ನನ್ನೆದೆಯ ಗುಬ್ಬಚ್ಚಿ: ಸುರೇಖಾ ಕುಚನೂರ

ನನ್ನೊಲವಿನ ಜೀವವೇ……
ನಿನ್ನೆದೆಯ ಗುಬ್ಬಚ್ಚಿಯ ಕಥೆ ಕೇಳು. ಹಗಲೆನ್ನದೇ, ಇರುಳೆನ್ನದೇ ನಿನ್ನೇ ನೆನಪಿಸಿಕೊಳ್ಳುವ ಹೃದಯದ ವ್ಯಥೆ ಕೇಳು. ಹಸಿವಿನ ಹಂಗಿಲ್ಲದೇ ನಿದಿರೆಯ ಗುಂಗಿಲ್ಲದೇ ನಿನ್ನ ಹೆಸರನ್ನೇ ಜಪಿಸುವ ಮನಸ್ಸಿನ ಗತಿ ಕೇಳು. ಆ ಒಂದು ದಿನ ನಿನ್ನ ನೋಡಿದಾಕ್ಷಣ ನನ್ನನ್ನೆ ನಾ ಮರೆತ ದಿನ. ನಿನಗರಿವಿಲ್ಲದೆ ನನ್ನನ್ನು ನೀ ಸೇರಿದ ದಿನ. ನನ್ನ ಉಸಿರೊಳಗುಸಿರಾದ ದಿನ. ಜಗವೇ ನನ್ನ ಮರೆತರೂ ನಾ ಹೇಗೆ ಮರೆಯಲಿ ಆ ದಿನವನ್ನು. ಅಂದಿನಿಂದ ಇಂದಿನವರೆಗೂ ಮರಳಿ ನೀ ನನಗೆ ಸಿಗುತ್ತಿಲ್ಲ. ಆದರೆ ನಾ ನಿನ್ನ ನೆನೆಯದ ದಿನವಿಲ್ಲ. ನಿನಗಾಗಿ ಬರೆಯದ ಓಲೆ ಇಲ್ಲ. ಶ್ರೀರಾಮನ ಸೇವೆಗೆ ಕಾಯುತ್ತಿದ್ದ ಆ ಶಬರಿಯಂತೆ, ಶ್ರೀ ಕೃಷ್ಣನ ಸೇವೆಗೆ ಹಪಹಪಿಸುತ್ತಿದ್ದ ಮೀರಾಳಿನಂತೆ ನಾ ಕಾಯುತ್ತಿದ್ದೆ. ನಾ ಕಾಯುತ್ತಿರುವೆ. ನಾ ಕಾಯುವೆ. ಈ ಜೀವವು ಮಣ್ಣಲ್ಲಿ ಮಣ್ಣಾಗೋ ತನಕ ನಿನ್ನೆಗೂ ಇಂದಿಗೂ ನಾಳಿಗೂ ಎಂದೆಂದಿಗೂ ನಾ ಅವನಿಗಾಗಿ ಕಾಯುವೆ. ಎಲ್ಲೋ ಹುಟ್ಟಿ ಎಲ್ಲೆಲ್ಲೋ ಹರಿದು ಕಡಲೊಡಲ ಸೇರೋ ಆಸೆ ಹೊತ್ತ ನದಿಯಂತೆ, ನಾ ಅವನ ಸೇರುವೆನೆಂಬ ಚಿಕ್ಕ ಆಸೆ. ತಂಗಾಳಿಯ ತಂಪಿಗೆ ತಲೆದೂಗಿ ಪರಿಮಳ ಬೀರುವ ಸುಮದಂತೆ, ನಾನವನ ಧ್ವನಿಗೆ ತಲೆದೂಗುವ ಮಹದಾಸೆ‌. ಅರಳಿ ನಗುವ ಕುಸುಮವನ್ನು ಮುದ್ದಿಸುವ ದುಂಬಿಯಂತೆ, ಹುರಿ ಮೀಸೆ ಚೆಲುವನನ್ನ ಮುದ್ದಿಸುವಾಸೆ.

