ಅಂದು ಬೆಳಿಗ್ಗೆಯಿಂದಲೇ ನನ್ನ ತಲೆ ಚಿಂತೆಯ ಗೂಡಾಗಿತ್ತು. ಮಗ ಹಾಗೂ ಸೊಸೆ ಇಬ್ಬರೂ ಕೆಲಸಕ್ಕೆ ಹೋಗಿದ್ದರು. ಅವರು ಬರುವುದು ಇನ್ನು ಸಂಜೆಯೇ. ಅಲ್ಲದೆ ಸೊಸೆಯ ಎದುರು ಮಗಳನ್ನು ಬೈಯಲಾದೀತೆ? ಅವಳೆದುರು ಮಗಳ ಕಿಮ್ಮತ್ತು ಕಡಿಮೆಯಾಗಲಿಕ್ಕಿಲ್ಲವೇ? ಇನ್ನು ನನ್ನ ಗಂಡ ರವಿಯೋ ಈ ಅರುವತ್ತರ ಸಮೀಪದಲ್ಲಿಯೂ ಬಿಜಿನೆಸ್ ಎಂದು ಯಾವಾಗಲೂ ಟೂರಿನ ಮೇಲೆಯೇ ಇರುತ್ತಾರೆ. ನಾನು, ಇತ್ತೀಚೆಗೆ ಶ್ರೀವತ್ಸ ಹಾಗೂ ಅವನ ಹೆಂಡತಿ ಎಂದರೆ ನನ್ನ ಸೊಸೆ ನಂದಿನಿ ಕೂಡ “ನೀವು ಇದುವರೆಗೂ ದುಡಿದದ್ದು ಸಾಕು. . ಈಗ ನಾವಿಬ್ಬರೂ ಗಳಿಸುತ್ತಿದ್ದೇವೆ. ನಿಮಗೂ ಏನೂ ಕಡಿಮೆಯಿಲ್ಲ. . ಮನೆ ಇದೆ, ಬ್ಯಾಂಕಿನಲ್ಲಿಯೂ ಅಷ್ಟೋ ಇಷ್ಟೋ ಡೆಪಾಜಿಟ್ಟೂ ಇದೆ. . ಹೇಗೋ ಆಗುತ್ತದೆ. ಯಾಕೆ ಇನ್ನೂ ದುಡಿಯುತ್ತೀರಿ” ಎಂದು ಕೇಳಿದರೂ ಅವರದು ಒಂದೇ ಉತ್ತರ-“ನನ್ನದು ಪೆನ್ಶನ್ ಇಲ್ಲದ ಕೆಲಸ. ಎಲ್ಲಿಯವರೆಗೂ ದುಡಿಯುತ್ತೇನೋ ಅಲ್ಲೀತನಕಾ ಗಳಿಕೆ. ನನ್ನ ಆರೋಗ್ಯ ಇನ್ನೂ ಗಟ್ಟಿಮುಟ್ಟಾಗಿದೆ. ಇನ್ನೂ ಒಂದಿಷ್ಟು ವರ್ಷ ದುಡಿಯಬಹುದು. ಆಮೇಲಂತೂ ಇದ್ದೇ ಇದೆಯಲ್ಲ. . ನಿಮ್ಮನ್ನು ಆಧರಿಸೋದು!” ಎಂದು! ಕೂಡಿಟ್ಟ ಹಣದ ಬಹುಪಾಲು ಸುಹಾಸಿನಿ ಹಾಗೂ ಶ್ರೀವತ್ಸನ ಶಿಕ್ಷಣ, ಸುಹಾಸಿನಿಯ ಮದುವೆ, ಅವಳ ಎರಡು ಬಾಣಂತನಗಳಿಗೆ ಖರ್ಚಾಗಿಹೋಗಿದೆ. ಒಂದು ಸಂತೋಷದ ವಿಷಯವೆಂದರೆ ಈ ಮನೆಯನ್ನು ಕಟ್ಟಲು ತೆಗೆದ ಸಾಲವು ಮುಗಿದಿದೆ. ಈ ಮನೆಯನ್ನು ಕಟ್ಟುವಾಗಲೂ ಹಳ್ಳಿಯಲ್ಲಿಯ ಹಳೆಯ ಮನೆಯನ್ನು ಮಾರಿ ಇನ್ನೊಂದಿಷ್ಟು ಸಾಲ ತೆಗೆದು ಕಟ್ಟಿಸಿದ್ದೆವು. ನನ್ನ ಮನಸ್ಸಿಗೆ ತಕ್ಕಂತೆಯೇ ರೂಪಿತಗೊಂಡ ನನ್ನ ಮನೆ. . ಈಗ ನನ್ನ ಸದ್ಯದ ಸಮಸ್ಯೆ ಎಂದರೆ ರವಿ ದೆಹಲಿಗೆ ಹೋಗಿದ್ದಾರೆ. ಬರುವುದು ಇನ್ನೂ ಹದಿನೈದು ದಿನಗಳಾಗುತ್ತದೆ. ಮಗಳ ಫೋನ್ ಬಂದಾಗಿನಿಂದ ನನ್ನ ಮನಸ್ಸು ಅತ್ಯಂತ ನಿರಾಶೆಯಲ್ಲಿದೆ. ನನ್ನ ಮನದ ತಳಮಳವನ್ನು ಯಾರೆದುರಿಗೂ ಹೇಳಲಾರದೆ, ನುಂಗಲಾರದೆ ಬಿಸಿ ತುಪ್ಪದಂತೆ ಗಂಟಲಲ್ಲಿಯೇ ಇಟ್ಟುಕೊಂಡು ಕುಳಿತಿದ್ದೇನೆ. ಅಡಿಗೆ ಮನೆಗೆ ಹೋಗಿ ಒಂದು ಕಪ್ ಸ್ಟ್ರಾಂಗ್ ಕಾಫಿಯನ್ನು ಮಾಡಿಕೊಂಡು ಕುಡಿದರಾದರೂ ನನ್ನ ಮನಸ್ಸು ಶಾಂತವಾದೀತೊ ಎಂದುಕೊಂಡೆ. ಅದೂ ಫಲಿಸಲಿಲ್ಲ.
ಬೆಳಿಗ್ಗೆ ಬೇಗ ನನಗೆ ಎಚ್ಚರವಾಗುತ್ತದೆ. ಹೀಗಾಗಿ ಬಿಸಿನೀರನ್ನು ಕಾಸಿ ಒಂದು ದೊಡ್ಡ ಲೋಟ ನೀರು ಕುಡಿದು ಫಿಲ್ಟರಿಗೆ ಕಾಫಿಯನ್ನು ಹಾಕಿಟ್ಟು ಬಾಗಿಲಿನ ಕಸ ತೆಗೆದು ನೀರು ಹೊಡೆದು ರಂಗೋಲಿ ಹಾಕಿ ಒಳಗೆ ಬರುವಷ್ಟರಲ್ಲಿ ನಂದಿನಿ ಎದ್ದು ಕಾಫಿ ತಯಾರಿಸಿರುತ್ತಾಳೆ. ಎಲ್ಲರೂ ಜೊತೆಗೆ ಕುಳಿತು ಕಾಫಿ ಕುಡಿದ ನಂತರ ಅವರಿಬ್ಬರೂ ಸ್ನಾನಕ್ಕೆ ಹೋಗುತ್ತಾರೆ. ರವಿ ಊರಲ್ಲಿ ಇದ್ದರೆ ಕೂಡ ಬೆಳಗ್ಗೆಯ ಹೊತ್ತು ಏನೇನೋ ಫೋನ ಕಾಲ್ಗಳು. ಅವರು ಹಿಗೆಯೇ ಯಾವಾಗಲೂ ತಮ್ಮ ಕೆಲಸದಲ್ಲಿ ಮಗ್ನರಾಗಿರುತ್ತಾರೆ. ಏನೂ ಇಲ್ಲವಾದರೆ ನನಗೆ ಅಡಿಗೆಮನೆಯಲ್ಲಿ ಸಹಾಯ ಮಾಡುತ್ತಾರೆ. ನಾನು ಬೆಳಗಿನ ತಿಂಡಿ ಸಿದ್ಧಪಡಿಸಿ ಅವರಿಬ್ಬರಿಗೂ ಮೊಸರನ್ನವೋ, ಚಿತ್ರಾನ್ನವೋ, ಮತ್ತೇನನ್ನೋ ಮಾಡಿ ಡಬ್ಬಿಯಲ್ಲಿ ತುಂಬಿ ಇರಿಸಿದರೆ ನನ್ನ ಕೆಲಸ ಮುಗಿಯಿತು. ಇಂದು ಮುಂಜಾನೆ ಎಂದಿನಂತೆ ತಿಂಡಿ, ಡಬ್ಬಿ ಎಂದು ಎಲ್ಲ ಕೆಲಸ ಮುಗಿಸಿ, ಅವರಿಬ್ಬರೂ ಕ್ಲಿನಿಕ್ಕಿಗೆ ಹೋದಮೇಲೆ ಸುಹಾಸಿನಿಗೆ ಫೋನ್ ಮಾಡಿದ್ದೆ. ಪ್ರತಿದಿನವೂ ಅವಳೊಂದಿಗೆ ಕೆಲವು ಸಮಯ ವಾಟ್ಸಾಪ್ನಲ್ಲಿ ವಿಡಿಯೋ ಕಾಲ್ ಮಾಡಿದನಂತರವೇ ಮುಂದಿನ ಕೆಲಸ. ಅಷ್ಡರಲ್ಲಿ ಮನೆಕೆಲಸದ ಸೀತಾ ಬಂದಿರುತ್ತಾಳೆ. ಅವಳು ನನ್ನೊಂದಿಗೆ ಚಹಾ ಕುಡಿದೇ ಮನೆಗೆಲಸವನ್ನು ಪ್ರಾರಂಭಿಸುತ್ತಾಳೆ. ಅಡಿಗೆಮನೆಯನ್ನು ಸ್ವಚ್ಛಗೊಳಿಸಿ, ಪಾತ್ರೆಗಳನ್ನು ತೊಳೆದು, ಬಟ್ಟೆಗಳನ್ನು ವಾಶಿಂಗ್ ಮಶಿನ್ನಿಗೆ ಹಾಕಿ ಚಪಾತಿಗೆ ಹಿಟ್ಟನ್ನು ಕಲಿಸಿಟ್ಟು ಕಾಯಿಪಲ್ಯ ಹೆಚ್ಚಿಕೊಂಡು. . ಹೀಗೆ ಆಕೆ ತನ್ನ ಕೆಲಸದಲ್ಲಿ ಬಿಜಿಯಾಗುತ್ತಾಳೆ. ನಾವಿಬ್ಬರೂ ಕೆಲಹೊತ್ತು ಏನೇನೋ ಹರಟೆಯನ್ನು ಹೊಡೆದಾದನಂತರ ಅವಳಷ್ಟಕ್ಕೆ ಅವಳನ್ನು ಬಿಟ್ಟು ನಾನು ಸ್ನಾನ, ಪೂಜೆ ಎಂದು ಬಿಜಿಯಾಗಿಬಿಡುತ್ತೇನೆ.
