ಪಂಜು ಕಾವ್ಯಧಾರೆ

ಕನ್ನಡ ಬಳಗ

ನೋಡ ಬನ್ನಿರಿ ಗೆಳೆಯರೆ
ನಮ್ಮ ಕನ್ನಡ ಬಳಗವನು
ಕಸ್ತೂರಿಯ ತವರನ್ನು. . . .

ವಿಕ್ರಮಾರ್ಜುನ ಸಾಹಸ ಭೀಮ
ಅವತಾರ ತೋರಿದವು.
ಪಂಚತಂತ್ರ ರಾಮಚರಿತ
ಪುರಾಣವು ಬೆಳಗಿದವು

ಪ್ರಭುವಿನ ಜೊತೆಯಲ್ಲಿ ಅಕ್ಕನು
ಅಣ್ಣನು ಪುಣ್ಯವಿದೇನುರೀ
ರಗಳೆಯ ಜೊತೆಯಲಿ ಷಟ್ಟದಿ
ಕೀರ್ತನೆ ನೃತ್ಯವ ನೋಡಿರೀ

ಶ್ರೀರಾಮನ ನಾಕು ಕನಸನು ಸಣ್ಣ
ಕಥೆಯಲಿ ಹೇಳಿದ ಮಂಕುತಿಮ್ಮ
ಮಲ್ಲಿಗೆ ಸಂಪಿಗೆ ಬಕುಲದ ಹೂಗಳು
ಅರಳಿವೆ ನೋಡು ಬಾರೊ ತಮ್ಮ

ಕಾಂತಿಯಿಂದ ಹೊಳೆಯುವ ಬಹುವಿಧ
ವಾಸ್ತಿಶಿಲ್ಪದ ಚಂದವು
ಕಣ್ಣೆದುರಿದ್ದರು ಕಾಣದಾಗಿದೆ
ಕವಿದಿದೆ ಕಪ್ಪು ಮೋಡವು

-ಡಾ. ಶಿವಕುಮಾರ್ ಆರ್

ಕನ್ನಡ
ಉಸಿರುಸಿರಲಿ ಹೆಸರೆಸರಲಿ
ಹೊಸೆದಿರಲಿ ಕನ್ನಡ.
ಕಸುವಾಗಲಿ ಬೆಸಗೊಳ್ಳಲಿ
ಜಸವಾಗಲಿ ಕನ್ನಡ.

ಹಸಿರಸಿರ ಸಹ್ಯಾದ್ರಿಯೇ
ಶಿಖರ ನಿನಗೆ ಕನ್ನಡ.
ಬಸವಳಿಯದೆ ಬೆವರ ಹರಿಸೋ
ನದಿ ನದಿಯು ಕನ್ನಡ.

ಗುಡಿಗುಡಿಯ ಗಂಟೆಯಲ್ಲೂ
ಮಾರ್ದನಿಸಲಿ ಕನ್ನಡ.
ಕುಡಿಕುಡಿಯ ಚೇತನದಲು
ಪ್ರವರ್ದಿಸಲಿ ಕನ್ನಡ.

ಶಿಲೆ ಶಿಲೆಯ ಪದರದಲ್ಲೂ
ಒಡಮೂಡಿದೆ ಕನ್ನಡ.
ಅಲೆ ಅಲೆಯ ಚೆಲುವಿನಲ್ಲೂ
ಚಿಮ್ಮಿ ಹೊಮ್ಮಿದೆ ಕನ್ನಡ.

ನುಡಿ ನುಡಿವಾ ಪ್ರತಿಪದದ
ಸಂಪ್ರೀತಿಯೇ ಕನ್ನಡ.
ದುಡಿದುಡಿವ ಪ್ರತಿ ದೇಹದ
ಕಸುವಾಗಲಿ ಕನ್ನಡ.

