ದೇಶ ದೇಶಗಳ ಗಡಿಗಳ ಗೂಗಲ್ ನೋಟ: ಎಫ್. ಎಂ. ನಂದಗಾವ

ಪ್ರಭುತ್ವಕ್ಕೆ ತನ್ನ ಆಡಳಿತಕ್ಕೆ ಒಳಪಟ್ಟ ಪ್ರದೇಶದ ನಿಗದಿಗೆ ನಕಾಶೆ ಬೇಕು. ಊರುಗಳ, ಹೋಬಳಿಗಳ, ತಾಲ್ಲೂಕುಗಳ, ರಾಜ್ಯಗಳ, ರಾಷ್ಟ್ರಗಳ ನಕಾಶೆ ಎಂದಾಗ ಅವುಗಳ ಭೌಗೋಳಿಕ ವ್ಯಾಪ್ತಿ ನಿಗದಿಯಾಗಬೇಕು, ಆ ವ್ಯಾಪ್ತಿಯನ್ನು ನಿಗದಿ ಮಾಡುವುದು ಎಂದರೆ ಗಡಿ ಅಥವಾ ಎಲ್ಲೆಯನ್ನು ಗುರುತಿಸುವುದು. ಗಡಿ ಗೆರೆಯು ಅಥವಾ ಎಲ್ಲೆಯ ರೇಖೆಯು ಆಯಾ ಭೌಗೋಳಿಕ ಪ್ರದೇಶದ ವ್ಯಾಪ್ತಿಯನ್ನು ಗುರುತಿಸುವ ಗೆರೆ. ಇದು ದೇಶ ದೇಶಗಳ ನಡುವಣ ಲಕ್ಷö್ಮಣ ರೇಖೆ. ಪರವಾನಿಗೆ, ರಹದಾರಿ ದಾಖಲೆ (ಪಾಸ್ ಪೋರ್ಟ) ಇಲ್ಲದೇ ಈ ಕಡೆಯವರು ಆ ಕಡೆಗೆ ಹೋಗುವಂತಿಲ್ಲ, ಆ ಕಡೆಯವರು ಈ ಕಡೆ ಬರುವಂತಿಲ್ಲ.

ಭಾರತವು, ಬಂಗ್ಲಾದೇಶದ ನಿವಾಸಿಗಳು ಭಾರತಕ್ಕೆ ಬರದಂತೆ ಮಾಡಲು, ಪಾಕಿಸ್ತಾನದಿಂದ ಉಗ್ರಗಾಮಿಗಳು ನುಸುಳದಂತೆ ಮಾಡಲು ಗಡಿಗುಂಟ ಕೆಲವೆಡೆ ತಂತಿ ಬೇಲಿ ಹಾಕಿವೆ. ಅಮೆರಿಕ(ಯುಎಸ್ ಎ) ವು ದಕ್ಷಿಣದಲ್ಲಿರುವ ಮೆಕ್ಷಿಕೊ ದೇಶದ ಜನ ತನ್ನ ನೆಲಕ್ಕೆ ನುಗ್ಗದಂತೆ ತಡೆಯಲು, ಅಮೆರಿಕ ಮತ್ತು ಮೆಕ್ಸಿಕೋಗಳು ಹಂಚಿಕೊಂಡಿರುವ ತಿವಾನಾ ಕಡಲ ತೀರದಲ್ಲಿ ಕೆಲಿಫೋರ್ನಿಯ ಮತ್ತು ಮೆಕ್ಸಿಕೋ ನಡುವೆ ಅಡ್ಡಡ್ಡ ಸೀಳುವ ಗಡಿ ಗುರುತಿಸುವ ಗೋಡೆ ನಿರ್ಮಿಸಿದೆ. ಕೆಲಿಫೋರ್ನಿಯ ಮತ್ತು ಮೆಕ್ಸಿಕೋದ ಬಾಜಾ ಕೆಲಿಫೋರ್ನಿಯ ಮರಳುಗಾಡಿನಲ್ಲಿ ಮರಳದಿಬ್ಬಗಳು ಚಲಿಸುವ ಕಾರಣ, ಎತ್ತಿಡುವ ಗಡಿ ಬೇಲಿಯನ್ನು ಹಾಕಲಾಗಿದೆ! ಅರಿಜೋನಾ ನೋಗಾಲಸ್ ಪಟ್ಟಣ ಅಮೆರಿಕದ ಅರಿಜೋನಾದಲ್ಲಿ ಮತ್ತು ಹೆರೊಯಿಕ ನೋಗಾಲಸ್ ಮೆಕ್ಸಿಕೋದ ಸೊನಾರ ರಾಜ್ಯಗಳಲ್ಲಿವೆ. ಪೂರ್ವ ಮತ್ತು ಪಶ್ಚಿಮ ಜರ್ಮನಿಗಳಲ್ಲಿ ಹಂಚಿಹೋಗಿದ್ದ ಬರ್ಲಿನ್ ಪಟ್ಟಣದ ಮಾದರಿಯಲ್ಲಿ ನೋಗಾಲಸ್ ಮಧ್ಯೆ ಗಡಿ ಗೋಡೆ ಇದೆ.

ಸಾಮಾನ್ಯ ಜನರ ಪಾಲಿಗೆ ಸರ್ಕಾರದ ನಿರ್ದೇಶನದಂತೆ ರೂಪಗೊಂಡ ಎರಡು ಆಯಾಮದ ಹಾಳೆಯ ಮೇಲಣ ಪ್ರಮಾಣಬದ್ಧ ಮುದ್ರಿತ ನಕಾಶೆಗಳು ಹಾಗೂ ಈಗ ಬೆರಳ ತುದಿಯ ಸಂವೇದನೆಗೆ ಕಂಪ್ಯೂಟರ್ ಪರದೆಗಳ ಮೇಲೆ ಮೂಡುವ ಆನ್ ಲೈನ್ ನಕಾಶೆಗಳು ಅಂತಿಮ ಅನ್ನಿಸಬಹುದು. ಕೆಲವು ದೇಶಗಳಲ್ಲಿ, ಅಗತ್ಯಕ್ಕೆ ತಕ್ಕಂತೆ ಅಲ್ಲಿನ ಪೋಲಿಸ್, ಅಗ್ನಿಶಾಮಕ ದಳಗಳ ಸಿಬ್ಬಂದಿ ಮತ್ತು ದೇಶದ ಗಡಿ ಕಾಯುವ ಸೈನಿಕರು, ಸಮಾನ ಎತ್ತರದ ರೇಖೆಗಳ- ಕಾಂಟೂರ್ ಆಧಾರಿತ ನೈಸರ್ಗಿಕ ಏರಿಳಿತಗಳ ಭೌತಿಕ ಮೋಜಣಿ, ಉಪಗ್ರಹ ಚಿತ್ರಗಳ (ಸೆಟಲೈಟ್ ಇಮೇಜ್) ಆಧಾರದಲ್ಲಿ ತಮ್ಮದೇ ಆದ ಸ್ಥಳೀಯ ನಕಾಶೆಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿರುತ್ತಾರೆ. ತುರ್ತು ಸಮಯದಲ್ಲಿ ಅವರು ಅವನ್ನೇ ಬಳಸುತ್ತಾರೆ.

ನೆರೆಹೊರೆಯವರು ಒಮ್ಮತದಿಂದ ಗಡಿ ನಿಗದಿ ಮಾಡಿಕೊಂಡಾಗ ಯಾವ ಸಮಸ್ಯೆಗಳೂ ಉಂಟಾಗುವುದಿಲ್ಲ. ಎಲ್ಲೆಯ ಬಗ್ಗೆ, ಗಡಿಯ ಬಗ್ಗೆ ತಕರಾರು ಆರಂಭವಾಗುತ್ತಿದ್ದಂತೆಯೇ ವೈಮನಸ್ಸು, ವೈರತ್ವ ಆರಂಭವಾಗುತ್ತದೆ. ಈ ವೈರತ್ವ, ಕುಟುಂಬ ಕುಟುಂಬಗಳ ನಡುವೆ ಜಗಳ, ದೇಶ ದೇಶಗಳ ನಡುವೆ ಸಂಘರ್ಷಕ್ಕೆ, ಅಂತಿಮವಾಗಿ ಯುದ್ಧಗಳಿಗೆ ದಾರಿ ಮಾಡಿಕೊಡುತ್ತದೆ.

ದಾಯಾದಿಗಳ ಜಗಳ :

ಸುಮಾರು ಎಪ್ಪತ್ತು ವರ್ಷಗಳಿಂದ ಭಾರತ ಮತ್ತು ಅದರ ದಾಯಾದಿ ದೇಶ ಪಾಕಿಸ್ತಾನ, ಹಿಮಾಚ್ಛಾದಿತ ಪರ್ವತ ಶ್ರೇಣಿಗಳಿರುವ ಜಮ್ಮು ಮತ್ತು ಕಾಶ್ಮೀರದ ಮೇಲೆ ಸ್ವಾಮಿತ್ವ ಸಾಧಿಸಲು, ಗಡಿ ಮೇಲಣ ಹಿಡಿತಕ್ಕಾಗಿ ಅವುಗಳ ನಡುವೆ ಬಿಡಿಬಿಡಿಯಾಗಿ ಕೆಲವೊಮ್ಮೆ ಮಾರಣಾಂತಿಕವಾದ ಚಕಮಕಿಗಳು ನಡೆಯುತ್ತಲೇ ಇವೆ. ದಶಕಗಳ ಹಿಂದೆ ನಡೆದ ಯುದ್ಧಗಳಲಿ, ್ಲ ನಂತರದ ಚಕಮಕಿಗಳಲ್ಲಿ ಸಹಸ್ರಾರು ಜನರು ಪ್ರಾಣ ತೆತ್ತಿದ್ದಾರೆ.

