ಮುಗ್ಧ ಮಾಂಗಲ್ಯ: ಸಿದ್ರಾಮ ತಳವಾರ

ಕೇರಿಯ ಮುಂಭಾಗದಲ್ಲೇ ಶತಮಾನಗಳಷ್ಟು ಹಳೆಯದಾದ ಹುಣಸೀಮರದ ಬುಡದಲ್ಲಿ ತಲೆ ಮೇಲೆ ಕೈ ಹೊತ್ತು ಪೇಚು ಮಾರಿ ಹಾಕಿಕೊಂಡು ಕೂತ ಕರವೀರನನ್ನು ಸಮಾಧಾನ ಮಾಡಲು ಯಾರೊಬ್ಬರೂ ಮುಂದೆ ಬಂದಿರಲಿಲ್ಲ. ಅಷ್ಟಕ್ಕೂ ಅಲ್ಲೇನಾಗಿದೆ ಅನ್ನೋ ಕುತೂಹಲವಂತೂ ಇತ್ತು. ಹೀಗಾಗಿ ಎಲ್ಲರ ಮುಖದಲ್ಲೂ ಒಂಥರದ ಭಯ, ಸಂಶಯ, ಕುತೂಹಲ ಮನೆ ಮಾಡಿದಂತಿತ್ತು. ಆಗಷ್ಟೇ ಹೊರಗಡೆಯಿಂದ ಬಂದ ಮಂಜನಿಗೆ ಆ ಬಗ್ಗೆ ಸ್ಪಷ್ಟತೆ ಏನೂ ಇರದಿದ್ದರೂ ಅಲ್ಲಿ ಒಂದು ದುರ್ಘಟನೆ ನಡೆದಿದೆ ಅನ್ನೋ ಗುಮಾನಿ ಮಂಜನ ತಲೆಯಲ್ಲಿ ಓಡುತ್ತಿತ್ತು.

“ನನ್ ಮಗಳು ಅಂಥಾದ್ದೇನ ಹೊಲಸ ಕೆಲಸ ಮಾಡಿಲ್ರ್ಯೋ ಎಪ್ಪಾ,,,, ಅಕೀಂದ ತಪ್ಪ ನಿಮ್ಮ ಹೊಟ್ಯಾಗ ಹಾಕ್ಕೋಳ್ರ್ಯೋ,,, ಅಕೀನ ಜೀಂವಾ ಉಳಿಸ್ರ್ಯೋ… ನಿಮ್ಮ ಕಾಲ ಬಿದ್ದ ಹೇಲ್ ತಿಂತೀನಿ… ಸಾಯೂತನಕಾ ನಿಮ್ಮ ಋಣದಾಗ ಇರ್ತೀನ್ರ್ಯೋ” ಕೇರಿಯ ಹುಣಶೀಮರದ ಕೆಳಗೆ ಸೇರಿದ ಕಂಡ ಕಂಡವರಿಗೆಲ್ಲಾ ಕೈ ಮುಗಿದು ಗೋಳಾಡುತ್ತಿದ್ದ ಕರವೀರನ ಸ್ಥಿತಿ ಕಂಡು ಮಂಜನ ಕರುಳು ಅದ್ಯಾಕೋ ಚುರ್ರ ಅಂದಿತ್ತು. ಹುಣಶೀಗಿಡದ ನೆರಳಿಗೆ ಇದ್ದ ಅವನ ಮನೆ ಬಾಗಿಲ ಬಳಿ ಇಟ್ಟಿದ್ದ ಬಕೀಟಿನ್ಯಾಗಿನ ನೀರು ತುಗೊಂಡು ಕೈ ಕಾಲು ಮುಖ ತೊಳೆದು ಒಳಗ ಹೆಜ್ಜಿ ಇಡುವಷ್ಟರಾಗ ಅವನಿಗೆ ಅಲ್ಲಿ ನಡೆದಿದ್ದ ಎಲ್ಲಾ ಬಾತಮಿ ಅವ್ವನ ಮೂಲಕ ತಿಳಿದು ಹೋಗಿತ್ತು. ಕೇರಿಯ ಯಾವೊಬ್ಬ ಗಂಡಸೂ ಕರವೀರನ ಆ ಸ್ಥಿತಿಯೊಳಗ ಸಹಾಯ ಮಾಡಲಿಕ್ಕೆ ಮುಂದಾಗಿರಲಿಲ್ಲ. ಅದಕ್ಕ ಹಿನ್ನೆಲೆ ಕಥಿ ಒಂದ ಬ್ಯಾರೇನ ಇತ್ತು ಆದರೂ ಆ ಕ್ಷಣದ ಮಂಜನ ಮಾನವೀಯತೆ ಎಚ್ಚರಾಗಿತ್ತು. ಸುತ್ತಲೆಲ್ಲ ನೆರೆದ ಹೆಂಗಸರು ಬಾಯೊಳಗ ಸೆರಗ ಸಿಕ್ಕಿಸಿಕೊಂಡ ಲೊಚಗುಡುತ್ತಿದ್ದರು, ಹುಡುಗರು, ಗಂಡಸರು ಅದೇನೋ ಸರ್ಕಸ್ ನೋಡ್ತಿದ್ದಂಗ ನೋಡ್ಕೊಂತ ನಿಂತಬಿಟ್ಟಿದ್ರು.

