ಪಂಜು ಕಾವ್ಯಧಾರೆ

“ಹೊಲಿಗೆಯ ದರ್ಜಿಯವಳು ಬೇಕು”

ಅಲ್ಲಲ್ಲಿ ಹರಿದ ಹೆಗಲುಗಳಿಗೆ ತೇಪೆ ಹಾಕಿ
ಜೋಳಿಗೆಯ ಕಟ್ಟಿ ತಂಬೂರಿ ಕೊಟ್ಟು
ಕನಸು ಮನಸಿನ ಆಳ ಅರಿತು
ಮನಸುಗಳ ಬೆಸೆಯುವವಳು
ಬೇಕು ಯುವ ಕನಸುಗಳ ವ್ಯಾಖ್ಯಾನಿಸುವವಳು

ವಿಶ್ವದ ಪೊರೆಬಿದ್ದ ಕಣ್ಣಿಗೆ
ಪೊರೆಯ ತೆಗೆದು ಸತ್ಯಪ್ರೇಮವ ಸೃಷ್ಟಿಸುವವಳು
ಉಸಿರಿಗೆ ಹಸಿರಾಗಿ ಹೃದಯಗಳಿಗೆ
ಪ್ರೇಮದ ರಕ್ತವ ಬಸಿಯುವವಳು
ಕೋಮು ಪಾಶಾಂಡದ ಬೇರ
ಚಿವುಟಿ ಬೆಂಕಿಗಾಹುತಿ ಕೊಡುವವಳು
ಬೇಕು ವಿಶ್ವದ ಓಜೋನ್ ತೇಪೆಯ ಹೊಲಿಯುವವಳು

ತಲ್ಲಣಗೊಂಡ ಯುವ ಮನಸುಗಳ
ವಿದಾಯ ಕೇಳಿಸಿಕೊಂಡ ಕನಸುಗಳ
ವಿಚಾರ ಕ್ರಾಂತಿಯ ನಡೆಸಿ ಮನವ ಬಲಪಡಿಸುವವಳು
ಸೂರೆಗೊಂಡ ಕನಸುಗಳ ಬಿಡಿಸಿ
ಆ ಮನಗಳಿಗೆ ಪ್ರೇಮದ ಕೌದಿಯ ಹೊಲಿಯುವವಳು
ಬೇಕು ಸ್ನೇಹದೊಲಿಗೆಯ ಹಾಕುವವಳು

ಸರ್ವಾಧಿಕಾರಿಯ ಆದೇಶದಂತೆ
ಸುಟ್ಟ ದೇಹಗಳಿಗೆ
ಬಿಳಿ ಕೌದಿಯ ಹೊಲಿದು
ವಿಶ್ವ ಶಾಂತಿಯ ಪಸರಿಸುವವಳು
ಗೋವಿಂದ-ಶರೀಫರ ಬಾಂಧವ್ಯದ
ಕೌದಿ ಹೊಲಿದು ಗುರುಶಿಷ್ಯ ಪರಂಪರೆಯ ಸಾರುವವಳು
ಬೇಕು ಹೊಲಿಗೆಯ ದರ್ಜಿಯವಳು
ನಾಡ ಕೋಮುವಿನಿಂದ ಮುಕ್ತಗೊಳಿಸುವವಳು

ಟಾರು-ಡಾಂಬರು ರಸ್ತೆಗಳ ಗುಂಡಿಗೆ
ಬಿದ್ದು ಸಾಯುವ ಜನರ ತಪ್ಪಿಸುವ
ಟಾರು ರಸ್ತೆಗಳಿಗೆ ಕೌದಿಯ ಹೊಲಿಯುವವಳು
ಮೂಲ ಜನರ ದಿಕ್ಕುತಪ್ಪಿಸಿ
ಮೂಲ ಇತಿಹಾಸವ ತಿರುಚಿ ಹರಚುವವರ
ಬಾಯಿಗೆ ಕೌದಿಯ ಹೊಲಿಯುವವಳು
ಬೇಕು ಹೊಲಿಗೆಯ ದರ್ಜಿಯವಳು
ಮನಸು ಮನಸುಗಳ
ಪ್ರೇಮದ ಕೌದಿಯ ಹೊಲಿದು ಬೆಸೆಯುವವಳು

-ಶ್ರೀಧರ ಜಿ ಯರವರಹಳ್ಳಿ

ಬೊಜ್ಜು- ಊರಮಾಂಸ

ರಾತ್ರಿ ಕಳೆದು ಬೆಳಗಾಗುವ ವೇಳೆಯಲಿ
ಕಡಲ ಮರಳಲಿ ಬಿಳಿ ವಸ್ತ್ರವ ಉಟ್ಟು
ದೇಹವ ಕರಗಿಸಿ ಹಲವು ಕಾಲ ಬಾಳಲು
ಮೂಟೆ ಹೊರುವ ಕತ್ತೆಯಂತೆ
ಏದುಸಿರು ಬಿಟ್ಟು ಹೊಟ್ಟೆಯ ಬೊಜ್ಜನ್ನು ಹೊತ್ತು ಸಾಗುವ
ಮನುಷ್ಯ – ಪಿಶಾಚಿಯೇ! ನಿಲ್ಲು.

