ಕನ್ನಡ ವಾಗ್ದೇವಿಯ ಭಂಡಾರವನ್ನೊಮ್ಮೆ ಅವಲೋಕಿಸಿದಾಗ ಹಲವಾರು ವಿಸ್ಮಯಗಳು ಸಹೃದಯ ಓದುಗರನ್ನು ಜಿಜ್ಞಾಸೆಗೆ ಹಚ್ಚುತ್ತವೆ. ಅರ್ವಾಚೀನ ಸಾಹಿತ್ಯದ ಮೇಲೆ ಸಂಸ್ಕೃತ ಭಾಷೆಯ ಪ್ರಭಾವವಿದ್ದಂತೆ ಆಧುನಿಕ ಸಾಹಿತ್ಯದ ಮೇಲೆ ಆಂಗ್ಲ ಭಾಷೆಯ ಪ್ರಭಾವವಿರುವುದನ್ನು ಕಾಣುತ್ತೇವೆ. ಅದರಲ್ಲಿ ಜಪಾನಿನ ಕಾವ್ಯ ಕಲೆ ‘ಹೈಕು’ ಕೂಡ ಒಂದು. ಜಪಾನಿನ ಜನಪದ ಲೋಕದಿಂದ ಒಡಮೂಡಿದ್ದ ಹಾಗೂ ಆಸ್ಥಾನದಲ್ಲಿ ನಲೆದಾಡುತಿದ್ದ ಹೈಕುಗೆ ಭವ್ಯವಾದ ದೀರ್ಘ ಪರಂಪರೆಯಿದೆ. ಜಪಾನಿನ ಭಾಷೆ ಚೀನಿಮಯ, ಚಿತ್ರಲಿಪಿ. ನಾವು ನಮ್ಮ ಭಾಷೆಯನ್ನು ಧ್ವನಿ ಮೂಲಕ ಗುರುತಿಸಿದರೆ ಜಪಾನೀಯರು ಚಿತ್ರದ ಮೂಲಕ ಗುರುತಿಸುವರು. ಝೆನ್ ನಿಂದ ಪ್ರಭಾವಿತವಾದ ಹೈಕುವನ್ನು ಸಾರಸ್ವತ ಅಂಗಳದಲ್ಲಿ ಪ್ರಕಾಶಿಸುವಂತೆ ಮಾಡಿದ್ದು ಜಪಾನಿನ ಮಾತ್ಸೋ ಭಾಶೋ. ಈತನ ಕಾಲಘಟ್ಟ ಕ್ರಿ. ಶ.೧೬೪೪-೧೬೯೪. ಈತನ ಕಾಲಘಟ್ಟವನ್ನು ಜಪಾನಿನ ಸಾಹಿತ್ಯದ ಸುವರ್ಣ ಯುಗವೆಂತಲೂ, ಬಾಶೋ ಯುಗವೆಂತಲೂ ಕರೆಯಲಾಗುತ್ತದೆ. ಈತನಿಗಿಂತ ಮುಂಚೆ ಯಾವಜಾಕಿ ಸೋಕಾನ, ಆರಾಕಿದಾ ಮೋರಿತಾಕೆ, ಮಾತ್ಸುನಾಗಾ ತೊಇತೊಕುು… ಮುಂತಾದ ಹೈಕು ಮಾಸ್ಟರ್ ಗಳು ಆಗಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಶೋ, ಇಸ್ಸಾ, ಶಿಕಿ ಹಾಗೂ ಮಿಸೋನ್ ಇವರನ್ನು ಪ್ರಮುಖವಾಗಿ ಸ್ಮರಿಸಲಾಗುತ್ತದೆ.