ಆದರೆ ಇಂದು ಈ ಎಲ್ಲ ವಿಧಿಗಳು ಮುಗಿದರೂ ಮತ್ತೆ ಮತ್ತೆ ಸುಹಾಸಿನಿಯ ಮಾತೇ ನೆನಪಾಗುತ್ತಲಿದ್ದವು. ತಮ್ಮ ನಾದಿನಿಯ ಮದುವೆಯ ಅದ್ಧೂರಿ ತಯಾರಿಯ ಬಗ್ಗೆ ಹೇಳಿದ್ದಳು. ನಂತರ ಮೆಲ್ಲನೆ, “ಅಮ್ಮಾ, ನಮ್ಮ ನಾದಿನಿಯ ಮದುವಿ ಅದ. . ನನಗ ಹಾಕ್ಕೋಳಿಕ್ಕೆ ಹೊಸಾ ತರದ ಆಭರಣಾನ ಇಲ್ಲ. ಅವೇ ಬಳೀ. . ಅವೇ ಸರಾ, ನೆಕಲೇಸು. . ನಮ್ಮ ನೆಗೆಣ್ಣಿ ತವರಮನಿಯವರು ಅಕೀಗೆ ಬ್ಯಾರೆ ಬ್ಯಾರೆ ತರದ ಆಭರಣಾ ಕೊಡಿಸಿಕೋತನ ಇರತಾರ. ಒಬ್ಬಾಕೇ ಮಗಳು! ಪುಣ್ಯವಂತಿ!” ಎಂದೆಲ್ಲ ಪೀಠಿಕೆ ಹಾಕಿ ಮುಂದೆ ನನ್ನ ಡೈಮಂಡ್ ಸೆಟ್ಟನ್ನು ಕೇಳಿದ್ದಳು. . ನಾನು ಏನೂ ಉತ್ತರಿಸದೆ ಇದ್ದಾಗ ಅವಳ ಹೊಟ್ಟೆಯೊಳಗಿನ ಎಷ್ಟೋ ದಿನಗಳ ವರೆಗೂ ಅಡಗಿಸಿಟ್ಟುಕೊಂಡ ಮಾತುಗಳು ಹೊರಬಿದ್ದಿದ್ದವು.
“ನಿನಗ ಯಾವಾಗಲೂ ಶ್ರೀವತ್ಸನ ಮ್ಯಾಲೇ ಹೆಚ್ಚು ಪ್ರೀತಿ. . ಅಂವಗ ಮೆಡಿಕಲ್ ಕಲಿಸಿದ್ರಿ. . ಮತ್ತ ಮ್ಯಾಲೆ ಸ್ಪೆಶಲೈಜೇಶನ್ನೂ ಮಾಡಿಸಿದ್ರಿ. ನನಗಾದ್ರ ನಾಲ್ಕು ವರ್ಷದ ಇಂಜಿನಿಯರಿಂಗು. . ನನಗ ಇದ್ದೂರಾಗನ ನೌಕರಿ ಹಿಡೀ ಅಂತ ವರಾತ ಹಚ್ಚಿದ್ರಿ. ಅಂವಾ ಮದರಾಸಿನ್ಯಾಗ ಇದ್ದು ಕಲತಾ. . ನನ್ನ ಮದಿವೀಗೂ ಗಡಿಬಿಡೀ ಮಾಡಿದ್ರಿ. ಸಿಕ್ಕಂವಗ ಕೊಟ್ಟು ಕೈತೊಳಕೊಂಡ್ರಿ. ಹಂಗಂತ ನನ್ನ ಗಂಡಾ ಕೆಟ್ಟ ಅಂತ ನಾ ಏನ ಹೇಳಂಗಿಲ್ಲಾ. ಆದರೂ ಈ ಕೂಡುಕುಟುಂಬಾ. . ಇವರ ಶ್ರೀಮಂತಿಕೀ ಜಬರು. . ಅತ್ತಿಯಂತೂ ಯಾವಾಗಲೂ ತನ್ನ ಬಳಗದವರ ಎದುರು ‘ನಮ್ಮ ಸುಹಾಸಿನಿ ತವರಿನವರು ಅಂಥಾದೇನು ದೊಡ್ಡ ಶ್ರೀಮಂತರಲ್ಲಾ. . ಆದ್ರೂ ಹತ್ತು ತೊಲೀ ಬಂಗಾರ ಹಾಕಿದ್ರು. . ಅದೂ ಅವರ ಯೋಗ್ಯತಾಕ್ಕ ಹೆಚ್ಚಂತನ ಅನಬೇಕು. ನಾವೂ ನಮ್ಮ ಸುಮೀತ ಒಪ್ಪ್ಯಾನ ಅಂದಮ್ಯಾಲೆ ಮುಗೀತು ಅಂತ ಅವರಿಗೆ ‘ಅದು ಕೊಡ್ರಿ. . . ಇದು ಕೊಡ್ರಿ’ ಅಂತ ಒತ್ತಾಯನೂ ಮಾಡಿಲ್ಲಾ. . ‘ ಅಂತ ಯಾವಾಗಲೂ ತಮ್ಮ ದೊಡ್ಡಿಸ್ತಿಕಿ ಕೊಚಿಗೋತನ ಇರತಾರ. ಹಂಗಂತೇನು ಅವರು ಮನ್ಯಾಗ. ಹೊರಗ ಯಾವುದೇ ಫಂಕ್ಶನ್ ಇದ್ರೂ ನಮ್ಮ ಹತ್ತಿರ ಇಲ್ಲಂತ ಹೇಳಿ ಎಂದೂ ತಮ್ಮ ಕಪಾಟು ತಗದು ಯಾವ ಆಭರಣಾನೂ ಕೊಟ್ಟಿಲ್ಲಾ. . ತಾವು ಸಾಯೋತನಕಾ ಅವನ್ನ ಯಾರಿಗೂ ಕೊಡಂಗಿಲ್ಲಂತ. . ! ನನ್ನ ಗಂಡನ್ನ ಕೇಳಿದ್ರ ಅಂವಾ ಅವ್ವನ ಮಗಾ. . ಅವಾ ಅವ್ವನ ಎದುರು ಇದೆಲ್ಲದರ ಸಲುವಾಗಿ ಜಗಳ ಮಾಡಾಂವಾ ಅಲ್ಲಾ. ಅಷ್ಟೇ ಅಲ್ಲಾ, ತಾನು ಗಳಿಸಿದ್ದು ಉಳಿಸಿದ್ದು ಎಲ್ಲಾ ಅವ್ವನ ಕೈಯಾಗನ. ಇಂವಾ ಒಬ್ಬಾಂವನ ಅಲ್ಲಾ, ಆ ನನ್ನ ಮೈದುನಾ, ಮಾವಾ ಎಲ್ಲಾರೂ ಅತ್ತೀ ಕಣ್ಣರಿಕೀಯೊಳಗನ ಇದ್ದಾರ. ಹಂಗಂತ ಅತ್ತಿ ದುಂದು ಮಾಡತಾರಂತೇನ ನಾ ಹೇಳಂಗಿಲ್ಲಾ. ಪ್ರತಿ ದೀಪಾವಳೀ ಹಬ್ಬಕ್ಕ ಮನ್ಯಾಗಿನ ನಾಲ್ಕೂ ಮಂದೀ ಹೆಣಮಕ್ಳಿಗೂ ಎರಡೆರಡು ತೊಲೀ ಭಂಗಾರ ಕೊಡಸಿರತಾರ. . ಪಂಚಮಿ ಹಬ್ಬಕ್ಕ ಕಂಚಿ ಸೀರಿ. . ನಮ್ಮ ಮಕ್ಕಳಿಗೂ ಬಂಗಾರದ ಚೈನು ಹಿಂಗ ಏನೇನಾರ ಗಿಫ್ಟ್ ಕೊಡತಾರ. ಆದರ ಗಂಡಾ ಅಂತ ಅನ್ನಿಸಿಕೊಂಡಾವ ಹೆಂಡತಿಗೆ ಏನ ಬೇಕಂತ ತಿಳಕೊಂಡು ಸರ್ಪ್ರೈಜ್ ಗಿಫ್ಟ್ ಕೊಡೋದು ಎಲ್ಲಾ ಹೆಣ್ಣೂ ಬಯಸತಾಳನ್ನೋದು ನಿನಗೂ ಗೊತ್ತದ. ಅಲ್ಲದ ನಾನೂ ಇವರ ಬಿಜಿನೆಸ್ದಾಗ ಕೈಜೋಡಸತೇನಿ.
