ಅಂಚಿನ ಮನೀ ಚಂದ್ರಣ್ಣ ಬಿಸಿಲು ನಾಡಿನ ಕೊನೆಯಂಚಿನ ಹಳ್ಳಿಯವನು. ತಮ್ಮೂರ ಯಾವಾಗ ದೊಡ್ಡದಾಗ್ತಾದೋ ಏನೋ ಅಂತ ಆಗಾಗ ಚಿಂತೆ ಮಾಡತಿದ್ದ ಊರ ಕುದ್ಯಾ ಮಾಡಿ ಮುಲ್ಲಾ ಬಡು ಆದಂಗಾಯಿತು ಅಂತ ಹೆಂಡತಿ ಶಾಂತಾ ಮುಗ್ಳನಕ್ಕಿದ್ದಳು. ಇವನ ಹಳ್ಳಿ ಬಹಳ ಅಂದ್ರ ಬಹಳ ಸಣ್ಣದು ಬೆರಳಿನಿಂದ ಎಷ್ಟು ಬಾರಿ ಎಣಿಸಿದರೂ ಲೆಕ್ಕ ತಪ್ಪುತಿರಲಿಲ್ಲ ಹಳ್ಳಿಯಲ್ಲಿ ಹೆಚ್ಚಿಗೆ ಓದಿವರೂ ಇರಲಿಲ್ಲ ಕೆಲವರು ಹತ್ತನೇ ಒಳಗೇ ಓದು ಮುಗಿಸಿದರೆ ಇನ್ನೂ ಕೆಲವರು ಹೆಬ್ಬೆಟ್ಟೊತ್ತುವವರಾಗಿದ್ದರು. ಚಂದ್ರಣ್ಣ ಅತ್ತ ಅಕ್ಛರಸ್ತನೂ ಅಲ್ಲದೆ ಅನಕ್ಛರಸ್ತನೂ ಅಲ್ಲದೆ ಹೆಬ್ಬೆಟ್ಟೊತ್ತುವ ಬದಲಿಗೆ ಕಚಿಬಿಚಿಯಾಗಿ ಮೂರಕ್ಛರದ ಸಹಿ ಮಾಡುತಿದ್ದ ನೀನೇ ಛೊಲೋ ಸಹಿಯಾದರು ಮಾಡ್ತಿ ಅಂತ ಹೇಳಿದಾಗ ಖುಷಿಯಾಗುತಿತ್ತು ಇವನು ನಿತ್ಯ ಹೊಲಕ ಹೋಗಿ ನೇಗಿಲು ಕುಂಟೀ ಹೊಡೆಯೋದು ಕಳೆ ತೆಗೇಯೋದು ಬೆಳೆಗೆ ಔಷಧಿ ಹೊಡೇಯೋದು ಇತರೆ ಕೆಲಸಾ ಮಾಡುತಿದ್ದ. ಊರು ಸೀಳಿಕೊಂಡು ಹೋಗುವ ಕಚ್ಚಾ ರಸ್ತೆ ಹಾವಿನಂತೆ ಅಂಕುಡೊಂಕಾಗಿ ಹರಡಿ ಅದರ ಪಕ್ಕ ನಿಜಾಮನ ಕಾಲದ ದೊಡ್ಡ ಸೇದು ಬಾವಿಯೂ ಇತ್ತು ಅಲ್ಲಿಂದಲೇ ಎಲ್ಲರೂ ನೀರು ಸೇದಿ, ಕುಡಿಯಲು, ಬಳಸಲು ಉಪಯೋಗಿಸುತಿದ್ದರು.
ಎತ್ತು, ಎಮ್ಮೆ, ದನಕರುಗಳಿಗೆ ನೀರು ಕುಡಿಸುವದು ಮಹಿಳೆಯರು ಬಟ್ಟೆಬರೆ ತೊಳೆಯುವದು ಮಾಡುವದರಿಂದ ಬಾವಿ ಸುತ್ತಲೂ ಮುಂಜಾನೆ ಸಾಯಂಕಾಲ ಬಹಳ ಜನ ಸುತ್ತುವರೀತಿದ್ರು. ಚಂದ್ರಣ್ಣನಿಗೆ ಎಂಟೆಕರೆ ಹೊಲವಿತ್ತು ಇವನಂತೆ ಎಲ್ಲರಿಗೂ ಎರಡೆರೆ, ನಾಲ್ಕೆಕರೆ, ಐದೆಕರೆ, ಹೀಗೆ ಹೆಚ್ಚೂ ಕಡಿಮೆ ಹೊಲಾ ಇದ್ದು ಭೂಮಿ ತಾಯಿ ನಂಬಿಯೇ ಬದುಕುತಿದ್ದರು ಅವರು ಮುಂಜಾನೆ ಹೊಲದ ಕಡೆ ಹೋದರೆ ಸಾಯಂಕಾಲವೇ ಮನೆಗೆ ವಾಪಸ್ಸಾಗುತಿದ್ದರು. ಮನೆಯಲ್ಲಿ ಮುದಕರು ತದುಕರು ಕೈಲಾಗದವರು ಸಣ್ಣ ಮಕ್ಕಳು ಹೊರತು ಪಡಿಸಿ ಯಾರೂ ಇರುತಿರಲಿಲ್ಲ ಕೆಲವರ ಮನೆಗಳಂತೂ ಹೊರಗೀಲಿಯೇ ಬಿದ್ದಿರುತಿದ್ದವು ಮಧ್ಯಾಹ್ನ ಹೊತ್ತು ಜನರಿಲ್ಲದೆ ಊರು ಭಣಗೊಡುತಿತ್ತು. ಚಂದ್ರಣ್ಣ ಹೊಲದ ಕಡೆ ಹೋದಾಗ ಶಾಂತಾ ಮನೆಗೆಲಸಾ ಮುಗಿಸಿ ಗಂಡನಿಗೆ ಸಹಾಯ ಮಾಡಲು ಇವಳೂ ಹೋಗುತಿದ್ದಳು ಬಸವೇಶ ಕಾಲೇಜಿಗೆ ಹೋಗುತಿದ್ದ. ಚಂದ್ರಣ್ಣನ ಕುಟುಂಬ ಮೊದಲೇ ಸಣ್ಣದು ಹೆಚ್ಚಿನ ಯಾವ ಖರ್ಚು ವೆಚ್ಚವೂ ಇರಲಿಲ್ಲ ನಮಗೆ ಇನ್ನೂ ಒಬ್ಬಿಬ್ಬರು ಮಕ್ಕಳಿದ್ದರೆ ಛೊಲೊ ಆಗ್ತಿತ್ತು ಮಕ್ಕಳ ಸಂಪತ್ತೇ ಹೆಚ್ಚಿನ ಸಂಪತ್ತು ಅಂತ ಶಾಂತಾ ಒಮ್ಮೆ ಇವನ ಮುಂದೆ ಮುಖ ಸಪ್ಪಗೆ ಮಾಡಿದಾಗ ಹೆಚ್ಚಿನ ಮಕ್ಕಳು ಯಾಕೆ? ಬಸವೇಶ ಇದ್ದಾನಲ್ಲ ಸಾಕು ಹತ್ತು ಮಕ್ಕಳಿರುವದಕ್ಕಿಂತ ಮುತ್ತಿನಂತ ಮಗನಿಂದಲೇ ಎಲ್ಲ ಸಂಭ್ರಮ ಸಿಗ್ತಾದೆ ಅವನಿಗೇ ಸರಿಯಾಗಿ ಓದಿಸಿದರಾಯಿತು ಅಂತ ಸಮಜಾಯಿಸಿ ನೀಡಿದ್ದ ಗಂಡನ ಮಾತಿನಿಂದ ಅವಳಿಗೆ ಒಂದಿಷ್ಟು ಸಮಾಧಾನ ಸಿಕ್ಕಿತ್ತು. ವಯಸ್ಸಾದರೂ ಚಂದ್ರಣ್ಣನ
ಚೈತನ್ಯ ಬತ್ತಿರಲಿಲ್ಲ ದಿನವಿಡಿ ದಣಿವಿಲ್ಲದೆ ಕೆಲಸಾ ಮಾಡುತಿದ್ದ ಮುಂಜಾನೆ ಎಲ್ಲರಿಗಿಂತ ಬೇಗ ಎದ್ದು ತನ್ನ ದಿನಚರಿ ಆರಂಭಿಸುತಿದ್ದ ಕಸಕಡ್ಡಿ ಗೂಡಿಸಿ ಕೊಟ್ಟಿಗೆ ಸ್ವಚ್ಛಗೊಳಿಸಿ ಎತ್ತುಗಳಿಗೆ ಮೇವು ನೀರು ಮಾಡಿ ತಾನೂ ಜಳಕಾ ಮುಗಿಸಿ ಒಂದು ಕಪ್ಪು ಹಾಲೋ ಚಹಾನೋ ಕುಡಿದು ಗೂಟಕ್ಕೆ ತೂಗುಹಾಕಿದ ಬಾರಕೋಲು ಹೆಗಲಿಗೇರಿಸಿ ಕೊಟ್ಟಿಗೆಯಿಂದ ಎತ್ತು ಬಿಟ್ಟುಕೊಂಡು ಅವುಗಳ ಕೊರಳಗೆಜ್ಜೆ ನಾದಕ್ಕೆ ಹೆಜ್ಜೆಹಾಕುತ್ತ ಹೊಲದ ಕಡೆ ಸಾಗುತಿದ್ದ ಹೋಗುವ ಮೊದಲೇ ಶಾಂತಾ ಒಲೆಮೇಲೆ ಹಂಚಿಟ್ಟು ಟಪಟಪ ರೊಟ್ಟಿ ಬಡೆದು ಪಲ್ಯ ಹಿಂಡಿ ಮೊಸರು ಇವನಿಗೆ ಏನು ಇಷ್ಟವೊ ಆ ರೀತಿಯ ಅಡುಗೆ ಮಾಡಿ ಬುತ್ತಿ ಕಟ್ಟುತಿದ್ದಳು ಇವನು ಬುತ್ತಿಗಂಟು ಬಗಲಲ್ಲಿ ಹಿಡಿದು ಹೊರಟಾಗ ನಿದ್ದೆಯಾದರು ಮಾಡೀದೋ ಇಲ್ಲವೋ? ಜಲ್ದೀ ಹೊಲದ ಕಡೆ ನಡದಿಯಲ್ಲ ಅಂತ ಕೆಲವರು ಪ್ರಶ್ನಿಸಿದ್ದರು. ಜಗತ್ತು ಬೆಳಗುವ ಆ ಸೂರ್ಯನೇ ಎದ್ದಿಲ್ಲ ಈ ಚಂದ್ರ ಎದ್ದು ಹೊಂಟಿದ್ದಾನೆ ಅಂತ ತಮ್ಮ ತಮ್ಮಲ್ಲೇ ಮಾತಾಡಿ ನಕರಾ ಮಾಡಿದ್ದರು ಅವರ ಮಾತಿಗೆ ಚಂದ್ರಣ್ಣ ಮುಗ್ಳನಗೆ ಬೀರಿ ಈ ಜೀವಾ ಭೂಮಿಗಿ ಬಂದದ್ದು ದುಡಿಯುವದಕ್ಕಾಗಿ ಹೊರತು ಕುಂತು ಉಣ್ಣುವದಕ್ಕಾಗಿ ಅಲ್ಲ ಕುಂತು ಉಂಡರೆ ಕುಡಿಕೆ ಹೊನ್ನು ಸಾಲೋದಿಲ್ಲ ಕೈಕಾಲಲ್ಲಿ ಶಕ್ತಿ ಇರೋತನಕ ಹಂಗೇ ದುಡೀತಾನೇ ಇರಬೇಕು ದುಡಿಮೆಯಿಂದ ವ್ಯಾಯಾಮ ಸಿಗುತ್ತದೆ ಯಾವ ರೋಗ ರುಜಿನ ಹತ್ತಿರ ಬರೋದಿಲ್ಲ ಅಂತ ವೇದಾಂತಿಯಂತೆ ಮಾತಾಡಿ ಬೆರಗುಗೊಳಿಸಿದ್ದ ಇವನು ಕಾಯಕವೇ ಕೈಲಾಸ ಅಂತ ಬದುಕು ನಡೆಸುವವನು. ಇವನ
ಸಮವಯಸ್ಕರು ಆಗಲೇ ಹೊಲದ ಕೆಲಸದಿಂದ ನಿವೃತ್ತಿ ಪಡೆದದ್ದಾಗಿತ್ತು ಅವರೆಲ್ಲ ಸಧ್ಯ ಹೆಗಲು ತೊಳೆದ ಎತ್ತಿನಂತೆ ಸ್ವತಂತ್ರರಾಗಿದ್ದರು. ಕೆಲಸವಿಲ್ಲದ ಕಾರಣ ಅವರಿಗೆ ಹೊತ್ತು ಹೋಗುತಿರಲಿಲ್ಲ ಅವರೆಲ್ಲ ಊರಿನ ಹೋಟಲು ಕಿರಾಣಿ ಅಂಗಡಿ ಗುಡಿಗುಂಡಾರದ ಮುಂದೆ ಜಮಾ ಆಗಿ ಮಳೆಬೆಳೆ ದೇಶಾವರಿ ಚರ್ಚೆ ಮಾಡುತ್ತಾ ಹೋಟಲಿನಿಂದ ಚಹಾ ತರಿಸಿ ಕುಡಿಯುತ್ತಾ ಇತರರಿಗೆ ಕುಡಿಸುತ್ತಾ ಕಾಲ ಕಳೆಯುತಿದ್ದರು. ನಾವು ಕೆಲಸವಿಲ್ಲದವರು ಉಂಡು ಉದ್ರಿ ಮಾತಾಡೋದೇ ನಮ್ಮ ಕೆಲಸ ಅಂತ ತಮ್ಮ ತಾವೇ ಹೇಳಿಕೊಳ್ಳುತಿದ್ದರು ಸಂಜೆಯಾಗುತಿದ್ದಂತೆ ಅವರೆಲ್ಲ ತಮ್ಮ ತಮ್ಮ ಮನೆ ಸೇರುತಿದ್ದರು. ಚಂದ್ರಣ್ಣಗೆ ಬಿಡುವು ಸಿಕ್ಕಾಗ ಇವರ ಬಳಿ ಬಂದು ಸ್ವಲ್ಪ ಹೊತ್ತು ಕುಂತು ನಿಂತು ಅವರ ಜೊತೆ ಸಂಸಾರ ಮಳೆ ಬೆಳೆ ಮತ್ತಿತರ ದೇಶಾವರಿ ಮಾತುಕತೆಯಲ್ಲಿ ತೊಡಗುತಿದ್ದ ಅವರಿಗೆಲ್ಲ ಚಹಾನೂ ಕುಡಿಸುತಿದ್ದ . ಅವತ್ತು ದೊಡ್ಡ ಹಬ್ಬ ಇರೋದ್ರಿಂದ ಹೊಲದ ಕೆಲಸಕ್ಕೆ ಹೋಗೋದು ಬೇಡ ನಾಳೆ ಹೋಗಿ ಇವತ್ತಿಂದು ನಾಳೇದು ಎರಡೂ ಸೇರಿ ಮಾಡಿ ಮುಗಿಸೋಣ ಅಂತ ಶಾಂತಾ ಸಲಹೆ ನೀಡಿದಾಗ ಅವಳ ಮಾತಿಗೆ ಧೂಸರಾ ಮಾತಾಡದೆ ತಲೆಯಾಡಿಸಿದ. ಶಾಂತಾ ಬಿಸಿ ಬಿಸಿ ಹೋಳಿಗೆ ಕುರಡಿಗೆ ಹಪ್ಪಳ ಸೆಂಡಿಗೆ ಅನ್ನಾಸಾರು ಮಾಡಿದಳು ಇವನು ಹೊಟ್ಟೆ ತುಂಬ ಉಂಡು ಡೇಕರಕಿ ಬಿಟ್ಟು ಊಟ ಜಾಸ್ತಿ ಆಯಿತು ಹೊಟ್ಯೆ ಭಾರ ಅನಿಸ್ತಿದೆ ಸ್ವಲ್ಪ ಹೊರಗ ಹೋಗಿ ತಿರುಗಾಡಿ ಬಂದರೆ ಆಯಾಸ ಕಡಿಮೆ ಆಗ್ತಾದೆ, ಕೆಲಸಾ ಇರದಿದ್ದರೆ ಹೀಗೇ ಆಗೋದು ದೇಹನೂ ಭಾರ ಹೊಟ್ಟೆನೂ ಭಾರ ಅಂತ ಬೇವಿನ ಕಟ್ಟೆ ಕಡೆ
ಹೆಜ್ಜೆಹಾಕಿದ ಅದೇ ಸಮಯ ಜೀಪೊಂದು ಅಂಕುಡೊಂಕಾದ ರಸ್ತೆಯಿಂದ ಧೂಳೆಬ್ಬಿಸುತ್ತಾ ಬರ್ರನೆ ಬಂದು ತನ್ನ ಮುಂದಿನಿಂದ ಹಾದು ಹೋಯಿತು ಗಾಬರಿಯಿಂದ ಅದರ ಕಡೆ ಕಣ್ಣು ಕಿವಿ ಅಗಲಿಸಿದ ಅದು ಸ್ವಲ್ಪ ದೂರ ಹೋಗಿ ನಿಂತಾಗ ಅದರಿಂದ ಒಬ್ಬ ವ್ಯಕ್ತಿ ಇಳಿದು ನಿಂತುಕೊಂಡ ಆತನ ಸುತ್ತಲೂ ಅನೇಕರು ಸುತ್ತುವರೆದು ಸಾಹೇಬರು ಬಂದ್ರು ಸಾಹೇಬರು ಬಂದ್ರು ನಮ್ಮ ಕುಂದು ಕೊರತೆ ನಿವಾರಿಸುತ್ತಾರೆ ಅಂತ ಕೈಕಟ್ಟಿದರು ಕೆಲವರು ಕೈ ಜೋಡಿಸಿ ನಿಂತರು. ಇವನಿಗೆ ಆಶ್ಚರ್ಯ ತರಿಸಿತು ಸಾಹೇಬ ಆದವರಿಗೆ ಎಂಥಾ ರಾಜಮರ್ಯಾದೆ ಸಿಗುತ್ತದೆ ನಮ್ಮ ಊರಲ್ಲಿ ಯಾರೊಬ್ಬರೂ ಸಾಹೇಬರಾಗಲಿಲ್ಲ ಎಲ್ಲರೂ ಸಾಹೇಬರೆದುರು ಕೈಕಟ್ಟಿ ನಿಲ್ಲುವವರೇ ಸರಿಯಾಗಿ ಓದಿದರೆ ಇಂದಿನ ಜಮಾನಾದಲ್ಲಿ ಯಾರು ಬೇಕಾದ್ರು ಸಾಹೇಬರಾಗಬಹುದು ಅಂತ ಯೋಚಿಸಿ ಕಟ್ಟೆ ಕಡೆ ಬಂದ ಇವನು ಕಟ್ಟೆ ಕಡೆ ಬರದೇ ಆಗಲೇ ಒಂದು ವಾರವಾಗಿತ್ತು ಎಡಬಿಡದೆ ಕೆಲಸದಿಂದ ಬರಲು ಪುರುಸೊತ್ತೇ ಸಿಕ್ಕಿರಲಿಲ್ಲ ಎಂದಿನಂತೆ ಧರೆಪ್ಪ ಗುಂಡಪ್ಪ, ಬಂಡೆಪ್ಪ ಘಾಳೆಪ್ಪ ಧೂಳಪ್ಪ ಮಾನಿಂಗಪ್ಪ ಮಾಸ್ತರರೆಲ್ಲ ಕೂತು ದೇಶಾವರಿ ಮಾತುಕತೆಯಲ್ಲಿ ತೊಡಗಿದ್ದರು. ಚಂದ್ರಣ್ಣಗ ನೋಡಿ ಇವತ್ತು ಬಂದ ನೋಡ್ರಿ ಚಂದ್ರಣ್ಣ ಹೋದ ವಾರದ ಹಿಂದೆ ಬಂದು ಎಲ್ಲರಿಗೂ ಚಹಾ ಕುಡಿಸಿ ಹೋದವನು ಅಂತ ನೆನಪಿಸಿದರು. ಯಾಕೋ ಸವಾರಿ ನಮ್ಮ ಕಡೆ ಹೊಂಟಿದೆಯಲ್ಲ ಕೆಲಸಾ ಏನೂ ಇದ್ದಂಗ ಕಾಣೋದಿಲ್ಲ ಅಂತ ಗುಂಡಪ್ಪ ಕುತೂಹಲದಿಂದ ಪ್ರಶ್ನಿಸಿದ ಇವತ್ತೇನು ಕೆಲಸಾ ಮಾಡ್ತಾನೆ ದೊಡ್ಡ ಹಬ್ಬ ಇದೆ ಎಲ್ಲರೂ ಹೋಳಿಗೆ ಉಂಡು
ಮನೆಯಲ್ಲಿರ್ತಾರೆ ಅಂತ ಮಾನಿಂಗಪ್ಪ ಮಾಸ್ತರ ವಾಸ್ತವ ಹೇಳಿದಾಗ ಇವನ ಮಾರೀ ಅಪರೂಪಾಗ್ಯಾದ ನಮ್ಮ ಪಾಲೀಗಿ ಇವನು ಬರಬರುತ್ತಾ ಅಮವಾಸೆ ಚಂದ್ರ ಆಗ್ತಿದ್ದಾನೆ ಹಿಂಗೇ ಆದರೆ ನಮಗೆಲ್ಲ ಮುಂದೊಂದಿನ ಪೂರ್ತಿ ಮರತೇ ಬಿಡ್ತಾನೆ ಅಂತ ಧರೆಪ್ಪ ಬೇಸರ ಹೊರ ಹಾಕಿ ಹೇಳಿದ ಇವನಿಗೆಲ್ಲಿ ಪುರುಸೊತ್ತು ಸಿಗ್ತಾದೆ ನಮ್ಮ ಕಡೆ ಬರಲು ಬರೀ ಕೆಲಸ ಕೆಲಸಾ ಅಂತ ಇಪ್ಪತ್ನಾಲ್ಕು ತಾಸು ಬಡಬಡಸ್ತಾ ಇರ್ತಾನೆ ಕೆಲಸ ಇಲ್ಲದಿದ್ದರೆ ಇವನಿಗೆ ಹುಚ್ಚು ಹಿಡೀತಾದೆ ಅಂತ ಗುಂಡಪ್ಪ ಮಾತಿನಲ್ಲೇ ತಿವಿದ. ಇನ್ನಾದರು ಕೆಲಸ ಅಂತ ಬಡಬಡಿಸೋದು ಬಿಟ್ಟು ಬಿಡು ಮಾರಾಯಾ ಹೆಂಗೂ ಮಗಾ ಹರೇದಾಂವ ಆಗ್ಯಾನ ಅವನ ಕೊರಳಿಗಿ ಎಲ್ಲಾ ಜವಾಬ್ದಾರಿ ಕಟ್ಟಿ ನಿಶ್ಚಿಂತನಾಗು ಯಾಕ ಸುಮ್ಮನೆ ಬಡತಾಡತಿ ಅಂತ ಬಂಡೆಪ್ಪ ಕೂಡ ಸಲಹೆ ನೀಡಲು ಮುಂದಾದ. ಇವನು ಈ ವಯಸ್ಸಿನ್ಯಾಗ ಕೆಲಸಾ ಮಾಡೋದು ಸರಿಯಲ್ಲ ನಾನು ನೋಡು ಹೊಲದ ಕೆಲಸಾ ಬಿಟ್ಟು ವರ್ಷವೇ ಆಗಿ ಹೋಗ್ಯಾದ ಹೊಲ ಮನೆ ಸಂಸಾರೆಲ್ಲ ದೊಡ್ಡ ಮಗನ ಕೊರಳಿಗಿ ಕಟ್ಟಿ ನಿಶ್ಚಿಂತನಾಗೀನಿ ಅಂತ ಧೂಳಪ್ಪ ತನ್ನ ಬಗ್ಗೆ ವಾಸ್ತವ ಹೇಳಿಕೊಂಡ. ಇವನಿಗೆ ಏಕಾಏಕಿ ಕೆಲಸಾ ಬಿಟ್ಟು ನಿಶ್ಚಿಂತನಾಗು ಅಂದ್ರೆ ಹ್ಯಾಂಗ ಇವನು ಎಲ್ಲರಂತಾ ಮನುಷ್ಯ ಅಲ್ಲ ಇವನದು ಮಾಡಿ ಮಟ್ಟಿದ ಜೀವಾ ಇವನು ಸುಮ್ಮನಿದ್ದರು ಜೀವಾ ಸುಮ್ಮನಿರಬೇಕಲ್ಲ ಹಂಗೇ ದುಡೀತಾನೇ ಇರ್ತಾನೆ ಅಂತ ಘಾಳೆಪ್ಪ ಓರೆನೋಟ ಬೀರಿ ವ್ಯಂಗ್ಯವಾಡಿದ. ವಯಸ್ಸಾಗಲಿ ಶಕ್ತಿಯಾಗಲಿ ಬಹಳ ದಿನ ಉಳಿಯಂಗಿಲ್ಲ ದಿನಕಳೆದಂಗ ಕಮ್ಮೀ ಆಗ್ತಾದೆ ಈಗ ಏನಿದ್ದರು
ಕುಂತು ಉಣ್ಣೋ ವಯಸ್ಸು ಹಚ್ಚಗಿದ್ದಲ್ಲಿ ತಿಂದು ಬೆಚ್ಚಗಿದ್ದಲ್ಲಿ ಮಲಗಿದರ ನಾಲ್ಕೊಪ್ಪತ್ತು ಬದುಕಬಹುದು ಇಲ್ಲ ಅಂದ್ರ ಜಲ್ದೀ ಶಿವನ ಪಾದ ಸೇರೋದು ಗ್ಯಾರಂಟಿ ಅಂತ ಬಂಡೆಪ್ಪ ಮಾತು ಮುಂದುವರೆಸಿ ಒಂದೆರಡು ಮಾತು ಜಾಸ್ತಿ ಖರ್ಚು ಮಾಡಿ ಎಚ್ಚರಿಸಿದ. ಎಲ್ಲವೂ ನಾವೇ ಮಾತಾಡ್ತಿದ್ದೀವಿ ಇವನ ಬಾಯಿಂದ ಒಂದೇ ಒಂದು ಶಬ್ದಾ ಬರ್ತಿಲ್ಲ ಈ ಚಂದ್ರ ಮೂಕನಾ? ಕಿವುಡನಾ? ಅಂತ ಧೂಳಪ್ಪ ಮಾತಿನಲ್ಲೇ ಪ್ರಶ್ನಿಸಿ ಕುಟುಕಿದಾಗ ಇವನು ಮೂಕನೂ ಅಲ್ಲ ಕಿವಡನೂ ಎಲ್ಲ ನಮ್ಮೆಲ್ಲರಿಂಗ ಶ್ಯಾಣ್ಯಾ ಅನ್ನೋದು ನಿಮಗ್ಯಾರಿಗೂ ಗೊತ್ತಿಲ್ಲ ನಮ್ಮ ಹಳ್ಳಿಯೊಳಗೇ ಇವನ ಮಗನಂಗ ಯಾರೂ ಶಿಕ್ಷಣ ಪಡೆದಿಲ್ಲ ಆತ ಓದಾನ್ಯಾಗ ಎಲ್ಲರಿಗಿಂತ ಮುಂದಿದ್ದಾನೆ ಅವನ ಓದು ನಿಲ್ಲಿಸಿ ಹೊಲದ ಕೆಲಸಕ್ಕೆ ಹಚ್ಚುವದರಲ್ಲಿ ಯಾವ ಪುರುಷಾರ್ಥ ಇದೆ ? ನಮ್ಮ ಮಕ್ಕಳು ಅರ್ಧ ಮರ್ಧ ಸಾಲೀ ಕಲಿತು ಹೊಲದ ಕೆಲಸಾ ಮಾಡತಿದ್ದಾರೆ ಕೆಲವರೂ ಕೆಲಸವೂ ಮಾಡದೇ ಉಂಡುಟ್ಟು ಸುಮ್ಮನೆ ತಿರುಗುತಿದ್ದಾರೆ ಧರೆಪ್ಪನ ಮಗ ಕಾಳೇಶನೇ ನೋಡ್ರಿ ಇವನ ಜೊತೆನೇ ಓದಿದವನು ಹತ್ತನೇ ಪರೀಕ್ಷಾದಾಗ ಡುಮಕೀ ಹೊಡದು ಅತ್ತ ಹೊಲದ ಕೆಲಸಾನೂ ಮಾಡದೇ ಇತ್ತ ಶಿಕ್ಷಣಾನೂ ಮುಂದುವರಿಸದೇ ನೂರಾರು ದುಷ್ಚಟ ಕಲಿತು ದಾರೀ ಬಿಟ್ಟಿದ್ದಾನೆ ಆದರೆ ಬಸವೇಶ ಹಾಗಲ್ಲ ಓದಿನ ದಾಹ ಅವನಿಗೆ ಇನ್ನೂ ತೀರಿಲ್ಲ ಅಂತಹ ಹುಡುಗನಿಗಿ ನೇಗಿಲು ಗಳ್ಯಾಕ ಹಚ್ಚೋದು ಎಷ್ಟು ಸರಿ? ಇಂದಿಲ್ಲ ನಾಳೆ ಅವನ ಓದಿಗೆ ತಕ್ಕ ಉದ್ಯೋಗ ಸಿಕ್ಕೇ ಸಿಗ್ತಾದೆ ಆಗ ನಾವೇ ಭೇಷ ಅಂತ ಬೆನ್ನು ಚಪ್ಪರಿಸಿ ಆಶ್ಚರ್ಯ ಹೊರಹಾಕ್ತೀರಿ ಅಂತ ಮಾನಿಂಗಪ್ಪ ಮಾಸ್ತರ ವಿವರಣೆ