ಮಂಜುಗ ಅದೇನ ತಿಳಿತೋ ಗೊತ್ತಿಲ್ಲ ಪಟಕ್ಕನೇ ತನ್ನ ಕಿಸೆಯೊಳಗ ಕೈ ಹಾಕಿದವನ ಮೊಬೈಲ ತಗದ ಅದ್ಯಾರಿಗೋ ಫೋನ ಹಚ್ಚಿದವನ ಮತ್ತ ಕಿಸೇಕ ತುರಕಿದ್ದ. ಕೂಡಿದ ಮಂದಿ ಸೈಡಕ್ ಸರಿಸಿ ಹತ್ತ ನಿಮಿಷ ಆಗಿರಬೇಕ ಅಷ್ಟೊತ್ತಿಗೆ ಸದ್ದು ಮಾಡ್ಕೊಂತನ ಅಂಬ್ಯಲೆನ್ಸ್ ಗಾಡಿಯೊಂದು ಕೇರಿಗೆ ಬಂದ ಬಿಟ್ಟಿತು. ಬಾಜೂಕ ಅತಗೊಂತ ಕುಂತಿದ್ದ ಕರವೀರನ ಕೈ ಹಿಡಿದು ಎಬ್ಬಿಸಿ ಅವರ ಮನೀಗೆ ಹೋಗಿ ಅವನ ಮಗಳನ್ನ ಹೆಗಲ ಮ್ಯಾಲ ಹೊತಕೊಂಡವನ ಎತ್ತಿಕೊಂಡು ಬಂದು ಅಂಬ್ಯುಲೆನ್ಸ್ ಗಾಡ್ಯಾಗ ಹಾಕಿ ಕರವೀರನೊಂದಿಗೆ ಅಂಬ್ಯುಲೆನ್ಸ್ ಹತ್ತಿದ ಮಂಜು ಬಾಗಿಲ ಎಳಕೊಂಡಿದ್ದ. ಅದೇ ಸದ್ದಿನೊಂದಿಗೆ ಅಂಬ್ಯಲೆನ್ಸ್ ಪುನ: ತಿರುಗಿ ದೂರದ ಬೆಳಗಾವಿ ದವಾಖಾನಿಗೆ ಹೊರಟು ಹೆದ್ದಾರಿ ಕೂಡಿತ್ತು.


‘ಇದರ ಮಾರಿ ಮಣ್ಣಾಗ ಅಡಗ್ಲೀ,,, ಇದಕ್ಯಾಕ ಬೇಕಿತ್ತ ಅಂತೀನಿ, ಸಾಯಾಕಿ ಸತ್ತ ಹೋಗ್ವಾಳ್ಳು ಬಿಡಬೇಕಿಲ್ಲ,,,, ತನಗ ಜೀಂವ ಬ್ಯಾಸರಾಗಿ ಪಾನಿಡಾಲ ಕುಡದಾಳ ಕೇರ್ಯಾನ ಗಂಡಸರಿಗೆಲ್ಲ ಬ್ಯಾಸರಾದ ಮೂದೇವಿನ ದವಾಖಾನಿಗ ಕರಕೊಂಡ ಹೋಗೂದ ಇಂವಗ್ಯಾಕ ಬೇಕಿತ್ತ ಅಂತೀನಿ’ ಮಂಜನ ಅವ್ವ ಹಿಡಿಶಾಪ ಹಾಕುತ್ತಿರುವಾಗಲೇ ಕೇರಿಯ ಹೆಂಗಸರೆಲ್ಲ ಮಂಜನ ಮನೆಯ ಮುಂದೆ ಜಮಾಯಿಸಿದ್ದರು. ಕುತೂಹಲ ಮನೆ ಮಾಡಿದ ಆ ಹುಡುಗಿ ಆತ್ಮಹತ್ಯೆಗೆ ಶರಣಾದ ಕಥಿ ಸ್ವತ: ಮಂಜನಿಗೂ ಗೊತ್ತಿರಲಿಲ್ಲ, ಸಾವು ಬದುಕಿನ ಮಧ್ಯ ಹೋರಾಡುತ್ತಿರುವ ಜೀವ ಉಳಿಸುವುದು ಒಂದು ಕರ್ತವ್ಯ ಅಂದ್ಕೊಂಡ ಅಂವ ಮಾಡಿದ ಕೆಲಸಕ್ಕ ಕೇರಿಯ ಹೆಂಗಸರು ಮಂಜುವಿನ ತಾಯಿಗೆ ಸಮಾಧಾನ ಮಾಡ್ತಿದ್ರು.


ಸುಡು ಸುಡು ಸೂರ್ಯ ಕೆಂಪಾಗಿ ತಂಪಾಗಿ ಅವರ ಅವ್ವನ ಹೊಟ್ಯಾಗ ಹೋಗೂ ಹೊತ್ತು, ಅಲ್ಲಲ್ಲಿ ಕಟ್ಟಿ ಮ್ಯಾಲ ಕುಂತು ಅಕೀದ ಸುದ್ದಿ ಮಾತಾಡ್ತಿದ್ದ ಕೇರಿ ಮಂದಿ ಸಂಜೆ ಆಗುವಷ್ಟರೊಳಗ ಇದನ ಮರತು ತಂತಮ್ಮ ಮನಿ ಸೇರಿದ್ದರು. ಬೆಳಕು ಹರಿಯೂತನ ಮಗ ಮಂಜನದೇ ಚಿಂತೆ ಮಾಡುತ್ತಿದ್ದ ಅವರವ್ವಗ ರಾತ್ರಿಯಿಡೀ ನಿದ್ದೆಯೇ ಹತ್ತಲಿಲ್ಲ. ಕೋಳಿ ಕೂಗೋ ಹೊತ್ತಿಗೆ ಮನೆಗೆ ಬಂದ ಮಂಜು ಜಳಕಾ ಮಾಡಿ ಊಟಕ್ಕೆ ಮ್ಯಾರಿ ಮಾಡಾಕ ಕುಂತಿದ್ದ. ತಾಯಿ ಮಗ ಇಬ್ಬರೂ ಕೂಡಿ ಮ್ಯಾರಿ ಮಾಡಿ ಮುಗಿಸಿದರು. ಮಗ ಮಾಡಿದ್ದ ಕೆಲಸಕ ಅವರವ್ವಗೂ ಒಳಗೊಳಗ ಒಂಥರಾ ಸಮಾಧಾನ ಆಗಿತ್ತು. ಅಕೀ ಈಗ ಹೆಂಗಾದಳೋ? ಅವ್ವನ ಮಾತಿಗೆ ಕಿವಿಯಾದ ಮಂಜು ‘ಅಕಿ ಏನ ಅರಾಮಿದಾಳ ಬಿಡು, ಕುಡದಿದ್ದ ವಿಷ ಎಲ್ಲ ವಾಂತಿ ಮಾಡಿಸಿ ಎರಡ ಸಲಾಯಿನ್ ಹಚ್ಚಿ ಮಲಗಿಸಿದ್ರು, ನನ್ನ ನೋಡ್ಕೊಂತ ಅಳಾತಿದ್ಲು’ ಮಂಜ ಅವರವ್ವಗ ವರದಿ ಒಪ್ಪಿಸಿ ಅರವಿ ಹಾಕ್ಕೊಂಡ ಮತ್ತ ತನ್ನ ಕೆಲಸಕ್ಕ ಹೊಂಟ ನಿಂತ.

