ನಮ್ಮ ಊರಿನಲ್ಲಿ ಯಾರಾದರೂ ಬಲಶಾಲಿ ಇರುವನೋ ಎಂದು ಕೇಳಿದರೆ ನೀಲಣ್ಣನನ್ನು ತೋರಿಸಬೇಕು. ಆರು ಅಡಿ ಎತ್ತರದ ಗಟ್ಟಿಮುಟ್ಟಾದ ಶರೀರ, ಕಡುಕಪ್ಪ ಮೈಬಣ್ಣ, ತೆಲತುಂಬ ಕೂದಲು, ಗಡ್ಡ ಮೀಸೆ ಪೊಗರ್ದಸ್ತಾಗಿ ಬೆಳೆದಿವೆ. ಬಲಿಷ್ಠವಾದ ತೋಳುಗಳು, ಬಲತೊಳಿಗೆ ಅಜ್ಜಯ್ಯನ ತಾಯತ ಕಟ್ಟಿದ್ದಾನೆ. ಮೈಮೇಲೆ ಅಂಗಿ ಹಾಕಿದ್ದನ್ನು ನಾನೆಂದು ನೋಡಿಲ್ಲ. ಉಡಲಿಕ್ಕೆ ದಪ್ಪ ದಟ್ಟಿನ ಪಂಚೆ, ಹೆಗಲ ಮೇಲೆ ಅರಿತವಾದ ಕೊಡಲಿ ಇದು ನಮ್ಮೂರ ಮರಕುಟಿಗ ನೀಲಣ್ಣನ ಚಿತ್ರ.
ನೀಲಣ್ಣ ವರಟನಾದರೂ ನಡೆನುಡಿಯಲ್ಲಿ ಅತ್ಯಂತ ವಿನಯಶಾಲಿ. ಮಗುವಿನಂತ ಮನಸ್ಸು. ಮಕ್ಕಳ ಅಂದರೆ ಪ್ರಾಣ. ಅವನ ಕೆಲಸ ಮರ ಕಡಿಯುವುದು, ಕಡಿದ ಮರದ ಬಡ್ಡೆಯಿಂದ ಕುಂಟೆ, ರಂಟೆ, ಗಳೇಸಾಮಾನುಗಳನ್ನು ಕೆತ್ತುವುದು. ಎಂತಹ ದೊಡ್ಡ ಮರವಾಗಿದ್ದರು ಸಂಜೆಯೊಳಗೆ ಧರೆಗುಳಿಸಿ ಬಿಡುತ್ತಿದ್ದ. ಅವನ ಚಾಪು ಕೊಡಲಿಗೆ ಮರಗಳು ಎರಡು ತುಂಡಾಗುತ್ತಿದ್ದವು. ಜಾಲಿಮರವೇ ಇರಲಿ ಮತ್ತಿಮರವೇ ಇರಲಿ ಅವನ ಕೊಡಲಿ ಏಟಿಗೆ ತಲೆಬಾಗಲೇಬೇಕಿತ್ತು. ಧಣಿವರಿಯದೆ ನೀಲಣ್ಣನಂತೆ ಮರ ಕಡಿಯುವವರು ನಮ್ಮೂರಿನಲ್ಲಿ ಬಿಟ್ಟರೆ ಸುತ್ತಮುತ್ತಲೂ ಹತ್ತು ಊರುಗಳಲ್ಲಿ ಯಾರು ಇರಲಿಕ್ಕಿಲ್ಲ!