ಅಕೌಂಟ್ಸ್ ಎಲ್ಲಾ ನಂದ. . ಆದರೂ ನನಗ ಏನು ಬೇಕೋ ಅದನ್ನ ತೊಗೊಳ್ಳೊ ಸ್ವಾತಂತ್ರಾ ಇಲ್ಲ. . ‘ನಿನಗ ಏನ ಬೇಕೋ ಅದನೆಲ್ಲಾ ಅಮ್ಮ ಕೊಡಿಸೇಕೊಡಿಸಿರತಾಳ. . ಕೈಯಾಗ ರೊಕ್ಕಾ ಯಾತಕ್ಕ ಬೇಕು’ ಅಂತ ಸುಮೀತನ ವಾದಾ. . ನಾ ಇನ್ನೊಂದೆರಡು ವರ್ಷ ನೌಕರಿ ಮಾಡತೇನಂದ್ರ ಕೇಳಲಿಲ್ಲಾ, ಮದುವೀ ಮಾಡಿದ್ರಿ. . ಹೋಗಲಿ ಬಿಡು. . ಅದು ನಮ್ಮ ನಮ್ಮ ಹಣೇಬರಹಾ. . ಪಪ್ಪಾ ನಿನಗ ಯಾವಾಗಲೂ ಸರ್ಪ್ರೈಜ್ ಗಿಫ್ಟ್ ತಂದುಕೊಡತಿದ್ರು. . ನಮಗೂ ಏನು ಕಡಿಮೀ ಮಾಡಿದ್ದಿಲ್ಲಾ. . ಈಗ ನಾ ಇದನೆಲ್ಲಾ ಯಾಕ ಹೇಳಲಿಕ್ಕತ್ತೇನಿ ಅಂತಂದ್ರ ಮುಂದಿನ ತಿಂಗಳದಾಗ ನಮ್ಮ ನಾದಿನಿ ಶುಭಾನ ಮದುವಿ ಬಂದದ. ನನ್ನ ನೆಗೆಣ್ಣಿಗೆ ಅಕಿ ತವರಿನವ್ರು ಕೊಟ್ಟಿರೋ ಆಭರಣ ಅವ. ಅತ್ತಿ ಕಡೇನೂ ಅವ. . ಅವರೆಲ್ಲಾ ತಮ್ಮ ತಮ್ಮ ಭಾರಿ ಭಾರಿ ಆಭರಣಾ ಹಾಕ್ಕೋತಾರ. ನನ್ನ ಕಡೆ ಅವೇ ಹಳೇ ಆಭರಣ. ಅದಕ್ಕ ನಿನ್ನವು ಎರಡೂ ಡೈಮಂಡ್ ಬಳೀ, ಡೈಮಂಡ್ ನೆಕ್ಲೇಸಿನ ಸೆಟ್ಟು, ಬಾಜುಬಂದು ಕೊಡಲಾ. . ಅವು ಅಜ್ಜೀವು. ಎಂದಿದ್ದರೂ ನನಗೇ ಬರೋವು. . ನಾ ಏನು ಅವನ್ನ ಅತ್ತಲಾಗನ ಕೊಡು ಅಂತ ಹೇಳಲಿಕ್ಕತ್ತಿಲ್ಲಾ. . ನಾ ತಿರುಗಿ ಕೊಡತೇನಿ. . ನಾ ಅವನ್ನ ಹಾಕ್ಕೊಂಡರ ನನ್ನದೂ ಒಂದಿಷ್ಟು ಮೂಗು ಮ್ಯಾಲೆ ಆಗತದ ಎಲ್ಲಾರೊಳಗ ಅಂತಷ್ಟೇ. . ” ಎಂದಿದ್ದಳು. ನಾನು ಸುಮ್ಮನಿದ್ದೆ. . ಈ ಸುಹಾ. . ಪ್ರತಿ ವರ್ಷಾ ನನ್ನವು ಸಣ್ಣ ಪುಟ್ಟಾ ಸಾಮಾನು ಹಾಕ್ಕೊಂಡು ಹೋದ್ಲಂದ್ರ ತಿರುಗಿ ಕೊಡೋ ಮಾತೇ ಇಲ್ಲಾ. ನನಗೂ ಅದು ದೊಡ್ಡ ವಿಚಾರ ಅಂತ ಅನಿಸಿರಲಿಲ್ಲಾ. . ಆದರ ಈಗ ಅಕಿ ಕೇಳಿರೋದು ಮನೆತನದ ಆನುವಂಶಿಕ ಆಭರಣ. . ನನ್ನ ಅತ್ತೆ ನನಗ ಕೊಟ್ಟದ್ದು. ಅವರ ಅತ್ತೆ ಅವರಿಗೆ ಕೊಟ್ಟದ್ದಂತೆ. . ಆದರೂ ಅವನ್ನ ಈಗಲೇ ಸುಹಾಳ ಕೈಗೆ ಹಾಕೋ ಮನಸ್ಸು ನನಗಿರಲಿಲ್ಲಾ. ಸುಹಾಸಿನಿಯ ಅತ್ತೆಯ ಬಗ್ಗೆ ನನಗೆ ಸಿಟ್ಟೇನೂ ಬಂದಿರಲಿಲ್ಲ. ‘ತಾನು ಇಳಿ ವಯಸ್ಸಿನವಳು. ತನಗೇಕೆ ಈ ವಸ್ತ ಒಡವೆಯ ಹುಚ್ಚು? ಸೊಸೆಯರದು ಇಡುತೊಡುವ ವಯಸ್ಸು. ಅವರಿಗೆ ಕೊಟ್ಟರಾಗದೇ ಎಂದೆನ್ನಿಸಿತ್ತು. . ನಾವಾದರೋ ಮಧ್ಯಮವರ್ಗದವರು. . ನಮ್ಮ ಹಾಸಿಗೆಯೂ ಸಣ್ಣದು. ಇವರಿಗೇನು ಧಾಡಿ. . ‘ ಇದೇ ರೀತಿಯ ವಿಚಾರಲಹರಿಯಲ್ಲಿ ಇರುವಾಗಲೇ ಕರೆಗಂಟೆ ಬಾರಿಸಿತ್ತು.
ನನಗೆ ಈಗ ಯಾರನ್ನೂ ಮಾತಾಡಿಸುವ ಮೂಡಿರಲಿಲ್ಲ. ಹೋಗಿ ಬಾಗಿಲು ತೆರೆದಿದ್ದೆ. ಬಾಗಿಲಲ್ಲಿ ನನ್ನ ಆಪ್ತ ಗೆಳತಿ ಸ್ನೇಹಾ ನಿಂತಿದ್ದಳು. ಅವಳನ್ನು ನೋಡಿದ ನನಗೆ ನಿಜವಾಗಲೂ ಆನಂದವಾಗಿತ್ತು. ಅವಳನ್ನು ಆದರದಿಂದ ಒಳಗೆ ಕರೆದೊಯ್ದಿದ್ದೆ. . ಚಹಾ, ಬಿಸ್ಕಿಟ್ಟುಗಳ ಸಮಾರಾಧನೆಯಾಯಿತು. ಉಭಯಕುಶಲೋಪರಿಯಾಯಿತು. ನನ್ನ ಮುಖವು ಮ್ಲಾನವಾಗಿದ್ದುದನ್ನು ಗಮನಿಸಿದ್ದ ಆಕೆ ಕಾರಣ ಕೇಳಿದ್ದಳು. . ನನಗೆ ಈಗ ನನ್ನ ಮನದ ಎಲ್ಲಾ ಚಿಂತೆಗಳೂ ಹೊರಹೋಗುವಂಥ ಒಂದು ಔಟ್ಲೆಟ್ಟಿನ ಅಗತ್ಯವಿತ್ತು. . ಮಗಳನ್ನು ಸೊಸೆಯ ಎದುರು ಬೈಯುವ ಹಾಗಿಲ್ಲ. ಗಂಡನಿಗೆ ಫೋನಾಯಿಸಿ ಹೇಳಬೇಕೆಂದರೆ ಅವರು ಈಗ ಮೀಟಿಂಗುಗಳಲ್ಲಿ ಬಿಜಿಯಾಗಿರುತ್ತಾರೆ ಎಂದೆಲ್ಲ ಚಿಂತಿಸಿದ್ದ ನಾನು ಸ್ನೇಹಾಳ ಎದುರು ಎಲ್ಲವನ್ನೂ ಹೇಳಿದ್ದೆ.