ಕರವೀರನ ಜೊತಿಗೆ ತಾಸಿಗೊಮ್ಮೆ ಘಳಿಗೊಮ್ಮ ಫೋನ್ ಮಾಡ್ಕೋಂತ ಅವನ ಮಗಳ ಪಾರ್ವತಿ ಆರೋಗ್ಯ ವಿಚಾರಿಸ್ತಿದ್ದ. ಸಂಜೆ ಮತ್ತೇ ದವಾಖಾನಿಗ ಹೋಗಿ ಕರವೀರನ ಕೈಯಾಗ ಒಂದಿಷ್ಟು ರೊಕ್ಕ ಕೊಟ್ಟು ‘ಹೆದರಬ್ಯಾಡ್ರೀ ನಾಳೆ ಡಿಸ್ಚಾರ್ಜ ಮಾಡಿಸಿಕೊಂಡು ಬರ್ರೀ’ ಅಂತ ಧೈರ್ಯ ತುಂಬಿ ಬಂದಿದ್ದ. ಮಗಳು ವಿಷ ಕುಡಿದ ಸುದ್ದಿಗೆ ಕರವೀರಗ ಸಾಕಷ್ಟ ಅವಮಾನ ಆಗಿತ್ತು. ಅವಮಾನಿತನಾದ ಕರವೀರ ಪಾರ್ವತಿಯನ್ನ ಡಿಸ್ಚಾರ್ಜ ಮಾಡಿಸಿಕೊಂಡು ನೆಟ್ಟಗ ಮನೆಗೆ ಬರದೇ ತನ್ನ ಸಂಬಂಧಿಯೊಬ್ಬರ ಮನೆಗೆ ಕರಕೊಂಡು ಹೋಗಿದ್ದ.

ಕರವೀರಗ ಹಗಲ ಯಾವುದು ರಾತ್ರಿ ಯಾವುದು ಒಂದು ಗೊತ್ತಿದ್ದಿರಲಿಲ್ಲ. ಬೆಳಕ ಆತಂದ್ರ ಬಾಟಲಿ ಸಂಗ, ಇಸ್ಪೀಟ್ ಆಟ, ಎಲೆ ಅಡಿಕೆ ತಂಬಾಕು ಖಾಯಂ ಚೀಲದಾಗ. ವಯಸ್ಸಿಗ ಬಂದ ಮಗಳ ಬಗ್ಗೆ ಮತ್ತವಳ ಭವಿಷ್ಯದ ಬಗ್ಗೆ ಯಳ್ಳ ಕಾಳಷ್ಟೂ ಯೋಚನೆ ಮಾಡದ ಕರವೀರನಿಗೆ ಆಗ ನಿಜಕ್ಕೂ ಬುದ್ದಿ ಬಂದಿತ್ತು. ಹೆಂಡ್ತಿ ಸತ್ತ ದು:ಖ ಈ ಮಗಳ ಮುಖ ನೋಡ್ಕೊಂತ ಮರತಿದ್ದ ಮೈ ಮುರದ ದುಡ್ಯಾಕ ಕಲತಿದ್ದ, ನಾಖ ದುಡ್ಡ ಉಳಿಸಿಕೊಂಡು ಮನೀ ಬಾಳೆ ಮಾಡಾಕ ರೂಢಿ ಮಾಡಕೊಂಡಿದ್ದ. ಆದರೆ ಮಗಳು ಇಂತ ಕೆಲಸ ಮಾಡಿಕೊಂಡಿದ್ದಕ್ಕ ಮುಗಲ ಕಳಸಿಕೊಂಡ ಮ್ಯಾಲ ಬಿದ್ದಂಗ ಸೊರಗಿ ಹೋಗಿದ್ದ, ಇಂಥ ಟೈಮದಾಗ ಅಂವನ ಬೆನ್ನಿಗೆ ನಿಂತ ಮಂಜುನ ಉಪಕಾರಕ್ಕ ಅಂವನ ನೆನಸ್ಕೋಂತ ಕಣ್ಣೀರ ಹಾಕಿ ಅಂವಗ ಫೋನ ಮಾಡಿ ಊರಿಗ ಬಂದ ಸುದ್ದಿ ಮುಟ್ಟಿಸಿದ. ಸಂಬಂಧಿಯೊಬ್ಬರ ಮನೆಗೆ ಹೋದ ಮ್ಯಾಲ ಮಗಳ ಜೊತೀಗೆ ಕರವೀರನೂ ಒಂದಿಷ್ಟು ತಿಂಗಳು ಅಲ್ಲೇ ಉಳ್ಕೊಂಡು ಕೂಲಿ ಕೆಲಸ ಮಾಡಿ ಸಂಬಂಧಿಗಳ ವಾರದ ಸಂತೀಗೆ ನೆರವಾಗಿದ್ದ. ದಿನ ಕಳದಿದ್ವು ಊರು ಕೇರಿ ಮತ್ ನೆಂಪಾಗಿತ್ತು. ಕೇರಿ ಮಂದೀನೂ ನಡದಿದ್ದನೆನಲ್ಲ ಮರತ ಹೋಗಿದ್ರು ಕರವೀರಗ ಕೇರಿ ಬಾ ಬಾ ಅಂತ ಕೈ ಮಾಡಿ ಕರೀತಿತ್ತು.


