ಗಜಲ್:‌ ಜಯಶ್ರೀ.ಭ.ಭಂಡಾರಿ., ರೇಣುಕಾ ಕೋಡಗುಂಟಿ, ಸರೋಜ ಪ್ರಶಾಂತಸ್ವಾಮಿ, ದೇವರಾಜ್ ಹುಣಸಿಕಟ್ಟಿ.

ಗಝಲ್ 1

ಸರೋವರದ ತುಂಬಾ ತೇಲಾಡುವ ಹಂಸೆಗಳು
ಸರೋವರದ ಸೊಬಗನು ಹೆಚ್ಚಿಸಿದ ಕಮಲಗಳು

ಅದೇಕೋ ಸುಂದರ ಹಂಸೆ ತಪಗೈಯುತಿದೆ
ಸಿಗದೆ‌ ಆಹಾರ ಮನನೊಂದಂತಿದೆ ಕಂಗಳಗಳು.

ಹೆಜ್ಜೆ ಕಿತ್ತಿಡಲಾರದೆ ಸುಮ್ಮನೆ ಆಕಾಶ ನೋಡುತಿದೆ.
ಲಜ್ಜೆಯ ತೆರದಿ ನಾಚಿದಂತೆ ಬೆಳ್ಳನೆ ರೆಶ್ಮೆಯ ಪಂಕಗಳು

ಪಾದಗಳ ಒತ್ತಿ ಹಿಡಿದು ಜಪವ ಮಾಡುತಿದೆ ಎನಿಸುವುದು
ಪದಗಳ ಜೋಡಿಸಿ ವೈರಾಗ್ಯ ರಾಗದಿ ಹಾಡುವ ಕಂಗಳು

ನೀಲ ಅಂಬರದಿ ಗುಟ್ಟಾಗಿ ಏನೋ ಹುಡುಕುತಿದೆ
ಅಲೆಗಳು ಹೇಳುತಿವೆ ರಾತ್ರಿ ಬರುವುದು ಬೆಳದಿಂಗಳು

ಕೆಂಪು ಎತ್ತರದ ಮೂಗು ತಂಪಾಗಿ ಉಬ್ಬಿ ಸೊಕ್ಕಿದಂತಿದೆ.
ಮಂಪರು ಬಂದಂತೆ ಮಂಕಾಗಿ ಹಾರುದ ಮರೆತ ರೆಕ್ಕೆಗಳು

ತೇಲುವ ಹಂಸೆಗಳೆ ಆಲಿಸಿ ಜಯಳ ಮನಸಿನ ಭಾವನೆಗಳನ್ನು.
ಸಲೀಲದಲಿ ತೇಲುತ ಹಾಯಾಗಿರಿ ಬರುವವು ಸುಂದರ ದಿನಗಳು

-ಜಯಶ್ರೀ.ಭ.ಭಂಡಾರಿ.

ಗಜಲ್ 2

ನೆರೆ ಮನೆಯ ಸುದ್ದಿಗೆ ಕರಪತ್ರವಾಗಿಹರಲ್ಲ ಗೆಳೆಯ
ಅಸೂಯೆಯನ್ನು ಸಾರುತ್ತ ಸಾಗಿರುವರಲ್ಲ ಗೆಳೆಯ

ಮತ್ತೊಬ್ಬರ ಮನದಲ್ಲಿ ಕೆಂಡದ ಉಂಡೆಗಳ ಸುರಿವರಲ್ಲ
ಬಿಸಿತಟ್ಟಿದ ಮೇಲಾದರು ಅರಿತುಕೊಳ್ಳಬೇಕಲ್ಲ ಗೆಳೆಯ

