ಸುಮಾರು ಏಳು ಸಾವಿರ ಕಿಲೋ ಮೀಟರ್ ದೂರದ ಸ್ವೀಡನ್ ನಿಂದ, ಬಾಳೆಕಾಯಿಯ ಹಲ್ವಾ ಮಾಡುವ ವಿಧಾನ ತಿಳಿಸುವಂತೆ ಅಮ್ಮನಿಗೆ ಕರೆ ಮಾಡಿದಾಗ ಆಕೆ, ಯು ಟ್ಯೂಬ್ ಗೆ ಹೋಗಿ ಭಟ್ ಎನ್ ಭಟ್ ಎನ್ನುವ ಚಾನ್ನೆಲ್ ಹುಡುಕಿ, ಅಲ್ಲಿ ಕೊಟ್ಟ ಅಡುಗೆ ವಿಡಿಯೋ ನೋಡಿ ಮಾಡು, ಚೆನ್ನಾಗಿರುತ್ತೆ ಅಂದು ಬಿಡಬೇಕೇ?. ಕೇವಲ ಒಂದು ಸ್ಮಾರ್ಟ್ ಫೋನ್ ಹಾಗೂ 4G ಯ ನೆಟ್ವರ್ಕ್ ಜೊತೆಗೆ ಅಮ್ಮ ಈಗ ಡಿಜಿಟೀಕರಣದ ತೆಕ್ಕೆಗೆ ಬಂದಿರುವ ಬಗ್ಗೆ ನನಗೆ ಸ್ಪಷ್ಟ ಸಂದೇಶ ಸಿಕ್ಕಿತು. ವಿಡಿಯೋದ ವಿವರಗಳು ಕೂಡ ಕನ್ನಡದಲ್ಲಿ ಇರುವುದು ಅಮ್ಮನಿಗೆ ಓದಲು ಸುಲಭ. ಕನ್ನಡ ಟಿ.ವಿ. ವಾಹಿನಿಯ ಧಾರಾವಾಹಿಗಳನ್ನು ಕೂಡ ಮೊಬೈಲ್ ನ ಆಪ್ ನಲ್ಲೇ ತನಗೆ ಬೇಕಾದ ಸಮಯದಲ್ಲಿ ನೋಡುತ್ತಾಳೆ. ಫೇಸ್ಬುಕ್, , ಕನ್ನಡ ಸೈಟ್ಗಳಲ್ಲಿ ಆಗಾಗ ಕಣ್ಣು ಹಾಯಿಸುತ್ತಾಳೆ. ಅಂಗಳದಲ್ಲಿ ಅರಳುವ ಬ್ರಹ್ಮ ಕಮಲದ ಫೋಟೋ ಹೊಡೆದು ತಕ್ಷಣ ಕುಟುಂಬದ ವ್ಹಾಟ್ಸ್ಯಾಪ್ ಬಳಗದಲ್ಲಿ ಅಪ್ಲೋಡ್ ಮಾಡುತ್ತಾಳೆ..
ಮಾಹಿತಿ ತಂತ್ರಜ್ಞಾನ ಎಂಬ ಕ್ರಾಂತಿ
ಹೌದು, ೨೦ ನೆಯ ಶತಮಾನದ ಅಂತ್ಯದ ಸಮಯದಲ್ಲಿ ಚಾಲ್ತಿಗೆ ಬಂದ ಗಣಕ ತಂತ್ರಜ್ಞಾನ , ಇಪ್ಪತ್ತೊಂದನೆಯ ಶತಮಾನದ ಹೊತ್ತಿಗೆ ಅಂತರ್ಜಾಲದ ಬಲದೊಂದಿಗೆ ಮಾಹಿತಿ ತಂತ್ರಜ್ಞಾನವಾಗಿ ವಿಕಸನಗೊಳ್ಳಲು ಆರಂಭಿಸಿತು. ಇದು ಜಗತ್ತಿನಲ್ಲಿ ತಂತ್ರಜ್ಞಾನ ಕ್ರಾಂತಿಯನ್ನೇ ಹುಟ್ಟು ಹಾಕಿತು. ಯಾವುದೇ ಮಾಹಿತಿಗಳನ್ನು ಸೃಷ್ಟಿಸುವ, ಸಂಗ್ರಹಿಸುವ, ಪರಿಷ್ಕರಿಸುವ ಹಾಗೂ ವರ್ಗಾಯಿಸುವ ಕಾರ್ಯ ಅತ್ಯಂತ ನಿಖರ ಹಾಗೂ ಸುಲಭವಾಗಿ, ಅನೇಕ ಸಾಧ್ಯತೆಗಳನ್ನು ಎಲ್ಲ ವಿಭಾಗಗಳಲ್ಲೂ ಹುಟ್ಟಿ ಹಾಕಿತು. ಇದೇ ಸಮಯದಲ್ಲಿ ಇಂಗ್ಲೀಷೇತರ ಭಾಷೆಗಳೂ ಕೂಡ ತಂತ್ರ ಜ್ಞಾನ ಮುಖೇನ ಬರೆದು , ಓದುವಂತಾಗಿ ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳಿಗೂ ಒನ್ಲೈನ್ ವೇದಿಕೆ ಸೃಷ್ಟಿಸಿತು..