ನಡೆ ನಡೆವಲಿ ದೀಪವಾಗಿ
ನಡೆಸಲಮ್ಮ ಕನ್ನಡ.
ಮಿಡಿ ಮಿಡಿವ ಪ್ರತಿ ಎದೆಗೂ
ಪ್ರೀತಿಯಾಗಲಿ ಕನ್ನಡ.
-ಸರೋಜ ಪ್ರಶಾಂತಸ್ವಾಮಿ

ಕನ್ನಡಮ್ಮನ ಉಳಿಸಬೇಕಿದೆ. . .

ಬೆಳಗಾಗೆದ್ದು ಮೈಮುರಿದು
ಸೂರ್ಯದೇವನಿಗೆ ವಂದಿಸಿ
ನಿತ್ಯಕರ್ಮಗಳ ಮುಗಿಸಿ
ತಿನ್ನುವ ಅನ್ನದಲ್ಲಿ
ಕನ್ನಡಮ್ಮನಿದ್ದಾಳೆ. . .

ನಾವಿಡುವ ಪ್ರತಿ ಹೆಜ್ಜೆಯಲ್ಲು
ನಾವ್ನಡೆವ ಪ್ರತಿ ದಾರಿಯಲ್ಲು
ನಾವಾಡುವ ಪ್ರತಿ ಮಾತಿನಲ್ಲೂ
ನಮ್ಮ ಪ್ರತಿ ಉಸಿರಾಟದಲ್ಲೂ
ಕನ್ನಡಮ್ಮನಿದ್ದಾಳೆ. . . .

ಅವಳ ಸೌಂದರ್ಯ, ಮೊಗದ ಕಳೆ
ಕಾಲ್ಗೆಜ್ಜೆ ಧನಿ, ಕೈಬಳೆ ಸದ್ದು
ಅವಳ ಮೈಮಾಟ, ಕಣ್ಣ ನೋಟ
ಎಲ್ಲೆಲ್ಲೂ ಕನ್ನಡಮ್ಮ ಇದ್ದಾಳೆ. . . .

ತಿದ್ದಿದ ಅ ಆ ಇ ಈ
ಓದಿದ ಗದ್ಯ, ಪದ್ಯ
ಬರೆದ ಕಥೆ, ಕವನ
ಎಲ್ಲಿ ಸೋತಿದ್ದಾಳೆ ಅವಳು?

ಬದಲಾಗಿರುವುದು ಕಾಲವಲ್ಲ ಕೇಳಿ
ಬದಲಾಗಿರಿವುದು ನಾವುಗಳು
ನಮ್ಮನ್ನು ನಾವೇ ಮನುಜರೆಂದು
ಸಾಬೀತು ಮಾಡಹೊರಟಿರುವವರು. . .

ತಾಯಂತೆ ಮಮತೆ
ಮೆರೆದು ಸಾಕಿದವಳು
ತಂದೆಯಂತೆ ಪ್ರೀತಿ
ಎರೆದು ನಡೆಸಿದವಳನ್ನು ಮರೆತವರು

ಅವಳಿಲ್ಲದೆ ಬದುಕಿಲ್ಲವೆನ್ನುವುದ
ಅರಿಯದೇ ಹೋದವರು
ಅನ್ಯ ಭಾಷೆಯ ಅಂದಕ್ಕೆ
ಮರುಳಾಗಿ ಮೋಹಗೊಂಡವರು. . .

ಹೆಚ್ಚೇನೆಂದು ಹೇಳುವುದು?
ಕನ್ನಡಮ್ಮನೀಗ ಕಳವಳಗೊಂಡಿದ್ದಾಳೆ
ತನ್ನ ಮಕ್ಕಳೇ ತನ್ನ ಕೊಂದುಬಿಡುವ
ಮುನ್ಸೂಚನೆಯ ಮುಗಿಲು ತೇಲಿದೆ.

