“ಕತ್ತಲ ಹೂವು” ನೀಳ್ಗತೆ (ಭಾಗ ೫): ಎಂ.ಜವರಾಜ್

ಭಾಗ 5

ಬೆಳಗಿನ ಜಾವದೊತ್ತಲ್ಲಿ ಮುಂಗಾರು ಬೀಸ್ತಿತ್ತು. ಶೀತಗಾಳಿ. ದೊರ, ವಾಟೀಸು, ಕಾಂತ, ಕುಮಾರ, ಚಂದ್ರ ಎಲ್ಲ ಶಿಶುವಾರದ ಜಗುಲಿ ಮೇಲೆ ಶೀತಗಾಳಿಗೆ ನಡುಗುತ್ತ ತುಟಿ ಅದುರಿಸುತ್ತ ಪಚ್ಚಿ ಆಡುತ್ತಿದ್ದವು. ಶೀತಗಾಳಿ ಜೊತೆಗೆ ಸಣ್ಣ ಸಣ್ಣ ಹನಿ ಉದುರಲು ಶುರು ಮಾಡಿತು. ಶಿಶುವಾರದ ಜಗುಲಿ ಕೆಳಗೆ ನೆಲ ಕೆಂಪಗಿತ್ತು. ಕೆಮ್ಮಣ್ಣು. ಕೆಂಪು ಅಂದ್ರೆ ಕೆಂಪು. ಹನಿ ಉದುರುವುದ ಕಂಡು ಪಚ್ಚಿ ಆಡುವುದನ್ನು ನಿಲ್ಲಿಸಿ ಕೆಳಗಿಳಿದು ಮೊನಚಾದ ಬೆಣಚು ಕಲ್ಲು, ಕಡ್ಡಿ ತೆಗೆದುಕೊಂಡು ಕೆಮ್ಮಣ್ಣು ಕೆದಕಿ ಅಲ್ಲೆ ಅವರವರದೇ ಒಂದು ಗದ್ದೆ ಪಾತಿ ಮಾಡಿಕೊಂಡು ಹದ ಮಾಡಿದರು. ‘ಇದು ನಂದು ಅದು ನಿಂದು ಅದು ಅವುಂದು’ ಅಂತ ಅವರವರೇ ಮಾತಾಡಿಕೊಂಡು ಬಿತ್ತನೆ ಮಾಡಲು ಶಿಶುವಾರದ ಹಿಂದಿದ್ದ ಕಾಡುಬೀಜ ಬಿಡಿಸಿಕೊಂಡು ಬರಲು ಹೋದರು. ಎಲ್ಲವನ್ನು ನೋಡುತ್ತ ಕಿಸಿಕಿಸಿ ನಗುತ್ತಾ ನಿಂತಿದ್ದ ನೀಲ ಅವರು ಅತ್ತ ಹೋಗುವುದನ್ನೇ ಕಾಯುತ್ತಿದ್ದವಳಂತೆ ದಾವಣಿಯ ಸೆರಗನ್ನು ತಲೆ ಮೇಲೆ ಎಳೆದು ಬಿರಬಿರನೆ ನಡೆದು ಒಂದರೆ ಗಳಿಗೆ ನೋಡಿ ಅವರು ಅಷ್ಟೂ ಹೊತ್ತು ಮಾಡಿದ್ದ ಗದ್ದೆ ಪಾತಿಯನ್ನು ಕಾಲಿಂದ ಹೊಸಕಿ ಬಯ್ಯುತ್ತ ಕೆಳಗಿರೊ ಮಣ್ಣನ್ನೆಲ್ಲ ಶಿಶುವಾರದ ಜಗುಲಿ ಮೇಲೆ ಎರಡೂ ಕೈಯಿಂದ ಎತ್ತಿ ಎತ್ತಿ ಹಾಕಿ ಮೇಲತ್ತಿ ಆ ಮಣ್ಣನ್ನು ಒಣಗಾಕಿರುವ ರಾಗಿ ಬತ್ತ ಕೈಯಾಡುವಂತೆ ಕೈಯಾಡಿ ಹಾಗೇ ಬಂದು ಮರ ಒರಗಿ ನಿಂತು ಕಿಸಕಿಸ ನಗ ತೊಡಗಿದಳು.

ಕಾಡು ಬೀಜ ಬಿಡಿಸಿಕೊಂಡು ಬಂದು ನೋಡಿದ ಹುಡುಗರು ಸಿಟ್ಟುಗೊಂಡು ನೀಲಳ ಕಡೆ ನೋಡಿದರು. ಅವಳು ಹಾಗೇ ಕಿಸಕಿಸನೆ ನಗುತ್ತಲೇ ಇದ್ದಳು. ಇವರು ಅವಳತ್ತ ಕಲ್ಲು ಬೀರಿ ‘ಏಯ್ ನಿಮ್ಮೊವ್ವನಾಕೆಯ್ಯ.. ಪಾತಿನೆಲ್ಲ ಕೆಡ್ಸಿ ಯಾಕ್ ಮಣ್ಣೆತ್ತಕಿದ್ದಯ್..’ ಅಂತ ಬೈತಿದ್ದರೆ ಚಂದ್ರ ಬೆರಗಿನಿಂದ ನೋಡ್ತಾ ನಿಂತಿದ್ದ. ನೀಲ ಓಡಿ ಬಂದು ಕಾಂತನ ಜುಟ್ಟಿಡಿದು ದರದರ ಎಳೆದಾಡಿ ತಿರುಗಿಸಿ ಬಿಸಾಕಿದಳು. ವಾಟೀಸು ‘ಏಯ್ ಬುಡು ನೀನ್ಯಾಕ್ ಮಣ್ಣೆತ್ತಕಿದ್ದಯ್’ ಅಂದೇಟಿಗೆ ಅವನ ಜುಟ್ಟನ್ನೂ ಹಿಡಿದು ‘ನಿಂದುಡ ಮಣ್ಣು.. ನಿಮ್ಮಪ್ಪುನ್ದುಡ ಮಣ್ಣು.. ನಿಮ್ಮೊವ್ ಮಿಂಡ್ ತಂದಾಕಿದ್ನ..’ ಅಂತ ಹಿಡಿದ ಜುಟ್ಟ ಬಿಡದೆ ತಿರುಗಿಸಿ ತಿರುಗಿಸಿ ಜಾಡಿಸಿ ಒದ್ದಳು. ಅವನು ಮಾರು ದೂರ ಬಿದ್ದು ಕಿಟಾರನೆ ಕಿರುಚಿಕೊಂಡ. ಉಳಿದವರು ಪರಾರಿಯಾದರು.