ನೂರು ಆಸೆ ಹೊತ್ತ ಎನ್ನೆದೆಯ ಗುಬ್ಬಚ್ಚಿಯ ಕಥೆ. ನಿಮಗೆ ಅತಿ ಎನಿಸಿದರೂ ಪರವಾಗಿಲ್ಲ. ನನ್ನ ಕಥೆಯನ್ನು ಪೂರ್ತಿಯಾಗಿ ಹೇಳುವೆನು. ನನ್ನ ಕನಸಿನೊಡೆಯನ ಕಣ್ಣಿನ ಕಾಂತಿಗೆ ನಾ ಮಿಂಚುವೇನು. ಅವನ ಎದೆ ಬಡಿತದ ತಾಳಕೆ ಕುಣಿಯುವ ನವಿಲಾಗುವೆನು. ಅವನ ಮಾತಿನ ದಾಟಿಗೆ ಸ್ವರವಾಗಿ ಹಾಡುವ ಕೋಗಿಲೆಯಾಗುವೆನು. ಅವನೆದೆಯ ಗೂಡಿನೊಳಗೆ ಸ್ವಯಂ ಬಂಧಿಯಾದ ಗಿಣಿಯಾಗುವೆನು. ಅವನು ಕೋಪಿಯಾದರೆ ನಾ ಶಾಂತಸಮುದ್ರವಾಗುವೆನು. ಅವನು ಮೌನಿಯಾದರೆ ನಾ ಮಾತಿನಮಲ್ಲಿಯಾಗುವೆನು. ಅವನು ಸಹನಾಮೂರ್ತಿಯಾದರೆ ಅವನ ಪಾದದಲ್ಲಿ ಚರಣದಾಸಿಯಾಗುವೆನು. ಅವನ ಬಾಳ ಬಂಡಿಯನ್ನು ಓಡಿಸುವ ಸಾರಥಿಯಾಗುವೆನು. ಅವನು ಬಡವನಾಗಿದ್ದರೆ ಅವನೆದೆಯ ಗುಡಿಸಿಲಿಗೆ ಪಟ್ಟದ ರಾಣಿಯಾಗುವೆನು. ಪ್ರತಿಯೊಬ್ಬರ ಜೀವನದಲ್ಲಿ ಹೂವಿನ ಹಾಸು ಸಿಗುವುದು ಅಂತೆನಿಲ್ಲ. ಬಾಳ ಹಾದಿಯಲ್ಲಿ ಕಲ್ಲಿದ್ದರೂ ಸರಿ, ಮುಳ್ಳಿದ್ದರೂ ಸರಿ ಇಲ್ಲ. ಜೀವನ ನಮ್ಮನ್ನು ಛತ್ರ ಚಾಮರಗಳಿಂದ ಆಹ್ವಾನಿಸಬೇಕೆಂದಿಲ್ಲ. ಅವನ ಸುಖ ದುಃಖದಲ್ಲಿ ಭಾಗಿಯಾಗಿ ಸುಖದ ಅನುಭವ ಸವಿಯುತ್ತಾ, ದುಃಖದ ನೋವನ್ನು ಮರೆಯುತ್ತಾ, ಸಿಹಿಕಹಿ ತುಂಬಿದ ಬಾಳ ದೋಣಿಯನ್ನು ಭವಸಾಗರದಲ್ಲಿ ಮುಳುಗಿಸದೆ ದಡ ಸೇರಿಸು ಎಂದು ಭಗವಂತನಿಗೆ ಕೈಮುಗಿದು ಬೇಡುವೆ.

