ಕಥಾಲೋಕ

ಹುತ್ತದ ಅರಮನೆಯಲ್ಲಿ ವಿಷದ ಸುಂಟರಗಾಳಿಯು: ಶ್ರೀಧರ ಬನವಾಸಿ

“ಆಂಧ್ರದ ವೀರಬ್ರಹ್ಮೇಂದ್ರಸ್ವಾಮಿ ಎಂಬ ಕಾಲಜ್ಞಾನಿಗಳು ಮುನ್ನೂರು ವರ್ಷಗಳ ಹಿಂದೆನೇ ಈಶಾನ್ಯ ದಿಕ್ಕಿಂದ ಕೊರೊಂಗೊ ಅನ್ನೋ ಮಹಾಮಾರಿ ಕಾಯಿಲೆ ಇಡೀ ಜಗತ್ತನ್ನು ಆವರಿಸಿ ಜನ್ರ ನೆಮ್ದಿನಾ ಹಾಳ್ ಮಾಡುತ್ತೆ, ಜನ್ರು ಕಾಯಿಲೆಯಿಂದ ದಿನಾ ಸಾಯೋ ಹಂಗೆ ಮಾಡುತ್ತೆ ಅಂತ ಭವಿಷ್ಯವಾಣಿ ನುಡಿದಿದ್ರಂತೆ. ನೋಡ್ರಪ್ಪ ನಮ್ ದೇಶ್ದದಲ್ಲಿ ಎಂತಂಥಾ ಮಹಾನ್‌ಪುರುಷ್ರು ಈ ಹಿಂದೆನೇ ಬದುಕಿ ಬಾಳಿ ಹೋಗವ್ರೆ ಇಂತವ್ರ ಹೆಸ್ರನ್ನ ಈ ಹಾಳಾದ್ ಕೊರೊನಾ ಕಾಲ್ದಲ್ಲೇ ನಾವು ಕೇಳೊಂಗಾಯ್ತು. ಈ ಕೆಟ್ಟ ಕಾಯಿಲೆನಾ ಮುನ್ನೂರು ವರ್ಷಗಳ ಹಿಂದೇನೆ ಅವ್ರು ಹೇಳಿದ್ರು ಅಂದ್ರೆ ಅವ್ರಿಗೆ ಎಂತಾ ತ್ರಿಕಾಲ ಜ್ಞಾನ ರ‍್ಬೇಡ… ಮಹಾನ್ ದೈವೀ ಪುರುಷ ರ‍್ಬೇಕು ಇವ್ರು…” ಅಂತ ಹೇಳುತ್ತಾ ಬಾಯಲ್ಲಿ ತುಂಬಿಕೊಡಿದ್ದ ಎಲೆ ಅಡಿಕೆ ರಸವನ್ನು ಉಗಿದು ದೇಸಾಯಿ ಮಾಸ್ರ‍್ರು ಹೇಳಿದ್ದರು.
ಅಂಗಡಿ ಜಗಲಿಯ ಕೂತಿದ್ದ ಅವರ ದೋಸ್ತ್ಗಳು ಅವರ ಮಾತನ್ನೇ ಕೇಳುತ್ತಿದ್ದರು.

ವೈಜಯಂತಿಪುರದ ರಿಟರ‍್ಡ್ ದೇಸಾಯಿ ಮಾಸ್ರ‍್ರು ಹಿಂದಿನ ದಿನ ಟೀವಿಯಲ್ಲಿ ನೋಡಿದ್ದ ವೀರಬ್ರಹ್ಮೇಂದ್ರರ ಕಾಲಜ್ಞಾನದ ಕುರಿತ ಕಾರ್ಯಕ್ರಮದ ಬಗ್ಗೆ ಇನ್ನಷ್ಟು ವಿಸ್ತಾರವಾಗಿ ಮಾತನಾಡತೊಡಗಿದರು. ಅವರ ಅಂಗಡಿಯ ಕಟ್ಟೆಯಲ್ಲಿ ಕೂತು ಮಾತನಾಡಲು ಪ್ರತಿನಿತ್ಯ ಬರುತ್ತಿದ್ದವರು ಆ ದಿನವೂ ಸೇರಿದ್ದರು. ಊರ ಉಸಾಬರಿ ಲೋಕಪಟ್ಟಾಂಗದ ಮಾತುಕತೆ ಮಾಡುವ ಈ ಅರವತ್ತು ದಾಟಿದವರ ಒಂದು ಗುಂಪಿಗೆ ದೇಸಾಯಿ ಮಾಸ್ರ‍್ರೇ ಲೀರ‍್ರು ಆಗಿದ್ದರು. ಇವರ ಪಟ್ಟಾಂಗ ಲಾಕ್‌ಡೌನ್ ಸಮಯದಲ್ಲಿಯೂ ಕೂಡ ಮುಂದುವರೆದಿತ್ತು. ಪೋಲಿಸರು ಬಂದು ಬೈದು ಮನೆಗೆ ಕಳಿಸುವವರೆಗೂ ಅಂಗಡಿಕಟ್ಟೆ ಖಾಲಿಯಾಗುತ್ತಿರಲಿಲ್ಲ. ಇವರ ಊರ ಪಂಚಾಯ್ತಿ ಮಾತುಕತೆ ಕೇಳುತ್ತಿದ್ದ ಜನರಿಗೂ ಆ ದಿನದ ಸಮಯ ಕಳೆಯಬೇಕು. ದಿನ ಬೇಗ ಓಡಿದರೆ ಸಾಕೆನಿಸಿತ್ತು. ಈ ಗಾಂಪರ ಗುಂಪಿನ ಮಾಸ್ರ‍್ರಿಗೂ ಪಾಠ ಮಾಡುವ ಖಯಾಲಿಯ ಋಣ ತೀರಿದಂತಾಗಬೇಕಿತ್ತು.

ಊರಿಗೇ ಊರೇ ಮೌನವಾಗಿದೆ. ನಿಶ್ಯಬ್ದ ಆವರಿಸಿದೆ. ವೈಜಯಂತಿಪುರ ಈ ಹಿಂದೆ ಎಂದೂ ಇಂತಹ ಮೌನದ ಸದ್ದನ್ನು ಆಲಿಸಿರುವುದು ಅನುಮಾನ. ಊರು ಕೇರಿಗಳ ನಡುವೆ ಓಡಾಟವಿಲ್ಲ. ಅಪರೂಪಕ್ಕೆ ಅಲ್ಲೋ ಇಲ್ಲೋ ಹೆಗಲ ಮೇಲಿನ ಟವಲನ್ನು ಮುಖಕ್ಕೆ ಸುತ್ತಿಕೊಂಡು ರಾತ್ರಿ ಕಳ್ಳರ ಹಾಗೆ ಕಾಣುತ್ತಾ, ತೋಟ ಗದ್ದೆ ಅಂತೆಲ್ಲಾ ಓಡಾಡುತ್ತಿದ್ದ ರೈತಾಪಿ ಜನರ ಸೈಕಲ್, ಬೈಕ್‌ಗಳ ಓಡಾಟ, ಪೋಲಿಸರ ಜೀಪಿನ ಸೈರನ್ ಸದ್ದಷ್ಟೇ ಊರಲ್ಲಿ ಕೇಳುತ್ತಿತ್ತು! ಹೊರಗಡೆ ಸುಮ್ಮನೆ ಓಡಾಡುವ ಜನರೆಲ್ಲರೂ ಪೋಲಿಸರ ಕಣ್ಣುಗಳಿಗೆ ಹೆದರಿ ಮನೆಯೊಳಗೆ ಬಂಧಿಯಾಗಿದ್ದಾರೆ. ಹೆದರಿಕೆಯ ಕೋಟೆ ಇಡೀ ಊರು ಕೇರಿಗಲ್ಲಿಗಳನ್ನು ಸುತ್ತುವರೆದಿದೆ. ಹೊರಗಡೆ ಬಂದರೆ ಕೋರೋನಾ ಎಂಬ ರಾಕ್ಷಸ ಕೊಂದುಬಿಡುತ್ತಾನೆ; ಮನೆಯಲ್ಲಿರಿ ಎಂದು ಬೊಬ್ಬಿಡುತ್ತಿದ್ದ ಟಿವಿಗಳ ಭಯ! ಆ ಕೆಟ್ಟ ಕಾಯಿಲೆ ಗಾಳಿಯ ಮೂಲಕ ಮೂಗಿಗೆ ಸೇರಿ ನಮ್ಮನ್ನು ಕೊಂದುಬಿಡುತ್ತದೆ ಎಂದು ಹಲವರು ಹೇಳಿದ ತಲೆಬುಡವಿಲ್ಲದ ಮಾತಿನ ಭಯ! ಎಂದಿದ್ರೂ ಒಂದಲ್ಲಾ ಒಂದಿನ ಸಾಯೋದೆ ಅದಕ್ಯಾಕ್ ಈಗ್ಲೆ ಭಯ ಪಡ್ಬೇಕು ಅಂತ ಹೇಳ್ತಿದ್ದ ಇನ್ನೂ ಹಲವು ಬೇಜವಾಬ್ದಾರಿ ಜನ. ಅಂತೂ ವೈಜಯಂತಿಪುರದ ಯಾವುದೇ ಕೇರಿ, ಗಲ್ಲಿಗೆ ಹೋದರೆ ಈಗ ಕೊರೊನಾದ್ದೆ ಮಾತುಕತೆ. ಕಾರವಾರ, ಶಿರಸಿ, ಶಿವಮೊಗ್ಗದ ಕಡೆ ಅಲ್ಲೋ ಇಲ್ಲೋ ವರದಿಯಾಗುತ್ತಿದ್ದ ಕೊರೊನಾ ಕೇಸ್‌ಗಳು ಈಗ ನಮ್ಮ ಊರಿಗೆ ಬಂದಿದೆಯೆನೋ ಎಂಬತೆ ಇವರ ಮಾತುಕತೆ! ರೋಗ ಅಂಟಿಸಿಕೊಂಡವರು ವೈಜಯಂತಿಪುರದಲ್ಲಿ ಯಾರಾದರೂ ಕಳ್ಳರಂತೆ ನಿಗೂಢವಾಗಿ ಅಡಗಿ ಕೂತಿರುವರೇ? ಅದರಲ್ಲೂ ಅನ್ಯ ಧರ್ಮದವರ ಮೇಲಂತೂ ಜಾಸ್ತಿ ಅನುಮಾನ…ಗುಸುಗುಸು, ಬಿಡಿಸಿ ಹೇಳದ ಮಾತುಗಳು! ವಾರ್ಡ್ಗೊಂದು ಸರ್ಕಾರ ನೇಮಕ ಮಾಡಿದ್ದ ಆಶಾ ಕಾರ್ಯಕರ್ತೆಯರು. ಅಕ್ಕಪಕ್ಕದ ಮನೆಗಳಿಗೆ ಯಾರಾದರೂ ಹೊರಗಿನಿಂದ ಬಂದಿದ್ದರೆ, ಅವರಿಗೆ ಕೂಡಲೇ ದೂರು ಕೊಡುವ ಮಿಕಗಳು ಪ್ರತಿಮನೆಯಲ್ಲೂ. ಬಂದವರಿಗೆ ಕೈಮೇಲೆ ಸೀಲು ಜೊತೆಗೆ ಹದಿನೈದು ದಿನಗಳು ಹೊರಗೆ ಬರದಂತೆ ಹೋಮ್ ಕ್ವಾರಂಟೈನ್! ಕೊರೊನಾ ಎಂಬ ಕಾಯಿಲೆಯ ಬಗ್ಗೆ ನ್ಯೂಸ್ ಚಾನೆಲ್‌ಗಳು ನೀಡುತ್ತಿದ್ದ ಕೆಟ್ಟ ಬ್ರೇಕಿಂಗ್ ನ್ಯೂಸ್‌ಗಳು…! ಒಂದಾ ಎರಡಾ… ಆರಂಭದಲ್ಲಿ ಇದೇನಾ ಪ್ರಳಯ…ಭೂಮಿ ನಾಶ ಆಗ್ತಾ ಇದೆಯಾ ಎಂಬಂತೆ ವಾತಾವರಣ, ಸೂಚನೆಗಳು! ಕೊನೆಗೆ ಇವೆಲ್ಲವೂ ಆರಂಭದಲ್ಲಿ ಪ್ರಶ್ನಾರ್ಥಕವೆಂಬಂತೆ ಕಂಡರೂ ಅಂತ್ಯದಲ್ಲಿ ಸಹಜವೆಂಬಂತೆ ರೂಪುಗೊಂಡಿದ್ದು ಮಾತ್ರ ಅಷ್ಟೇ ಖೇದದ ವಿಚಾರ.