ಸಮಯವಿದೆಯೆಂದು ಕೂರುವ
ಸಮಯವಲ್ಲ ಈಗ
ಇನ್ನಾದರೂ ಅರಿಯಬೇಕಿದೆ ಸತ್ಯ
ಕನ್ನಡಮ್ಮನ ಜೀವ ಉಳಿಸಲು
ಒಟ್ಟಾಗಿ ಕೈ ಜೋಡಿಸಬೇಕಿದೆ ಎಲ್ಲರೂ ನಿತ್ಯ. . .

ಒಲವು (ಲಕ್ಷ್ಮಿ ಕೆ. ಬಿ)

ನನ್ನ ಕನ್ನಡ

ಕನ್ನಡದ ಮಣ್ಣೆನಗೆ
ಹೊನ್ನ ಹೋಲುತಲಿಹುದು,
ಕನ್ನಡದ ಮರಗಳಿದು
ರೇಷಿಮೆಯ ದಿರಿಸು!

ಕನ್ನಡದ ಹೂವುಗಳು
ಸುರಹೊನ್ನೆಯಂತಿಹುದು,
ಕನ್ನಡದ ಜಲವೆನಗೆ
ಅಮೃತಕ್ಕೂ ಮಿಗಿಲು!

ಕನ್ನಡದ ಗಾಳಿಯದು
ಚಂದನವ ಸೂಸಿಹುದು,
ಕನ್ನಡದ ಪಶು ಪಕ್ಷಿ
ಕಂಗಳಿಗೆ ಸೊಗಸು !

ಕನ್ನಡದ ನುಡಿಗಳಿಗೆ
ವಜ್ರಕಿಂತಲೂ ಬೆಲೆಯು,
ಕನ್ನಡಮ್ಮನ ಮಡಿಲೆನಗೆ
ಸ್ವರ್ಗ ಸಮಾನವು!

ಕಲೆ, ಸಾಹಿತ್ಯದ ಬೆಲೆ,
ಭವ್ಯ ಸಂಸ್ಕೃತಿ ಸೆಲೆ,
ನೃತ್ಯ, ಸಂಗೀತವು ನೆಲೆ
ಮಾಡಿರುವ ನಾಡಿದು!

ಸಹಿಷ್ಣುತೆಯೊಂದಿಗೆ
ಸ್ವಾಭಿಮಾನವೂ ಬೆರೆತು,
ನವೋನ್ನತಿಯ ಬೀಡಾಗಿ
ನಲಿಯುತಿಹ ನಾಡಿದು!

ಅಂದದಾ ಈ ನಾಡನು
ಹೆಮ್ಮೆಯಾ ಈ ಬೀಡನು
ಉಳಿಸಿ ಬೆಳೆಸುವ ಪಣವ
ತೊಡ ಬೇಕಿದೆ ನಾವಿಂದು!!

ಶ್ರೀವಲ್ಲಿ ಮಂಜುನಾಥ

ನನ್ನ ಕನ್ನಡ

ನನ್ನಯ ನುಡಿಯೊಳು ಕನ್ನಡದುಸಿರಿದೆ
ಮುನ್ನಿನ ಜನ್ಮವು ನನಗಿಲ್ಲೆ
ಕನ್ನಡವೆನ್ನೊಳು ನೆಲೆಯಾಗಿರುವುದು
ಚೆನ್ನನ ಮನದೊಳು ಪದಮಾಲೆ

ನನ್ನೊಳಗುದಿಸಿಹ ಸವಿಪದದಿಂದಲೆ
ಹೊನ್ನುಡಿಗಟ್ಟಿನ ಸರಮಾಲೆ
ಅನ್ನವ ನೀಡಿಹ ನೆಲ ಜಲ ಕಾನಿದೆ
ನನ್ನೆದೆ ಸೂಸಿದೆ ಕಾವ್ಯದಲೆ

