೋದ್ರೂ ನನಗೇನು ಬೇಸರವಿಲ್ಲ,.. ಯಾಕಂದ್ರೆ ನಾವು ಪ್ರೀತಿಸಿದ್ದಂತೂ ಸರ್ವಸತ್ಯ. ಹಾಗೆ ನಿಶ್ಕಲ್ಮಷತೆಯಿಂದ ಪ್ರೀತಿಸಲು ನಮಗೆ ಸಾಧ್ಯವಾಯಿತಲ್ಲ ಅದೇ ನಂಗೆ ಖುಷಿ. ಸಿಗದೇ ಇರುದುದರ ಬಗ್ಗೆ ಕಾತರ-ಕಾದ-ಕಾವ ಬೇಸರಪಡುವುದಕ್ಕಿಂತ ಇದ್ದಷ್ಟು ದಿನ ನಾವು ಖುಷಿಯಾಗಿರುವುದೇ ನನಗೇಕೋ ಇತ್ತೀಚೆಗೆ ಸರಿಯೆನಿಸುತ್ತಿದೆ,.. ಅದಕ್ಕೆ ಕಾರಣವೂ ಇದೆ.. ಯಾಕಂದ್ರೆ ಪ್ರೀತಿ ಶಾಶ್ವತ. ಅದರಲ್ಲೂ ಮೊದಲ ಪ್ರೀತಿಯಂತೂ ಚಿರಯೌವ್ವನೆ. ನಾವು ಸತ್ತು ಸಮಾಧಿಯಾದ್ರೂ ನಮ್ಮ ಪ್ರೀತಿ ಅಮರ. ಅಂತಹ ಒಂದು ಪ್ರಾಂಜಲ ಪ್ರೀತಿ ನೀಡಿದ್ದಕ್ಕೆ ನಿನಗೆಷ್ಟು ಧನ್ಯವಾದ ಹೇಳಿದ್ರೂ ಕಡಿಮೆಯೇ.

ಆದರೆ ಕೆಲವೊಂದ್ಸಲ ಮನಸ್ಸು ವಿಹ್ವಲಗೊಂಡು ನಮ್ಮ ಪ್ರೀತಿಯನ್ನು ಇಷ್ಟು ಸಲೀಸಾಗಿ ಬಿಟ್ಟುಕೊಡುವುದು ಸರಿಯಲ್ಲವೆನಿಸಿ ಮನಸ್ಸು ಚಿಂತೆಗೊಳಗಾಗಿ ನಿನ್ನ ನೆನಪು ಆವರಿಸಿ ದಿಕ್ಕೇ ತೋಚದಂತಾಗಿಬಿಡುತ್ತದೆ. ನಿನ್ನೆ ನೀ ಕಳುಹಿಸಿದ ಆ ಮೆಸೇಜ್‌ಗೆ ಏನೆಂದು ಉತ್ತರಿಸಲಿ..? ಕಾಲ ಹೀಗೆ ನಮ್ಮನ್ನು ತನಗೆ ಬೇಕಾದಾಗ ಎಲ್ಲಿಂದಲೋ ಹೆಕ್ಕಿ ತಂದು ಮುತ್ತಿನ ಸರಕ್ಕೆ ಹವಳ ಪೋಣಿಸಿದಂತೆ ಒಂದುಗೂಡಿಸಿದ್ದು ಯಾಕೆ…? ಎನ್ನುವ ಈ ನಿನ್ನ ಪ್ರಶ್ನೆಗೆ ಉತ್ತರವನ್ನು ನಾವಿಬ್ಬರೂ ಆ ಕಾಲನನ್ನೇ ಕೇಳಬೇಕು. ಹೀಗೆ ಶಾಶ್ವತವಾಗಿ ನನ್ನನ್ನು ಆವರಿಸಿಕೊಂಡು ‘ನೀನು-ನೀನೇ-ನೀನೊಬ್ಬಳೇ ಎಂಬಂತಾಗಿ ಹೊರಡಲು ಅಣಿಯಾಗಿರುವ ನೀನು ತಮಾಷೆಗೂ ಹಾಗೆ ಮಾಡಬೇಡ ಕಣೇ.