ಕಾಂತನ ಜುಟ್ಟು ಕಿತ್ತು ಕೆಮ್ಮಣ್ಣಿನ ಮೇಲೆ ಬಿದ್ದಿತ್ತು. ಕಾಂತ ಕಿಟಾರನೆ ಅರಚಿಕೊಂಡೇಟಿಗೆ ಅವನ ಅವ್ವ ಓಡಿ ಬಂದಳು. ನೀಲ ಗುಡುಗುಡನೆ ಓಡಿ ಹೋಗಿ ತೆಂಗಿನ ಮರದತ್ತಿರ ನಿಂತಳು. ಕಾಂತ ಕಣ್ಣೀರು ಸುರಿಸುತ್ತ ದುಕ್ಕಳಿಸುತ್ತಿದ್ದ. ಕಾಂತನ ಅವ್ವ ‘ನಿಂಗೇನ್ ಬಂದಿದ್ದು ದೊಡ್ ರೋಗ..’ ಅಂತ ಶಾಪಾಕಿದಳು. ನೀಲ ಕಲ್ಲು ಬೀರಿ ತಾಳತುದಿ ಅಂತಾನು ಕಾಣದೆ ಬೈಯುತ್ತ ಕ್ಯಾಕರಿಸಿ ಕ್ಯಾಕರಿಸಿ ಉಗಿಯುತ್ತಿದ್ದಳು. ಅವಳು ಕಲ್ಲು ಬೀರಿದ ಸ್ಪೀಡಿಗೆ ಕಾಂತನ ಅವ್ವನ ತಲೆ ಒಡೆದು ರಕ್ತ ಸೋರ ತೊಡಗಿತು. ಅಕ್ಕಪಕ್ಕದವರು ಶೀತಗಾಳಿ ಬೀಸುವುದನ್ನು ಲೆಕ್ಕಿಸದೆ ಬಂದು ದಿಕ್ಕಾಪಾಲಾಗಿ ಗುಂಪುಗೂಡಿ ಓವ್.. ಅಂತ ಗಲಿಬಿಲಿಗೊಂಡರು. ಚೆನ್ನಬಸವಿ ದಡದಡಾಂತ ನಡಕಟ್ಟಾಕಿಕೊಂಡು ಓಡಿ ಬಂದಳು. ಕಾಂತನ ಅವ್ವ ಒಂದು ಕೈಲಿ ಏಟು ಬಿದ್ದ ತಲೆ ಅದುಮಿಡಿದು ಸೋರುತ್ತಿದ್ದ ರಕ್ತವನ್ನು ತಡೆದು ರಕ್ತಸಿಕ್ತ ನೋವಲ್ಲಿ ಸಿಟ್ಟುಕೊಂಡು ನೀಲಳ ಬಗ್ಗೆ ಚೆನ್ನಬಸವಿ ಬಗ್ಗೆ ಆಡುತ್ತಿದ್ದ ಮಾತು ಚೆಲ್ಲಿಕೊಂಡಿತು. ಚೆನ್ನಬಸವಿ ನೀಲಳ ಕಿರಿಕಿರಿ ಎಟ್ಟಿ ‘ಯಾಕ.. ಯಾಕ.. ನೀನಿಂಗ ಹೊಟ್ಟ ಉರಿಸಿಯೆ’ ಅಂತ ಮುಂದಲೆ ಹಿಡಿದು ರಪ್ಪರಪ್ಪನೆ ಬಡಿದಳು. ನೀಲ ಚಿಳ್ಳನೆ ಚೀರುತ್ತ ತನ್ನ ಅವ್ವನ ಮೇಲಿನ ಕೋಪವನ್ನು ಕಾಂತನ ಅವ್ವನ ಮೇಲೆ ತಿರುಗಿಸಿದಳು

ಈ ಕಾಂತನ ಅವ್ವ ಅನ್ನೋಳು ಆ ನಂಜಿ ಅವ್ಳಲ್ಲ.. ಅದೆ.. ಆ ನವುಲೂರಮ್ಮನ ಸೊಸೆ. ಈ ನವುಲೂರಮ್ಮ ದೊಡ್ಡ ನಂಜಯ್ಯನಿಗೆ ಎರಡನೇ ಹೆಂಡತಿಯಾಗಿ ಬಂದವಳು. ಕಾಂತನ ಅವ್ವಳಿಗೆ ವರಸೆಯಲ್ಲಿ ಮಲತ್ತೆ. ಈ ಮಲತ್ತೆಗು ಇವಳಿಗೂ ಈಚೀಚೆಗೆ ಹೊಂದಾವಣಿ ಇರಲಿಲ್ಲ ಎಂಬುದು ಗೊತ್ತಿತ್ತು. ಅದಿರಲಿ, ಈ ಕಾಂತನ ಅವ್ವ ನೀಲಳ ಕಲ್ಲು ಏಟಿಗೆ ಕಿಟಾರನೆ ಕಿರುಚಿದಳು. ಅವರ ಮನೆಯವರು ಓಡೋಡಿ ಬಂದು ಒಬ್ಬರಿಗೊಬ್ಬರು ನುಲಿದುಕೊಂಡರು. ಶಿವಯ್ಯನೂ ಅವನ ಹೆಂಡತಿ ಸಿದ್ದಿಯೂ ಅವರ ಮಕ್ಕಳು ಮರಿಗಳೂ ಇದ್ಯಾವುದಕ್ಕು ತಲೆ ಹಾಕದೆ ತಮ್ಮ ಪಾಡಿಗೆ ತಾವು ಜಗುಲಿ ಮೇಲೆ ನಿಂತು ನೋಡುತ್ತಿದ್ದರೆ ಈ ಶಿವಯ್ಯ ಹಸುಗಳಿಗೆ ನೀರು ಕುಡಿಸಿ ಮೈಯುಜ್ಜಿ ಗಾಡಿ ಕಟ್ಟಲು ಸಜ್ಜಾಗಿದ್ದ.

ಶಿಶುವಾರದ ಜಗುಲಿ ಕೆಳಗೆ ಕಾಡುಬೀಜ ಕೈಲಿಡಿದು ನಿಂತಿದ್ದ ಚಂದ್ರನಿಗೆ ಶಿವಯ್ಯ ಸನ್ನೆ ಮಾಡಿದನೇನೋ.. ಅವನ ಅಪ್ಪನ ಸನ್ನೆಗೆ ಓಡಿ ಬಂದ ಚಂದ್ರ ನಾಲ್ಕಾರು ಮನೆ ಬಚ್ಚಲು ನೀರಿಂದ ಗಬ್ಬುನಾತ ಬೀರುತ್ತಿದ್ದ ಮೋರಿ ನೀರು ಹರೀತಿದ್ದ ಸಂದಿ ಗೋಡೆಯ ಮೊಳೆಗೆ ಸಿಕ್ಕಿಸಿದ್ದ ಎತ್ತಿನ ಕೊಂಬಿನಲ್ಲಿದ್ದ ಎರೆಂಡವನ್ನು ಎತ್ತಿಕೊಂಡು ಅಪ್ಪನಿಗೆ ಕೊಟ್ಟ. ಶಿವಯ್ಯ ಬಿದಿರು ಅಚ್ಚೆಯಲ್ಲಿ ಎತ್ತಿನ ಕೊಂಬಿನೊಳಗಿದ್ದ ಎರೆಂಡ ಅಜ್ಜಿಕೊಂಡು ಕಡಾಣಿ ತೆಗೆದು ಗಾಡಿಯ ಚಕ್ರಕ್ಕೆ ಹಾಕಿ ದೂರಿಯನ್ನು ಒಂದೆರಡು ಸಲ ಕುಲುಕಿ ಕುಲುಕಿ ನೋಡಿ ಹಾಗೇ ಮುಂದೆ ಬಂದು ಮೂಕಿ ಎತ್ತಿ ನೊಗಕ್ಕೆ ಎರಡೂ ಕಡೆಗೆ ಬಾರ‌್ಕಾಣಿ ಹಾಕಿ ಬಿಗಿದ. ಶೀತಗಾಳಿ ಬೀಸುತ್ತಲೇ ಇತ್ತು.