ಬಣ್ಣಿಸೊ ಪದಗಳೆ ಬಣ್ಣಗಳೋಪರಿ
ಕಣ್ಣಿಗೆ ತಂಪನು ನೀಡಿದವು
ತಣ್ಣನೆ ಕೇಳುಗರದೆಯೊಳಗಿಳಿದಿವೆ
ಹೆಣ್ಣಿನೊಳಿಂಪಿನ ಗಾಯನವು

ನನ್ನಯ ಮುಂದಿನ ಜನ್ಮವದಿಲ್ಲಿಗೆ
ಕನ್ನಡ ಮಣ್ಣೊಳು ಹುಟ್ಟುವೆನು
ಕನ್ನಡಪದಗಳ ಕೇಳುತಲಿಲ್ಲಿಯೆ
ಉನ್ನತ ನಾಡೊಳು ಬದುಕುವೆನು.

-ಚನ್ನಕೇಶವ ಜಿ ಲಾಳನಕಟ್ಟೆ.

ನಮ್ಮ ರಾಜ್ಯೋತ್ಸವ

ಬನ್ನಿ ಕನ್ನಡ ಜನರೇ
ಬನ್ನಿ ಕರುನಾಡ ಬಾಂಧವರೇ
ನಲಿಯೋಣ ಆಚರಿಸಿ
ಕನ್ನಡದ ಹಬ್ಬ

ಭವ್ಯ ಕಲೆಗಳ ಬೀಡು
ಸೌಹಾರ್ದ ನೆಲೆವೀಡು
ಅಕ್ಕರೆಯ ಸಕ್ಕರೆ ನಾಡು
ನಮ್ಮ ಕರುನಾಡು!

ಚೆನ್ನಪಟ್ಟಣ ಗೊಂಬೆ
ರೇಶಿಮೆಯ ತವರೂರು
ಹಳೆಯ ಹಂಪಿಯ ಅಂದ
ನಮದು ಸಿರಿಗಂಧ!

ಅಬ್ಬರದ ಜೋಗವಿದೆ
ಮೈದಳೆವ ಕೊಡಗು ಇದೆ
ಹರಿವ ಕಾವೇರಿಯ ಹಾಡು
ಹಸಿರು ಮಲೆನಾಡು!

ಕನ್ನಡಾಂಬೆಯ ಎದಿರು
ನೃತ್ಯಕಲೆಗಳ ಉಸಿರು
ಯಕ್ಷಗಾನದ ಸೊಗಡು
ಪಸರಸಿಹ ರೀತಿ ನೋಡು!

ಕನ್ನಡ ಮಾತನಾಡುತ್ತ
ಕನ್ನಡದಲೇ ಬರೆಯುತ್ತ
ಉಳಿಸಿ ಬೆಳೆಸಿ ಹರಡೋಣ
ಕಬ್ಬಿಗರ ಕಾವ್ಯಕಂಪು!

-ಕುಸುಮಾ. ಜಿ. ಭಟ್

ಅಮ್ಮನ ನುಡಿ ಬಳಸು

ಕನ್ನಡ ಎದೆಯಲಿ ತಟ್ಟದೇ ಹೋದರೆ
ಮಣ್ಣಿನ ಗುಣವದು ಎಲ್ಲಿ?
ಬಣ್ಣದ ಭಾಷೆಗೆ ಮರುಳಾಗಿ ಮರೆತರೆ
ಮಾತೃ ಭಾಷೆಯದು ಎಲ್ಲಿ?

ಮಾತಾ ಪಿತರ ಅಂದದ ನುಡಿಗಳು
ಮರೆತು ಹೋದರೆ ಹೇಗೆ?
ಭಾವನೆ ಬೆಸೆಯುವ ವಿಧ ವಿಧ ಪದಗಳು
ಖೋತಾ ಆದರೆ ಹೇಗೆ?