ನಿನ್ನೊಡಲು ಕರಗದು ಪ್ರಾಣ ನೆಲೆಯಾಗಿರದು
ನಿನ್ನ ಒಡಲಲಿ ಹರಿವ ರಕ್ತ ಬೀದಿಯ ಬದಿ ಹರಿವುದು
ಬಡಕಲು ದೇಹ ಎಲುಬು ಗೂಡುಗಳಿಗೆ ಸೇರಿದ್ದು
ನಿನ್ನೊಡಲಲಿ ಜೀರ್ಣವಾಗದ ಆಹಾರ
ಹಲವು ಕೋಟಿ ಹಸಿವಿನ ಪರಾರಿಗಳಿಗೆ –
ಉಣ್ಣದ ಉಣಿಸು (ಆಹಾರ)
ನಡೆದರೆ ಪ್ರಯೋಜನವಿಲ್ಲ ನಡತೆಯ ಬದಲಿಸು

ತಮಿಳು ಮೂಲ: ಕಣ್ಣನ್‌ ಅಗಿಲನ್‌
ಅನುವಾದ : ಡಾ. ಮಲರ್‌ ವಿಳಿ. ಕೆ

ಕ್ಷಮಿಸಿ ಬಿಡಿ…..

ನಾನು ಕವಿತೆಗಳನ್ನು ಬರೆಯುವುದನ್ನೇ ನಿಲ್ಲಿಸಿದ್ದೇನೆ, ಸಾರ್
ಕಾರಣ ಮಾತ್ರ ಕೇಳಬೇಡಿ
ಈ ಕವಿತೆಗಳಿಗೂ ಜನಪ್ರಿಯತೆಯ ಗೀಳು ಹತ್ತಿದೆ!

ಮಾನವೀಯತೆ ಬೆತ್ತಲಾಗಿ ನರಳುವಾಗ
ಅಕ್ಕರೆಯನ್ನರಿಯದ ಬರಿ ಅಕ್ಷರಗಳ ಭಾರ-ಹೊತ್ತ ಈ ಕವಿತೆಗಳು
ಸಭೆ ಸಮಾರಂಭಗಳಲ್ಲಿ ಹಾರ-ತೂರಾಯಿ, ಶಾಲು ಹೊದ್ದು ಮೆರೆಯುವ ಕಾತರದಲ್ಲಿವೆ
ಕಾರಣ ಮಾತ್ರ ಕೇಳಬೇಡಿ
ಈ ಕವಿತೆಗಳಿಗೂ ಜನಪ್ರಿಯತೆಯ ಗೀಳು ಹತ್ತಿದೆ!

ಬತ್ತಿದ ಭಾವಿಗಳಂತಾದ ಮನಸ್ಸುಗಳ ಆಳಕ್ಕಿಳಿದು
ಪ್ರತಿಧ್ವನಿಸಿ ಮೊಳಗಬೇಕಿದ್ದ ಕವಿತೆಗಳು
ಸ್ಮಶಾನದೊಳಗಿನ ಆಯಾತಾಕಾರದ ಗೋರಿಗಳ
ಗುರುತಿನ ಕಲ್ಲುಗಳಂತೆ ಪ್ರದರ್ಶಿಸಲ್ಪಡುತ್ತಿವೆ
ಕಾರಣ ಮಾತ್ರ ಕೇಳಬೇಡಿ
ಈ ಕವಿತೆಗಳಿಗೂ ಜನಪ್ರಿಯತೆಯ ಗೀಳು ಹತ್ತಿದೆ!

ಅರೆ ಬೆತ್ತಲೆಯ ಕೂಲಿಯಾಳುಗಳ ಕೂಗಾಗ ಬೇಕಿದ್ದ ಈ ಕವಿತೆಗಳು
ಸೂಟು-ಬೂಟಿನವರ ಅಡಿಯಾಳುಗಳಾಗಿ ಹುಸಿ ಬೀಗುತಿವೆ ಲೌಡ್ ಸ್ಪೀಕರ್ ಗಳಲ್ಲಿ
ಕಾರಣ ಮಾತ್ರ ಕೇಳಬೇಡಿ
ಈ ಕವಿತೆಗಳಿಗೂ ಜನಪ್ರಿಯತೆಯ ಗೀಳು ಹತ್ತಿದೆ!

ಕೆಂಪು ಕ್ರಾಂತಿಗೆ ನಾಂದಿಹಾಡಲು ಒಡಲ ಕಿಚ್ಚಾಗಬೇಕಿದ್ದ ಈ ಕವಿತೆಗಳು
ಹಣತೆಗಳಡಿಯ ಕತ್ತಲೆಯಾಗಿದೆ
ಕಾರಣ ಮಾತ್ರ ಕೇಳಬೇಡಿ
ಈ ಕವಿತೆಗಳಿಗೂ ಜನಪ್ರಿಯತೆಯ ಗೀಳು ಹತ್ತಿದೆ!

ಅದಕ್ಕೆ ನಾನು ಕವಿತೆಗಳನ್ನು ಬರೆಯುವುದನ್ನೇ ನಿಲ್ಲಿಸಿದ್ದೇನೆ,
ದಯವಿಟ್ಟು ನನಗೆ ಕ್ಷಮಿಸಿಬಿಡಿ ಸಾರ್,
ನನಗೆ ಕ್ಷಮಿಸಿ ಬಿಡಿ.