ನೀಡಿದಾಗ ಮಾಸ್ತರ ಮಾತು ಕೆಲವರಿಗೆ ಅರ್ಥ ಆದರೆ ಇನ್ನೂ ಕೆಲವರಿಗೆ ಅರ್ಥವೇ ಆಗಲಿಲ್ಲ . ಅವರೆಲ್ಲ ಮಾಸ್ತರ ಮುಖವನ್ನೊಮ್ಮೆ ಚಂದ್ರಣ್ಣನ ಮುಖವನ್ನೊಮ್ಮೆ ಪ್ರಶ್ನಾರ್ಥಕವಾಗಿ ನೋಡತೊಡಗಿದರು. ಮಾಸ್ತರರೇ ನೀವೂ ಅವನ ಪರವಾಗೇ ಮಾತಾಡ್ತೀರಲ್ರಿ ಚಂದ್ರಣ್ಣನ ಮಗ ಶಿಕ್ಷಣ ಮುಗಿಸಿ ಉದ್ಯೋಗ ಪಡೆಯೋದು ಈಗಿನ ಕಾಲದಾಗ ಸುಲಭಲ್ಲ ಎಷ್ಟೋ ಜನ ಉದ್ಯೋಗ ಇಲ್ಲದೇ ಕುಳಿತಿದ್ದಾರೆ ಅವನಿಗೆ ಉದ್ಯೋಗ ಸಿಗೋದ್ರೊಳಗೆ ಅಪ್ಪ ಮಗನ ವಯಸ್ಸೇ ಮುಗಿದು ಹೋಗ್ತಾದೆ ಅಂತ ಧೂಳಪ್ಪ ಮಾರ್ಮಿಕವಾಗಿ ನುಡಿದ. ಆತ ಕಲಿತ ವಿದ್ಯೆಗೆ ಪ್ರತಿಫಲ ಸಿಗುವ ಕಾಲ ಬಹಳ ದೂರಿಲ್ಲ ಅವನಿಗೆ ನೌಕರಿ ಸಿಕ್ಕರೆ ನಮ್ಮೆಲ್ಲರಿಗಿಂತ ಚಂದ್ರಣ್ಣನೇ ಕೊನೆ ಕಾಲದಲ್ಲಿ ಹೆಚ್ಚಿನ ಸುಖಾ ಅನುಭವಿಸ್ತಾನೆ ಇಷ್ಟು ದಿನ ಹೈರಾಣಾಗಿ ದುಡಿದು ಮಗನಿಗೆ ಶಿಕ್ಷಣ ಕೊಡಿಸಿದ್ದಕ್ಕೂ ಸಾರ್ಥಕ ಆಗ್ತಾದೆ ಅಂತ ಭರವಸೆ ವ್ಯಕ್ತಪಡಿಸಿದ. ಅದೆಲ್ಲ ಕನಸಿನ ಮಾತು ಅದು ಸಿಕ್ಕಾಗಲೇ ಖರೇ ನಾವೂ ಇಲ್ಲೇ ಇರ್ತೀವಿ ಇವನ ಮಗ ಉದ್ದ ಸಾಲೀ ಕಲ್ತು ಏನಾಗ್ತಾನೆ ನೋಡೋಣ ಅಂತ ಸವಾಲು ಹಾಕಿದ. ಯಾರ ಹಣೆಬರಹದಾಗ ಏನಿದೆಯೊ ಯಾರಿಗೆ ಗೊತ್ತು ನನ್ನ ಮಗ ದಾರೀ ಬಿಟ್ಟು ಎಲ್ಲರ ಮುಂದೆ ತಲೆತಗ್ಗಿಸುವಂತಾಗಿದೆ ಅಂತ ಧರೆಪ್ಪ ಕಣ್ತುಂಬ ನೀರು ತಂದ. ಬರೀ ಹಣೆಬರಹ ಅಂತ ನಂಬಿ ಕುಂತರ ಯಾವದೂ ಆಗೋದಿಲ್ಲ ಪ್ರಯತ್ನಾನೂ ಬೇಕು, ಪ್ರಯತ್ನವೇ ದೇವರು ನಿನ್ನ ಮಗ ಪ್ರಯತ್ನ ಮಾಡಲಿಲ್ಲ ಆದರೆ ಬಸವೇಶ ಪ್ರಯತ್ನಶೀಲ ಆತನಲ್ಲಿ ಆತ್ಮವಿಶ್ವಾಸ ತುಂಬಿ ತುಳುಕುತ್ತಿದೆ ಅಂತ ಮಾಸ್ತರ ಸಮರ್ಥಿಸಿದಾಗ
ಚಂದ್ರಣ್ಣ ಮುಖ ಮೇಲೆತ್ತಿ ಈ ಮಾಸ್ತರ ಒಬ್ಬರಿಗಿ ಬಿಟ್ಟು ಉಳಿದ ಯಾರಿಗೂ ಶಿಕ್ಷಣದ ಮಹತ್ವಾನೇ ಗೊತ್ತಿಲ್ಲ ಗೊತ್ತಿದ್ದರ ಹಿಂಗೆಲ್ಲ ಮಾತಾಡತಿರಲಿಲ್ಲ ಇವರ ಮಾತು ಕೇಳಿದರೆ ನಗು ಬರ್ತಾದೆ ಮಗನಿಗೆ ಓದು ಬಿಡಿಸಿ ಕೆಲಸಕ್ಕೆ ಹಚ್ಚಬೇಕಾ? ಅದು ಅಸಾಧ್ಯದ ಮಾತು ನಮ್ಮ ಬಸವೇಶ ಸರಿಯಾಗಿ ಓದಿ ದೊಡ್ಡ ಸಾಹೇಬ ಆಗಬೇಕು ಅದೇ ನನ್ನ ಕನಸು ನನ್ನಂಗ ಬಿಸುಲು ಮಳೆ ಗಾಳ್ಯಾಗ ದುಡಿದು ಹೈರಾಣಾಗಬಾರದು ಸಾಹೇಬಾಗಿ ಊರಿಗಿ ಬಂದರ ಕಾರು ಜೀಪಿನ್ಯಾಗೇ ಬರಬೇಕು ಅವನಿಗೆ ನೋಡಿ ಎಲ್ಲರೂ ಬೆರಗಾಗಿ ಚಂದ್ರಣ್ಣನ ಮಗ ದೊಡ್ಡ ಸಾಹೇಬಾದ ಮಗನಿಗೆ ಕಷ್ಟ ಪಟ್ಟು ಸಾಲೀ ಕಲಿಸಿದ್ದಕ್ಕೂ ಸಾರ್ಥಕವಾಯಿತು ಅಂತ ಹೊಗಳಬೇಕು ಗುಡಿ ಗುಂಡಾರ ಅಂಗಡಿ ಹೋಟಲ ಮುಂದ ಕುಂತವರೆಲ್ಲ ಬಸವೇಶನ ಕಡೆ ಗಾಬರಿಯಿಂದ ನೋಡಿ ನೆದರ ಮಾಡಬೇಕು ಮಗನಿಗಿ ಎಲ್ಲರೂ ನೆದರ ಮಾಡ್ಯಾರ ಅಂತ ಶಾಂತಾ ಉಪ್ಪು ಒಣ ಮೆಣಸಿ ತುಂಬು, ಕ್ಯಾರಕಾಯಿ ಸುಟ್ಟು ನಾಯಿ ಕಣ್ಣು ನರೀಕಣ್ಣು ಮಂದೀಕಣ್ಣು ನನ್ನ ಮಗನ ಮ್ಯಾಲ ಬೀಳದಿರಲಿ ಅಂತ ನಿವಾಳಿ ಇಳಿಸಬೇಕು ಆಗಲೇ ನನಗ ಖುಷಿ, ನಾನಂತೂ ಒಂದಕ್ಛರ ಕಲೀಲಿಲ್ಲ ಅನ್ನುವ ಆ ಕೊರಗು ಕಾಡ್ತಾನೇ ಇದೆ ಆದರೆ ಏನು ಮಾಡೋದು ಅಂದಿನ ಪರಸ್ಥಿತಿನೇ ಹಾಗಿತ್ತು ಅದು ನನ್ನ ಒಬ್ಬನ ಪರಿಸ್ಥಿತಿ ಆಗಿರಲಿಲ್ಲ ಎಲ್ಲರ ಪರಿಸ್ಥಿತಿಯೂ ಅದೇ ಆಗಿತ್ತು ನಾವೆಲ್ಲ ಬಡತನ ಹಾಸಿ ಹೊದ್ದು ಜೀವನಾ ಸಾಗಿಸ್ತಿದ್ದೇವು ಅಕ್ಛರ ಕಲಿಯುವ ವ್ಯವಸ್ಥಾ ಅನುಕೂಲತೆ ಯಾವುದೂ ಇರಲಿಲ್ಲ. ಬ್ಯಾರೇ ಕಡೆ ಹೋಗಿ ಸಾಲೀ ಕಲೀಬೇಕಾದರ ಅದು ನಮ್ಮಿಂದ ಆಗ್ತಿರಲಿಲ್ಲ ರೊಕ್ಕದ