ಡಿಜಿಟೀಕರಣದ ಯುಗ
ಈ ಶತಮಾನದ ಇಪ್ಪತ್ತು ವರ್ಷಗಳು ಕಳೆದ ಮೇಲೆ ಡಿಜಿಟೈಜೆಶನ್ ಯುಗ ಅಥವಾ ಡಿಜಿಟೀಕರಣ ಆರಂಭವಾಗಿದೆ. ಮಾಹಿತಿ ತಂತ್ರಜ್ಞಾನವನ್ನು ಸಾಧನವಾಗಿ ಉಪಯೋಗಿಸಿ ಡಿಜಿಟಲ್ ಯುಗ ರೂಪುಗೊಂಡಿದ್ದು ಈ ಕಾಲದ ತಾಂತ್ರಿಕ ಟ್ರೆಂಡ್. ಇದು ಕೇವಲ ಬಳಕೆದಾರರಷ್ಟೇ ಅಲ್ಲದೇ ಅವರ ಹೊರತಾದವರ ಅನುಭವ, ಸಂಪರ್ಕ, ಬಳಕೆಯ ವ್ಯಾಪ್ತಿಯನ್ನೂ ಕೂಡ ಆವರಿಸಿ,ಒಟ್ಟಾರೆ ವ್ಯವಸ್ಥೆ ಸೃಷ್ಟಿಸುವ ಮಾಹಿತಿ (ಡೇಟಾ) ದ ಮೇಲೆ ರೂಪುಗೊಂಡ ಜಾಲ ವ್ಯವಸ್ಥೆ.
ಮನುಕುಲ ವಿಕಸನ ಗೊಳ್ಳಲು ಮೂಲ ಕಾರಣ ಆತನ ಸೃಜನಶೀಲತೆ. ನಲವತ್ತು ಸಾವಿರ ವರ್ಷಗಳ ಹಿಂದೆ ಕೂಡ ಕಲ್ಲು, ಬೆಂಕಿ ಯ ಜೊತೆಗೆ ಆರಂಭವಾದ ಸೃಜನ ಶೀಲತೆಗೆ ಗುಹೆ, ಬಂಡೆಗಳಿಂದ ಹಿಡಿದು ಇವತ್ತಿನ ಐ ಪ್ಯಾಡ್ ನ ಸ್ಕ್ರೀನ್ ವರೆಗೆ, ಮನುಷ್ಯನ ಕಲ್ಪನೆ ಮೂಡಿಸಲು ಮೈಯೋಡ್ಡಿವೆ.
ಇಂದಿನ ಡಿಜಿಟಲ್ ಯುಗ ಕನ್ನಡದ ಮಟ್ಟಿಗೆ ಕೂಡ ಸೃಜನ ಶೀಲತೆಗೆ ಸಶಕ್ತ ವೇದಿಕೆ ಒದಗಿಸಿಕೊಟ್ಟಿದೆ. ಹೆಚ್ಚು ಕಮ್ಮಿ ಇಂದಿನ ಎಲ್ಲ ಮೊಬೈಲು, ಲ್ಯಾಪ್ಟಾಪ್ ನ ಕಾರ್ಯಾಚರಣ ವ್ಯವಸ್ಥೆಗಳು (Operating Systems) ಗಳು , ಬ್ರೌಸರ್ ಗಳು ಕನ್ನಡ ಲಿಪಿಯನ್ನು ನೇರವಾಗಿ ಪ್ರಸ್ತುತಪಡಿಸುವ ಸಾಮರ್ಥ್ಯವನ್ನು ಹೊಂದಿವೆ. ಇಂಗ್ಲಿಷ ಕಾಗುಣಿತವನ್ನು ಉಪಯೋಗಿಸಿ ಕನ್ನಡವನ್ನು ಟೈಪಿಸುವ ಕಾರ್ಯ ಕೂಡ ಕನ್ನಡಿಗರಿಗೆ ರೂಡಿಯಾಗಿದೆ.
ಕನ್ನಡದಲ್ಲಿ ಸೃಜನಶೀಲತೆಯನ್ನು ನಾವು ಹಲವು ನೆಲೆಗಳಲ್ಲಿ ಕಾಣಬಹುದು . ಮಾಧ್ಯಮ, ಸಂಪರ್ಕ,ಮಾಹಿತಿ, ಭೌದ್ಧಿಕತೆ,ಮನರಂಜನೆ,ಶಿಕ್ಷಣ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅನೇಕ ಉದಾಹರಣೆಗಳು ದೊರಕುತ್ತವೆ. ಎಲ್ಲ ಬಗೆಯ ಸೃಜನಶೀಲತೆಗಳೂ ಅರ್ಥಿಕವಾಗಿ ಇಲ್ಲವೇ ಜನಪ್ರಿಯತೆಯನ್ನು ಇಲ್ಲವೇ ಕಲಿಕೆ ಹಾಗೂ ಸ್ಪೂರ್ತಿಯನ್ನು ಗಳಿಸಿಕೊಡುತ್ತದೆ. ಇತ್ತೀಚಿಗೆ ವೈರಲ್ ಆಗುವ ಎಲ್ಲವೂ ಒಂದಲ್ಲ ಒಂದು ಸೃಜನಶೀಲತೆ ಯಿಂದ ಕೂಡಿವೆ.