ಅಲ್ಲಿ ಜನ ಜಗನ್ ಜಾತ್ರೆಯಾಗಿತ್ತು. ನಿಂತಿದ್ದವರು ಕುಂತಿದ್ದವರು ಜಗಳಾಡುತ್ತಿದ್ದವರನ್ನು ಎಳೆದೆಳೆದು ಬಿಡಿಸುತ್ತ ಇಬ್ಬರಿಗೂ ಬುದ್ದಿವಾದ ಹೇಳುತ್ತಿದ್ದರು. ನೀಲ ಯಾರಿಗೂ ಕೇರು ಮಾಡದೆ ಎಗರಿ ಎಗರಿ ಸಿಕ್ಕಸಿಕ್ಕವರ ಜುಟ್ಟು ಹಿಡಿದು ಜಗ್ಗುತ್ತ ತನ್ನ ಲಂಗ ಎತ್ತಿ ಎತ್ತಿ ತೋರಿಸುತ್ತ ‘ನೋಡು ಇಲ್ಲಿ’ ಅಂತ ಕೆಕ್ಕಳಿಸಿ ನೋಡುತ್ತ ವಾಚಾಮಗೋಚರ ಬೈಯುತ್ತಾ ಥೂ ಥೂ ಅಂತ ಉಗಿಯುತ್ತಿದ್ದಳು. ನಂಜು ನಂಜಾದ ಕಣ್ಣು ಅಗಲಿಸಿ ನವುಲೂರಮ್ಮ ಲೈಟುಕಂಬ ಒರಗಿ ಕೋಲೂರಿಕೊಂಡು ನೋಡುತ್ತಾ ನಿಂತಿದ್ದರೆ ಇತ್ತ ಅಡಿನಿಂಗಿ ಕೋಲಿಡಿದುಕೊಂಡು ಜಗುಲಿ ಮೇಲೆ ಕುಂತು ಜಗಳಾಡುವವರ ಕಡೆ ಕೋಲು ತೋರುತ್ತ ಗದರಿಸುತ್ತಿದ್ದಳು.

ನವುಲೂರಮ್ಮ ತನ್ನ ಜಮಾನದಲ್ಲಿ ಮೈ ಕೈ ತುಂಬಿಕೊಂಡು ಗಟ್ಟಿಯಾಗಿದ್ದಳು. ಯಾವಾಗಲೂ ಲಕಲಕ ಅನ್ನೊಳು. ಹೆಂಗೆ ಬೇಕಾದ್ರೆ ಹಂಗೆ ಮಾತಾಡೋಳು. ಅವಳ ಮಾತು ಕೇಳೋಕೇ ಚೆಂದ. ಏನು ಬೇಕಾದರು ಮಾತಾಡೋಳು. ಗಂಡಸರಿರಲಿ ಹೆಂಗಸರಿರಲಿ ಕೇರು ಮಾಡದೆ ಅಡಿಯಿಂದ ಮುಡಿಯವರೆಗೂ ಇಂಚಿಂಚೂ ಬಿಡದೆ ಗೇಲಿ ಮಾಡ್ತಾ ನಗ್ತಾ ಮಾತಾಡೋಳು. ಅವಳ ಮಾತಿಂದ ಉಬ್ಬಿ ಬೆವೆತು ಹೋಗಿರುವವರೂ ಇದ್ದರು. ಚೆಲ್ಲು ಚೆಲ್ಲು ಮಾತು ಬಿಟ್ಟು ಅವಳಷ್ಟೇ ಮಾತಿನಲ್ಲಿ ಜೋರಿದ್ದ ವಾರ‌್ಗಿತ್ತಿ ಅಡಿನಿಂಗಿಗೂ ಕಿಚಾಯಿಸಿ ಹೇಳ್ತಾ ಇದ್ದರೆ ಅಡಿನಿಂಗಿಗೆ ಕೇಳೊಕೇನು ತಕರಾರಿರಲಿಲ್ಲ.

ಹಿಂಗೆ ಒಂದಿನ ಮುಂಗಾರು ಬೀಸ್ತಿತ್ತು. ಒಂದೂ ಒಂದೂವರೆ ವರ್ಷದ ಕೂಸಾಗಿದ್ದ ಕಾಂತನಿಗೆ ದಡಾರವಾಗಿ ಮೈಯೆಲ್ಲ ಗಂಧ ಎದ್ದಿತ್ತು. ಈ ನವುಲೂರಮ್ಮ ತನ್ನ ಮೊಮ್ಗೂಸ್ನ ನರಳಾಟ ನೋಡಲಾರದೆ ‘ಎತ್ಗಂಡು ಸೊಸ್ಮಾರಿಗುಡಿಗಾರು ಹೋಗಿ ತೇರ್ಥನಾದ್ರು ಹಾಕ್ಸು. ನಾ ಒಕ್ಕುಲ್ಗೇರಿಲಿರ ಅಗಸ್ರು ಪೂಜಾರಿನ ಕರ ತತ್ತಿನಿ’ ಅಂತ ಸೊಸೆಗೇಳಿ ಎಲೆಅಡಿಕೆ ಅಗಿತಾ ಉಗಿತಾ ಒಕ್ಕಲಗೇರಿ ಕಡೆ ನಡೆದಳು. ಆಗ ಆ ಅಗಸರ ಪೂಜಾರಿ, ಮಾತಾಡುತ್ತ ಮಾತಿಗೆ ಮಾತು ಬಂದು ಗೇಲುಗನ್ನ ಆಡಿದ. ನವುಲೂರಮ್ಮ ಸಲಿಗೆಯಿಂದ ‘ಅದ್ಯಾಕಪ್ಪ ಹಿಂಗಂದಯ್’ ಅಂತ ಕಿರಿ ಎಟ್ಟಿದ್ದಳು. ಅವನು ‘ನಕ್ಲಿಗೆಲ್ಲ ಹೇಳಕಾದ್ದ ನಂಬುದ್ರ ನಂಬು ಬುಟ್ರ ಬುಡು’ ಅಂದಿದ್ದ. ನವುಲೂರಮ್ಮ ಬೆರಗಾಗಿದ್ದಳು. ಇದ ಅಡಿನಿಂಗಿಗೆ ಹೇಳದ ಬೇಡ್ವ ಅಂತ ಯೋಚನೆಗೆ ಬಿದ್ದು ತಿಣುಕಾಡುತ್ತಿದ್ದಳು.

ಒಂದಿನ ಹಿಂಗೆ ರಾಗಿ ಕಳ ಕೀಳಕೇಂತ ಕುಡುಗೋಲು ತಕ್ಕಂಡು ಹೊಲದ ಕಡೆ ಹೋಗುತ್ತಿದ್ದ ಅಡಿನಿಂಗಿನ ಕರ‌್ದು ಕೂರುಸ್ಕಂಡು ಎಲೆಅಡಿಕೆ ಕೊಟ್ಟು ತಾನೂ ಹಾಕೊಂಡು ಅಗಿತಾ ಉಗಿತ ಮಣುಮಾತು ಆಡ್ತಾ ಚುಡಾಯಿಸಿದ್ದಳು. ಅಡಿನಿಂಗಿ ಇವಳ ಗೇಲಿಗೆ ನಗ್ತಾ ಇನ್ನೊಂದು ಗೋಟಡಿಕೆ ಈಸಿಕೊಂಡು ಬಾಯಿಗಾಕಿಕೊಂಡು ಕಟುಂ ಅಂತ ಕಡಿದಳು.‌ ಇದೇ ಸವುಳು ಅಂತ ನವುಲೂರಮ್ಮ ಅಡಿನಿಂಗಿ ಕಿವಿ ಹತ್ರ ಬಂದು ಸೊಸೆ ಚೆನ್ನಬಸವಿ ಬಗ್ಗೆ ಪಿಸಪಿಸ ಅಂತ ಪಿಸುಗುಟ್ಟಿದ್ದಳು. ಅಡಿನಿಂಗಿ ನಂಬದೆ ಸಿಡುಕಿ ಕೊಸರಿ ಮುಕ್ಕರಿದು ಹಿಂದಕ್ಕೆ ಜಾರಿದಳು.