ಕರವೀರನದು ಅಂಥಾದ್ದೇನ ಸುಖದ ಸಂಸಾರ ಅಲ್ಲ. ಜೀವಂತ ಹೆಂಡ್ತಿ ಇರುವಾಗನ ಒಂದಲ್ಲ ಅಂತ ಎರಡ ಮದವಿ ಮಾಡ್ಕೊಂಡಿದ್ದ. ಮೊದಲನೇದಾಕಿಗೆ ಮೂರ ಮಕ್ಕಳು ಎರಡನೇದಾಕೀಗೆ ಒಂದ ಮಗಳು. ಅವನ ಕೆಟ್ಟ ಚಟ ಮತ್ತು ಸಂಸಾರದ ಮ್ಯಾಗಿನ ಅವನ ನಿರ್ಲಕ್ಷ್ಯತೆಗೆ ಮೊದಲನೇ ಹೆಂಡ್ತಿ ಇವನ ಸಹವಾಸನ ಸಾಕ ಅಂತ ಬ್ಯಾರೇ ಗುಡಿಸಲದಾಗ ಉಳಕೊಂಡಿದ್ಲು. ರೆಟ್ಟಿ ಗಟ್ಯಾಗಿದ್ದಾಗನ ಮೈ ಮುರದ ದುಡದ ಒಂದಿಷ್ಟು ಕಾಳು ಕಡಿ ಕೂಡಿಟ್ಕೊಂಡ ದುಡ್ಡು ಕಾಸು ಅಂತ ಗಂಟಿಗೆ ಗಂಟ ಮಾಡಿ ಮಕ್ಕಳ ಮರಿಗೆ ಆಸರಾದಾವ ಅಲ್ಲ. ಹಗಲಿ ದುಡಿಯೂದು ರಾತ್ರಿ ಕುಡಿಯೂದು. ಒಂದ ಕಡೆ ಹೆಂಡ್ತಿ ಮತ್ತೊಂದ ಕಡೆ ಸವತಿ ಇಬ್ಬರ ಜಗಳದಾಗ ಒಮ್ಮೆ ಅಕೀನ ಮತ್ತೊಮ್ಮೆ ಇಕೀನ ದನಕ ಬಡದಂಗ ಬಡಿಯೂದು ತಾನ ಮಾತ್ರ ನಡು ರಾತ್ರ್ಯಾಗ ಗುಡಿ ಅಂಗಳದಾಗ ಬೀಳೂದು. ಹತ್ತ ವರ್ಷ ಇಂತವನ ಜೊತಿಗೆ ಸಂಸಾರ ಮಾಡಿದ ಎರಡನೇ ಹೆಂಡ್ತಿ ಇದನ್ನೆಲ್ಲ ನೋಡಲಾರದ ದೊಡ್ಡದೊಂದ ರೋಗ ಬಂದು ಕಣ್ಮುಚ್ಚಿದ್ದಳು.

ಕೈಯಾಗ ಒಂದ ಹೆಣಗೂಸ ಕೊಟ್ಟು ಕಣ್ಮುಚ್ಚಿದ ಅಕಿ ಸಲುವಾಗಿ ತಲಿ ಕೆಡಿಸಿಕೊಂಡು ಮತ್ತಷ್ಟ ಕುಡಿಯಾಕ ಶುರು ಮಾಡಿದ್ದ. ಕೇರ್ಯಾಗಿನ ಮಂದಿ ನಾಕ ದಿನ ನಾಕ ಸಮಾಧಾನ ಮಾತ ಹೇಳಿದ್ರು, ಕೆಲವರು ಬೈದು ಬುದ್ದಿ ಹೇಳಿದ್ರು ಮತ್ತ ಕೆಲವ್ರು ಬಡದ ಬುದ್ದಿ ಹೇಳಿದ್ರು. ಅಂತೂ ಅಂವ ಏನ ಕುಡಿಯೂದ ಬಿಟ್ಟಿರಲಿಲ್ಲ. ಕುಡಿಯೋ ಚಟಕ್ಕೆ ದಾಸನಾಗಿದ್ದ ಕರವೀರ ಚಟಕ್ಕಾಗಿ ಹಿರಿಯಾರು ಗಳಿಸಿದ್ದ ಅಂಗೈಯಗಲ ಹೊಲಾನೂ ಒತ್ತೆಯಿಟ್ಟಿದ್ದ. ಮಗಳಿಗೆ ಹದಿಮೂರು ತುಂಬಿತ್ತು, ದುಂಡಗೆ ಗುಂಡಗೆ ಇದ್ದ ಮಗಳು ಪಾರ್ವತಿ ಮೈನೆರೆದಿದ್ಲು. ಅಪ್ಪ ಅಲಾ ಎಷ್ಟೇ ಆದ್ರೂ ಆ ಕ್ಷಣಕ್ಕ ಅಂವಗ ಹೆಂಡ್ತಿ ನೆಂಪಾದ್ಲು. ಮಗಳು ದೊಡ್ಡಾಕಿ ಆದ್ಳು. ಖುಷಿಪಟ್ಟ ಅಕೀ ಭವಿಷ್ಯ ನೆನಪ ಮಾಡ್ಕೊಂಡು ಕಣ್ಣೀರು ಹಾಕಿದ್ದ. ತಾಯಿ ಇಲ್ಲದ ತಬ್ಬಲಿ ಮಗಳನ್ನು ಆದಷ್ಟು ಬೇಗನೆ ಮದುವೆ ಮಾಡಿ ಕೊಟ್ಟು ತಾನು ಹಾಳು ಬಾವಿ ಬಿದ್ದರೂ ಚಿಂತೆಯಿಲ್ಲ ಅನ್ನುವಂಗ ಇದ್ದ ಬಿದ್ದ ಪರಿಚಯದವರಿಗೆಲ್ಲ ಮಗಳು ಮೈನೆರೆದ ಸುದ್ದಿ ಹೇಳಿ ಕಳಿಸಿದ. ಮಗಳು ಕೂಡ ಅಷ್ಟೇ ದುಂಡಗೆ ಹುಣಿಮಿ ಚಂದ್ರನಂಗ ಹೊಳೀತಿದ್ಳು. ಕರವೀರ ಬದಲಾಗಿದ್ದ, ಮಗಳಿಗಾಗಿ ಕುಡಿಯೂದ ಬಿಟ್ಟಿದ್ದ ಮೈ ಮುರಿದ ದುಡಿಯೂದಕ್ಕ ಶುರು ಮಾಡಿದ್ದ, ಮಗಳು ಅಪ್ಪನ ಜೊತೀಗೆ ಕೂಲಿ ಕೆಲಸ ಮಾಡುತ್ತ ಅಪ್ಪ-ಮಗಳು ಹಿಂದಿಂದ ಎಲ್ಲ ಮರೆತು ಜಂ.. ಅಂತ ಜೀವನ ಮಾಡ್ತಿದ್ರು.