ರತನ್ ಟಾಟಾ ಅವರು ಹೇಳಿದಂತೆ, ಇವತ್ತಿಗೆ ಒಂದು ಸ್ಮಾರ್ಟ್ ಫೋನ್ ಹಾಗೂ ಡಾಟಾ ಪ್ಲಾನ್ ಇರುವ ಪ್ರತಿಯೊಬ್ಬನೂ ಪ್ರಸಾರಕನೇ (Broadcaster). ಸ್ವಲ್ಪ ಸೃಜನಶೀಲತೆ, ವೈಶಿಷ್ಟ್ಯತೆ ಇದ್ದರೂ ಸಾಕು, ನಿರಂತರ ಮಾಹಿತಿ (ಬರಹ ರೂಪದ , ಚಿತ್ರಗಳ ರೂಪದ, ದೃಶ್ಯ ಹಾಗೂ ಶ್ರವಣ ರೂಪದ ಅಭಿವ್ಯಕ್ತಿ, ನಿರಂತರ ಮಾಹಿತಿಗಳಿಗಳೊಂದಿಗೆ, ಸ್ಮಾರ್ಟ್ ಫೋನ್ ಹಿಡಿದ ಕೈಗಳು, ತೊಡೆಯ ಮೇಲಿನ ಲಾಪ್ಟಾಪ್ – ಇವುಗಳೇ ಪ್ರಸಾರಣ ಕೇಂದ್ರಗಳಿದ್ದಂತೆ. ಅಲ್ಲಿಂದ ಮಾಹಿತಿ,ಅಭಿವ್ಯಕ್ತಿಗಳು ಅಸಂಖ್ಯಾತ ಬಳಕೆದಾರರಿಗೆ ತಲುಪುತ್ತಲೇ ಇರುತ್ತವೆ. ಇವುಗಳನ್ನು ಸಾಧ್ಯವಾಗಿಸಿದ್ದು ಕ್ಲೌಡ್ ತಂತ್ರಜ್ನಾನ, ಬಳಕೆದಾರರ ಅನುಭವ ವನ್ನೇ (User Experience) ಮುಖ್ಯವಾಗಿರಿಸಿಕೊಂಡ ತಂತ್ರಾಂಶದ ಬೆಳವಣಿಗೆ, ಕೈಗೆಟಕುವ ಬೆಲೆಯ ಕ್ಯಾಮೆರ ಸಹಿತ ಸ್ಮಾರ್ಟ್ ಫೋನ್ ಹಾಗೂ MBPS ವೇಗದ ಇಂಟರ್ನೆಟ್ ಸಂಪರ್ಕ.
ಡಿಜಿಟಲ್ ಯುಗದಲ್ಲಿ ನಮ್ಮ ಕನ್ನಡಿಗರು ಕೂಡ ಸಾಮಾಜಿಕ ತಾಣಗಳನ್ನು ಉಪಯೋಗಿಸಿಕೊಂಡು ತಮ್ಮ ಕಾರ್ಯ ವ್ಯಾಪ್ತಿ ಅಷ್ಟೇ ಅಲ್ಲದೆ, ತಾವು ಬಿತ್ತರಿಸುವ ಮಾಹಿತಿಗಳ, ಬಳಕೆದಾರರ ವ್ಯಾಪ್ತಿಯನ್ನೂ ಹೆಚ್ಚಿಸಿಕೊಂಡಿದ್ದಾರೆ. ವೈಶಿಷ್ಟ್ಯತೆ ಹಾಗೂ ಸೃಜನಶೀಲತೆ ಹಲವರಿಗೆ ಉದ್ದಿಮೆ ಹಾಗೂ ಆದಾಯದ ಮೂಲಗಳಾಗಿ ಕೂಡ ಸಹಾಯ ಮಾಡಿವೆ. ಯಾವುದೇ ಸಾಧನೆ ಮಾಡಿ ಜನಪ್ರಿಯರಾಗಲು ನೀವು ಬೆಂಗಳೂರಿನಲ್ಲೇ ವಾಸಿಸಬೇಕಿಲ್ಲ. ನೀವು ಸೆಲೆಬ್ರಿಟಿ ಆಗಿರಬೇಕಿಲ್ಲ. ಜನ ಹಣ ಬಳಕ್ಕಿಂತ ಹೆಚ್ಚಾಗಿ ವೈರಲ್ ಆಗಿ ಜನಪ್ರಿಯ ರಾಗಲು ಕೇವಲ ಸೃಜನಶೀಲತೆ,ಕೌಶಲ್ಯ , ಪ್ರತಿಭೆ ಸಾಕು.