ತಾಕತ್ ಇದ್ದವರೇ ಊರಾಗ ಒಬ್ಬಿಬ್ಬರು ಬೇರೆ ಕಡೆ ಹೋಗಿ ಕಲೀತಿದ್ದರು ಯಾರೇನು ದೊಡ್ಡ ಸಾಧನಾ ಮಾಡಲಿಲ್ಲ ಆ ವಿಷಯ ಬೇರೆ, ನಮ್ಮಪ್ಪ ನನ್ನಂಗ ಹೊಲ ನೆಲ ಅಂತ ಜೀವನಾ ಸಾಗಿಸಿ ನಮಗೆಲ್ಲ ಹೈರಾಣಾಗಿ ಸಾಕಿ ಸಲುಹಿ ಹೊಟ್ಟೀಗಿ ಗಂಜೀ ಹಾಕತಿದ್ದ ಅವನ ಕೈಯಾಗ ಅಲ್ಪಸ್ವಲ್ಪ ಕೆಲಸಾ ಮಾಡಿ ಸಹಾಯ ಮಾಡಿ ಒಕ್ಕಲುತನ ರೂಢೀಯಾಯಿತು. ಎಷ್ಟು ದುಡಿದರು ರೊಕ್ಕ ಜಮಾ ಆಗ್ತಿರಲಿಲ್ಲ ಪೈಸೇ ಪೈಸೇಗೂ ಬರ ಇತ್ತು ಹೊಟ್ಟೆ ತುಂಬೋದು ಮೈಮುಚ್ಚೋದೇ ದೊಡ್ಡ ಸಮಸ್ಯೆಯಾಗಿತ್ತು ಉಡಬೇಕಂದ್ರ ಹೆಚ್ಚಿನ ಬಟ್ಟೇ ಬರೀನೂ ಇರುತಿರಲಿಲ್ಲ ಕಾಲಲ್ಲಿ ಚಪ್ಪಲಿಗೂ ಗತಿ ಇರಲಿಲ್ಲ ಮುಳ್ಳು ಕಲ್ಲು ಚುಚ್ಚಿಕೊಂಡೇ ಓಡಾಡತಿದ್ದೇವು ಕಾಲಿಗೆ ಗಾಯಾ ಆಗಿ ರಕ್ತ ಚಿಮ್ಮಿದಾಗ ನಮ್ಮವ್ವನ ಹೊಟ್ಯಾಗ ಸಂಕಟ ಆಗ್ತಿತ್ತು ಅವಳು ಕಾಲಿನ ಗಾಯಾ ನೋಡಿ ಕಣ್ತುಂಬ ನೀರು ತಂದು ಚಿಮಣಾ ಹುಡುಕಿ ಅದರಾಗಿನ ಗಾಸಲೇಟಿ ಎಣ್ಣಿ ಗಾಯದ ಮ್ಯಾಲ ಹಾಕಿ ಕೌದಿ ಹೊಲಿಯೋ ಅರವೀ ಗಂಟಿನ್ಯಾಗಿನ ಚಿಂದಿ ತೆಗೆದು ಬಿಗಿಯಾಗಿ ಕಾಲೀಗಿ ಕಟ್ಟತಿದ್ದಳು. ದವಾಖಾನೀಗಿ ತೋರಿಸಬೇಕಂದ್ರೂ ರೊಕ್ಕಾ ಇರುತಿರಲಿಲ್ಲ ಅಂತಹ ಸ್ಥಿತ್ಯಾಗ ಓದೋದೆಂದರೆ ಕನಸಿನ ಮಾತೇ ಆಗಿತ್ತು ಮಗನಿಗಿ ಸಾಲೀ ಕಲಿಸಬೇಕು ಅಂತ ಅವಳ ಮನಸ್ಸಿನ್ಯಾಗಿತ್ತು ಅಪ್ಪನಿಗಿ ಹೇಳೋ ಧೈರ್ಯ ಬರ್ತಿರಲಿಲ್ಲ ಯಾಕೆಂದ್ರ ಪರಿಸ್ಥಿತಿ ಕಣ್ಣಿಗಿ ಕಾಣಸ್ತಿತ್ತು . ಅಪ್ಪ ನನಗ ಸಾಲೀ ಕಲಿಸಿಲ್ಲ ಅಂತ ಅವನ ಮ್ಯಾಲ ತಪ್ಪು ಹೊರಿಸೋದಿಲ್ಲ ಹಾಗೇನಾದ್ರು ಹೊರಿಸಿದರ ಅದು ನನ್ನದೇ ತಪ್ಪಾಗ್ತದೆ ಅದಕ್ಕೆಲ್ಲ ಅಪ್ಪ ಕಾರಣನಲ್ಲ , ಪರಿಸ್ಥಿತಿಯೇ ಕಾರಣ ಆದರೀಗ
ಆ ದುರ್ಗತಿ ನನಗಿಲ್ಲ ಎಲ್ಲವೂ ಬದಲಾಗ್ಯಾದ ಹೊಟ್ಟಿ ಬಟ್ಟೀಗಿ ಯಾವುದೂ ಕೊರತೆ ಇಲ್ಲ ಇಂದಿನ ಕಾಲದಾಗ ವಿಧ್ಯಾ ಕಲಿಯೋರಿಗಿ ಸಾಕಷ್ಟು ಸೌಲತ್ತಿವೆ , ಕಲಿಯೋರು ಮನಸ್ಸು ಮಾಡಬೇಕು ಸಾಧಿಸಿ ತೋರಸ್ತೀನಿ ಅನ್ನೋ ಛಲಬೇಕು ಮನಸ್ಸಿಟ್ಟು ಕಲಿತ ವಿದ್ಯೆ ವ್ಯರ್ಥ ಆಗೋದಿಲ್ಲ ಅವನಿಗೆ ವಿದ್ಯಾ ಕೊಡಿಸುವಲ್ಲಿ ನಾನೇನು ಹಿಂದೇಟು ಹಾಕೋದಿಲ್ಲ ನಮ್ಮ ಬಸವೇಶ ಎಲ್ಲಿತನಕ ಓದತಾನೋ ಓದಲಿ ಅವನಿಗಿ ಯಾವ ಕೊರತೆ ಆಗದಂಗ ನೋಡ್ಕೋತೀನಿ ಅಂತ ಯೋಚನೆಯಲ್ಲಿ ಮುಳುಗಿದ. ಏನೋ ಯೋಚನೆ ಮಾಡ್ತಿಯಲ್ಲ ಅಂತ ಧೂಳಪ್ಪ ಇವನ ಭುಜ ಅಲುಗಾಡಿಸಿ ಪ್ರಶ್ನಿಸಿದಾಗ ಏನಿಲ್ಲ ಸಂಸಾರ ಅಂದ್ಮೇಲೆ ಏನಾದರು ಯೋಚನೆ ಇದ್ದೇ ಇರ್ತಾದೆ ಈ ಸಂಸಾರದ ಬಗ್ಗೆ ಎಷ್ಟು ಯೋಚನೆ ಮಾಡಿದರು ಕಡಿಮೆ ಇರೋ ತನಕ ಹಂಗೇ ಯೋಚನೆ ಮಾಡ್ತಾನೇ ಇರಬೇಕು ಸುಮ್ಮನೆ ಕುಂತರ ಯಾವದೂ ಆಗೋದಿಲ್ಲ ಎಂದಾಗ ಧೂಳಪ್ಪ ತಲೆಯಾಡಿಸಿದ. ” ಮಾಡಿ ಉಣ್ಣೋ ಬೇಕಾದಷ್ಟು ಬೇಡಿ ಉಣ್ಣೋ ನೀಡಿದಷ್ಟು ಮಾಡಿದವಗ ಮಡಿಗಡಬ ಮಾಡದವಗ ಬರೀ ಲಡಬ” ಅಂತ ಮಾನಿಂಗಪ್ಪ ಮಾಸ್ತರ ಕಡಕೋಳ ಮಡಿವಾಳಪ್ಪರ ತತ್ವ ಪದ ನೆನಪಿಸಿದ. ಹೌದು ಅವರು ಹೇಳಿದ್ದು ನಮಗೇ ಹೊರತು ಬೇರೆ ಯಾರಿಗೂ ಅಲ್ಲ ಕೆಲಸಾ ನನಗಾಗಿ ಕಾಯ್ತಿದೆ ಎತ್ತುಗಳಿಗೆ ನೀರು ಮೇವು ಮಾಡಬೇಕು ಮೂಕ ಜಾನುವಾರುಗಳು ಪಾಪ ಅವು ನಮಗಾಗಿ ದುಡೀತಾವೆ ಅಂತ ಹೊರಡಲು ತಯಾರಾದ ನಾವು ಇಷ್ಟೋತನಕ ಹೇಳಿದ್ದು ನಿನ್ನ ಮ್ಯಾಲ ಯಾವ ಪರಿಣಾಮನೂ ಬೀರಲಿಲ್ಲ ಅಂತ ಕಾಣಸ್ತಾದೆ ಮತ್ತದೇ
ಕೆಲಸದ ಬಗ್ಗೆ ಬಡತಾಡತಿಯಲ್ಲ ಎಂತಹ ಮನುಷ್ಯ ನೀನು ನಾವು ಹೇಳಿದ್ದೆಲ್ಲಾ ಹೊಳ್ಯಾಗ ಹುಣಚಿ ಹಣ್ಣು ತೊಳೆದಂಗಾಯಿತು ಅಂತ ಗುಂಡಪ್ಪ ಹೇಳಿದ . ಆಮ್ಯಾಲ ಬರ್ತೀನಿ ಅಂತ ಚಂದ್ರಣ್ಣ ಮನೆ ಕಡೆ ಹೆಜ್ಜೆಹಾಕಿದ.