-ಶಕೀಲ್ ಉಸ್ತಾದ್, ಹಟ್ಟಿ ಚಿನ್ನದ ಗಣಿ.

ಕಾವ್ಯ

ಭುವಿಗೆ ಬಿದ್ದ ಬೀಜದ
ಎದೆಯೊಳಗೆ ಅವಿತ
ತೇವವಿದು ಕಾವ್ಯ
ಮುಗಿಲ ಮನದಲಿ
ಮೂಡಿದಂತ ಮೊದಲ
ನಕ್ಷತ್ರವಿದು ಕಾವ್ಯ

ಜನನ ಮರಣದ
ಸ್ಮರಣಕಾಲಕೆ ಸ್ಪುರಿಸುವ
ಭಾವವಿದು ಕಾವ್ಯ
ಅಳಿವು ಉಳಿವು ನೋವು ನಲಿವು
ನರಳುವಲ್ಲಿ ಅರಳುವಲ್ಲಿ
ನಿತ್ಯ ನವ್ಯವಿದು ಕಾವ್ಯ

ಹೃದಯ ಹಾಡುವ
ಗಾನಲಹರಿಗೆ ಜಾಗ ನೀಡುವ
ಜೀವನಾನುಭವವಿದು ಕಾವ್ಯ
ಜೀವ ಜೀವಗಳ ಜೀವನಗಳ
ನರನಾಡಿಯಲ್ಲಿ ನವಿರಾಗಿ
ಬೆರೆತಿರುವದು ಕಾವ್ಯ

ಸಂಜೆಯ ಹಾದಿಗೆ ರಾತ್ರಿಯ ಕನಸಿಗೆ
ಬೆಳಗಿನ ಬೆರಗಿಗೆ
ಸೆಳೆತವಿದು ಕಾವ್ಯ
ಕೊಳೆತ ಮನಸುಗಳಲಿ
ಮೊಳಕೆ ಕಾಳುಗಳಿಗೆ
ಮನೆಯಾಗುವದು ಕಾವ್ಯ

ಅಂತರಂಗದ ಅಂದದರಮನೆ
ಗುಡಿಸಲ ಗುಲಾಬಿ
ಹರಿದ ಬಟ್ಟೆಯಿದು ಕಾವ್ಯ
ಬೀದಿಯ ಬದಿಯಲಿ
ಕಾಲು ದಾರಿಯಲಿ
ಕೈಹಿಡಿಯುವದು ಕಾವ್ಯ.

-ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ

ಶೂರ್ಪನಖಿ
ವಿಧಿಲಿಖಿತ ಕುರೂಪ ಶಾಪ
ಮರೆಸಿದೆ ಬಲದ ಧೀಮಂತ ಅಸ್ಮಿತೆಯಲ್ಲಿ
ಅಳುಕದೆ ಬಾಳಿ

ರಸಘಳಿಗೆ ಬೆಳಕು ವಿಶ್ರಮಿಸಿದ ಬಳಿಕ
ಕೇಳುರ‍್ಯಾರು ಅಂದ ಚೆಂದ?
ಸರ್ವಾಧಿಕಾರ ಬೆತ್ತಲಾಗಿ ಪಾತಾಳ ಬೀದಿತುಂಬ
ಹರಿದು ಹೋಯಿತು ತೋಷ ರುಧಿರ ರಾತ್ರಿ
ಸಾವಿರದ ದಂಡು ಮೂರು ತಲೆ ನೂರು ಕೈ
ಬೆನ್ನ ಹಿಂದೆ ಕ್ಷಿತಿಜ ಕಾಣದ ದಂಡಕ
ಬಯಸಿದ್ದು ಭೋಗ ದೊರೆತಿದ್ದು ಅತ್ಯಾಚಾರ

ದಂಡವಿಡಿದು ಬಂದವರು ಕನಸಿನೆಲೆಮನೆಯ ಕಟ್ಟಿ
ಬಯಕೆ ಬಳ್ಳಿಗೆ ಆಸರೆಯ ತರುವಿತ್ತು
ನಂಬಲಿಲ್ಲ ಹಣೆಯಿತ್ತರೆ ವಿಧಿ ಬರಹ ಅಳಿಸಲೆಂತು
ಅಂಗೈ ಬಳಸಿದರೆ ಸ್ವಕೃತ ತಿರುಗು
ಅಕ್ಷರದರಿವಿಲ್ಲದವಳಿಗು ಬೆನ್ನು ಅನುಮಾನ ಬಾಹಿರ

ಬೆನ್ನ ಹಿಂದೆ ಕತ್ತಲಲಿ ಇರಿದ ಒಡಹುಟ್ಟಿದವನ ಮೋಸ
ವೈಧವ್ಯ ಮತ್ತೆ ಕಾಡಿಗೆ ತಳ್ಳಿದ ಮೋಸ
ನೆರಳುಗಳ ಹಿಂದಿಟ್ಟು ಮೋಸ ಈಗ
ಕನಸ ಕುವರ ಬೆನ್ನಿಗೆ ಬರೆದ ಮೋಸ
ಹೆಣ್ಣ ಕುರೂಪಿಯಾಗಿಸುವುದೆ ಪುರುಷ ಜಗ ಮೋಸ
ಬಂಧುಗಳೆ ಕೇಳಿ
ಬೆನ್ನ ಹಿಂದಿನ ಬರಹ
ನಮಗೆ ನಿತ್ಯ ಮೋಸ