ಇತ್ತೀಚಿಗೆ ಕನ್ನಡದಲ್ಲಿ ಜನಪ್ರಿಯ ವಾಗಿರುವ ಸೋಶಿಯಲ್ ಚಾನೆಲ್ ಗಮನಿಸಿ. ಒಬ್ಬ ಕನ್ನಡಿಗ ವಿಧ್ಯಾರ್ಥಿ ಕೈಲೊಂದು ಗೋ ಪ್ರೊ ಕ್ಯಾಮೆರಾ ಮತ್ತು ಸೆಲ್ಫಿ ದಂಡವನ್ನು ಹಿಡಿದು ಭಾರತದ ಪ್ರೇಕ್ಷಣೀಯ ಸ್ಥಳಗಳನ್ನೆಲ್ಲ ತಿರುಗಿ ಕನ್ನಡದಲ್ಲಿ ಸಹಜವಾಗಿ ವಿವರಣೆ ಕೊಡುತ್ತಾ ಸಾಗುತ್ತಾನೆ. ಆತನ ವಿಡಿಯೋಗಳಿಗೆ ಲಕ್ಷಗಟ್ಟಲೆ ವೀಕ್ಷಕರು. ಇನ್ನೊರ್ವ ಕನ್ನಡದ ಪ್ರತಿಭಾವಂತ ಗಾಯಕಿ. ಯಾವುದೇ ಹಿನ್ನೆಲೆ ಇಲ್ಲದಿದ್ದರೂ ಸಮಾಜಿಕ ಜಾಲ ತಾಣಗಳಿಂದ ಗಮನ ಸೆಳೆದು ಭವಿಷ್ಯ ರೂಪಿಸಿಕೊಂಡಳು. ಮೋಟಾರ್ ಸೈಕಲ್ ಹಿಡಿದು ಕರ್ನಾಟಕದ,ಬೆಟ್ಟ ಗುಡ್ಡ, ಊರು ಕೇರಿಗಳೆಲ್ಲ ಪ್ರವಾಸ ಮಾಡಿ ಕಂಡರಿಯದ ಕೇಳರಿಯದ ವಿಶಿಷ್ಟ ಸ್ಥಳಗಳು,ವ್ಯಕ್ತಿಗಳು, ವಿಶೇಷ ತಿನಿಸುಗಳು, ಹೋಟೆಲ್ ಗಳು ಇತ್ಯಾದಿ ಗಳ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಕನ್ನಡಿಗರಿಗೆ ತಿಳಿಸುತ್ತಿದ್ದಾರೆ. ಅದೇ ಮೈಸೂರು, ಹಂಪಿಯಂತಹ ಕನ್ನಡದ ಐತಿಹಾಸಿಕ ಸ್ಥಳಗಳ ಹಾಗೂ ಅದರ ಸುತ್ತ ಸಾಮಾನ್ಯವಾಗಿ ಕೇಳಿರದ ಕಥಾನಕಗಳನ್ನು ವಿಭಿನ್ನವಾಗಿ ಕನ್ನಡಿಗರೆದುರು ತಮ್ಮ ಚಾನೆಲ್, ಪೇಜ್ ಗಳ ಮೂಲಕ ಹಂಚುತ್ತಿದ್ದಾರೆ. ಕನ್ನಡ ನಾಡಿನ ಅಡುಗೆಯ ವಿಶೇಷದ ಬಗ್ಗೆಯಂತೂ ಭಟ್ಎನ್ ಭಟ್ ಸೇರಿ ಅನೇಕ ಜನಪ್ರಿಯ ಚಾನ್ನೆಲ್ ಗಳಿವೆ. ಕನ್ನಡದಲ್ಲಿ ತಂತ್ರಜ್ಞಾನದ ಕುರಿತು ಮಾಹಿತಿಯ, ಹಣಕಾಸಿನ ಒಳ್ಳೆಯ ಹೂಡಿಕೆಯ ಬಗ್ಗೆ ಪೋಸ್ಟ್ ಗಳನ್ನೂ ನೋಡುತ್ತಿದ್ದೇವೆ. ಹಾಸ್ಯ ಟ್ರೋಲ್ ಗಳಲ್ಲಿ ಕೂಡ ಸೃಜನ ಶೀಲತೆ ಎದ್ದು ಕಾಣಿಸುತ್ತದೆ. ಇತ್ತೀಚಿಗೆ ಮಾನಸಿ ಸುಧೀರ್ ಅವರ ಭಾವಾಭಿನಯ ಕನ್ನಡ ಫೇಸ್ಬುಕ್ ವಲಯದಲ್ಲಿ ವೈರಲ್ ಆಗಿದ್ದು ಸಾಮಾಜಿಕ ತಾಣಗಳ ಶಕ್ತಿ ಪ್ರದರ್ಶನಕ್ಕೆ ಒಂದು ಉದಾಹರಣೆಯಾಗಿದೆ.
ಕನ್ನಡದಲ್ಲಿ ಪ್ರಚಲಿತ ಚರ್ಚೆಯನ್ನು ಕೂಡ ಸಾಮನ್ಯ ನೆಟ್ಟಿಗರೇ ಸಾಮಾಜಿಕ ತಾಣಗಳ ಮೂಲ ಹುಟ್ಟಿ ಹಾಕುತ್ತಿದ್ದಾರೆ. ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮುಖ್ಯ ಧಾರೆಯ ಕನ್ನಡ ವಾಹಿನಿಗಳ ಬಗ್ಗೆ,ಅವರ ನಿಲುವುಗಳ ಬಗ್ಗೆ ಕೂಡ ಹದ್ದಿನ ಕಣ್ಣಿಡುತ್ತಿದ್ದಾರೆ.