ಬಸವೇಶ ಸಣ್ಣ ವಯಸ್ಸಿನಿಂದಲೇ ಚುರುಕು ಬುದ್ಧಿ ಹೊಂದಿದವನು ಹಳ್ಳಿಯ ಪರಿಸರದಲ್ಲಿ ಹುಟ್ಟಿ ಬೆಳೆದಿದ್ದರಿಂದ ಸಹಜವಾಗೇ ಇಲ್ಲಿನ ಪರಿಸರದ ಬಗ್ಗೆ ಅಭಿಮಾನ ಪ್ರೀತಿ ಬೆಳೆಸಿಕೊಂಡಿದ್ದ ತಮ್ಮೂರಿನ ಹಚ್ಚ ಹಸಿರಿನ ಹೊಲ ಗದ್ದೆ , ಸುತ್ತಲು ಹಬ್ಬಿದ ಬೆಟ್ಟ ಗುಡ್ಡ ಹೊಳೆ ಹಳ್ಳ ಗಿಡ ಮರ ನೋಡಿ ನಮ್ಮೂರೇ ನಮಗೇ ಮೇಲು ಅಂತ ಗೆಳಯರ ಮುಂದೆ ಹೆಮ್ಮೆಯಿಂದ ಹೇಳಿಕೊಳ್ಳುತಿದ್ದ. ಅಪ್ಪನ ದುಡಿಮೆಯ ಬಗ್ಗೆ ಯೋಚಿಸಿ ಅಪ್ಪ ಹೊಲದಲ್ಲಿ ಕಷ್ಟಪಟ್ಟು ದುಡೀತಾನೆ ಅವನು ನೇಗಿಲಯೋಗಿ ನಮ್ಮ ಮನೆಯ ಅನ್ನದಾತ ವಯಸ್ಸಾದರು ಕೆಲಸಾ ಮಾಡೋದು ಬಿಡೋದಿಲ್ಲ ಒಂದಿನಾನೂ ಬೇಸರಪಟ್ಟವನಲ್ಲ ಮೊದಲು ಹ್ಯಾಂಗ ಕೆಲಸಾ ಮಾಡತಿದ್ದನೊ ಈಗಲೂ ಹಂಗೇ ಮಾಡ್ತಾನೆ ದಿನಾ ನಸುಕಿನಲ್ಲೇ ಎದ್ದು ತನ್ನ ದಿನಚರಿ ಆರಂಭಿಸುತ್ತಾನೆ ಒಂದಿನಾನೂ ರಜಾ ಹಾಕಿ ಮನೆಯಲ್ಲಿ ಕುಳಿತವನಲ್ಲ ಆತನ ಬೆವರಿನ ಫಲದಿಂದಲೇ ನಾವಿವತ್ತು ಸಂತೋಷವಾಗಿದ್ದೇವೆ ಯಾವ ಕೊರತೆ ಇಲ್ಲದಂತೆ ಜೀವನಾ ನಡೆಸ್ತಿದ್ದೇವೆ ಅವ್ವನೂ ಅಪ್ಪನ ಸಮಜೋಡಿಯಾಗಿದ್ದಾಳೆ ಅವಳು ಯಾವುದರಲ್ಲೂ ಕಮ್ಮೀ ಇಲ್ಲ ಅಪ್ಪನಿಗೆ ಸದಾ ಬೆನ್ನಲುಬಾಗಿ ನಿಂತು ಹೆಗಲಿಗೆ ಹೆಗಲ ಕೊಟ್ಟು ದುಡೀತಾಳೆ ಹೊಲ ಮನೆ ಯಾವುದೇ ಕೆಲಸಾ ಇದ್ದರೂ ಒಂದಿನಾನೂ ಬೇಸರ ಪಟ್ಟವಳಲ್ಲ ಒಂದು ಕ್ಷಣ
ಕೂಡ ಇವಳಿಗೆ ಪುರುಸೊತ್ತಿರೋದಿಲ್ಲ ನಸುಕಿನಲ್ಲೇ ಏಳತಾಳೆ ಕಸಕಡ್ಡಿ ಗೂಡಿಸಿ ಒಲೀಮ್ಯಾಲ ಹೆಂಚಿಟ್ಟು ಟಪಟಪನೆ ರೊಟ್ಟಿ ಬಡಿದು ಬುತ್ತಿ ಕಟ್ಟತಾಳೆ, ಕಾಲೇಜಿಗೆ ಹೋಗುವ ನನಗೂ ಹಸಿವಿಲ್ಲಂದ್ರೂ ಒತ್ತಾಯ ಮಾಡಿ ಉಣಿಸ್ತಾಳೆ ಜೊತೆಗೆ ಬುತ್ತೀನೂ ಕಟ್ಟತಾಳೆ, ನಾನು ಹೆಚ್ಚಿಗೆ ಉಂಡಾಗಲೇ ಖುಷಿ ಇವಳಿಗೆ, ಹೊಲದ ಕಡೆ ಹೋದರೂ ಸುಮ್ಮನೆ ಕೂಡವಳಲ್ಲ ಅಪ್ಪನ ಜೊತೆ ಜೋಡೆತ್ತಿನಂಗ ಕೆಲಸಾ ಮಾಡತಾಳೆ, ಬಹುಶಃ ಇಂತಹ ಅಪ್ಪ ಅವ್ವ ಯಾರಿಗೂ ಸಿಕ್ಕಿರಲಿಕ್ಕಿಲ್ಲ. ಇವರು ಸಿಕ್ಕಿದ್ದು ನನ್ನ ಪುಣ್ಯ. ನನ್ನ ಮೇಲೆ ಇವರು ತುಂಬಾ ಭರವಸೆ ಇಟ್ಟಿದ್ದಾರೆ, ಇವರ ಭರವಸೆ ಹುಸಿಗೊಳಿಸಬಾರದು ಹಾಗೇನಾದರು ಮಾಡಿದರೆ ಇವರಿಗೆ ದ್ರೋಹ ಮಾಡಿದಂತೆ, ನನಗೆ ನೌಕರಿ ಸಿಕ್ಕ ಕೂಡಲೇ ಆದಷ್ಟು ಬೇಗ ಇವರಿಗೆ ಕೆಲಸ ಕಾರ್ಯದಿಂದ ಮುಕ್ತಿ ಕೊಡಿಸಬೇಕು, ಹೊಲ ಮನೆಯ ಕೆಲಸಕ್ಕೆ ಯಾರಿಗಾದ್ರು ನೌಕರಿಗಿಟ್ಟುಕೊಂಡು ಪರ್ಯಾಯ ವ್ಯವಸ್ಥೆ ಮಾಡಬೇಕು ಅಂತ ಬಸವೇಶ ಯೋಚಿಸಿದ, ಇವನ ಗುಣ ಸ್ವಭಾವ ಎಲ್ಲರೂ ಮೆಚ್ಚಿಕೊಳ್ಳುತಿದ್ದರು ಇಂಥಹ ಹುಡುಗ ನಮ್ಮ ಹಳ್ಳಿಯಲ್ಲೇ ಯಾರೂ ಇಲ್ಲ ಅಂತ ಊರು ಕೇರಿ ಜನ ತಾರೀಫ ಮಾಡುತಿದ್ದರು ಮಗನ ವರ್ಣನೆ ಕಿವಿಗೆ ಬಿದ್ದಾಗ ಚಂದ್ರಣ್ಣನಿಗೆ ಎಲ್ಲಿಲ್ಲದ ಖುಷಿಯಾಗುತಿತ್ತು ಬಸವೇಶ ಊರಿನಲ್ಲೇ ಪ್ರಾಥಮಿಕ ಹೈಸ್ಕೂಲು ಶಿಕ್ಷಣ ಮುಗಿಸಿದ್ದ ಹತ್ತನೇ ತರಗತಿ ಪ್ರಥಮ ದರ್ಜೆಯಲ್ಲಿ ಪಾಸಾಗಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದ, ಇವನ ಸಾಧನೆ ಶಿಕ್ಷಕರಾದಿಯಾಗಿ ಎಲ್ಲರೂ ಹೊಗಳಿದ್ದರು, ಮಗ ಫಸ್ಟ್ ಬಂದಿದ್ದು ಚಂದ್ರಣ್ಣನಿಗೆ ಹೆಚ್ಚಿನ ಖುಷಿ ನೀಡಿತ್ತು, ಮಗ