ತೀರ ಈಚೆಗೆ ನೇಪಾಳ ದೇಶವೂ ಭಾರತದೊಂದಿಗೆ ಗಡಿ ವಿವಾದದ ಕೋಳಿ ಜಗಳಕ್ಕೆ ಮುಂದಾಗಿರುವುದನ್ನು ಕಾಣುತ್ತಿದ್ದೇವೆ. ಜವಾಹರ ಲಾಲ್ ನೆಹರೂ ಅವರ ಕಾಲದಲ್ಲಿ, ಉತ್ತರದ ಗಡಿಯನ್ನು ಹಂಚಿಕೊಂಡ ಟಿಬೇಟ್ ನೆಲವನ್ನು ಕಬಳಿಸಿದ ಚೀನಾದೊಂದಿಗೆ ೧೯೬೨ರಲ್ಲಿ ನಡೆದ ಭಾರತ- ಚೀನಾ ಯುದ್ಧದ ನಂತರ, ಇದೇ ೪೫ ವರ್ಷಗಳಲ್ಲಿ ಮೊದಲ ಬಾರಿ, ಈ ಸಾಲಿನ ೨೦೨೦ರ ಜೂನ್ ೧೬ರಂದು ಭಾರತ ಚೀನಾ ವಾಸ್ತವ (ನಿಯಂತ್ರಣ) ಗಡಿ ರೇಖೆಯಲ್ಲಿ ಬಾಹುಬಲದ ಚಕಮಕಿ ನಡೆದು, ರಕ್ತದ ಕೋಡಿ ಹರಿದಿದೆ. ಅದರಲ್ಲಿ ಭಾರತದ ಇಪ್ಪತ್ತು ಯೋಧರು ವೀರ ಮರಣವನ್ನು ಅಪ್ಪಿದ್ದಾರೆ.

ಯಾರೊಡನೇ ನಾವು ಒಡನಾಟ ಹೊಂದಿರಬೇಕು, ಹೊಂದಿರಬಾರದು ಎಂಬ ನಿರ್ಧಾರದ ಗೋಡೆಗಳನ್ನು ತನ್ನದೇ ಆದ ಮಾನದಂಡಗಳನ್ನು ಅನುಸರಿಸಿ ನಮ್ಮ ನಮ್ಮ ಮನಸ್ಸುಗಳು ರೂಢಿಸಿಬಿಟ್ಟಿರುತ್ತವೆ. ನಮ್ಮ ಮನೆಮಠಗಳಿಗೆ ಹೊರಗೋಡೆಗಳಿವೆ, ಹೊಲ, ಗದ್ದೆಗಳಿಗೆ ಬದುಗಳಿವೆ, ಎಸ್ಟೇಟುಗಳ ನಡುವೆ ಬೇಲಿಗಳಿವೆ, ರಾಜ್ಯರಾಜ್ಯಗಳ ನಡುವೆ ಮೇರೆಗಳಿವೆ, ಎಲ್ಲೆಗಳಿವೆ. ಅವು ರಾಜ್ಯರಾಜ್ಯಗಳ ನಡುವಿನ ಗಡಿಗಳು. ದೇಶಕ್ಕಿರುವ ಎಲ್ಲೆಗಳೇ ನಾವು ಇಂದು ಕರೆಯುವ ದೇಶ ದೇಶಗಳ ನಡುವಿನ ಗಡಿಗಳು. ಹಿಂದೆ ರಾಷ್ಟ್ರಕೂಟ ಅರಸರು ತಮ್ಮ ಆಡಳಿತ ಪ್ರದೇಶದ ಗಡಿಯನ್ನು- ಎಲ್ಲೆಯನ್ನು ಕಾಯುವ ದೇವತೆಯನ್ನು ಎಲ್ಲಮ್ಮ ಎಂದು ಕರೆದರು. ಸೌದತ್ತಿ ಈಗ ಅವಳು ನೆಲೆಸಿರುವ ಜಾಗ.

ಗಡಿಯ ಹಪಾಪಿತನ :

ಈ ಎಲ್ಲೆ- ಗಡಿಗಳ ಮೇಲಿನ ವ್ಯಾಮೋಹಕ್ಕೆ ಕಾರಣ, ಆಯಾ ಗಡಿಯೊಳಗಣ ನೈಸರ್ಗಿಕ ಸಂಪತ್ತು. ಅಂದರೆ ಫಲವತ್ತಾದ ಕೃಷಿ ಭೂಮಿ, ನದಿ ದಡಗಳ ಭೂಮಿ, ಅಪಾರವಾಗಿ ಲಭಿಸುವ ಭೂಗರ್ಭದಲ್ಲಿ ಹುದುಗಿರುವ ಖನಿಜ ಸಂಪತ್ತುü ಇತ್ಯಾದಿಗಳ ಮೇಲೆ ಪ್ರಭುತ್ವ ಸಾಧಿಸುವ ಆಸೆ, ಜೊತೆಗೆ ಸಂಸ್ಕೃತಿ, ಧರ್ಮ, ಜನಾಂಗೀಯ ರಾಷ್ಟ್ರವಾದ ಗಡಿಯ ಬಗೆಗಿನ ಹಪಾಪಿತನವನ್ನು ಹೆಚ್ಚಿಸುತ್ತದೆ.

ಇಂಥ ಹಪಾಪಿತನದಿಂದಲೇ, ಕ್ರಿಸ್ತ ಶಕ ಪೂರ್ವ ೩ನೇ ಶತಮಾನದಲ್ಲಿ ತನ್ನ ರಾಜ್ಜದ ಭೌಗೋಳಿಕ ಗಡಿಯನ್ನು ವಿಸ್ತರಿಸಲು ಹೊರಟ, ಭಾರತ ಉಪಖಂಡದ ಬಹುತೇಕ ಪ್ರದೇಶದ ಮೇಲೆ ಹಿಡಿತ ಸಾಧಿಸಿದ್ದ ಅಶೋಕ ಚಕ್ರವರ್ತಿ, ಕಳಿಂಗದ (ಒರಿಸ್ಸಾ)ದ ಮೇಲೆ ದಾಳಿ ಮಾಡಿದ. ನಂತರ ಹಿಂಸೆಯನ್ನು ಬಿಟ್ಟು ಅಹಿಂಸೆಯನ್ನು ಪ್ರತಿಪಾದಿಸುವ, ಗೌತಮ ಬುದ್ಧ (ಕ್ರಿಸ್ತ ಪೂರ್ವ ೫ ಮತ್ತು ೪ನೇ ಶತಮಾನ)ನ ಬೋಧನೆಗಳ ಆಧಾರದ ಬೌದ್ಧ ಧರ್ಮವನ್ನು ಸ್ವೀಕರಿಸಿದ. ಅವನ ಶಿಲಾ ಸ್ತಂಭಗಳಲ್ಲಿ ಮೂಡಿಸಿದ ಧರ್ಮ ಚಕ್ರ ನಮ್ಮ ದೇಶದ ತ್ರಿವರ್ಣದ ಬಾವುಟ (ಕೇಸರಿ, ಬಿಳಿ ಮತ್ತು ಹಸಿರುವ ಬಣ್ಣಗಳ ತಿರಂಗಾ ಝಂಡಾದ ಬಿಳಿ ಪಟ್ಟಿಯ ಮಧ್ಯ)ದಲ್ಲಿ- ರಾಷ್ಟ್ರಧ್ವಜದಲ್ಲಿ ಬಂದು ಕುಳಿತಿದೆ. ಸಿಂಹ ಸ್ತಂಭ ನಮ್ಮ ಅಧಿಕೃತ ಲಾಂಛನವಾಗಿದೆ. ನಮ್ಮ ದೇಶದಲ್ಲಿನ ರಾಜ್ಯಗಳನ್ನು ಭಾಷಾವಾರು ಪ್ರಾಂತ್ಯಗಳೆಂದೇ ಪರಿಗಣಿಸಿ, ಗಡಿ ಗುರುತಿಸಲಾಗಿದೆ.

ಒಂದೊಮ್ಮೆ ಕನ್ನಡ ನಾಡಿನ ಎಲ್ಲೆ ದಕ್ಷಿಣದಲ್ಲಿ ಕಾವೇರಿ ನದಿಯಿಂದ ಉತ್ತರದಲ್ಲಿ ಗೋದಾವರಿ ನದಿಯವರೆಗೆ ಹರಡಿತ್ತು ಎಂದು ಇತಿಹಾಸದ ಪುಟಗಳು ಹೇಳುತ್ತವೆ. ನಮ್ಮ ಜನಪದರ ಬಯಲಾಟಗಳಲ್ಲಿ ದಾಖಲಾಗಿರುವಂತೆ ಭಾರತ ಉಪಖಂಡದಲ್ಲಿ ಛಪ್ಪನೈತ್ತಾರು ದೇಶಗಳಿದ್ದವು. ಎರಡನೇ ಶತಮಾನದಲ್ಲಿ ಉತ್ತರ ಭಾರತದ ಪೂರ್ವ ಭಾಗವನ್ನು ಕುಷಾಣರ ಕನಿಷ್ಕನು ಆಳಿದ ಕಾಲದಲ್ಲಿ ಗಂಗಾ ಯಮುನಾ ನದಿಗಳ ಪಶ್ಚಿಮದ ಫಲವತ್ತಾದ ಪ್ರದೇಶವಲ್ಲದೇ, ಗಾಂಧಾರ -ಇಂದಿನ ಪಾಕಿಸ್ತಾನದ ಆಚೆಗಿರುವ ಅಫಘಾನಿಸ್ತಾನವೂ ಸೇರಿತ್ತು. ಪೂರ್ವದಲ್ಲಿ ಮಗಧರು, ಕೆಳಗೆ ಕಳಿಂಗರು, ದಕ್ಷಿಣದಲ್ಲಿ ಆಂಧ್ರರು, ಚೋಳರು, ಚೇರರು ಮತ್ತು ಪಾಂಡ್ಯರು ರಾಜ್ಯವಾಳಿಕೊಂಡು ಇದ್ದರು.