ಈ ಹಿಂದೆ ವೈಜಯಂತಿಪುರ ಬಿಟ್ಟವರು ಮತ್ತೆ ಗೂಡು ಸೇರಿದ್ದಾರೆ. ಹೊರಗಿಂದ ಬಂದವರು ಯಾರಾದರೂ ಈ ಕಾಯಿಲೆ ಅಂಟಿಸಿಕೊಂಡಿರುವವರೇ ಎಂಬ ಅನುಮಾನ ಎಲ್ಲರಲ್ಲೂ. ಊರು ಸೇರಿದವರು ರಕ್ತಸಂಬಂಧಿಗಳು, ಆತ್ಮೀಯರಾದರೂ ಅಪರಿಚಿತ ಭಾವ! ಕೈಕುಲುಕಲು ಸಂಕೋಚ. ಮುಟ್ಟಿ ಮಾತನಾಡಿಸಿದರೆ ಕೊರೊನಾ ಅಂಟೀತು ಎಂಬ ವಿಚಿತ್ರ ಭ್ರಮೆ. ಬೆಂಗಳೂರು, ಬಾಂಬೆಯವರಾದರೆ ಕಿಲೋಮೀಟರ್‌ಗಳಷ್ಟು ಜನರ ದೂರ ಓಟ… ಈ ಹಿಂದೆ ಊರಿಗೆ ಬಂದಾಗ ಖುಷಿಯಿಂದ ನೋಡಿ ಮಾತನಾಡಿಸುತ್ತಿದ್ದ ಅದೇ ಕಣ್ಣುಗಳು, ಈ ದುರಿತ ಸಮಯದಲ್ಲಿ ಯಾಕಾದ್ರೂ ಬಂದಿರುವರೋ ಊರು ಹಾಳು ಮಾಡೋಕೆ ಎಂದು ಮನಸಿನಲ್ಲಿ ಗೊಣಗುತ್ತಾ ಅಸಡ್ಡೆಯಿಂದ ನೋಡುತ್ತಿವೆ. ಎಲ್ಲರ ಮುಖಗಳಲ್ಲಿ ಖುಷಿಯಿಲ್ಲ! ಊರ ಮಕ್ಕಳು ವಾಪಾಸು ಬಂದಿರುವುದಕ್ಕೆ ನಲಿವಿಲ್ಲ. ಹೊರಗಿಂದ ಬಂದವರ ನಡುವೆ ಪ್ರೀತಿ, ವಿಶ್ವಾಸವಿದೆ. ಅದೇ ಅಲ್ಲಿದ್ದವರಿಗೂ ಬಂದವರಿಗೂ ಚೂರು ಇರುಸು ಮುರುಸು… ಲಾಕ್‌ಡೌನ್‌ನಿಂದ ಇಡೀ ದೇಶವೇ ಬೇಲಿ ಹಾಕಿಕೊಂಡು ಬದುಕಬೇಕಾದ ಸಂದರ್ಭದಲ್ಲಿ ಬೆಂಗಳೂರು, ಮುಂಬೈಯಲ್ಲಿನ ಪುಟ್ಟ ಮನೆಯಲ್ಲಿದ್ದುಕೊಂಡು ಹೊರಗೆ ಹೋಗದೇ ಜೈಲಿನಲ್ಲಿ ಬಂಧಿಯಾಗಿ ಬದುಕುವುದಕ್ಕಿಂತ ಹುಟ್ಟಿದ ಊರು ವೈಜಯಂತಿಪುರದಲ್ಲಿ ನೆಮ್ಮದಿಯಿಂದ ನಾಲ್ಕು ಮನೆಯವರೆಗೆ ಓಡಾಡುವಷ್ಟು ಸ್ವಾತಂತ್ರ್ಯಯ ಬಯಸಿ ಬಂದಿದ್ದ ಹಕ್ಕಿಗಳು ತುಂಬಾ ಜನ ಇದ್ದರು. ಇಷ್ಟಾದರೂ ಕೊರೊನಾ ಎಂಬ ದುರಿತ ಕಾಲದ ಸಾವಿನ ವ್ಯಾಪಾರಿಯ ಬಗ್ಗೆ ಎಲ್ಲರಿಗೂ ಸರಣಿ ಭಯ! ಜೀವ ಉಳಿಸಿಕೊಂಡು ಬದುಕಲು ಹುಟ್ಟಿದ ಊರೇ ಬೇಕಾಯಿತು ಎಂಬ ಕೆಲವರ ಲೇವಡಿ ಮಾತುಗಳು ಬೇರೆ.

ಲಾಕ್‌ಡೌನ್ ಮಾಡಿದಾಗಿನಿಂದ ವೈಜಯಂತಿಪುರವನ್ನು ಸಂಪರ್ಕಿಸುವ ರಸ್ತೆಗಳು ಸತ್ತಂತೆ ನಟಿಸುತ್ತಿವೆ. ಮೊದಲಿನಂತೆ ಸರ್ಕಾರಿ ಖಾಸಗಿ ಬಸ್ಸು ವಾಹನಗಳ ಸಂಚಾರವಿಲ್ಲ. ಊರ ಜನರು ಹೆಚ್ಚಿನ ಕೆಲಸಗಳಿಗೆ ನಂಬಿದ್ದ ಶಿರಸಿಯನ್ನು ಕೂಡ ಈಗ ಯಾರೂ ಕೇಳುವರಿಲ್ಲ; ಜಾಸ್ತಿ ಹೋಗುವವರಿಲ್ಲ. ಮಾರಮ್ಮನ ಗುಡಿಯನ್ನು ಮುಚ್ಚಲಾಗಿದೆ. ಇಷ್ಟು ವರ್ಷಗಳಲ್ಲಿ ಇಲ್ಲದ ಲೋಕದ ಸಂತಾಪ, ಶೋಕಾಚರಣೆ ಈ ದುರಿತ ಕಾಲದಲ್ಲಿ ಒಟ್ಟಿಗೆ ಮೆರೆಯುತ್ತಿದೆ. ಒಂದೆಡೆ ಸರಣಿ ಸಾವು! ಇನ್ನೊಂದೆಡೆ ಸತ್ತಹೆಣಗಳಲ್ಲಿ ಭ್ರಷ್ಟಾಚಾರ… ಆಸ್ಪತ್ರೆಗಳು, ರಾಜಕೀಯ ಪಾರ್ಟಿಗಳು, ಸರ್ಕಾರಿ ಅಧಿಕಾರಿಗಳು ಹೊರತಲ್ಲ… ಹಾಗಾದರೆ ಜನರಲ್ಲಿದ್ದ ಆ ಹಿಂದಿನ ಮಾನವೀಯತೆ ಎಲ್ಲಿ ಹೋಯಿತು?

ದೇಸಾಯಿ ಮಾಸ್ರ‍್ರು ಆ ದಿನವೂ ಕಾಲಜ್ಞಾನಿಗಳ ಮಾತನ್ನೇ ಶುರುವಿಟ್ಟುಕೊಂಡು ಕೂತಿದ್ದವರ ಜೊತೆ ಹತ್ತು ಹಲವು ವಿಚಾರಗಳ ಕುರಿತು ಮಾತನಾಡುತ್ತಿದ್ದರು. ನಮ್ಗೂ ವಯಸ್ಸಾಯ್ತು. ಇನ್ನೆಷ್ಟು ದಿನಗಳು ನಾವು ಹಿಂಗೆ ರ‍್ತೀವಿ ಅಂತ ಹೇಳೋದು. ಇರೋಷ್ಟು ದಿನದೊಳ್ಗೆ ಈ ರೋಗ ಅಂಟಿಸ್ಕೊAಡು ಮನಿ, ಮಕ್ಳು ಕಳ್ಳುಬಳ್ಳಿಗೆ ಮುಖ ನೋಡ್ದಂಗೆ ಸಾಯೋದ್ಕಿಂತ, ಜೀವ ಉಳಸ್ಕಂಡು ಹಂಗೆ ಸಾಯೋದು ಸಾವಿರ ಪಾಲು ದೊಡ್ದು ಏನಂತೀರಿ.. ಮಲ್ಲಪ್ಪ ಶೆಟ್ರೆ?' ಎಂದು ಕೇಳಿದರು. ನೀವು ಹೇಳೊದು ಸರಿ ಇದ ಮಾಸ್ರ‍್ರೇ.. ಯರ‍್ಯಾರ ಹಣೆಯ್ಯಾಗ ಏನ್ ರ‍್ದತೋ ಅದಂಗೆ ಆಯ್ತತೆ?’ ಎಂದು ಉತ್ತರ ಕೊಟ್ಟರು.
ಆಗಷ್ಟೇ ದೇಸಾಯಿ ಮಾಸ್ರ‍್ರ ಅಂಗಡಿ ಕಟ್ಟೆಯ ಇನ್ನೊಬ್ಬ ಖಾಯಂ ಗಿರಾಕಿ ಈಳಿಗೇರ ಬಸಪ್ಪ ಊರಾಗಿನ ಒಂದು ಹೊಸ ಸುದ್ದಿಯನ್ನು ತಂದಿದ್ದ. ಅದು ಬಟ್ಟೆಯಂಗಡಿ ಮಲ್ಲಿಕಾರ್ಜುನನ ಬಗ್ಗೆ.
ಈ ಬಟ್ಟೆಯಂಗಡಿ ಮಲ್ಲಿಕಾರ್ಜುನ್ ಇದ್ದಾನಲ್ಲ! ಅವನೆಂಥ ಹಡಶೀ ಮಗಾ ಅಂತೀರಿ. ಇಂತೋರು ಊರಾಗ ಒಬ್ರು ಇದ್ರ ಸಾಕು. ಇಡೀ ಊರಿಗೆ ಊರೇ ಸ್ಮಶಾನ ಆಗೋದ್ರಲ್ಲಿ ಅನುಮಾನ ಇಲ್ಲ!' ಅಂತದ್ದೇನಾಯ್ತಪ್ಪ ಬಸಪ್ಪ..?’ ಶೆಟ್ರು ಕುತೂಹಲದಿಂದ ಕೇಳಿದರು.