ಏನೋ ಫಸ್ಟ ಬಂದ ಆದರೆ ಮುಂದೆ ಎಲ್ಲಿ ಶಿಕ್ಷಣ ಕೊಡಿಸೋದು, ಊರಲ್ಲಿ ಕಾಲೇಜಂತೂ ಇಲ್ಲ ಓದಲು ನಗರಕ್ಕೆ ಹೋಗಬೇಕು ಅಂತ ಚಂದ್ರಣ್ಣ ಚಿಂತಿಸಿದಾಗ ಮಾನಿಂಗಪ್ಪ ಮಾಸ್ತರ ಆಪತ್ಭಾಂಧವನಂತೆ ಬಂದು ಬಸವೇಶ ಶ್ಯಾಣ್ಯಾ ಹುಡುಗ ಇವನಿಗೆ ನಗರದ ಕಾಲೇಜಿನಲ್ಲಿ ನಾನು ಪ್ರವೇಶ ಕೊಡಸ್ತೀನಿ ನೀನೇನೂ ಯೋಚಿಸಬೇಡ ಅಂತ ಭರವಸೆ ನೀಡಿ ಮರುದಿನಾನೇ ಬಸವೇಶಗ ನಗರಕ್ಕೆ ಕರಕೊಂಡ ಹೋಗಿ ಕಾಲೇಜು ಸೇರಿಸಿದ್ದರು. ಇದರಿಂದ ಚಂದ್ರಣ್ಣ ನಿಟ್ಟುಸಿರು ಬಿಟ್ಟು ಮಾಸ್ತರ ಸಹಾಯ ಆಗಾಗ ಸ್ಮರಿಸಿಕೊಳ್ಳುತಿದ್ದ. ಬಸವೇಶ ಒಂದಿನಾನೂ ತಪ್ಪದೆ ಕಾಲೇಜಿಗೆ ಹೋಗುತಿದ್ದ, ಬಸ್ ಪಾಸ ತೆಗೆಸಿ ಊರಿಂದಲೇ ಅಡ್ಡಾಡುತಿದ್ದ ಕಾಲೇಜಿನಲ್ಲೂ ಇವನು ಬಹುಬೇಗ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿ ಮೆಚ್ಚುಗೆಗೆ ಪಾತ್ರನಾದ , ಅಲ್ಲಿನ ಉಪನ್ಯಾಸಕರು ಕೂಡ ಇವನಿಗೆ ಪ್ರೋತ್ಸಾಹ ನೀಡುತಿದ್ದರು. ಬಸವೇಶ ಸಮಯ ವ್ಯರ್ಥ ಮಾಡದೆ ಸದುಪಯೋಗ ಮಾಡಿಕೊಂಡು ಪ್ರತಿ ಸೆಮಿಸ್ಟರನಲ್ಲೂ ಹೆಚ್ಚಿನ ಅಂಕ ಪಡೆಯತೊಡಗಿದ. ನನ್ನ ಮಗ ಎಲ್ಲದರಲ್ಲೂ ಫಸ್ಟೇ ಅಂತ ಚಂದ್ರಣ್ಣ ಹೆಂಡತಿಯ ಮುಂದೆ ಹೇಳಿ ಖುಷಿ ಪಟ್ಟಾಗ ಮಗನಿಗೆ ಕೆಲಸಾ ಹಚ್ಚದೆ ಓದಿಗೆ ಬೆಂಬಲ ಕೊಟ್ಟಿದ್ದೇ ಅವನು ಫಸ್ಟ ಬರಲು ಕಾರಣ ಇನ್ನೂ ಒಂದು ವರ್ಷ ಅವನ ಓದು ಮುಗೀತಾದೆ ಮುಗಿದ ತಕ್ಷಣ ಮದುವೆ ಮಾಡಿ ನಮ್ಮ ಜವಾಬ್ದಾರಿ ಮುಗಿಸಿ ಬಿಡೋಣ ಅಂತ ಸಲಹೆ ನೀಡಿದಳು. ಇವಳ ಮಾತಿಗೆ ಚಂದ್ರಣ್ಣ ಒಪ್ಪದೆ ಸಧ್ಯ ಮದುವೆ ಯೋಚನೆ ಬೇಡವೇ ಬೇಡ ಅವನು ದೊಡ್ಡ ಸಾಹೇಬ ಆಗಬೇಕು ಅಲ್ಲಿಯ ತನಕ ಕಾಯೋಣ
ನಮಗಿರೋನು ಒಬ್ಬನೇ ಮಗ ಬೀಗರು ನೆಂಟರು ಬಂಧು ಬಳಗ ಎಲ್ಲರಿಗೂ ಆಮಂತ್ರಣ ಕೊಟ್ಟು ಊಟ ಹಾಕಿ ನಡು ಊರಿನ ಅಂಗಳ ತುಂಬಾ ಶಾಮಿಯಾನ ಹಾಕಿ ಭರ್ಜರಿ ಮದುವೆ ಮಾಡೋಣ ಅಂತ ಹೇಳಿದಾಗ ಗಂಡನ ಮಾತಿಗೆ ತಲೆಯಾಡಿಸಿ ಮಗನ ಮದುವೆಯಾದರೆ ಮನೆಗೆ ಸೊಸೆ ಬರ್ತಾಳೆ ಸೊಸೆಯಿಂದಲೇ ಸೌಭಾಗ್ಯ ನಂತರ ಮೊಮ್ಮಕ್ಕಳು ಹುಟ್ಟತಾರೆ ಅವರಿಂದ ನಮ್ಮ ಮನೆ ಮನೋರಂಜನೆಯ ಗೂಡಾಗುತ್ತದೆ ಮೊಮ್ಮಕ್ಕಳ ಜೊತೆ ಕಾಲ ಕಳೆದರೆ ಹೊತ್ತು ಹೋದದ್ದೇ ಗೊತ್ತಾಗೋದಿಲ್ಲ ಅಂತ ಕನಸಿನಲ್ಲಿ ತೇಲಾಡತೊಡಗಿದಳು ಅದೇನು ಮೈಮೇಲೆ ಎಚ್ಚರಿಲ್ಲದಂತೆ ಯೋಚನೆ ಮಾಡ್ತಿದ್ದಿ ಅಂತ ಚಂದ್ರಣ್ಣ ಪ್ರಶ್ನಿಸಿದಾಗ ವಾಸ್ತವ ಲೋಕಕ್ಕೆ ಮರಳಿ ಏನಿಲ್ಲ ಕನಸಿನಲ್ಲಿ ಏನೋ ಸಂಭ್ರಮ ಕಾಣುತಿದ್ದೆ ಅಂತ ಮುಗ್ಳನಗೆ ಬೀರಿದಳು, ಕನಸಿನಲ್ಲೇಕೆ ಸಂಭ್ರಮ ನಿಜವಾದ ಸಂಭ್ರಮ ಕಾಣುವ ಸಮಯ ಬಹಳ ದೂರಿಲ್ಲ ಅಂತ ವಿಶ್ವಾಸ ವ್ಯಕ್ತಪಡಿಸಿ ಶಾಂತಾಳ ಖುಷಿ ಹೆಚ್ಚಿಸಿದ. ಬಸವೇಶನ ಗುಣ ಸ್ವಭಾವದ ಬಗ್ಗೆ ಆಗಲೇ ಬೀಗರು ನೆಂಟರು ಬಂಧು ಬಳಗದವರಿಗೆಲ್ಲ ಗೊತ್ತಾಗಿ ಮುಂದೆ ಇವನಿಗೆ ದೊಡ್ಡ ನೌಕರಿ ಸಿಕ್ಕೇ ಸಿಗ್ತಾದೆ ಕನ್ಯಾ ಕೊಟ್ಟರೆ ನಮ್ಮ ಮಗಳು ಸುಖವಾಗಿರ್ತಾಳೆ ಅಂತ ಸಹಜವಾಗಿ ಯೋಚಿಸಿ ಮಧ್ಯವರ್ತಿಗಳ ಕಡೆಯಿಂದ ನೆಂಟಸ್ಥನದ ಪ್ರಸ್ತಾಪ ಮಾಡಿದ್ದಲ್ಲದೆ ಹಣ ಚಿನ್ನ ಕಾರು ಮತ್ತಿತರ ಉಡುಗೊರೆ ಕೊಡುವದಾಗಿ ಆಮಿಷ ತೋರಿಸಿದರು. ಚಂದ್ರಣ್ಣ ಯಾರ ಪ್ರಸ್ತಾವಕ್ಕೂ ಮನ್ನಣೆ ನೀಡದೆ ನಮ್ಮ ಮಗ ಮಾರಾಟದ ವಸ್ತುವಲ್ಲ ಅವನು ಇಷ್ಟಪಡುವ ಹುಡುಗಿಯ