ಅವತ್ತು ಚೆನ್ನಬಸವಿಯ ಅವ್ವ ಅವರ ಊರಲ್ಲಿ ಗದ್ದೆಗೆ ಕಳ ಕೀಳಕೆ ಅಂತ ಹೋಗಿ ಉದ್ದಿ ತೆವ್ರಿಯಿಂದ ಬಿದ್ದು ಕಾಲು ಮುರಿದಿತ್ತು. ಇದ ಕೇಳಿ ಲಬೊಲಬೊ ಬಾಯಿ ಬಡಿದುಕೊಂಡು ಕುಂತಿದ್ದಳು. ಅವ್ಳ ಗೋಳ ನೋಡ್ನಾರ‌್ದೆ ನಾನೇ ‘ಹೋಗಿ ನೋಡ್ಕಂಡು ಬ್ಯಾಗ್ನೆ ಬಾ.. ಇಂದ್ ಕಳ್ದು ನಾಳಿದ್ದು ಸೊಸ್ಮಾರಿ ಹಬ್ಬ ಅದ.. ಅದೆ ನೆವ ಮಾಡ್ಕಂಡು ಉಳಿಬ್ಯಾಡ. ಏನಾ ಜಾರ‌್ಬಿದ್ದು ಕಾಲು ಉಳ್ಕಿರ‌್ಬೇಕು.. ಬ್ಯಾಗ್ನ ಬಾ ಜ್ವಾಕ ಅಂತ ಅಂದಿದ್ರು ಅವ ಗ್ಯಾನ್ಗೆಟ್ಟು ಬ್ಯಾಗ್ನೆ ಬರ‌್ದೆ ನನ್ ಬೊಯ್ತಳ ಅಂತೇನೊ ಹಬ್ಬುದ್ ಜಿನ ಹೊತ್ತುಟ್ಟೊ ಮುನ್ನ ಬಂದ್ಲಲ್ಲ..’ ಅಂತ ಒಳಗೇ ಗುನುಗಿಕೊಂಡು ಸರಿ ಬತ್ತಿನಿ ಅಂತ ಸೆರಗ ಮೇಲೆತ್ತಿ ಹೆಗಲಿಗೆಸೆದು ಕುಡುಗೋಲು ಹಿಡಿದು ಬಿರಬಿರನೆ ಹೊಲದ ಕಡೆ ನಡೆದಿದ್ದಳು.

ಅದೇ ಹೊತ್ತಲ್ಲಿ ಅವತ್ತು ಈ ಕಾಂತನ ಅವ್ವ ನೀರ್ ತತ್ತಾ, ಸೌದ ಮುರಿತಾ, ಬಟ್ಟ ಒಗಿತಾ ತಿರುಗಾಡ್ತ ಬಳಸಾಡ್ತ ವಾರಗಣ್ಣಲ್ಲಿ ನೋಡ್ತ ಇವರಾಡಿದ್ದ ಮಾತು ಕೇಳಿಕೊಂಡು ‘ಅವೈ ಹಿಂಗು ಉಂಟಾ..’ ಅಂತ ಮನಸಲ್ಲೆ ಗೊಣಗುಟ್ಟಿ ಬೆಚ್ಚಗೆ ಮಡಿಕಂಡಿದ್ದಳು.

ಈಗ ಶೀತಗಾಳಿ ಮತ್ತೂ ಜೋರಿತ್ತು. ಆ ಜೋರಿನೊಳಗೆ ಕಾಂತನ ಅವ್ವ ತನ್ನ ಮಲತ್ತೆ ನವುಲೂರಮ್ಮ ಅಡಿನಿಂಗಿ ಜೊತೆ ಕುಂತು ಗುಸುಗುಟ್ಟಿದ್ದ ಪುರಾಣವ ತೆಗೆದಳು. ಆ ಪುರಾಣದೊಳಗೆ ಆ ಚೆನ್ನಬಸವಿಯೂ.. ಅವಳ ಹೆಜ್ಜೆ ಗುರುತುಗಳೂ ಮೂಡತೊಡಗಿದವು.

                          *

ಅವತ್ತು ಊರೊಳಗೆ ನಾಳೆ ನಡೆವ ಸೊಸ್ಮಾರಿ ಹಬ್ಬದ ಸಿದ್ದತೆ ನಡೆದಿತ್ತು. ಮಾರ‌್ಲಾಮಿ ಅಮಾಸ ಇನ್ನೂ ಎಂಟ್ಹತ್ತು ದಿನವಿತ್ತು. ರಾತ್ರಿ ಎಂಟೊಂಭತ್ತರ ಹೊತ್ತಲ್ಲಿ ಊರು ಗಕುಂ ಅಂತಿತ್ತು. ನಾಯಿಗಳು ಬೀದಿಬೀದಿಯಲ್ಲಿ ಓಡಾಡುತ್ತ ಬೊಗಳುತ್ತ ಕಚ್ಚಾಡುತ್ತಾ ಊಳಿಡುತ್ತಿದ್ದವು. ಇದರೊಂದಿಗೆ ‘ನಾಳ ಸೊಸ್ಮಾರಿ ಹಬ್ಬ ಅದ ಎಲ್ರು ಮನ ಕ್ವಾಣ ತೊಳ್ಕಂಡು ನೀರು ಪಾರು ಉಯ್ಕಂಡು ಸೊಸ್ಮಾರಿ ಗುಡಿತವ್ಕ ಬಂದ್ರಯ್ಯವ್…’ ಅಂತ ಚಿಕ್ಕೆಜಮಾನ ಬೀದಿ ಬೀದಿ ಹಾದು ಸಾರುತ್ತಾ ಇದ್ದುದು ಕೇಳುತ್ತಿತ್ತು. ಆ ಗಕುಂ ಎನ್ನುವ ರಾತ್ರಿಯಲ್ಲಿ ಯಾರೋ ಸೆರೆಗು ತಲೆ ಮೇಲೆ ಹಾಕಿಕೊಂಡು ಯಂಕ್ಟಪ್ಪನ ಮನೆ ಬಾಗಿಲಲ್ಲಿ ನಿಂತಿದ್ದಂತೆ ಕಂಡಿತು. ಗಕುಂ ಅನ್ನುವ ಕತ್ತಲು. ಏನೂ ಕಾಣಲೊಲ್ಲದು. ದೂರಕ್ಕೆ ಅಲ್ಲಿ ಯಾರು ನಿಂತಿದ್ದಾರೆ ಎಂಬುದೂ ಕಾಣದೆ ಅಸ್ಪಷ್ಟವಾಗಿತ್ತು. ಅದೇ ಹೊತ್ತಲ್ಲಿ ಯಂಕ್ಟಪ್ಪನ ಮನೆ ಒಳಗೆ ಸಣ್ಣ ಲೈಟು ಉರಿತಿತ್ತು. ಆ ಗಕುಂ ಅನ್ನೊ ಕತ್ತಲ ಬೀದಿಯಲ್ಲಿ ಯಾರೋ ಹಾದು ಹೋದ ಹಾಗಾಯ್ತು. ಅಲ್ಲಿ ಯಂಕ್ಟಪ್ಪನ ಮನೆ ಬಾಗಿಲಲ್ಲಿ ನಿಂತಿದ್ದವಳ ಎದೆ ಅಳುಕಿದಂತಾಗಿರಬೇಕು. ಅವಳು ಸೆರಗು ಮತ್ತಷ್ಟು ಎಳೆದು ನಿಧಾನಕೆ ತಿರುಗಿ ಕಣ್ಣಾಡಿಸಿದಳು. ಅಷ್ಟರಲ್ಲಿ ಒಳಗೆ ಉರೀತಿದ್ದ ಆ ಲೈಟೂ ಹಾಫಾಗಿ ಕತ್ತಲು ಕವುಸಿಕೊಂಡು ಬಾಗಿಲು ಕಿರ್ರ್ ಅಂತ ತೆರೆದುಕೊಂಡಿತು. ಹಾಗೆ ತೆರೆದ ಬಾಗಿಲ ಸಂದಿಯಲ್ಲಿ ಬೀಡಿ ಮೊನೆಯ ಕಿಡಿಯೊಂದು ಮೇಲೆ ಕೆಳಗೆ ಆಡುತ್ತ ಬಾ ಎಂದು ಬೆಳಗಿತು.