ಅದನ್ನೇನ್ ಕೇಳ್ತಿ ಬಿಡ್ರಿ ಶೆಟ್ರೆ. ಈ ಯಪ್ಪಾ ಒಂದ್ ಹದಿನೈದು ದಿನದ ಹಿಂದೆ ಬಟ್ಟೆ ಹೊಲ್‌ಸೆಲ್ ತಗೊಳೋಕೆ ಬಾಂಬೆಗೆ ಹೋಗಿದ್ನಂತೆ. ಇವ ಅಲ್ಲಿಗೆ ಹೋಗಿದ್ದನ್ನು ಯರ‍್ಗೂ ಹೇಳ್ದೆ, ಸೀದಾ ಊರಿಗೆ ಬಂದು ಊರ್ ತುಂಬಾ ಓಡಾಡ್ಕೊಂಡು ಇದ್ನಂತೆೆ. ಅವನ ಅಂಗಡ್ಯಾಗ ಕೂತು ವ್ಯಾಪಾರ ಕೂಡ ಮಾಡಿದ್ನಂತ! ಎಂಥಾ ಮಿಂಡ್ರಿಗುಟ್ಟಿದ್ದೋನ್ ರ‍್ಬೆಕು ಇವ. ಹೋದೋನ್ ಬಂದ್ಮೇಲೆ ತೆಪ್ಪಗೆ ಮನ್ಯಾಗ ರ‍್ಬೇಕಿತ್ತು ತಾನೇ? ಇವ ಅದನ್ ಬಿಟ್ಟು ಊರ್ ತುಂಬಾ ಓಡಾಡಿದ್ರ ಹೆಂಗ? ಮೊದ್ಲೇನೆ ಬಾಂಬೆದಾಗ ಈ ಕಾಯಿಲೆ ಜಾಸ್ತಿ ಅಂತೆ' ಈ ವಿಚಾರ ಪೋಲಿಸ್ರಿಗೆ ಗೊತ್ತಾಯ್ತಾ?’ ಅಂತ ಮಾಸ್ರ‍್ರು ಕೇಳಿದರು.
ಗೊತ್ತಾಗ್ದೇ ಏನು ಮಾಸ್ರ‍್ರೆ? ಇವ ಬಾಂಬೆಗೆ ಹೋಗಿದ್ದು ಗೊತ್ತಿದ್ದೋರು ಒಬ್ರು ಪೋಲಿಸ್ರಿಗೆ ಸುದ್ದಿ ಕೊಟ್ರಂತೆ. ಸ್ಟೇಷನ್ ಪೋಲಿಸ್ರು ಬಂದು ಇವ್ನ ವಿಚಾರಿಸಿ ದಬಾಯಿಸಿದ್ಮೇಲೆ ಅವ ಅಲ್ಲಿಗೆ ಹೋಗಿದ್ದನ್ನು ಒಪ್ಕೊಂಡ್ನಂತೆ. ಅಲ್ಲಿರ‍್ಗೂ ಅವನ ಜೊತೆ ಇದ್ದೋರು, ಓಡಾಡಿದೋರ್, ಮಾತಾಡ್ಸಿದರ‍್ದು ಏನ್ ಕತೆ? ಇವತ್ತು ಅವನ್ನ ಪರೀಕ್ಷೆ ಮಾಡ್ಸೊಕೆ ಶಿರಸಿಗೆ ರ‍್ಕೊಂಡು ಹೋಗಿದಾರಂತೆ. ಅಕಸ್ಮಾತ್ ಅವಂಗ ಆ ಕಾಯಿಲೆ ಇದ್ರೆ ಇಡೀ ಊರಿಗೆ ಕಾಯಿಲೆ ಬಂದುಬಿಡುತ್ತೆ. ಅಂತದ್ರಾಗ ಏನ್ ಮಾಡ್ದೆ ಮನೇಲಿ ಕುತಿರೋ ನಮ್ಮಂತ ಅಮಾಯಕ್ರು ಕೂಡ ಇಂತವ್ರಿಂದ ಸಾಯ್ಬೇಕಾಗುತ್ತೆ...' ಅಯ್ಯೋ ಸಾಯೋ ಮಾತು ಬಿಡು ಬಸಪ್ಪ. ಏನೂ ಆಗಂಗಿಲ್ಲ. ಸೂರ್ಯ ಬೆಳಗ್ತಿರೋ ಈ ಟೈಮಲ್ಲಿ ಯಾಕ ಅಪಶಕುನ ನುಡೀತಿ?’

ಆದ್ರೂನೂ ಅವ ಮಾಡಿದ್ದು ತಪ್ಪು ಮಾಸ್ರ‍್ರೆ... ಹೋದೊನ್ ಹೋದ. ಬಂದ್ಮೇಲಾದ್ರೂ ಮನ್ಯಾಗ ತೆಪ್ಪಗೆ ಕುತ್ಕೋಬೋದಿತ್ತು. ಏನೋ ಅವ ಕಾಯಿಲೆ ಅಂಟಿಸ್ಕೊಂಡು ಬಂದಿಲ್ಲ ಅಂದ್ರೆ ಒಳ್ಳೆದೇ, ಅಕಸ್ಮಾತ್ ಅವಂಗ ಕೊರೊನಾ ಕಾಯಿಲೆ ಇದೆ ಅಂತಾದ್ರೆ ಇಡೀ ಊರೇ ಸ್ಮಶಾನ ಆಗೋಲ್ವಾ?' ಈಳಿಗೇರ ಬಸಪ್ಪ ಮಾತನಾಡುತ್ತಲೇ ಇದ್ದ. ಅವನ ಸಿಟ್ಟು ಪ್ರತಿ ಮಾತಿನಲ್ಲೂ ಕೆಟ್ಟ ಬೈಗುಳಗಳಲ್ಲಿ ಕಾಣುತ್ತಿತ್ತು. ದಿನಾ ಟೀವ್ಯಾಗ ಅದನ್ನೇ ಹೇಳ್ತಾ ಇದಾರೆ. ಅಮೇರಿಕ, ಇಂಗ್ಲೆಂಡ್‌ ನಂತ ದೊಡ್ಡ ದೇಶದಾಗೂ ಜನ ಈ ಕೊರೊನಾದಿಂದ ಸಾಯ್ತಿದಾರಂತೆ. ಇದಕ್ಕಿನ್ನೂ ಮದ್ದೆ ಕಂಡು ಹಿಡಿದಲ್ವಂತೆ. ಬಾಳ ಕೆಟ್ಟ ಕಾಯಿಲೆ ಅಂತಪಾ ಇದು. ಒಬ್ರಿಂದ ಒಬ್ರಿಗೆ ಬಾಳ ಬೇಗ ಹರಡುತ್ತಂತೆ. ಮನ್ಯಾಗ ಒಬ್ರಿಗೆ ಬಂದ್ರ ಸಾಕು. ಉಳಿದವ್ರೆಲ್ರಿಗೂ ಬೇಗ ಕಾಯಿಲೆ ಬಂದುಬಿಡುತ್ತಂತೆ. ಒಂದು ರೀತಿ ನಮ್ ಹೆಂಡ್ತಿ ಮಕ್ಳಿಗೆ ನಾವೇ ವಿಷಾ ಕೊಟ್ಟು ಸಾಯ್ಸಿದಂಗೆ. ಇಂತಾ ಕಾಯಿಲೆ ಬಗ್ಗೆ ಹುಡುಗಾಟಿಕ ಮಾಡಕ್ಕೆ ಆಗ್ತದಾ?’
ಬಸಪ್ಪನ ಹಿಂದಿನ ಸಿಟ್ಟಿಗೆ ತಾನು ಕೇಳಿದ್ದ ಈ ಮಾತು ಪೂರಕವಾಗಿತ್ತು.

ಅಂಗಡಿಯ ಹೊರಗೆ ಕೂತಿದ್ದ ಜನರ ನಡುವೆ ಹಲವು ಮಾತುಗಳು ಬಸಪ್ಪನ ಮಾತಿಗೆ ಹುಟ್ಟಿಕೊಂಡವು. ಇಡೀ ವೈಜಯಂತಿಪುರದಲ್ಲಿ ಯರ‍್ಯಾರ ಮನೇಲಿ ಅವರವರ ಕಡೇರು ಬಂದು ಸರ‍್ಕೊಂಡಿದಾರೆ ಅನ್ನೋದ್ರ ಬಗ್ಗೆ ಒಂದು ದೊಡ್ಡ ಕ್ಯಾಬಿನೆಟ್ ಮೀಟಿಂಗ್ ರೀತಿ ಅಲ್ಲಿ ಚರ್ಚೆ ಆಯ್ತು. ಎಂದೂ ಹೆತ್ತವ್ರ ಮುಖ ನೋಡಾಕೂ ಬರದವ್ರು ಈಗ ಕಾಯಿಲೆಯ ನೆಪ ಇಟ್ಕೊಂಡು ಬಂದು ಮಕ್ಕಳು ಮೊಮ್ಮಕ್ಕಳೊಂದಿಗೆ ಊರು ಸೇರಿದಾರೆ. ಈ ಕೊರೊನಾ ಟೈಮಲ್ಲೇ ಪ್ರತಿ ಮನೇದು ವಂಶವೃಕ್ಷದ ಸಾಲಾವಳಿನ ನೀಟಾಗಿ ಮಾಡ್ಬೋದು. ಮನೆತನದವ್ರು ಎಲ್ರೂ ಬಂದರ‍್ತಾರೆ. ಇದನ್ನು ಹೇಳೋ ಆ ಹೆಳವರಾದ್ರೂ ಬಂದಿದ್ರೆ ಚನ್ನಾಗರ‍್ತಿತ್ತಿನೋ?'- ಗಾಡಿ ನಿಂಗಣ್ಣ ಈ ಮಾತು ಹೇಳಿ ಗೊಳ್ಳನೆ ನಕ್ಕುಬಿಟ್ಟ. ಕಾಲ ಎಲ್ಲಾನೂ ಪಾಠ ಕಲ್ಸುತ್ತೆ ನಿಂಗಣ್ಣ. ಎದೆ ಉಬ್ಬಿಸಿ ಬದುಕ್ದೋನು, ಒಂದಲ್ಲಾ ಒಂದು ಬಾಗ್ಲೆಬೇಕು, ನೆಲಕ್ಕೆ ಮಂಡಿಯರ‍್ಲೇಬೇಕು. ಮೂರು ಬಿಟ್ಟವನು ಕೂಡ ಮಣ್ಣು ಸರ‍್ಲೇಬೇಕು.’ ದೇಸಾಯಿ ಮಾಸ್ರ‍್ರು ಈ ಮಾತನ್ನು ಹೇಳಿ ಅಂಗಡಿಯಲ್ಲಿದ್ದ ಗಡಿಯಾರ ನೋಡಿದರು. ಪೋಲಿಸರು ಬರುವ ಹೊತ್ತಾಯ್ತು ಎಂಬಂತೆ ಉಳಿದವರಿಗೆ ಸನ್ನೆ ಮಾಡಿದರು.
ಮಾತನಾಡುತ್ತಿದ್ದವರಿಗೆ ಸಮಯ ಹೋದದ್ದೇ ಗೊತ್ತಾಗಲಿಲ್ಲ. ಆಗಲೇ ಹತ್ತು ಗಂಟೆಯಾಗಿತ್ತು. ಮನೆಯವರು ತಿಂಡಿಗೆ ಕೂಗುವ ಮುನ್ನ ಜೊತೆಗೆ ಪೋಲಿಸರು ರೌಂಡ್ಸ್ಗೆ ಬರುವುದರೊಳಗೆ ಎಲ್ಲರೂ ತಮ್ಮ ಮನೆಯನ್ನು ಸೇರಿಕೊಳ್ಳಬೇಕಿತ್ತಷ್ಟೇ. ಇಲ್ಲವಾದರೆ ಅವರ ಲಾಠಿ ಏಟಿನ ರುಚಿ ಸವಿಯಬೇಕಿತ್ತಷ್ಟೇ!