-ಟಿ.ಎಂ.ರಮೇಶ

ದಾರಿ

ಹಬ್ಬಿದ್ದ ಹಳುಗಳನ್ನು ಕತ್ತರಿಸಿ ಮುಂದಡಿ ಇಡುತ್ತಿದ್ದಂತೆ,
ಒಂದೊಂದೇ ಹೆಜ್ಜೆಗಳು ಮೂಡಿ
ಬಯಲಾದ
ಜಾಗಕೆ ದಾರಿ ಎಂದು ಹೆಸರಿಟ್ಟರು,

ಜೊತೆಗೆ ನಡೆದ ಜೀವವೊಂದು ಜೊತೆಯಾಗಿ
ಪ್ರೀತಿ-ಗೀತಿ ಏನೋ ಒಂದು ನೆಪವಾಯಿತು
ಮನಸುಗಳ ನಡುವೆಯೊಂದು ಸೇತುವೆ
ಮಾತು,ಮೌನ,ಕನಸು ಕನವರಿಕೆಯ ಬೆಸೆದವು.

ಬಿಗಿದಪ್ಪಿದ ಮೋಡವನು ಹೊತ್ತೊಯ್ದ ಗಾಳಿ,
ನಿನ್ನ ನೆನಪನಷ್ಟೆ ಉಳಿಸಿ ಹೊರಟು ನಿಂತಿತು
ನಿನ್ನನ್ನೇ ಧ್ಯಾನಿಸಿದ ಕಣ್ಣುಗಳು ಅರಸುತಿವೆ
ಪ್ರೀತಿಯ ಧೂಳು ಆವರಿಸಿದ ಹೆಜ್ಜೆ ಜಾಡು.

ತೊರೆದು ಹೋದ ಹಾದಿಯೂ,
ಮರಳಿ ಬರುವ ದ್ವಾರವನ್ನೂ
ಮುಕ್ತವಾಗಿಸಿರುವುದ ನೆನೆದು
ಮತ್ತೆ ನೆನಪುಗಳಲಿ ಜಾರುತ್ತೇನೆ…

-ರಮೇಶ್ ನೆಲ್ಲಿಸರ

ಇರುವವರಲ್ಲಿ ನಮ್ಮವರಾರು??

ಎಷ್ಟೊಂದು ದಿಗುಡಗಳ ಮಧ್ಯೆಯೂ
ರಾತ್ರಿಯನ್ನು ಅರೆಗಣ್ಣಿನಲ್ಲಿ ಕಳೆದಾಗ
ಸೂರ್ಯೋದಯವೇ ಬೆಚ್ಚಿ ಬೀಳಿಸಿತ್ತು
ಮನುಕುಲವ ಮತ್ತೆ ಮಲಗಲು ಹೇಳಿತ್ತು

ರಕ್ತ ಈಗ ಹೆಪ್ಪುಗಟ್ಟುತ್ತಿದೆ
ಇಪ್ಪತ್ತು ವರ್ಷಗಳಿಂದ ಕುದಿಯುತ್ತಿತ್ತು
ತಂಪಾಗುವ ಹೂತ್ತಿಗೆ ಉರಿ ಹತ್ತಿತು
ಬಾನ ತುಂಬೆಲ್ಲಾ ಮೋಡ ಕವಿದಿದೆ
ಹೆಂಗಳೆಯರ ಕೂಗು ಅಲ್ಲಿ ಹುದುಗಿದೆ??

ಪ್ರಾಣ ಭಯಕ್ಕಿಂತ ಮತ್ತೊಂದು ಭಯವೇ?
ಗುಂಡಿಗೆ ಅಷ್ಟೊಂದು ಧೈರ್ಯವಿದೆಯಲ್ಲಾ!
ಮುಸುಕು ಹಾಕಿಕೊಂಡು
ಕಂಡ ಕಂಡಲ್ಲೆಲ್ಲಾ.. ನುಗ್ಗುತಿಹರು
ಸಿಕ್ಕ ಸಿಕ್ಕವರನ್ನೆಲ್ಲ ತುಳಿಯುತಿಹರು
ನಾಳೆಯ ಚಿಂತೆಯೇ ಬೇಡ
ಇಂದು ಉಳಿದರಷ್ಟೇ ಸಾಕು!

ಇನ್ನೆಲ್ಲಿಯ ಪ್ರಜಾಪ್ರಭುತ್ವ
ದೇಶವನ್ನೇ ನುಂಗುತಿರುವ ರಾಜಕಾರಣಿಗಳ
ಅಜಾಗರೂಕತೆಯಿಂದ
ಈಗ ಬುಲ್ಲೆಟ್ಸು, ಬಾಂಬ್ಸು ಮಾತನಾಡುತ್ತಿವೆ
ಭಗವದ್ಗೀತೆ ಇವರ ಕಿವಿಗಳಿಗೆ ನಾಟುವುದೇ ಇಲ್ಲ
ನಮ್ಮುಗಳ ಮಧ್ಯೆ ನಮ್ಮವರನ್ನೇ ಹುಡುಕಬೇಕಿದೆ
ಇಂದು ನಮ್ಮವರು
ನಾಳೆ ನಾವು
ನಂತರ ಎಲ್ಲವೂ ಶೂನ್ಯ

ಮಕ್ಕಳು ಮರಿಗಳೆನ್ನದೆ
ನಾಲ್ಕು ಜನ ಕೇವಲ ಇಬ್ಬರ ಮುಂದೆ
ಎದೆಯೊಡ್ಡಿ, ತೊಡೆ ತಟ್ಟಿ
ನಿಲ್ಲಬೇಕಿದೆ ಸಾವನ್ನೂ ಹಂಗಿಸಿ
ಆಗ ಮಾತ್ರ ಬಿಡುಗಡೆ
ಪ್ರಾರ್ಥನೆಯಿಂದ ಭರವಸೆಯೊಂದೇ ಸಿಗುವುದು
ಗೆಲುವಲ್ಲ!!