ಇತ್ತ ಊರೊಳಗೆ ಹಬ್ಬಕ್ಕೆಂತ ಸಾರುತ್ತಿದ್ದವನು ಬೀದಿ ಬೀದಿ ಸಾಗಿ ಕೊನೆ ಬೀದಿಗೆ ಹೋದಂತಿತ್ತು ಎನ್ನುವುದಕ್ಕೆ ಅವನ ಕೂಗಿನ ಸದ್ದು ನಿಧಾನಕೆ ತಗ್ಗಿ ಸಣ್ಣಗೆ ಕೇಳುತ್ತಿತ್ತು. ಆಗ ಮತ್ತೆ ಮನೆ ಬಾಗಿಲು ಸಣ್ಣಗೆ ಕಿರುಗುಟ್ಟಿ ಮುಚ್ಚಿಕೊಂಡಿತು.

ಅಗಸರ ಪೂಜಾರಿ ಸೊಸ್ಮಾರಿ ಹಬ್ಬದ ನಿಮಿತ್ತ ಸೊಸ್ಮಾರಿಗುಡಿಗೆ ಸುಣ್ಣ ಹೊಡೆದು ಗುಡಿನೆಲ್ಲ ತೊಳೆದು ಕ್ಲೀನ್ ಮಾಡಿ ಯಜಮಾನರಿಗೆ ಹೇಳಿ ಮನೆಕಡೆ ಹೋಗುವಾಗ ಯಂಕ್ಟಪ್ಪನ ಮನೆಬಾಗಿಲಲ್ಲಿ ಯಾರೋ ನಿಂತಿರುವಂತೆ ಕಂಡರು ಅವ ಯಾರೆಂದು ತಿಳಿಯದೆ ಗೊಂದಲಗೊಂಡ. ಈ ಗೊಂದಲ ಅವನನ್ನು ಅತ್ತಿಂದಿತ್ತ ಇತ್ತಿಂದತ್ತ ಅಲ್ಲಲ್ಲೆ ನಿಧಾನಕೆ ಆ ಕತ್ತಲೊಳಗೇ ಹೆಜ್ಜೆ ಹಾಕುವಂತೆ ಮಾಡಿತು. ಅವನು ಒಂದೊಂದು ಹೆಜ್ಜೆ ಎತ್ತಿಡುವಾಗಲು ಅವತ್ತು ಬೆಳಗಿನ ಜಾವದ ಸನ್ನಿವೇಶ ದುತ್ತನೆ ಬಂತು.

ಈ ಯಂಕ್ಟಪ್ಪ ಹೊತ್ತು ಮೂಡುವ ಮುನ್ನ ನಾಲ್ಕು ನಾಲ್ಕೂವರೆ ಹೊತ್ತಲ್ಲಿ ಅವನ ಅವ್ವ, ಹೆಂಡತಿ, ನಾಲ್ಕೈದು ವರ್ಷದ ಮಗ ಶಿವನಂಜ ಎಲ್ಲ ಮನೆ ಹೊಸಿಲಿಗೆ ಪೂಜೆ ಮಾಡಿ ಬುತ್ತಿ ಕಟ್ಟಿದ ಹಸುಬೆ ಹೆಗಲಿಗೆ ಏರಿಕೊಂಡು ಮನೆ ಬೀಗ ಹಾಕಿ ಮಾದೇಶ್ವರ ಬೆಟ್ಟಕ್ಕೆ ಹೋದದ್ದು.

ಈಗ ಬೀಗ ಹಾಕಿರುವ ಮನೆ ಬಾಗಿಲಲ್ಲಿ ನಿಂತಿದ್ಯಾರೂ.. ಮನೆಯೊಳಗೆ ಸಣ್ಣದಾಗಿ ಲೈಟ್ ಬೇರೆ ಉರಿತಿತ್ತು. ಹಂಗೇ ಅದೂ ಹಾಫಾಯ್ತು. ಇದೆಲ್ಲ ಮನಸ್ಸಿಗೆ ಬಂದು ತಲೆ ಕೆರೆದುಕೊಂಡ. ಅಲ್ಲೆ ಮರೆಯಲ್ಲಿ ನಿಂತು ಬೀಡಿ ಹಸ್ಸಿದ. ದಿಗಿಲುಗೊಂಡವನಂತೆ ಬುಸ್ಸಬುಸ್ಸನೆ ದಮ್ಮು ಎಳೆಯುತ್ತ ಅದೇನೇನೋ ಯೋಚಿಸುತ್ತಾ ಸುಮ್ಮನೆ ಅತ್ತಿಂದಿತ್ತ ಇತ್ತಿಂದತ್ತ ಹೆಜ್ಜೆ ಹಾಕತೊಡಗಿದ.