*****

ವೈಜಯಂತಿಪುರದಿಂದ ಸೊರಬಕ್ಕೆ ಸಂಪರ್ಕಿಸುವ ವರದಾ ನದಿಯ ಸೇತುವೆಯು ಇಂದು ಅನೇಕ ಹೊಸ ಮುಖಗಳನ್ನು ನೋಡುತ್ತಿದೆ. ಪ್ರತಿದಿನ ವಾಕಿಂಗ್ ಮಾಡುವವರು, ಊರಿಗೆ ಹೊಸದಾಗಿ ಬಂದವರು ಪರಿಚಯವಿರುವವರ ನಡುವೆ ಸಣ್ಣ ನಗುವಿನ ಮೂಲಕವೇ ಮಾತುಕತೆ! ಒಬ್ಬರನ್ನೊಬ್ಬರು ನಿಂತು ಹತ್ತಿರ ಮಾತನಾಡುವ ಹಾಗಿಲ್ಲ. ಕಾಲುಗಳು ನಡೆಯುತ್ತಲೇ ಇರಬೇಕು. ದೂರದಿಂದಲೇ ಕೈಗಳು ಮಾತನಾಡುತ್ತಿವೆ. ಎಂದಿನಂತೆ ಬೆಂಗಳೂರು, ಶಿವಮೊಗ್ಗದಿಂದ ಮುಂಜಾನೆ ಬರುತ್ತಿದ್ದ ವಾಹನಗಳ ಸದ್ದಿಲ್ಲ. ರಸ್ತೆಯ ಅಕ್ಕಪಕ್ಕದ ಹೊಳೆಬಯಲಿನ ಭತ್ತದ ಗದ್ದೆಗಳ ಹಸಿರು ಮುಂಜಾನೆ ವಾಕಿಂಗ್ ಮಾಡುವವರಿಗೆ ಕಣ್ಣಿಗೆ ಹಬ್ಬವಾಗಿತ್ತಷ್ಟೇ. ವರದೆಯ ಹರಿವು ಸಾಮಾನ್ಯವಾಗಿತ್ತು. ಸೇತುವೆಯಾಚೆಗಿನ ಕಪಗೇರಿ, ತಿಗಣಿ, ಭಾಸಿ, ಸಂಪಗೋಡು, ನರೂರು ಇನ್ನೂ ಹಲವು ಹಳ್ಳಿಗಳಿಂದ ವೈಜಯಂತಿಪುರಕ್ಕೆ ಖಾಯಂ ಆಗಿ ಬರುತ್ತಿದ್ದವರೆಲ್ಲರೂ ಊರಿಗೆ ಬರಲು ಹೆದರುತ್ತಿದ್ದಾರೆ. ವೈಜಯಂತಿಪುರಕ್ಕೂ ಬೆಂಗಳೂರು, ಮಂಗಳೂರಿಗೆ ಇರುವ ಸಂಪರ್ಕಕ್ಕೆ ಎಲ್ಲರೂ ಬೆಚ್ಚಿಹೋಗಿದ್ದಾರೆ. ಯಾವ ಕೇಡುಗಾಲದಲ್ಲಿ ಇಂತಹ ಭಯಾನಕ ಕಾಯಿಲೆಯೋ! ಪ್ರತಿನಿತ್ಯ ನೂರಾರು ವಾಹನಗಳಲ್ಲಿ ಸಾವಿರಾರು ಜನರನ್ನು ಸಾಗಿಸುತ್ತಿದ್ದ ವರದಾ ಸೇತುವೆಯ ಕಂಬಗಳು ಸ್ಥಿರವಾಗಿವೆ. ನಾವು ಎಲ್ಲಾ ಕಾಲದಲ್ಲಿಯೂ ಗಟ್ಟಿಯಾಗಿದ್ದೇವೆ ಎಂದು ಪ್ರಶಾಂತ ನದಿಯ ಹರಿವಿನ ನಡುವೆ ಹೇಳುತ್ತಿವೆ. ಆ ನದಿಯ ಬಯಲು ಇಂತಹ ಅದೆಷ್ಟು ಮೌನಗಳಿಗೆ ಸಾಕ್ಷಿಯಾಗಿತ್ತೋ? ಊರು ಅದೆಂತಹ ಕಾಯಿಲೆಗಳನ್ನು ಇಲ್ಲಿಯವರೆಗೆ ಕಂಡಿದಿಯೋ? ಅಂತೂ ಊರಲ್ಲಿ ಇಂತಹ ಕಾಯಿಲೆ ಕಂಡಂತಹ ಕೆಲವು ಹಿರಿಯರಿದ್ದರು. ಎಂಬತ್ತೋ ತೊಂಬತ್ತೋ ದಾಟಿದವರು, ತಾವು ಮಹಾಮಾರಿ ಕಾಯಿಲೆಗಳಿಂದ ಬದುಕಿ ಉಳಿದಿದ್ದೇ ಮಧುಕೇಶ್ವರನ ಕೃಪೆಯಿಂದ ಎಂದು ಈ ಸಮಯದಲ್ಲಿ ನೆನಪು ಮಾಡಿಕೊಳ್ಳುತ್ತಿದ್ದರು. `ಈಗ ಜೀವ್ನ ನೋಡಿಯಾಗಿದೆ. ಈ ಕೊರೊನಾ ಕಾಯಿಲೆ ನಮ್ಮನ್ನು ಬೇಗ ಮ್ಯಾಲ ತಗಂಡು ಹೋದ್ರು ನಮ್ಗ ಬ್ಯಾಸ್ರ ಇಲ್ಲ. ಮಕ್ಳು, ಮೊಮ್ಮಕ್ಳನ್ನೂ ನೋಡಿಯಾಗೇತಿ. ಅವ್ರು ಮಾತ್ರ ನಮ್ ಕಣ್ ಮುಂದೆ ಈ ಕಾಯಿಲೆಯಿಂದ ಸಾಯೋದನ್ನು ನೋಡಬರ‍್ದಷ್ಟೇ. ಆ ಮಧುಕೇಶ್ವರ ನಮ್ಮನ್ ಕಾಪಾಡ್ದಂಗೆ ಈ ಕಾಯಿಲೆನೂ ಊರಿಂದ ಓಡ್ಸಿ ಎಲ್ಲರ‍್ನೂ ಕಾಪಾಡಬೇಕಷ್ಟೇ!’ ಅಂತ ಕಾಮನಗಲ್ಲಿಯ ತೊಂಬತ್ತರ ಹಿರಿಯ ಮಂಜಣ್ಣ ಹೇಳುತ್ತಿದ್ದ.

ಹೆಚ್ಚಿನ ಮನೆಗಳಲ್ಲಿ ಮಕ್ಕಳು ಮೊಮ್ಮಕ್ಕಳು ತಮ್ಮ ಅಜ್ಜ ಅಜ್ಜಿಯರು, ಹೆತ್ತವರ ಜೊತೆ ತುಂಬಾ ಸಮಯ ಈಗ ಕಳೆಯುತ್ತಿದ್ದಾರೆ. ಸಮಯ ಕಳೆಯಲು ಅವರಿಂದ ಕತೆಗಳನ್ನು, ಹಳೆಯ ನೆನಪುಗಳನ್ನು ಕೇಳುತ್ತಿದ್ದಾರೆ. ಹಿರಿಯರ ಅನುಭವದ ಕಥಾ ಕಣಜ ಬಹು ದೊಡ್ಡದು. ಮಕ್ಕಳು ತಮಗೆ ಇಷ್ಟವಾದ ಅಡುಗೆಗಳನ್ನು ಹೇಳಿ ಮಾಡಿಸಿಕೊಂಡು ತಿನ್ನುತ್ತಿದ್ದಾರೆ. ಪಗಡೆ, ಕೇರಮ್, ಹುಲಿಮನೆಯಾಟ ಇನ್ನೂ ಹಲವು ಮನೆಯಂಗಳದ ಆಟಗಳನ್ನು ಆಡುತ್ತಾ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ.

