ಪಂಜು ಕಾವ್ಯಧಾರೆ

ಒಮ್ಮೆ ಬಾರೋ..

ಒಮ್ಮೆ ಬಾರೋ ದೇವರೇ
ನಮ್ಮ ನೋವಿನ ಹಾಡಿಗೆ
ನೀರು ತುಂಬಿದ ಕಣ್ಣ ಹಣತೆಯ
ಬೆಳಗಲಾಗದ ಪಾಡಿಗೆ.

ದೇವ ನಿನ್ನನು ಪೂಜಿಸಿ
ನೋವ ಪಡೆದೆವು ಪ್ರೀತಿಸಿ
ಮಳೆಯ ಭ್ರಮೆಯನು ಮನದಿ ತಂದೆಯ
ಸಿಡಿಲ ಎದೆಯಲಿ ಹೊತ್ತಿಸಿ?

ನೆನ್ನೆಯೆಲ್ಲೋ ಕಳೆದಿದೆ
ನಾಳೆ ಕಾಣದೆ ಅಡಗಿದೆ
ನೆನ್ನೆ-ನಾಳೆಯ ಕಣ್ಣಾಮುಚ್ಚೆಯ-
-ಲಿಂದು ಸುಮ್ಮನೆ ಜಾರಿದೆ.

ಏಕೆ ಹೀಗಿದೆ ಜೀವನ?
ಯಾವ ವಿಷದ ಪ್ರಾಶನ?
ಬೆಳಕ ಹುಡುಕುತ ಎದೆಯ ಕಡೆಯಲು
ಬೆಂಕಿ ದೊರೆಯುವ ಮಂಥನ.

ಮೃದುಲ ಹೃದಯವೇ ಶಾಪವೇ?
ಒಳಿತು ಬಗೆದುದೇ ಪಾಪವೇ?
ಬಾಳ ಹೂವಿದು ಅರಳೊ ಜಾಗವು
ಸಾವು ಕುದಿಯುವ ಕೂಪವೇ?

-ವಿನಾಯಕ ಅರಳಸುರಳಿ,

ಪಾದಕ್ಕೊಂದು ಕಣ್ಣು

ದೇವ ದೇವಳ ತೇರು ಕಾರು
ಕಾರುಬಾರು ಬಂಗಲೆ ಬಾಲ್ಕನಿ
ಮಸಾಲೆ ಮೊಗ್ಗು, ಹುಗ್ಗಿಯ ಹಿಗ್ಗು
ಬಣ್ಣದ ಕಣ್ಣು
ಇವನ್ನೆ ಒಟ್ಟು ಬದುಕಾಗಿಸಿಕೊಂಡು
ನೋಡುವುದರಲ್ಲೇ ಮೈ ಮರೆತಿದ್ದೆ.
ಅತ ಕಾಣುವುದನ್ನು ಕಲಿಸಿದ.

ವಂಕಿ, ಡಾಬು, ಓಲೆ, ನತ್ತು
ತುಟಿಕೆಂಪು, ನರುಗಂಪು
ದೇಹದ ಒನಪು, ಮುಖದ ಹೊಳಪುಗಳೆಡೆಗೆ
ಬೆರಗುಗೊಂಡಿದ್ದೆ.
ಆತ ಪಾದಗಳನ್ನು ನೋಡುವುದನ್ನು ಕಲಿಸಿದ.

ಗಿಡಮರ ಬಳ್ಳಿ
ತೊಟ್ಟ ಹೂ ಹಣ್ಣು ಕೀಳುತ್ತ
ಮೆಲ್ಲುತ್ತ ಸವಿ ಜೇನು ರಸ
ಮೈಮರೆತಿದ್ದೆ.
ಆತ ಗಿಡಮರಗಳ ಕೂಡ
ಸಂವಾದ ಕಲಿಸಿದ.