ಸಿಂಧು ನದಿಯಾಚೆಗಿನ ಸಿಂಧುಸ್ಥಾನ :

ಯವನ (ಗ್ರೀಕ)ರು, ಕುಷಾಣರು, ಹೂಣರು ಬಂದಂತೆ, ತುರ್ಕರೂ (ಮಹಮ್ಮದೀಯರು) ಬಂದರು. ಅವರ ದೃಷ್ಟಿಯಲ್ಲಿ ಸಿಂಧು ನದಿಯ ಆಚೆಗಿನವರ ಭೂ ಪ್ರದೇಶ ಸಿಂಧುಸ್ಥಾನ. ಅಪಭ್ರಂಶಗೊಂಡ ಅದು ಹಿಂದುಸ್ತಾನವಾಯಿತು ಎಂದು ಹೇಳಲಾಗುತ್ತದೆ. ನೂರಾರು ವರ್ಷಗಳ ಹಿಂದೆ ಭರತನಾಳಿದ ಭಾರತ ಉಪಖಂಡ, ಹಿಂದುಸ್ತಾನವಾದ ನಂತರದಲ್ಲಿ ನೂರಾರು ಅರಸರು, ಸುಲ್ತಾನರು ಹುಟ್ಟಿಕೊಂಡರು. ಅವರ ನಂತರ ಯುರೋಪಿಯನ್ನರು ಬಂದರು. ಬ್ರಿಟಿಷರ ಕಂಪೆನಿ ಸರ್ಕಾರ, ಬಹುತೇಕ ಪ್ರದೇಶದ ಮೇಲೆ ಪ್ರಭುತ್ವ ಹೊಂದಿತು. ಭಾರತ ಉಪಖಂಡವು ಬ್ರಿಟಿಷರ ಆಡಳಿತದಿಂದ ಮುಕ್ತಗೊಂಡಾಗ, ಬರ್ಮಾ, ಅಖಂಡ ಭಾರತ, ಪಶ್ಚಿಮ ಮತ್ತು ಬಂಗಾಳದಲ್ಲಿ ಪಾಕಿಸ್ತಾನ ದೇಶಗಳು ಮತ್ತು ಉತ್ತರದಲ್ಲಿ ಭೂತಾನ, ನೇಪಾಳ ತಡೆ ದೇಶಗಳು ಅಸ್ತಿತ್ವದಲ್ಲಿ ಬಂದವು. ಇವುಗಳೊಂದಿಗೆ ಉತ್ತರದಲ್ಲಿ ಟಿಬೇಟ್ ದೇಶವಿತ್ತು.

ಯಲಹಂಕ ನಾಡುಪ್ರಭು ಕೆಂಪೇಗೌಡ ಹಾಕಿದ ಗಡಿ ಗೆರೆಯನ್ನು ಬೆಂಗಳೂರು ಎಂದೋ ದಾಟಿ ಬಿಟ್ಟಿದೆ. ಈಗ, ನಗರಸಭೆ, ನಗರ ಪಾಲಿಕೆ ಮೊದಲಾದ ಹಂತಗಳನ್ನು ದಾಟಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಿ, ಸುತ್ತಲಿನ ಹಳ್ಳಿಗಳನ್ನು ಆಪೋಷಣೆ ಮಾಡುತ್ತ ತನ್ನ ಗಡಿಯನ್ನು ವಿಸ್ತರಿಸಿಕೊಳ್ಳುತ್ತಾ ಸಾಗುತ್ತಿದೆ. ಇತಿಹಾಸ ಕಾಲದ ನಗರದ ಗಡಿಗಳು ವ್ಯತ್ಯಾಸವಾದಂತೆ ದೇಶ ದೇಶಗಳ ನಡುವಿನ ಗಡಿಗಳಲ್ಲೂ ವ್ಯತ್ಯಾಸಗಳಾಗಿವೆ. ಕೆಲವು ಗಡಿ ವಿವಾದಗಳು ಮುಂದುವರೆಯುತ್ತಲೇ ಇರುತ್ತವೆ.

ಸರ್ ಸಿರಿಲ್ ರೆಡ್ ಕ್ಲಿಫ್ ಕಾಶ್ಮೀರವನ್ನು ಹೊರತುಪಡಿಸಿ, ಪಶ್ಚಿಮದಲ್ಲಿ ಗುಜರಾತ ರಾಜಸ್ಥಾನ ಮತ್ತು ಪಂಜಾಬಗಳ ನಡುವೆ ಗೆರೆ ಎಳೆದು, ಪೂರ್ವದಲ್ಲಿ ವಂಗನಾಡ (ಬಂಗಾಳವ)ನ್ನು ವಿಭಜಿಸಿ ಭಾರತ ಮತ್ತು ಪಶ್ಚಿಮ ಮತ್ತು ಪೂರ್ವ ಪಾಕಿಸ್ತಾನಗಳ ನಡುವೆ ಗಡಿ ಗುರುತಿಸಿ ಕೊಟ್ಟಿದ್ದಾನೆ. ಅವನು ಈ ಗಡಿ ಗುರುತಿಸುವಾಗ, ಈಗ ಭಾರತಕ್ಕೆ ಸೇರಿರುವ ಜಮ್ಮು ಮತ್ತು ಕಾಶ್ಮೀರದ ಕುರಿತು, ಅಂದಿನ ಆ ಪ್ರದೇಶದ ಅರಸ ಹರಿಸಿಂಗ್ ನಿಂದ ಭಾರತ ಒಕ್ಕೂಟವನ್ನು ಸೇರಬೇಕೊ ಬೇಡವೋ? ಎಂಬುದರ ಬಗ್ಗೆ ಇನ್ನೂ ಯಾವ ನಿರ್ಧಾರವೂ ಆಗಿರಲಿಲ್ಲ. ಇಂದು, ಹಿಂದಿನ ಪೂರ್ವ ಪಾಕಿಸ್ತಾನ, ೧೯೭೧ರಲ್ಲಿ ಪಶ್ಚಿಮ ಪಾಕಿಸ್ತಾನದೊಂದಿಗಿನ ನಂಟು ಕಳೆದುಕೊಂಡು ಬಂಗ್ಲಾದೇಶದ ಹೆಸರಲ್ಲಿ ಒಂದು ಪ್ರತ್ಯೇಕ ದೇಶವಾಗಿದೆ.

ನಿಬಂಧನೆಗಳನ್ನು ಮೀರುವ ಬಲಾಢ್ಯರು:

ದೇಶ ದೇಶಗಳ ನಡುವಿನ ಭೌಗೋಳಿಕ ಗಡಿ ವಿವಾದಗಳು ಯುದ್ಧ ಹಾಗೂ ಭಯೋತ್ಪಾದಕ ಕೃತ್ಯಗಳಿಗೆ ಕಾರಣವಾಗುತ್ತಿರುವುದನ್ನು ಗಮನಿಸಬಹುದು. ಜಗತ್ತಿನ ಬಹುತೇಕ ರಾಷ್ಟ್ರಗಳನ್ನು, ಮೆತ್ತಗೆ ಮಾಡಿದ ಎರಡು ಜಾಗತಿಕ ಯುದ್ಧಗಳು ನಡೆದ ನಂತರ ಅಸ್ತಿತ್ವಕ್ಕೆ ಬಂದ ಜಗದಲ್ಲೊಂದು ಶಿಸ್ತು ರೂಢಿಸುವ ವಿಶ್ವಸಂಸ್ಥೆಯು, ಸಂಸ್ಥೆಯ ಸಕಲ ಸದಸ್ಯರು ಸ್ವತಂತ್ರವಾಗಿರುವ ನೆರೆಯೊರೆಯ ದೇಶಗಳ ಭೌಗೋಳಿಕ ಪ್ರದೇಶಗಳನ್ನು ಬಲವಂತದಿಂದ ಅತಿಕ್ರಮಿಸಬಾರದು ಎಂಬ ನಿಬಂಧನೆ ಹೇರಿದೆ.

ಆದರೂ ಚೀನಾ, ರಶಿಯದಂಥ ಬಲಾಢ್ಯ ರಾಷ್ಟ್ರಗಳು ಅದಕ್ಕೆ ಕವಡೆ ಕಿಮ್ಮತ್ತು ಕೊಟ್ಟಿಲ್ಲದಿರುವುದನ್ನು ಅವುಗಳ ನಡೆಗಳೇ ಸೂಚಿಸುತ್ತವೆ. ನಮ್ಮ ನೆರೆಯ ಟಿಬೇಟ ದೇಶವನ್ನು ನುಂಗಿ ನೀರು ಕುಡಿದ ಚೀನಾ, ಈಚೆಗೆ ಹಾಂಕಾಂಗ್ ಅನ್ನು ಆಪೋಷನ ಮಾಡಿದೆ.