ಪ್ರೀತಿ ಭೂಮಿಯಿಂದ ಭೂಮದ ತನಕ ಮನುಷ್ಯ ಜೀವನವನ್ನು ನಿಯಂತ್ರಿಸುವ ಏಕಮಾತ್ರ ಸೂತ್ರವದು. ಈ ಏಕಮಾತ್ರ ಸೂತ್ರದಂತಿರುವ ನಿನ್ನ ಪ್ರೀತಿಯೇ ನನ್ನನ್ನು ಇಂದು ಸಂಪೂರ್ಣವಾಗಿ ನಿಯಂತ್ರಿಸುತ್ತಿದೆ. ನೀನು ಕೇಳುವ ಅನೇಕ ಪ್ರಶ್ನೆಗಳಿಗೆ ಅದುವೇ ಉತ್ತರ ನೀಡುತ್ತಿದೆ ಕೇಳು. ನಿಜವಾಗ್ಲೂ ಹೇಳ್ತೀನಿ ನೀ ನಡೆವ ದಾರಿಯಲ್ಲಿ ನಾನಾಗೇ ಎದುರಾಗಲಿಲ್ಲ. ಕಾಲ ನಿನ್ನ ಕರೆಗೆ ಓಗೊಟ್ಟು ನನ್ನನ್ನು ಕರೆತಂದು ನಿನ್ನ ಮುಂದೆ ನಿಲ್ಲಿಸಿತು. ನೀನೇಕೆ ನನ್ನನ್ನು ಬಾ…ಎಂದು ಸ್ವಾಗತಿಸಿದೆ..? ಅಸ್ತನಾಗುವ ಸೂರ್ಯ ನಿನ್ನನ್ನು ಅಣಕಿಸುತ್ತಾನೆಂದು ನನಗೆ ಮೊದಲೇ ಗೊತ್ತಿದ್ದರೆ ಆತನಿಗೆ ಅಸ್ತಮಿಸಲು ಅವಕಾಶವನ್ನೇ ನೀಡುತ್ತಿರಲಿಲ್ಲ. ಕಾಡಿ ಬೇಡಿ ಆತನನ್ನು ತಡೆಯುತ್ತಿದ್ದೆ.

ಭುವಿ.. .. .. ನಿನ್ನ ಮುಗಿಲಗಲ ನಿರೀಕ್ಷೆಗಳಿಗೆ ನನ್ನ ಸಾಂತ್ವನವೇ ಬೀಜವಾಗಿದ್ದರೆ, ಹೆಮ್ಮರವಾಗುವ ತನಕ ನೀನೇಕೆ ಸುಮ್ಮನಿದ್ದೆ..? ಸದ್ದಿಲ್ಲದೇ ಕೊಲ್ಲುವ ಆ ಕ್ಷಣಗಳು ಕೇವಲ ನಿನ್ನನ್ನು ಮಾತ್ರ ಕೊಲ್ಲುತ್ತಿವೆ ಎಂದು ತಿಳಿದುಕೊಂಡಿದ್ದರೆ ಅದು ಶುಧ್ದ ಸುಳ್ಳು… ಅದು ಕೇವಲ ನಿನ್ನ ಭ್ರಮೆ. ಅವು ಸದ್ದಿಲ್ಲದೇ ನಿನ್ನ ಕೊಲ್ಲದೇ ನನ್ನ ಉಸಿರು ನಿಲ್ಲಿಸಿ ಸಾವಿಗೆ ಸೆಳೆಯುತ್ತಿವೆ. ಇದೆಲ್ಲ ನಿನಗ್ಹೇಗೇ ಗೊತ್ತಾಗಬೇಕು. ನಿನ್ನ ಪ್ರೀತಿ ಬರೀ ಸಿಡಿಲಾಗಿದ್ದರೆ ಹೇಗೋ ಸಹಿಸಿಕೊಳ್ಳುತ್ತಿದ್ದೆ, ಆದರೆ ಅದು ಮಿಂಚಾಗಿ ಮಿಂಚಿ ಮಾಯವಾಗಿ ನನ್ನ ಜೀವನದ ದಾರಿಯನ್ನೇ ಕತ್ತಲಾಗಿಸುತ್ತಿದೆ. ನೀನು ಮಾತ್ರ ಬೆಳಕಿನಲ್ಲಿದ್ದು ನನ್ನನ್ನು ಕತ್ತಲೆಗೆ ದೂಡುವ ಮನಸ್ಸು ಖಂಡಿತ ನಿನ್ನದಲ್ಲ. ಆದರೆ ಅದರ ಹಿಂದೆ ಸಂಬಂಧಗಳು ಎಂಬ ಮಾಯಾವಿ ಕಾರ್ಯಮಾಡುತ್ತಿದೆ. ಸಾವಿನ ಕದ ಬಡಿಯುತ್ತ ನಿಂತರೆ ಸಾವು ಬರುವುದಿಲ್ಲ.. ಹೃದಯವೇ ಸತ್ತು ಹೋಗಿರುವಾಗ…! ನಿನ್ನ ಪ್ರೀತಿಯೆಂಬ ಲೋಕದಲ್ಲಿ ಗಾವುದ ದೂರ ಪಯಣಿಸಿರುವ ನನಗೆ ಮರಳಿ ಹೋಗು ಎಂದರೆ ಹೇಗೆ ಹೋಗಲಿ ನೀನೆ ಹೇಳು..? ಅದು ನಮ್ಮಿಬ್ಬರಿಗೂ ಸಾಧ್ಯವಿಲ್ಲ.