ಅವನ ಈ ದಿಗಿಲಿಗೆ ಕಾರಣವೂ ಇದೆ. ಇದೇ ತರ ಒಂದಿನ ತನ್ನ ಹಿರಿಮಗಳ ಹೆರಿಗೆಗೆಂದು ಬೀಗ ಹಾಕಿಕೊಂಡು ಮೈಸೂರಿನ ಆಸ್ಪತ್ರೆಗೆ ಹೋಗಿದ್ದ ಮಲ್ಲಮೇಷ್ಟ್ರು ಮನೆ ಕಳ್ಳತನವಾಗಿತ್ತು. ಆಗ ಮನೆಯಲ್ಲಿದ್ದ ಓಲೆ ಜುಮುಕಿ ರೇಷ್ಮೆಸೀರೆ ಕಂಚುನ್ ತಟ್ಟೆ ಲೋಟ ಎಲ್ಲ ಕಳ್ಳರ ಪಾಲಾಗಿತ್ತು. ಪೋಲಿಸ್ ಕಂಪ್ಲೆಟ್ ಕೊಟ್ಟು ಅವರೂ ಹುಡುಕಾಟ ನಡೆಸಿದ್ದರು ಕಳ್ಳರ ಸುಳಿವು ಸಿಗಲಿಲ್ಲ. ಒಂದೆರಡು ದಿನದ ನಂತರ ಹೊಳೆಯಲ್ಲಿ ನೀರಂಜಿ ಮರದಡಿ ಮರಳು ತುಂಬಲು ಗಾಡಿ ಕಟ್ಟಿಕೊಂಡು ಹೋಗಿದ್ದವರ ಎಲಕೋಟಿಗೆ ರೇಷ್ಮೇ ಸೀರೆ ಕಂಚುನ್ ತಟ್ಟೆ ಸಿಕ್ಕಿದ್ದವು. ತನ್ನ ಎರಡು ಹುಣಸೇ ಮರ ಕಾಯುತ್ತ ಜೋಪಾನ ಮಾಡುತ್ತ.. ಹಾಗೇ ನೀರ‌್ಕಡೆ ಬಂದವನ ಕಣ್ಣಿಗೆ ಎಲ್ಲ ಕಂಡವು. ಇದರಿಂದ ಗಾಬರಿಗೊಂಡ ದೊಡ್ಡಬಸವಯ್ಯ ಓಡೋಡಿ ಬಂದು ಮಲ್ಲಮೇಷ್ಟ್ರಿಗೆ ಸುದ್ದಿ ಮುಟ್ಟಿಸಿದ್ದು ಇಡೀ ಊರಿಗೇ ಗೊತ್ತಿತ್ತು. ಅದೆ ತರ ಯಂಕ್ಟಪ್ಪನ ಮನೆಗೂ ಆದ್ರೆ ಅಂತ ಗುಮಾನಿ ಆಯ್ತು. ಇದರೊಳಗೆ ಮನೆ ಒಳಗೆ ಆ ಲೈಟೂ ಹಾಫಾದ್ದು ಅವನ ಗುಮಾನಿಗೆ ಇನ್ನಷ್ಟು ಇಂಬು ಸಿಕ್ಕಿತ್ತು. ಮತ್ತೆ ಏನೇನೊ ಯೋಚಿಸಿದ. ಜನರನ್ನ ಕೂಗಿ ಕಳ್ಳರನ್ನು ಹಿಡಿದು ಸೈ ಅನಿಸಿಕೊಳ್ಳೋಣ ಅಂದುಕೊಂಡ. ಸದ್ಯ ಈಗ ಊರ ಜನ ನಾಳಿನ ಹಬ್ಬದ ಕೆಲಸ ಮಾಡಿ ಮಾಡಿ ಸಾಕಾಗಿ ಉಸ್ಸಂತ ಮಲಗಿದ್ದರು. ಈಗ ಕೂಗಿ ಕರೆದರೆ ಮಲಗಿದ್ದವರು ಎದ್ದು ಬಂದರಾ ಅಂತಾನೂ ಅಂದುಕೊಂಡ. ಮತ್ತೆ ತನಗೇ ಒಂದು ಐಡಿಯಾ ಬಂದವನ ಹಾಗೆ ತಲೆ ಕುಣಿಸುತ್ತ ಮೆಲ್ಲಗೆ ಒಳಗೊಳಗೇ ಮಾತಾಡಿಕೊಳ್ಳುತ್ತ ಸ್ವಲ್ಪ ಹೊತ್ತು ಕಳೆದ ಮೇಲೆ ಯಂಕ್ಟಪ್ಪನ ಮನೆಯ ಜಗುಲಿ ಏರಿದ. ತಾನು ಅಂದುಕೊಂಡಂತೆ ಅಲ್ಲೆ ಬಿದ್ದಿದ್ದ ಸೌದೆ ಸೀಳಿನ ದಪ್ಪ ಸಿವುರು ಮುರಿದು ಚಿಲಕಕ್ಕೆ ಬಿಗಿದ. ಬಾಗಿಲಿಗೆ ಹೊಂದಿಕೊಂಡಿದ್ದ ರೂಮಿನ ಕಿಟಕಿ ಇತ್ತು. ಆ ಕಿಟಕಿ ಬಾಗಿಲಲ್ಲಿ ಒಳಗಿನ ಬೆಳಕು ಹೊರ ಬೀಳದ ರೀತಿ ಕಿಟಕಿ ರೀಪರ‌್ಗೆ ಓರೆಯಾಗಿ ದೊಡ್ಡ ಕಿಂಡಿ ಇತ್ತು. ಬಲಾಬಲ ಅಂತ ಹುಮ್ಮಸ್ಸುಗೊಂಡು ಕಿಂಡಿಯಿಂದ ಕಣ್ಣಾಡಿಸಿದ.

ಈಗ ಆ ರೂಮಿನ ಒಳಗೆ ಮಂದ ಬೆಳಕಿತ್ತು. ಯಂಕ್ಟಪ್ಪ ಬರಿ ಮೈಯಲ್ಲಿದ್ದ. ಅವನು ಬರೀ ಮೈಯಲ್ಲಿದ್ದದ್ದು ಅವನು ಕುಡಿಯುವಾಗ ನೋಡಿದವರಿಗೆ ಗೊತ್ತಿತ್ತು ಇದು ಮಾಮೂಲು ಅಂತ. ಅದಾಗಲೇ ಅದು ಊರಿಗೇ ಗೊತ್ತಿತ್ತು. ಆದರೆ ಈ ಬಗ್ಗೆ ಮಾತಾಡುವ ಧೈರ್ಯ ಯಾರಿಗಿತ್ತು.. ಅವನಿಗೆ ವಾರದಲ್ಲಿ ಒಂದಿನ ಭಾನುವಾರ ದೇವರು ಬರುತ್ತಿತ್ತು. ಅದ್ಯಾವ ದೇವರು ಅಂತ ಯಾರಿಗೂ ಗೊತ್ತಿಲ್ಲ. ಅಂತೂ ದೇವರು ಬರುತ್ತಿತ್ತು. ಆ ದೇವರು ಕೇಳಲು ಜನ ಬರುತ್ತಿದ್ದರು. ಅಲ್ಲಿ ಕವಡೆ ಶಾಸ್ತ್ರವೂ ಇತ್ತು. ಆ ದೇವರು ಕೇಳಲು ಕೆಲವರು ಬೆಳಗ್ಗೆ ಅಲ್ಲದೆ ರಾತ್ರಿ ಎಂಟಾದ ಮೇಲೆಯೂ ಬರುತ್ತಿದ್ದರು. ಅವನಲ್ಲಿ ದೇವರು ಕೇಳಲು ಗಂಡಸರಿಗಿಂತ ಬರೀ ಹೆಂಗಸರೇ ಬರುತ್ತಿದ್ದರು. ಅಲ್ಲಿ ಯಂಕ್ಟಪ್ಪನ ಮನೆಯವರೂ ಇರುತ್ತಿದ್ದರು. ಅವನು ಕೇಳಿದ್ದನ್ನು ತಂದು ಕೊಡುತ್ತಿದ್ದರು. ಎಲೆ ಅಡಿಕೆ ಮಡುಗಿ ಇಂತಿಷ್ಟು ಕಾಣ್ಕೆ ಜೊತೆಗೆ ಮಂಗಳೂರು ಗಣೇಶ ಬೀಡಿ, ಚಾವಿ ಬೆಂಕಿ ಪೆಟ್ಟಿ, ಗ್ಲೂಕೂಸ್ ಬಿಸ್ಕಟ್ ತರುತ್ತಿದ್ದರು. ಆ ದೇವರನ್ನು ಬರಿಮೈ ದೇವರು ಅಂತಾನೂ ಕರೀತಿದ್ರು.