ಕಲೆಯಾಗಬೇಕು ಕಲಿಕೆ
ಎಂದ ಆತ ಕಲಿತದ್ದನ್ನು, ಎದೆಗಿಳಿದದ್ದನ್ನು
ಅಷ್ಟೇ ಬೇಗ ಮರೆಯುವುದನ್ನು ಕಲಿಸಿದ.
ಕಲಿತ, ಕಲೆತ ಕಲೆಗಳೆಲ್ಲ
ಈಗ ಮರುಜೀವ ತಳೆದಿವೆ.
ಪಾದಕ್ಕೊಂದು ಕಣ್ಣು ಮೂಡಿದೆ.
ಗೆದ್ದಲು ಹಬ್ಬಿದ ಗಿಡಕ್ಕೆ ಜೇನೂ ಕಟ್ಟಿದೆ.

-ನಾಗರೇಖಾ ಗಾಂವಕರ

ಕನಸಿನ ಕುದುರೆ

ಆ, ಅಲ್ಲಿ
ಕರಿ ನೆರಳ ಗೋಡೆಗೆ ತಗುಲಿದ ತ್ಯಕ್ತ
ಭಾವ ದಿಕ್ಕು ತಪ್ಪಿದೆ

ಪುರಾತನ ಬಿಳಿ ವೃತ್ತದ
ಗೋಪುರದ ಮೇಲಿನ ಗಂಟೆ
ಕಿಲುಬು ಹಿಡಿದು ಜೋತು ಬಿದ್ದಿದೆ
ಗಡಿಯಾರದ ಲೋಲಕು ಸ್ಥಬ್ದವಾಗಿದ್ದು
ಯಾವ ಕಾಲಕ್ಕೋ ?

ರೆಕ್ಕೆಗಳಿಗಂಟಿದ ನೆತ್ತರನ್ನು
ಜಾಡಿಸುತ್ತಿರುವ ಬಿಳಿಯ ಪಾರಿವಾಳದ
ಕಣ್ಣುಗಳಲ್ಲಿ ಬುರಲು ಬಿದ್ದ ಆಕಾಶ

ವಿಕ್ಷಿಪ್ತ ಕಿಟಕಿಯಲಿ
ಕಾಲೂರಿನಿಂತ ಕತ್ತಲೆ

ದುಮ್ಮಿಕ್ಕಿ ಆರ್ಭಟಿಸುವ ನದಿ
ಕಡಲು ಸೇರಿ ಶಾಂತವಾಯಿತೇ ?

ಈ ಬಾಣಗಳು ಕಣಿವೆಗಳ
ಸೂರ್ಯರನ್ನ ಗಾಯಗೊಳಿಸಿದ್ದು ಏಕೆ ?

ಒಂದು ಸುಂದರ ಕನಸು ಭಗ್ನವಾದದ್ದು
ಅಥವ
ಸಾಮ್ರಾಜ್ಯ ಒಂದು ಈಗತಾನೆ
ನಶಿಸಿಹೋಯಿತೇ ?

ಏನಾಯಿತು ಕೊನೆಗೆ
ನಾಳೆ ಎಂಬ ಕನಸಿನ ಕುದುರೆ
ಇರುಳ ಗೋರಿಯಲಿ ಮೌನವಾಯಿತೇ ?

-ನೂರುಲ್ಲಾ ತ್ಯಾಮಗೊಂಡ್ಲು

ಅನ್ನದಾತ

ಖುಷಿಯಲಿ ರೈತನು
ಕೃಷಿಯನು ಮಾಡುತ
ಹಸಿವನು ನೀಗಿಸೊ ನಾಯಕನು
ಕೆಸರಿನ ಹೊಲದಲಿ‌
ಬಸಿರನು ತುಂಬಿಸಿ
ಹಸಿರನು ಹುಟ್ಟಿಸಿ ಬೆಳೆಸುವನು

ಉಳುಮೆಯ ಮಾಡಲು
ಮಳೆಯನು ನಂಬುತ
ಛಲದೊಳು ಬಗ್ಗುತ ದುಡಿಯುವನು
ಒಲವನು ಬೇಡುತ
ಬಲವನು ನಂಬುತ
ಹೊಲದಲಿ ಬೀಜವ ಬಿತ್ತುವನು