ನನಗೆ ಮೊದಲೇ ಗೊತ್ತಿತ್ತು, ಈ ‘ಜಾತಿ-ಸಮಾಜ-ಸಂಬಂಧಗಳು ಎಂದಿಗೂ ಯಾವ ಪ್ರೇಮಿಗಳನ್ನೂ ಸರಾಗವಾಗಿ ಒಂದುಮಾಡಿಲ್ಲ. ತಮ್ಮ ಕಬಂಧ ಬಾಹುಗಳನ್ನು ಚಾಚಿ ಪ್ರೀತಿಯ ತಾಜಾತನಕ್ಕೆ ಶಾಶ್ವತ ಸಮಾಧಿಯನ್ನೇ ನಿರ್ಮಿಸಿವೆ. ನಾವೂ ಕೂಡ ಇದೇ ಮಾರ್ಗದ ಸಮೀಪದಲ್ಲಿದ್ದೇವೆ. ನೀ ಮನಸ್ಸು ಮಾಡಿದರೆ ಇದ್ನೆಲ್ಲ ಮೀರಿ ಬದುಕು ಕಟ್ಟಿಕೊಳ್ಳಬಹುದು. ಧರ್ಮವೆಂಬ ಒಂದೇ ಕಾರಣಕ್ಕೆ, ಒಂದೇ ಜೀವದಂತಿರುವ ನಾವಿಬ್ಬರೂ ಬೇರೆಯಾಗುವುದರಲ್ಲಿ ಏನರ್ಥ..? ಯೋಚಿಸು..