ಈಗ ಅದೇ ತರ ಬರೀ ಮೈಲಿ ಗೋಡೆ ಒರಗಿ ಬೀಡಿ ಸೇದುತ್ತಿದ್ದ. ಆ ಬೀಡಿ ಹೊಗೆ ಮನೆನೆಲ್ಲ ಅಡರಿಕೊಂಡು ಕಮ್ಮಿ ವೋಲ್ಟೇಜ್ ಲೈಟಿನ ಬೆಳಕು ಮತ್ತೂ ಕಮ್ಮಿಯಾಗಿ ಮಂದವಾಗಿತ್ತು. ಆ ಮಂದ ಬೆಳಕಲ್ಲಿ ಚೆನ್ನಬಸವಿ ಮುಖ ಕಂಡಿತು. ಅವಳು ಅಡಿನಿಂಗಿ ಸೊಸೆ ಚೆನ್ನಬಸವಿಯೇ. ಈಗ ಅವಳು ನಾಚಿಕೊಂಡವಳಂತೆ ಕಂಡಳು. ಅವಳಿಗೂ ಒಂದು ಬೀಡಿ ಕೊಟ್ಟ. ಅರೆ, ಅವಳೂ ಏಕ್ದಂ ತುಟಿಗೆ ಕಚ್ಚಿದಳು. ಯಂಕ್ಟಪ್ಪ ಕಡ್ಡಿ ಗೀರಿದ. ಬೀಡಿ ಕಚ್ಚಿದ ತುಟಿಯನ್ನು ಮುಂದೆ ತಂದಳು. ಹಸ್ಸಿದ. ಅವಳು ದಮ್ಮು ಎಳೆಯಲು ಶುರು ಮಾಡಿದಳು. ಕಿಂಡಿಯಲ್ಲಿ ನೋಡುತ್ತಿದ್ದ ಈ ಪೂಜಾರಿ ಅರೆ ಇದೇನಿದು ಅಂತ ಮನಸಲ್ಲೇ ರಾಗ ಎಳೆದುಕೊಂಡ. ಅವಳ ಮುಖ ಬೆವರುತ್ತಿತ್ತು. ಅವನು ಕೈ ನೀಡಿ ‘ನಾ ಬಯಿಸ್ತ ಇದ್ರು ನೀ ದೂರನೆ ಹೋಯ್ತಾ ಇದ್ದಯ್.. ನಾನೇನ್ ಕಮ್ಮಿ ಇದ್ದನು ಹೇಳು.. ನಿಂಗೊಸ್ಕರ ಕೋರ್ಟ್ ಕೇಸದ ಅಂತ ಬೆಟ್ಟುಕ್ಕು ಹೋಗ್ದೆ ಪಾಟಾಪೋಟಿ ಮಾಡಿ ಎಲ್ರುನು ಬೆಟ್ಟುಕ್ಕ ಕಳಿಸಿನಿ. ಇಲ್ಲೆಲ್ಲ ನಾನೂ ಹೋಗಿನಿ ಅನ್ಕಂಡರ. ನಾನೂ ಅಲ್ಲಿ ಇಲ್ಲಿ ಸುತ್ತಿ ಈಗ್ತಾನೆ ಬಂದಿನಿ. ನಿಂಗ ನೆನ್ನೆ ಸಂತತವು ಹೇಳಿದ್ದಿ ಇದ್ನೆಲ್ಲ. ಸಂತ ಜಾಗುಕ್ಕು ನಿಮ್ಮೂರ‌್ಗು ದಂಡ್ವೆ. ನೀನು ನಂಗೊಸ್ಕರ ನಿಮ್ಮೊವ್ವ ಗದ್ದತವು ಬಿದ್ದು ಕಾಲ್ ಮುರುದ್ದ ಅಂತ ಹೇಳಿ ಊರಿಗೋಗಿದ್ದ ಅಲ್ವ. ಇಷ್ಟಲ್ಲ ನಂಗೊಸ್ಕರನೆ ತಾನೆ ನೀ ನಡ್ಕಂಡಿರದು.. ನಿಮ್ಮತ್ತ ಹೇಳ್ದಾಗಿ ನೀನು ಬಂಜೆಲ್ಲ ಫಲ ಕೊಡೊ ಮರ’ ಅಂದ. ಅವಳು ಉಬ್ಬಿದಂತೆ ಕಂಡಳು. ‘ನೀನೇನು ಅಂಜ್ಬೇಡ. ನಿಮ್ಮತ್ತ ಆಡ ಮಾತ ನಾ ಕೇಳಿನಿ. ನಿನ್ನೊಟ್ಟಲಿ ಹುಳ ಯಾಕ.. ನಿಮ್ಮತ್ತ ಎದುರ‌್ಗ ತಲ ಎತ್ಕ ತಿರ‌್ಗ ತರ ಹುಟ್ಟುಸ್ತಿನಿ. ಮದ್ವ ಆಗಿ ಏಡೊರ‌್ಸ ಆಯ್ತು. ಆಗಿಂದ ನಿನ್ ಗಂಡ ಏನ್ ಮಾಡನ.. ಎಂತ ಸುಖ ಕೊಟ್ಟನ ಅನ್ನದು ನಿಂಗೇ ಗೊತ್ತದ. ನಾನು ಹತ್ತೂರ‌್ಗೆ ಬೇಕಾದಂವ. ನಿನ್ನ ಇರಗಂಟ ರಾಣಿತರ ನೋಡ್ತಿನಿ. ಪೋಡ್ರು ಸುನಾವೇನ.. ಐನಾತಿ ಬಟ್ಟನು ತಕ್ಕೊಡ್ತಿನಿ.. ಬೆಳ್ಗಿದ್ದಯ್ ಮೈಕೈಲಿ ರಸ ತುಂಬ್ಕಂಡಿದೈ.. ಇಂಗಿಟ್ಕಂಡು ಜೀವನ್ಯಾಕ ಸಾಯಿಸ್ದಯಿ’ ಅಂತೆಳೆದುಕೊಂಡ. ಅವಳು ಅವನನ್ನೇ ದಿಟ್ಟಿಸುತ್ತಿದ್ದಳು. ಕಿಟಕಿ ಕಿಂಡಿಯಲ್ಲಿ ನೋಡ್ತಿದ್ದ ಪೂಜಾರಿಗೆ ಮೈ ಬೆವರಿ ಒದ್ದೆಯಾಯ್ತು. ಅವಳು ಒಲ್ಲೆ ಅನ್ನುವಂತೆ ಕೊಸರಾಡಿ ಕೊಸರಾಡಿ ಸೇದುತ್ತಿದ್ದ ಬೀಡಿ ಕೆಳ ಬಿದ್ದಿತು. ಅವನ ಬೀಡಿಯೂ ಮೂಲೆ ಸೇರಿತು. ಗಪ್ಪನೆ ತಬ್ಬಿಕೊಂಡ. ಪೂಜಾರಿ ದಂಗಾದ. ಮತ್ತಷ್ಟು ಬೆವರಿದ.