ಕರವೀರ ಬದಲಾದ್ರೂ ಅಂವ ಮಾಡಿದ ಸಂಗ ಬದಲಾಗಿರಲಿಲ್ಲ. ತಿಂಗಳೊಪ್ಪತ್ತ ಕಳದಿತ್ತು ಅಷ್ಟ, ಕುಡುಕ ಗೆಳ್ಯಾರು ಮತ್ತ ಮನೀಗೆ ಬರಾಖ ಶುರು ಮಾಡಿದ್ರು. ಅಪ್ಪ ಒಲ್ಲೆ ಒಲ್ಲೆ ಅಂದ್ರೂ ಜೋರ ಮಾಡಿ ಬಾಟಲಿ ಕೈಯಾಗ ಕೊಡಾವ್ರು. ಪಾರ್ವತಿಗೆ ಇದನ್ನೆಲ್ಲ ನೋಡಿ ನೋಡಿ ಸಿಟ್ಟು ನೆತ್ತಿಗೇರಿತ್ತು. ಒಂದ ರಾತ್ರಿ ಕರವೀರನ ಹುಡಕ್ಕೊಂಡ ಬಂದ ಅಂವನ ಗೆಳ್ಯಾರಿಗೆಲ್ಲ ಜಾಡಸಿ ಧೂಳಾ ಬಿಡಿಸಿದ್ಳು. ನಾಚಿಕಿ ಇಲ್ಲದವರು ನಾಕ ದಿನ ಬಿಟ್ರು ಮತ್ ಮನಿ ಕಡೆ ಬರಾಕ ಶುರು ಹಚ್ಕೊಂಡ್ರು. ಕರವೀರ ಕ್ರಮೇಣ ಬದಲಾಗಿ ಹೋದ ಮತ್ತ ತನ್ನ ಹಳೇ ಚಾಳೀನ ಶುರು ಹಚ್ಕೊಂಡಿದ್ದ.
ಹಗಲು ದುಡಿಯೋದು ರಾತ್ರಿ ಕುಡಿಯೋದು ಚಾಳೀನ ಆಗಿ ಹೋಯ್ತು. ಮನಿಯೊಳಗ ಮೈ ನೆರೆದ ಮಗಳು ಅಪ್ಪಟ ಸುಂದರಿ. ವರ್ಷ ತುಂಬಿತ್ತು. ಅಪ್ಪನ ಜೊತಿಗೆ ಕೆಲಸಕ್ಕೆ ಹೋದಾಗ ದುಷ್ಟ ಕಾಮುಕನ ಬಲೀಗೆ ಬೀಳಾಕ ಅಕೀಗೆ ಹೆಚ್ಚು ಹೊತ್ತು ಹಿಡೀಲಿಲ್ಲ. ಒಲ್ಲದ ಸಂಗಕ್ಕೆ ಪಾರ್ವತಿ ಬೆಂದು ಹೋಗಿದ್ಳು. ಇಮಾಮಸಾಬಿ ಅನ್ನೋ ದುರುಳ ಅವಳನ್ನ ತೀರ ಸಲುಗೆಯಿಂದಲೇ ತನ್ನ ತೆಕ್ಕೆಗೆ ತಗೊಂಡು ಬಿಟ್ಟಿದ್ದ. ಪಾರ್ವತಿ ಕ್ರಮೇಣ ಆತನ ತೋಳ್ತೆಕ್ಕೆಯ ಬಿಸಿ ಅಪ್ಪುಗೆಗೆ ಕರಗಿ ಹೋಗಿದ್ಳು.

ಒಂದಿಷ್ಟು ತಿಂಗಳು ಕರವೀರನ ಕಣ್ತಪ್ಪಿಸಿ ಇವರಿಬ್ಬರ ಪ್ರೇಮ ಹಿತ ನೀಡಿತ್ತಾದರೂ ಸಮಾಜದ ಕಣ್ಣಿಗೆ ಇವರು ಹೇಗೆ ಕಾಣ್ತಿದ್ರು ಅನ್ನೋದನ್ನ ತಿಳಿಯೋದಕ್ಕೆ ಪಾರ್ವತಿಗೆ ಹೆಚ್ಚು ಟೈಮ್ ಬೇಕಾಗಲಿಲ್ಲ. ತಿಂಗಳೊಪ್ಪತ್ತಿನ್ಯಾಗ ಅವರಿಬ್ಬರ ಗುಟ್ಟು ರಟ್ಟಾಗಿತ್ತು. ಆರು ತಿಂಗಳು ಕಳೆಯೋ ಹೊತ್ತಿಗೆ ಪಾರ್ವತಿ ಮೂರು ತಿಂಗಳ ಬಸುರಿಯಾಗಿದ್ದಳು. ಮಗಳ ಈ ಬಸುರಿನ ಸುದ್ದಿಗೆ ಕರವೀರ ದಂಗಾಗಿ ಹೋಗಿದ್ದ, ಆ ಕ್ಷಣಕ್ಕೆ ಮಗಳ ಮ್ಯಾಗಿನ ಸಿಟ್ಟು ಧಗ ಧಗ ಹತ್ತಿ ಉರಿಯೋ ಬೆಂಕಿ ಆಗಿತ್ತು. ಆ ಉರಿಗೆ ಪಾರ್ವತಿ ಮೈ ಎಲ್ಲ ಹಣ್ಣಾಗಿ ಹೋಗಿತ್ತು.