ಈಗಾಗಲೇ ಸಾಕಷ್ಟು ಕಾಯಿಸಿದ್ದೀಯಾ., ಆಸೆಗಳ ಅಲಮಾರು ತುಂಬಿ ಕೋಡಿಬಿದ್ದು; ಕಾಯುವಿಕೆ ಸಾಕೆನಿಸಿದೆ. ನೋಡೇ ಭುವಿ.. ಹೀಗೆ ತುಂಬಾ ದಿನ ಒಬ್ಬರನೊಬ್ಬರು ಬಿಟ್ಟು-ಬಿಟ್ಟೇ ಇದ್ದರೆ ಪ್ರೇಮಕ್ಕಿಂತ ವಿರಹವೇ ಅಭ್ಯಾಸವಾಗಿಬಿಡುತ್ತದೆ. ಈ ಜಂಜಾಟದ ಬದುಕಿನಲ್ಲಿ, ತುಂಬಿ ಹೋಗಿರುವ ಗಲ್ಲಿಗಳಲ್ಲಿ, ನೆಟ್ ಸೆಂಟರುಗಳಲ್ಲಿ, ಫೂಟ್ ಪಾಥ್‌ನ ಧೂಳು ಜಂಗುಳಿಯಲ್ಲಿ ನನಗೆ ನೀನು ದಕ್ಕದೇ ನಿನಗೆ ನಾನು ಸಿಕ್ಕದೇ ಪ್ರತಿನಿತ್ಯ ಭೇಟಿಯಾಗಿಯೂ ಅಪರಿಚಿತರಂತೆ ಉಳಿದು ಹೋಗಿರುವ ಈ ಅವಸ್ಥೆಯಲ್ಲಿ ಬದುಕಿದ್ದು ಸಾಕೆನಿಸಿದೆ ನನಗೆ. ಕಾಯುವಿಕೆ ಕೊನೆ ಬಯಸಿದೆ.. ಆದರೆ ಆತುರ ಬೇಡ. ಯೋಚಿಸಿ ಹೆಜ್ಜೆಯಿಡು…

ನಮ್ಮನ್ನು ತಡೆಯೋರು ಯಾರೂ ಇಲ್ಲ ಎನ್ನುವುದು ನಂಗೊತ್ತು. ಆದರೆ ನಾನು ನೀನಾಗಿಯೇ ಬರುವತನಕ ಕಾತುರದಿಂದ ಯಾವ ಶತಮಾನದ ಅಂಚಿನಲ್ಲಿ ನಿಂತಾದ್ರೂ ಕಾಯ್ತೀನಿ. ನನ್ನ ಸಹನೆಗೆ ನಿನ್ನನ್ನು ಉಳಿಸಿಕೊಳ್ಳುವ ತಾಕತ್ತಿದೆ. ನಿನ್ನ ಪ್ರೀತಿ ಅಷ್ಟು ಮೃದುವಾಗಿದೆ.

ಇಷ್ಟೆಲ್ಲಾ ಓದುವುದರೊಳಗೆ ನಿನ್ನ ಕಣ್ಣಿನಿಂದ ನೀರು ಸುರಿಯುತ್ತವೆ ಎನ್ನುವುದು ನನಗೆ ಮೊದಲೇ ಗೊತ್ತಿದೆ. ನೀ ಸುರಿಸುವ ಆ ಕಣ್ಣೀರ ಹನಿಗಳನ್ನು ಬೊಗಸೆಯಲ್ಲಿ ಹಿಡಿವಾಸೆ ನನ್ನದು. ಅದರಲ್ಲಿ ನೀನು ನನಗಾಗಿ ನಾನು ನಿನಗಾಗಿ ಹೆಣೆದಿರುವ ನೂರು ಕನಸುಗಳಿವೆ. ನೀನೇನೋ ಅತ್ತು ಅವುಗಳನ್ನು ಅಳಿಸಿ ಹಾಕಬಹುದು. ಆದರೆ ಹಾಗೆ ಮಾಡುವುದು ಬೇಡ. ಅವುಗಳನ್ನು ನಮಗಾಗಿ ಎತ್ತಿಡು.. ಅವುಗಳನ್ನು ಸಾಕಾರಗೊಳಿಸುವ ಛಲ ನಮ್ಮ ಪ್ರೀತಿಗಿದೆ. ಇಂದಲ್ಲ ನಾಳೆ ನಿನ್ನ ಮೌನ ಮುರಿದು ಬಂದೇ ಬರುತ್ತೀಯಾ ಎನ್ನುವ ಭರವಸೆಯನ್ನು ಹೊತ್ತು ಕಾಯುತ್ತಿರುವ.. .. .. ..

ನಿನ್ನ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಮಾಂತೇಶ ಅಕ್ಕುರ
ಮಾಂತೇಶ ಅಕ್ಕುರ
3 years ago

ನಿಮ್ಮ ಪ್ರೀತಿಗೆ ಜಯವಾಗಲಿ

1
0
Would love your thoughts, please comment.x
()
x