ಭಾಷೆಯ ಉಳಿವು ಸಂಸ್ಕೃತಿ ಅಳಿವು
ಕೇಳದೋ ಅಣ್ಣಾ ಇಲ್ಲಿ
ನನ್ನ ನಿನ್ನ ಅಮ್ಮನ ನುಡಿಯೇ
ಮರೆಯದ ಭಾವದ ಬಳ್ಳಿ . . .

ಬಿದ್ದರೂ ಎದ್ದರೂ ಸಂತಸ ಪಡಲು
ಬರುವ ಪದವದು ಅಮ್ಮ
ಕದ್ದರೂ ಹೋಗದು ಭಾಷೆಯ ಒಡಲು
ಮುದ್ದಿನ ನುಡಿಯಿದು ತಮ್ಮ. .

ಕರುನಾಡಿನ ಭಾಷೆಯ ಅಂದವೆ ಬೇರೆ
ಕಿರುಚಿದರೂ ಅದು ಸೊಗಸು!
ಮರುಗದೆ ಸೊರಗದೆ ಬೆರಗಾಗದೆ ನೀ
ಕನ್ನಡ ಪದಗಳ ಬಳಸು. .
-ಹನಿಬಿಂದು

ನೃಪತುಂಗ ಬಹುಪರಾಕ್
ಅಮೋಘನಿವ ಅಮೋಘವರ್ಷ ನೃಪತುಂಗನಿವನು
ಸರ್ವದಲು ಉನ್ನತಿಯ ಉತ್ತುಂಗಕೇರಿದವನಿವನು

ಗೋವಿಂದನ ನಂತರದ ರಾಷ್ಟ್ರಕೂಟರ ರಾಜನಿವನು
ಹದಿನಾಲ್ಕರ ಮಗುವಿದ್ದಾಗಲೇ ರಾಜನಾದವನು

ಶಾಂತಿಪ್ರಿಯನಾದರೂ ಯುದ್ಧದೆ ತೊಡಗಿದನಿವನು
ಕನ್ನಡನಾಡ ಪರಿಕಲ್ಪನೆಯ ರೂಪಿಸಿದನಿವನು
ಕನ್ನಡದ ಸಂಸ್ಕೃತಿಗೆ ವಿಶಿಷ್ಟಕಾಣಿಕೆ ನೀಡಿದನಿವನು
ಮಾನ್ಯಖೇಟವ ರಾಜಧಾನಿಯಾಗಿಸಿಕೊಂಡನಿವನು

ಸೇನಾನಿ ಬಂಕೆಯ, ಸೋದರಮಾವನ ಆಸರೆಯಿವಗೆ
ವೈರಿಗಳು ಗಂಗ, ಗುರ್ಜರ, ಪ್ರತಿಹಾರಿ, ಪಲ್ಲವರಿವಗೆ
ಇವರೆಲ್ಲರ ಜಯಿಸಿ ಜಯಭೇರಿ ಹೊಡೆದನಿವಗೆ
ಮಗಳು ಚಂದ್ರಲಬ್ಬೆಯನಿತ್ತನು ಗಂಗರ ಬೂತುಗಗೆ

ಗುರ್ಜರ ಪ್ರತಿಹಾರರ ಭೋಜನ ಸೋಲಿಸಿದನಿವನು
ಸಾಮರ್ಥ್ಯ, ಧೈರ್ಯಕೆ ಜೀವಂತಸಾಕ್ಷಿ ಯಾಗಿಹನು
ಅಂಗ, ವಂಗ, ಮಗಧ, ಮಾಳವರ ಜಯಿಸಿಹನು
ನರಲೋಕಚಂದ್ರ, ಸರಸ್ವತೀ ತೀರ್ಥಾವತಾರನಿವನು