ನಾನು ಇಷ್ಟೆಲ್ಲಾ ಹೇಳುತ್ತಿರುವೆನೆಂದರೆ ಅವನಿಂದ ನಾ ಹೆಚ್ಚೇನೂ ಬಯಸುತ್ತಿಲ್ಲ. ನನಗಾಗಿ ಅವನು ತಾಜ್ ಮಹಲ್ ಕಟ್ಟೋದು ಬೇಡ. ಹಗಲಿರುಳು ದುಡಿದು ಚಿನ್ನದ ಬಳೆ ತರುವುದು ಬೇಡ. ಚಿನ್ನದ ಬಳೆ ಕೊಟ್ಟು ಹಣದಲ್ಲಿ ಶ್ರೀಮಂತನಾಗದೇ, ತಾಜ್ ಮಹಲ್ ಕಟ್ಟಿಸ್ತೀನಿ ಅಂತ ಬದುಕಿಗೂ ಮುಂಚೆನೇ ಗೋರಿ ಕಟ್ಟಿಸುವ ಮಾತು ಆಡದೇ ಕೈ ಹಿಡಿದವಳಿಗಾಗಿ ತನ್ನ ಹೃದಯದಲ್ಲಿ ಒಂದಿಷ್ಟು ಜಾಗ ಕೊಟ್ಟು, ಬೊಗಸೆಯಷ್ಟು ಪ್ರೀತಿ ಕೊಟ್ಟು, ಈ ಜೀವ ಇರೋ ತನಕ ಉಸಿರಿಗೆ ಉಸಿರಾಗಿರುತ್ತೇನೆ ಎಂದು ಮಾತು ಕೊಟ್ಟು ಜೀವಹೋಗುವವರೆಗೆ ಜೊತೆಗೆ ಇದ್ದರೆ ಸಾಕು ಬೇರೆ ಏನು ಬೇಕು ಹೇಳಿ ಈ ಜೀವಕೆ? ನನ್ನಷ್ಟಕ್ಕೆ ನಾನು ಇರುವ ಸಮಯ. ನನಗೆ ಪ್ರೀತಿಯ ಗುಂಗು ಹಿಡಿಸಿದೆ. ಪ್ರೇಮವನ್ನು ಉಣಬಡಿಸಿದೆ. ಒಮ್ಮೊಮ್ಮೆ ಪ್ರೀತಿಯಂತೆ ಕಾಡಿಸುವೆ, ಪೀಡಿಸುವೆ. ನೀ ಸಿಗಲಾರೆ ಎಂದು ತಿಳಿಸಿ ಅಳಿಸುವೆ. ಮತ್ತೆ ಸಿಗುವೆ ಎಂಬಂತೆ ನಗಿಸುವೆ ಇಷ್ಟಾದರೂ ನೀ ಎಂದಿಗೂ ದುರಾಗಲಿಲ್ಲ. ಮೌನ ಮುರಿದು ಮಾತನಾಡಲಿಲ್ಲ. ಕೈಹಿಡಿದು ನಡೆಯಲಿಲ್ಲ. ಬೆರಳಿಗೆ ಬೆರಳು ಬೆಸೆದು ಕಣ್ಣಲ್ಲಿ ಕಣ್ಣಿಟ್ಟು ನೋಡಿ ನಾ ನಿನ್ನ ಪ್ರೀತಿಸುವೆ ಎನ್ನಲಿಲ್ಲ. ಆದರೂ ನೀನು ನನ್ನವನೇ. ಇಂದಿಗೂ ನಾಳೆಗೂ ಎಂದೆಂದಿಗೂ ನೀನು ನನ್ನವನೇ.

ನಿನಗಾಗಿ ಹಂಬಲಿಸಿದ ಮನಕೆ ನೀನೇ ರಾಜನಾಗಿರುವೆ. ಕರ್ತವ್ಯದಲ್ಲಿ ಹೆಂಡತಿಯಾಗಿ, ಅವನ ಭಾವನೆಗಳ ಅರ್ಥ ಮಾಡಿಕೊಳ್ಳುವ ಪ್ರೇಮಿಯಾಗಿ, ಪ್ರೀತಿಯಲ್ಲಿ ಅಮ್ಮನಾಗಿ, ಸಲಹೆ ನೀಡುವ ಗೆಳತಿಯಾಗಿ ನಿನ್ನ ಜೊತೆಗಿರುವ ಆಸೆ ಹೊತ್ತ ನನಗೆ ನೀನು ಕಾಣದ ಕಡಲಾಗಿಯೇ ಉಳಿದಿಬಿಟ್ಟೆ. ಪರವಾಗಿಲ್ಲ. ನಾನು ನಿನಗಾಗಿ ಕೊನೆ ಉಸಿರಿರೊವರೆಗೂ ಕಾಯುವೆ.

ಬಂದೆ ಬರುವುದೇನು ಆ ಒಂದು ಸಮಯ
ಒಂಟಿ ಕಾಲಿನಲ್ಲಿ ಕಾಯುತಿರುವೆ ನಾ ಗೆಳೆಯ
ಹಂಬಲಿಸುತ್ತಿದೆ ಮನ ಬಂದು ಸೇರು ಹೃದಯ

-ಸುರೇಖಾ ಕುಚನೂರ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಸುರೇಖಾ ಕುಚನೂರ
ಸುರೇಖಾ ಕುಚನೂರ
1 year ago

ಧನ್ಯವಾದಗಳು ಪಂಜು ಪತ್ರಿಕೆ🙏🙏😊😊

1
0
Would love your thoughts, please comment.x
()
x