ಫೇಸ್ಬುಕ್, ಇನ್ಸ್ಟಗ್ರಾಂ, ವ್ಹಾಟ್ಸಾಪ್ , ಟ್ವಿಟ್ಟರ್, ಯು ಟ್ಯೂಬ್, ಗಳಿಂದ ಹಿಡಿದು ಟಿಕ್ ಟಾಕ್, ಇತ್ತೀಚಿನ ಕೂ, ಕ್ಲಬ್ ಹೌಸ್ ಇತ್ಯಾದಿಗಳು ಕನ್ನಡಿಗರ ಕೌಶಲ್ಯ , ಜ್ಞಾನ , ಕಲಾ ಪ್ರತಿಭೆ ಗಳ ಸಾರ್ವಜನಿಕ ಅವಗಾಹನೆಗೆ ಅವಕಾಶ ಮಾಡಿ ಕೊಟ್ಟ ಜಾಗತಿಕ ವೇದಿಕೆಗಳು. ಇವತ್ತು ಒಂದು ಸುದ್ಧಿ ಮಾಧ್ಯಮದ ಚಾನೆಲ್ ಗೆ ಕೋಟಿಗಟ್ಟಲೆ ಸುರಿದು ಸ್ಟುಡಿಯೊ ಮಾಡಬೇಕಿಲ್ಲ. ಒಂದು ಯು ಟ್ಯೂಬ್ ಅಥವಾ ಫೇಸ್ಬುಕ್ ಚಾನ್ನೆಲ್ ಇದ್ದರೆ ಸಾಕು. ಲಕ್ಷಗಟ್ಟಲೆ ಮಂದಿಗೆ ತಲುಪುತ್ತದೆ. ವಾಣಿಜ್ಯೀಕರಣ(Monetization) ಮಾಡಿದರೆ ಇನ್ನಷ್ಟು ಬೆಳವಣಿಗೆಗೆ ಸಾಧ್ಯವಾಗುತ್ತದೆ.
ಕನ್ನಡ ನಾಡು, ನುಡಿ ಮತ್ತು ಡಿಜಿಟೀಕರಣ
ಇನ್ನೂ ಕನ್ನಡ ಭಾಷೆ, ಸಾಹಿತ್ಯದ ವಿಚಾರಕ್ಕೆ ಬರುವುದಾದರೆ, ಎಲ್ಲ ಅಂತರ್ಜಾಲ ವೇದಿಕೆಯಲ್ಲಿ ಅನೇಕ ಕನ್ನಡಿಗರು ಕೇವಲ ಕನ್ನಡದಲ್ಲಿಯೆ ವ್ಯವಹರಿಸುವದನ್ನು ಕಾಣುತ್ತೇವೆ. ಬರಹ, ಮಾತು, ಚಿಂತನೆಗಳು ಇತ್ತೀಚೆಗೆ ಪೂರ್ಣ ಕನ್ನಡದಲ್ಲಿ ಮೂಡಿ ಬರುತ್ತಿರುವುದು ಗಮನಾರ್ಹ. ಜಾಗತಿಕ ಮಟ್ಟದಲ್ಲಿ ಕನ್ನಡಿಗರಿಗೆ ಕೂಡ ಬೇರೆಡೆ ಜರುಗುವ ಹೊಸ ಪ್ರಯೋಗಗಳ ಅವನ್ನು ಕನ್ನಡದಲ್ಲೂ ಅನ್ವಯಿಸುವ ಬಗ್ಗೆ ಅವಕಾಶ ದೊರೆಯುತಿದೆ. ಕ್ಲಬ್ ಹೌಸ್ ವೇದಿಕೆಯನ್ನು ಸಂಪಾದಕ ವಿಶ್ವೆಶ್ವರ ಭಟ್ ಅವರು ವಿಭಿನ್ನವಾಗಿ ಉಪಯೋಗಿಸಿ ದಾಖಲೆ ನಿರ್ಮಿಸಿದ್ದು ಇತ್ತಿಚೆಗೆ ಎಲ್ಲರಿಗೂ ಗೊತ್ತಿರುವ ಸಂಗತಿ.
ಡಿಜಿಟೀಕರಣ ನಗರ ಹಾಗೂ ಹಳ್ಳಿಯ ನಡುವೆ ಅಂತರವನ್ನು ಕಡಿಮೆ ಮಾಡುವಲ್ಲಿ ಕೂಡ ಸಹಾಯಕರವಾಗಿದೆ. ಕರ್ನಾಟಕದ ಹಳ್ಳಿಯಿಂದ ಹಿಡಿದು ನಾಡಿನ ಮೂಲೆ ಮೂಲೆಯ ಕನ್ನಡಿಗರ ಸೃಜನಶೀಲತೆಗೆ ಡಿಜಿಟಲ್ ಯುಗದಲ್ಲಿ ಸಮಾನ ಸ್ಥಾನ ಇದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನ ಸಮಾನತೆ, ಪ್ರಜಾ ಪ್ರಭುತ್ವ ವಾದಿ..