-ಅನಂತ ಕುಣಿಗಲ್

‘ನಾನಾಡ ಮಾತ ಲಾಲೈಸಿ ಕ್ಯೋಳಿ’
ವಸುಂಧುರಯೆಂಬ ಸುಂದರ ಕೊಟ್ಟಿಗೆಯೊಳಗೆ
ಜೀವಾಶಿಗಳು ನಾವು: ಕುರಿಗಳು
ಕಾಯುವವಳೊಬ್ಬಳು ಮಾತೆ ಹಕ್ಕಿಯ
ಪಿಕ್ಕೆಯೊಳಗ್ಹುಟ್ಟಿದವಳು: ಪ್ರಕೃತಿ
ಬೆಟ್ಟ-ಗುಡ್ಡ ನದಿ-ಕೆರೆ
ಮೊಲೆಹಾಲು: ಜೀವ ಚೈತನ್ಯ
ಹಸಿರುಹುಟ್ಟು ಜೀವ ತಳೆದ ಕಾವ್ಯ, ಮರವಾಗಿ-
ಹೆಮ್ಮರವಾಗಿ ಹೆಮ್ಮರವಾಗಿಹುದು: ಪ್ರೇಮ
ಅಂದಿನಿಂದ ಇಂದಿನವರೆವಿಗೂ ಒಂದೇ ಹಾಡು: ಸತ್ಯ


ಈಗ
ಆ ಹಾಡು, ಹಾಡುತ್ತೇನೆಂದರೆ: ಕೊಲ್ಲುವರು.
ಸತ್ಯ ಸಾರುವ ಜೀವಗಳನು ಕೊಲ್ಲುವುದ ಬಿಟ್ಟು
ಬೇರೇನು ಮಾಡಿಯಾರು!
ಹೇಳಿ ಬಿಡುತ್ತೇನೆ ತಡಿರಿ: ಸತ್ಯ.
ತಾಯಿಗೆ ಮಾತ್ರ ಎರೆಡೆರೆಡು ಹೃದಯ: ನವಮಾಸ ಧ್ಯಾನ.
ಹಸಿದ ಹೊಟ್ಟೆಗಳೆಷ್ಟೋ ಇಲ್ಲಿ ನೆಲೆಕಚ್ಚಿದವು: ಬಡತನ.
ಸಮುದ್ರದ ನಂಟು ಕಳಕೊಂಡ ಉಪ್ಪಾರ: ಅಂತೆಯೇ ನೂರಾರು ಕುಲಕಸುಬು!

ಈವಾಗಲೀಗ,
ರಕ್ಕಸನ ಕೊಂದುಳಿದವಳ ಮೈಯೆಲ್ಲಾ ಊನಾಗಿ;
ಕಪನಿಯ ನಡುಮಧ್ಯೆ ಸಿಕ್ಕವಳ-
ಪ್ರಾಣ ಉಳಿಸಿದಾತ ನಂಜುಂಡನೀಗ: ಪ್ರೇಮಿ!

ಆಗಮನಕಾರರಾಗಿ,
ಉತ್ತರದೇಶದಯ್ಯ ಮಾದಿಗರ ಮಾದಯ್ಯ
ಬೆಡಗು ಹೊತ್ತು ಬಂದ!
ದಕ್ಲರ ಹುಡುಗ ಧರೆ ಹಂಚಿ; ಧರೆಗೆ ದೊಡ್ಡವನೆ ಆದ!
ಇಂತಿಪ್ಪವಾಗಿರಲು,
ಎಲ್ಲೆಲ್ಲೂ ನೇಗಿಲಿನಾರ್ಭಟ-
ಹೆಚ್ಚಿದ ಸಿರಿಸಂಪತ್ತು:
‘ಉಳುವವನೆ ಭೂಮಿಯ ಒಡೆಯ!’

ಕಾಲ ಕಳೆದಿರಲು,
ಈಗ ತಾನೇ ಹಾರಿಬಂದ-
ವಿಮಾನದ ತೆಕ್ಕೆಯಲ್ಲಿ: ಜೀವಸಂಕುಲ!

ಆದರೇನು;
ಈ ಅಮೃತ ನೆಲದಲ್ಲಿ ಕಷ್ಟ-
ಕೇಳಿಸಿಕೊಳ್ಳುವ ಕಲ್ಲಿಗೂ ಜೀವವಿದೆ!
ವತ್ತಾರೆ ಎಂಟರ ಹೊತ್ತಿಗೆ
ಗಾರೆ ಕೆಲಸಕ್ಕೆ ಹೊರಟವನು ಎರಡು-
ಇಡ್ಲಿ ಪಾರ್ಸೆಲ್ ಹೇಳುತ್ತಿದ್ದಾನ;
ಅವನ ಒಬ್ಬಳೇ ಮಗಳು ಕಾರ್ಮೆಲ್-
ಸ್ಕೂಲಿನಲ್ಲಿ ಒಂದಕ್ಷರ ಕಲಿತವಳೆ!