ಹೈಕು ತನ್ನ ಒಡಲಲ್ಲಿ ಝೆನ್ ನ ವಿಚಾರೆಧಾರೆಯನ್ನು ಒಳಗೊಂಡಿದೆ. ಹೈಕು ಕುರಿತು ತಿಳಿದುಕೊಳ್ಳುವ ಮುನ್ನ ನಾವು ಝೆನ್ ಕುರಿತು ತಿಳಿದುಕೊಳ್ಳುವುದು ಮುಖ್ಯವೆನಿಸುತ್ತದೆ. ಇದು ಬೌದ್ಧ ಧರ್ಮದ ಚಿಂತನೆಯ ಕೂಸಾಗಿದ್ದು ಪ್ರಮುಖ ಕೊಡುಗೆಯಾಗಿದೆ. “ಝೆನ್” ನ ಶಬ್ಧಶಃ ಅರ್ಥವೆಂದರೆ “ಧ್ಯಾನ” ಎಂದಾಗುತ್ತದೆ. ಈ ‘ಧ್ಯಾನ’ ಎಂಬುದು ಪಾಳಿ ಭಾಷೆಯಲ್ಲಿ “ಝನ” ಎಂದು ಅಪಭ್ರಂಶವಾಗಿರುವುದನ್ನು ಗುರುತಿಸಬಹುದು. ತದನಂತರ ಇದುವೇ ನಮ್ಮ ಪಕ್ಕದ ಚೀನಿ ಭಾಷೆಯಲ್ಲಿ “ಚಾನ್”, “ಚನ್ನಾ” ಎಂಬುದಾಗಿ ಕರೆಯಲ್ಪಟ್ಟಿತು. ಇದೇ ಜಪಾನಿನಲ್ಲಿ ಚೆನ್ನಾ>ಜೇಂಜೋ>ಝೆನ್ ಎಂಬುದಾಗಿ ಮಾರ್ಪಾಡಾಗಿದೆ ಎಂದು ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಇದರ ಇತಿಹಾಸ ಬೌದ್ಧ ಧರ್ಮ ಯಾವಾಗ ಚೀನಾ ದೇಶವನ್ನು ಪ್ರವೇಶಿಸಿತೊ ಅಂದರೆ ಕ್ರಿ.ಶ. ೬ ನೇ ಶತಮಾನದಿಂದಲೆ ಝೆನ್ ಚರಿತ್ರೆಯನ್ನು ಗುರುತಿಸಬಹುದು. ಝೆನ್ ಸ್ವಪ್ರಜ್ಞೆಯ ಅಭಿವ್ಯಕ್ತಿ, ಆತ್ಮಜ್ಞಾನ, ಸ್ವಪ್ರವೃತ್ತಿ, ಪ್ರಕೃತಿಗಳ ಅರಿವು ಮತ್ತು ಜಾಗೃತಿ, ಆತ್ಮಸಾಕ್ಷಾತ್ಕಾರ…. ಹೀಗೆ ಹಲವಾರು ವಿಷಯಗಳನ್ನು ಒಳಗೊಂಡಿದ್ದರೂ ಜ್ಞಾನೋಯವೊಂದೇ ಅದರ ಮುಖ್ಯ ಗುರಿ. ಜ್ಞಾನೋದಯದ ವ್ಯಾಪ್ತಿ ಎಷ್ಟು ಆಳ-ವಿಸ್ತಾರಗಳನ್ನು ಹೊಂದಿದೆ ಎಂದರೆ ಒಂದು ಮುಷ್ಠಿಯಲ್ಲಿ ಅದರ ಅರ್ಥ ಹಿಡಿದು ಇರಿಸಲಾಗದು. ಅದನ್ನು ಮುಚ್ಚಲೂ ಆಗದು. ಅದೊಂದು ಹೂವಿನ ಪರಿಮಳದಂತೆ….! ಮುಚ್ಚಲೂ ಆಗದ, ಬಿಚ್ಚಲೂ ಆಗದ ಝೆನ್ ನ ಮುಖ್ಯ ಪ್ರಕ್ರಿಯೆ ಎಂದರೆ ಲೌಕಿಕ ದಾಸ್ಯಗಳಿಂದ ನಮ್ಮ ಪ್ರಜ್ಞೆ, ಬುದ್ದಿ, ಭಾವಗಳನ್ನು ಮುಕ್ತಗೊಳಿಸುವುದು. ಅದರ ಮೂಲಕ ಬದುಕಿನ ಹೊಸ ದರ್ಶನ, ದೃಷ್ಟಿಕೋನಗಳನ್ನು ಪಡೆಯುವುದೇ ಆಗಿದೆ. ಇದಕ್ಕೆ ಜಪಾನ್ ಭಾಷೆಯಲ್ಲಿ “ಸತೋರಿ” ಎಂದು ಕರೆಯುವರು. ಅಂದರೆ ಜ್ಞಾನೋದಯ. “ಮನುಷ್ಯನಲ್ಲಿರುವ ಸ್ವ-ಪ್ರಜ್ಞೆ ಚಿಂಗಾರಿಯಂತೆ ಹೊತ್ತಿಕೊಂಡು ಅಭಿವ್ಯಕ್ತಿಗೊಳ್ಳುವುದೇ ಜ್ಞಾನೋದಯ”
ಝೆನ್ ತತ್ವ ಹೆಜ್ಜೆ ಇಡುವುದೇ ಜ್ಞಾನದ ಬಾಗಿಲ ಮೂಲಕ. ನಮ್ಮ ಸುತ್ತಲ ಪ್ರಪಂಚವನ್ನು, ವಸ್ತುಸ್ಥಿತಿಯನ್ನು ಸಂವೇದನೆಯಿಂದ ವಿಶ್ಲೇಷಿಸುವ ಒಂದು ಸ್ಥಿತಿ ಅಥವಾ ಅನುಭಾವವೇ ಸತೋರಿ. ಬದುಕು ಅಥವಾ ಬದುಕಿನ ಸತ್ಯ, ಸೀಮಿತವಾದ ನಮ್ಮ ಮನಸ್ಸಿನ ಗ್ರಹಿಕೆಗೆ, ಬುದ್ಧಿಯ ತರ್ಕ-ಚಿಂತನೆಗಳಿಗೆ ಸರಳವಾಗಿ ಸಿಕ್ಕಿಕೊಳ್ಳುವಂತದ್ದಲ್ಲ. ಸಾಧಕನು ಮೊದಲು ತನ್ನ ಬುದ್ದಿ-ಮನಸ್ಸು- ತರ್ಕ ಮತ್ತು ಚಿಂತನೆಗಳ ಜಾಲದಿಂದ ಹೊರಬರಬೇಕು. ಕವಿದುಕೊಂಡಿರುವ ಪೂರ್ವಾಗ್ರಹ ಆವರಣ ತಟ್ಟನೆ ಸ್ಪೋಟಗೊಂಡು ಶೂನ್ಯಾವಸ್ಥೆಯಲ್ಲಿ ಬಾಳಿನ ಸತ್ಯಕ್ಕೆ ಮುಖಾಮುಖಿಯಾಗಿ ನಿಲ್ಲಬೇಕು. “ಸತೋರಿ” ಯಾವತ್ತಿಗೂ ಇಂದ್ರಿಯಾತೀತವಾದದ್ದು. ಈ ನೆಲೆಯಲ್ಲಿ ಅದು ಮನಸ್ಸಿನ ಮೂಲದ್ದು. ಪ್ರಕೃತಿ ಮನುಷ್ಯನನ್ನು ತನ್ನಿಂದಲೇ ಉತ್ಪಾದಿಸುತ್ತದೆ ಕಾರಣ, ಮನುಷ್ಯನು ಪ್ರಕೃತಿಯಿಂದ ಹೊರಗಿರಲು ಸಾಧ್ಯವೂ ಇಲ್ಲ, ಸಾಧುವೂ ಅಲ್ಲ. ಮನುಷ್ಯ ಮತ್ತು ನಿಸರ್ಗದ ನಡುವೆ ಪರಸ್ಪರ ಸ್ನೇಹಪರ ತಿಳುವಳಿಕೆ ಇರಬೇಕು. ಸೃಷ್ಟಿಯನ್ನು ತನ್ನಲ್ಲಿಯೇ ನೋಡುವ ಸಲುವಾಗಿ ಮನುಕುಲ ಪ್ರಕೃತಿಯಿಂದ ಅವತರಿಸಿದೆ; ಅಂದರೆ, ಮನುಷ್ಯನಲ್ಲಿ ತನ್ನನ್ನು ನೋಡುವ ಸಲುವಾಗಿ ಪ್ರಕೃತಿ ತನ್ನೊಳಗೆ ಬಂದಿತು.
ಝೆನ್ ನ ಮತ್ತೊಂದು ಪ್ರಬಲ ಆಕರ್ಷಣೆ ಎಂದರೆ ಅದು ಮುಕ್ತತೆ. ಝೆನ್ ಗೆ ಯಾವುದೇ ಕಟ್ಟುಪಾಡುಗಳಿಲ್ಲ, ಮತೀಯ ಎಲ್ಲೆ ಇಲ್ಲ. ತತ್ವಸಿದ್ಧಾಂತಗಳಿಲ್ಲ, ಆಧಾರಗ್ರಂಥಗಳಿಲ್ಲ, ಕಂದಾಚಾರಗಳಂತೂ ಇಲ್ಲವೇ ಇಲ್ಲ. ಈ ಹಿನ್ನೆಲೆಯಲ್ಲಿ ಝೆನ್ ಎಂದರೆ ಜೀವನ. ಜೀವನದ ಸರ್ವಸ್ವವೂ ಝೆನ್ ನಲ್ಲಿ ಅಡಕವಾಗಿದೆ. ಕಾವ್ಯ, ತತ್ವಶಾಸ್ತ್ರ, ಮನಶ್ಯಾಸ್ತ್ರ, ನೀತಿಶಾಸ್ತ್ರ, ಧರ್ಮಶಾಸ್ತ್ರ — ಹೀಗೆ ಪ್ರಕೃತಿಯ ಸಕಲವನ್ನೂ ಝೆನ್ ಒಳಗೊಂಡಿದೆ. ಈ ಕಾರಣಕ್ಕಾಗಿಯೆ ಝೆನ್ ಗೆ ಯಾವುದೇ ಒಂದು ನಿರ್ದಿಷ್ಟ ‘ಇಸಂ’ ಅಲ್ಲ, ಯಾವ ಸಿದ್ದಾಂತದ ಸೊಂಕೂ ಇದಕ್ಕೆ ಇಲ್ಲ. ಇದಕ್ಕೆ ಯಾವುದೇ ಬಗೆಯ ಭಾವರೂಪವಾಗಲಿ, ಚಿಂತನಾರೂಪವಾಗಲಿ ಇಲ್ಲ. ಅದನ್ನು ಕೇವಲ ಅನುಭವದ ಮೂಲಕವಷ್ಟೇ ಗ್ರಹಿಸಬೇಕಿದೆ. ಆದರೆ ಮನುಷ್ಯ ಮೂಕನಲ್ಲ. ಅವನಿಗೆ ಹಲವಾರು ಅಭಿವ್ಯಕ್ತಿ ಮಾರ್ಗಗಳಿವೆ, ಸಂವಹನ ಮಾರ್ಗಗಳಿವೆ. ಇದಿಲ್ಲದೆ ಅನುಭವವೂ ಅಸಾಧ್ಯ . ಆದರೆ ಮೌನವೂ ಒಂದು ಬಗೆಯ ಸಂವಹನವೇ ಅಲ್ಲವೇ! ಮಾತಿಗೆ ಮೀರಿದ್ದನ್ನು ಮೌನ ಹೇಳುತ್ತದೆ. ಝೆನ್ ಎಷ್ಟೋ ವೇಳೆ ಈ ಮೌನ ಮಾರ್ಗ ಹಿಡಿದಿರುವುದುಂಟು. ಇದು ಬದುಕನ್ನು ಕಲಿಸುವ ಒಂದು ಚಂದದ ಮಾರ್ಗ. ಬಾಯಿ ಬಿಟ್ಟು ಏನನ್ನು