ಎಲ್ಲವನ್ನೂ ಕೇಳಿದ್ದ ಸ್ನೇಹಾ ನಕ್ಕು, “ಅದಕ್ಕ ಯಾಕಿಷ್ಟು ಚಿಂತೀ? ಮಗಳೂ ನಿನ್ನಾಕಿ, ಆಭರಣಾನೂ ನಿನ್ನವು. . ಕೊಟ್ಟುಬಿಡಲಾ. . ” ಎಂದಿದ್ದಳು.
ನಾನು, “ಅದರಾಗ ಒಂದು ಸಮಸ್ಯಾ ಅದ. ಅವು ನಮ್ಮ ವಂಶಾನುಗತವಾಗಿ ಬಂದ ಆಭರಣಾ. ನನ್ನ ಅತ್ತೀವು. ಅವರಿಗೆ ಹೆಣ್ಣು ಮಗಳಿದ್ದರೂ ಅಕೀಗೆ ಕೊಟ್ಟಿಲ್ಲಾ ಅವ್ರು. . ಅಮ್ಮ ಕೊಟ್ಟದ್ದೆಲ್ಲಾ ನನ್ನ ಸೊಸೀಗೆ ಕೊಡಬೇಕು ಅಂತ ರವಿ ಯಾವಾಗಲೂ ಹೇಳತಿರತಾರ. . ” ಎಂದಿದ್ದೆ. ಸ್ನೇಹಾಳಿಗೆ ಇದರಲ್ಲಿ ಯಾವ ಸಮಸ್ಯೆಯನ್ನು ಹುಟ್ಟು ಹಾಕಿದ್ದೇನೆ ನಾನು ಎಂಬುದು ತಿಳಿಯಲಾಗದೆ, “ಮಗಳು ನಿನ್ನ ಕಡಿಂದ ತನಗೇ ಕೊಡು ಅಂತೇನೂ ಕೇಳಿಲ್ಲಲಾ. . ಕೆಲವೇ ದಿನಗಳ ಮಟ್ಟಿಗೆ ಹಾಕ್ಕೋಳಿಕ್ಕೆ ಕೊಡು ಅಂತಾಳ. . ನಂತರ ಸೊಸೀಗೆ ಹೋಗೋವು ಅಂತ ಅಕೀಗೆ ಹೇಳಿಬಿಡು. . ” ಎಂದಿದ್ದಳು.
“ಹಂಗೂ ಹೇಳಲಿಕ್ಕೆ ಆಗಂಗಿಲ್ಲಾ. ಅಣ್ಣಾ ತಂಗೀ ನಡುವ ಜಗಳಾ ಹಚ್ಚಿದಾಂಗ ಆಗತದ. . ಹಂಗೂ ಶ್ರೀವತ್ಸಂದು ಮದುವಿ ಆಗಿ ಭಾಳ ದಿನಾನೂ ಆಗಿಲ್ಲಾ. ಸೊಸೀ ಸ್ವಭಾವಾ ಎಂಥಾದು ಅಂತ ಸರಿಯಾಗಿ ತಿಳದೂ ಇಲ್ಲಾ. ಈಗಿಂದನ ಎಲ್ಲಾ ಸೊಸೀಗೆ ಅಂತ ಹಾಡಲಿಕ್ಕತ್ತಿದರ ಅಕೀ ಅವನೆಲ್ಲಾ ಕೊಟ್ಟಮ್ಯಾಲೆ ತಿರುಗಿಬಿದ್ದರ? ಅಕಿನ್ನ ಹೆಂಗ ನಂಬೋದು?”
“ಅಲ್ಲಾ, ನೀ ನಿನ್ನ ಮಗಳನೂ ನಂಬಂಗಿಲ್ಲಾ, ಇಕಾಡೆ ಸೊಸಿನ್ನೂ ನಂಬಂಗಿಲ್ಲಾ. . ಅದೂ ಒಂಥರಾ ಸರೀನ ಅನ್ನು. ಈಗಿನ ಕಾಲದಾಗ ಯಾರನೂ ನಂಬಲಿಕ್ಕಾಗಂಗಿಲ್ಲಾ. ಅಕೀ ಮಗಳರೆ ಇರಲೀ, ಸೊಸೀನರೆ ಇರಲಿ. . ಕಾಲಾನ ಅಂಥಾದು ಬಂದದ. ನಾನಾ ಥರದ ಉದಾಹರಣೀನೂ ಕೇಳಿರತೇವಿ. ನಮ್ಮ ವಯಸ್ಸು ಅಡ್ನಾಡಿ ಅದ. ಇಕಡೆ ಮುದುಕರೂ ಅಲ್ಲಾ, ಇಕಡೆ ಹರೇದವರೂ ಅಲ್ಲಾ. . . ಇನ್ನೂ ಇಪ್ಪತ್ತು ವರ್ಷರೆ ಇರತೇವಿ ಅಂತ ಲೆಕ್ಕಾ ಹಾಕಿದ್ರೂ ಮುಂದ ಎಂಥೆಂಥಾ ದಿನಾ ಎದುರಿಸಬೇಕಾಗತದೋ ಗೊತ್ತಿಲ್ಲಾ. ಜಡ್ಡು-ಜಾಪತ್ತು, ಮುಪ್ಪು ಎಲ್ಲಾ ಬಂದುವಂದ್ರ. . ಹಂಗಾದ್ರ ನೀ ಈಗಿಂದನ ಯಾರಿಗೂ ಏನೂ ಕೊಡಲಿಕ್ಕೆ ಹೋಗಬ್ಯಾಡಾ. . ಕೊನಿಗಾಲದಾಗ ಯಾರು ನಿನಗ ಮಾಡತಾರಲಾ ಅವ್ರಿಗೆ ಕೊಡಲಿಕ್ಕೆ ಬರತದ. ಅವರ ಸ್ವಭಾವಾ ನೋಡಿ ನಿರ್ಧಾರಾ ಮಾಡಲಿಕ್ಕೆ ಬರತದ. ಬೇಕಾದರ ಅವರಿಗೆ ತಿಳೀಲಾರಧಂಗ ವಿಲ್ ಮಾಡಿಡು. . “
“ಆದರೂ ಸುಹಾಸಿನಿ ಈಗ ಈ ವಜ್ರದ ಸೆಟ್ಟು ಕಡಾ ಅಂತ ಕೇಳಲಿಕ್ಕತ್ತಾಳ. ಮದುವಿ ಮನಿಯೊಳಗ ಅಕೀದೂ ಮರ್ಯಾದಿ ಹೆಚ್ಚಾಗತದ ಅಂತ ಅಕೀ ಕಲ್ಪನಾ. . ಕೊಟ್ಟಮ್ಯಾಲ ಅವನ್ನ ಅಕಿ ತಿರುಗಿ ಕೊಡಲಿಲ್ಲಾಂತಂದ್ರ? ಕೊಡಂಗಿಲ್ಲಾಂತ ಮಾರಿ ಹರಕೋಳಿಕ್ಕೂ ಬರಂಗಿಲ್ಲಾ. . ಫಜೀತಿ ಈಗ. . ಅಕೀಗೆ ಮೊದಲಿಂದನೂ ನನ್ನ ಈ ವಜ್ರದ ಸೆಟ್ಟು ಅಂದ್ರ ಭಾಳ ಪ್ರೀತಿ. . “
“ಅಲ್ಲಾ, ಅಕೀ ಮದುವಿ ಆಗಿ ಇಷ್ಟು ವರ್ಷ ಆಗೇದ. ಅಕೀ ಮರ್ಯಾದಿ ಇಂಥಾ ಫಾಲತು ಆಭರಣದಿಂದ ಹೆಚ್ಚು ಆಗತದೇನು ಇನ್ನೂ. . ಅತ್ತೀ ಮನೀ ಮಂದಿಗೆ ಅಕೀದು ಬೆಲೀ ಏನಂತ ಇನ್ನೂ ಗೊತ್ತಾಗಬೇಕಾಗೇದ ಏನೂ? ಕಲತಾಕಿ ಇದಾಳ. . ನೌಕರೀನೂ ಮಾಡಿದಾಕಿ. ಈಗ ಅತ್ತಿಮನಿಯೊಳಗ ಬಿಜಿನೆಸ್ಸೂ ನೋಡಿಕೋತಾಳ. . ಇದೆಲ್ಲಾ ಅಕಿಗೆ ಗೌರವ ಕೊಡೋ ವಿಷಯಾ ಅಲ್ಲೇನು? ಇದು ಹಳೇ ಕಾಲ ಅದ ಏನು? ಈಗ ಮೂವತ್ತು ವರ್ಷದ ಹಿಂದ ಇಂಥಾವೆಲ್ಲಾ ನಾವು ಅನುಭವಿಸೇವಿ ಅಂದ್ರ ಛಂದ ಕಾಣತದ. . ನಿನ್ನ ಮಗಳು ಸಣ್ಣಾಕಿದ್ದಾಗಿಂದ ಭಾಳ ಪಕ್ಕಾನ ಇದ್ದಾಳಂತ ನೀನೂ ಹೇಳತಿದ್ದಿ ರಗಡ ಸರತೆ. ಇದು ಅಕೀದನ ಏನೋ ಮಸಲತ್ತು ಅಂತನಸತದ ನನಗ. . “
