ಶಾಲಾ ಮಕ್ಕಳ ತರಲೆ ಕತೆಗಳ ವರ್ತಮಾನದ ಗಂಭೀರ ಕತಾ ಸಂಕಲನ “ಮಕ್ಕಳೇನು ಸಣ್ಣವರಲ್ಲ”: ರವಿರಾಜ್ ಸಾಗರ್

ಬಾಲಕನಾದರೂ ಬಾಲಕನು ಬಿಡುವ ಬಾಣವೇನೂ ಬಾಲಕನಲ್ಲ ಎನ್ನುವಂತೆ ಮಕ್ಕಳು ಸಣ್ಣವರಾದರೂ ಅವರ ಮಾತುಗಳು, ಪ್ರಶ್ನೆಗಳು ,ಕುತೂಹಲಗಳು, ಅವರ ತರಲೆಗಳು, ಅವರು ಸೃಷ್ಟಿಸುವ ಅವಾಂತರಗಳು ದೊಡ್ಡವು. ಶಿಕ್ಷಕರಾಗಿ ಎರಡು ದಶಕಗಳಿಂದ ಮಕ್ಕಳ ಜೊತೆ ಒಡನಾಟ ಇಟ್ಟು ಕೊಂಡು ಸಂವೇದನಶೀಲರಾಗಿರುವ ಗುಂಡುರಾವ್ ದೇಸಾಯಿಯವರು ಮಕ್ಕಳ ಮನೋವಿಜ್ಞಾನವನ್ನು ಚೆನ್ನಾಗಿ ಬಲ್ಲರು. ಅವರ ಸಾಹಿತ್ಯ ಕೃಷಿಯ ಅನುಭವ, ಮಕ್ಕಳ ಕಾಳಜಿ ಅವರ ಮಕ್ಕಳ ಕಥೆಗಳ ಸಂಕಲನ “ಮಕ್ಕಳೇನು ಸಣ್ಣವರಲ್ಲ” ಕೃತಿಯಲ್ಲಿ ವ್ಯಕ್ತವಾಗಿದೆ.

ಮಕ್ಕಳ ಕಥೆಗಳು ಎಂದರೆ ಮಕ್ಕಳ ಮನೋರಂಜನೆ, ಮಕ್ಕಳಿಗೆ ನೀತಿ ಬೋಧನೆಯೇ ಮೊದಲ ಆದ್ಯತೆ ಆಗಿರುವ ಮಕ್ಕಳ ಸಾಹಿತ್ಯ ಪರಂಪರೆ ಹೆಚ್ಚಾಗಿ ಕಾಣುತ್ತೇವೆ. ಇತ್ತೀಚಿಗೆ ಮಕ್ಕಳ ಸಾಹಿತ್ಯದಲ್ಲಿ ವಾಸ್ತವಿಕ ಕಥೆಗಳ ಪ್ರಯೋಗ ಹೆಚ್ಚಾಗುತ್ತದೆ. ಈ ಕೃತಿಯ ಹೆಚ್ಚುಗಾರಿಕೆ ಎಂದರೆ ವರ್ತಮಾನದ ಕೆಲವು ವಿದ್ಯಮಾನಗಳಿಗೆ ಮಕ್ಕಳ ದೈನಂದಿನ ಜೀವನದ ಸಂಗತಿಗಳು, ಶಾಲಾ ಸನ್ನಿವೇಶಗಳು, ಮಕ್ಕಳು ಎದುರಿಸುವ ಸಮಸ್ಯೆಗಳ ಸನ್ನಿವೇಶಗಳ ಮೂಲಕ ಗಂಭೀರ ಅನಿಸಬಹುದಾದ ವಿಷಯ ವಸ್ತುವನ್ನು ಹಾಸ್ಯ ದೊಂದಿಗೆ ಮಕ್ಕಳ ಪಾತ್ರಗಳೊಂದಿಗೆ ಕಥಾಹಂದರ ಸೃಷ್ಟಿಸಲಾಗಿದೆ. ಕೆಲವು ಮಕ್ಕಳ ಜೀವನದ ನಿಜ ಘಟನೆಗಳು ಸಹ ಆಗಿವೆ.