ವೈಜಯಂತಿಪುರದ ಮಧುಕೇಶ್ವರ ದೇಗುಲದ ಬಾಗಿಲು ಮುಚ್ಚಲಾಗಿದೆ. ದೇವಸ್ಥಾನವು ಈಗ ಸರ್ಕಾರದ ಆದೇಶ, ಹೊರಡಿಸಿದ ನೀತಿ ನಿಯಮಾವಳಿಗಳಿಗೆ ಬದ್ಧವಾಗಿದೆ. ಯಾವುದನ್ನೂ ಮೀರುವಂತಿಲ್ಲ. ದೇವಸ್ಥಾನದ ಬಾಗಿಲು ಯಾವಾಗ ತೆರೆಯುತ್ತದೆ ಅನ್ನುವುದು ಮೊಕ್ತೇಸರರಿಗೂ ಮಾಹಿತಿ ಇಲ್ಲ. ಯಾವಾಗ ಉಮಾ ಮಧುಕೇಶ್ವರನನ್ನೂ, ಮಾಧವ, ಶಾಂತನರಸಿಂಹನನ್ನೂ ದರ್ಶನ ಮಾಡುತ್ತೇವೆಯೋ ಅನ್ನುವ ತವಕ ಊರ ಭಕ್ತರದ್ದು. ಆದರೂ ವೈಜಯಂತಿಪುರ ಮಧುಕೇಶ್ವರನ ವೈದಿಕ ಕ್ಷೇತ್ರ. ಇಲ್ಲಿರುವ ದೇವರ ಮೂರ್ತಿಗಳಿಗೆ ಪ್ರತಿನಿತ್ಯ ಪೂಜೆ ಪುನಸ್ಕಾರಗಳು ನಡೆಯಲೇಬೇಕು; ತಪ್ಪಿಸುವಂತಿರಲಿಲ್ಲ. ಆಯಾಯ ದೇವರ ಪೂಜೆ ಮಾಡುವ ಹಲವು ಕುಟುಂಬದವರು, ದೈನಂದಿನ ಅರ್ಚಕರಿಗೆ ಮಾತ್ರ ಅಲ್ಲಿ ಪ್ರವೇಶ. ಎಲ್ಲವೂ ಒಂದು ರೀತಿ ಆರಕ್ಷಕರ ಕಣ್ಗಾವಲಿನ ನಡುವೆ ಎಲ್ಲ ಪೂಜಾ ಕೆಲಸಗಳನ್ನು ಮಾಡಬೇಕಿತ್ತು. ತೀರ್ಥ ಪ್ರಸಾದ ಕೊಡುವಂತಿರಲಿಲ್ಲ. ತೀರ್ಥ ಪಡೆದವರು ಯಾರಿಗೂ ಹೇಳುವಂತಿರಲಿಲ್ಲ. ಹೊರಗಿನ ಜನರು, ಪ್ರವಾಸಿಗರು ದೇವರನ್ನು ಕಾಣುವ ಮಾತೇ ಇರಲಿಲ್ಲ. ಪೋಲಿಸರ ಬೂಟಿನ ಸದ್ದು ಊರಲ್ಲಿ ಸಾಮಾನ್ಯವಾಗಿತ್ತು. ಆರಕ್ಷಕರ ಬೈಕುಗಳು, ಜೀಪು ಆಗಾಗ ವೈಜಯಂತಿಪುರವನ್ನು ಹದ್ದುಬಸ್ತಿನಲ್ಲಿ ಕಾಯುತ್ತಿದ್ದವು. ಮನೆಯಲ್ಲಿ ಇರಲಾಗದೇ ಹೊರಗೆ ಬಂದ ಹದಿಹರೆಯದ ಹುಡುಗರು, ಕ್ರಿಕೆಟ್ ವಾಲಿಬಾಲ್ ಆಡುತ್ತಿದ್ದವರಿಗೆ ಪೋಲಿಸರು ಲಾಠಿ ಏಟಿನ ರುಚಿ ತೋರಿಸಿದ್ದರು. ಕಾಯಿಲೆಯ ಭಯಾನಕತೆ ಮಾಧ್ಯಮಗಳಲ್ಲಿ ವರದಿಯಾದಂತೆ ಅತೀವವಾಗಿತ್ತು. `ನಿಮ್ಮ ಕುಟುಂಬದ ಜೀವ ನಿಮ್ಮ ಕೈಯಲ್ಲಿ; ಮನೆಬಿಟ್ಟು ಹೊರಗೆ ಬರದಿರಿ. ಕೊರೊನಾದಿಂದ ದೂರವಿರಿ’ ಎಂದು ಮೈಕ್‌ನಲ್ಲಿ ಹೇಳುತ್ತಾ ಎಚ್ಚರಿಕೆ ಮೂಡಿಸುವ ಪ್ರಯತ್ನವನ್ನು ಕೂಡ ಮಾಡುತ್ತಿದ್ದರು. ಪ್ರತಿದಿನ ವೈಜಯಂತಿಪುರದಿಂದ ಸರ್ಕಾರಿ ಕೆಲಸ, ಖಾಸಗಿ ಉದ್ಯೋಗ, ಅಡಿಕೆ ಅನಾನಸ್ ಪ್ಲಾಟುಗಳಿಗೆ ಪ್ರತಿನಿತ್ಯ ಹೋಗುತ್ತಿದ್ದ ಜನರು ಜೀವನದಲ್ಲಿ ಮೊದಲ ಬಾರಿ ಮನೆಯಲ್ಲಿದ್ದುಕೊಂಡು ಏಕಾಂಗಿತನದ ಹಿಂಸೆಯನ್ನು ಅನುಭವಿಸಿದ್ದರು.

ಮರ‍್ಹೊತ್ತು. ಕೂಲಿ ಕೆಲಸ. ಸಾಯಂಕಾಲ ಕುಡಿವ ಚಟ. ಹೀಗೆ ಇಡೀ ದಿನವನ್ನು ಕಳೆಯುತ್ತಿದ್ದವರಿಗೆ ಲಾಕ್‌ಡೌನ್ ಅಕ್ಷರಶಃ ನರಕವೇ ಆಗಿತ್ತು. ತುಂಡು ಜಮೀನು, ತೋಟ, ತರಕಾರಿ ಅನಾನಸ್ ವ್ಯಾಪಾರ ಮಾಡುವವರು ಹೊರಗಡೆ ಹೋಗಲಿಕ್ಕೆ ಸ್ವಲ್ಪ ಅವಕಾಶವಿದ್ದುದರಿಂದ ಸ್ವಲ್ಪ ನಿರಾಳವಾಗಿದ್ದರು. ಏನೂ ಇಲ್ಲದವರ ಪಾಡಂತು ಇನ್ನೂ ಕಷ್ಟವಾಗಿತ್ತು. ಊರಿನ ಸರಾಯಿ ಅಂಗಡಿ, ಬಾರು ಮುಚ್ಚಲಾಗಿತ್ತು. ವೈಜಯಂತಿಪುರದಿಂದ ಟನ್‌ಗಟ್ಟಲೇ ಅನಾನಸ್‌ಗಳನ್ನು ತೆಗೆದುಕೊಂಡು ಹೋಗುತ್ತಿದ್ದ ದೆಹಲಿ ಲಾರಿಗಳು ಈ ಸಮಯದಲ್ಲಿ ಊರಿನಲ್ಲೇ ಲಾಕ್ ಆಗಿವೆ. ಅಡಿಕೆ, ಅನಾನಸ್ ಪ್ಲಾಟ್‌ಗಳ ಕೆಲಸಗಳು ನಿಂತಿವೆ. ಇದನ್ನೆ ನಂಬಿದ್ದ ಊರ ಕೂಲಿಗಳು ಹಣವಿಲ್ಲದೇ ಒದ್ದಾಡುತ್ತಿದ್ದ ಕೆಟ್ಟ ಸಂದರ್ಭ. ಇದು ಬರೀ ವೈಜಯಂತಿಪುರದ ಕತೆಯಲ್ಲ! ಇಡೀ ದೇಶದ ಹಳ್ಳಿಹಳ್ಳಿಗಳ ಕೆಟ್ಟ ಸ್ಥಿತಿಯೂ ಆಗಿತ್ತು. ಉಟ್ಟ ಬಟ್ಟೆಯಲ್ಲಿ ಬದುಕಿನ ತುತ್ತು ಚೀಲವನ್ನು ತುಂಬಿಸಿಕೊಳ್ಳಲು ಬೆಂಗಳೂರು, ಮುಂಬೈ, ಗೋವಾಕ್ಕೆ ಗುಳೆ ಹೋದವರು ವಾಪಾಸ್ ಗೂಡಿಗೆ ಬಂದಿದ್ದಾರೆ. ವೈಜಯಂತಿಪುರದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಾಸವಾಗಿದ್ದಾರೆ. ಆದರೂ ಬದುಕಿನ ಬಂಡಿ ನಡೆಯಲೇಬೇಕು. ಜೀವನವನ್ನು ನಂಬಿಹೋಗಿದ್ದ ನಗರಗಳೆಲ್ಲವೂ ತನ್ನ ರಕ್ಷಣೆಗೋಸ್ಕರ ಎಲ್ಲ ಶ್ರಮಿಕರನ್ನೂ ಹೊರಗೆ ಹಾಕಿವೆ. ಮತ್ತೆ ಹೂವಿನ ಹಾಸಿಗೆ ಹಾಕಿ ಕರೆಸಿಕೊಳ್ಳುತ್ತವೆಯೇ? ಬಂದವರಿಗೆ ಕೆಲಸವಿಲ್ಲ. ಇಷ್ಟು ವರ್ಷಗಳ ಅನವರತ ದುಡಿಮೆಗೆ ಸ್ವಲ್ಪ ವಿಶ್ರಾಂತಿ, ಊರ ಗಾಳಿ, ನೀರನ್ನು ಮತ್ತೆ ಕುಡಿಯುವಂತೆ ಕೊರೊನಾ ಕಾಯಿಲೆ ಮಾಡಿದ್ದರೂ, ಅದು ಎಷ್ಟು ದಿವಸ…? ನಿದ್ರೆಗೆ ಹೋದರೆ ಹಸಿವು; ಮತ್ತೆ ಹೊಟ್ಟೆ ತುಂಬಿಸುವ ಹೋರಾಟ! ದೇಶಕ್ಕೆ ಅಂಟಿದೆ ವಿಷದ ಘಳಿಗೆಯು… ಆದರೂ ಬದುಕನ್ನು ಗೆದ್ದು ಮತ್ತೆ ಬೇಟೆಯಾಡುವ ಸಂಭ್ರಮವನ್ನು ಕಾಣಲೇಬೇಕು. ಈ ವಿಷಮಕಾಲದ ಪರಿಧಿಯ ನಡುವೆ ಹೋರಾಡಲೇಬೇಕಿತ್ತು. ಬದುಕಿನ ದೋಣಿಯು ಮುನ್ನುಗ್ಗುತ್ತಿದೆ. ತನ್ನದೇ ಸುತ್ತಲಿನ ಗಾಳಿ ನೀರು ಸುಂಟರಗಾಳಿಯ ಅಂಜಿಕೆಗೆ ನಿಲುಕದೇ. ಬದುಕು ಮೂರಾಬಟ್ಟೆಯಾಗದೇ, ಇದ್ದ ಮನೆಯನ್ನು ಉಳಿಸಿಕೊಳ್ಳುವ ದಂದುಗ ಊರ ಜನರಲ್ಲಿ.
ಬದುಕು ಕೆಲವೊಮ್ಮೆ ಉಪ್ಪು ಮತ್ತು ಸಕ್ಕರೆಯ ಪಾಕದಲ್ಲಿ ಮುಳುಗಿದ ಮಣ್ಣಿನ ಗೊಂಬೆಯಂತೆ. ಎರಡರ ರುಚಿಯನ್ನು ನೋಡಲೇಬೇಕು, ಕರಗಲೇಬೇಕು.