ಸುದ್ದಿ ಇಮಾಮಸಾಬಿ ಕಿವಿಗೆ ಬಿದ್ದಿತ್ತು. ಮದುವೆ ಪ್ರಸ್ತಾಪಕ್ಕೆ ಮುಂದಾಗಿ ತನ್ನ ಧರ್ಮದವರ ಜೊತಿಗೆ ಜಗಳಾ ಮಾಡ್ಕೊಂಡು ಧರ್ಮದಿಂದ ಹೊರಗ ಇಡೋ ಫತ್ವಾ ಹೊರಡಿಸೋ ಮಟ್ಟಿಗೆ ಇವರಿಬ್ಬರ ಸುದ್ದಿ ನಾಕ ಮಂದಿ ಬಾಯಾಗ ಕುಣಿಯಾಕ ಹತ್ತಿತ್ತು. ಈ ನೆಂಟಸ್ತಿಕೆ ಕೂಡೋ ಸಾಧ್ಯತೆ ಇಲ್ಲ ಅನ್ನೋ ಅರಿವು ಕರವೀರನಿಗೆ ಇತ್ತಾದರೂ ಮುಂದೇನು? ಅನ್ನೋದು ಅವನ ಪ್ರಶ್ನೆಯಾಗಿತ್ತು. ಇಮಾಮಸಾಬಿ ಫತ್ವಾಗೆ ಹೆದರಲಿಲ್ಲ ಆದದ್ದ ಆಗ್ಲಿ ನಾ ಮದಿವ್ಯಾಗಾಕ ರೆಡಿ ಅಂತಂದು ಮದವಿ ಪ್ರಸ್ತಾಪ ಮಾಡಿದ್ದ. ಸಂಬಂಧಿಕರು ಬೀಗರು ಬಿಜ್ಜರನ್ನೆಲ್ಲ ಬಿಟ್ಟು ಇದ್ದ ಒಬ್ಬಾಕಿ ಮಗಳ ಮದವಿ ಮಾಡಿಸೂದು ಕರವೀರನಿಗೂ ಕಷ್ಟ ಆಗಿತ್ತು. ಹೇಳಿ ಒಪ್ಪಿಸುವ ಇರಾದೆ ಅಂವಗ ಇತ್ತಾದರೂ ಒಪ್ಪುವ ಮನಸ್ಥಿತಿ ಸಂಬಂಧಿಕರಿಗಿರಲಿಲ್ಲ. ಈ ಚಿಂತಿಯೊಳಗನ ದಿನ ದೂಡುತ್ತಿದ್ದ ಕರವೀರನಿಗೆ ಮಗಳು ಏಕಾಏಕಿ ಈ ರೀತಿ ಆತ್ಮಹತ್ಯೆಗೆ ಮುಂದಾಗಿದ್ದು ದೊಡ್ಡ ಹೊಡತ ಕೊಟ್ಟಿತ್ತು.

ಯಾರ ಮುಂದೂ ಹೇಳುವಂಗಿರಲಿಲ್ಲ ಮಾನದ ಪ್ರಶ್ನೆ ಅಲಾ, ಇನ್ನೂ ಮದುವ್ಯಾಗದ ಮಗಳು ಹೀಂಗ ಮದುವೆಗೆ ಮುಂಚೆ ಕದ್ದ ಬಸರಾಗೂದ ಅಂದ್ರ ಅದ ದೊಡ್ಡ ಸುದ್ದೀನ ಖರೆ. ಅಂತೂ ಮಗಳ ಹೊಟ್ಟೆ ಸೇರಿದ ವಿಷ ಅದಾಗಲೇ ಗರ್ಭದಲಿ ಅಂಕುರಿಸಿದ ಅವಳ ಕರುಳ ಕುಡಿಯನ್ನು ಕೊಂದು ಹಾಕಿತ್ತು. ಕೂಸು ಹಾಳಾಗಿ ಹೋಗಲಿ ಮಗಳು ಬದುಕಿದಳಲ್ಲ ಅನ್ನೋ ಸಮಾಧಾನದಿಂದ ಕರವೀರ ನಿಟ್ಟುಸಿರು ಹಾಕಿದ.


ಪಾರ್ವತಿಯನ್ನು ಅಷ್ಟು ಸರಳವಾಗಿ ಇಮಾಮಸಾಬಿ ಜೊತೆ ಮದುವೆ ಮಾಡಿಕೊಡ್ಲಿಕ್ಕೆ ಕೇರಿಯ ಜನ ಒಪ್ಪದೇ ಇರೋದಿಕ್ಕೆ ಕಾರಣಗಳಿದ್ದವು. ಆತ ಬೇರೆ ಜಾತಿಗೆ ಸೇರಿದವ, ಮೇಲಾಗಿ ಈಗಾಗಲೇ ಒಂದು ಮದುವೆಯಾದವ. ಒಬ್ಬಾಕಿ ಮ್ಯಾಲ ಮತ್ತೊಬ್ಬಾಕೀನ ಮದುವೆ ಮಾಡಿಕೊಳ್ಳಾಕ ಮುಂದ ಬಂದಾನ ಅಂದ್ರ ಇವಳನ್ನ ಚೆಂದ ನೋಡ್ಕೊಳ್ತಾನ ಅನ್ನೋ ಭರವಸೆ ಕೇರಿ ಜನಕ್ಕ ಇದ್ದಿರಲಿಲ್ಲ. ಆದ್ದ ಆಗ್ಲಿ ಕೇರಿ ಅಣ್ಣ ತಮ್ಮಂದ್ರು, ಬೀಗರು ಬಿಜ್ಜರನ್ನೆಲ್ಲ ತಿರಸ್ಕರಿಸಿ ಊರ ಬಿಟ್ಟು ಬ್ಯಾರೇ ಊರಿಗೆ ಹೋಗಿ ಕೂಲಿ-ನಾಲಿ ಮಾಡಿ ಬದುಕಿದರಾತು ಅನ್ಕೊಂಡು ಕರವೀರನೂ ಗಟ್ಟಿ ಮನಸ್ಸು ಮಾಡಿ ಊರಿಂದ ನಡು ರಾತ್ರಿ ಹೊಂಟ ನಡೆದಿದ್ದ. ಇಮಾಮಸಾಬಿಯ ಒಂದಿಷ್ಟು ಹಿರಿಯರು ಹಾಗೂ ಈ ಮಂಜನ ಹಿರಿತನದಲ್ಲೇ ಅವರಿಬ್ಬರ ಮದುವೆ ಮಾಡಿ ಬಿರಿಯಾನಿಯೊಂದಿಗೆ ಮಾತುಕತೆ ಮುಗಿದುಹೋಗಿತ್ತು.