ಆರಂಭದ ಕಥೆ ಶಾಲೆಯ ಎಲೆಕ್ಷನ್ ಸಂದರ್ಭದಲ್ಲಿ ನಾಗ ಎನ್ನುವ ಹುಡುಗ ತಾನು ಮಲ್ಲೇಶಿಯನ್ನ ಸೋಲಿಸಿ ಗೆದ್ದು ಬರಲೇಬೇಕು ಎನ್ನುವ ಹಠದಲ್ಲಿ ಎಲ್ಲರಿಗೂ ಎಗ್ ರೈಸ್ ಕೊಡಿಸುತ್ತೇನೆ ಎಂದು ಇಂದಿನ ಪುಡಾರಿ ರಾಜಕಾರಣಿಗಳ ದಾಟಿಯಲ್ಲಿಯೇ ಭರವಸೆ ನೀಡಿ ಗೆದ್ದಮೇಲೆ ಅದೆಲ್ಲಾ ಆಗದ ಮಾತು ಎನ್ನುವ ದಾಟಿಯ ಉಡಾಪೆಯ ಮಾತುಗಳು ಕಥೆಯಲ್ಲಿ ಬರುತ್ತವೆ. ಶಾಲಾ ಮಕ್ಕಳ ಚುನಾವಣೆಯಲ್ಲಿ ಮಾಮೂಲಿಯಾಗಿ ಘಟಿಸುವ ಘಟನೆಗಳೊಂದಿಗೆ ವರ್ತಮಾನದ ರಾಜಕೀಯ ಪಕ್ಷಗಳ ಪೊಳ್ಳು ಭರವಸೆ, ಪ್ರಜಾಪ್ರಭುತ್ವ ವ್ಯವಸ್ಥೆಯ ದುರುಪಯೋಗ ಕುರಿತು ಬಗ್ಗೆ ಗಂಭೀರ ಚಿಂತನೆಗೆ ಹಚ್ಚುತ್ತದೆ.

ಇವರ ಕಥೆಗಳಲ್ಲಿ ಬರುವ ಪಾತ್ರಗಳು ಇವರ ಶಾಲೆಯ ಮಕ್ಕಳ ಹೆಸರುಗಳೆ ಆಗಿರುವುದು, ಶಾಲೆಯ ಕೆಲವು ಸನ್ನಿವೇಶಗಳಿಗೆ ಒಂದಿಷ್ಟು ಕಥೆ ಸೃಷ್ಟಿಸಿರುವುದು ಗಮನಿಸಬೇಕಾದ ಅಂಶ. ನಾನು ಸಹ ಮಕ್ಕಳ ಸಾಹಿತ್ಯ ಪರಿಷತ್ ಚಟುವಟಿಕೆಗಳನ್ನು ಗುಂಡುರಾವ್ ದೇಸಾಯಿ ಅವರೊಂದಿಗೆ ಅವರ ಮಸ್ಕಿಯ ಕೇಂದ್ರ ಶಾಲೆಯಲ್ಲಿ ಸಂಘಟಿಸಿದ್ದು ಅವರು ಮಕ್ಕಳೊಂದಿಗೆ ತೊಡಗಿಕೊಳ್ಳುವ ರೀತಿಯನ್ನು ಕಂಡಿದ್ದೇನೆ. ಅವರ ಶಾಲೆಯಲ್ಲಿ ನಡೆದ ಅನೇಕ ಸಂಗತಿಗಳನ್ನು ಕಥೆಯಾಗಿಸಿರುವುದರಿಂದ ಕಾಲ್ಪನಿಕ ಕಟ್ಟುಕಥೆ ಎನಿಸದೆ ಇಲ್ಲಿನ ಕಥೆಗಳು ಹೆಚ್ಚು ಲವಲವಿಕೆಯಿಂದ, ವರ್ತಮಾನದ ಮಕ್ಕಳ ತವಕ ತಲ್ಲಣಗಳೊಂದಿಗೆ ಮುಖಾಮುಖಿಯಾಗಿಸುವ ಗುಣದಿಂದ ಕೂಡಿವೆ.