ದಿನಕ್ಕೊಂದು ಬಣ್ಣವನು ಹಚ್ಚುತ್ತಲೇ ನಡೆದಿಹರಲ್ಲ
ತೋರಿಕೆಯ ಹಸಿ ಮಾತುಗಳೆಲ್ಲ ಸತ್ಯವಲ್ಲ ಗೆಳೆಯ

ತಮ್ಮಸ್ವಾರ್ಥಕ್ಕಾಗಿ ಸಲುಗೆಯ ಬಯಸುತಿಹರಲ್ಲ
ವಿಷ ಸರ್ಪದೊಂದಿಗೆ ಸರಸವು ತರವಲ್ಲ ಗೆಳೆಯ

ಸುಳ್ಳಿಗೆ ಎಂದೂ ಮಣೆಯನ್ನು ಹಾಕುವುದಿಲ್ಲ ‘ರೇಣು’
ಇನ್ನಾದರು ನಿಜವರಿತು ಬದುಕಬಹುದಲ್ಲ ಗೆಳೆಯ

ರೇಣುಕಾ ಕೋಡಗುಂಟಿ

ಗಜಲ್ 3

ನನ್ನೆದೆಯ ಒಡಲಾಳದ ದನಿಯಿದು ಕೇಳಿಸಿಕೋ.
ನೀನಿಲ್ಲದ ಕಡಲಾಳದ ಹನಿಇದು ಕೇಳಿಸಿಕೋ.

ಮೊಗ್ಗು ಬಿರಿಯುವ ಮುನ್ನ ಹಿಗ್ಗಿನಲಿ ಬಂದುಲಿವ
ಗೆಜ್ಜೆ ಕಾಲಿನ ಹುಚ್ಚೆದ್ದ ದನಿ ಇದು ಕೇಳಿಸಿಕೋ.

ನಿನ್ನ ಕರ್ಣ ಕಮಲದಲ್ಲಿ ಗುನುಗುನಿಸುಲೆಂದೆ
ಹುಟ್ಟಿಬಂದ ಎದೆಯಾಳದ ದನಿ ಇದು ಕೇಳಿಸಿಕೋ.

ವರ್ಣ ರಂಜಿತ ಕಾಮನಬಿಲ್ಲಿನ ಏಣಿಯಿಂದಿಳಿದ
ವರ್ಣಾಂಬರದ ದನಿ ಇದು ಕೇಳಿಸಿಕೋ.

ನಿನ್ನ ಹೃದಯದ ಹಾದಿ ಸೇರುವ ಸರಹದ್ದಿನ
ರಹದಾರಿಯ ಕನವರಿಕೆಯ ದನಿ ಇದು ಕೇಳಿಸಿಕೋ

ಎಡತಾಕುವೆಡೆಯೆಲ್ಲ ಅಡರಿಕೊಳ್ಳುವ ಅಪರೂಪದ
ಆಲಾಪದ ದನಿ ಇದು ಕೇಳಿಸಿಕೋ.
ಸರೋಜ ಪ್ರಶಾಂತಸ್ವಾಮಿ

ಗಜಲ್ 4

ಸ್ಮಶಾನವೇ ಪ್ರಿಯವಾಗುತ್ತಿದೆ ನೀನು ಹೋದ ಮೇಲೆ
ಹೃದಯವೇ ಮಸಣವಾಗುತ್ತಿದೆ ನೀನು ಹೋದ ಮೇಲೆ

ಅದೆಷ್ಟು ಇರುಳುಗಳು ಬಣ್ಣ ಕಳೆದುಕೊಂಡವು ಗೊತ್ತೇ..?
ಕಂಗಳಿಗೆ ನಿದ್ದೆ ಮರೆತೊಗುತ್ತಿದೆ ನೀನು ಹೋದ ಮೇಲೆ

ಚೆಂದದ ರಾತ್ರಿಗಳು ಚಂದ್ರನನ್ನೇ ಕಳೆದುಕೊಂಡು ತಬ್ಬಲಿಯಾಗಿವೆ
ಯೌವನಕ್ಕೂ ಮುಪ್ಪಾವರಿಸುತ್ತಿದೆ ನೀನು ಹೋದ ಮೇಲೆ

ಹೊಸತು ಹಳೆತು ಅರ್ಥ ಕಳೆದು ಕೊಂಡಿದೆ ಗೊತ್ತೇ ನಿನಗೆ
ಸಾಯಲು ಶವವಾಗಬೇಕಿಲ್ಲ ಅರ್ಥವಾಗುತ್ತಿದೆ ನೀನು ಹೋದ ಮೇಲೆ

ದೇವನ ಕಡಲು ಕಿನಾರೆ ಕಳೆದುಕೊಂಡಿದೆ ಗೊತ್ತಿಲ್ಲ ಅವಗೆ
ನೋವೆಂದರೇನು ಅರಿವಾಗುತ್ತಿದೆ ನೀನು ಹೋದ ಮೇಲೆ

ದೇವರಾಜ್ ಹುಣಸಿಕಟ್ಟಿ.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x