*****

ಅಮ್ಮನಿಗೆ ನಾನು ಪ್ರತಿದಿನ ಫೋನ್ ಮಾಡುತ್ತಲೇ ಇದ್ದೆ. ನಾನಿದ್ದ ಮುಂಬೈ ನಗರದಲ್ಲಿ ಕಾಯಿಲೆಯ ಭರಾಟೆ ಹೆಚ್ಚಾಗಿತ್ತು. ನಾನಿದ್ದ ಅಪಾರ್ಟ್ಮೆಂಟ್‌ನಲ್ಲಿ ಎರಡ್ಮೂರು ಫ್ಲಾಟುಗಳಿಗೆ ಕೊರೊನಾ ಅಂಟಿದ್ದರಿಂದ ಇಡೀ ಅಪಾರ್ಟ್ಮೆಂಟನ್ನು ಕೆಲವು ದಿನಗಳ ಕಾಲ ಸೀಲ್‌ಡೌನ್ ಮಾಡಿದ್ದರು. ಮುಂಬೈ ಅಕ್ಷರಶಃ ಈ ಕಾಯಿಲೆಯಿಂದ ನರಕವಾಗಿತ್ತು. ಕೆಲಸವಿಲ್ಲದೇ ಒಂದೊಂದು ಕ್ಷಣವನ್ನು ಕಳೆಯುವುದು ಕಡು ಕಷ್ಟವಾಗಿತ್ತು. ನನಗೋ ಮನೆಯಿಂದಲೇ ಕೆಲಸ ಮಾಡುವ ಅವಕಾಶವಿದ್ದುದರಿಂದ ವಾರದಲ್ಲಿ ಐದು ದಿನ ಹೇಗೋ ಸಮಯ ಕಳೆದುಹೋಗುತ್ತಿತ್ತು.

ಅಮ್ಮ ಪ್ರತಿದಿನ ವೈಜಯಂತಿಪುರದಲ್ಲಿ ಕೊರೊನಾದಿಂದ ಆಗಿದ್ದ ಎಲ್ಲ ಘಟನೆಗಳನ್ನು, ಅವರಿವರಿಂದ ಕೇಳಿದ್ದ ವಿಚಾರಗಳನ್ನು ನನಗೆ ವರದಿ ಮಾಡುತ್ತಿದ್ದಳು. ನಾನು ಮುಂಬೈನಲ್ಲಿನ ಪ್ರತಿದಿನದ ಪರಿಸ್ಥಿತಿಯನ್ನು ಹೇಳುತ್ತಿದ್ದೆ. ಅದನ್ನು ಕೇಳಿದ ಮೇಲೆ `ನೀನು ಊರಿಗೆ ಬರಬೇಕಿತ್ತು. ನನ್ನ ಜೊತೆಯೇ ಇರಬೇಕಿತ್ತು. ಸತ್ತರೆ ಇಬ್ಬರೂ ಒಟ್ಟಿಗೆ ಸಾಯಬಹುದಿತ್ತು.’ ಎಂದು ಗೊಣಗುತ್ತಾ ಹೇಳುತ್ತಿದ್ದಳು. ಅಕಸ್ಮಾತ್ ಈ ಕಾಯಿಲೆ ಬಂದು ಸತ್ತರೆ, ಹೆಣವನ್ನು ದಫನ್ ಕೂಡ ಮಾಡಲು ಅವರ ಮನೆಯವರಿಗೆ ಕೊಡುವುದಿಲ್ಲವಂತೆ ಅಂತ ನ್ಯೂಸ್‌ಚಾನೆಲ್‌ಗಳಿಂದ ಕೇಳಿ ತಿಳಿದಿದ್ದ ಅಮ್ಮನಿಗೆ, ಇಲ್ಲದ ಹಲವು ಕೆಟ್ಟ ಕಲ್ಪನೆಗಳನ್ನಿಟ್ಟುಕೊಂಡು ಕಣ್ಣೀರು ಹಾಕುತ್ತಾ ಕೊರೊನಾಗೆ ಹಿಡಿಶಾಪ ಹಾಕುತ್ತಾ ತನ್ನೊಳಗಿನ ನೋವನ್ನೆಲ್ಲಾ ಹೇಳಿಕೊಳ್ಳುತ್ತಿದ್ದಳು. ನನ್ನ ಸಾಂತ್ವನದ ಮಾತುಗಳು ಎಂದಿಗೂ ಏಳ್ನೂರು ಕಿಲೋಮೀಟರ್ ದೂರದಲ್ಲಿದ್ದ ಆಕೆಯ ಕಣ್ಣೀರನ್ನು ಒರೆಸುವಂತಿರಲಿಲ್ಲ. ಪ್ರತಿದಿನ ಟೀವಿಯಲ್ಲಿ ದೇಶದಲ್ಲಿದ್ದ ಕಾಯಿಲೆಯ ಭೀಕರತೆ, ನಾನಿದ್ದ ಮುಂಬೈನ ಸ್ಥಿತಿಗತಿ, ಸಾವು ನೋವಿನ ವರದಿಗಳನ್ನು ಆಕೆ ತಪ್ಪದೇ ನೋಡುತ್ತಿದ್ದಳು. ಬದುಕು ಕಟ್ಟಿಕೊಳ್ಳಲು ಊರು ಬಿಟ್ಟು ನಗರ ಸೇರಿದರೆ, ಈಗ ದುರಿತ ಸಮಯದಲ್ಲಿ ಎಲ್ಲರೂ ನಗರ ಬಿಟ್ಟು ಮತ್ತೇ ಗೂಡು ಸೇರಿದರು. ಆದರೆ ನಾನು ಮಾತ್ರ ಮುಂಬೈ ಬಿಟ್ಟು ವೈಜಯಂತಿಪುರವನ್ನು ಸೇರಲೇ ಇಲ್ಲ. ಇದ್ದ ಕೆಲಸವನ್ನು ಉಳಿಸಿಕೊಳ್ಳುವ ದೊಡ್ಡ ಹೋರಾಟದಲ್ಲಿ ನಾನಿದ್ದೆ. ಅದು ಕೊರೊನಾ ಕಾಯಿಲೆಗಿಂತಲೂ ಭೀಕರವಾಗಿತ್ತು. ಈಗ ಮುಂಬೈನ ಅನೇಕ ಪ್ರತಿಷ್ಠಿತ ಕಂಪನಿಗಳು ಪ್ರಾಜೆಕ್ಟ್ಗಳಿಲ್ಲದೇ ಒದ್ದಾಡುತ್ತಿವೆ. ಮಾರುಕಟ್ಟೆ ಬಿದ್ದಿದೆ ಅನ್ನುವ ನೆಪ ಹೇಳುತ್ತಾ ಪ್ರತಿದಿನ ಸಾವಿರಾರು ಕೆಲಸದವರನ್ನು ಮರ‍್ನಾಲ್ಕು ತಿಂಗಳ ಸಂಬಳ ಕೊಟ್ಟು ಮನೆಗೆ ಕಳುಹಿಸುತ್ತಿದ್ದವು. ಕೆಲಸವನ್ನೇ ನಂಬಿ ಬದುಕುತ್ತಿದ್ದವರ ಕತೆ ಏನು? ತಿಂಗಳ ಕುಟುಂಬ ನಿರ್ವಹಣೆ, ಮಕ್ಕಳ ಫೀಸು, ಇಎಮ್‌ಐ ಕಂತಿನ ಸಾಲ… ಇನ್ನು ಹಲವು ಕಷ್ಟ ಕಾರ್ಪಣ್ಯಗಳು ಕೆಲಸ ಕಳೆದುಕೊಂಡವರಿಗೆ ಸಾಮಾನ್ಯವಾಗಿದ್ದವು. ನನ್ನ ಆತ್ಮೀಯ ಸ್ನೇಹಿತರು ಪ್ರತಿದಿನ ತಮ್ಮ ಈ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದರಿಂದ ನನಗೂ ಒಳಗೊಳಗೆ ಕೆಲಸ ಉಳಿಸಿಕೊಳ್ಳುತ್ತೇನೆಂಬ ನಂಬಿಕೆ ಇರಲಿಲ್ಲ.

ಚಾರ್ಲ್ಸ್ ಡಾರ್ವಿನ್ ಆ ದುರಿತ ಕಾಲದಲಿ ಮತ್ತೆ ಮತ್ತೆ ನನಗೆ ನೆನಪಾಗುತ್ತಿದ್ದ. ಅಳಿವು ಉಳಿವಿಗಾಗಿ ದೊಡ್ಡ ಹೋರಾಟ ಎಲ್ಲೆಡೆ ಮತ್ತೆ ಆ ವಿಷಮ ಘಳಿಗೆಯಲ್ಲಿ! ಮನುಷ್ಯ ಮನುಷ್ಯರ ನಡುವೆ, ದೇಶ, ರಾಜ್ಯ ರಾಜ್ಯಗಳ ನಡುವೆ ಅಸ್ತಿತ್ವದ ಹೋರಾಟ. ಮುಂಬೈನ ಆ ಜನನಿಬಿಡ ಜಗತ್ತಿನ ನಡುವೆ ಬದುಕಿದ ನನಗೆ ಯಾವಾಗ ಸ್ವಲ್ಪ ಹಣಮಾಡಿಕೊಂಡು ವೈಜಯಂತಿಪುರ ಸೇರುತ್ತೇನೆ ಅನ್ನುವ ತವಕ ನನ್ನನ್ನು ಕಾಡುತ್ತಲೇ ಇತ್ತು. ಅದರಲ್ಲಿ ಕೊರೊನಾ ಕಾಯಿಲೆಯ ಈ ಸಮಯದಲ್ಲಿ ವೈಜಯಂತಿಪುರವು ನನ್ನನ್ನು ಕೈಬೀಸಿ ಕರೆಯುತ್ತಿತ್ತು. ವರದೆಯ ತೀರ, ಮಧುಕೇಶ್ವರನ ಜಾತ್ರೆ, ದೊಡ್ಡಬ್ಬ ದೀಪಾವಳಿ, ಹೋರಿ ಓಡಿಸುವ ಸ್ಫರ್ಧೆ, ಭೂಮಿ ಹುಣ್ಣಿಮೆ, ಶಿರಸಿ ಮಾರಮ್ಮನ ಜಾತ್ರೆ ಎಲ್ಲವೂ ಮುಂಬೈ ಬದುಕಿನ ಈ ಕೆಟ್ಟ ಕಾಲದಲ್ಲಿ ವಿಪರೀತ ಕಾಡತೊಡಗಿತ್ತು. ಇರುವ ಕೆಲಸವನ್ನು ಉಳಿಸಿಕೊಳ್ಳುವ ದಂದುಗದ ಜೊತೆ ಅಕ್ಕಪಕ್ಕದ ಜನರಿಂದ, ಕೆಲಸದ ನಿಮಿತ್ತ ಹೊರಗೆ ಹೋಗಬೇಕಾದ ಅನಿವಾರ್ಯತೆಯಿಂದ ಅರಿವಿಲ್ಲದೇ ಕೊರೊನಾ ಅಂಟಿಕೊಂಡರೆ ಏನು ಮಾಡುವುದು? ಹೇಗಾದರೂ ಮಾಡಿ ಜೀವ ಉಳಿಸಿಕೊಂಡು ಊರನ್ನು ಸೇರಲೇಬೇಕು. ಒಮ್ಮೊಮ್ಮೆ ಅಮ್ಮನ ಜೊತೆ ವಿಡಿಯೋ ಕಾಲ್ ಮಾಡಿ ಆಕೆಯನ್ನು ನೋಡುತ್ತಿದ್ದರೂ ಸಮಾಧಾನವಿರುತ್ತಿಲಿಲ್ಲ. ಈಗಾಗಲೇ ನ್ಯೂಸ್ ಚಾನೆಲ್‌ಗಳು ಆಕೆಯ ತಲೆಯಲ್ಲಿ ತುಂಬಿದ ಅಂತೆ ಕಂತೆಗಳ ಪ್ರಶ್ನೆಗಳನ್ನು ಕೇಳುತ್ತಾ ಕಣ್ಣೀರು ತುಂಬಿಕೊಳ್ಳುತ್ತಿದ್ದಳು.