ಬಿತ್ತಿದ ಬೀಜದ
ನೆತ್ತಿಯು ಚಿಗುರಲು
ಮೆತ್ತಗೆ ಸಂತಸ ಪಡುತಿಹನು
ಮುತ್ತಿರೆ ಕಳೆಗಳು
ಕಿತ್ತೆಸೆಯುತ್ತಲಿ
ಬಿತ್ತನೆ ಸಸಿಗಳ ಪೊರೆಯುವನು

ರಾಗಿಯ ಭತ್ತವ
ಬೀಗುತ ಬೆಳೆವನು
ನೀಗಲು ಹಸಿವನು ಜಗದೊಳಗೆ
ಬಾಗುತ ಭೂಮಿಗೆ
ತಾಗಿಸಿ ಕೈಗಳ
ಬೇಗನೆ ನಮಿಸುವ ಮನದೊಳಗೆ.

ಚನ್ನಕೇಶವ ಜಿ ಲಾಳನಕಟ್ಟೆ.

ಈ ಸೃಷ್ಟಿ

ಆಕಾಶದಲ್ಲಿ ನಕ್ಷತ್ರ ಮಿನುಗು
ಕಂಠಿಹಾರ ಭಗವಂತನಿಗೆ ಅರ್ಪಿತ
ಎಷ್ಟೊಂದು ಮೆರುಗಿನ ವಜ್ರಖಚಿತ
ನಭ ತಬ್ಬಿದ ಪ್ರಕೃತಿಯ ಆಭರಣ

ಯಾರು ಸಿಂಗರಿಸಿದರು
ಎಲ್ಲಿಂದ ತಂದರು
ವಿಶ್ವರೂಪಿ ಸೃಷ್ಟಿಶಕ್ತಿಗೆ
ಎಲ್ಲಿಯೂ ಸಿಗಲಾರದ
ಯಾರು ಮಾಡಲಾಗದ
ಕಣ್ಣಿಗೆ ಕಾಣುವ ಆಭರಣ
ಇಳೆಯ ಮೇಲೆ ಮಂಜಿನೊಲು ಸುರಿವ
ಹಿಮಮಣಿಯ ಹಾರ
ಹಸಿರು ಎಲೆಗಳ ಮೇಲೆ
ತೊಟ್ಟಿಕ್ಕುವ ನೀರಮುತ್ತು
ಬಂಗಾರದಷ್ಟೆ ಶುದ್ದವಾದ ಸೂರ್ಯ
ಚಂದ್ರನಾದರೋ ವಿಧವಿಧ ಆಕ್ರತಿ
ಮೋಡಗಳಾದರೋ ಚಣಕೊಂದು ರೂಪು
ವೈವಿಧ್ಯ ಯಾವ ಸೌಂದರ್ಯದ ಸೊಗಸು
ಭಗವಂತನ ಸ್ರಷ್ಟಿಯಲಿ
ಜೀವ ವೈವಿಧ್ಯ ಪ್ರಾಣಿ ಪಕ್ಷಿ ಮನುಷ್ಯ ಸಂಕುಲ
ಮಳೆ ಸುರಿವ ಮೋಡಗಳು
ದಟ್ಟ ಆಕರ್ಷಣೆಯ ಹೆಮ್ಮರಗಳು
ಹಾಡು ಹಕ್ಕಿಗಳ ಕಲರವ
ಹರಿವ ನೀರಿನ ಮಂಜುಳ ರವ
ಮೊರೆತೆರೆಗಳಬ್ಬರದ ಸಮುದ್ರಗಳು
ದೂರದೂರಕೆ ಎಸೆದ ಬೆಟ್ಟ ಗುಡ್ಡಗಳು
ಕಂದರ ಕಣಿವೆ ಪ್ರಪಾತಗಳು
ಮರುಳುದಿಣ್ಣೆ ಮರಭೂಮಿಗಳು
ಎಷ್ಟೊಂದು ಚೆಲುವು ಈ ಸ್ರಷ್ಟಿ.