ಜೊತೆಗೇ ಮದುವೆ ಮಾಡತೀವಿ ಯಾವ ಆಸೆ ಆಮಿಷವೂ ಬೇಡ ಸಧ್ಯ ಮದುವೆ ಯೋಚನೆ ಅವನಿಗು ಇಲ್ಲ ನಮಗೂ ಇಲ್ಲ ಹಾಗೇನಾದರು ನಿರ್ಧಾರ ಮಾಡಿದರೆ ಖಂಡಿತವಾಗಿ ತಿಳಿಸುತ್ತೇವೆ ಅಂತ ಆ ವಿಷಯಕ್ಕೆ ತೆರೆ ಎಳೆದಿದ್ದ. ಕಾಲಚಕ್ರ ಉರುಳಿತು ನಿರೀಕ್ಷೆಯಂತೆ ಬಸವೇಶ ಪದವಿ ಪರೀಕ್ಷೆಯೂ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾದ ಗ್ರಂಥಾಲಯದಿಂದ ವಿವಿಧ ಪುಸ್ತಕ ತಂದು ಸ್ಪರ್ಧಾತ್ಮಕ ಪರೀಕ್ಷೆಗಾಗಿ ಅಭ್ಯಾಸ ಮಾಡಿ ಒಂದೇ ಬಾರಿಗೆ ಸ್ಪರ್ಧಾತ್ಮಕ ಪರೀಕ್ಷೆಯೂ ಪಾಸಾದ, ಸ್ವಲ್ಪ ದಿನದಲ್ಲೇ ಅಧಿಕಾರಿಯ ಹುದ್ದೆಯೂ ಅನಾಯಾಸವಾಗಿ ಒಲಿದು ಬಂದಿತು, ಮನೆಯಲ್ಲಿ ಸಂಭ್ರಮದ ವಾತಾವರಣ ಕಳೆಗಟ್ಟಿತು. ಊರು ಕೇರಿಯ ಜನರೆಲ್ಲ ನಮ್ಮ ಹಳ್ಳಿ ಹುಡುಗ ದೊಡ್ಡ ಸಾಧನೆ ಮಾಡಿ ಊರ ಗೌರವ ಹೆಚ್ಚಿಸಿದ ಅಂತ ಮಾತಾಡಿಕೊಂಡರು. ಈ ನಿನ್ನ ಸಾಧನೆಗೆ ಯಾರು ಕಾರಣ ಅಂತ ಯಾರಾದರು ಬಸವೇಶನಿಗೆ ಕೇಳಿದರೆ ಇದಕ್ಕೆಲ್ಲ ಅಪ್ಪನೇ ಕಾರಣ ಅಂತ ಹೇಳುತಿದ್ದ. ನನ್ನ ಆಸೆ ಈಗ ಈಡೇರಿತು ನಾನು ಕಷ್ಟ ಪಟ್ಟು ಶಿಕ್ಷಣ ಕೊಡಿಸಿದ್ದಕ್ಕೂ ಸಾರ್ಥಕವಾಯಿತು ಮಗ ಸಾಹೇಬ ಆದ ಇನ್ಮುಂದೆ ಊರಿಗೆ ಬಂದರೆ ಜೀಪಿನಲ್ಲೇ ಬರುತ್ತಾನೆ ಆತ ಮೊದಲ ಸಲ ಬರುವ ದೃಶ್ಯ ನೋಡಿ ಕಣ್ತುಂಬಿಕೋಬೇಕು. ಹೊಟಲು ಕಿರಾಣಿ ಅಂಗಡಿ ಗುಡಿಗುಂಡಾರದ ಮುಂದ ಕುಂತೋರೆಲ್ಲ ಇವನಿಗೆ ನೋಡಿ ಗಾಬರಿ ಆಗಿ ಚಂದ್ರಣ್ಣನ ಮಗ ಸಾಹೇಬ ಆದ ಅಂತ ಮಾತಾಡ್ತಾರೆ ಇದಕ್ಕಿಂತ ಖುಷಿ ಇನ್ನೇನಿದೆ ಅಂತ ಮನೆಯ ಹೊರ ಕಟ್ಟೆಗೆ ಕುಂತು ಶೂನ್ಯ ದಿಟ್ಟಿಸಿ ಯೋಚನೆಯಲ್ಲಿ ಮುಳುಗಿದ. . ನಾವು ಅಂದುಕೊಂಡಂತೆ
ಮಗ ಸಾಹೇಬ ಆದ ಮತ್ತೇನು ಹೊಸ ಯೋಚನೆ ? ಮಗಾ ಸಾಹೇಬನ ಮದುವೆ ಯೋಚನೆನಾ ? ಅಂತ ಶಾಂತಾ ಹತ್ತಿರ ಬಂದು ಪ್ರಶ್ನಿಸಿದಳು ಇವನಿಂದ ಯಾವ ಉತ್ತರವೂ ಬರಲಿಲ್ಲ ಕನಸಿನ ತೋಕದಲ್ಲಿ ತೇಲಾಡ್ತಿರಬೇಕು ? ಅಂತ ಭುಜ ಹಿಡಿದು ಅಲುಗಾಡಿಸಿದಳು ಆಗ ಇವನ ಶರೀರ ಕುಂತಲ್ಲೇ ಮೆಲ್ಲಗೆ ಬಲಕ್ಕೆ ಉರುಳಿ ಬಿದ್ದಿತು. ಜೀವ ಶರೀರ ಬಿಟ್ಟು ಹೊರಟು ಹೋಗಿದ್ದು, ಖಾತ್ರಿಯಾಗುತಿದ್ದಂತೆ ಜೋರಾಗಿ ಅಳಲು ಆರಂಭಿಸಿದಳು. ಕ್ಛಣ ಮಾತ್ರದಲ್ಲೇ ಸುತ್ತ ಮುತ್ತಲಿನ ಜನ ಜಮಾಯಿಸಿ ಚಂದ್ರಣ್ಣನಿಗೆ ಏಕಾಏಕಿ ಹಿಂಗಾಯ್ತಲ್ಲ ಯಾವ ಜಡ್ಡು ಆಪತ್ತಿರಲಿಲ್ಲ ಒಂದಿನಾನೂ ಹಾಸಿಗೆ ಹಿಡಿದು ಮಲಗಿಲ್ಲ ಅಂತ ಪರಸ್ಪರ ಹಳಾಹಳಿಸಿ ಸಂಕಟ ಹೊರ ಹಾಕಿದರು. ಅದೇ ಸಮಯ ಬಿಳಿ ಬಣ್ಣದ ಜೀಪೊಂದು ಬರ್ರಂತ ಅಂಕುಡೊಂಕಾದ ರಸ್ತೆಯಿಂದ ಧೂಳೆಬ್ಬಿಸಿ ಬರುವದು ಕಂಡು ಎಲ್ಲರೂ ಅತ್ತ ಕಡೆ ದೃಷ್ಟಿ ಹರಿಸಿದರು ಅದು ಸೀದಾ ಚಂದ್ರಣ್ಣನ ಮನೆಯ ಮುಂದೆ ಬಂದು ನಿಂತಿತು. ಅದರಿಂದ ಬಸವೇಶ ಕೆಳಗಿಳಿದ. ಯಾಕೆ ಇವರೆಲ್ಲ ನಮ್ಮ ಮನೆ ಮುಂದೆ ಸೇರಿದ್ದಾರೆ ಅಂತ ಕ್ಛಣ ಕಾಲ ಆತ ಕಕ್ಕಾಬಿಕ್ಕಿಯಾದ. ಎಲ್ಲರ ಮುಖದಲ್ಲೂ ಮೌನ ಆವರಿಸಿತ್ತು. “ಮಗಾ ಸಾಹೇಬ” ಬಂದಾನೆ ಈಗಲಾದರು ಕಣ್ತೆರುದು ನೋಡು ಅಂತ ಶಾಂತಾ ಗಂಡನ ಗದ್ದತುಟಿ ಹಿಡಿದು ಜೋರಾಗಿ ಅಳಲು ಆರಂಭಿಸಿದಳು. ಅವ್ವನ ಮಾತು ಕಿವಿಗೆ ಬಿದ್ದಾಗ ಬಸವೇಶನ ದುಃಖದ ಕಟ್ಟೆ ಒಡೆದು ಕೈಕಾಲು ಶಕ್ತಿಹೀನವಾಗಿ ಕುಸಿದುಬಿದ್ದ. ಈ ಹೃದಯ ವಿದ್ರಾವಕ ಘಟನೆ ಎಲ್ಲರ ಕಣ್ಣು ತಂತಾನೇ ತೇವಗೊಂಡವು!!
-ಶರಣಗೌಡ ಬಿ ಪಾಟೀಲ ತಿಳಗೂಳ