ಇತ್ತ್ಚಿಚೆಗೆ ನಾವು ನಡೆಸಿದ ನಸುಕು ಒನ್ಲೈನ್ ಟೌನ್ ಹಾಲ್ ನಲ್ಲಿ ಹಳ್ಳಿ, ನಗರ,ಒಳನಾಡು,ಗಡೀನಾಡು ಹೊರನಾಡು,ದೇಶ ವಿದೇಶ ಎನ್ನುವ ತಾರತಮ್ಯ ಇಲ್ಲದೆ ಎಲ್ಲರೂ ಭಾಗವಹಿಸಿದ್ದು ಫೇಸ್ಬುಕ್ ನಲ್ಲಿ ಲೈವ್ ಪ್ರಸಾರವಾದದ್ದು ಉದಾಹರಿಸಬಹುದು.
ಕನ್ನಡದ ಬರಹಗಾರರು ಫೇಸ್ಬುಕ್ ಒಳಗೊಂಡೂ ಜಾಲ ತಾಣಗಳಲ್ಲಿ ನಿರಂತರವಾಗಿ ಬರೆಯುತ್ತಿದ್ದಾರೆ. ಈ ಮುಂಚಿನ ಕವಿ, ಕಥೆಗಾರರ ಬಳಗ ಇವತ್ತು ವಾಟ್ಸಾಪ್ ಬಳಗವನ್ನು ಸ್ಥಾಪಿಸಿಕೊಂಡು, ಒಬ್ಬರಿಗೊಬ್ಬರು ಓದಿ, ಸ್ಪೂರ್ತಿ ಹಂಚಿ ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಕನ್ನಡ ಲೇಖಕರು, ಪ್ರಕಾಶಕರು ದಿಜಿಟಲ್ ಯುಗದಲ್ಲಿ ಮಾರ್ಕೆಟಿಂಗ್, ಪ್ರೊಮೋಶನ್ ಇತ್ಯಾದಿಗಳ ಬಗ್ಗೆ ಮುಂಚಿಗಿಂತ ಹೆಚ್ಚು ಪ್ರಜ್ಣಾ ಪೂರ್ವಕರಾಗಿದ್ದಾರೆ. ಕನ್ನಡದ ಮಟ್ಟಿಗೆ ಇದು ತುಂಬಾ ಆಶಾದಾಯಕ.
ಈ ಮುಂಚೆ ಇದ್ದ ಅವಧಿ, ಕೆಂಡ ಸಂಪಿಗೆ , ಬಹುರೂಪಿ ಜೊತೆಗೆ ಇತ್ತೀಚಿಗೆ ಪಾಂಡೆಮಿಕ್ ಸಮಯದಲ್ಲಿ ಹುಟ್ಟಿಕೊಂಡ ನಸುಕು.ಕಾಮ್ ಕನ್ನಡ ಓದುಗರಿಗೆ, ಬರಹಗರಿಗೆ ನಿರಂತರ ಉತ್ತೇಜನ ನೀಡುತ್ತಿವೆ. ಗೂಗಲ್ ಪ್ಲೇ ಬುಕ್, ಮಾಯ್ ಲ್ಯಾಂಗ್ ನಂತಹ ಈ-ಬೂಕ್ ವೇದಿಕೆಗಳು ಕನ್ನಡ ಪುಸ್ತಕಗಳ ಪ್ರಕಾಶನಕ್ಕೆ ಉತ್ತಮ ವೇದಿಕೆ ಒದಗಿಸಿಕೊಟ್ಟಿವೆ. ಕನ್ನಡದ ಕೆಲವು ವಿಶ್ವ ವಿದ್ಯಾಲಯಗಳು, ಹಳೆಯ ಪುಸ್ತಕಗಳನ್ನು ಓಸಿಆರ್ ತಂತ್ರಜ್ನಾನ ಉಪಯೋಗಿಸಿ ಡಿಜಿಟಲೈಜ್ ಮಾಡಿವೆ.
ಹೀಗೆ ಬೃಹತ್ತಾಗಿ ಆವರಿಸಿರುವ ಡಿಜಿಟಲ್ ವ್ಯವಸ್ಥೆಯಲ್ಲಿ ಕನ್ನಡದಂತ ಪ್ರಚಲಿತ ಭಾಷೆಗೆ ಪರಿಣಾಮಕಾರಿಯಾಗಿ ಬೆಳೆಯಲು, ಹಬ್ಬಲು ಕೂಡ ಅವಕಾಶ ಇದೆ.
ಅಮೇಜೊನ್ ನಂತಹ ಆನ್ಲೈನ್ ಖರೀದಿ ವೇದಿಕೆಗಳು ಕೂಡ ಕನ್ನಡದಲ್ಲಿ ಮಾಹಿತಿ ನೀಡಲಾರಂಭಿಸಿವೆ.