ನನ್ನ ಮನೆಯ ಅಕ್ಕಪಕ್ಕದ ಫ್ಲಾಟುಗಳಲ್ಲಿ ಕೊರೊನಾ ಧಾವಿಸಿಬಿಟ್ಟಿದೆ. ಈ ಕಾಯಿಲೆ ನನ್ನ ಫ್ಲಾಟಿಗೆ ಬರಲು ಒಂದು ಗೋಡೆಯಷ್ಟೇ ಬಾಕಿ ಇದೆ. ಸಾವಿನ ಭಯದ ಜೊತೆಗೆ ರೋಗ ಅಂಟಿಸಿಕೊಂಡ ಮೇಲೆ ಆಸ್ಪತ್ರೆಗಳಲ್ಲಿ ನರಳಬೇಕಾದ ಚಿಂತೆ! ಇದನ್ನು ಅಮ್ಮನೊಂದಿಗೆ ಹೇಳಿಕೊಳ್ಳಲಾಗದ ಪರಿಸ್ಥಿತಿ! ಕೆಲಸ ಹೋದರೆ ಜೀವನದ ಭಯ! ಇವುಗಳ ನಡುವೆ ವೈಜಯಂತಿಪುರಕ್ಕೆ ಹೋಗುವ ನನ್ನ ಕನಸು ಈಡೇರುವುದೇ?

ಇಡೀ ಫ್ಲಾಟಿನಲ್ಲಿ ಈಗ ನಾನೊಬ್ಬನೇ. ಅಪರೂಪಕ್ಕೊಮ್ಮೆ ಬೇಸರ ಕಳೆಯಲು ಅಕ್ಕಪಕ್ಕದವರೊಂದಿಗೆ ಮಾತನಾಡುತ್ತಿದ್ದರೂ ಈಗ ಅವರಿಗೂ ನನ್ನನ್ನು ಮಾತನಾಡಿಸಲು ಭಯ. ನನಗೂ ಕೂಡ. ಮುಂಬೈಗೆ ಬಂದು ತಪ್ಪು ಮಾಡಿಬಿಟ್ಟನೇ? ಇದ್ದ ಮರ‍್ನಾಲ್ಕು ಎಕರೆ ಜಮೀನು ನೋಡಿಕೊಂಡು ವೈಜಯಂತಿಪುರದಲ್ಲೇ ಇರಬಹುದಿತ್ತಲ್ಲವೇ ಎಂಬ ಪ್ರಶ್ನೆ ಆ ಸಮಯದಲ್ಲಿ ನನ್ನನ್ನು ವಿಪರೀತ ಕಾಡತೊಡಗಿತು. ಅಮ್ಮ ಪ್ರತಿದಿನ ಊರಲ್ಲಿನ ಕೊರೊನಾ ಬಗೆಗಿನ ಅಂತೆಕಂತೆಗಳ ಬಗ್ಗೆನೇ ಮಾತನಾಡುತ್ತಾ, ಕೊನೆಗೆ ನೀನು ನನ್ನ ಜೊತೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅಂತ ಹೇಳಿದ್ದ ಮಾತನ್ನೇ ಹೇಳಿ ಫೋನನ್ನು ಇಡುತ್ತಿದ್ದಳು. ಸದ್ಯ ಆಕೆ ಕಾಯಿಲೆಯ ಭಯದಿಂದ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದ್ದಾಳೆ. ದಿನವೂ ಮುಂಜಾನೆ ಪಂಪವನದ ರಸ್ತೆಯಲ್ಲಿ ವಾಕಿಂಗ್ ಮಾಡುವಾಗ ಆಕೆಯ ಜೊತೆಗಾರ್ತಿಯರು ಹೇಳುವ ಅನೇಕ ಕಥೆಗಳನ್ನು ಕೇಳುತ್ತಿದ್ದಾಳೆ. ಯಾವುದೋ ಗೋವಾ ಕಡೆಯವರ ಒಂದು ಕಾರು ಸೊರಬ ರಸ್ತೆಯಲ್ಲಿ ಅಪಘಾತವಾಗಿ ಅದರಲ್ಲಿದ್ದ ಮರ‍್ನಾಲ್ಕು ಜನರು ಗಂಭೀರವಾಗಿ ಶಿರಸಿ ಸರ್ಕಾರಿ ಆಸ್ಪತ್ರೆಯನ್ನು ಸೇರಿಸಿದ್ದನ್ನು ನೋಡಿದ್ದಾಳೆ. ಗೋವಾದ ಜನರು ವೈಜಯಂತಿಪುರದಲ್ಲಿ ಏಕೆ ಕಾಣಿಸಿಕೊಂಡರು? ಅವರು ಹೇಗೆ ಬಂದರು? ಶಿವಮೊಗ್ಗ, ದಾವಣಗೆರೆ, ಕಾರವಾರಕ್ಕೆ ಹೋಗುವ ಮುಖ್ಯ ರಸ್ತೆಗಳೆಲ್ಲಾ ಪೋಲಿಸರ ಹದ್ದಿನ ಕಣ್ಣಿನಲ್ಲಿ ಕಾಯುತ್ತಿರುವಾಗ ಈ ಅನಾಮಿಕ ಜನರು ಊರಿಗೆ ಬಂದು ಸಾಯುವ ಸ್ಥಿತಿಗೆ ಬಂದರಲ್ಲ ಎಂಬುದರ ಬಗ್ಗೆ ಈಗ ಚಿಂತೆಯನ್ನು ಹಚ್ಚಿಕೊಂಡಿದ್ದಾಳೆ. ಅವರಲ್ಲಿ ಯಾರಾದರೂ ಊರವರ ಜೊತೆ ಸಂಪರ್ಕ ಇದ್ದರೆ? ಅವರಿಂದ ಊರಿಗೆ ಕಾಯಿಲೆ ಬಂದರೆ? ವೈಜಯಂತಿಪುರದಲ್ಲಿ ಕಾಣಿಸಿಕೊಂಡರೆ ಅದು ನಮ್ಮ ಕಾಮನಗಲ್ಲಿಗೂ ಬರಬಹುದು. ಈ ಸಮಯದಲ್ಲಿ ನಾನಿದ್ದರೆ ನನಗೂ ಆ ಕಾಯಿಲೆ ಬರಬಹುದು. ಆಕೆಯ ಹುಚ್ಚು ಕಲ್ಪನೆ, ಭ್ರಮೆಗಳಿಗೆ ಮಿತಿ ಇರಲಿಲ್ಲ. ಗೋವಾದವರ ಕಾರು ಸೊರಬ ರಸ್ತೆಯಲ್ಲಿ ಕಂಡಾಗಿನಿAದ ಆಕೆ ಮುಂಜಾನೆ ವಾಕಿಂಗ್‌ಗೆ ಹೋಗುವುದನ್ನು ಕೂಡ ನಿಲ್ಲಿಸಿದ್ದಾಳೆ. ಬೆಂಗಳೂರು ಸೇರಿದ್ದವರೆಲ್ಲಾ ಈಗ ಊರಿಗೆ ಬಂದು ವ್ಯವಸಾಯ, ತರಕಾರಿ ಅನಾನಸ್ ಹಣ್ಣಿನ ವ್ಯಾಪಾರ ಅಂತೆಲ್ಲಾ ಮಾಡಿಕೊಂಡು ಜೀವನ ಮಾಡ್ತಿದಾರೆ. ನೀನು ಅವರ ರೀತಿನೇ ಊರಲ್ಲೇ ಬದುಕಬಹುದು. ಇರುವ ಜಮೀನನ್ನು ನೋಡಿಕೊಂಡರೆ ಸಾಕು. ತನ್ನ ಮಾತನ್ನು ಮುಂದುವರೆಸಿದ ಆಕೆ ಎಂದೂ ನನ್ನಲ್ಲಿ ಹೇಳದ ಎಫ್‌ಡಿ ಹಣವನ್ನು ಪ್ರಸ್ತಾಪಿಸಿ, ನಿನ್ನ ಮದುವೆಗೆ ಅಂತಿಟ್ಟ ಠೇವಣಿ ಹಣವನ್ನು ಬೇಕಾದರೆ ಈಗಲೇ ನಿನಗೆ ಕೊಡುತ್ತೇನೆ. ಶಿರಸಿ, ಸೊರಬದಲ್ಲಿಯೋ ಏನಾದರೂ ವ್ಯಾಪಾರ ವ್ಯವಹಾರ ಮಾಡುವಂತೆ, ಬೇಗ ಬಂದುಬಿಡು ಎಂದು ಹೇಳಿ ತನ್ನ ಹೊಸ ರಾಗ ಶುರುಮಾಡಿದ್ದಳು.