ಕೊಂದುಳಿದವರಿಗೆ ಹೇಳುವುದಿನ್ನೂ ಬಾಕಿ ಇದೆ;
ಜನರಾಡುವ ಪದದೊಳಗೆ.
ಸತ್ಯದಂದದಿ ರಸತ್ತಾರುಗ ನಾನು ಕಂಡಿರಾ;
ರಣ ಹೇಡಿಗಳಿರಾ!
ಛಲವಂ ಬಿಡದೆ ಯಡಮುರಿ-
ಕಟ್ಟುವೆ ವಿಚಾರದಲಿ||

-ಗೋಳೂರ ನಾರಾಯಣಸ್ವಾಮಿ

ಒಂದು ದಿನ….

ನಾನು ಒಂದು ದಿನ
ಕಲ್ಲಾಗಿ ಇದ್ದುಬಿಡಬೇಕೆಂದು
ಅಂದುಕೊಂಡೆ
ಆ ಕಲ್ಲನ್ನ ಸುಮ್ಮನೇ ಬಿಡದೇ
ಎತ್ತಿಕೊಂಡು ಯಾವುದೋ ನಾಯಿಗೆ
ಬೀಸಿದರು

ನಾನು ಒಂದು ದಿನ
ಹೂವಾಗಿರಬೇಕು ಅಂದುಕೊಂಡೆ
ಮುಡಿಗೂ ಏರಲಿಲ್ಲ, ಪಾದಕ್ಕೂ ಎರಗಲಿಲ್ಲ
ಹೂವಾಗಿ ಅರಳಲು ಬಿಡಲೇ ಇಲ್ಲವಲ್ಲ

ನಾನು ಒಂದು ದಿನ
ನೀರಾಗಿರಬೇಕು ಅಂದುಕೊಂಡೆ
ನೀರಿಗೆ ಹಾಲನ್ನೂ
ಸಾರಾಯಿಗೆ ನೀರನ್ನೂ ಬೆರೆಸಿಬಿಟ್ಟರು

ನಾನು ಒಂದು ದಿನ
ನಕ್ಷತ್ರದ ಚುಕ್ಕಿಯಾಗಲು ಬಯಸಿದೆ
ಜನ ಉಲ್ಕೆಯೆಂದು ತಫಕ್ಕಂತ
ಉಗುಳಿ ಉಸುರುಗೆಳೆದರು

ಈಗ ಸುಖಾ ಸುಮ್ಮನೆ
ಕಲ್ಲುಬೆಂಚಿನ ಮೇಲೆ
ಕುಂತಿದ್ದೆ
ಕಲ್ಲುಬೆಂಚೂ ತನ್ನ ಮುರಿದುಕೊಂಡಿತು

ನಾನು ಎಂದೂ
ಏನೂ ಆಗಲಿಲ್ಲ

ಸತೀಶ ಜೆ ಚಿಕ್ಕಜಾಜೂರು(ಸಜಲ)

ಇಲ್ಲಿ ಮುಖವಾಡ ಹಾಕಿಕೊಂಡು
ಬದುಕುವವರೆ ಹೆಚ್ಚು
ಬಣ್ಣ ಬಣ್ಣದ ಮಾತುಗಳು ಅಪಾರ
ಪಾಪ ಕರ್ಮ ತುಂಬಿ ತುಳುಕಾಡುತಿದೆ
ಆದರೂ ಸಹ ಗರ್ವದಿಂದ ಮೆರೆಯುತಿಹರು

ವಸ್ತುಗಳಿಗಿದ್ದ ಬೆಲೆ ವ್ಯಕ್ತಿಗಿಲ್ಲ
ಹಿಂದೆ ಆಡಿಕೊಂಡು ಮುಂದೆ ಹೊಗಳುವ ಜನ
ಚಿತ್ರ ವಿಚಿತ್ರವಾಗಿಯೇ ಕಾಣುತಿದೆ
ಮದದಿಂದ ಮೆರೆದಾಡುವ ಮಾನವ
ಕೊನೆಗೆ ಮಸಣ ಸೇರುವುದೆಂದು ಮರೆತಿರಬೇಕೆನೊ

ಪ್ರೀತಿ ,ಪ್ರೇಮ,ಕರುಣೆಯೆಂಬುವುದು
ಸುಟ್ಟು ಬಸ್ಮವಾಗಿದೆ
ಒಬ್ಬರನು ಕಂಡರೆ ಮತ್ತೊಬ್ಬರಿಗಾಗದು
ಹಲ್ಲು ಮಸೆದು ಮನದಲ್ಲಿ ಹಾಲಾಹಲ ಎಬ್ಬಿಸುವರು
ಸೊಕ್ಕು ನೆತ್ತಿಗೇರಿಸಿಕೊಂಡು
ಎದೆ ಉಬ್ಬಿಸಿ ನಡೆದಾಡುವುದು ಬಹಳಷ್ಟು

