‘ಮೇಡಂ, ಇಂದು ಆಫೀಸಿಗೆ ಹೋಗುವಾಗ FM ರೇಡಿಯೋದಲ್ಲಿ ನಿಮ್ಮ GST ಜಾಹಿರಾತು ಕೇಳಿದೆ ‘ ಅಂತ ಮೊನ್ನೆ ನನ್ನ ಪರಿಚಯದವರು ಫೋನ್ ಕಾಲ್ ಮಾಡಿ ಹೇಳಿದಾಗ ತುಂಬಾ ಖುಷಿ ಆಯಿತು. ಮೊದಲೆಲ್ಲ ‘ಇಂದಿನ ರೇಡಿಯೋ ಧಾರಾವಾಹಿ ತುಂಬಾ ಚೆನ್ನಾಗಿ ಮೂಡಿ ಬಂತು ಕಣೆ ‘ ಅಥವಾ ‘ ಮೇಡಂ, ಇಂದಿನ ನಿಮ್ಮ ಕವನ ವಾಚನ ಕೇಳಿ ಕಂಗಳು ತುಂಬಿ ಬಂದವು’ ಅಂತ ಸ್ನೇಹಿತರು, ಪರಿಚಯದವರು ಹೇಳುತ್ತಿದ್ದಾಗ ತುಂಬಾ ಖುಷಿ ಆಗುತ್ತಿತ್ತು. ಕೇಳುಗರ ಪ್ರತಿಕ್ರಿಯೆಗಳು ತುಂಬಾ ಮುಖ್ಯ. ಹದಿನೈದು ನಿಮಿಷಗಳ ಈ ಧಾರಾವಾಹಿಗಳ ಹಿಂದಿನ ಕಥೆಗಳು ನಿಮಗೆ ಗೊತ್ತಿರೋದಿಲ್ಲ ಅಲ್ವಾ.
ಅವುಗಳನ್ನೆಲ್ಲ ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿ, ಬೇರೆ ಬೇರೆ ವಯಸ್ಸಿನ ಕಲಾವಿದರಿಂದ ಕಂಠದಾನ ಮಾಡಿಸಬೇಕಾಗುತ್ತದೆ. ಕೆಲವು ಹೊಸ ಕಲಾವಿದರಿಗೆ ಹೇಗೆ ಸ್ವರದಲ್ಲಿ ಬದಲಾವಣೆ ಮಾಡಿ, ಆಯಾ ಸಂದರ್ಭಕ್ಕೆ ತಕ್ಕಂತೆ ಮಾತನಾಡಬೇಕು ಎಂದೆಲ್ಲಾ ಕಲಿಸಬೇಕಾಗುತ್ತದೆ.
ಒಂದೊಂದು ಪಾತ್ರ ಮಾಡಬೇಕಾದಾಗ ಆ ಪಾತ್ರಕ್ಕೆ ತಕ್ಕಂತೆ ಭಾವಗಳೂ ಹೊರ ಹೊಮ್ಮಬೇಕು. ಅಂದಾಗ ಮಾತ್ರ ಕೇಳುಗರಿಗೆ ಮುದ ನೀಡುತ್ತದೆ ಮತ್ತು ನಾವು ಮಾಡುವ ಕೆಲಸ ಸಾರ್ಥಕವಾಗುತ್ತದೆ. ಆದರೆ ವಿವಿಧ ಸರಕಾರಿ ಇಲಾಖೆಗಳ ರೇಡಿಯೋ ಧಾರಾವಾಹಿಗಳು ಇತ್ತೀಚೆಗೆ ಮೊದಲಿನ ಹಾಗೆ ಬರುತ್ತಾ ಇಲ್ಲ. ಕೇವಲ ಆಯ್ದ ನಾಲ್ಕೈದು ಖಾತೆಗಳ ಜಾಹೀರಾತುಗಳನ್ನು ಮಾಡಲು ಬೇರೆ ಬೇರೆ ಸ್ಟುಡಿಯೋ ಗಳಿಗೆ ಹೋಗಬೇಕಾಗುತ್ತದೆ.
ಅದೂ ಅಲ್ಲದೆ ಹಿಂದೆಲ್ಲಾ ನನ್ನ ಮನದ ಭಾವನೆಯ ಬಳ್ಳಿಯಲ್ಲಿ ಹೊಸ ಹೊಸ ಎಲೆಗಳು ಚಿಗುರುತ್ತಾ ಇದ್ದವು. ಪುಟ್ಟ ಪುಟ್ಟ ಹೂವುಗಳು ಅರಳ್ತಾ ಇದ್ದವು. ಆದ್ರೆ ಆರೇಳು ತಿಂಗಳಿನಿಂದ ಒಂದೂ ಹೊಸ ಎಲೆ ಕಾಣಿಸ್ತಾ ಇಲ್ಲಾ . ‘ಏನು. . . ತುಂಬಾ ದಿನ ಆಯ್ತು. . ನಿಮ್ಮ ಹೊಸ ಲೇಖನ ಇಲ್ಲ ಕವನಕ್ಕೆ ಕಾಯ್ತಾ ಇದ್ದೀನಿ. . ಹೊಸದೇನೂ ಬರೀತಾ ಇಲ್ವಾ?’ ಅಂತ ಮೊನ್ನೆ ಯಾರೋ ಒಬ್ರು ಕೇಳಿದಾಗ ಅರೇ. . ಹೌದಲ್ಲ, ಯಾಕಿರಬಹುದು? ಯಾಕೆ ನನ್ನ ಬರವಣಿಗೆಯ ಬಳ್ಳಿ ಬೆಳೀತಾ ಇಲ್ಲಾ ? ಬಹುಷಃ ಇದಕ್ಕೆ ಹೊಸ ಮಣ್ಣು ಬೇಕಾಗಿರಬಹುದು, ಇಲ್ಲಾ ಈ ಬಿಸಿಲಿನಿಂದ ನೀರು ಕಮ್ಮಿ ಸಿಗ್ತಿರಬಹುದು ಎಂದೆಲ್ಲಾ ಯೋಚಿಸತೊಡಗಿದೆ.
ಮಕ್ಕಳು ಕಲಿಯಲು ಮನೆಯಿಂದ ಹೊರಗೆ ಹೋದಾಗಲೂ ಹೀಗೇ ಆಗಿತ್ತು. ಈಗ ಅವರ ಮದುವೆ ಆಗಿ ಮತ್ತೆ ತಮ್ಮ ಕೆಲಸವಿದ್ದ ಊರುಗಳಿಗೆ ಹೋದಾಗ ಮತ್ತದೇ ಮಂಕುತನ ಆವರಿಸಿದಂತೆ ಆಗಿದೆ. ಮತ್ತೆ ಒಮ್ಮೊಮ್ಮೆ ಕೆಲಸದ ಒತ್ತಡ ಹೆಚ್ಚಾದಾಗ ಈ ರೀತಿ ಆಗುವುದುಂಟು ಅಲ್ಲವೇ?
ಇದೇ ಗುಂಗಿನಲ್ಲಿ ಇವತ್ತು ರಾಜೇಂದ್ರ ನಗರದಲ್ಲಿರುವ ಸೂಪರ್ ಸ್ಟುಡಿಯೋದ ಮುಂದೆ ಕಿರಿದಾದ ಜಾಗದಲ್ಲಿ ಕಸರತ್ತು ಮಾಡ್ತಾ, ದೊಡ್ಡ ಮರದ ಬದಿಯಲ್ಲಿ ಕಾರನ್ನ ಪಾರ್ಕ ಮಾಡ್ತಾ ಇದ್ದೆ . ಆಗ ’ಹಾಂ. . ಹಾಂ. . ಠೀಕ್ ಹೈ ಆಂಟೀ . . ಠೀಕ್ ಹೈ . . ಬಸ್ ಬಸ್” ಎಂಬ ಪುಟ್ಟ ಸ್ವರ ಕೇಳಿಸಿತು. ಕನ್ನಡಿಯಲ್ಲಿ ಬಗ್ಗಿ ನೋಡಿದೆ. ನೆತ್ತಿಯ ಮೇಲೊಂದು ನಾರದನ ಹಾಗೆ ಪುಟ್ಟ ಜುಟ್ಟು, ಗುಲಾಬಿ ಬಣ್ಣದ ಪ್ಯಾಂಟನ್ನು ತೊಟ್ಟ ಬಟ್ಟಲು ಕಂಗಳ ಪುಟ್ಟ ಹುಡುಗಿ ನಗುತ್ತಾ ಕೈ ಮಾಡ್ತಾ ಇದ್ಲು. ಆಗ ನನಗೆ ನೆನಪಾದದ್ದು ಮೊದ್ಲು ಟಿವಿಯಲ್ಲಿ ಬರ್ತಾ ಇದ್ದ ಒಂದು ಜಾಹೀರಾತು. “ಲಗೀ ಕ್ಯಾ” ಅಂತ ಕಾರಿನಾತ ಕೇಳೋವಾಗ “ನಹೀ, , , ನಹೀ. . ಹಾಂ , , , ಹಾಂ ಅಬ್ ಲಗೀ” ಅನ್ನುವ ಆ ತುಂಟ ಪೋರನ ಜಾಹೀರಾತು. ಅದು ನನಗೆ ತುಂಬಾ ಹಿಡಿಸಿತ್ತು. ಈ ಹುಡುಗಿಯೂ ಅದೇ ರೀತಿ ಆಟವಾಡ್ತಾಳೇನೋ ಅಂತ ಮತ್ತೊಮ್ಮೆ ಬಗ್ಗಿ ನೋಡಿದೆ. ಸಧ್ಯ ಹಾಗೇನೂ ಆಗಿರಲಿಲ್ಲ, ಮತ್ತೆ ನನ್ನ ಕಾರು ಹಿಂದೆ ಇದ್ದ ಮರವನ್ನ ಹೋಗಿ ಅಪ್ಪಿಕೊಂಡಿರಲಿಲ್ಲ. . ಹೂಂ. . ಪರವಾಗಿಲ್ವೇ, ಒಳ್ಳೇ ಹುಡುಗಿ ಅನ್ನುತ್ತಾ ಅವಳನ್ನು ನೋಡಿ ಕಿರುನಗೆ ಬೀರಿದಾಗ ಎಲ್ಲೋ ನೋಡಿದ್ದೀನಲ್ಲಾ ಅಂತ ಅನಿಸ್ತು. ಆದ್ರೆ ನೆನಪಾಗ್ಲಿಲ್ಲ.
ನನ್ನ ಉತ್ತರಕ್ಕೆ ಪ್ರತ್ಯುತ್ತರವಾಗಿ ಮುಂದೆ ಬಂದು ನಗುನಗುತ್ತಾ , “ಆಂಟಿ ಜಿ. . ಕೈಸೀ ಹೋ? ಆಜ್ ಧೂಪ್ ಬಹುತ್ ಹೈ ನಾ? ”. (ಆಂಟೀ. . ಹ್ಯಾಗಿದ್ದೀರಿ ? ಇವತ್ತು ತುಂಬಾ ಬಿಸಿಲಿದೆ ಅಲ್ವಾ?) ಅಂದ್ಲು. . ಇವಳೇನಪ್ಪಾ, ತುಂಬಾ ಪರಿಚಯ ಇದ್ದವ್ರ ಹಾಗೆ ಮಾತಾಡ್ತಾ ಇದ್ದಾಳಲ್ಲ ಅನ್ನುತ್ತಾ “ಠೀಕ್ ಹೂಂ ಬೆಟಾ. . ಜಿಹಾಂ. . ಆಜ್ ಜರಾ ಜ್ಯಾದಾ ಹೀ ಹೈ” ಅನ್ನುತ್ತಾ ಎಲ್ಲಿ ನೋಡಿದ್ದೀನಿ ಅಂತ ನೆನಪು ಮಾಡಿಕೊಳ್ತಾ ಕೆಳಗಿಳಿದೆ .
ಇಷ್ಟು ಪ್ರೀತಿಯಿಂದ ಮಾತನಾಡುವಾಗ ಹಾಗೇ ಸುಮ್ನೆ ಹ್ಯಾಗೆ ಹೋಗೋದೂಂತ ‘ ನಿನ್ನ ಹೆಸರೇನು ಅಂದೆ. ಅದಕ್ಕೆ “ಆರತಿ” ಅಂತ ಉತ್ತರಿಸಿದಳು. “ ನಿನ್ನ ಹೆಸರು ತುಂಬಾ ಚೆನ್ನಾಗಿದೆ” ಎನ್ನುತ್ತಾ ಲಾಕ್ ಕಾರ್ ಮಾಡಿ ಪರ್ಸನ್ನು ಹಿಡಿದುಕೊಂಡು ಮುಂದೆ ನಡೆದೆ. ಆದ್ರೆ ಅವಳು ನನ್ನನ್ನ ಹಿಂಬಾಲಿಸುತ್ತಾ “ಆಂಟಿ . ಆವತ್ತು ನೀವು ಕೊಟ್ಟ ಚಾಕಲೇಟ್ ಮತ್ತೆ ಕೇಕು ತುಂಬಾ ಚೆನ್ನಾಗಿತ್ತು, ನಾನು ನನ್ನ ತಂಗಿಗೂ ಕೊಟ್ಟೆ, ಅಮ್ಮಂಗೂ ಕೊಟ್ಟೆ’ ಎಂದು ಭಾರೀ ಖುಷಿಯಿಂದ ಹೇಳಿದಳು. ಆಗ ನನಗೆ ನೆನಪಾದದ್ದು ಎರಡು ತಿಂಗಳು ಹಿಂದೆ ನಡೆದ ಘಟನೆ.
ಹೆಣ್ಣಿನ ಬಾಳು ಮದ್ವೆ ಆದ ಮೇಲೆ, ಅಮ್ಮನ ಪಟ್ಟ ಸಿಕ್ಕ ಮೇಲೆ ಎಲ್ಲವೂ ಬದಲಾಗಿ ಹೋಗುತ್ತೆ ಅಲ್ವಾ? ಆಕೆ ಮನೇಲಿ ಇದ್ರೂ ಅಷ್ಟೇ, ಮನೆಯಿಂದ ಹೊರಗೆ ಕೆಲಸಕ್ಕೆ ಹೋದ್ರೂ ಅಷ್ಟೇ. . ಮಕ್ಕಳ, ಪತಿಯ ಹೊಟ್ಟೆಯ ಚಿಂತೆ , ಮನೆ ಚಿಂತೆ ತಪ್ಪೋದಿಲ್ಲ ನೋಡಿ. ಅವತ್ತೂ ಹಾಗೇ ಆಯ್ತು. ನಾನು ಇನ್ನೊಂದು ಸ್ಟೂಡಿಯೋದಲ್ಲಿ ರೆಕಾರ್ಡಿಂಗ್ ಮುಗಿಸಿಕೊಂಡು ಮನೆಗೆ ಹೋಗೋವಾಗ ತಡವಾಗುತ್ತೇಂತ ಢೋಕಲಾ , ಪೇಸ್ಟ್ರೀ, ಚಿಪ್ಸ್ ಹಾಗೂ ನನ್ನ ಅತ್ತೆಯವರ ಮೆಚ್ಚಿನ ಚಾಕೋಲೇಟ್ ತೆಗೆದು ಕೊಂಡು ಬಂದಿದ್ದೆ. ಸೂಪರ್ ಸ್ಟುಡಿಯೋದಲ್ಲೂ ಒಂದು ರೆಕಾರ್ಡಿಂಗ್ ಕೆಲಸ ಇತ್ತು. ಕಾರನ್ನು ನಿಲ್ಲಿಸುತ್ತಿದ್ದಾಗ ಮಕ್ಕಳ ಅಳುವಿನ ಸ್ವರ ಕೇಳಿಸಿತು. ಅಲ್ಲೇ ಪಾರ್ಕಿಂಗ್ ಹತ್ರ ಮನೆಕಟ್ಟೋ ಕೂಲಿಗಾರರ ಕುಟುಂಬದವ್ರ ಚಿಕ್ಕ ಚಿಕ್ಕ ಗುಡಿಸಿಲುಗಳಿವೆ. ಒಂದು ಪುಟ್ಟ ಹುಡುಗಿ ಮೂಲೆಯಲ್ಲಿ ತನ್ನ ತಂಗಿಯನ್ನು ಆಡಿಸುತ್ತಾ, ಹಾಡು ಹೇಳುತ್ತಾ ಮಲಗಿಸುತ್ತಿದ್ದಳು. ಸುಮಾರು ನಾಲ್ಕು ವರ್ಷದವಳಿರಬೆಕು. ತಂಗಿಯನ್ನು ತನ್ನ ಪುಟ್ಟ ಕೈಗಳಿಂದ ಅಪ್ಪಿ ಹಿಡಿದ ಆ ದೃಶ್ಯ ನೋಡಿ “ಅಯ್ಯೋ ಪಾಪ” ಅನಿಸಿತು. ಅಪ್ಪ-ಅಮ್ಮ ಕೂಲಿ ಕೆಲಸಕ್ಕೆ ಹೋದ್ರೆ ಚಿಕ್ಕವ್ರನ್ನ ದೊಡ್ಡ ಅಕ್ಕಾನೇ ನೋಡಿಕೊಳ್ಳಬೇಕು, ಆಟವಾಡಿಸಬೇಕು, ಊಟ ಮಾಡಿಸಬೇಕು. ಹೂಂ. . ಇವ್ರ ಮಕ್ಕಳು ಎಷ್ಟು ಬೇಗ ಎಲ್ಲಾ ಜವಾಬ್ದಾರಿಯನ್ನ ಕಲಿತು ಬಿಡ್ತಾರೆ ಅಲ್ವಾ?. ಅದೇ ನಮ್ಮ ಮಕ್ಕಳು? ನಮ್ಮ ಮಕ್ಕಳಿಗೆ ನಾವೇ ಇಷ್ಟು ಬೇಗ ಏನೂ ಜವಾಬ್ದಾರಿ ಕೊಡೋದಿಲ್ಲಾ ಅಂದ ಮೇಲೆ ಅವ್ರಿಗಾದ್ರೂ ಹ್ಯಾಗೆ ಬರಬೇಕು?
ಸರಿ, ಆಕೆ ಹಾಡು ಹೇಳುತ್ತಿದ್ದರೂ ಮಗು ಮಾತ್ರ ಜೋರಾಗೇ ಕಿರುಚ್ತಾ ಇತ್ತು. ಮಗುವಿನ ಕಿರುಚಾಟ ಕೇಳಿ ತುಂಬಾ ದಿನಗಳಾದಕ್ಕೋ ಇಲ್ಲಾ ಆ ಹುಡುಗಿಯ ಪರದಾಟ ನೋಡಿಯೋ ನನಗೂ ತಡಿಯೋಕಾಗ್ಲಿಲ್ಲ. “ಯಾಕಮ್ಮಾ. ಅಳ್ತಾ ಇದ್ದಾಳೆ?’ ಅಂತ ಅವಳಿದ್ದಲ್ಲಿ ಹೋಗಿ ಕೇಳಿದೆ.
‘ಇವಳಿಗೆ ಹಸಿವೆ ಆಗಿದೆ ಆಂಟಿ. . ಅಮ್ಮ ಇನ್ನೂ ಕೆಲಸದಿಂದ ಬಂದಿಲ್ಲ. ” ಎನ್ನುತ್ತಾ ಮುಖ ಚಿಕ್ಕದು ಮಾಡಿಕೊಂಡು ಮತ್ತೆ ಆ ಪೋರಿಯನ್ನು ಸುಮ್ಮನಾಗಿಸಲು ಪ್ರಯತ್ನಿಸಿದಳು. . ಅವಳ ಆ ಜವಾಬ್ದಾರಿಯುತ ಮುಖ ಭಾವ ಕಂಡು ಆಶ್ಚರ್ಯ ಪಟ್ಟೆ. ಗಾಡಿಯ ಬಾಗಿಲು ತೆಗೆದು ಒಂದು ಪೇಸ್ಟ್ರೀ ಮತ್ತೆ ಚಾಕಲೇಟ್ ಕೊಡಲು ಹೋದಾಗ- “ಬೇಡಾ ಆಂಟಿ. . ಅಮ್ಮ ಬರ್ತಾಳೆ, ಏನಾದ್ರೂ ತರ್ತಾಳೆ “ ಎನ್ನುತ್ತಾ ಅಲ್ಲಿಂದ ಹೋಗಲು ನೋಡಿದಳು. ನಾನೂ ಬಿಡಲಿಲ್ಲ. . ‘ಪರವಾಗಿಲ್ಲಾ ತೊಗೋ. . ಅಮ್ಮ ಇನ್ನೂ ಬಂದಿಲ್ಲಾ ತಾನೇ. . ನೀನೂ ತಿನ್ನು, ಅವಳಿಗೂ ತಿನ್ನಿಸು ’ ಎಂದಾಗ ಒಲ್ಲದ ಮನಸಿನಿಂದ ತೆಗೆದುಕೊಂಡಳು. ಇಷ್ಟೇ. . ನನ್ನ ಅವಳ ಪರಿಚಯ. ಇದಾದ ಮೇಲೆ ಒಂದೆರಡು ಬಾರಿ ಅಲ್ಲಿಗೆ ಹೋದರೂ ನಾವಳನ್ನ ನೋಡಿರಲಿಲ್ಲ. ಹಾಗಾಗಿ ಅವಳ ಬಗ್ಗೆ ಮರೆತೇ ಬಿಟ್ಟಿದ್ದೆ.
ಇಂದು ನಾನು ಬಂದಾಗ ಅದೇ ಮರದ ಕೆಳಗೆ ಕುಳಿತು ಮಣ್ಣಾಟ ಆಡ್ತಾ ಇದ್ಲು ಅನಿಸುತ್ತೆ. ನನ್ನ ಕಾರನ್ನು ನೋಡಿ ಬಲು ಖುಷಿಯಿಂದ “ಹಾಂ. . ಹಾಂ. . ಠೀಕ್ ಹೈ ಆಂಟೀ . . ಠೀಕ್ ಹೈ . . ಬಸ್ ಬಸ್” ಎಂದು ಮುಂದೆ ಬಂದು ನನಗೆ ಪಾರ್ಕಿಂಗ್ ಗೆ ಸಹಾಯ ಮಾಡಿದಳು. ಅವಳನ್ನು ಮತ್ತೊಮ್ಮೆ ದಿಟ್ಟಿಸಿ ನೋಡಿದಾಗ ಗುರುತು ಸಿಕ್ತು. ಅಂದು ಹಸಿವೆಯಿಂದ ಮುಖ ಬಾಡಿತ್ತು, ಇಂದು ಸಂತಸದಿಂದ ಮುಖವರಳಿತ್ತು. ಆಕೆ ಒಂದು ಚಿಕ್ಕ ಪ್ಲೈ ವುಡ್ಡಿನ ತುಂಡನ್ನು ಇಟ್ಟುಕೊಂಡು ಒಂದು ಪ್ಲಾಸ್ಟಿಕ್ ಕಪ್ಪಿನಲ್ಲಿ ಮಣ್ಣನ್ನು ಹಾಕುತ್ತಾ ಏನೋ ಮಾಡ್ತಾ ಇದ್ಲು. ಇಂದು ತಂಟೆ ಮಾಡದೇ ಅವಳ ತಂಗಿ ಮೂಲೆಯಲ್ಲಿದ್ದ ನೀವಾರ್ ಕಾಟಿನ ಮೇಲೆ ಆರಾಮಾಗಿ ಮಲಗಿದ್ದಳು. ಅವಳ ಕೈಯಲ್ಲಿದ್ದ ಮೃದುವಾದ ಮಣ್ಣು ನೋಡಿ ನನಗೂ ಅದನ್ನು ಮುಟ್ಟಬೇಕೆನಿಸಿತು. ಆಹಾ. . ತಂಪಾದ ಮೆತ್ತನೆಯ ಮಣ್ಣು, ಬಾಲ್ಯದಲ್ಲಿ ಮಣ್ಣಾಟವಾಡಿದ್ದು ನೆನಪಿಗೆ ಬಂತು. ದೆಹಲಿಯಲ್ಲಿ ನಮ್ಮ ಮಕ್ಕಳಿಗೂ ಅ ರೀತಿ ಮಣ್ಣಾಟವಾಡೋಕೆಲ್ಲಿ ಸಿಗುತ್ತೆ
ಹೇಳಿ?.
“ಆರತಿ, ಏನು ಮಾಡ್ತಾ ಇದ್ದೀಯಾಂತ ಕೇಳಿದೆ. ಅದಕ್ಕೆ ಅವಳು “ಆಂಟೀ, ಅವತ್ತು ನೀವು ನಂಗೆ ಕೊಟ್ಟ ಕೇಕ್ ಹೀಗೇ ಇತ್ತು ಅಲ್ವಾ?” ಎಂದು ತೋರಿಸಿದಳು. ಎಂದೋ ತಿಂದ ಕೇಕನ್ನು ನೆನೆಯುತ್ತಾ ಆಟವಾಡುತ್ತಿದ್ದ ಹುಡುಗಿಯನ್ನು ನೋಡಿ ಹೃದಯ ಭಾರವಾಯ್ತು. “ಹೌದಮ್ಮ” ಎನ್ನುತ್ತ ನಾನೂ ಮಣ್ಣಿನಲ್ಲಿ ಕೈ ಹಾಕಿದೆ. ಆಕೆ ಖುಷಿಯಿಂದ “ ಆಂಟೀ. . ನಿಮಗೂ ಮಣ್ಣು ಸೇರುತ್ತಾ?? ಬೇಕಾದ್ರೆ ನೀವಿದನ್ನ ತೊಗೊಂಡು ಹೋಗಿ ” ಎನ್ನುತ್ತಾ ತಾನು ಮಾಡಿದ ಮಣ್ಣಿನ ಕೇಕನ್ನು ಕೊಡಲು ಬಂದಳು. ಆ ಪುಟ್ಟ ಜೀವದ ಉದಾರತೆ ಮೆಚ್ಚತಕ್ಕದ್ದು. “ಬೇಡಮ್ಮ. . ನೀನೇ ಇಟ್ಕೋ” ಎಂದಾಗ, “ ಈ ಮಣ್ಣನ್ನ ನಿಮ್ಮನೆ ಪಾಟ್ ಗೆ ಹಾಕಿ ಆಂಟಿ, ಚೆನ್ನಾಗಿ ಹೂವು ಬಿಡುತ್ತೆ” ಎಂದು ಮತ್ತೆ ಕೊಡಲು ಬಂದಳು. ಅವಳಿಗೆ ಹ್ಯಾಗಪ್ಪಾ ಬೇಡ ಅನ್ನೋದು ಅಂತ ಎದ್ದು ನಿಂತೆ. “ಇನ್ನೊಮ್ಮೆ ಬಂದಾಗ ತೊಗೊಂಡು ಹೋಗ್ತೀನಿ ಆಯ್ತಾ. ಥ್ಯಾಂಕ್ಯೂ” ಎಂದಾಗ ‘ ಬೇಡ ಆಂಟಿ, ಇವತ್ತೇ ತೆಗೆದು ಕೊಂಡು ಹೋಗಿ, ‘ ಎನ್ನುತ್ತಾ ಕೈ ಒರೆಸಿಕೊಳ್ಳುತ್ತಾ ತಮ್ಮ ಮನೆಯತ್ತ ಓಡಿ ಹೋದಳು. ಮನೆಯಿಂದ ಒಂದು ಪ್ಲಾಸ್ಟಿಕ್ ಚೀಲ ತಂದು ಅದರಲ್ಲಿ ಅವಳು ಮಾಡಿದ ಮಣ್ಣಿನ ಕೇಕನ್ನು ಹಾಕಿ ‘ಲೀ ಜಿಯೇ ಆಂಟಿ ಜಿ ‘ ಎಂದಾಕ್ಷಣ ಹೃದಯತುಂಬಿ ಬಂತು. ತಿರುಗಿ ನೋಡಿದಾಗ ಆಕೆಯ ತಾಯಿ ನಗುತ್ತಾ ನಿಂತಿದ್ದಳು.
“ಮ್ಯಾಡಮ್ ಜೀ. . , ನನ್ನ ಮಗಳನ್ನೂ ನಿಮ್ಮನೇಗೆ ಕರೆದು ಕೊಂಡು ಹೋಗಿ. ಊರಿಂದ ಬಂದಾಗಿನಿಂದ ನಿಮ್ಮ ದಾರಿ ಕಾಯ್ತಾ ಇದ್ದಾಳೆ” ಎಂದಳು. ಅವಳಿಗೆ ಏನು ಹೇಳ ಬೇಕೋ ತಿಳಿಯದೆ ಆ ಪುಟ್ಟು ಹುಡುಗಿಯ ತಲೆ ಮೇಲೆ ಕೈಯಾಡಿಸಿ, “ಓ, ಹಾಗೇ ಆಗ್ಲಿ. . ನಿಮ್ಮ ಮಗಳು ತುಂಬಾ ಜಾಣೆ, ದೇವ್ರು ಒಳ್ಳೇದು ಮಾಡ್ಲಮ್ಮ” ಎನ್ನುತ್ತಾ ಕೈ ಆಡಿಸಿ ಸ್ಟುಡಿಯೋದತ್ತ ಹೋದೆ. ನಾವು ಅದೆಷ್ಟೋ ಜನರಿಗೆ ಸಹಾಯ ಮಾಡಿರ್ತೇವೆ. ಅನ್ಯರಿಂದ ಪಡೆದ ಉಪಕಾರವನ್ನು ಸಜ್ಜನರು ಎಂದಿಗೂ ಮರೆಯುವುದಿಲ್ಲ ಅಂತಾರಲ್ಲ ಅದು ಸುಳ್ಳಲ್ಲ ಅಂತ ಇಂದು ಖಚಿತವಾಯಿತು.
ಕೆಲವೊಮ್ಮೆ ವಿದ್ಯಾವಂತರು ಅನಿಸಿ ಕೊಂಡವ್ರೇ ತಮ್ಮ ಕೆಲಸವಾದ ಬಳಿಕ ನಮ್ಮ ಮುಖ ನೋಡಿದ್ರೂ ದೂರ ಓಡಿ ಹೋಗ್ತಾರೆ. ಆದರೆ ಆರತಿಯ ತಂದೆ ತಾಯಿ ಅವಿದ್ಯಾವಂತರು, ಕೂಲಿಕೆಲಸ ಮಾಡುತ್ತಿದ್ದರೂ ತಮ್ಮ ಮಗಳಿಗೆ ಒಳ್ಳೆಯ ಸಂಸ್ಕಾರ ನೀಡಿದ್ದನ್ನು ನೋಡಿ ತುಂಬಾ ಖುಶಿಯಾಯ್ತು. ಮುಗ್ಧಮನದ ಬಾಲೆ ಇಂದು ನನ್ನ ಮನ ಗೆದ್ದಿದ್ದಳು. ನನ್ನ ಭಾವನೆಯ ಬಳ್ಳಿಗೆ ಪುಟ್ಟ ಆರತಿ ಕೊಟ್ಟ ಮೃದುವಾದ ಮಣ್ಣನ್ನ ಹಾಕ್ತಾ ಇದ್ದೇನೆ. ಖಂಡಿತ ಒಂದು ಹೊಸ ಎಲೆ ಚಿಗುರೇ ಚಿಗುರುತ್ತೆ ಹಾಗೂ ಈ ಮಂಕುತನದಿಂದ ಹೊರಗೆ ಬಂದು ಹೊಸ ವಿಷಯಗಳು ಮನ ಮೀಟಿ ನನ್ನ ಪುಟಗಳನ್ನು ಖಂಡಿತ ತುಂಬುತ್ತವೆ ಎನ್ನುವ ಭರವಸೆ ನನಗಿದೆ.
-ಸವಿತಾ ಇನಾಮದಾರ್