ಕೊವಿದ್ =೧೯ ಕಾಲದಲ್ಲಿ ಶಾಲಾ ಕಾಲೇಜುಗಳು ಮುಚ್ಚಿದ ಸಂಧರ್ಭದಲ್ಲಿ ಸರಕಾರೀ ಸೇರಿದಂತೆ ಬಹುತೇಕ ಕನ್ನಡದ ಶಿಕ್ಷಕರು ವಾಟ್ಸಾಪ್ ಹಾಗೂ ಒನ್ಲೈನ್ ವಿಡಿಯೋ ಮೀಟಿಂಗ್ ವೇದಿಕೆಗಳನ್ನು ಸದುಪಯೋಗಪಡಿಸಿಕೊಂಡರು.
ಇನ್ನೂ ತಂತ್ರಜ್ಣಾನ ದಲ್ಲಿ ಸೃಜನಶೀಲತೆಗೆ ಒಂದು ಉದಾಹರಣೆಯಾಗಿ ಕನ್ನಡದಲ್ಲಿ ಅಲರ್ ಎಂಬ ಅಂತರ್ಜಾಲ ನಿಘಂಟು ಒದಗಿಸುವಲ್ಲಿ ಜೀರೋಧ ಕಂಪನಿಯವರು ವಿಶೇಷ ತಂತ್ರಜ್ನಾನ ರೂಪಿಸಿಕೊಟ್ಟರು.ಅರವಿಂದ ವಿ.ಕೆ. ಅವರ ಅಂತರ್ಜಾಲ ಕನ್ನಡ ಫೊಂಟ್ ಬದಲೀಕರಣ ತಂತ್ರಾಂಶ ಅನೇಕರು ಜನ ಉಪಯೋಗಿಸುತ್ತಾರೆ.
ಇವೆಲ್ಲವುಗಳ ಹೊರತಾಗಿ ಡಿಜಿಟಲ್ ಯುಗದಲ್ಲಿ ಕನ್ನಡ ಸೃಜನಶೀಲತೆಗೆ ಪಕ್ವ ವಾಗಬಲ್ಲ ತಂತ್ರಜ್ಞಾನ ಕ್ಷೇತ್ರಗಳು ?
ಅತ್ಯಂತ ವೇಗವಾಗಿ ಪ್ರಗತಿಯಾಗುತ್ತಿರುವ ತಂತ್ರಜ್ನಾನ ಹೊಸ ಹೊಸ ಸಾಧ್ಯತೆಗಳನ್ನು ಸೃಷ್ಟಿಸುತ್ತಿದೆ.. ದತ್ತಾಂಶ ವಿಜ್ಞಾನ (ಡೇಟಾ ಸೈನ್ಸ್ ) ಹಾಗೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ), ಚಾಟ್ ಬಾಟ್ ಇತ್ಯಾದಿ ತಂತ್ರಜ್ಞಾನ ಉಪಯೋಗಿಸಿ ಕನ್ನಡ ಮಾತನಾಡುವ, ಬರೆಯುವ, ಸಂಭಾಷಿಸುವ ವೇದಿಕೆಗಳು ಸೃಷ್ಟಿಯಾದರೆ ಅದು ಇನ್ನಷ್ಟು ಅಚ್ಚರಿಯ ಸಾಧ್ಯತೆಗಳನ್ನು ಹುಟ್ಟಿಹಾಕಬಲ್ಲುದು.. ಕನ್ನಡದ ಮಾಹಿತಿಗಳನ್ನೇ ಸಂಸ್ಕರಿಸಿ ತಯಾರಾಗುವ ಕೃತಕ ಬುದ್ಧಿ ಮತ್ತೆ ಆಧಾರಿತ ಆಪ್ ಗಳು ಬಳಕೆದಾರರಿಗೆ ಪರಿಹಾರವನ್ನು,ಅವಶ್ಯಕ ಮಾಹಿತಿಗಳನ್ನು ಒದಗಿಸಿ ಕೊಟ್ಟರೆ, ಅದರ ಕೊಡುಗೆ ಎಲ್ಲ ರಂಗಗಳಲ್ಲೂ ಪ್ರಭಾವ ಬೀರಬಲ್ಲುದು.
ಮುಂಬರುವ ದಿನಗಳಲ್ಲಿ ಈ – ಇಂಕ್ ಎಂಬ ತಂತ್ರಜ್ಞಾನ ದಿಂದ ನೀವು ಪೇಪರ್ ತರದ ಅನುಭವ ನೀಡುವ ಸ್ಕ್ರೀನ್ ಮೇಲೆ ಡಿಜಿಟಲ್ ಪೆನ್ ಮೂಲಕ ನೇರವಾಗಿ ಕನ್ನಡದಲ್ಲಿ ಪೇಪರ್ ಮೇಲೆ ಬರೆದ ಹಾಗೆ ಬರೆದುಬಿಡಬಹುದು.. ತಂತ್ರಾಂಶದ ಸಹಾಯದಿಂದ ಕೂಡಲೇ ಅದು ತನ್ನಷ್ಟಕ್ಕೆ ಕನ್ನಡದ ಫಾಂಟ್ ನಲ್ಲಿ ಟೈಪ್ ಆಗಿ ಸೇವ್ ಆಗುತ್ತದೆ.ಜಗತ್ತಿನ ಇತರ ಭಾಷೆಗಳಲ್ಲಿ ಇದು ಈಗಾಗಲೇ ಲಭ್ಯವಿದೆ.