“ಹೂಂ. . ನಿನಗ ಗೊತ್ತಿರಲಾರದ್ದು ಏನದ? ಈ ಮಾತು ನಾ ರವಿ ಮುಂದೂ ಹೇಳಿಲ್ಲಾ, ಈ ಸುಹಾಸಿನಿಗೆ ನಾ ಎಷ್ಟು ಮಾಡತೇನಿ ನನಗನ ಗೊತ್ತು. ಆದರೂ ಈ ಹುಡುಗಿಗೆ ತೃಪ್ತಿ ಅನ್ನೋದನ ಇಲ್ಲಾ. . ನಾವು ಏನು ತಂದುಕೊಟ್ಟರೂ ಅಕಿ ಮೊದಲ ಅದರ ರೇಟು ನೋಡತಾಳ. . ಇದರಕಿಂತಾ ಇನ್ನೊಂದಿಷ್ಟು ಹಾಕಿದ್ದರ ಅಂಥಾದು ಬರತಿತ್ತು, ಇಂಥಾದು ಬರತಿತ್ತು ಅಂತ ಗೊಣಗತಾಳ. ನಮ್ಮ ಟೇಸ್ಟು ಅಗದೀ ಮಿಡಲ್ ಕ್ಲಾಸಿಂದ ಇನ್ನೂ ಹೊರಗ ಬಂದಿಲ್ಲಾ ಅಂತ ಟಾಂಟ್ ಮಾಡತಾಳ. . ಇಕೀ ಈಗ ದೊಡ್ಡ ಶ್ರೀಮಂತರ ಮನಿಗೆ ಸೊಸಿ ಆಗಿ ಹೋದರರೆ ಏನಾತು? ಹುಟ್ಟಿದ್ದು ನಮ್ಮಂಥಾ ಮಿಡಲ್ ಕ್ಲಾಸ್ ಮನ್ಯಾಗನ ಅಲ್ಲೇನು? ನಂದೂ ಇದರಾಗ ತಪ್ಪ ಅದ. ಸುಹಾಸಿನಿ ಮದುವಿಗೆ ಇಷ್ಟು ದುಂದು ಮಾಡೋದು ಬ್ಯಾಡಾ ಅಂತ ನಮ್ಮ ಅತ್ತಿ ಹೇಳಿದ್ರೂ ನಾ ಕೇಳಲಿಲ್ಲಾ. ರವಿ ಸೈತ ‘ಇಲ್ಲೀತನಕಾ ನಾವು ಶ್ರೀವತ್ಸಗ, ಸುಹಾಸಿನಿಗೆ ಒಂದೇ ತರಾ ಖರ್ಚು ಮಾಡೇವಿ. . ಶಿಕ್ಷಣ ಇರಲಿ, ಬಟ್ಟಿ ಬರಿ ಅಂತನ ಇರಲಿ, ಹಬ್ಬಾ ಹುಣ್ಣಿಮಿಗೆ ಉಡುಗೊರಿ ಅಂತನ ಇರಲಿ. . ಮುಂದೂ ನಮ್ಮ ಹತ್ತರ ಇರೋದನ್ನ ಎರಡು ಭಾಗ ಮಾಡೇ ಕೊಡತೇವಿ. ಹಂಗೂ ನಾವೇನು ಅಂಥಾ ಆಸ್ತಿವಂತರಲ್ಲಾ. ಇರೋದು ಇದೊಂದ ಮನಿ. ಒಂದಿಷ್ಟು ರೊಕ್ಕದ. . ಬಂಗಾರದ. . ಇಂಥಾ ದುಂದಿಗೆ ಹೋಗಬ್ಯಾಡಾ. . ಬೀಗರೂ ಶ್ರೀಮಂತರಾದ್ರೂ ಅಂಥಾ ಆಶಬುರುಕರಲ್ಲಾ. ನಮ್ಮ ಹಾಸಿಗಿ ಇದ್ದಷ್ಟು ಕಾಲು ಚಾಚಬೇಕು’ ಅಂತ ಹೇಳಿದ್ರು. ನನಗ ಆ ಬೀಗರಿಗೆ ಸರಿದೂಗೋವಂಗ ಮದುವಿ ಮಾಡೋ ಹುಕಿ. . ಸಿನಿಮಾ, ಟಿವಿಗಳೊಳಗಿನ ಮದುವೀ ನೋಡಿ ತನಗೂ ಅಂಥಾದ್ದ ಗ್ರ್ಯಾಂಡ್ ಮದುವಿ ಬೇಕೂ ಅಂತ ಹಟಾ ಹಿಡದ್ಲು. .
ಅಲ್ಲದ ನನಗ ಮೊದಲಿಂದನೂ ಶ್ರೀವತ್ಸನಕಿಂತಾ ಸುಹಾಸಿನಿ ಮ್ಯಾಲ ಒಂದಿಷ್ಟು ಹೆಚ್ಚಿನ ಪ್ರೀತಿನ ಅನ್ನು. ಅಂವಾ ಮನೀ ಮಗಾ. ಅಕೀ ನಾಳೆ ಮದುವಿ ಮಾಡ್ಕೊಂಡು ಅತ್ತಿಮನಿಗೆ ಹೋಗುವಾಕಿ. ಅಕೀಗೆ ಎಂಥಾ ಮನಿ ಸಿಗತದೋ, ಮಂದಿ ಹೆಂಗಿರತಾರೋ ಅಂತನ್ನೋ ಕಾರಣಕ್ಕ ಅಕಿ ಬೇಡಿದ್ದೆಲ್ಲಾ ಕೊಡಸಿದ್ವಿ. . ಅಕಿ ಕೇಳಿದ್ದಕ್ಕ ಒಂದಿನಾನೂ ಇಲ್ಲಾಂತನಲಿಲ್ಲಾ. ಇದರ ಸಲುವಾಗಿ ನಮ್ಮ ಅತ್ತಿ ಕಡಿಂದನೂ ನಾ ಹತ್ತು ಸರತೆ ಬೈಸಿಕೊಂಡೇನಿ. . ನಮ್ಮ ಅವ್ವನೂ ಒಂದೆರಡ ಸರತೆ ನನ್ನ ಸುಹಾಗ ಅಚ್ಛಾ ಮಾಡೋದರ ಸಲುವಾಗಿ ಬೈದಾಗ ಅಕೀಗೆ, ‘ಅವ್ವಾ, ನಿನಗ ಮೂರು ಮಂದಿ ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು. . ನಮ್ಮನ್ನ ಅಚ್ಛಾ ಮಾಡಲಿಕ್ಕೆ ನಿನಗ ಪುರಸೊತ್ತರೆ ಎಲ್ಲಿಂದ ಸಿಗಬೇಕು? ಅದರಾಗ ನಾವು ಮೂರೂ ಮಂದಿ ಅಂದರಂತೂ ಕೊಟ್ಟ ಮನಿಗೆ ಹೋಗೋವು ಅಂತ ಒಂದಿಷ್ಟು ಅಸಡ್ಡೇನ ತೋರಸತಿದ್ದಿ. ಅಪ್ಪಾ ನಾ ಪಿಯುಸಿಯೊಳಗ ರ್ಯಾಂಕ್ ಬಂದಿದ್ದರೂ ನನ್ನ ಬಿಎಸ್ಸಿಗೆ ಹಚ್ಚಿದಾ. ನನಗ ಮೆಡಿಕಲ್ಕ ಸೀಟೂ ಸಿಕ್ಕಿತ್ತು, ಸಿಇಟಿಯೊಳಗ. . ಅದೂ ಇದ್ದೂರಾಗ. ಹೆಣ್ಣು ಹುಡಿಗೀ ಮ್ಯಾಲ ಖರ್ಚು ಮಾಡಿ ಕಲಿಸಿ ಏನ ಮಾಡೋದದ ಅಂತ ಅವನ ವಿಚಾರ. ಅಣ್ಣಗ, ಸಣ್ಣ ಅಣ್ಣಗ ಮೆಡಿಕಲ್ ಓದಿಸಿದ್ರಿ, ಅದೂ ಚಂದ್ರಣ್ಣಾ ಪೇಮೆಂಟ್ ಸೀಟೂ. . ಅದಕ್ಕ ನಿಂದೂ ಸಾಥ್. . ನಾ ಹಂಗ ಎಂದೂ ಮಾಡಂಗಿಲ್ಲಾ. . ‘ ಅಂತ ಅಕಿ ಮ್ಯಾಲ ಭಾಳ ದಿನದಿಂದ ಮನಸಿನ್ಯಾಗ ಕೂಡಿಟ್ಟುಕೊಂಡ ಎಲ್ಲಾ ಸಿಟ್ಟೂ ಕಾರಿಕೊಂಡೆ. ನಮ್ಮ ಅತ್ತಿಯಂತೂ ಇರೋ ಒಬ್ಬಾಕಿ ಮಗಳಿಗೆ ಎಂದೂ ರವಿಯಷ್ಟು ಮುದ್ದು ಮಾಡಿಲ್ಲಾ. ಹಂಗ ಕರ್ತವ್ಯ ಅಂತ ಏನ ಮಾಡೋದಿತ್ತು ಎಲ್ಲಾ ಮಾಡ್ಯಾರ. ನಾದಿನಿ ಏನರೆ ಇಚ್ಛಾ ಪಟ್ಟರೂ ಈ ಹೆಣ್ಣುಮಕ್ಕಳ ಆಶಾನ ಮುಗಿಯಂಗಿಲ್ಲಂತ ಕೊಂಕು ಮಾತಾಡೇ ಕೊಡತಿದ್ರು. . ಆದರ ನಾ ಹಂಗ ಎಂದೂ ಮಾತಾಡಿಲ್ಲಾ. ಸುಹಾನ ಬಾಣಂತನಾ, ಮಕ್ಕಳಿಗೆ ಉಡುಗೊರಿ ಅಂತ ಚೈನು, ಉಂಗುರಾ ಎಲ್ಲಾ ಕೊಟ್ಟೇನಿ. ಹೆಸರಿಡೋ ಮುಂದ ಅತ್ತಿಗೆ, ಅಕಿ ನೆಗೆಣ್ಣಿ, ನಾದಿನೇರಿಗೆ ಸೀರಿ ಎಲ್ಲಾ ಕೊಟ್ಟೇನಿ. ಆದರೂ ಅಕೀಗೆ ತೃಪ್ತಿ ಅನ್ನೋದನ ಇಲ್ಲಾ. . “
ನಾನು ನನ್ನ ಮನಸ್ಸಿನೊಳಗಿನ ಎಲ್ಲಾ ನೋವನ್ನೂ ಸ್ನೇಹಾಳ ಎದುರಿಗೆ ತೋಡಿಕೊಂಡಿದ್ದೆ. ಸ್ನೇಹಾ ನನ್ನ ಬೆನ್ನಮೇಲೆ ಕೈಯಾಡಿಸುತ್ತ “ಇದು ಎಲ್ಲಾರ ಮನಿ ಕಥೀನ ಅದ. . ತ್ರಾಸು ಮಾಡಿಕೋಬ್ಯಾಡಾ. . ಹೆಣ್ಣು ಮಕ್ಕಳು ಅಂದ್ರ ಯಾವಾಗಲೂ ಸೊಸೆಂದ್ರಿಗಿಂತಾ ಒಂದಿಷ್ಟು ಹೆಚಿಗೀನ. . ” ಎಂದಿದ್ದಳು. ಅದರ ಜೊತೆಗೇ “ನೀನು ಇಂಥಾ ತೋರಿಕೀ ಪ್ರೀತಿ ತೋರಸೋದರಾಗನ ನಿನ್ನ ಕರ್ತವ್ಯಾ ಮರತಬಿಟ್ಟಿ. ನಿನ್ನ ಗಂಡಾ, ನಿನ್ನ ಮಗಾ ಇವರೆಲ್ಲಾರ ಮ್ಯಾಲ ಸಾಲದ ಹೊರಿ ಹೊರಸಿದಿ. . ನಿನ್ನ ಮಗಾ ಏನೂ ಅನಲಿಲ್ಲೇನು?” ಎಂದೂ ಬೈದಿದ್ದಳು.