ಇತ್ತ ಬೀದಿಯಲ್ಲಿ ನಾಯಿಗಳ ದಂಡಿತ್ತು. ಅವು ಬೆದೆಗೆ ಬಂದು ಒಂದಕ್ಕೊಂದು ಬಿಗಿದುಕೊಂಡಿದ್ದವು. ಹತ್ತಾರು ನಾಯಿಗಳು ಕಚ್ಚಾಡುತ್ತ ಅವುಗಳ ರಂಪಾಟ ಜೋರಾಗಿ ಯಂಕ್ಟಪ್ಪನ ಮನೆ ಬಾಗಿಲಿಗೆ ಬಂದು ದಿಕ್ಕಾಪಾಲಾಗಿ ಬೊಗಳುತ್ತಿದ್ದವು. ಇಷ್ಟಾದರು ಆ ಅಗಸರ ಪೂಜಾರಿಗೆ ಗ್ಯಾನವಿಲ್ಲದೆ ಕಿಟಕಿ ಕಿಂಡಿಯೊಳಕ್ಕೆ ತೂರಿಸಿದ್ದ ಕಣ್ಣನ್ನು ಇತ್ತ ಬಿಟ್ಟಂತೆ ಕಾಣಲಿಲ್ಲ. ಆ ನಾಯಿಗಳೂ ಕಚ್ಚಾಡುತ್ತ ಕಚ್ಚಾಡುತ್ತ ಮೈಮೇಲೆ ಎಗರುತ್ತ ಅಚಾನಕ್ ಇವನ ಮೇಲೆ ಎರಗಿದವು. ಇವನು ಸುತ್ತಿಕೊಂಡಿದ್ದ ಲುಂಗಿ ನಾಯಿಯ ಬಾಯಲ್ಲಿತ್ತು. ನೋಡಿ ದಿಗಿಲುಗೊಂಡು ಲುಂಗಿ ಕೀಳಲು ಹೋಗಿ ಅದು ಪರ‌್ರಂತ ಹರಿದು ಅವು ಮತ್ತೆ ಇವನ ಮೇಲೆ ಎರಗಲು ಬಂದವು. ಅವನು ದಡ್ಡಕ್ಕಂತ ಜಗುಲಿಯಿಂದ ಕೆಳಕ್ಕೆ ಬಿದ್ದು ಅಯ್ಯಯ್ಯಪ್ಪಾ ಅಂತ ಅರಚುತ್ತಾ ಗಕುಂ ಎನ್ನುವ ಆ ಕತ್ತಲ ಬೀದಿಯೊಳಗೆ ದಿಕ್ಕಾಪಾಲು ಓಡಿದ್ದು..

ಈಗ ಕಾಂತನ ಅವ್ವ ಅಷ್ಟೂ ದಿನಗಳಿಂದ ಬೆಚ್ಚಗೆ ಎದೆಯಲ್ಲಿಟ್ಟುಕೊಂಡದ್ದನ್ನು ಯಾವುದ್ಯಾವುದೋ ನೆವದಲ್ಲಿ ಜಗಜ್ಜಾಹೀರು ಮಾಡಿದ್ದೂ..ಅಲ್ಲಿ ನವುಲೂರಮ್ಮ ಕೋಲೂರಿಕೊಂಡು ಲೈಟುಕಂಬ ಒರಗಿ ನಿಂತೂ.. ಇಲ್ಲಿ ಅಡಿನಿಂಗಿ ಜಗುಲಿ ಮೇಲೆ ಕುಂತೂ..

ಇವಳಾಡಿದ ಆ ಮಾತ ಕೇಳ್ತಾ.. ಆ ಚೆನ್ನಬಸವಿ ಅಲ್ಲಿ ನಿಂತಿದ್ದ ನವುಲೂರಮ್ಮನಿಗು ಇಲ್ಲಿ ಕುಂತಿದ್ದ ಅಡಿನಿಂಗಿಗೂ ಶಾಪ ಧೂಪಾಕಿ ಬೀದಿಲಿರ ಧೂಳ ಮೇಲೆತ್ತಿ ಎರಚಿ ಹೊಟ್ಟೊಟ್ಟೆ ಬಡಿದುಕೊಳ್ಳುತ್ತ ‘ಅಂದವ್ರ್ ಮನ ಎಕ್ಕುಟ್ಟೋಗ ಆಡ್ದವ್ರ್ ಮನ ಕುಲ್ಗೆಟ್ಟೋಗ’ ಅಂತ ಗೋಳೋ ಅಂತ ಅಳ್ತಾ ಸಂದಿ ಕಡೆ ಓಡ್ತಾ.. ಇತ್ತ ಶೀತಗಾಳಿಗೆ ಮೈದುರಿ ತೆಂಗಿನ ಮರ ಒರಗಿ ನಿಂತು ಅವಳ ಅವ್ವನೊಂದಿಗೆ ಕಾಂತನ ಅವ್ವಳನ್ನೂ ಮತ್ತವರ ಕಡೆಯವರನ್ನೂ ಕೆಕ್ಕಳಿಸಿ ನೋಡಿ ಕೈತೋರಿಸಿ ಬೊಯ್ತಿದ್ದ ನೀಲ ಅವಳವ್ವ ಅತ್ತ ಹೋದಂತೆ ಬೀದಿದಿಕ್ಕ ಮುಖ ಮಾಡಿ ಇತ್ತ ಸರಿದು ಮೆಲ್ಲನೆ ‘ಹೋಗಿ.. ಆಯ್ತು ಹೋಗಿ..’ ಅಂತ ಕಿಸಕಿಸ ನಗತೊಡಗಿದಳು.

ಶೀತಗಾಳಿ ಮತ್ತಷ್ಟು ಜೋರಾಗಿ ಜಗಳ ನೋಡುತ್ತ ನಿಂತಿದ್ದ ಕುಂತಿದ್ದ ಜನ ಮೈಮುದುರಿ ನಡುಗುತ್ತ ಹೆಜ್ಜೆ ಕಿತ್ತರು. ಗಾಡಿ ಕಟ್ಟಲು ನಿಂತಿದ್ದ ಶಿವಯ್ಯ ಜೋರು ಬೀಸುತ್ತಿದ್ದ ಶೀತಗಾಳಿಗೋ ಏನೋ ಗಾಡಿ ಕಟ್ಟುವುದೊ ಬೇಡವೊ ಅಂತ ಯೋಚಿಸತೊಡಗಿದಂತೆ ಕಂಡಿತು.

-ಎಂ.ಜವರಾಜ್
(ಮುಂದುವರಿಯುವುದು..)


ಎಂ.ಜವರಾಜ್ ಮೂಲತಃ ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ಟೌನ್ ಬೈರಾಪುರ ಗ್ರಾಮದವರು. ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಕರಾಮುವಿವಿ’ಯಲ್ಲಿ ಇತಿಹಾಸದಲ್ಲಿ ಎಂ.ಎ.ಪದವೀಧರರು. “ನವುಲೂರಮ್ಮನ ಕಥೆ” (ಕಥಾಸಂಕಲನ), “ಕಿಡಿ” (ಕಾದಂಬರಿ) “ಮೆಟ್ಟು ಹೇಳಿ ಕಥಾ ಪ್ರಸಂಗ (ಕಥನ ಕಾವ್ಯ) “ಅವ್ವ ನನ್ಹೆತ್ತು ಮುದ್ದಾಡುವಾಗ” (ಕವಿತೆಗಳು), “ನೆಲದ ಚಿತ್ರಗಳು” ( ವಿಮರ್ಶಾ ಬರಹಗಳು) ಇವರ ಪ್ರಕಟಿತ ಕೃತಿಗಳು. ಇವರ ಕಥೆ, ಕವಿತೆ, ಇತರೆ ಬರಹಗಳು ಪಂಜು ಸೇರಿದಂತೆ ನಾಡಿನ ವಿವಿಧ ಪತ್ರಿಕೆಗಳಲ್ಲಿ  ಪ್ರಕಟಗೊಂಡಿವೆ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
hrl
hrl
9 months ago

bhashe chennagide

1
0
Would love your thoughts, please comment.x
()
x