ಕಣ್ಣಿಗೆ ಪೊರೆ ಬಂದಂತೆ
ನಟಿಸುವ ನಾಟಕೀಯ ಜನಗಳಿಗೆ
ಎಲ್ಲವೂ ಮಾಮೂಲಿಯೆ
ಸ್ವಾರ್ಥಕ್ಕಾಗಿ ಸ್ವಾಭಿಮಾನ ಬಿಟ್ಟು ಬದುಕುವ
ರಕ್ಕಸರಿಗೆ ತಿಳಿ ಹೇಳಿದರೆ ಅರಿವಾಗುವುದೆ?
ಅಸಾಧ್ಯವಾಗದ ಮಾತಿಗೆ ಯಾವಾಗ
ಸಾಧ್ಯವಾಗುವುದೆಂದು ಕಾದು ನೋಡಬೇಕಾಗಿದೆ

-ಉಮಾಸೂಗೂರೇಶ ಹಿರೇಮಠ

ಅರಿಯೋ….

ದೇವಾಲಯ ಮಸೀದಿ ಚರ್ಚು ಗುಡಿಗಳ ಕಟ್ಟಲು
ತಳಪಾಯ ಹಾಕಿರುವ ಸೈಜು ಕಲ್ಲುಗಳು
ಎಂದೂ “ತಮ್ಮ ಮೇಲೆ ನಿಂತು ಇದೇ ಜಾತಿಯ,
ಇದೇ ಮತದ ಅಥವಾ ಇದೇ ಧರ್ಮದ ಜನ
ಇಲ್ಲಿ ಪ್ರಾರ್ಥನೆ ಮಾಡಿ” ಎಂದು ಹೇಳಲಿಲ್ಲ!

ಸರ್ವ ಜನ ತಮ್ಮ ಅಂಗಾಂಗಗಳನ್ನು ಮುಚ್ಚಿಡಲು
ಬಳಸುವ ಬಟ್ಟೆಗಳ ರೇಷ್ಮೆ, ಉಣ್ಣೆ ನೈಲಾನ್ ಟೆರಿಕಾಟ್
ನೂಲುಗಳು “ತನ್ನನ್ನು ಸೇರಿಸಿ ಹೊಲಿದ ಇಂತಹ ಬಣ್ಣದ
ಬಟ್ಟೆಯನ್ನು ಇಂತಹುದೇ ಜಾತಿ, ಮತ, ಧರ್ಮದ ಜನ
ಮಾತ್ರ ತೊಟ್ಟು ಓಡಾಡಬೇಕು” ಎಂದು ಕೇಳಿಕೊಳ್ಳಲಿಲ್ಲ!

ಪ್ರಪಂಚದ ಯಾವ ಅಮರ ಪ್ರೇಮಿಗಳ ಸಾವಿನವರೆಗಿನ
ಪರಿಶುದ್ಧ ಪ್ರೀತಿಯೂ ಜಾತಿ, ಮತ, ಧರ್ಮಕ್ಕೆ ಸೀಮಿತವಾಗಿ
ಅದರ ಮೂಲಕ ಬೆಳೆದು ಚಿರಸ್ಥಾಯಿಯಾಗಿ ಅಮಾರವಾಗಿಲ್ಲ!

ಯಾವ ಮರವೂ ಇದುವರೆಗೂ ನಾನು ಹೊರಗೆ ಬಿಡುವ
ಆಮ್ಲಜನಕವನ್ನು ಇಂತಹುದೇ ಜಾತಿ, ಮತ, ಧರ್ಮದ ಜನರು
ಮಾತ್ರ ಉಸಿರಾಟಕ್ಕೆ ಬಳಸಬೇಕು ಎಂದು ಶಾಸನ ಮಾಡಿಲ್ಲ!

ನಿತ್ಯ ತಾನುರಿದು ಜಗಕೆ ಬೆಳಕ ನೀಡುವ ಸೂರ್ಯನೆಂದೂ
ತನ್ನ ಈ ದಿನದ ಪ್ರಖರ ಬೆಳಕು ಈ ಜನಾಂಗದ, ಈ ಜಾತಿಯ,
ಈ ಮತದ, ಈ ಧರ್ಮದ ಜನರಿಗಾಗಿ ಎಂದು ಬೆಳಗಲಿಲ್ಲ!

ಸರ್ವರ ಹೊತ್ತ ಭೂಮಿ ಎಂದೂ ನನ್ನ ಈ ಭಾಗದಲ್ಲಿ
ಇಂತಹ ಮತದ ಜನ, ಈ ಖಂಡದಲ್ಲಿ ಇಂತಹುದೇ ಜಾತಿಯ
ಇನ್ನೊಂದು ದೇಶದಲ್ಲಿ ಮತ್ತೊಂದು ಪಂಗಡದ ಮಾನವರು
ಮಗದೊಂದು ಸಾಗರದ ಬಳಿ ಇಂತಹ ಧರ್ಮದ ಜನ
ವಾಸ ಮಾಡಿ ಎಂದು ಜಾಗ ಅಳತೆ ಮಾಡಿ ಕೊಟ್ಟಿಲ್ಲ!