“ಅವನೂ ಹೇಳಿದಾ. . ಆದರ ನನಗ ಅಂವಾ ಇಷ್ಟು ದೊಡ್ಡ ಪಗಾರ ಇದ್ರೂ ಖರ್ಚು ಮಾಡಲಿಕ್ಕೆ ಹಿಂದ ಮುಂದ ನೋಡಲಿಕ್ಕತ್ತಾನ ಅಂತನಿಸಿತು. ‘ನಾಳೆ ನಿನ್ನ ಮದಿವ್ಯಾಗೂ ಹಿಂಗನ ಖರ್ಚು ಮಾಡತಾರ ಬೀಗರು’ ಅಂತ ಅವನ ಬಾಯಿ ಮುಚ್ಚಿಸಿದೆ. “
“ಹಂಗಾರ ನಿನ್ನ ಮಗನ ಮದುವೀನೂ ಅಗದೀ ಅದ್ಧೂರಿಯಿಂದನ ಆಗಿರಬೇಕಲಾ. . “
“ಹೂಂ ಮತ್ತ! ಇರಾಂವಾ ಒಬ್ಬಾಂವ ಮಗಾ. . ಅವನೂ ಮೆಡಿಕಲ್ ಓದಿದವಾ. ಆದರೂ ನಾವೇನು ಅವ್ರಿಗೆ ಒತ್ತಾಯ ಮಾಡಿಲ್ಲಾನ್ನು. ಅವರಾಗೇ ಖರ್ಚು ಮಾಡಿದ್ರು. ವರದಕ್ಷಿಣೀ ಅಂತ ನಾವು ಏನೂ ಬೇಡಿಲ್ಲಾ. . ತಮ್ಮ ಮಗಳಿಗೆ ಬಂಗಾರ ಹಾಕಿದ್ರು. . ಅಳಿಯಾಗ, ಮಗಳಿಗೆ ಬಟ್ಟಿ ಖರೀದಿ ಅವ್ರದ. ನಮಗೆಲ್ಲಾರಿಗೂ ಉಡುಗೊರೆ ಅಂತ ತೊಗೊಂಡ್ರು. ನಾವೂ ಅವ್ರೆಲ್ಲಾರಿಗೂ ಉಡುಗೊರಿ ಕೊಟ್ಟೇವಿ. . ನನಗ ಚೊಚ್ಚಲ ಗಂಡಸ ಮಗನ ನೇಮಾ ಬಿಡಸಿದ್ರು. ನಾಲ್ಕು ತೊಲಿವು ಕಂಗನ್ ಕೊಟ್ರು. . ಸುಹಾಗ ಕಳಸಗಿತ್ತಿ ಅಂತ ಒಂದು ಬ್ರೇಸ್ಲೆಟ್ ಕೊಟ್ರು. . “
“ಇದು ವರದಕ್ಷಿಣೀ ಅಲ್ಲೇನು? ಮತ್ತ ಒಂದಿಷ್ಟು ರೋಖನೂ ತೊಗೊಂಡಿರಬೇಕಲಾ. . ?”
“ಹೂಂ. . ನಮಗ ಒಂದಿಷ್ಟು ಸಾಲ ಇತ್ತಲಾ, ಅದನ್ನ ತೀರಿಸಬೇಕಾಗಿತ್ತು. ಉಳದದ್ದೆಲ್ಲಾ ಅವರ ಮದುವಿಗೇ ಖರ್ಚು ಮಾಡಿದ್ವಿ. . ಅಕೀಗೆ ಮಾಂಗಲ್ಯದ ಸರಾ, ನೆಕ್ಲೇಸು ಹಾಕಿದ್ವಿ. . “
“ಆತಲಾ. . ಈಗ ನಿನ್ನ ಮಗನ ಕಲಿಸಿದ ಖರ್ಚು ಎಲ್ಲಾ ನಂದಿನೀ ತವರಿನವರನ ಕೊಟ್ಟಂಗಾತು. . ನೀನು ಇಬ್ಬರಿಗೂ ಸಮಾಸಮಾ ಖರ್ಚು ಎಲ್ಲೆ ಮಾಡಿಧಂಗಾತು?”
“ಅಲ್ಲವೇ, ನಾ ಏನು ಜಗತ್ತಿನ್ಯಾಗ ಯಾರೂ ಮಾಡದೇದ್ದು ಮಾಡೇನೇನು? ಎಲ್ಲಾರೂ ತೊಗೋತಾರ. . ನಾನೂ ತೊಗೊಂಡೇನಿ. . “
“ಈಗ ನಿಮ್ಮ ಆಸ್ತಿಯೊಳಗ ನಿನ್ನ ಸೊಸೀದನ ಭಾಗ ಹೆಚ್ಚಿಗಿದ್ದಂತಾತು. ಮತ್ತ ನೀ ಸಮಾನತೆ ಅಂತ ಹೊಡಕೋತೀಯಲಾ! ನೀನ ಹೇಳತೀ, ನಿಮಗ ಪೆನ್ಶನ್ ಇಲ್ಲಂತ. . ಇನ್ನು ಮುಂದ ನಿಮ್ಮಿಬ್ಬರ ಖರ್ಚು ಅವರ ಮ್ಯಾಲನ. . ನಿಮ್ಮ ಊಟದ ಖರ್ಚು ಕೊಡ್ರಿ ಅಂತ ಕೇಳಲಿಕ್ಕಾಗತದೇನು ಅವರು? ನಿಮಗೂ ವಯಸ್ಸಾಗೇದ. . ಇನ್ನ ಆರೋಗ್ಯದ ಸಮಸ್ಯಾ ಇರತಾವು. . ಮೆಡಿಕಲ್ ಖರ್ಚು. . ಅವೆಲ್ಲಾ ಅವರೇ ನೋಡಬೇಕಾಗತದ. . ನೀ ನಿನ್ನ ಕೆಲವು ಲಕ್ಷದ ಆಭರಣ ಕೊಡ್ಲಿಕ್ಕೆ ಹಿಂದ ಮುಂದ ನೊಡತೀದಿ. . ಇದು ಅನ್ಯಾಯ ಅಲ್ಲೇನು?”