ಕಳೆದ ಶತಮಾನದಲ್ಲಿ ೧೯೯೧ರ ಡಿಸೆಂಬರ್ ತಿಂಗಳಲ್ಲಿ ಸೋವಿಯತ್ ಒಕ್ಕೂಟವು ಒಡೆದುಹೋದಾಗ, ರಶಿಯವೂ ಸೇರಿದಂತೆ ಒಟ್ಟು ಹದಿನೈದು ಗಣತಂತ್ರದ ದೇಶಗಳು ಅಸ್ತಿತ್ವಕ್ಕೆ ಬಂದಿದ್ದವು. ಕಳೆದ ೨೦೨೨ರಿಂದ ತಗಾದೆ ತೆಗೆಯುತ್ತಿರುವ ರಶಿಯವು, ೨೦೧೪ರಲ್ಲಿ ಕ್ರಿಮಿಯಾವನ್ನು ವಶಪಡಿಸಿಕೊಂಡಿತು. ಪ್ರಸಕ್ತ ೨೦೨೪ನೇ ಸಾಲಿನ ಆರಂಭದಿಂದಲೇ ಉಕ್ರೇನಿನ ಮೇಲೆ ಯುದ್ಧ ಸಾರಿದೆ. ಕಳೆದ ಶತಮಾನದ ೧೯೪೮ರಲ್ಲಿ, ಜಗತ್ತಿನ ವಿವಿಧೆಡೆ ಇದ್ದ ಇಸ್ರೇಲಿಗಳು, ವಾಗ್ದತ್ತ ನಾಡು ಎಂದು ಗುರುತಿಸಲಾಗುವ ಪ್ರದೇಶದಲ್ಲಿ ನೆಲೆನಿಂತು, ಅಲ್ಲಿನವರನ್ನು ಹೊರಹಾಕಿ ತಮ್ಮದೇ ಆದ ಇಸ್ರೇಲ್ ದೇಶವನ್ನು ಕಟ್ಟಿಕೊಂಡರು. ಅಂದಿನಿಂದಲೂ ಅರಬರು ಮತ್ತು ಇಸ್ರೇಲಿಗಳ ನಡುವಿನ ಜಗಳಕ್ಕೆ ಕೊನೆ ಎಂಬುದಿಲ್ಲ. ಪ್ರಸಕ್ತ ವರ್ಷ ಅದು ಮತ್ತಷ್ಟು ವಿಕೋಪಕ್ಕೆ ಹೋಗಿದೆ. ಅಲ್ಲಿ ಭೂಮಿಯ ಮೇಲೆ ತಾತ್ಕಾಲಿಕ ಗಡಿಯಷ್ಟೇ ಕಾಣುತ್ತದೆ.

ಭಾವಭಕುತಿಗೆ ತಕ್ಕಂಥ ನಕಾಶೆಗಳು :

ವಾಸ್ತವ ಗಡಿ ರೇಖೆ, ನಿಜ ನಿಯಂತ್ರಣದ ರೇಖೆ, ವಿವಾದಿತ ಪ್ರದೇಶ, ಆಕ್ರಮಿತ ಪ್ರದೇಶ, ತಾತ್ಕಾಲಿಕ ನಿಯಂತ್ರಣದ ಗಡಿ ರೇಖೆ ಇತ್ಯಾದಿ ಬಗೆಯ ಗಡಿಗಳ ಕುರಿತಂತೆ ದೇಶ ದೇಶಗಳು ತಮ್ಮ ಗಡಿಗಳ ಕುರಿತು ತಲೆಕೆಡಿಸಿಕೊಳ್ಳುತ್ತಿದ್ದರೆ, ಈಗ ಎಲ್ಲರ ಬೆರಳ ತುದಿಗೆ ಲಭ್ಯವಾಗುವ ಗೂಗಲ್ ನಕ್ಷೆಗಳಲ್ಲಿ ಆಯಾ ದೇಶಗಳವರ ಭಾವ ಭಕುತಿಗೆ ತಕ್ಕಂತೆ ಗಡಿಗಳನ್ನು/ ಎಲ್ಲೆಗಳನ್ನು ಗುರುತಿಸಲಾಗುತ್ತಿದೆ! ಜನ ಸಾಮಾನ್ಯರ ತಲೆಯಲ್ಲಿ ಅವೇ ಮಾದರಿಯ ನಕಾಶೆಗಳು ಅಚ್ಚೊತ್ತಿ ಕೂತಿರುತ್ತವೆ. ಅವೇ ಅವರಿಗೆ ಅಂತಿಮ ಸತ್ಯ. ಅವರವರಿಗೆ ಎಲ್ಲವೂ ಶುಭಂ.

ಭಾರತದ ದೇಶವಾಸಿಗಳು ನೋಡುವ ಗೂಗಲ್ ನಕ್ಷೆಯಲ್ಲಿ, ಜಮ್ಮು ಮತ್ತು ಕಾಶ್ಮೀರದ ಎಲ್ಲ ಪ್ರದೇಶಗಳು ಭಾರತದ ನೇರ ಆಡಳಿತದಲ್ಲಿವೆ ಎಂದು ತೋರಿಸಲಾಗುತ್ತದೆ. ಕಾಶ್ಮೀರ ಭಾರತದ ಭೂಶಿರ, ಮುಕುಟಮಣಿ ಎಂದು ಭಾರತೀಯರು ಸಂಭ್ರಮಿಸುತ್ತಾರೆ.

ಆದರೆ, ಭಾರತ ದೇಶವನ್ನು ಬಿಟ್ಟು ಹೊರದೇಶಗಳಲ್ಲಿನ ದೇಶವಾಸಿಗಳು ಅಥವಾ ಕೆಲಸದ ನಿಮಿತ್ತ ಇಲ್ಲವೇ ಇನ್ನಾವುದೋ ಕಾರಣದಿಂದ ಭಾರತದ ನೆಲ ಬಿಟ್ಟು ಬೇರೆ ದೇಶದಲ್ಲಿರುವ ಭಾರತೀಯರು, ಗೂಗಲ್ ಒದಗಿಸುವ ಭಾರತದ ನಕ್ಷೆಯನ್ನು ನೋಡಿದರೆ, ಜಮ್ಮು ಮತ್ತು ಕಾಶ್ಮೀರದ ಕುರಿತಂತೆ ವಿವಾದ ಇರುವುದನ್ನು ದೃಢಪಡಿಸಲು ಭಾರತದ ಮುಕಟಮಣಿಯನ್ನು ಅಡ್ಡಡ್ಡ ಸೀಳಿರುವುದನ್ನು ಕಾಣುವರು.

ಅಪ್ರಿಯ ಸತ್ಯ, ಅನುಕೂಲಕರ ನಡಾವಳಿ :

ವಾಸ್ತವದಲ್ಲಿ ಭಾರತದ ಮುಕುಟಮಣಿ ಕಾಶ್ಮೀರವು ಭಾರತ, ಪಾಕಿಸ್ತಾನ ಮತ್ತು ಚೀನಾಗಳಲ್ಲಿ ಹರಿದು ಹಂಚಿಹೋಗಿದೆ. ಅದನ್ನೇ ಗೂಗಲ್ ಆನ್ ಲೈನ್ ನಕ್ಷೆ ತೋರಿಸುತ್ತದೆ. ಭಾರತದಲ್ಲಿರುವ ಭಾರತೀಯರಿಗೆ ಅದು ಅಪ್ರಿಯ ಸತ್ಯ.

ದೇಶ ದೇಶಗಳ ಪ್ರಮಾಣಬದ್ಧ ಗಡಿ ನಿರ್ಧರಿಸುವುದು ಆಗದ ಕೆಲಸ, ಸದಾ ಹಿಮಾಚ್ಛಾದಿತ, ಕೊನೆಯಿಲ್ಲದ ಶೀತ ಹಾಗೂ ಉಷ್ಣದ ವಾತಾವರಣದ ಮರಭೂಮಿಗಳಲ್ಲಿ, ವಿಪರೀತ ವಾತಾವರಣದ ವೈಪರೀತ್ಯದ ಜನವಸತಿಯೇ ಅಸಾಧ್ಯ ಎಂಬಂಥ ಪ್ರದೇಶಗಳಲ್ಲಿ ಗಡಿ ಗುರುತಿಸುವುದು ಕಷ್ಟಸಾಧ್ಯ. ನಿಬಿಡ ಕಾಡಿನಲ್ಲಿ ಹರಿಯುವ ಅಮೆಜಾನ್ ನದಿಯು ತನ್ನ ಹರಿವಿನ ಮಾರ್ಗವನ್ನು ಪದೇ ಪದೇ ಬದಲಿಸುವುದರಿಂದ, ಅದನ್ನು ನೈಸರ್ಗಿಕ ಗಡಿಯಾಗಿ ಹಂಚಿಕೊಂಡ ದೇಶಗಳ ಗಡಿಯನ್ನು ನಿರ್ಧರಿಸುವುದು ಇನ್ನೂ ಕಠಿಣವಾದ, ಪ್ರಯಾಸದ ಕೆಲಸ.

ಹದಿನೈದನೇ ಶತಮಾನದಲ್ಲಿ, ಭಾರತವೂ ಸೇರಿದಂತೆ ಹಲವು ದೇಶಗಳನ್ನು ತನ್ನ ವಸಾಹತು ಮಾಡಿಕೊಂಡ ಈಸ್ಟ್ ಇಂಡಿಯಾ ಕಂಪೆನಿ ವಾಣಿಜ್ಯ ಸಂಸ್ಥೆಯಂತೆಯೇ, ವಾಣಿಜ್ಯ ಸಂಸ್ಥೆಯಾದ ಗೂಗಲ್ ವಾಣಿಜ್ಯ ಸಂಸ್ಥೆಯ ಧ್ಯೇಯ `ಜಗತ್ತಿನ ವಿಷಯ ಕ್ರೋಢಿಕರಣ’ವಾಗಿದ್ದರೂ, ಆಯಾ ದೇಶಗಳ ನಕಾಶೆಗಳ ವಿಷಯಕ್ಕೆ ಬಂದಾಗ ತನ್ನ ಇಷ್ಟದಂತೆಯೇ, ತನಗೆ ಅನುಕೂಲಕರವಾಗುವಂತೆ ನಡೆದುಕೊಳ್ಳುತ್ತದೆ.