ಕನ್ನಡದಲ್ಲಿ ಹೇಳಿದಂತೆ ಬರೆ, ಬರೆದಂತೆ ಓದು ತರದ ತಂತ್ರಾಂಶವನ್ನು ಅಭಿವೃದ್ಧಿಗೊಳಿಸುವುದು ಅತ್ಯಂತ ಸುಲಭದ ಕೆಲಸ. ಕನ್ನಡ ವಿಶ್ವ ವಿದ್ಯಾಲಯ ಅಥವಾ ಸರಕಾರಗಳು ಯಂತ್ರಾನುಭವಕ್ಕೆ (machine learning) ಗೆ ಬೇಕಾದ ತಿಳುವಳಿಕೆ, ಕ್ರಮ(ಪ್ಯಾಟರ್ನ್) ಇತ್ಯಾದಿಗಳನ್ನು ದೊರಕಿಸುವಲ್ಲಿ ಶ್ರಮ ಹಾಗೂ ಕೊಂಚ ಮಟ್ಟಿನ ಹಣಕಾಸಿನ ನೆರವು ನೀಡಬೇಕಾಗುತ್ತದೆ.
ವೈದ್ಯಕೀಯ, ಶಿಕ್ಷಣ ಇತ್ಯಾದಿ ಕ್ಷೇತ್ರಗಳಲ್ಲಿ ಕನ್ನಡದ ಮಾಹಿತಿಗಳ ದಿಜಿಟೀಕರಣ ಹಾಗೂ ಅವುಗಳ ಕನ್ನಡದಲ್ಲಿ ಪ್ರಸ್ತುತಪಡಿಸುವಿಕೆ= ಭಾಷೆಯ ಅವಲಂಬನೆ ಹಾಗೂ ವರ್ಧನೆಗೆ ಇನ್ನಷ್ಟು ಇಂಬು ನೀಡುವ ಸಾಧ್ಯತೆಗಳು ಹೆಚ್ಚಾಗಿದೆ.
ಭಾಷೆಯ ವಿಚಾರದಲ್ಲಿ ಕನ್ನಡಕ್ಕೆ ಹಿನ್ನಡೆ ಯಾಗಿದೆಯೇ ಎಂಬ ವಾದಗಳ ನಡುವೆ, ಇಂದು ತಂತ್ರಜ್ನಾನದ ಕಾರಣದಿಂದ ಒಂದು ಆಶಾ ಕಿರಣ ಮೂಡಿದೆ. ಜೊತೆಗೆ ವಿಶ್ವವಿದ್ಯಾಲಯ ಹಾಗೂ ಸರಕಾರ, ಕನ್ನಡದಲ್ಲಿಯೇ ತಂತ್ರಜ್ನಾನ ಕಲಿಕೆಯನ್ನು , ಚಿಂತಿಸುವಿಕೆಯನ್ನು ಹೆಚ್ಚಿಸಲು ಅವಶ್ಯಕ ಸಮಯ,ಶ್ರಮ ಹಾಗೂ ಬಂಡವಾಳವನ್ನು ಖಂಡಿತ ಹಾಕಬೇಕಾಗುತ್ತದೆ. ಕನ್ನಡದಲ್ಲಿ ಕೋಡಿಂಗ್ ಅಥವಾ ಆಪ್ ತಯಾರಿಸುವ ತಂತ್ರಾಂಶಗಳನ್ನು ತಯಾರಿಸುವ ಕೆಲಸ ಕೂಡ ಕಷ್ಟವೇನಲ್ಲ. ಜೊತೆಗೆ ಶಿಕ್ಷಣದಲ್ಲಿ ಒಟ್ಟಾರೆ ಸೃಜನ ಶೀಲತೆಗೆ ಕೂಡ ಹೆಚ್ಚಿನ ಒತ್ತು ನೀಡಲೇಬೇಕಾಗುತ್ತದೆ.
ದಿಜಿಟಲ್ ಯುಗ ಎಂಬುದು ಎದುರು ಬದುರು ಇಟ್ಟ ಸಾವಿರ ಕನ್ನಡಿಗಳಿದ್ದಂತೆ. ಚಿಕ್ಕ ವಸ್ತುವೂ ಸಾವಿರ ಬಿಂಬವಾಗುವಂತೆ, ಕನ್ನಡಿಗರ ಒಂದು ಚಿಕ್ಕ ಪ್ರಯತ್ನ, ಶ್ರಮ, ಸೃಜನಶೀಲತೆ ಕೂಡ ಬೃಹತ್ ಸಾಧ್ಯತೆ, ಪರಿಣಾಮ ಗಳನ್ನು ಕಟ್ಟಿಕೊಡುವುದರಲ್ಲಿ ಸಂದೇಹ ಇಲ್ಲ.
-ವಿಜಯ್ ದಾರಿಹೋಕ