ಇದೆಲ್ಲ ಮೊದಲ ಗೊತ್ತಿದ್ದ ಸಲುವಾಗೇನ ಮಂಜು ಅಕೀನ ದವಾಖಾನಿಗೆ ಅಡ್ಮಿಟ್ ಮಾಡಿಸಿ ಸಾಯೋ ಜೀಂವಾ ಬದುಕುಳಿಸಿದ್ದ. ತಾಯಿ ಕಳೆದುಕೊಂಡು ಅಣ್ಣ ತಮ್ಮರಿಲ್ಲದ ತಬ್ಬಲಿಯಾದ ಪಾರ್ವತಿಯ ಪಾಲಿಗೆ ಅವನೇ ಅಣ್ಣ ಆಗಿದ್ದ. ಆದರೂ ಇದ್ಯಾವುದನ್ನೂ ಮಂದಿ ಮುಂದ ಹೇಳದ ಎದ್ಯಾಗ ಮುಚ್ಚಿಟ್ಕೊಂಡು ಹೆಂಗಾದ್ರೂ ಆಗಲಿ ಪಾಪ ಆ ಹೆಣ್ಣ ಜೀವ ಎಲ್ಲಾದರೂ ಸರಿ ಬದುಕಲಿ ಅಂತ ಅವಳನ್ನು ಮದುವೆ ಮಾಡಿಸಿದ ಸಮಾಧಾನದಿಂದಲೇ ಮನೆಗೆ ಮರಳಿದ್ದ. ಆಮೇಲೆ ಅವರ ಗೋಜಿಗೆ ಹೋಗುವ ಪ್ರಯತ್ನವನ್ನೂ ಮಂಜ ಮಾಡಿರಲಿಲ್ಲ. ಪಾರ್ವತಿಯೂ ಅಷ್ಟೇ ತನ್ನ ತಂದೆ ಕದ್ದು ಮುಚ್ಚಿ ತನ್ನನ್ನು ಭೇಟಿ ಮಾಡುವುದಕ್ಕೆ ಬಂದಾಗಲೆಲ್ಲ ಮಂಜಣ್ಣನ ಯೋಗಕ್ಷೇಮ ವಿಚಾರಿಸುತ್ತಿದ್ದಳು. ಒಂದರ್ಥದಲ್ಲಿ ಮಂಜ ಅವಳಿಗೆ ಸ್ವಂತ ಅಣ್ಣನಂತಾಗಿ ಹೋಗಿದ್ದ.

ಕರವೀರನೇ ಆಗಾಗ್ಗೆ ಪಾರ್ವತಿಯನ್ನು ಭೇಟಿ ಮಾಡಲು ಹೋಗುತ್ತಿದ್ದ. ಎರಡು ವರ್ಷಗಳವರೆಗೂ ಪಾರ್ವತಿಯ ಸುದ್ದಿ ವಿವಾದವಾಗಿಯೇ ಇತ್ತಾದರೂ ಅವಳು ಓಡಿ ಹೋದವನೊಂದಿಗೆಯೇ ಮದುವೆಯಾಗಿದ್ದಾಳೆಂಬ ಗುಮಾನಿಯಲ್ಲಿ ಊರಿನ ಜನ ಸುಮ್ಮನಾಗಿದ್ದರು. ಅವಳಿಗಾಗಿ ಮರಗುತ್ತಿದ್ದ ಅದೇಷ್ಟೋ ಹೆಣ್ಣುಮಕ್ಕಳು ಅವಳ ಈ ಕೆಲಸವನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿರಲಿಲ್ಲ. ಹೀಗೆ ಒಂದಿಷ್ಟು ವರ್ಷ ಕೇರಿಯಿಂದ ದೂರವಾಗಿದ್ದ ಪಾರ್ವತಿ ಎಲ್ಲೋ ಒಂದು ಕಡೆ ಸುಖವಾಗಿರಬಹುದು ಎಂದುಕೊಂಡಿದ್ದ ಮಂಜನಿಗೆ ಮತ್ತೊಂದು ಆಘಾತ ಎದುರಾಗಿತ್ತು. ಇತ್ತ ಗಂಡನೊಂದಿಗೆ ಹೊಂದಿಕೊಂಡಿರಲಾರದೇ ಅವರ ಮನೆಯವರಿಂದಲೇ ಕೇವಲವಾದ ಮಾತುಗಳನ್ನು ಕೇಳುತ್ತ ಅಲ್ಲಿನ ಸಮಾಜದವರ ಕೆಂಗಣ್ಣಿಗೆ ಗುರಿಯಾದ ಪಾರ್ವತಿ ನಿತ್ಯವೂ ನರಕಯಾತನೆ ಅನುಭವಿಸುತ್ತಿದ್ದಳು. ಹೇಗೋ ಒಂದು ಸಲ ಕಾಮಕ್ಕೆ ಜಾರಿದ ಸೆರಗಿಗೆ ಬೆಂಕಿ ಹೊತ್ತಿಕೊಂಡೇ ಬಿಟ್ಟಿರುವುದು ಅವಳ ಗಮನಕ್ಕೆ ಬರುವುದಕ್ಕೆ ಹೆಚ್ಚು ಹೊತ್ತು ಬೇಕಾಗಲಿಲ್ಲ.


ಈ ಹದಿವಯಸ್ಸೇ ಹೀಗೆ ಕುಣಿಸುತ್ತೇ ಕುಣಿಸುತ್ತೇ ಕೊನೆಗೊಮ್ಮೆ ಸುಸ್ತು ಮಾಡಿ ನೆಲಕ್ಕುರುಳಿಸುತ್ತೇ. ಅದರ ತಾಳಕ್ಕೆ ಕುಣಿಯದೇ ಸಂಸ್ಕೃತಿ, ಆಚಾರ, ವಿಚಾರದತ್ತ ಗಮನಹರಿಸಿ ನಯ ವಿನಯದಿಂದ ಬಾಳ್ವೆ ಮಾಡುವುದು ಅನಿವಾರ್ಯವಾದ ಹೆಣ್ಣಿನ ಮನಸ್ಥಿತಿಗೆ ಕಾಮದ ಕೆಂಗಣ್ಣು ಬರಸೆಳೆಯುತ್ತದೆ. ಕ್ರಮೇಣ ಕಾಮದ ಕೆಂಡ ತನ್ನ ಇಡೀ ದೇಹ ಮತ್ತು ಮನಸ್ಸನ್ನು ಸುಡುವ ಸಾರ್ವಕಾಲಿಕ ಸತ್ಯ ಪಾರ್ವತಿಗೆ ಅದಾಗಲೇ ಅರಿವಾಗಿತ್ತು. ಅದಾಗಲೇ ಪಾರ್ವತಿ ಸಂಶಯದ ಭೂತದಿಂದ ಗಂಡನಿಗೂ ಬೇಡವಾಗಿ ಹೋಗಿದ್ದಳು. ಸಮಾಜದಲ್ಲಿ ಓಡಿ ಬಂದವಳನ್ನು ನೋಡುವ ಪರಿಯೇ ಬೇರೆ ಇದೆ. ಈ ಕೆಟ್ಟ ದರಿದ್ರ ಸಮಾಜದಲ್ಲಿ ತನ್ನಿಡೀ ಜೀವನ ಸವೆಸುವುದು ಪಾರ್ವತಿಗೆ ಇಷ್ಟವಾಗಲಿಲ್ಲ. ಪಾರ್ವತಿ ಇದೆಲ್ಲದರಿಂದ ಮುಕ್ತಿ ಪಡೆಯುವ ಯೋಚನೆಯಲ್ಲಿ ಮಗ್ನಳಾದಾಕೆ.