ಪಟ್ಟಣ ದೇಶ ಇಟಲಿಯ ರೋಮ್ ಪಟ್ಡಣದ ವ್ಯಾಟಿಕನ್, ಕೆರಿಬಿಯನ್ ಸಮುದ್ರ ಮತ್ತು [ಒಸಿಯಾನ -ದಕ್ಷಿಣ ಪೆಸಿಫಿಕ್] ಶಾಂತಸಾಗರದ ನಡುಗಡ್ಡೆ ದೇಶಗಳನ್ನು ಹಿಡಿದು ವಿಶಾಲವಾಗಿ ಹರಡಿರುವ ರಶಿಯ, ಕೆನಡಾ ಮತ್ತು ಅಮೆರಿಕ (ಅಮೆರಿಕ ರಾಜ್ಯಗಳ ಒಕ್ಕೂಟ -ಯು ಎಸ್ ಎ) ದೇಶಗಳ, ದಕ್ಷಿಣ ಅಮೆರಿಕದ ಅರ್ಜೆಂಟಿನಾದಿಂದ ಮಧ್ಯ ಆಫ್ರಿಕಾದ ಝಿಂಬಾಬ್ವೆವರೆಗಿನ ಆಯಾ ದೇಶಗಳ ಗಡಿ ರೇಖೆಗಳು ನೀವು ಎಲ್ಲಿಂದ ನೋಡುತ್ತಿದ್ದೀರಿ? ಎಂಬುದನ್ನು ಅವಲಂಬಿಸಿರುತ್ತವೆ.

ಇದೇಕೆ ಹೀಗೆ? ಎಂದರೆ, ಗೂಗಲ್ ಸೇರಿದಂತೆ ಆನ್ ಲೈನ್ ನಕಾಶೆ (ಆಪಲ್, ಬಿಂಗ್ ಇತ್ಯಾದಿ) ಸಿದ್ಧಪಡಿಸುವ ಆನ್ ಲೈನ್ ಸೇವೆ ಒದಗಿಸುವ ಖಾಸಗಿ ವಾಣಿಜ್ಯ ಸಂಸ್ಥೆಗಳವರು ಆ ರೀತಿ ತೋರಿಸುತ್ತಾರೆ ಅಷ್ಟೆ. ಗೂಗಲ್ ಮತ್ತು ಸಂಸ್ಥೆಗಳು ಒದಗಿಸುವ ಆನ್ ಲೈನ್ ನಕಾಶೆಗಳನ್ನು ನೋಡುವ ಶೇಕಡಾ ಎಂಬತ್ತರಷ್ಟು ಜನ, ಅದೇ ಅಂತಿಮ ಎಂದು ಅಂದುಕೊಂಡಿರುತ್ತಾರೆ. ಅದನ್ನೇ ಆಧರಿಸಿ, ಆಯಾ ದೇಶಗಳ ಕುರಿತು ತಮ್ಮದೇ ಆದ ದೃಷ್ಟಿಕೋನಗಳನ್ನು ಬೆಳೆಸಿಕೊಂಡಿರುತ್ತಾರೆ.

ದಿನವೂ ಅಲ್ಪಸ್ವಲ್ಪ ಬದಲಾವಣೆ :

ಆನ್ ಲೈನ್ ನಕಾಶೆ ಸಿದ್ಧಪಡಿಸುವ ಸಿಬ್ಬಂದಿ, ದಿನವೂ ಅಲ್ಪಸ್ವಲ್ಪ ಬದಲಾವಣೆ ಮಾಡುತ್ತಲೇ ಇರುತ್ತಾರೆ. ಈ ಬದಲಾವಣೆಗಳು, ಐತಿಹಾಸಿಕ ಅರಿವು, ಸ್ಥಳೀಯ ಮಾಹಿತಿಗಳಲ್ಲದೇ, ಆಯಾ ದೇಶಗಳ ಅಧಿಕಾರಸ್ಥರ ಬಯಕೆಗೆ ತಕ್ಕಂತೆ, ಕೆಲವೊಮ್ಮೆ ತಮ್ಮ ಮೇಲಿನ ಅಧಿಕಾರಿಗಳ ಅಭಿಷ್ಟೆಯಂತೆ ನಡೆಯುತ್ತಲೇ ಇರುತ್ತವೆ.

ಐತಿಹಾಸಿಕ ತಿಳಿವಳಿಕೆ ಎಂದಾಗ, ಪಂಢರಪುರದ ಕಾನಡಿ ವಿಠಲನ ನೆನಪಾಗುತ್ತದೆ. ಒಂದು ಕಾಲದಲ್ಲಿ ಕನ್ನಡ ನಾಡ ವ್ಯಾಪ್ತಿಯಲ್ಲಿದ್ದು, ಕನ್ನಡಿಗರ ಆರಾಧ್ಯ ದೈವವಾಗಿದ್ದ ವಿಠಲನು ನಿಂತ ನೆಲ ಈಗ ನೆರೆಯ ಮಹಾರಾಷ್ಟ್ರದ ಪಾಲಾಗಿದೆ. ಆತನನ್ನು ಪಂಢರಪುರದ `ಕಾನಡಿ ವಿಠಲ’ ಎಂದು ಕರೆಯುವಂತಾಗಿದೆ. ಅವನು ನಿಂತ ನೆಲವನ್ನು ಈಗಿನ ಕನ್ನಡನಾಡಿನ ಭಾಗವಾಗಿ ತೋರಿಸುವುದಕ್ಕೆ ಸಾಧ್ಯವೇ ಆಗುವುದಿಲ್ಲ.

‘ಸರಿಯಾದ ನಕಾಶೆಗಳನ್ನು ಒದಗಿಸುವಲ್ಲಿ ಶ್ರಮಿಸುತ್ತೇವೆ’ ಎನ್ನುವ ಈ ಆನ್ ಲೈನ್ ನಕಾಶೆ ಸಿದ್ಧಪಡಿಸುವವರು, `ಆದಷ್ಟು ನಿಷ್ಪಕ್ಷಪಾತದಿಂದ ಕರ್ಯೆ ನಿರ್ವಹಿಸುತ್ತೇವೆ, ವಿವಾದಿತ ಗಡಿ ಪ್ರದೇಶಗಳನ್ನು ಅಲ್ಲಲ್ಲಿ ಬೂದಿ ಬಣ್ಣದ ಚುಕ್ಕೆಯ ಗೆರೆಯಿಂದ ಗುರುತಿಸಲಾಗಿರುತ್ತದೆ. ಆಯಾ ದೇಶಗಳಲ್ಲಿ ಸ್ಥಳೀಯ ಆಡಳಿತದ ನಿರ್ದೇಶನದಂತೆಯೇ ನಡೆದುಕೊಂಡು ಗಡಿ ಮತ್ತು ಹೆಸರುಗಳನ್ನು ಅಂತಿಮಗೊಳಿಸಲಾಗುತ್ತದೆ’ ಎಂದು ಹೇಳಿಕೊಳ್ಳುತ್ತಾರೆ.

ನಾಲ್ಕು ಬಿಲಿಯನ್ ಡಾಲರ್ ವ್ಯವಹಾರ :

ಸುಮಾರು ಹದಿನೈದು ವರ್ಷಗಳಿಂದ ನಕಾಶೆಗಳ ಸೇವೆ ಒದಗಿಸುತ್ತಿರುವ ಗೂಗಲ್ ಸಂಸ್ಥೆಗೆ ಇದು ಸರಾಸರಿ ಪ್ರತಿವರ್ಷವೂ ನಾಲ್ಕು ಬಿಲಿಯನ್ ಡಾಲರ್ ವ್ಯವಹಾರ. ಈ ವ್ಯವಹಾರಕ್ಕೆ ಪ್ರಾಥಮಿಕವಾಗಿ ಜಾಹಿರಾತು ಪ್ರಧಾನ ಮೂಲವಾಗಿದ್ದರೂ, ಸ್ಥಳ ಮಾಹಿತಿ ಆಧಾರಿಸಿದ ಊಬರ್ ನಂಥ ಸಾರಿಗೆ ಸಂಸ್ಥೆಗಳು, ವಿವಿಧ ಸೇವೆಗಳನ್ನು ಒದಗಿಸುವ (ಸಾರಿಗೆ ದಟ್ಟಣೆ, ಹೊಟೇಲು, ಆಸ್ಪತ್ರೆ ಇತ್ಯಾದಿಗಳ ಇರುವಿಕೆ) ವಿವಿಧ ಮಾಹಿತಿಗಳೂ ಆದಾಯದ ಮೂಲಗಳು. ಹೆದ್ದಾರಿಯ ದಟ್ಟಣೆಯ ಕಂಡು ವಾಹನಗಳು ವಸತಿ ಪ್ರದೇಶದ ರಸ್ತೆಗಳಿಗೆ ನುಗ್ಗಿದಾಗ ಅಲ್ಲಿನ ನಿವಾಸಿಗಳಿಗೆ ಆಗುವ ಕಿರಿಕಿರಿ, ಅದರ ಅಡ್ಡ ಪರಿಣಾಮ.