ಕಲೆಯ ಪೋಷಕನಿವನು, ಸಂಸ್ಕೃತಿ ಪೋಷಕನಿವನು

ಶ್ರೀವಿಜಯ ಕವಿರಾಜಮಾರ್ಗದ ಮುಖ್ಯಪಾತ್ರನಿವನು
ಕನ್ನಡದ ಮೊದಲಕೃತಿಯಿದರಾಶಯಕೆಸಮ್ಮತನಿವನು

ಕಾವ್ಯಮೀಮಾಂಸೆ, ವ್ಯಾಕರಣ, ಛಂದಸ್ಸುಗಳಿಲ್ಲಿಹವು

ಕನ್ನಡ ನಾಡುನುಡಿ, ನಾಡಿಗರ ಮಹತಿಯಿಲ್ಲಿಹದು
ಸಂಸ್ಕೃತದ ಪ್ರಶ್ನೋತ್ತರಮಾಲಿಕೆಯ ರಚಯಿತನಿವನು
ಶಕಟಾಯನ ಅಮೋಘವೃತ್ತಿಗ್ರಂಥ ರಚಯಿತನಿವನು

ಅಮೋಘವರ್ಷ ನೃಪತುಂಗನಿವನು, ಇವಗೆ ಭೋಪರಾಕ್!
-ಮಾಲತಿ ಮುದಕವಿ,

ತನುಮನದಲಿ ಕನ್ನಡದ ಡಿಂಡಿಮ

ಅಮೃತದಂತೇ ಹರಿಯುವ ಕರುನಾಡಿನ ಕಣವೆ
ಅನರ್ಘ್ಯ ಜನಗಳಿಗೆ ಅದಿತಿಯ ಕವಚ ಕನ್ನಡಮ್ಮ
ಅದ್ರಿ ಅದಿತಿಪ್ರಿಯ ಪುತ್ರ ಮಾಧವಿಹೂವಿನ ಇಂಪು
ಅನಂತರತ್ನ ಅನಂತವೀರ್ಯ ಹೆಮ್ಮೆ ಕನ್ನಡಿಗರು
ಅಷ್ಟಶೋಭೆವು ಗಗನಕೇರುವ ನೋಟ ಸವಿಜೇನಿನಂತೆ

ಆಕೆವಾಳತನ ಆಗಮವೇದಿ ಕನ್ನಡಾಂಬೆ
ಆತ್ರೇಯದ್ಯುತಿ ಹಸಿರಿನ ವನಸಿರಿಯ ನಾಡಯೇ
ಆದ್ಯಾಕಾವ್ಯಯ ಆಪಗಾ ಆಪ್ತಾಗಮ ಹೊನ್ನನಾಡು
ಶಿವಸೂತ್ರ ಜಾಲದ ಡಿಂಡಿಮ ಮೊಳಗಿದ ಗಂಧದತವರು

ಇಲ್ಲಿರುವ ಕನ್ನಡದ ಸೊಬಗು ಎಲ್ಲೆಲ್ಲೂ ಸವಿನುಡಿಯೋ
ಇನಿಯ ಸನಿಹದಲಿಯು ಕನ್ನಡಜಯ
ಇರುವುದು ಕನ್ನಡ ಕನ್ನಡಿಗ ಎಂದೆಂದಿಗೂ ಜಯಿಸುವಲಿ
ಇಂದ್ರನೀಲ ಹವಳಗಳ ನಾಡು ನನ್ನದು
ಇನಿದನಿ ಕೋಗಿಲೆಯ ಕುಹೂ ಕುಹೂ ಕಲರವ

ಈಗಲೇ ಎಲ್ಲಾಕಡೆ ಕನ್ನಡಮ್ಮನ ಈಜ್ಯೆ
ಈಶ್ವರಶೈಲದಲಿ ಈಸರದಿಂದ ಗೌರವದ ನೃತ್ಯ

ಉಸಿರಿನಲಿ ಮನಸಿನಲಿ ಕನ್ನಡ ಕನ್ನಡ
ಉಚ್ಚವದಲಿ ನಲಿದಾಡತಿರುವ ಕನ್ನಡ ಪ್ರೇಮಿಗಳು
ಉತ್ಕಳಿಕಾವಿಲಾಸದಲಿ ಹೊಳೆಯುವ ನಾಡು