ತನ್ನ ಹೆಸರಿನ ಮುಂದೆ ಒಂದು ಕಿಲೋ ಮೀಟರ್ ಪದವಿಗಳ
ಸಾಲು ಹೊತ್ತು, ಜ್ಞಾನ ಹೆಚ್ಚಾಗಿ ಅದನ್ನು
ಪರರಿಗೆ ಹಂಚಲು ಬಂದ ಮಾನವನೊಬ್ಬ ಹೇಳಿದ,
“ನನ್ನ ಭಾಷಣ ಇಂದು ಇಂತಹ ಜಾತಿ, ಮತ,
ಧರ್ಮದ ಜನರಿಗಾಗಿ ಮಾತ್ರ ಸೀಮಿತ!
ಕಾರಣ ಇಂದಿನ ನನ್ನ ಮಾತು ನಮ್ಮ ಧರ್ಮವನ್ನು ಬೆಳೆಸಲಿಕ್ಕಾಗಿದೆ!”

ಎಲ್ಲಾ ಧರ್ಮದ ಮೂಲವದೇ, ಗಾಳಿ- ನೀರು-ರವಿ ಕಿರಣದಂತೆ
ಪ್ರಪಂಚದ ಎಲ್ಲಾ ಜೀವಿಗಳಿಗೆ ಒಂದೇ ರೀತಿಯ ನ್ಯಾಯ.
ತಾನು ಚೆನ್ನಾಗಿ ಬಾಳು, ಪರರ ಬಾಳಲು ಬಿಟ್ಟುಬಿಡು!

ತನ್ನ ಆಹಾರಕ್ಕೆ ನಿಗದಿ ಮಾಡಿದ ವಸ್ತು ಆಯಾ ಕಾಲಕ್ಕೆ ಸಿಗಲು
ತಿಂದು ತೇಗಿ ಚೆನ್ನಾಗಿರು, ಸಿಗದಿದ್ದರೆ ಉಪವಾಸವಾಗಿರು!
ಆಹಾರ ಹುಡುಕಲು ಪ್ರಯತ್ನ ಮಾಡದ ಹೊರತು ಸಿಗದು.
¹
ಸಸ್ಯವೋ, ಪ್ರಾಣಿಯೋ, ಹುಲ್ಲೋ, ಹಣ್ಣೋ, ಕಾಯೋ
ಪ್ರತಿ ಜೀವಿಗೆ ಬೇಕಾದ್ದು ಇಹುದು ಪರಿಸರದ ಗರ್ಭದೊಳು
ಬೇಕಾದ್ದು ಸವೆದು ತಿಂದು ತೇಗಿ ನಿದ್ರಿಸಿ ಎದ್ದು ಬದುಕಬೇಕು.

ಉಸಿರಾಟ , ಚಲನೆ, ಸಂತಾನೋತ್ಪತ್ತಿ, ಪಚನ, ಪರಿಚಲನೆ
ಈ ಕ್ರಿಯೆಗಳು ತಂತಾನೇ ನೆರವೇರುತಲಿವೆ ಧರಣಿಯಲಿ ಸದಾ!
ಪರ ಜೀವಿಗಳಿಗೆ ತೊಂದರೆ ಕೊಡಬಾರದು ಮುರಿದು ಚಕ್ರ!

ನಾಯಿ ಬೆಕ್ಕು ದನ ಆಡು ಕುರಿ ಕೋಳಿ ಹಂದಿ ಮೊಲ ಬಾತು
ಎಲ್ಲವೂ ಬೇಕು ಮನುಜನಾಸೆಗೆ, ಆನಂದಕೆ, ಹಸಿದ ಹೊಟ್ಟೆಗೆ
ವಿಷವ ಹಾಕಿ ಎಲ್ಲಾ ಕೊಂದು ಹಾವು,ಹದ್ದು ಗಿಡುಗ ಗರುಡರ
ಇಲಿ ಹೆಗ್ಗಣಗಳೆಂಬ ಸಣ್ಣ ಆಹಾರವನ್ನು ತಿನ್ನಾಲಾರದ ಹಾಗೆ!

ವಿಷವ ಮಣ್ಣಿಗೆ ಸುರಿದು ಗಿಡ ಮರ ತರಕಾರಿ ಹಣ್ಣುಗಳ
ಅದರೊಳು ಬೆಳೆಸಿ ತಾನದನೆ ತಿಂದು ಆರೋಗ್ಯ ಅಳಿಸಿ
ಮತ್ತೆ ಮದ್ದು, ಗುಳಿಗೆ ನುಂಗಿ, ಚುಚ್ಚಿ ಕೊಚ್ಚಿ ಹೊಲಿದು!

ಧನ ಹಣವೆಂಬ ಪಾಶದಿ ಮೋಹದ ಬಲೆಯೊಳು ಸಿಕ್ಕಿ
ದುಡಿದುದೆಲ್ಲ ಕಳೆದುಕೊಂಡು ಮೋಕ್ಷದ ಹಾದಿಯ ಹಿಡಿವ
ಆಸ್ಪತ್ರೆಗಳ ಮಂಚಗಳಿಗೆ ಜಾತಿ ಧರ್ಮಗಳ ಹಂಗಿಹುದೋ
ಅರಿತುಕೊ ಎಲೆ ಮಾನವ ಜಾತಿಯ ಬುದ್ಧಿವಂತ ಹುಳವೆ!
-ಪ್ರೇಮಾ ಆರ್ ಶೆಟ್ಟಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x