-ಸಂತೋಷ್ ಟಿ ದೇವನಹಳ್ಳಿ

ಬಾಳೆಂಬ ಆಟ

ಬಾಳಲಿ ತಾನುರುಳಿಸಿದ
ದಾಳದಂತೆ ನಡೆಯುವ
ಕಾಯಿಗಳ ಕಂಡು ನಸು
ನಗುತ್ತಿರುವನವ ಮೋಜುಗಾರ!

ದುಗವೋ, ಇತ್ತಿಗವೋ
ಭಾರವೋ, ಈ ಎಲ್ಲ
ಭಾರವನು ತಾನೇ ಹೊತ್ತು
ನಡೆಯುವನವ ಮಾಯಗಾರ!

ಜೀವವೆಂಬ ಬುಗುರಿಗೆ
ಚಾಟಿಯಾಗಿ ಆಡಿಸುತ,
ಒಮ್ಮೊಮ್ಮೆ ಚಾಟಿಯನು
ಬೀಸುವನವ ಕಲಾಕಾರ !

ಕಷ್ಟಗಳೆಂಬ ಹಾವನು
ಹಿಂದೆ ಬಿಟ್ಟು, ಬದಿಯಲ್ಲೇ
ಏಣಿಯನಿಟ್ಟು ತನಗಾವುದೂ
ತಿಳಿಯದಂತಿಹನವ ಮೋಡಿಗಾರ!

ಕೈ ಬಿಡದೆ ನಡೆಸುತಲಿ,
ನೆರಳಾಗಿ ಕಾಯಿಗಳ
ಕಾಯುತ್ತಿರುವ ಅವನೇ
ಈ ಜಗದ ಸೂತ್ರಧಾರ!

ಶ್ರೀವಲ್ಲಿ ಮಂಜುನಾಥ

ಮನೆ
ಮನೆ ಹೇಳಿತು, ನನ್ನ ನಿರ್ಜೀವವೆಂದಿರ?
ನನ್ನೊಟ್ಟೆಯಲ್ಲಿ ಅದೆಷ್ಟು ಜೀವಗಳು ಬದುಕಿವೆ ಕಂಡ್ಯ?
ಹುಟ್ಟು-ಸಾವು, ಹಬ್ಬ-ಹರಿದಿನ, ಮದುವೆ-ವಿಚ್ಛೇದನ,
ತಲೆಮಾರು-ಮನೆತನ, ಬಸುರಿ-ಬಾಣಂತಿ,
ಹುಟ್ಟುವಳಿ-ಸಾಗುವಳಿ, ಕೂಸು-ಕರುಗಳು,
ಕಷ್ಟ-ನಷ್ಟ,ಉಪವಾಸ-ಬಡತನ,
ಕಳ್ಳತನ-ಕುಶಾಲುತನ ,ಕೇಕೆ-ಬೊಬ್ಬೆ,
ಕಣ್ಸನ್ನೆ-ಮುಗುಳ್ನಗೆ, ವಯ್ಯಾರ-ಬೇಜಾರ,
ಜಗಳ-ಬೇಗುದಿ, ವ್ರತ-ಕಟ್ಟಳೆ, ಕಲಿಕೆ-ಪ್ರವಚನ
ಠೇಂಕಾರ-ಹರ್ಷೋದ್ಗಾರ,ಪ್ರೀತಿ-ಬೆಸುಗೆ,
ಶ್ರೇಷ್ಟ-ಕನಿಷ್ಟ,ಕಥೆ-ಕಣ್ಣೀರು,ಪಿಸುನುಡಿ-ಬಿರುನುಡಿ,
ಆಲಿಂಗನ-ತಿರಸ್ಕಾರ, ಗುಟ್ಟು-ಗುರುಗುಟ್ಟು,
ಗೊಡ್ಡು-ಬಡಿವಾರ, ಮೋಸ-ಪ್ರಾಮಾಣಿಕತೆ.
ಹೀಗೆ ಎಷ್ಟೋ ಮಾತುಗಳು ಎದೆತುಂಬ ಅಡಿಗಟ್ಟಿ ಸಾಲಿಟ್ಟಿವೆ.
ಒಡೆದು ದನಿಯಾಗುವೆ, ಯಾರಾದರೂ ಕಿವಿಯಾಗುವಿರ?