ಊರ್ಜಿತಮತಿ ನಾಡು ಕನ್ನಡನಾಡು
ಊರ್ಜಿತೋಕ್ತಿ ರಸಋಷಿಗಳ ಬೀಡು

ಋತುಸಾರ್ವಭೌಮ ವಚನ್ಸಾಹಿತ್ಯದ ನಾಡು ಗಂಧದನಾಡು
ಋಷಿರೂಪಕರ ತಪಸ್ಸಿನ ತೀರ್ಥಂಕರ ವೀರರ ಕಲೆಗಳಬೀಡು
ಋಗ್ವೇದ ಮಂತ್ರವ ಸಾರಿದ ನಾಡು ನನ್ನ ಕನ್ನಡನಾಡು

ಎದೆಯೊಳಗೆ ಇರುವುದು ಕನ್ನಡದ ಪ್ರಾಣ
ಎಳೆಗಾರದಲಿ ಎಳೆದಾವರೆಯ ಕಂಪು
ಎಲ್ಲೆ ಇರು ಕನ್ನಡ ನಡೆ-ನುಡಿಯ ಚಿಲುಮೆ ಇರಲಿ

ಏಕರಸ ಏಕರೂಪ ಏಕವಾಕ್ಯ ಕನ್ನಡ ನಾಡು
ಏಣಗಿನ ಸೊಬಗು ಕಾಣುವ ಕಲ್ಪತನಾಡು

ಐರಾವತ ಮೇಲೇರಿ ಬಂದ ಚಂದಿರ
ಐಳಬಿಳ ನಾಡು ನನ್ನದು ಕನ್ನಡನಾಡು

ಒಗಂಟಿನರ್ಥವ ಜಯಿಸಿದ ಒಡನಾಡು
ಒಲವರದಿಂದ ಗೌರವಿಸುವ ಸಿರಿಗನ್ನಡ ನನ್ನದು
ಒಸಗೆವರಸಿನುಡಿವು ನುಡಿ ಶ್ರೀಗಂಧದ ನುಡಿ

ಓಂಕಾರಕ್ಷರದ ಸುಪ್ರಭಾತ ಹಾಡಿಸಿದ ನಾಡು
ಓ ಜ್ಞಾನಿ ಕಲಾಪ್ರೀಯ ಶಾರದಾ ವಿಲಾಸ
ಓಲೆಯಲಿ ಓದಿಸಿದ ವಿದ್ಯಾಪೀಠ ಕನ್ನಡನಾಡು

ಔತ್ಸುಕ್ಯದ ನಾಡು ನುಡಿ ನೆಲ
ಔಡುವ ಮೇಲೆ ಕನ್ನಡ ನುಡಿ ಜಾತ್ರೆ

-ಸಂತೋಷ ಕಾಖಂಡಕಿ

ಹಣೆಮಣಿವೆ

ಕನ್ನಡಸಿಂಹಾಸನದ ಸರ್ವಾಲಂಕಾರ ಸುರಭೂಷಿತೆ
ಕನ್ನಡಿಗರದೆಯಲಿ ಕನ್ನಡ ಕಹಳೆಯೂದಿದ ವನಿತೆ
ಕನ್ನಡ ಲಾಂಛನದಿ ಛಾಪಿನಲಿ ಅರಿವಿನ ಸುನಿತೆ
ಕನ್ನಡದ ಅಕ್ಷರಗಳೆಲ್ಲ ಸುಮಗಳಾಗಿ ಕಾವ್ಯಕವಿತೆ
ದಿಟ್ಟಿಸಿದೊಡೆ ಕನ್ನಡಾಭಿಮಾನ ಉಕ್ಕಿ ಪದಗಳಲಿ ಅವಿತೆ . . ೧