ಸಾಂಪ್ರದಾಯಿಕವಾಗಿ ಸಮಾನ ಎತ್ತರಗಳನ್ನು ಕೂಡಿಸುವ ಕಾಂಟೂರ್ ಗೆರೆಗಳ, ವಿವಿಧ ಬಗೆಯ ಅಳತೆಯ ಲೆಕ್ಕಾಚಾರಗಳ ಆಧಾರದ ಮೇಲೆ ನಿಧಾನವಾಗಿ ಕೈಯಿಂದ ಸಿದ್ಧವಾಗುವ ಅಗಲ ಉದ್ದ ಆಯಾಮದ ಹಾಳೆಯ ಮೇಲಣ ನಕಾಶೆಗಳಿಗಿಂತ, ತಕ್ಷಣವೇ ಪಿ. ಸಿ, ಮೊಬೈಲ್ ತೆರೆಗಳ ಮೇಲೆ ಲಭ್ಯವಾಗುವ ಆನ್ ಲೈನ್ ಮಾದರಿಯ ನಕಾಶೆಗಳನ್ನು ಆಧುನಿಕ ಸಂವಹನ ಮಾಧ್ಯಮವನ್ನು ಬಳಸುತ್ತವೆ. ಉಪಗ್ರಹ ಚಿತ್ರಗಳನ್ನು (ಸೆಟಲೈಟ್ ಇಮೇಜ್), ಕಂಪ್ಯೂಟರ್ ಮಾದರಿ, ಕೈ ಯಿಂದ ದಾಖಲಿಸಿದ ಗಡಿ, ಗುರುತಿನ ಜಾಗಗಳ ಆಧಾರದ ಮೇಲೆ ಗೂಗಲ್ ನಕಾಶೆಗಳನ್ನು ಸಿದ್ಧಪಡಿಸಲಾಗುತ್ತದೆ. ಹೊಸ ಕಟ್ಟಡ, ರಸ್ತೆ ಮೊದಲಾದವನ್ನು ಗುರುತಿಸುತ್ತಾ, ಆಸ್ಪತ್ರೆಗಳಿಗೆ ಸುಲಭದ ಹತ್ತಿರದ ದಾರಿ ಮೊದಲಾವುಗಳನ್ನು ಸೇರಿಸುತ್ತಾ ಹೋಗಲಾಗುತ್ತದೆ.

ನಿಮಗಾಗಿ ನೀವೊಂದುಕೊಂಡ ನಕಾಶೆಗಳು :

ಗಡಿ ಕುರಿತು ವಿವಾದಗಳು ಉಂಟಾದಾಗ, ಬೇರೆ ಬೇರೆ ದೇಶಗಳಲ್ಲಿನ ಜನ, ಬೇರೆ ಬೇರೆ ರೀತಿಯ ನಕಾಶೆಗಳನ್ನು ನೋಡುವಂತಾಗುತ್ತದೆ. ಜಪಾನ್ ಮತ್ತು ಕೋರಿಯ ಪರ್ಯಾಯ ದ್ವೀಪಗಳ ನಡುವಿನ ಸಮುದ್ರವನ್ನು ಜಪಾನ್ ಸಮುದ್ರ ಎಂದು ಕರೆಯುವುದು ವಾಡಿಕೆ.

ಆದರೆ, ದಕ್ಷಿಣ ಕೋರಿಯ ದೇಶದಲ್ಲಿ ಗೂಗಲ್ ಒದಗಿಸುವ ನಕಾಶೆಯಲ್ಲಿ ಅದನ್ನು ಪೂರ್ವ ಸಮುದ್ರ ಎಂದು ಹೆಸರಿಸಲಾಗಿದೆ! ಸೌದಿ ಅರೆಬಿಯ ಮತ್ತು ಇರಾನ್ ದೇಶಗಳನ್ನು ಪ್ರತ್ಯೇಕಿಸುವ ಸಮುದ್ರವನ್ನು ಆನ್ ಲೈನ್ ನಲ್ಲಿ, ನೋಡುವವರು ಇರುವ ನೆಲವನ್ನು ಆಧರಿಸಿ ಪರ್ಷಿಯನ್ ಕೊಲ್ಲಿ ಮತ್ತು ಅರಬಿಯನ್ ಕೊಲ್ಲಿ ಎಂದು ಕರೆಯಲಾಗುತ್ತದೆ.

ಗಡಿಯಲ್ಲಿನ ಕೆಲವು ಸೂಕ್ಷö್ಮ ಬದಲಾವಣೆಗಳನ್ನು, ಆಯಾ ದೇಶಗಳ ನಾಗರಿಕರು, ಆಡಳಿತಗಾರರು ಗಂಭೀರವಾಗಿಯೇ ಗಮನಿಸುತ್ತಿರುತ್ತಾರೆ.

ಕಳೆದ ೨೦೧೦ರಲ್ಲಿ ಗೂಗಲ್ ನಕಾಶೆಯಲ್ಲಿ ಕೊಸ್ಟರಿಕಾ ಮತ್ತು ನಿಕಾರುಗ್ವ ದೇಶಗಳ ನಡುವಣ ಗಡಿಯನ್ನು ಸ್ವಲ್ಪ ಬದಲಾವಣೆ ಮಾಡಿ ಒಂದು ದೇಶದ ನಡುಗಡ್ಡೆಯನ್ನು ಇನ್ನೊಂದು ದೇಶಕ್ಕೆ ಸೇರಿಸಲಾಗಿತ್ತು. ತಕ್ಷಣ ಆಕ್ಷೇಪಗಳು ಬಂದವು. ಹಿಂದೆಯೇ, ಗೂಗಲ್ ತನ್ನ ತಪ್ಪನ್ನು ತಿದ್ದಿಕೊಂಡಿತು. ರಕ್ತಪಾತ ಆಗುವುದು ತಪ್ಪಿತು.

ಮಾರ್ಗದರ್ಶಿ ಪಾಲಿಸದವರಿಗೆ ನಿಷೇಧ :

ಚೀನಾ, ದಕ್ಷಿಣ ಕೋರಿಯಾ ಮತ್ತು ಇನ್ನೊಂದಿಷ್ಟು ದೇಶಗಳು ತಮ್ಮ ದೇಶದ ನಕಾಶೆಗಳು ಹೇಗಿರಬೇಕು? ಎಂಬುದನ್ನು ನಿರ್ಧರಿಸುತ್ತವೆ. ತಮ್ಮ ಮಾರ್ಗದರ್ಶಿಗಳನ್ನು ಪಾಲಿಸದವರ ಮೇಲೆ ಆಯಾ ದೇಶಗಳು ಕ್ರಮ ಜರುಗಿಸಿದ್ದೂ ಉಂಟು. ಚೀನಾವು ಪ್ರತಿಯೊಂದು ನಕಾಶೆಯಲ್ಲಿ ತೋರಿಸಲಾಗುವ ಗಡಿಯನ್ನು ಸೂಕ್ಷö್ಮವಾಗಿ ಪರಿಶೀಲಿಸುತ್ತದೆ. ಚೀನಾವು ತನ್ನ ನೆಲದಲ್ಲಿ ಗೂಗಲ್ ಅನ್ನು ನಿಷೇಧಿಸಿದೆ. ಗೂಗಲ್, ಹಾಂಗ್ ಕಾಂಗ್ ಮತ್ತು ಮಕಾವೋಗಳಲ್ಲಿ ಇದುವರೆಗೂ ಸೇವೆ ಒದಗಿಸುತ್ತಿತ್ತು. ಹಾಂಗ್ ಕಾಂಗ್ ಈಗ ಚೀನಾದ ಪಾಲಾಗಿರುವುದು ಹೊಸ ಬೆಳವಣಿಗೆ.

ಆನ್ ಲೈನ್ ನಲ್ಲಿ ನಕಾಶೆಯ ಸೌಲತ್ತನ್ನು ಒದಗಿಸುವ ವಾಣಿಜ್ಯ ಸಂಸ್ಥೆಗಳು ತಮ್ಮದೇ ಆದ ನಿಲುವನ್ನು ಹೊಂದಿರುತ್ತವೆ. ದಕ್ಷಿಣ ಅಮೆರಿಕೆಯ ಚಿಲಿ ಮತ್ತು ಅರ್ಜಿಂಟಿನಾ ಮಧ್ಯದ ಗಡಿಯನ್ನು ಗೂಗಲ್ ಗುರುತಿಸಿಲ್ಲ. ಆ ಉಭಯ ದೇಶಗಳು ಗಡಿಯ ಕುರಿತು ಉಭಯತರಿಗೆ ಒಪ್ಪಿಗೆಯಾಗುವ ಒಂದು ಗಡಿ ರೇಖೆ ಗುರುತಿಸಿಲ್ಲ ಎಂಬುದು ಅದರ ವಾದ. ಆದರೆ, ಆಪಲ್ ಮತ್ತು ಮೈಕ್ರೊಸಾಫ್ಟ್ (ಬಿಂಗ್) ಇತ್ಯಾದಿ ಸಂಸ್ಥೆಗಳು ಚುಕ್ಕೆಯ ಗೆರೆಗಳನ್ನು ಎಳೆದು ಚಿಲಿ ಮತ್ತು ಅರ್ಜಿಂಟಿನಾ ನಡುವಿನ ಗಡಿಯನ್ನು ಗುರುತಿಸಿವೆ.

ಅದೇ ಗೂಗಲ್ ಸಂಸ್ಥೆ ಕೆಲವೊಮ್ಮೆ ಒಂದು ಪಕ್ಷವನ್ನು ಸೇರಿಕೊಂಡದ್ದೂ ಇದೆ. ಯುಕ್ರೇನ್ ಮತ್ತು ರಶಿಯಾದ ನಡುವಿನ ಕ್ರಿಮಿಯನ್ ಪರ್ಯಾಯ ದ್ವೀಪವನ್ನು ರಶಿಯಕ್ಕೆ ಸೇರಿದ್ದೆಂದು ತೋರಿಸುತ್ತದೆ. ಏಕೆಂದರೆ, ರಶಿಯ ೨೦೧೪ರಲ್ಲಿ ಕ್ರಿಮಿಯನ್ ಪರ್ಯಾಯ ದ್ವೀಪವನ್ನು ತನ್ನ ವಶಕ್ಕೆ ಪಡೆದಿದೆ. ಅದರ ಮೇಲೆ ಹಕ್ಕು ಸಾಧಿಸುತ್ತಿರುವ ಯುಕ್ರೇನ ದೇಶದಲ್ಲಿ ಮತ್ತು ಇತರೆಡೆಗಳಲ್ಲಿ ಗೂಗಲ್, ಚುಕ್ಕೆಗಳ ಗೆರೆ ಎಳೆದು ಗಡಿ ತೋರಿಸಿದೆ. ಒತ್ತಾಯಕ್ಕೆ ಮಣಿದ ಆಪಲ್ ಸಂಸ್ಥೆಯು ೨೦೧೯ರಿಂದ, ರಶಿಯದಲ್ಲಿದ್ದವರಿಗೆ ಕ್ರಿಮಿಯನ್ ಪರ್ಯಾಯ ದ್ವೀಪ, ರಶಿಯದ್ದು ಎಂದು ಸ್ಪಷ್ಟವಾಗಿ ತೋರಿಸತೊಡಗಿದೆ.

ಜಮ್ಮು ಕಾಶ್ಮೀರದ ನಕಾಶೆಗಳು:

ಬ್ರಿಟಿಷರು ಭಾರತವನ್ನು ತೊರೆದರೂ ಪೋರ್ಚುಗೀಜರು ತಮ್ಮ ವಸಾಹತುವಾಗಿದ್ದ ಗೋವಾವನ್ನು ತೊರೆದಿರಲಿಲ್ಲ, ನಿರಂತರವಾಗಿ ನಡೆದಿದ್ದ ವಿಮೋಚನಾ ಚಳುವಳಿ ಹಾಗೂ ೧೯೬೧ರಲ್ಲಿ ಸೇನಾ ಕಾರ್ಯಾಚರಣೆಯ ನಂತರ ಅದು ಭಾರತದ ತೆಕ್ಕೆಗೆ ಬಂದಿತು. ಬ್ರಿಟಿಷರ ದಾಸ್ಯದಿಂದ ೧೯೪೭ರಲ್ಲಿ ಮುಕ್ತಿಹೊಂದಿದ ಭಾರತ ಸ್ವತಂತ್ರಗೊಂಡ ಸಂದರ್ಭದಲ್ಲಿ, ಎಲ್ಲಾ ಸಂಸ್ಥಾನಿಕರು ಭಾರತ ಒಕ್ಕೂಟವನ್ನು ಸೇರಿದರು.

ಆದರೆ, ಹೈದರಾಬಾದಿನ ನಿಜಾಮ ಒಪ್ಪದಾದಾಗ, ಬಲವಂತದಿಂದ ಸೇನಾ ಕರ್ಯಾಾಚರಣೆ ನಡೆಸಿ ಅದನ್ನು ಭಾರತ ಒಕ್ಕೂಟಕ್ಕೆ ಸೇರಿಸಿಕೊಳ್ಳಲಾಯಿತು.

ಹೈದರಾಬಾದಿನ ನಿಜಾಮನಂತೆಯೇ ಜಮ್ಮು ಕಾಶ್ಮೀರದ ಅರಸ ರಾಜಾ ಹರಿಸಿಂಗ, ತಾನೂ ಸ್ವತಂತ್ರವಾಗಿಯೇ ಇರಬೇಕು ಎಂದುಕೊಂಡಿದ್ದ, ಆದರೆ ಜಮ್ಮುವಿನ ಪಶ್ಚಿಮ ಭಾಗದಲ್ಲಿ ಬಹುಸಂಖ್ಯಾತರಾಗಿದ್ದ ಮಹಮ್ಮದೀಯರು ಮತ್ತು ಗಿಲ್ಗಿಟ್ ಬಲ್ತಿಸ್ತಾನದ ನಿವಾಸಿಗಳು ಪಾಕಿಸ್ತಾನ ಸೇರಲು ಬಯಸಿದ್ದರು. ಪಾಕಿಸ್ತಾನದ ಬಗ್ಗೆ ಒಲವಿದ್ದವರು ಅರಸನ ವಿರುದ್ಧ ಪಾಕ್ ಸೇನೆಯ ಬೆಂಬಲದೊಂದಿಗೆ ದಂಗೆ ಎದ್ದಿದ್ದರು. ಅವರನ್ನು ಸದೆ ಬಡೆಯಲು ಸಾಧ್ಯವಾಗದಿದ್ದಾಗ, ಅರಸ ಹರಿಸಿಂಗ್ ಕೆಲವು ಷರತ್ತುಗಳೊಂದಿಗೆ ಭಾರತ ಒಕ್ಕೂಟದೊಂದಿಗೆ ಸೇರಲು ಒಪ್ಪಿಕೊಂಡ.

ಭಾರತೀಯ ಸೇನೆಯು, ಕಾಶ್ಮೀರದಲ್ಲಿನ ಆ ದಂಗೆಯನ್ನು ಬಗ್ಗು ಬಡಿಯಿತು. ಆಗ ಪಾಕಿಸ್ತಾನ ಅಧಿಕೃತವಾಗಿ ಮಧ್ಯಪ್ರವೇಶಿಸಿತು. ಎರಡೂ ದೇಶಗಳ ಸೇನೆಗಳು ಹೋರಾಟ ಮಾಡುತ್ತ ನಿಂತ ಪ್ರದೇಶವೇ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ನಿಯಂತ್ರಣ ರೇಖೆ (ಲೈನ್ ಆಫ್ ಕಂಟ್ರೋಲ್) ಆಗಿದೆ.

ಸೇನಾ ನಿಯಂತ್ರಣ ರೇಖೆ ಅನಧಿಕೃತ ಗಡಿ :

ಈ ಬೆಳವಣಿಗೆಗಳ ವಿರುದ್ಧ ಭಾರತ ವಿಶ್ವಸಂಸ್ಥೆಯ ಮೊರೆಹೋಯಿತು. ಆರು ದಶಕಗಳಿಂದ ಈ ಗಡಿ ವಿವಾದ ಹಾಗೆಯೇ ಮುಂದುವರೆದಿದೆ. ಕಳೆದ ೧೯೪೯ರಿಂದಲೂ, ಇದೆ ಸೇನಾ ನಿಯಂತ್ರಣ ರೇಖೆಯೇ, ಭಾರತ ಮತ್ತು ಪಾಕಿಸ್ತಾನಗಳ ನಡವಿನ ಅನಧಿಕೃತ ಗಡಿಯಾಗಿ ಉಳಿದುಕೊಂಡಿದೆ. ಜಮ್ಮು ಕಾಶ್ಮೀರದ ಪಶ್ಚಿಮದ ಸಣ್ಣ ಪಟ್ಟಿ ಮತ್ತು ಕಾಶ್ಮೀರ ಕೊಳ್ಳದ ಉತ್ತರದ ಬಹುತೇಕ ಭಾಗ ಪಾಕಿಸ್ತಾನದ ವಶದಲ್ಲಿವೆ.

ಬ್ರಿಟಿಷರು ಬಿಟ್ಟುಕೊಟ್ಟ ಭಾರತವು ಅಫಘಾನಿಸ್ತಾನದೊಂದಿಗೆ ಗಡಿ ಹಂಚಿಕೊಂಡಿತ್ತು. ಆದರೆ, ಆ ಗಡಿ ಪಾಕಿಸ್ತಾನದ ಪಾಲಾಗಿದೆ. ಏಕೆಂದರೆ, ಹಿಂದೊಮ್ಮೆ ಬೌದ್ಧ ಕೇಂದ್ರವಾಗಿದ್ದ ಗಿಲ್ಗಿಟ್ ಹಾಗೂ ಬಲ್ತಿಸ್ತಾನದ ಬಹುತೇಕ ಪ್ರದೇಶ ಅಜಾದ್ ಜಮ್ಮು ಕಾಶ್ಮೀರವಾಗಿ, ಪಾಕಿಸ್ತಾನದ ಆಡಳಿತದ ವಶದಲ್ಲಿಯ ಕಾಶ್ಮೀರ್ ಆಗಿ ಉಳಿದುಕೊಂಡಿದೆ. ಈ ಅಜಾದ್ ಜಮ್ಮು ಕಾಶ್ಮೀರ, ಪಾಕ್ ಆಕ್ರಮಿತ ಪ್ರದೇಶ.

ಜಮ್ಮು ಕಾಶ್ಮೀರದ ಇತಿಹಾಸದ ಅರಿವಿಲ್ಲದ, ಪಾಕಿಸ್ತಾನ ಮತ್ತು ಚೀನಾದೊಂದಿಗೆ ನಡೆದ ಯುದ್ಧಗಳಲ್ಲಿ, ಭಾರತ ಆ ಎರಡೂ ದೇಶಗಳ ಸೇನೆಗಳನ್ನು ಸೋಲಿಸಿ/ ಹಿಮ್ಮೆಟ್ಟಿಸಿ ಯುದ್ಧಗಳನ್ನು ಗೆದ್ದಿದೆ ಎಂದು ಹೆಮ್ಮೆಯಿಂದ ಬೀಗುವ ನಮ್ಮನ್ನು- ಭಾರತೀಯರನ್ನು ಈ ಆಕ್ರಮಿತ ಪ್ರದೇಶಗಳ ಚುಕ್ಕೆ ಗೆರೆಯ ಗಡಿಗಳು, ಗೆಲುವು ಸೋಲಿನ ಅಯೋಮಯಕ್ಕೆ ದೂಡುತ್ತವೆ.