ಪವಾಡ ಎನ್ನುವ ಕಥೆ ಶಾಲೆ ತಪ್ಪಿಸುವ ನಾಗನ ಸುತ್ತ ಹೆಣೆದಿದ್ದು ರಾಜ್ಯದಲ್ಲಿ ಇಂತಹ ಹಲವಾರು ಶಾಲೆ ಬಿಟ್ಟ ಮಕ್ಕಳ ಬದುಕಿನ ಸಂಗತಿ ತೆರೆದಿಡುತ್ತದೆ. ಈ ಕಥಸಂಕಲನದಲ್ಲಿ ನಾಗ ಮತ್ತು ಪರಶುರಾಮ ಮತ್ತೆ ಮತ್ತೆ ಹಲವು ಕಡೆ ಕಾಣ ಸಿಗುತ್ತಾರೆ. ವಾಸ್ತವದಲ್ಲಿ ಇವು ನೈಜ ಪಾತ್ರಗಳು ಸಹ ಆಗಿವೆ. ಪ್ಲಾಸ್ಟಿಕ್ ತೊಲಗಿಸಬೇಕು ಎನ್ನುವ ಆಶಯದ ಪ್ಲಾಸ್ಟಿಕಾಯಣ ಎನ್ನುವ ಕಥೆಯೊಂದು ಈ ಸಂಕಲನದಲ್ಲಿ ಗಮನ ಸೆಳೆಯುತ್ತದೆ. ಭವಿಷ್ಯದ ಮಕ್ಕಳಿಗೆ ಉತ್ತಮ ಪರಿಸರ, ಆರೋಗ್ಯಯುತ ಭೂಮಿ ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆಯೆಂದು ಚಿಂತನೆಗೆ ಹಚ್ಚುವಂತೆ ಮಾಡುವ ಗಟಾರದಲ್ಲಿ ಬಿದ್ದ ಪ್ಲಾಸ್ಟಿಕ್ ಚೀಲಗಳನ್ನು ಆರಿಸಿ, ಮನೆಗಳ ಮುಂದೆ ಗುಡ್ಡೆಹಾಕುವ ಮಕ್ಕಳ ಕಾರ್ಯ ದೊಡ್ಡವರನ್ನು ಕಣ್ಣು ತೆರೆಸುತ್ತದೆ. ಇಂತಹ ಹಲವು ಸಂಗತಿಗಳ ಸುತ್ತ ಮಕ್ಕಳ ಕಥೆ ಹೆಣೆದಿರುವುದು ಈ ಸಂಕಲನದ ಹೆಚ್ಚುಗಾರಿಕೆ. ನಾನೇ ಫಸ್ಟ್, ಪವಾಡ, ಹೊಟ್ಟೆಯಲ್ಲಿ ಮರ ಕಥೆಗಳು ಓದುವಂತೆ ಮಾಡುತ್ತವೆ. ದೆವ್ವ ಬಂತು ದೆವ್ವ ಕಥೆ ದೆವ್ವಗಳೆಲ್ಲ ಕಾಲ್ಪನಿಕ ನಂಬಿಕೆ, ಅವುಗಳಿಗೆ ನಾವು ಅಂಜದೆ ಅಂಜಿಸಬೇಕು ಎನ್ನುವ ನಿಲುವಿನ ಕಥೆ ಈ ಸಂಕಲನದ ಮತ್ತೊಂದು ವಿಶಿಷ್ಟ ಕಥೆಯಾಗಿದೆ.

12 ವಿಭಿನ್ನ ಕಥೆಗಳ ಸಂಕಲನ ಇದಾಗಿದ್ದು ಎಲ್ಲ ಕಥೆಗಳಲ್ಲಿ ಮಕ್ಕಳೇ ಪ್ರಧಾನ ಪಾತ್ರ ವಹಿಸಿದ್ದು ಗ್ರಾಮೀಣ ಪರಿಸರ, ಶಾಲಾ ಸನ್ನಿವೇಶಗಳ ಸುತ್ತ ಹೆಚ್ಚಿನ ಕಥೆಗಳು ಕೇಂದ್ರೀಕರಿಸಿವೆ. ಕಥೆಗಳ ನಿರೂಪಣೆ, ಭಾಷೆ ಬಳಕೆ , ಸಂಭಾಷಣೆಗಳ ಶೈಲಿ ಓದಿಸಿಕೊಂಡು ಹೋಗುವ ಲಯದಿಂದ ಕೂಡಿವೆ. ಮಕ್ಕಳ ತರಲೆ ಕಥೆಗಳ ಮೂಲಕವೇ ಗಂಭೀರ ವಿಷಯಗಳನ್ನು ದಾಟಿಸುವ ಕಥೆಗಳ ಸಂಕಲನ ಎನ್ನಬಹುದು. ಹಿರಿಯ ಮಕ್ಕಳ ಸಾಹಿತಿ ಅನಂದ ಪಾಟೀಲರು ಮುನ್ನುಡಿ ಬರೆದು ಹಾರೈಸಿದ್ದಾರೆ. ತಮ್ಮಣ್ಣ ಬೀಗರ ಬೆನ್ನುಡಿ ಬರೆದು ಹಾರೈಸಿದ್ದಾರೆ. ಕೀರ್ತಿ ಪ್ರಕಾಶನ ಪ್ರಕಟಿಸಿರುವ ಈ ಪುಸ್ತಕದ ಬೆಲೆ 80 ರೂಗಳಾಗಿದ್ದು ಮಕ್ಕಳಿಗೆ ಉಡುಗೊರೆಯಾಗಿ ನೀಡಲು ಸೂಕ್ತ ಆಯ್ಕೆಯಾಗಿದೆ.

ರವಿರಾಜ್ ಸಾಗರ್

ಪುಸ್ತಕ: ಮಕ್ಕಳೇನು ಸಣ್ಣವರಲ್ಲ

ಲೇ: ಗುಂಡುರಾವ್ ದೇಸಾಯಿ

ಪು.ಸಂ: 96 ಬೆಲೆ: 80₹

ಪ್ರಕಾಶನ : ಕೀರ್ತಿ ಪ್ರಕಾಶನ ಮಸ್ಕಿ

ಸಂಪರ್ಕ ಸಂಖ್ಯೆ: 9740346338

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x