ನನಗೋ ಊರು ಮುಟ್ಟುವ ತವಕ ಪ್ರತಿಕ್ಷಣ ಕಾಡುತ್ತಲೇ ಇತ್ತು. ಆದರೂ ಇರುವ ಕೋಣೆಯನ್ನು ನಾನು ಬಿಟ್ಟು ಹೊರಗೆ ಬರುವಂತಿಲ್ಲ. ಅಕ್ಕಪಕ್ಕದ ಫ್ಲಾಟುಗಳಲ್ಲಿ ಕೋವಿಡ್ ವೈರಸ್ ಕಾಣಿಸಿಕೊಂಡಿದೆ. ಅವರೆಲ್ಲಾ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ. ಬಾಗಿಲು ತೆರೆದು ಹೊರಗೆ ಬರುವಂತಿರಲಿಲ್ಲ. ತಂದಿದ್ದ ರೇಷನ್ನು ಮುಗಿಯುತ್ತಿತ್ತು. ಬದುಕಬೇಕು. ಮುಂಬೈನಿಂದ ಕರ್ನಾಟಕಕ್ಕೆ ಯಾವುದೇ ಸಾರಿಗೆ ಸಂಪರ್ಕವಿರಲಿಲ್ಲ. ಎಲ್ಲವೂ ಈಗ ಅಕ್ಷರಶಃ ಬಂದ್ ಆಗಿತ್ತು. ಮತ್ತೆ ಹೊಸದಾಗಿ ಬಸ್, ರೈಲು ಸಂಚಾರ ಯಾವಾಗ ಶುರುವಾಗಬಹುದು ಎಂಬುವುದರ ಮಾಹಿತಿ ಇರಲಿಲ್ಲ. ಯಾರಾದರೂ ಮುಂಬೈಯಿಂದ ಮಂಗಳೂರು, ಹುಬ್ಬಳ್ಳಿ ಕಡೆಗೆ ತಮ್ಮ ಖಾಸಗಿ ವಾಹನಗಳಲ್ಲಿ ಹೋಗುವವರಿಬಹುದೇ? ಎಂದು ವಿಚಾರಿಸಿ ನೋಡಿಯಾಯಿತು. ಕೊನೆಪಕ್ಷ ಮಂಗಳೂರು, ಹುಬ್ಬಳ್ಳಿಯನ್ನಾದರೂ ಮುಟ್ಟಿದರೆ ಅಲ್ಲಿಂದ ಹೇಗಾದರೂ ಮಾಡಿ ವೈಜಯಂತಿಪುರವನ್ನು ತಲುಪಬಹುದು. ಹೋಗುವ ನನ್ನೆಲ್ಲಾ ಪ್ರಯತ್ನಗಳು ವಿಫಲಗೊಂಡವು. ಮುಂಬೈನಲ್ಲಿ ದಿನದಿಂದ ದಿನ ಕೋವಿಡ್ ಕೇಸ್‌ಗಳು ಜಾಸ್ತಿಯಾಗುತ್ತಲೇ ಇದ್ದವು. ಕಾಯಿಲೆ ಭೀಕರವಾಗಿದೆ ಎಂಬ ಕಾರಣಕ್ಕೆ ಇನ್ನೂ ಮರ‍್ನಾಲ್ಕು ತಿಂಗಳು ಯಾವುದೇ ಸಾರಿಗೆ ಸಂಪರ್ಕವಿಲ್ಲ ಎಂಬ ಸರ್ಕಾರದ ಸುದ್ದಿ ನನ್ನನ್ನು ತುಂಬಾ ಬಾಧಿಸಿತು. ಮುಂಬೈಯಲ್ಲಿ ಸೋಂಕಿತರ ಸಂಖ್ಯೆ ಲಕ್ಷ ದಾಟಿತ್ತು. ಎಂದಿನಂತೆ ಮಾಡುತ್ತಿದ್ದ ಕೆಲಸದ ಮೇಲೆ ನನಗೆ ಆಸಕ್ತಿ ಕಡಿಮೆಯಾಗಿದೆ. ಮೊದಲಿನಂತೆ ಉತ್ಸಾಹವಿಲ್ಲ. ಕೆಲಸದಿಂದ ತೆಗೆದರೂ ಚಿಂತೆಯಿಲ್ಲ ಎಂಬಂತಾಗಿದೆ. ಕಾಟಾಚಾರಕ್ಕೆ ಕೆಲಸ ಮಾಡಿದರೂ, ಯಾಕೋ ಮನಸಿನಲ್ಲಿ ಬದುಕು, ಭವಿಷ್ಯದ ಬಗ್ಗೆ ಅನೇಕ ದ್ವಂದ್ವಗಳು!

ಪಕ್ಕದ ಫ್ಲಾಟಿನಲ್ಲಿ ಕಾಯಿಲೆಯಿಂದ ನರಳುತ್ತಿದ್ದ ಆತ್ಮೀಯರು ಕಣ್ಣು ಮುಚ್ಚಿದರು. ನನಗೆ ದುಃಖ ಉಮ್ಮಳಿಸಿ ಬಂದಿತು. ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ನಾನು ಮಾತನಾಡಿಸಲಾಗದ, ಸಹಾಯ ಮಾಡಲಾಗದ ದುಸ್ಥಿತಿ!
ಈಗ ನನ್ನ ಮನಸಿನಲ್ಲಿ ಅಮ್ಮನ ಮಾತುಗಳೇ ಪ್ರತಿಧ್ವನಿಸುತ್ತಿವೆ. ಕಣ್ಣುಮುಚ್ಚಿದರೂ ವೈಜಯಂತಿಪುರವೇ ಕಾಡುತ್ತಿದೆ. ಮಧುಕೇಶ್ವರನನ್ನು ಎಂದು ದರ್ಶನ ಮಾಡಿಯೇನು? ವರದೆಯ ತಟದಲ್ಲಿ ಓಡಾಡಿಯೇನು? ಅಮ್ಮನ ಜೊತೆ ಸುತ್ತಾಡಿಯೇನು? ಕೊವಿಡ್ ರೋಗಾಣುವಿನ ಹೋರಾಟ ನಿರಂತರವಾದರೂ ಈಗ ಮನಸಿಗಂಟಿರುವ ಚಿಂತೆಗಳ ರೋಗಾಣುಗಳು ನನ್ನನ್ನು ಹೆಚ್ಚು ಬಾಧಿಸುತ್ತಿದ್ದವು.


ಯಾಕೋ ಮರ‍್ನಾಲ್ಕು ದಿನಗಳಿಂದ ನನಗೂ ರೋಗದ ಲಕ್ಷಣಗಳು!

ಕೊರೋನೊ ಈಗ ಪಕ್ಕದ ಕೋಣೆಯಲ್ಲಿತ್ತು. ಈಗ ಇದ್ದ ಒಂದು ಗೋಡೆಯನ್ನು ದಾಟಿಕೊಂಡು ನನ್ನ ಫ್ಲಾಟಿಗೂ ಬಂದಂತಿದೆ. ಮುಂಬೈನಿಂದ ವೈಜಯಂತಿಪುರಕ್ಕೆ ನಾನು ಎಂದು ಹೋಗುವೆನು ಎಂಬ ಚಿಂತೆಯ ನಡುವೆ ಕಾಯಿಲೆಯ ಲಕ್ಷಣಗಳು ನನಗೆ ಅಷ್ಟು ತೊಂದರೆಯನ್ನು ಕೊಟ್ಟಂತೆ ಕಾಣಲಿಲ್ಲ.

ಅಮ್ಮ ಫೋನ್ ಮಾಡುತ್ತಲೇ ಇದ್ದಳು. ಮನೆಗೆ ಬಂದಿರುವ ಈ ಹೊಸ ಅತಿಥಿಯ ಬಗ್ಗೆ ಹೇಳಲು ಮನಸ್ಸಾಗಲಿಲ್ಲ. ಜೀವನದಲ್ಲಿ ತುಂಬಾ ನೊಂದ ಜೀವವದು!
ಸ್ವಲ್ಪ ದಿನಗಳ ಕಾಲ ಅಮ್ಮನ ಕರೆಯನ್ನು ಸ್ವೀಕರಿಸದಿರುವಂತೆ ಮನಸ್ಸು ಹೇಳುತ್ತಲೇ ಇತ್ತು.
ಹುತ್ತದ ಅರಮನೆಯಲ್ಲಿ ಈಗ ವಿಷದ ಸುಂಟರಗಾಳಿಯು ಬೀಸುತ್ತಿರುವ ಭಾವನೆಯು
ಯಾಕೋ ಉಸಿರು ಬಿಗಿಯಾದಂತೆ ಅನಿಸುತ್ತಿದೆ.

-ಶ್ರೀಧರ ಬನವಾಸಿ


ಲೇಖಕರ ಪರಿಚಯ

ಶ್ರೀಧರ ಬನವಾಸಿ, ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯವರು. ಅಮ್ಮನ ಆಟೋಗ್ರಾಫ್',ದೇವರ ಜೋಳಿಗೆ’, ಬ್ರಿಟಿಷ್ ಬಂಗ್ಲೆ' ಪುಸ್ತಕಗಳ ಮೂಲಕ ಕನ್ನಡ ಕಥಾಕ್ಷೇತ್ರದಲ್ಲಿ ಮಹತ್ವದ ಕಥೆಗಾರರಾಗಿ ಶ್ರೀಧರ ಬನವಾಸಿ ಗುರುತಿಸಿಕೊಂಡಿದ್ದಾರೆ.ತಿಗರಿಯ ಹೂಗಳು’, ಬಿತ್ತಿದ ಬೆಂಕಿ’,ಪೂರ್ಣಚಂದ್ರನಿಗೆ ಮುಖವಾಡವಿಲ್ಲ’ ಇವು ಇವರ ಕವನ ಸಂಕಲನಗಳು. ೨೦೧೭ರಲ್ಲಿ ಪ್ರಕಟಗೊಂಡ ಇವರ ಬೇರು' ಕಾದಂಬರಿಯು ಆ ವರ್ಷದ ಅತ್ಯುತ್ತಮ ಕಾದಂಬರಿಗಳಲ್ಲಿ ಒಂದು ಎಂದು ಗುರುತಿಸಿಕೊಂಡಿದ್ದು ಇದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯುವ ಪುರಸ್ಕಾರ’, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚದುರಂಗ' ದತ್ತಿನಿಧಿ,ಕುವೆಂಪು’ ಪ್ರಶಸ್ತಿ, ಶಾ ಬಾಲುರಾವ್ ಹಾಗೂ ಬಸವರಾಜ ಕಟ್ಟಿಮನಿ ಯುವ ಬರಹಗಾರ ಪ್ರಶಸ್ತಿ ಸೇರಿದಂತೆ ಸುಮಾರು ೯ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡಿರುವುದು ಒಂದು ವಿಶೇಷ ಮತ್ತು ದಾಖಲೆಯೆಂದು ಗುರುತಿಸಲ್ಪಟ್ಟಿದೆ. ತಮಿಳಿನ ‘ಇನಿಯ ನಂದನವನಂ’ ಪತ್ರಿಕೆಯು ಇವರಿಗೆ ಕರುನಾಡ ಸಾಹಿತ್ಯ ಚಿಂತಾಮಣಿ ಪ್ರಶಸ್ತಿ ನೀಡಿ ಗೌರವಿಸಿದೆ. ಕಥೆ, ಕಾವ್ಯ, ಕಾದಂಬರಿ, ನಾಟಕ ಮತ್ತು ಸಂಪಾದನೆ ಸೇರಿದಂತೆ ಇದುವರೆಗೆ ಸುಮಾರು ಹದಿನೈದು ಕೃತಿಗಳನ್ನು ಇವರು ಪ್ರಕಟಿಸಿದ್ದಾರೆ.


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *