“ಪರಿಸರ ದಿನ ಎನ್ನುವ ವರ್ಷದ ಶ್ರಾದ್ಧ”: ವೃಶ್ಚಿಕ ಮುನಿ

ಇವತ್ತಿನ ಜಮಾನಾದ ಜನರು ಪರಿಸರ ದಿನಾಚರಣೆ ಎಂದರೆ ವಾಟ್ಸಪ್, ಫೇಸ್ಬುಕ್, ಟ್ವಿಟ್ಟರ್,ಯೂಟುಬ್ ಇನ್ನಾವುದೋ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಗೀಚಿ, ಒಂದಿಷ್ಟು ಎಡಿಟ್ ಪೋಟೋ ಹಾಕಿ ಕೆಳಗೆ ಮೂಲೆಯಲ್ಲಿ ಇರಲಿ ನಮ್ಮದೊಂದು ಅಂತಾ ಫೋಟೋ ಹಾಕಿಕೊಂಡು ಮೆರೆದು ನಾವು ದೊಡ್ಡ ಪರಿಸರ ಪ್ರೇಮಿ ಎಂದು ಬಿಡುತ್ತೇವೆ. ಅವತ್ತು ನೆಟ್ಟು ಸಸಿ ಸಂಜೆಗೆ ಬಾಡಿ ಹೋಗಿರುತ್ತದೆ.ಪ್ರತಿ ವರ್ಷ ನೆಟ್ಟು ಜಾಗದಲ್ಲಿ ಮತ್ತೆ ಮತ್ತೆ ಸಸಿ ನೆಟ್ಟು ಹಲ್ಲು ಕಿಸಿದು ಫೋಟೋ, ಸೆಲ್ಫ್ ತೆಗೆಸಿಕೊಂಡು ಮತ್ತೆ ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿಕೊಂಡು ಲೈಕು, ಕಾಮೆಂಟ್,ವಿವ್ಸ್ಗಳಿಗೆ ಬಾಯಿ ಕಣ್ಣು ತೆರೆದು ಕೊಡಿ ಖುಷಿಪಟ್ಟು ಮರೆತು ಬಿಡುತ್ತೇವೆ. ಆದರೆ ನಾಳೆಗೆ ಪರಿಸರ ಕಾಳಜಿ ಬೇಡವೇ ? ಅದೇನು ವರ್ಷಕ್ಕೆ ಒಂದು ಸಾರಿ ಆಚರಣೆ ಮಾಡುವ ವರ್ಷದ ಶ್ರಾದ್ಧವೇ? ಇಲ್ಲಾ ವಾರ್ಷಿಕ ವರ್ಧಂತಿಯೇ? ವರ್ಷದ ಜಾತ್ರೆಯೋ ? ಅಲ್ಲತಾನೆ ಪ್ರತಿ ವರ್ಷ ಪ್ರತಿ ಇಲಾಖೆ ಪರಿಸರ ದಿನಾಚರಣೆ ಹಚ್ಚಿದ ಸಸಿ ಗಿಡವಾಗಿದೆಯೇ ಯಾರಿಗೂ ಗೊತ್ತು. ಸಸಿ ಗಿಡವಾಗುವುದಿಲ್ಲ ಎನ್ನುವ ಸತ್ಯ ನಡುವೆ ಮತ್ತೆ ಪರಿಸರ ದಿನಾಚರಣೆ ಬಂದು ನಿಂತು ಬಿಡುತ್ತದೆ.

ಮತ್ತೆ ಮತ್ತೆ ಮತ್ತೆ…
ಮನುಷ್ಯ ದುರಾಸೆಯ ಬೆನ್ನುಹತ್ತಿ ಪ್ರಕೃತಿಯ ಸರಣಿಯ ವ್ಯವಸ್ಥೆಯಲ್ಲಿ ತನ್ನ ಕುಬುದ್ದಿಯಿಂದ ಸಮತೋಲನವನ್ನು ಹಾಳುಗಡುವಿ ,ಅಕಾಲಿಕ ಮಳೆ ವಿಪರೀತಿ ಬಿಸಿಲು, ಲೆಕ್ಕಕ್ಕೆ ಸಿಗದಷ್ಟು ಚಳಿಗೆ ತಂದುಕೊಂಡು ಬಿಟ್ಟಿದ್ದೇವೆ ಆದರೂ ಸುಖಾಸುಮ್ಮನೆ ಪರಿಸರ ವ್ಯವಸ್ಥೆಯನ್ನು ಬೈಯ್ದು ಬಾಯಿ ಬೆಚ್ಚಗಾಗಿಸಿಕೊಳ್ಳುತ್ತೇವೆ. ಇಷ್ಟಾದರೂಕೊಟ್ಟು ಹೋದ ಪ್ರಕೃತಿಯನ್ನು ಉಳಿಸಿಕೊಳ್ಳುವ ಸಮಯವು ಮೀರಿ ತೊಡಗಿದ.ಗುಬ್ಬಚ್ಚಿ ,ಚಿಟ್ಟೆ , ಜೇನುಹುಳು ಜೈವಿಕ ಸರಳಪಳಿಯಲ್ಲಿ ಒಂದೊಂದಾಗಿ ನಶಿಸಿ ಹೋಗುತ್ತಿವೆ. ಸ್ವಾರ್ಥದ ಕ್ಷಣದ ಮೋಜು ಮಸ್ತಿಗಾಗಿ ನದಿಗಳಿಗೆ ಪ್ಲಾಸ್ಟಿಕ್ ಬೀಜಾಸುರನನ್ನು ನದಿ ಸಹಜ ಹರಿವಿಗೆ ,ಇಂಗುವಿಕೆಗೆ ತಡೆಯೊಡ್ಡಿ ,ಮರದ ಬುಡಕ್ಕೆ ಪಾದರಸದ ಮದ್ದಿಟ್ಟು ಶುದ್ಧ ಗಾಳಿಗೆ ವಿಷ ಸೇರಿಸಿ ಗಾಳಿಯನ್ನು ಕೊಂಡುಕೊಳ್ಳುವ ಸ್ಥಿತಿಯಲ್ಲಿದ್ದೇವೆ.ಕೊಳಚೆ ಮಾಡಿದ ನೀರನ್ನು ಯಂತ್ರ ಅಂಗಹೊಕ್ಕು ಸುಣ್ಣದ ಕಲ್ಲಿನ ಪದರು ಹೊಕ್ಕು ಹೊರಬಂದು “ಶುದ್ದ” ನೀರನ್ನು ಕೊಂಡು ಕುಡಿದು ಎಸೆದ ಪ್ಲಾಸ್ಟಿಕ್ ಬಾಟಲಿಯ ಬಿಂಬದಲ್ಲಿ ನಾಳೆ ಭವಿಷ್ಯ ಮಂಕ್ಕಾಗಿ ಮಣ್ಣಾಗುತ್ತಿದೆ.

ಈ ಎರಡು ವರ್ಷಗಳಲ್ಲಿ ಕೋವಿಡ್ ನೆಪದಲ್ಲಿ ಹಾಳಾಗಿದ್ದ ಪರಿಸರಕ್ಕೆ ತಕ್ಕಮಟ್ಟಿಗೆ ಚಿಕಿತ್ಸೆ ದೊರೆತಿದೆ. ಇದು ರೋಗ ಲಕ್ಷಣಗಳಿಗೆ ಮಾತ್ರ ಚಿಕಿತ್ಸೆ. ಆದರೆ, ಮಾನವನ ದುರಾಸೆ ಎನ್ನುವ ಮಹಾಮಾರಿ ಪರಿಸರಕ್ಕೆ ಬಡೆದುಕೊಂಡಿದೆ ಅದನ್ನು ಬುಡಸಮೇತ ತಗೆದಾಗಲೇ ಸಾಧ್ಯ.ಇದರ ನಡುವೆ ಮನುಷ್ಯ ಮೆದುಳಿನಲ್ಲಿ ಇರುವ ಸ್ವಾರ್ಥ, ದುಡ್ಡೇ ಮುಖ್ಯ,ಪರಿಸರ ಬಗ್ಗೆ ನಿಷ್ಕಾಳಜಿ , ಪರಿಸರದಲ್ಲಿ ನಾನೇ ಶ್ರೇಷ್ಠ ಇವುಗಳ ಮೊದಲ ತೊಲಗಬೇಕು ಆಗಾಲೇ ಪರಿಸರದ ಪರಿಹಾರಕ್ಕೆ ಒಂದು ದಾರಿ ಆದಿತು. ಪರಿಸರ ಮನುಷ್ಯನಿಗೆ ಅನಿರ್ವಾಯ, ಪರಿಸರಕ್ಕೆ ಮನುಷ್ಯ ಅನಿರ್ವಾಯವಲ್ಲ. ಇರುವ ಕಾಡನ್ನು ಕಾಡಿನ ಪಾಡಿಗೆ ಬಿಟ್ಟರೆ, ನಮ್ಮ ಸುತ್ತಲೂ ಇರುವ ಸೂಕ್ಷ್ಮ ಜೀವಿಯಿಂದ ಹಿಡಿದು ಬೃಹತ್ ಜೀವಿಗಳು ಒಟ್ಟು ಸಮುದಾಯವೇ ಪರಿಸರ ಎನ್ನುವ ವ್ಯವಸ್ಥೆ ಇಲ್ಲಿ ಮಾನವ ಸಹ ಒಂದು ಜೀವಿ.ಆದರೆ ಎಲ್ಲಾ ಜೀವಿಯಂತೆ ಬದುಕಿದೆ ಮಾನವ ದುರಾಸೆಗೆ ಸಿಕ್ಕ ಈ “ಹಸಿರು ಖಜಾನೆ” ಯನ್ನು ಅವನ ಬುದ್ದಿವಂತಿಯಿಂದ ನಿರಂತರ ಸುಲಿಗೆಗೆ ಒಳಪಟ್ಟು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಒದ್ದಾಡುತ್ತಿದೆ.ಕಾಡು ಹಾಳಾಗಿರುವುದು ಅದರ ಪಾಡಿಗಲ್ಲ ನಮ್ಮ ಪಾಲಿಗೆ..!

ಭಾರತದಲ್ಲಿ ಪ್ರತಿ ರಾಜ್ಯದ ಭೌಗೋಳಿಕ ವಿಸ್ತೀರ್ಣಕ್ಕೆ ಸರಾಸರಿಯಾಗಿ 34/ ಪ್ರತಿಶತದಷ್ಟು ಅರಣ್ಯ ಹೊಂದಿರುವುದು ಕಡ್ಡಾಯ ಆದರೆ ಕರ್ನಾಟಕದಲ್ಲಿ ಒಟ್ಟು ಅರಣ್ಯ ಪ್ರದೇಶ ಕೇವಲ 20.11/ ಪ್ರತಿಶತರಷ್ಟು ಮಾತ್ರ ಇದೆ. ಇದರಲ್ಲಿ ದಟ್ಟ ಅರಣ್ಯ ,ಮಾಧ್ಯಮ ಅರಣ್ಯ, ತೆರೆದ ಅರಣ್ಯ ಎಂದು ಹಂಚಿಕೆ ಆಗಿದೆ.ಕಾಡಿಗೆ ಹೊಂದಿಕೊಂಡು ಇರುವ ನಗರಗಳು ದಿನೇದಿನೇ ಕಾಡನ್ನು ಆಕ್ರಮಸಿಕೊಳ್ಳುತ್ತಿವೆ. ಬೇಸಿಗೆಯಲ್ಲಿ ಕಾಡುಗಿಚ್ಚಿಗೆ ಬಲಿಯಾಗುವ ಕಾಡು ತನ್ನ ಗಾತ್ರದಿಂದ ಕುಗ್ಗುತ್ತಾಯಿದೆ.ಕಾಡಿಗೆ ಬೆಂಕಿ ಹಾಕುವ ಮನಸ್ಥಿತಿಯನ್ನು ಪ್ರೇರಣೆ ಮಾಡುವ ಅಧಿಕಾರಿಗಳು ಇದ್ದಾರೆ ಎನ್ನುವುದೇ ದುರಂತದ ಸಂಗತಿ.ಕಾಡನ್ನು ಅದರ ಪಾಡಿಗೆ ಬಿಡುವುದು ಒಳಿತು. ತನ್ನ ಕೊಳ್ಳುಬಾಕತನದಿಂದ ಅವಶ್ಯಕತೆ ಮೀರಿ ಬದುಕಿನ ಗೆರೆ ದಾಟಿ ಬಿಟ್ಟಿದ್ದಾನೆ. ಎಂತಹ ವಿಪರ್ಯಾಸ ನೋಡಿ.ಯಾವತ್ತು ಒಂದು ಮರ ಕಡಿಯದ ಪುಟ್ಟ ಮಕ್ಕಳಿಗೆ ಕಾಡು ಕಡಿಯವುದು ಅಪರಾಧ ಎಂದುವ ಬೋಧನೆ ಮಾಡುತ್ತೇವೆ. ಆದರೆ, ಲಾರಿ ಗಟ್ಟಲೆ ಮರ ಕಡಿಯುವ ಮಾಫಿಯಾಕ್ಕೆ ಎಷ್ಟು ಮರ ಬಲಿಯಾದರು ಸಂಬಂಧಿಸಿದವರು ಜಾಣ ಕುರುಡುರು.ನಮ್ಮ ಸರ್ಕಾರದ ಕಾಡು ಉಳಿಸಿ ಎನ್ನುವ ಘೋಷಣೆಗಳು ಕಾಂಕ್ರೀಟ್ ಫಲಕದ ಮೇಲಿವೆ .ಇರುವ ಕಾಡನ್ನು ಉಳಿಸಿಕೊಳ್ಳವ ಸವಾಲು ಒಂದು ಕಡೆ ಆದರೆ, ಇರುವ ಕಾಡನ್ನು ಅಭಿವೃದ್ಧಿ ಮಾಡುವ ಸವಾಲು ಇನ್ನೊಂದು ಕಡೆ. ಸರ್ಕಾರದ ಬೃಹತ್ ಕೈಗಾರಿಕಾ, ನೀರಾವರಿ ಯೋಜನೆಗೆ ಹಸಿರು ತುಂಬಿದ ಕಾಡಿನ ಹೃದಯ ಭಾಗವೇ ಬೇಕು.ಮಾನವ ಆಸೆ ಹೆಚ್ಚಿದಂತೆ ಅವಶ್ಯಕತೆ ಇಲ್ಲದಿದ್ದರೂ ನಿವೇಶನಕ್ಕಾಗಿ ಕಾಡಿನ ಭೂಮಿಯನ್ನು ವಾಸಕ್ಕೆ ಉಪಯೋಗಿಸಿಕೊಳ್ಳುವು ಎಷ್ಟು ಸರಿ. ಕುಟುಂಬದ ಎಲ್ಲ ಸದಸ್ಯರಗೊಂದು ನಿವೇಶನಗಳು. ಅದು ರಿಯಲ್ ಎಸ್ಟೇಟ್ ದಂಧೆ ಹೆಸರಿನಲ್ಲಿ.ಮುಂದೆ ಮೋಜು ಮಸ್ತಿ ಗೆ ಬಲಿಯಾಗಿ ಕಾಡು ತನ್ನ ಸಹಜ ಬೆಳವಣಿಗೆಯನ್ನು ಕಳೆದುಕೊಂಡು ಬರಲಾಗುತ್ತಿದೆ.ಈ ವರ್ಷ ಆಮ್ಲಜನಕ ಕೊಂಡುಕೊಳ್ಳುವ ಪರಿಸ್ಥಿತಿಯಲ್ಲಿ ನಾವು ಬದುಕುತ್ತಿದ್ದೇವೆ ಎಂದರೆ ನಾವು ಎಷ್ಟು ಅಪಾಯದ ಹಂತವನ್ನು ತಲುಪಿದ್ದೇವೆ ಯೋಚಿಸಿ.


ಕಾಡು ಕಾಡುವ ದೇವರು.
ಅಧುನಿಕ ಭರಾಟೆಯ ಮುಂಚೆ ನಮ್ಮ ಹಿರಿಯರು ಕಾಡುಗಳ ರಕ್ಷಣಿಗಾಗಿ ದೇವರ ಕಾಡು ಎಂಬ ದೈವಿಕತೆಯನ್ನು ಕಾಡುಗಳಿಗೆ ತುಂಬಲಾಗಿತ್ತು.ಆಗ ಕಾಡಿನ ಬಗ್ಗೆ ಅವ್ಯಕ್ತವಾದ ಒಂದು ಭಯವಿತ್ತು .ಮಲೆನಾಡಿನಲ್ಲಿ “ನಾಗಬನ” ಗಳು ಇದೆ ಕಲ್ಪನೆಯಲ್ಲಿ ಮೂಡಿಬಂದವುಗಳ.ಇವುಗಳಂತೆ ಬಯಲು ಸೀಮೆಯಲ್ಲಿ ಆಲದಕಟ್ಟೆ, ದೇವರಕಟ್ಟೆ, ಮಾರಮ್ಮನಕಟ್ಟೆ . ದೇವರ ಗುಡ್ಡ ಗೋಮಾಳದ ಕಾಡು, ಜಾಲಿ ಹಿಂಡು… ಹೀಗೆ ಅಲ್ಲಿನ ಜೀವ ಜೈವಿಕ ಸಮೋಹಕ್ಕೆ ರಕ್ಷಣೆಯು ಇತ್ತು.ಇವು ಪರಿಸರ ಮತ್ತು ಮರಗಳ ರಕ್ಷಣೆ ತಂತ್ರಗಳಾಗಿದ್ದು, ಆದರೆ ಇವತ್ತು ದೇವರು ಎನ್ನುವ ಭಯ ಧರ್ಮದ ಅಫೀಮುದಿಂದ ಮಂದಿರ, ಮಸೀದಿ, ಇಗರ್ಜಿಗಳಿಗೆ ಸೀಮಿತವಾಗಿದ ದೇವರ ಕಲ್ಪನೆ ಬದಲಾವಣೆ ಎಂಥ ವಿಪರ್ಯಸ..! ಕಾಡು ದೇವರಲ್ಲವೆ..? ಕಾಡುನ್ನು “ಮಾನವರಾಕ್ಷಸ”ರಿಂದ ಆ ದೇವರೇ ಕಾಪಾಡಲಿ. ಆದರೆ ಮಾನವನಿಗೆ ದೇವರು ಎನ್ನುವ ಭಯ ಕಾಣೆಯಾಗಿದೆ.ಒಂದು ಮರ ತನ್ನ ಮನೆ “ಜಂತಿ”ಆದರೆ “ಕಂಬ”ಆದರೆ,”ಸೋಪಾ”ಆದರೆ ಟೀಪಾಯಿ ಆದರೆ ಎನ್ನುವ ದೃಷ್ಟಿಯಿಂದ ನೋಡುತ್ತಾನೆ. ಆದರೆ ಜೀವಂತ ಉಪಯೋಗ ಎಂದೂ ಕಾಣುವುದಿಲ್ಲ.ಎಂತಹ ಮೂರ್ಖ ಮನುಷ್ಯ.

ಮುಂದಿನ ಪೀಳಿಗಗೆ ನಾವು ಕೊಡಲು ಬಯಸುವ ಉಡುಗರೆಯಂತಾದರೆ ಅದು “ಶುದ್ದ ಪರಿಸರ”ವಾಗಿರಲಿ.ನವ ನಾಗರೀಕತೆಯಿಂದ ಮುಂದೆ ಇದನ್ನು ನಿರೀಕ್ಷಸುವುದು ಕಷ್ಟ ಸಾಧ್ಯವೆ ಸರಿ. ಈಗಾಗಲೆ ಎಚ್ಚತ್ತು ಕೊಂಡರೆ ಸಾಧ್ಯವಾದೀತೆನೋ. ಈ ಆಚರಣೆಗಳು ಒಂದು ದಿನಕ್ಕೆ ಮಾತ್ರವೆ ಸೀಮಿತವಾದರೆ ಅದಕ್ಕೆ ಅರ್ಥವೂ ಇರದು.ನಿತ್ಯವು ಆಚರಿಸಬೇಕು. ಉಸಿರು ಕ್ಷಣ ಕ್ಷಣಕ್ಕೂ ಹೇಗೆ ಮುಖ್ಯ ಹಸಿರು ಮುಖ್ಯ. ಹಸಿರಿನ ಪ್ರಗತಿವೂ ಅಷ್ಟೇ ಮುಖ್ಯ.ಬಳಸುವ ವಸ್ತುಗಳು ಪರಿಸರಕ್ಕೆ ಪೂರಕವಾಗಿರಲಿ, ಮಾರಕವಾಗದಿರಲಿ.ನಿಮ್ಮ ಸೋಮಾರಿತನ ಬದುಕು ಪರಿಸರಕ್ಕೆ ಮಾರಕವಾಗದಿರಲಿ. ಮುಂದಿನ ಪೀಳಿಗಗೆ ಮಾದರಯಂತೆ ಬದುಕನ್ನು ಆದಷ್ಟು ಸರಳವಾಗಿರಲಿ. ನೆಮ್ಮದಿಯ ನಿದ್ದೆಗೆ ಸುಪ್ಪತ್ತಿಗೆ ಬೇಡ ಶ್ರಮದ ಬದುಕು ಬೇಕು.ಬದುಕಿನಲಿ ಸರಳತೆ ಇದ್ದರೆ ಪರಿಸರ ಕಾಳಜಿ ತಾನಾಗಿಯೆ ಬರುತ್ತದೆ.ನೀವು ಪರಿಸರದ ಕೂಸು ಹೊರತು ಪರಿಸರ ನಿಮ್ಮ ಆಳಲ್ಲ.

ಒಂದು ಕ್ಷಣ ಯೋಚಿಸಿರಿ….
ನೀವು ಕೋಟಿ ಕೋಟಿ ಸಂಪಾದನೆ ಮಾಡುತ್ತಿರಿ ,ಮನೆ ಕಾರು ಎಲ್ಲ ಸೌಲಭ್ಯಗಳು ನಿಮ್ಮಲಿವೆ. ಆದರೆ,ಶುದ್ದ ಗಾಳಿ ,ನೀರು ,ಬೆಳಕು ಎಷ್ಟು ದುಡ್ಡು ಕೊಟ್ಟರೂ ಸಿಗದೆ ಇದ್ದಾಗ ? ನಿಮ್ಮ ದುಡ್ಡು ಕಸಕ್ಕೆ ಸಮ. ನಿಮ್ಮ ಮಕ್ಕಳಿಗೆ ಎಲ್ಲಾ ಕೊಟ್ಟಿದ್ದೀರಿ ಆದರೆ ಶುದ್ದಗಾಳಿ,ತಾಜಾ ಪರಿಸರವನ್ನು ಎಲ್ಲಿಂದ ತಂದು ಕೊಡುತ್ತಿರಿ. ಕೊಟ್ಟು ಹೋದ ವ್ಯವಸ್ಥೆಯನ್ನು ಮಾತ್ರವೇ ನಿಮ್ಮ ಮಕ್ಕಳಿಗೆ ಕೊಡಲು ನಿಮ್ಮಿಂದ ಆಗುವ ಕೆಲಸ. ಇಷ್ಟೂ ಹಣ ಇದ್ದರೂ ನಿಮ್ಮ ಹಣ ಆಸ್ತಿ ಅವರಿಗೇನು ಉಪಯೋಗ ಜೀವಿಸಲು ಜೀವವಾಯು ಮುಖ್ಯ ಅದನ್ನೇ ಕೊಡಲಾಗದವರು ನಾವು ನಮ್ಮ ಮುಂದಿನ ಪೀಳಿಗೆ ಹೇಗೆ ತಾನೇ ನಮ್ಮನ್ನು ನೆನಸಿಕೊಂಡಾರು, ಪ್ರೀತಿಸಿಕೊಂಡಾರು? ನಾವು ಈಗ ಮಾಡುತ್ತಿರುವ ಒಂದು ದಿನದ ವಿಶ್ವ ಪರಿಸರ ದಿನಾಚರಣೆ ಅವರು ನಮ್ಮ “ಶ್ರಾದ್ಧ ದಿನ”ಎಂದು ಆಚರಿಸುತ್ತಾರೆ. ಕಾಡಿನ ರಕ್ಷಣೆಯನ್ನು ಬಡವರು ಮಾತ್ರವೇ ಮಾಡಬೇಕು ಶ್ರೀಮಂತರು ಅದನ್ನು ಹಾಳು ಮಾಡಲು ಇರುವುದು ಇದು ಎಷ್ಟು ಸರಿ. ಎಲ್ಲರೂ ಇಲ್ಲಿಯೇ ಬದುಕುತ್ತಿದ್ದೇವೆ,ಇದು ಭೂಮಿಯ ಮೇಲೆ ಜೀವಿಸುವ ಎಲ್ಲರ ಕರ್ತವ್ಯ. ಬುದ್ದವಂತರೆ ಪರಿಸರದ ಬಗ್ಗೆ ಅಸಡ್ಡೆ ತೋರಿಸುತ್ತಾರೆ.ಇದು ಎಲ್ಲರೂ ಒಂದಾಗಿ ಮಾಡಬೇಕಾದ ಕೆಲಸ. ಈ ಪರಿಸರ ಯಾರಪ್ಪನ ಮನೆಯ ಆಸ್ತಿಯೂ ಅಲ್ಲ. ಅದು ಸುಲಿಗೆಯ ಖಜಾನೆಯೂ ಅಲ್ಲವೆ ಅಲ್ಲ. ನೀ ಬದುಕುತ್ತಿರುವುದು ಒಂದು ವ್ಯವಸ್ಥೆಯಲ್ಲಿ ನೀನು ಅದರ ಭಾಗವಾಗಿದ್ದೀಯಾ!? ನೀನೇ ಪರಿಸರವಲ್ಲ. ನಿನ್ನಂತೆಯೇ ಲೆಕ್ಕಕ್ಕೆ ಸಿಗದಷ್ಟು ಜೀವಿಗಳು ಸರಪಳಿಯಂತೆ ಬದುಕುತ್ತಿವೆ. ತಿಳಿದಿರಲಿ. ಸರಪಳಿ ವ್ಯವಸ್ಥೆಯಲ್ಲಿ ಒಂದು ಕೊಂಡಿ ಕಳಚಿದರೆ ಅಪಾಯ ಎಚ್ಚರಿಕೆ . ಬದುಕಿ ಬದುಕಲು ಬಿಡಿ.


ಪಕ್ಕದ ಮನೆಯ ಪುಟ್ಟನ ಪ್ರಶ್ನೆ?
ಈ ಪರಿಸರದಲ್ಲಿ ನಾವು ನಿತ್ಯವೂ ಬದುಕುತ್ತಿರುವಾಗ ಯಾಕೆ ಒಂದೇ ದಿನ ಪರಿಸರದಿನವನ್ನು ಆಚರಿಸಬೇಕು ?
ಪರಿಸರವನ್ನು ಬಿಟ್ಟು ನಾವು ಬದುಕಲು ಸಾಧ್ಯವೆ?
ನಾವು ಅಬ್ಬಬ್ಬಾ ಎಂದರೆ ಎಪ್ಪತ್ತು ವರ್ಷ ಬದುಕುತ್ತೇವೆ ಅಷ್ಟು ದಿನ ಇದು ನಮ್ಮ ಬಾಡಿಗೆ ಮನೆ ಅಲ್ಲವೇ, ಇದನ್ನು ಹಾಳು ಮಾಡಿದರೆ ಮಾಲೀಕನು ಸುಮ್ಮನೆ ಇರುತ್ತಾನೆಯೇ?
ಗಾಳಿ, ನೀರು ಮಣ್ಣು, ಎಲ್ಲವನ್ನು ಹಾಳುಮಾಡುವ ಅಧಿಕಾರಿಯನ್ನು ಕೊಟ್ಟವರಾರು?
ನಮ್ಮ ಜನಸಂಖ್ಯೆಯನ್ನು ನಾವು ವಿವೇಚನೆ ಇಲ್ಲದೇ ಯಾಕೆ ಇಷ್ಟು ಪ್ರಮಾಣದಲ್ಲಿ ಬೆಳೆಯಲು ಬಿಟ್ಟಿದ್ದೇವೆ?
ಮನೆಗೊಂದು ಕಾರು, ಬೈಕ್, ಬೇಕೆಬೇಕಾ? ಹಾಗಾದರೆ ಸರ್ಕಾರಿ ಬಸ್ ಯಾಕಿದೆ ?
ನಿಮ್ಮ ಆಹಾರ ಯಾಕೆ ವಿಷವಾಗಿದೆ? ಕೃತಕ ಆಹಾರವನ್ನು ಯಾಕೆ ಬಳಸುತ್ತಿದ್ದೇವೆ?
ಇಂತಹ ಎಲ್ಲಾ ಅಪಾಯದ ಕೆಲಸಕ್ಕೆ ಮನುಷ್ಯ ಯಾಕೆ ಮುಂದಾಗುತ್ತಾನೆ?
ತನ್ನ ಬುಡಕ್ಕೆ ಬಂದರೂ ಯಾಕೆ ಎಚ್ಚರಿಕೆ ವಹಿಸುತ್ತಿಲ್ಲಾ ?
ಈ ಪ್ರಶ್ನೆಗಳಿಗೆ ಉತ್ತರವಿದೆಯಾ?
ಹಾಗಾದರೆ ಉತ್ತರ ಹೇಳು .ನಾವು ಯಾವ ಪಾಪವನ್ನು ಮಾಡಿದ್ದೇವೆ? ನಮಗೂ ಶುದ್ಧ ಪರಿಸರ ಬೇಕಲ್ಲವೇ ? ನಾವು ಬದುಕಬೇಕಲ್ಲವೆ ?
ಉತ್ತರ ಹೇಳು .

ಈ ಪುಟ್ಟನ ಪ್ರಶ್ನೆಗಳು ನನ್ನನ್ನು ತಬ್ಬಿಬ್ಬಾಗಿಸಿತು. ದೀರ್ಘವಾಗಿ ಯೋಚನೆಯೂ ಸುಳಿದು ಹೋಯಿತು. ನಿಜ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನಮ್ಮಲ್ಲಿಯೇ ಇವೆ. ನಾವು ಬದಲಾಗಬೇಕು, ಬದುಕು ಮಾರ್ಗದಲ್ಲಿ ಬದಲಾವಣೆ ತರಬೇಕು ಆವಾಗ ಸಾಧ್ಯ. ದುಂದುವೆಚ್ಚ ಜೀವನಕ್ಕಿಂತ ಅವಶ್ಯಕತೆ ಜೀವನ ಮುಖ್ಯ.ಸಾಧ್ಯವಾದಷ್ಟು ಪ್ರಕೃತಿಯ ಮೇಲೆ ಅವಲಂಬಿನೆ ಕಡಿಮೆ ಮಾಡಿಕೊಂಡು ಸಹಜ ಜೀವನ ದತ್ತು ಒಲವು ತೂರಬೇಕು. ಪ್ರತಿದಿನ ಪರಿಸರ ಕಾಳಜಿ ಮತ್ತು ಕಾಪಾಡುವ ಪ್ರಜ್ಞೆ ಸದಾ ಜಾಗೃತವಾಗಿರಬೇಕು. ವನಮಹೋತ್ಸವ ಎನ್ನುವ ವರ್ಷದ ನಾಟಕ ಯಾಕೆ ಬೇಕು ಕಾಡು ಬೆಳೆಸುವುದು ಎಲ್ಲರ ಕರ್ತವ್ಯ ಆಗಬೇಕು. ಶಾಲೆಯಲ್ಲಿ ಕಾಡು ಬೆಳೆಸಿ ನಾಡು ಉಳಿಸಿ ಎಂದು ಹೇಳಿದರೆ ಸಾಲದು.ಕಾಡು ಬೆಳೆಸಲು ಇಚ್ಚಾಶಕ್ತಿಯ ಜೊತೆ ಸರ್ಕಾರದ ಬೆಂಬಲದಲ್ಲಿ ಮೊದಲು ದೊಡ್ಡವರಾದ ನಾವೇ ಪಾಲಿಸಿ ಮಾದರಿಯಾಗಬೇಕು . ಜೀವ ವೈವಿಧ್ಯತೆಯ ಕೊಂಡಿಗಳಿಗೆ ಯಾವ ತೊಂದರೆಯೂ ಮಾಡದೆ ಪರಿಸರ ಕೂಸಾಗಿ ಬದುಕಲು ಕಲಿಯಬೇಕು.ಅದು ನಿಜವಾದ ಪರಿಸರ ದಿನ.

-ವೃಶ್ಚಿಕಮುನಿ
ಜೂನ್ ಐದು ಎರಡುಸಾವಿರ ಇಪ್ಪತ್ತೊಂದು.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x