ದೊಡ್ಡ ಬಾಚಿಯ ಸಹಾಯದಿಂದ ಮರವನ್ನು ಕೆತ್ತಿ ರಂಟೆ-ಕುಂಟೆಗಳನ್ನು ಮಾಡುತ್ತಿದ್ದ. ಅವನ ಕೈಯಲ್ಲಿ ಮಾಡಿದ ರಂಟೆ-ಕುಂಟೆಗಳು ಉಳುಮೆಗೆ ತುಂಬಾ ಯೋಗ್ಯವಾಗಿರುತ್ತಿದ್ದವು. ಆದುದರಿಂದಲೇ ಎಲ್ಲರೂ ನೀಲಣ್ಣನ ಬಳಿ ಓಡಿ ಬರುತ್ತಿದ್ದರು. ಮಳೆಗಾಲ ಸುರುವಾದರೆ ಅವನಿಗೆ ಬೇಡಿಕೆ ಹೆಚ್ಚಾಗುತ್ತಿತ್ತು. ಬಿತ್ತನೆ ಸಮಯದಲ್ಲಂತೂ ಕೂರಿಗೆ ತಾಳು ಮುರಿಯಿತು. . . . ರಂಟಿಯ ಮೇಳಿ ಕಿತ್ತಿತು. . . ಕೊರಡಿನ ಈಚು ಸಡಿಲವಾಯಿತು. . . ಬಂಡಿಯ ಮೂಕು ಹಾರಿತು. . . ಎಂದು ನೀಲಣ್ಣನ ಮನೆ ಮುಂದೆ ಜಮಾಯಿಸುತ್ತಿದ್ದರು. ಆಗೆಲ್ಲಾ ನೀಲಣ್ಣನೊಬ್ಬನೇ ಗತಿ.
ನೀಲಣ್ಣನಿಗೆ ಹೆಂಡಿರು ಮಕ್ಕಳಿಲ್ಲವೇ? ಎಂದು ಕೇಳಬೇಡಿ. ಅವನಿಗೂ ಸಂಸಾರವೆಂಬುದಿದೆ. ಒಂದು ಹೆಣ್ಣು ಒಂದು ಗಂಡು ಎರಡು ಮಕ್ಕಳು. ಅವನು ಹೆಂಡತಿ ಕೂಳು ಬೇಯಿಸಿ ಬೇಯಿಸಿ ಒಲೆಯ ಮುಂದೆ ಬೆಂದು ಹೋಗಿದ್ದಾಳೆ. “ಬಕಾಸುರನಿಗೆ ಹುಟ್ಟಿದ ಮಕ್ಕಳು ಬಕಾಸುರರೇ. . . ನವುಶೇಗಳಾಗುತ್ತವೆಯೇ? ಎಂದಾದರೂ ಕೂಳು ಕಂಡಿದ್ದವೋ ಇಲ್ಲವೋ. . . ” ಎಂದು ಆಗಾಗ ಗೊಣಗುತ್ತಿರುತ್ತಾಳೆ. ನೀಲಣ್ಣ ಮಕ್ಕಳೊಂದಿಗೆ ಊಟಕ್ಕೆ ಕುಳಿತರೆ ಮುಗೀತು. ಹೊತ್ತಿಗೆ ಎಂಟ್ಹತ್ತು ಮುದ್ದೆಯಾದರೂ ಬೇಕು. ಮಕ್ಕಳಿಗೆ ಎರಡೆರೆಡು, ತನಗೆ ಅರೇಳು. ನೀಲಣ್ಣ ಏನಾದರೂ ಹೋಟೆಲ್ಲು ಹೊಕ್ಕರೆ ಹೋಟೆಲ್ಲಿಗೆ ಹೋಟೆಲ್ಲೇ ಖಾಲಿ. ಒಮ್ಮೆಗೆ ನಾಲ್ಕೈದು ಸೇರು ವಗ್ಗಣಿಮಂಡಕ್ಕಿ ಮುಕ್ಕುತ್ತಿದ್ದ! ಅವನ ತೋಳಿನ ತಾಕತ್ತು ಹೊಟ್ಟೆಯಲ್ಲಿದೆ ಎಂಬುದು ನನ್ನ ನಂಬಿಕೆ.
ನೀಲಣ್ಣನಿಗೆ ಊರಲ್ಲಿ ಅಣ್ಣ ತಮ್ಮಂದಿರಲ್ಲ ಒಂಟಿಗ. ಯಾವಾಗಲಾದರೂ ಹೆಂಡತಿ ಕಡೆಯವರು ಬಂದರೆ ಹೆಚ್ಚು. ದೂರದ ಸಂಬಂಧಿಗಳೆಂದು ಹೇಳಿಕೊಂಡು ಬರುವ ಒಂದು ಕುಟುಂಬವಿದೆ. ಅವರು ಬಂದಾಗ ನೀಲಣ್ಣನ ಆದರಾಥಿತ್ಯ ಬಲು ಜೋರಾಗಿರುತ್ತದೆ. ಪಾಯಸ, ವಡೆ, ಸಂಡಿಗೆ, ಹಪ್ಪಳಗಳು ತಾಟಿಗೆ ಬಂದು ಕೂರುತ್ತವೆ. ನನ್ನನ್ನು ಒಮ್ಮೆ ಊಟಕ್ಕೆ ಕರೆದಿದ್ದ. ಹೊಟ್ಟೆ ಮಾತ್ರವಲ್ಲ ಮನಸ್ಸು ಕೂಡ ತುಂಬಿ ಬಂತು. ಸ್ನೇಹ ಪ್ರೀತಿಯನ್ನು ಹೊಟ್ಟೆ ಮೂಲಕ ಗೆಲ್ಲಬಹುದು ಎಂಬುದನ್ನ ನೀಲಣ್ಣ ತೋರಿಸಿಕೊಟ್ಟಿದ್ದ. “ಎಂತಹ ದುಡೂತಿ ದೇಹದಲ್ಲಿ ಹೂವಿನಂತ ಮನಸಿದೆ” ಅಂದುಕೊಂಡು ಪ್ರಸನ್ನನಾದೆ.
ನೀಲಣ್ಣನಿಗೆ ಒಂದು ಹುಚ್ಚು ಇತ್ತು. ಅದೇನೆಂದರೆ ಹಾರ್ಮೋನಿಯಂ ಬಾರಿಸುವುದು. ಹಾರ್ಮೋನಿಯಂ ಪೆಟ್ಟಿಗೆ ಮುಂದೆ ಕುಳಿತರೆ ಮುಗಿಯಿತು ಜಾನಪದ ಗೀತೆಗಳು, ತತ್ವಪದಗಳು ನುಗ್ಗಿ ಬರುತ್ತಿದ್ದವು. ನಾನು ಚಿಕ್ಕವನಿದ್ದಾಗ ಅವನ ಹಾಡು ಕೇಳಲು ಸಂಜೆ ಅವರ ಮನೆಯ ಕಟ್ಟೆಗೆ ಹೋಗುತ್ತಿದ್ದೆ. ಹಾರ್ಮೋನಿಯಂ ಬಾರಿಸುತ್ತಾ. . . ಹಾಡುತ್ತಾ. . . ಕುಳಿತ ಅಂದರೆ ತನ್ನನ್ನೇ ತಾನು ಮರೆತುಬಿಡುತ್ತಿದ್ದ. ಅವನ ಹೆಂಡತಿ ಮುದ್ದೆ ತಟ್ಟಿ ಊಟಕ್ಕೆ ಕರೆದರೂ ಮೇಲೆಳುತ್ತಿರಲಿಲ್ಲ. ಮುದ್ದೆ ಹಾರಿ ಆಣಿಕಲ್ಲಾಗುತ್ತಿದ್ದವು. ಅವಳು ಮಕ್ಕಳಿಗೆ ಉಣಿಸಿ ತಾನುಂಡು ಮಲಗುತ್ತಿದ್ದಳು. ನೀಲಣ್ಣ ಹಾರ್ಮೋನಿಯಂ ಪೆಟ್ಟಿಗೆ ಮೇಲೆ ಲೀಲಾಜಾಲವಾಗಿ ಬೆರಳುಗಳನ್ನಾಡಿಸುವುದನ್ನು ನೋಡುವುದೇ ಒಂದು ಸೊಗಸು. ಕೊಡಲಿ, ಹುಳಿ, ಬಾಚಿ, ಹಿಡಿದ ಕೋಮಟಿಯ ಕೈಗಳಿಂದ ಸಪ್ತ ಸ್ವರಗಳು ಹೊಮ್ಮತಿದ್ದವು ಎಂದರೆ ನೀವು ನಂಬಲೇಬೇಕು. ಶಿವರಾತ್ರಿಗೆ ನಾಟಕ ಕಲಿಸಿದ್ದು ನನಗೆ ನೆನಪಿದೆ.
ಪೆಟ್ಟಿಗೆಯ ಮುಂದೆ ಕುಳಿತು ಕಾಲವ್ಯರ್ಥ ಮಾಡುವುದನ್ನು ಕಂಡ ರಾಮಣ್ಣಯ್ಯನಂತೂ “ನೀಲಣ್ಣ ನಿನ್ನಿಂದ ನಮ್ಮ ಗಳೇಸಾಮಾನು ಆಗಲಿಲ್ಲ. ಕೊಟ್ಟ ತುಂಡುಗಳನ್ನು ಎಲ್ಲಿ ಗೆದ್ದಲು ತಿನ್ನಿಸುತ್ತಿಯೋ ಏನೋ. . . ಸಂಜೆ, ಬೆಳಗಾದರೆ ಪೆಟ್ಟಿಗೆ ಹಿಡಿದು ಕುಳಿತು ಬಿಡುತ್ತೀಯಾ. . . ಸುಖವಿಲ್ಲ. ನಿನ್ನಿಂದ ಬಿತ್ತನೆ ಹರಕತ್ತಾಗಿದೆ” ಎಂದು ಬೇಸರ ವ್ಯಕ್ತಪಡಿಸುತ್ತಿದ್ದರು.
ನೀಲಣ್ಣ ಇತ್ತೀಚಿಗೆ ದೇವರ ತೇರುಗಡ್ಡೆ ಕೆಲಸವನ್ನು ಹಿಡಿದುಕೊಂಡಿದ್ದ. ಗುಂಬದ ಗಾಲಿ, ತೇರುಗಡ್ಡೆಯ ನಾಜೂಕು ಕೆತ್ತನೆ ತುಂಬಾ ಕೈ ಹಿಡಿಯುತ್ತಿತ್ತು. ಇದರಿಂದ ಬೇರೆ ಕೆಲಸಗಳಾಗದೆ ರೈತರು ಅಸಮಾಧಾನಗೊಳ್ಳುತ್ತಿದ್ದರು. ಇನ್ನು ಬಿತ್ತನೆ ಸುರುವಾದರಂತೂ ಕೂರಿಗೆ ಹಾಯಿಸಲು ಕೊಟ್ಟ ರೈತರನ್ನು ಕೇಳುತ್ತೀರಾ? ಬಿತ್ತಲು ಕೂರಿಗೆ, ಸಾಲು ಮುಚ್ಚಲು ಕುಂಟೆ ಸಿದ್ಧವಾಗಿಲ್ಲ. ಮಿತಿ ತಪ್ಪುತ್ತದೆ ಹದ ಮೀರಿದ ಮೇಲೆ ಬಿತ್ತಲು ಬರುತ್ತದೆಯೇ? ಎಂದು ಚಟಪಡಿಸುವರು. “ಹೇ ನೀಲಣ್ಣ ಬಿತ್ತಲು ಹರಕತ್ತು ಮಾಡಿದ್ರೆ ಹೆಂಗೆ? ನಿನ್ನ ದೆಸೆಯಿಂದ ಹೊಲ ಬೀಳು ಬೀಳುತಾವೇ” ಎಂದು ನೀಲಣ್ಣನಿಗೆ ಮಂಗಳಾರತಿ ಮಾಡುತ್ತಿದ್ದರು. ಕುತ್ತಿಗೆ ಮೇಲೆ ಕುಳಿತವರ ಕುಂಟೆ ಹಾಯಿಸೋ ಹೊತ್ತಿಗೆ ಮಧ್ಯಾಹ್ನ ತಿರುಗುತ್ತಿತ್ತು. ಮನೆಯ ಮುಂದಿನ ಹುಣಸೆ ಮರ ಸಾಕ್ಷಿಯಾಗಿತ್ತು. ನೀಲಣ್ಣ ಉಳಿ ಬಾಚಿ ತೆಗೆದು ಪಕ್ಕಕ್ಕೆ ಇರಿಸಿ ಜಗದಣ್ಣನ ಅಂಗಡಿಗೆ ಎಲೆ ಅಡಿಕೆ ನುರಿಸಲು ಹೋದರೆ ಬರೋಬ್ಬರಿ ಒಂದು ಗಂಟೆಯ ನಂತರವೇ ಮರಳುತಿದ್ದ. ತಾಂಬೂಲ ಸೇವೆಯ ಮೋಜಿನಲ್ಲಿ ಕೆಲಸಕ್ಕೆ ಕೈ ಹಚ್ಚುತ್ತಿದ್ದ. ಅವಸರ ಮಾಡಿದವರಿಗೆ “ತೇರುಗಡ್ಡಿ ಕೆಲಸ ಒಂದು ಬಾಕಿಯಿದೆ ಅದನ್ನು ಬಿಟ್ಟು ನಿಮ್ಮ ಕೆಲಸ ಮಾಡುತ್ತಿದ್ದೇನೆ ತಿಳಿದುಕೊಳ್ಳಿ” ಎಂದು ಬಾಯೊಳಗಿನ ತಾಂಬೂಲವನ್ನು ಉಗಿಯಲು ಮೇಲೇಳುತ್ತಿದ್ದ. ಅವನ ಕೈ ಉಳಿ ಬಾಚಿ ಹಿಡಿದರೆ ಮುಗಿಯಿತು. ಕಚಕಚನೆ ಕೆತ್ತಿ, ಉದ್ದುಗೋಲ್ಡಿನಿಂದ ಉಜ್ಜಿ, ಕೀಲು ತೋಡಿ, ಸುತ್ತಿಗೆಯಿಂದ ಟಾಪ್ ಟಾಪ್ ಈಚು ಬಡಿದರೇ. . . ಮರ ಕೊರಡಾಗಿ. . . ಕುಂಟೆಯಾಗಿ. . . ರಂಟೆಯಾಗಿ. . . ಸಿದ್ದವಾಗುತ್ತಿದ್ದವು. (ಮರ ಎಂದರೆ ಮರದ ದಿಮ್ಮಿ ಅಥವಾ ಕೊರಡು ಎಂದರ್ಥ. ) ಮಕ್ಕಳಿಗೆ ಕೀಲು ಕುದುರೆ, ಬುಗುರಿ, ಚಿನ್ನಿ ದಾಂಡು, ತೂಗು ತೊಟ್ಟಿಲು ಮಾಡಿಕೊಡುತ್ತಿದ್ದ. ಮಕ್ಕಳು ಅವನ ಸುತ್ತ ಖುಷಿಯಿಂದ ಕೆಕೆಹಾಕಿ ಕುಣಿಯುತ್ತಿದ್ದವು. ಹೆಣ್ಣು ಮಕ್ಕಳಿಗೆ ಮುದ್ದಿ ತಟ್ಟಲು ಮರದ ಕೈಬಟ್ಟಲು. ರೊಟ್ಟಿ ಬಡಿಯಲು ಕೊಣಬಿ ಮಾಡಿಕೊಡುತ್ತಿದ್ದರಿಂದ ನೀಲಣ್ಣನಿಗೆ ಒಳ್ಳೆಯ ಊಟ ಸಿಗುತ್ತಿತ್ತು.
ನೀಲಣ್ಣ ಈಗ ತುಂಬಾ ಸೊರಗಿದ್ದಾನೆ. ಅವನ ಕೈಗಳು ಸೋತುವೆ. ಅವನು ಬಳಸುತ್ತಿದ್ದ ಉಳಿ ಬಾಚಿ ಕೊಡಲಿಗಳು ಗೆದ್ದಲು ಹತ್ತಿವೆ. ನಮ್ಮೂರಿನ ಎಲ್ಲರೂ ಎತ್ತುಗಳನ್ನು ತೆಗೆದು ಬಾಡಿಗೆ ವ್ಯವಸಾಯಕ್ಕೆ ನಿಂತಿದ್ದಾರೆ. ಗಳೇ ಸಾಮಾನುಗಳ ಜಾಗದಲ್ಲಿ ಟ್ರ್ಯಾಕ್ಟರ್ ಬಂದು ನಿಂತಿದೆ. ಆಗೊಮ್ಮೆ ಈಗೊಮ್ಮೆ ತೇರುಗಡ್ಡೆ ಕಟ್ಟಲು ಭಕ್ತರು ಕೇಳಿಕೊಂಡು ಬರುತ್ತಾರೆ. ನೀಲಣ್ಣ ಕೈ ಚೆಲ್ಲುತ್ತಾನೆ. ಹಾರ್ಮೋನಿಯಂ ಪೆಟ್ಟಿಗೆ ಮಾತ್ರ ಅವನ ಜೊತೆಗೆ ಇದೆ. ನಾಟಕ ಕಲಿಯಲು ಯುವಕರು ಸಿದ್ಧವಿಲ್ಲ. ತಾನೊಬ್ಬನೇ ಸೂರುಗಳಲ್ಲಿ ಸದಾ ಮುಳುಗಿರುತ್ತಾನೆ.
-ಮಂಜಯ್ಯ ದೇವರಮನಿ, ಸಂಗಾಪುರ