ಮನೆಗೆ ಹೋಗಲೂ ಬಾರದ ತಂದೆಗೆ ಮುಖ ತೋರಿಸಲೂ ಆಗದ ಗಂಡನೊಂದಿಗೂ ಹೊಂದಿಕೊಂಡಿರಲಾರದ ಮನಸ್ಥಿತಿಯಲ್ಲಿರುವ ಪಾರ್ವತಿ ತುಂಬ ನೊಂದು ಹೋಗಿದ್ದಳು. ಮಂಜನಿಗೆ ಕೊನೆಯ ಬಾರಿ ಫೋನಾಯಿಸಿ ನನಗೆ ಈ ಗಂಡ ಮದುವೆ ಇದೆಲ್ಲವೂ ಬೇಡವಾಗಿವೆ. ಅಣ್ಣಾ ದಯಮಾಡಿ ನನ್ನ ಇಲ್ಲಿಂದ ಬಿಡಿಸಿ ಪುಣ್ಯ ಕಟ್ಟಿಕೋ ಮುಂದೆಂದೂ ನಾ ನಿನ್ನ ಕಾಡಲಾರೆ. ಎಲ್ಲಾದರೂ ದೂರ ಹೋಗಿ ದುಡಿದು ಒಬ್ಬಂಟಿಯಾಗಿಯೇ ಬದುಕುವೆ ಎಂದು ಕೇಳಿಕೊಂಡಳು. ಇಷ್ಟೆಲ್ಲಾ ಸಹಾಯ ಮಾಡಿದ ಮಂಜ ಇದೊಂದು ಬಾರಿ ಕೊನೆಯದಾಗಿ ಸಹಾಯ ಮಾಡುವೆನೆಂದುಕೊಂಡು ಅವಳ ಗಂಡನನ್ನು ಕರೆಯಿಸಿ ಇಬ್ಬರಿಗೂ ಬುದ್ದಿ ಹೇಳಿ ಒಂದಾಗಿಸಲು ನೋಡಿದ. ಈತನ ಪ್ರಯತ್ನಗಳೆಲ್ಲ ವಿಫಲವಾಗುವ ಲಕ್ಷಣಗಳು ಗೋಚರಿಸಿದ್ದರಿಂದಲೇ ಇಬ್ಬರಿಗೂ ತಾನೆ ಮುಂದೆ ನಿಂತು ಒಂದಿಷ್ಟು ಹಿರಿಯರ ಸಮಕ್ಷಮದಲ್ಲಿ ತಲಾಖ್ ಕೊಡಿಸಿಯೇ ಬಿಟ್ಟ.

ಸಮಾಜದಲ್ಲಿ ಆಕೆ ಮಾಡಿದ ತಪ್ಪು, ಸಮಾಜ ಆಕೆಯನ್ನು ನೋಡುವ ರೀತಿ ಆ ಅವಮಾನ, ನಿಂದನೆಗಳು ತೀರಾ ಅವಳನ್ನು ಘಾಸಿಗೊಳಿಸಿತ್ತಾದರೂ. ಸಂಶಯಿಸುವ ಗಂಡ ಅನ್ನೋ ಪ್ರಾಣಿಯಿಂದ ಮುಕ್ತಿ ಸಿಕ್ಕರೆ ಸಾಕು ಎಂದು ತನ್ನ ಗಂಡನಿಂದ ನಯಾಪೈಸೆ ಜೀವನಾಂಶವನ್ನೂ ಪಡೆಯದೇ ಅತೀ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗದೇ ತಲಾಖ್ ಪಡಕೊಂಡ ಪಾರ್ವತಿ ಆ ಕ್ಷಣಕ್ಕೆ ಬೇಟೆಗಾರನಿಂದ ತಪ್ಪಿಸಿಕೊಂಡ ಜಿಂಕೆಯಂತಾಗಿದ್ದಳು. ಅವಳ ಜೀವನದಲ್ಲಿ ನಡೆದ ಈ ಎಲ್ಲ ಘಟನೆಗಳೂ ಒಂದೊಂದು ಅಧ್ಯಾಯವೆಂದುಕೊಂಡು ಈ ಅನುಭವಗಳನ್ನು ಮೆಲುಕು ಹಾಕುತ್ತಲೇ ತಂದೆ ಕರವೀರನಿಗೆ ಕಾಲಿಗೆ ಬಿದ್ದು ತಬ್ಬಿ ಕಣ್ಣೀರು ಹಾಕುತ್ತಲೇ ತನ್ನ ಈ ಬಿಡುಗಡೆಗೆ ಶ್ರಮಿಸಿದ ಖಾಸ ಅಣ್ಣನಂತಿರುವ ಮಂಜನಿಗೆ ಮನದಲ್ಲೇ ನಮಿಸಿ ಪಾರ್ವತಿ ತುಂಬಾ ದೂರ ದೂರ ನಡೆದಳು. ನಡೆದಂತೆಲ್ಲ ಅವಳೆದೆಗೆ ಬಡಿವ ಅವಳ ಕೊರಳ ಮಾಂಗಲ್ಯ ಎದೆಗೆ ಚುಚ್ಚುವ ಭರ್ಚಿಯಂತೆ ಭಾಸವಾಗುತ್ತಿತ್ತು. ಬರಿಗಾಲಲ್ಲೇ ದೂರದ ಹಾದಿ ನಡೆಯುತ್ತ ನಡೆಯುತ್ತ ಹೊರಟ ಪಾರ್ವತಿ ಸೂರ್ಯ ತನ್ನವ್ವನ ಮಡಿಲಿಗೆ ಜಾರುವಷ್ಟರಲ್ಲಿ ಯಾರಿಗೂ ಕಾಣದಂತೆ ತುಂಬ ದೂರ ಹೋಗಿದ್ದಳು. ಆ ಕ್ಷಣಕ್ಕೆ ಈ ತಲಾಖ್ ಅವಳನ್ನು ಬದುಕಿಸಿತ್ತು.

ಸಿದ್ರಾಮ ತಳವಾರ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x