“ನೀ ಹೇಳೋದು ಖರೆ ಅದ ಸ್ನೇಹಾ. . ಆದರ ನನ್ನ ಹತ್ತರ ಆನುವಂಶಿಕ ಅಂತ ಇರೋದು ಇವೇ ಕೆಲವು ಒಡವಿ. . ಉಳದದ್ದಲ್ಲಾ ಅವರಿಬ್ಬರಿಗೂ ಸಮಾ ಸಮಾ ಹಂಚಿಬಿಟ್ಟೇವಿ. ನಾವಿರೋತನಕಾ ಈ ಮನೀ ಮಾರಲಿಕ್ಕೂ ಬರಂಗಿಲ್ಲಾ. . ಅಂಥಾ ಆಸ್ತಿನೂ ಮಾಡಿಲ್ಲಾ. . ಅವರನ ಪೈಸಾ ಪೈಸಾಕ್ಕನೂ ಕೈ ಒಡ್ಡೋವಂಥಾದೇನು ಪ್ರಸಂಗ ಇರದೇದ್ದರೂ ನಾವು ಅವರ ಮ್ಯಾಲನ ಅವಲಂಬನಾ ಮಾಡಬೇಕಾಗತದ. . ಗಂಡಸಮಗಾ. . ಅವನ ಕರ್ತವ್ಯಾ ಅಂತನಕೊಂಡು ಸುಮ್ಮನಿರೋದು. . ಆದರೂ ನಾನು ಈಗನ ಎಲ್ಲಾ ಸೊಸೀಗೆ ಕೊಟ್ಟಬಿಟ್ಟರ ಅಕೀ ಮುಂದ ನಮ್ಮನ್ನ ಕೇಳತಾಳಂತನ್ನೋದು ಹೆಂಗ ಹೇಳಲಿಕ್ಕೆ ಬರತದ? ಮುಂದ ಅವ್ರು ನಮ್ಮನ್ನ ಹೊರಗ ಹಾಕಿದ್ರ? ಮಗಾ ಮದುವಿ ಅಗೋತನಕಾ ನಮ್ಮಾಂವಾ. ನಂತರ ಅವನ್ನ ನಂಬಲಿಕ್ಕೆ ಬರಂಗಿಲ್ಲಾ. ಆದರ ಮಗಳು ಯಾವಾಗಲೂ ಮಗಳೇ! ಅಲ್ಲದ ಸುಹಾಸಿನಿದು ನಮ್ಮಿಬ್ಬರ ಮ್ಯಾಲೆ ಯಾವಾಗಲೂ ಭಾಳ ಅಂತಃಕರಣಾ. ಸಣ್ಣಾಕಿ. . ಹಿಂಗಾಗಿ ಸ್ವಲ್ಪ ಬುದ್ಧಿ ಕಡಿಮಿ ಅಷ್ಟ. . ನನಗ ಏನರೆ ಆದ್ರ ಅಕೀ ಕಣ್ಣಾಗ ನೀರು ಸಂಗಾತಲೆ ತುಂಬತಾವ. . ನಂದಿನಿ ಎಷ್ಟಂದ್ರೂ ಹೊರಗಿಂದ ಬಂದಾಕಿ. . ನನಗ ಏನು ಮಾಡಲಿಕ್ಕೂ ತಿಳೀದಂಗಾಗೇದ. . ನಮ್ಮ ಅತ್ತಿಗೆ ಇಂಥಾ ಆಲೋಚನಿ ಎಂದೂ ಬರಲೇ ಇಲ್ಲೇನೋ. . ಅವರು ತಮ್ಮ ಎಲ್ಲಾ ವಡವೀ ಏನೋ ಹಿಂದ ಮುಂದ ನೋಡಲಾರದ ನನಗಂತ ಎತ್ತಿಟ್ಟಿದ್ದರು. ಮಾವ ಉಳಿಸಿದ ರೊಕ್ಕಾ ಸೈತ ಅವ್ರು ನನ್ನ ಗಂಡನ ಕೈಯಾಗ ಇಟ್ಟಿದ್ರು. . ಅವರ ನಂಬಿಕಿ ನನಗ ಯಾಕ ಬರಲಿಕ್ಕತ್ತಿಲ್ಲೋ. . ಈಗ ನನಗ ಏನ ಮಾಡಂತೀ?”
ನಾನು ನಿರಾಶೆಯಿಂದ ಕೇಳಿದ್ದೆ.
“ನೀ ಇನ್ನೂ ಅಗದೀ ಫ್ರ್ಯಾಂಕ್ ಆಗಿ ಒಪಿಗೊಂಡರೆ ಒಪಿಗೊಂಡೀ, ಮಗಳು ನಿನಗ ಮಗಾ, ಸೊಸೀಗಿಂತಾ ಹೆಚ್ಚು ಹತ್ತಿರದಾಕಿ ಅಂತ. ಇನ್ನೂ ಕೆಲವರು ಇರತಾರ, ನಾವು ಮಗಳು, ಸೊಸೀ ಅಂತ ಭೇದ ಭಾವ ಮಾಡಂಗಿಲ್ಲಾ ಅಂತ. . ಆದರೂ ಮಾಡೋದು ಮಾತ್ರ ಇಬ್ಬಗೀ ನೀತೀನ! ನಿಮ್ಮ ಅತ್ತಿ ಖರೆ ಹೇಳಬೇಕಂದ್ರ ಶ್ಯಾಣೆ. ಅವರಿಗೆ ನಿನ್ನಂಗ ಎಂದೂ ವಿಚಾರ ಬರಲೇ ಇಲ್ಲಾ. ನೀ ಸುಹಾಗ ಹೇಳೀಯೇನು, ಎಂದಿದ್ದರೂ ನಿನ್ನ ಎಲ್ಲಾ ವಸ್ತಾ ವಡವೀ ಅಕೀಗೆ ಸೇರೋದು ಅಂತ?”
“ಇಲ್ಲಾ. . ಅಕಿಗೆ ಏನೂ ಹೇಳಿಲ್ಲಾ. . ‘
“ಛೊಲೋ ಮಾಡೀ. . ಈಗ ನಾ ನಿನಗ ನಾ ಒಂದು ಐಡಿಯಾ ಹೇಳಿಕೊಡತೇನಿ. . ನಿನಗ ಮೈಯಾಗ ಅರಾಮಿಲ್ಲಂತ ಫೋನ್ ಮಾಡು ಸುಹಾಸಿನಿಗೆ-ಎರಡು ದಿನದಿಂದ ಎದಿ ನೋಯಲಿಕ್ಕತ್ತಿತ್ತು. ಡಾಕ್ಟರ್ ಕಡೆ ಹೋಗಿ ಎಲ್ಲಾ ಟೆಸ್ಟ್ ಮಾಡಿಸಿದೆ, ಮೆಡಿಸಿನ್ಸ್ ಕೊಟ್ಟಾರ. . ಎರಡು ದಿನದ ನಂತರ ಅಂಜಿಯೋಗ್ರಾಂ ಮಾಡತಾರಂತ. ಆವಾಗ ಏನರೆ ಬ್ಲಾಕೇಜ್ ಕಂಡುಬಂದ್ರ ಸ್ಟೆಂಟ್ ಕೂಡಸಬೇಕಾಗತದಂತ. ನನಗ ಹೆದರಿಕಿ ಆಗೇದ ಸುಹಾ. . ನಮಗ ಇನ್ಸುರೆನ್ಸೂ ಇಲ್ಲಾ. . ನಿಮ್ಮ ಅಪ್ಪನೂ ಊರಾಗಿಲ್ಲಾ. . ನನ್ನ ಕೈಯಾಗ ಅಷ್ಟು ರೊಕ್ಕಾನೂ ಇಲ್ಲಾ. . ನಂದಿನಿ, ಶ್ರೀವತ್ಸಗೂ ನಾ ಇನ್ನೂ ಏನೂ ಹೇಳಿಲ್ಲಾ. . ಅವರಿಬ್ಬರಿಗೂ ಸವುಡೂ ಇರಂಗಿಲ್ಲಾ. . ನಿನಗೂ ಗೊತ್ತದ. ಅಲ್ಲದ ನಿನ್ನ ಮ್ಯಾಲೇ ನನಗ ಹೆಚ್ಚಿನ ನಂಬಿಕಿ ಅದ. . ಅವರಿಬ್ಬರಿಗೂ ಇದರ ಬಗ್ಗೆ ಏನೂ ನೀನೂ ಹೇಳಬ್ಯಾಡಾ. . ನಿಮ್ಮ ಅಪ್ಪಗೂ ಹೇಳಬ್ಯಾಡಾ. . ಸುಮ್ಮನ ಚಿಂತಿ ಆಗತದ. ಅವರು ಊರಿಂದ ಬಂದಮ್ಯಾಲೆ ಹೇಳಲಿಕ್ಕೆ ಬರತದ. . ನಾ ನಿಮ್ಮ ಊರಿಗೆ ಬರಬೇಕಂತ ಮಾಡೇನಿ. . ” ಅಂತ ಹೇಳು. . ಅಕಿ ಹೂಂ ಅಂದ್ರ ಮನ್ಯಾಗೂ ಎಲ್ಲಾರ ಮುಂದ ಅಕಿ ನೆನಪಾಗೇದ, ನಾಲ್ಕು ದಿನಾ ಹೋಗಿಬರತೇನಿ ಅಂತ ಹೇಳು. . “
ಸ್ನೇಹಾ ಹೇಳಿದ್ದಳು.
ನಮ್ಮ ಯೋಜನೆಯೂ ಕಾರ್ಯರೂಪಕ್ಕೆ ಬರುವ ಮುನ್ನವೇ ಪರಿಣಾಮವೂ ಹೊರಬಿದ್ದಿತ್ತು. ಸುಹಾಸಿನಿ ಅದರಲ್ಲಿ ಫೇಲ್ ಆಗಿದ್ದಳು. ಆದರೆ ನಂದಿನಿ ಡಿಸ್ಟಿಂಕ್ಶನ್ನಲ್ಲಿ ಪಾಸಾಗಿದ್ದಳು!