ಹಸಿರುಟ್ಟು ನಲಿವ ನಗುವ ಹರುಷದ ಕನ್ನಡಾಂಬೆ
ಕೆಂಪು ಕುಪ್ಪಸದಿ ಮಿಂಚಿದ ಕಿರೀಟ ತೊಟ್ಟ ಅಂಬೆ
ಕನ್ನಡ ನಡೆ-ನುಡಿ, ಆಚಾರ-ವಿಚಾರದ ಜಗದಂಬೆ
ಬೇರೆ ಭಾಷೆ ಕಲಿತರೂ ಸದಾ ಕನ್ನಡವನ್ನೇ ನಂಬೆ
ಕನ್ನಡ ಜೀವ -ಭಾವ ಸದಾ ಎನಗೆ ಸಕ್ಕರೆ ಗೊಂಬೆ . . ೨

ಕನ್ನಡ ಬರೀ ಭಾಷೆಯಲ್ಲ, ಜೀವವಾಹಿನಿ ನುಡಿ ಉಸಿರು
ಕನ್ನಡ ಉಸಿರಿನಿಂದಲೇ ಬದುಕು ಅನವರತ ಹಚ್ಚಹಸಿರು
ಅಧ್ಯಯನದಿ ಅಜ್ಞಾನವ ತೊಡೆವುದು ಅನ್ಯಭಾಷೆ ಕೆಸರು
ಕಲ್ಪನೆಯ ಕನ್ನಡ ಬೀಜಬಿತ್ತಿ ಭಾಷೆಯ ಭಾವದ ನೇಸರು
ಕನ್ನಡದ ಕುವರಿಯೆಂಬುದೇ ಕನ್ನಡತಿಗೆ ಹೆಮ್ಮೆ ಹೆಸರು . . ೩

ಕನ್ನಡ ನೆಲ, ಕನ್ನಡ ಬಲ, ಕನ್ನಡ ಛಲ, ಕನ್ನಡ ಜಲ
ಕನ್ನಡದ ಮಾತು, ಕನ್ನಡವೇ ಸ್ಪೂರ್ತಿಯ ಸೆಲೆ
ಅನ್ಯಭಾಷೆ ಕಲಿಕೆ ಕಲೆ, ನನ್ನಭಾಷೆ ಸಮೃದ್ಧ ಜೀವಹೊಲ
ಕನ್ನಡಬಾಂಧವರೆಲ್ಲ ನಿನ್ನ ಮಕ್ಕಳಿಗೊಂದೇ ಒಂದು ಕುಲ
ಇದುವೇ ಹಣೆಮಣಿದು ಕನ್ನಡವ ಪೂಜಿಸಿದಾ ಫಲ . . ೪

ನನ್ನ ಕನ್ನಡ ಪ್ರಕೃತಿಯ ಸಕಲಡೆಗೂ ಅಡಗಿ ಕುಳಿತಿದೆ
ನಾಡಿನ ಯಾವುದೇ ಮೂಲೆಯ ಮಗುವು ವ್ವಾ ವ್ವಾ ಎಂದಿದೆ
ಬೀಸುವ ಗಾಳಿ ಸುಯ್ಯಿ ಸುಯ್ಯಿ ಎಂದು ಕನ್ನಡದೇ ಬೀಸಿದೆ
ಕಲ್ಲು ಕಡೆಯುವಾಗ ಕಟಲ್ ಕಟಲ್ ಎಂದೇ ಧ್ವನಿಸುತ್ತದೆ
ಮಳೆಯ ನೀರು ಟಪ್ ಟಪ್ ಎಂದು ಕನ್ನಡದಲ್ಲೇ ಬೀಳುತ್ತದೆ. . ೫

-ಪದ್ಮಜ ಜೆ. ಉಮರ್ಜಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x