ಮುಂದೆ ೧೯೬೩ರಲ್ಲಿ ಪಾಕಿಸ್ತಾನ, ತನ್ನ ವಶದಲ್ಲಿದ್ದ ಕಾರಾಕೋರಂ ಪರ್ವತ ಶ್ರೇಣಿಯಲ್ಲಿನ ಸ್ವಲ್ಪ ಪ್ರದೇಶವನ್ನು ಚೀನಾಗೆ ಒಪ್ಪಿಸಿದೆ. ಇದನ್ನು ಭಾರತ ಒಪ್ಪಿಕೊಂಡಿಲ್ಲ. ಸಿಯಾಚಿನ್ ನಿರ್ಗಲ್ ನದಿ ಹರಿವಿನ ಕೆಲವಷ್ಟು ಪ್ರದೇಶದ ಮೇಲೆ ಭಾರತ ೧೯೮೪ ರಿಂದ ಹಿಡಿತ ಸಾಧಿಸಿದೆ. ಕಳೆದ ೨೦೧೯ರ ಸಾಲಿನಲ್ಲಿ ಭಾರತವು, ಜಮ್ಮು ಕಾಶ್ಮೀರದ ರಾಜ್ಯದ ವಿಶೇಷ ಸ್ಥಾನವನ್ನು ಅಳಿಸಿ, ಅಖಂಡ ಜಮ್ಮು ಕಾಶ್ಮೀರವನ್ನು ಉತ್ತರದಲ್ಲಿ ಲಡಾಖ್ ಮತ್ತು ನೈರುತ್ಯದಲ್ಲಿನ ಪ್ರದೇಶಗಳನ್ನು ಜಮ್ಮು ಕಾಶ್ಮೀರವೆಂದು ವಿಭಜಿಸಿ ಅವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿದೆ.

ಮ್ಯಾಕ್ ಮೋಹನ್ ಮತ್ತು ವಾಸ್ತವ ಗಡಿ ರೇಖೆ :

ಉತ್ತರದ ತುತ್ತ ತುದಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪೂರ್ವ ಭಾಗದಲ್ಲಿ ಹಿಮಾಲಯದ ಪರ್ವತ ಶ್ರೇಣಿಯಲ್ಲಿನ ಸ್ವಲ್ಪ ಪ್ರದೇಶ ಚೀನಾದ ವಶದಲ್ಲಿದೆ. ಚೀನಾ ೧೯೬೨ರಲ್ಲಿ ಭಾರತದೊಂದಿಗೆ ಲಡಾಖ್ ಪ್ರದೇಶದಲ್ಲಿ ಮತ್ತು ೧೯೧೪ರಲ್ಲಿ ಸರ್ ಹೆನ್ರಿ ಮ್ಯಾಕ್ ಮೋಹನ್, ಅಂದಿನ ಟಿಬೇಟ್ ಅಧಿಕಾರಿಗಳೊಂದಿಗೆ ನಡೆದ ಮಾತುಕತೆಯಲ್ಲಿ ಅಧಿಕೃತವಾಗಿ ಗುರುತಿಸಿದ್ದ ಟಿಬೇಟ್ ಮತ್ತು ಈಶಾನ್ಯ ದಿಕ್ಕಿನಲ್ಲಿನ ಮ್ಯಾಕ್ ಮೋಹನ್ ಗಡಿ ಗುಂಟ ನಡೆಸಿದ ಯುದ್ಧದ ಸಂದರ್ಭದಲ್ಲಿ, ಚೀನಾದ ಸೇನೆ ಭಾರತದ ಗಡಿಯನ್ನು ದಾಟಿ ಬಂದಿತ್ತು. ನಂತರ ಚೀನಾ ಏಕಪಕ್ಷೀಯವಾಗಿ ಯುದ್ಧ ವಿರಾಮ ಘೋಷಿಸಿತು.

ಚೀನಾ ಸೇನೆ ಅರುಣಾಚಲದಿಂದ ಹಿಂದೆ ಸರಿದರೂ, ಲಡಾಕಿನ ಅಕ್ಷಾಯ್ ಚಿನ್ ಪ್ರದೇಶವನ್ನು ತನ್ನ ವಶದಲ್ಲಿಯೇ ಇರಿಸಿಕೊಂಡಿತು. ಅಂದಿನಿಂದ ಆ ಪ್ರದೇಶವು ಚೀನಾದಲ್ಲಿಯೇ ಉಳಿಯಿತು. ಅದು ಈಗ, ಚೀನಾ ಆಕ್ರಮಿತ ಪ್ರದೇಶ. ಅಲ್ಲಿನ ಭಾರತ ಮತ್ತು ಚೀನಾ ಗಡಿಯ ರೇಖೆಯನ್ನು, ವಾಸ್ತವ ನಿಯಂತ್ರಣದ ಗಡಿ ರೇಖೆ (ಎಲ್ ಎ ಸಿ- ಲೈನ್ ಆಫ್ ಆಕ್ಚುವಲ್ ಕಂಟ್ರೋಲ್) ಎಂದು ಕರೆಯಲಾಗುತ್ತದೆ.

ಈ ವಿವರಗಳನ್ನು ತೋರಿಸುವ ನಕಾಶೆ, ಸಹಜವಾಗಿ ಭಾರತದ ನೆಲದಲ್ಲಿರುವವರ ಕಣ್ಣಿಗೆ ಬೀಳುವುದೇ ಇಲ್ಲ. ಅವನ್ನು ಕಾಣಬೇಕೆಂದರೆ, ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ), ಗಡಿ ನಿಯಂತ್ರಣ ರೇಖೆ (ಎಲ್ ಒ ಸಿ- ಲೈನ್ ಆಫ್ ಕಂಟ್ರೋಲ್), ಚೀನಾ ವಶದಲ್ಲಿರುವ ಭಾರತಕ್ಕಾಗಿ ವಾಸ್ತವ ಗಡಿ ರೇಖೆ/ ವಾಸ್ತವ ನಿಯಂತ್ರಣ (ಗಡಿ) ರೇಖೆ (ಎಲ್ ಎಸಿ- ಲೈನ್ ಆಫ್ ಆಕ್ಚುವಲ್ ಕಂಟ್ರೋಲ್) ಎಂದು ಜಾಲತಾಣಗಳಲ್ಲಿ ಹುಡುಕಾಟ ನಡೆಸಬೇಕು.

ಈಗಲೂ ಚೀನಾದೊಂದಿಗಿನ ಭಾರತದ ಗಡಿ ಗೊಂದಲ ಇನ್ನೂ ಬಗೆಹರಿದಿಲ್ಲ. ರಾಜಕೀಯ ನಾಯಕರ ಪರಸ್ಪರ ಕೆಸರೆರಚಾಟ ನಿಂತಿಲ್ಲ.

ಭಾರತವು ಬ್ರಿಟಿಷರ ದಾಸ್ಯದಿಂದ ೧೯೪೭ರಲ್ಲೇ ಬಿಡುಗಡೆಯಾದರೂ, ಭಾಷಾವಾರು ಪ್ರಾಂತ್ಯಗಳು ರಚನೆಯಾದದ್ದು ೧೯೫೬ರಲ್ಲಿ. ಮೈಸೂರು ಅರಸರ ಹಳೆಮೈಸೂರು ಮತ್ತು ಹೈದರಾಬಾದ ಕರ್ನಾಟಕ, ಮುಂಬೈ ಕರ್ನಾಟಕ ಮತ್ತು ಬ್ರಿಟಿಷರ ನೇರ ಆಡಳಿತದಲ್ಲಿದ್ದ ಪ್ರದೇಶಗಳು ಸೇರಿದ ಕನ್ನಡ ನಾಡಿಗೆ ಮೈಸೂರು ಎಂದು ನಾಮಕರಣ ಮಾಡಲಾಗಿತ್ತು. ಮುಂದೆ ೧೯೭೩ರಲ್ಲಿ ಕನ್ನಡನಾಡನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು.

ಕರ್ನಾಟಕದ ಗಡಿಗೆ ಅಂಟಿಕೊಂಡಂತೆ ಮಹಾರಾಷ್ಟ್ರ, ಗೋವಾ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳ ರಾಜ್ಯಗಳಿವೆ. ಕನ್ನಡ ಮನೆಮಾತಿನ ಕಾಸರಗೋಡು ಕೇರಳಕ್ಕೆ ಸೇರಿಕೊಂಡಿದೆ. ಮಹಾರಾಷ್ಟ್ರದೊಂದಿಗಿನ ಗಡಿ ವಿವಾದ ಸದಾ ಸದ್ದು ಮಾಡುತ್ತಲೇ ಇರುತ್ತದೆ. ಈ ರಾಜ್ಯಗಳು ಸ್ವತಂತ್ರö್ಯ ದೇಶಗಳಾಗಿದ್ದರೆ, ಅವುಗಳ ಗಡಿ ಕುರಿತಂತೆ ಗೂಗಲ್ ಸಂಸ್ಥೆಯು ಆಯಾ ದೇಶಗಳಿದಂತೆ ಆಯಾ ದೇಶಗಳಲ್ಲಿ ಗಡಿಗಳ ನಕಾಶೆಯನ್ನು ತೋರಿಸುತ್ತಿತ್ತೋ ಏನೋ? ಸದ್ಯಕ್ಕಂತೂ ಅಂಥ ಭಯವಿಲ್ಲ. ನಮ್ಮದು ಯುರೋಪು ಖಂಡದಲ್ಲಿದ್ದಂತೆ ದೇಶಗಳ ಒಕ್ಕೂಟವಲ್ಲ, ರಾಜ್ಯಗಳ ಒಕ್ಕೂಟ.

-ಎಫ್. ಎಂ. ನಂದಗಾವ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x