-ಮಮತಾ ಚಿತ್ರದುರ್ಗ.

ಬರುತಿರುವೆನು ನಿನ್ನೂರಿಗೆ..

ಬರುತಿರುವೆನು ನಿನ್ನೂರಿಗೆ
ಆ ಸೂರಿಗೆ
ಕವಿಶೈಲದ ನಾಡಿಗೆ
ಆ ಗೂಡಿಗೆ.

ಮಲೆನಾಡಿನ ಮಡಿಲಲ್ಲಿನ
ನಿನ್ನೂರಿಗೆ
ಕವಿಶೈಲದ ಬೀಡಿಗೆ
ಬರುವೆನು ನಾನಲ್ಲಿಗೆ.

ಹಕ್ಕಿ-ಪಕ್ಷಿಗಳ ನಾದ
ಕೇಳಲು
ಹಸಿರ ಸಿರಿಯ ಸೊಬಗ
ನೋಡಲು
ಬರುವೆನು ನಿನ್ನೂರಿಗೆ.

ನೀ ಹುಟ್ಟಿದ ಹಟ್ಟಿ
ನೋಡಲು
ನೀ ಕುಳಿತೋದಿದ
ಜಾಗ ಕಾಣಲು
ಬರುವೆನು ನಿನ್ನೂರಿಗೆ.

ರಸ ಋಷಿಯ ರುಜುವಿಗಾಗಿ
ಬರುವೆನು
ಈ ಜನ್ಮದ ಪಾವನಕ್ಕಾಗಿ
ಆಗಮಿಪೆನು.

ನೀನೂಟ್ಟ ಬಟ್ಟೆ-ಬರೆಗಳ
ನೋಡಲು
ನೀ ಏಕಾಂತದಿ ಕಳೆದ ಸ್ಥಳವ
ವೀಕ್ಷಿಸಲು ಬರುವೆನು ನಿನ್ನೂರಿಗೆ.

ವಿಶ್ವಪಥದೊಳ್ ಬರುತಿಹೆನು
ಅನಿಕೇತನದಿ ಸಾಗಿಹೆನು
ಬರುತಿಹೆನು ಗುರುವರ್ಯ
ನನ್ನೊಳಗೆ ನಿನ್ನ ಪರಭಾವಿಸಲು ಬರುತಿಹೆನು.

-ಸುರೇಶ ತಂಗೋಡ

ಮತೀಯ ಗಲಭೆಗಳು

ಧರ್ಮ ಭಾದೆ ಆವರಿಸಿ
ಕಲಹದಲ್ಲೆ ನಮ್ಮನಿರಿಸಿ
ನಾವೀಗ ತೇಟು ಹಾವು ಮುಂಗುಸಿ
ಕಲಿಕಾರ್ತಿಯ ಕನ್ನಿ ಬಿಚ್ಚಿ
ಬಿಟ್ಟವರಾರು ನಂಬಿಸಿ

ಉಡುಗೆ ತೊಡುಗೆಯೊಳು
ಮಾನ ಅವಮಾನ ಅವಿತಿದೆ
ಮಾತೃ ಮಣ್ಣಿನುದರದೊಳು
ಸುಸಂಸ್ಕೃತಿಯೆ ಸವೀತಿದೆ

ಎಲ್ಲವಗಿಲ್ಲಿ ದೇಹವಿದೆ ಗೇಹವಿದೆ
ನರರಲ್ಲಿ ಬದಲಾವಣೆ ಏನಿದೆ
ಭೇಧಭಾವ ಬದಿಗಿಟ್ಟು
ಬದಲಾಗಬೇಕಿದೆ ಒಂದಾಗಬೇಕಿದೆ