ಸುಹಾಸಿನಿಗೆ ನಾನು ಇದನ್ನೆಲ್ಲವನ್ನೂ ಹೇಳಿದಾಗ ಅವಳು, “ಅಮ್ಮಾ ಅದು ಹೆಂಗ ಸಾಧ್ಯ? ಶ್ರೀವತ್ಸನೂ ಒಬ್ಬ ಡಾಕ್ಟರು. . ಅವರು ಗೈನೆಕ್ ಇದ್ದರೇನಾಯ್ತು? ಅವರಿಬ್ಬರಿಗೂ ಸಾಕಷ್ಟು ಜನ ಡಾಕ್ಟರು ಪರಿಚಯವಿದ್ದವರಿರತಾರ. ಅಲ್ಲದೆ ನಂದಿನಿ ನಿನ್ನ ಸೊಸೀ. ಅಕೀ ನಿನಗೆ ಮಾಡಬೇಕಾದದ್ದು ಅಕೀ ಕರ್ತವ್ಯ. ನಾನೇ ಅಲ್ಲಿಗೆ ಬರಬಹುದಾಗಿತ್ತು. ನಮ್ಮ ಮನ್ಯಾಗ ನಮ್ಮ ನಾದಿನೀ ಮದುವೆ ಇನ್ನು ಎರಡೇ ತಿಂಗಳದಾಗ. ಈಗ ಮದುವೆಯ ಕೆಲಸ ಎಷ್ಟೊಂದಿರತದ. . ಸೀರೆ, ವಡವೆ, ಪಾರ್ಲರು ಅಂತ ಎಲ್ಲರೂ ತಯಾರಾಗುತ್ತಿದ್ದರೆ ನಾನು ಈ ಹೊತ್ತಿನ್ಯಾಗ ಅದನೆಲ್ಲಾ ಬಿಟ್ಟು ನಿನ್ನ ಜೋಡೀಗೆ ಆಸ್ಪತ್ರೆಯೊಳಗ ಹೆಂಗ ಕೂಡಲಿಕ್ಕೆ ಸಾಧ್ಯದ? ಅವರೆಲ್ಲಾ ಏನು ತಿಳಿದುಕೊಂಡಾರು? ಅದೂ ಸಾಧ್ಯ ಇಲ್ಲಾ. ಅಲ್ಲದ ನಿನ್ನ ನಮ್ಮ ಮನೀಗೇನ ಕರಕೊಂಡು ಹೋಗಬೇಕಂತಂದ್ರೂ ನಮ್ಮ ಮನಿಯೊಳಗ ನನಗ ಆರ್ಥಿಕ ಸ್ವಾತಂತ್ರ್ಯನೂ ಇಲ್ಲಾ. ಎಂಜಿಯೋಪ್ಲಾಸ್ಟಿ ಅಂತಂದರ ಏನಿಲ್ಲಂತಂದರೂ ಮೂರು ನಾಲ್ಕು ಲಕ್ಷದ ಖರ್ಚು. . ನಿಮ್ಮದು ಇನ್ಶೂರೆನ್ಸೂ ಇಲ್ಲ. ಯಾವುದಕ್ಕೂ ನನ್ನ ಗಂಡನ ಹತ್ತಿರ ನಾನು ಕೇಳಬೇಕು. . ಆದರೂ ಈಗ ನೀನು ನಿನ್ನ ಡೈಮಂಡ್ ಸೆಟ್ಟು ನನಗ ಕೊಟ್ಟರ ನಾ ವಿಚಾರ ಮಾಡತೇನಿ. . ” ಎಂದಿದ್ದಳು. ನನಗೆ ನಿಜವಾಗಿಯೂ ಹೃದಯ ಒಡೆದುಹೋಗಿತ್ತು. ಇವಳಿಗಾಗಿ ನಾನು ಏನೇನು ಮಾಡಲಿಲ್ಲ? ಯಾವಾಗಲೂ ಶ್ರೀವತ್ಸನಿಗಿಂತಲೂ ಇವಳ ಬೇಡಿಕೆಗಳನ್ನೇ ಮೊದಲು ಪೂರೈಸಿದೆ. ಬೇಡಿದ ಡ್ರೆಸ್ಸು, ಕಾಸ್ಮೆಟಿಕ್ಸುಗಳಿಂದ ಹಿಡಿದು ಎಲ್ಲವನ್ನೂ. .
ಈಗ ನಂದಿನಿಯ ಸರದಿ. ನಂದಿನಿಗೆ ನಾನು ನಸುಕಿನಲ್ಲಿ ಕೇವಲ ನನ್ನ ಎದೆ ನೋಯುತ್ತಿರುವ ಬಗ್ಗೆ ತಿಳಿಸಿದ್ದೆ. ಅವಳು ಕೇವಲ ಒಬ್ಬ ವೈದ್ಯಳಾಗಿಯಷ್ಟೇ ಅಲ, ್ಲ ಒಬ್ಬ ಸೊಸೆಯಾಗಿಯೂ ಸ್ಪಂದಿಸಿದ್ದಳು. ಶ್ರೀವತ್ಸನಿಗೂ ಅವಳು ವಿಷಯವನ್ನು ಹೇಳಿದ್ದಳು. ಇಬ್ಬರೂ ನಿದ್ರೆ ಮಾಡಲಿಲ್ಲ. ಶ್ರೀವತ್ಸನು ತನ್ನ ಕಾರ್ಡಿಯಾಲಾಜಿಸ್ಟ್ ಗೆಳೆಯನಿಗೆ ನನ್ನ ಬಗ್ಗೆ ಹೇಳಿದ್ದ. ಇಬ್ಬರೂ ನನ್ನ ಹಾಸಿಗೆಯ ಪಕ್ಕದಲ್ಲಿಯೇ ಕುಳಿತು ಆ ಕೆಲ ನಿಮಿಷಗಳನ್ನು ಕಳೆದಿದ್ದರು. ಆ ಗೆಳೆಯನ ಆಸ್ಪತ್ರೆಗೆ ನನ್ನನ್ನು ದಾಖಲಿಸಿದ್ದರು. ಕೂಡಲೆ ಚಿಕಿತ್ಸೆಯನ್ನು ಪ್ರಾರಂಭಿಸಲಾಗಿತ್ತು. ಯಾವುದೇ ಪರೀಕ್ಷೆಗೂ ನನ್ನ ಹತ್ತಿರದ ಹಣವನ್ನು ಕೂಡ ಮುಟ್ಟಲಿಲ್ಲ. ರವಿ ಟೂರಿನಲ್ಲಿರುವುದರಿಂದ ಹೆದರಬಾರದೆಂದು ಅವರಿಗೂ ಏನೂ ವಿಷಯವನ್ನು ಹೇಳಲಿಲ್ಲ. ನನ್ನ ರಿಪೋರ್ಟುಗಳೆಲ್ಲವೂ ನಾರ್ಮಲ್ ಬಂದಾಗ ಇಬ್ಬರೂ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದರು. ಅವರಿಬ್ಬರ ಪ್ರೀತಿ, ಕಾಳಜಿಗಳನ್ನು ನೋಡಿದ ನಾನು ನನ್ನ ತಪ್ಪುಗ್ರಹಿಕೆಗಾಗಿ ಪಶ್ಚಾತ್ತಾಪ ಪಟ್ಟಿದ್ದೆ. ನನ್ನ ಕಣ್ಣು ತೆರೆಸಿದ್ದ ಸ್ನೇಹಾಳಿಗೆ ನಾನು ಅಂದೇ ಫೋನ್ ಮಾಡಿ ಎಲ್ಲವನ್ನೂ ತಿಳಿಸಿದ್ದೆ. ಸುಹಾಸಿನಿ ನನ್ನ ಕಾಯಿಲೆಯ ಬಗ್ಗೆ ನಾನು ವಿಷಯ ತಿಳಿಸಿದಾಗಿನಿಂದ ಫೋನೇ ಮಾಡಿರಲಿಲ್ಲ. . ಈಗ ನಾನೇ ಅವಳಿಗೆ ಮಗ ಹಾಗೂ ಸೊಸೆಯ ಕಾಳಜಿಯ ಬಗ್ಗೆ ಹಾಗೂ ನನ್ನ ರಿಪೋರ್ಟುಗಳ ಬಗ್ಗೆ ತಿಳಿಸಿದ್ದೆ. “ಛೊಲೋ ಆತುಬಿಡು. ನಿಮಗ ಮಾಡೋದು ಅವರ ಕರ್ತವ್ಯ ಅಮ್ಮಾ. . ಅವರದೇನೂ ಇದರಾಗ ಹೆಚ್ಚಗಾರಿಕಿ ಇಲ್ಲಾ” ಎಂದಿದ್ದಳು! ಮಗ ಹಾಗೂ ಮಗಳು ಇಬ್ಬರೂ ಸಮಾನರು ಎಂದು ಹೇಳುವರಾದರೂ ಇಂಥ ವಿಷಯಗಳಲ್ಲಿ ಏಕೆ ಸಮಾನರಲ್ಲ? ಎಂದು ಆಲೋಚಿಸಿದ ನನ್ನ ಮನಸ್ಸು ನಕ್ಕಿತ್ತು.
-ಮಾಲತಿ ಮುದಕವಿ