ಅಶುಭ ಹೊತ್ತಲಿ
ಮತೀಯ ಮತ್ತಲಿ ಹುಟ್ಟುವವು ಗಲಭೆಗಳು
ಮಾದ್ಯಮ ಮುತ್ತಲು ಮದವೇರಿ
ನಾಡಿನೆಲ್ಲೆಡೆ ಕ್ರಾಂತಿಗೆ ಎದ್ದವು
ಕಾಲೇಜಿನ ಅಪ್ರಾಪ್ತ ಅಣಬೆಗಳು

ಏಕೆ ಭೇಧ ಇದೆಲ್ಲಿಯ ಶೋಧ
ಬರೀ…ವಿವಾದ ವಿಷಾಧ
ಇರಲಿ ವಿನೋದ ಬರೀ..ಸುನಾದ
ನಾಡಲಿ ಇರದು ಪ್ರಮಾದ

ಧರ್ಮಕ್ಕೊಂದು ಬಣ್ಣ ಹಚ್ಚಿ
ತಿನ್ನುವದೊಂದೆ ಅನ್ನ
ಎಲ್ಲದರಲ್ಲೂ ಬಾಲ ಬಿಚ್ಚಿ
ನಾಳೆ, ಸೇರುವದೊಂದೆ ಮಣ್ಣ

-ಅಯ್ಯಪ್ಪ ಬಸಪ್ಪ ಕಂಬಾರ

ಏನ ಚೆಂದ ಮೂಗುತಿ

ನನ್ನವಳು ಧರಿಸಿರುವಳು
ಮೂಗಿಗೆ ಚೆಂದದ ಮೂಗುತಿ..!!

ಹಂಗೊಮ್ಮೆ ಹಿಂದೊಮ್ಮೆ ನೋಡಿ
ನಿನ್ನಂದದಲ್ಲೇ ನನ್ನ ಕೊಲ್ಲಾತಿ..!!

ನೋಟದಲ್ಲೇ‌ ನಶೆ‌ ತರಿಸುವ ಆ ನಿನ್ನ
ಅಂದದ ಮೂಗುತಿ ಎಲ್ಲರ ದೃಷ್ಠಿ ಸೆಳೆದೈತಿ..!!

ಗೆಳತಿ ನಿನ್ನ ಮೇಲೆ ಬೀಳುವಂಗ ಮಾಡೈತಿ
ಕನಸಲ್ಲೂ ಕೆದಕಿ ನಿನ್ನ ನೆನಪ ಕಾಡೈತಿ ಗೆಳತಿ..!!

ಅಕ್ಕಸಾಲಿಗನ ಅಕ್ಕರೆಯೊಳಗೆ
ಹಗಲಿರುಳು ಮೊಗವ ಶೃಂಗರಿಸೈತಿ..!!!

ಮನದೊಳಗೆ ಕೆತ್ತನೆ ಆಗೈತಿ ನಿನ್ನದೇ ಮೂರುತಿ
ಗೆಳತಿ ಆಗಾಗ ಪ್ರೇಮ ಜ್ವರ ಹಿಡಸೈತಿ..!!

ನನ್ನ ಬದುಕಿನ ಪಯಣಕೆ ನೀನೇ ದಿಕ್ಕಾಗಿ
ನೀನಾಗು ನನ್ನ ಒಲವಿನ ಮನದೊಡತಿ…!!

ನಿಮ್ಮವ್ವನಿಗೇ ಬೇಗನೆ ಹೇಳಿ ಬಿಡು ಗೆಳತಿ
ಈಗಲಾದರೂ ಆಗೆನ್ನ ನಮ್ಮನೆಯ ಬೀಗುತಿ..!!

-ಸಂಪೂ ಕಿಚಡಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x