ಹೇಳದೆ ತಾನು ಬಿಟ್ಟು ಹೋದ ಹೆಜ್ಜೆ ಗುರುತುಗಳಲ್ಲಿ ಬಾಳಿನ ಸಿದ್ಧಾಂತವನ್ನು ಇರಿಸಿದೆ. ಈ ಹಿನ್ನೆಲೆಯಲ್ಲಿ ಇದು ಅನುಭವಜನ್ಯವೇ ಹೊರತು ಉಪದೇಶ ನೀಡುವುದಿಲ್ಲ. ಕಂಗಳಿಗೆ ಸುಂದರ, ಅಳವಡಿಸಿಕೊಳ್ಳಲು ಮಾತ್ರ ಪ್ರಯಾಸದ ಕೆಲಸ..!!
ಬೌದ್ಧ ಪಂಥವಾಗಿ ಬೆಳೆದಿರುವ ಝೆನ್ ಜ್ಞಾನೋದಯ, ಅನುಭವದ ಅಡಿಪಾಯದ ಮೇಲೆ ತಳವೂರಿ ನಿಂತಿದೆ. ಈ ಅನುಭವವನ್ನು ‘ಶೂನ್ಯತಾ’ ಸಿದ್ಧಾಂತವೆನ್ನುವರು. ಶೂನ್ಯ ಎಂದರೆ ಬರಿದಾದ್ದು, ಖಾಲಿಯಾದ್ದು ಎಂದು ಸಾಮಾನ್ಯ ಅರ್ಥ. ಆದರೆ ಝೆನ್ ನ ಪ್ರಕಾರ, ಶೂನ್ಯವೆಂದರೆ ಒಂದು ಪದಾರ್ಥವನ್ನು ವಿವರಿಸಬಹುದಾದ ನಾಲ್ಕು ಕಲ್ಪನೆಗಳಿಗೆ (ದ್ರವ್ಯ, ಗುಣ, ಜಾತಿ, ಕ್ರಿಯೆ) ಗೋಚರಿಸದಿರುವುದು ಎನ್ನಲಾಗಿದೆ. ಇಲ್ಲಿ ಶೂನ್ಯವೆಂದರೆ ನಕಾರಾತ್ಮಕವಾದುದಲ್ಲ, ಅದು ಸಕಾರಾತ್ಮಕವಾದ ಕಲ್ಪನೆ. ಶೂನ್ಯತೆ ಸಹ ಒಂದು ಅನುಪಮವಾದ ಅನುಭವ. ಈ ಒಂದು ಅನುಭವದ ನೆಲೆಯಲ್ಲಿ ಕಾವ್ಯ ಅರಳಬೇಕಾಗಿದೆ.
ಹೈಕು… ಇದೊಂದು ಲೌಕಿಕ ಗಣಿತದ ಲೆಕ್ಕಾಚಾರವನ್ನು ಒಳಗೊಂಡಿದೆ. ಜಾಗತಿಕ ಸಾಹಿತ್ಯ ಪರಂಪರೆಗೆ ಇದು ಜಪಾನೀಯರ ಅದ್ಭುತ ಕೊಡುಗೆಯಾಗಿದೆ. ನಶ್ವರ ಜೀವನದ ಬಗ್ಗೆ ಯೋಚನೆ ಮಾಡುತ್ತಲೇ ಬೃಹತ್ ರಾಷ್ಟ್ರವನ್ನು ನಿರ್ಮಾಣ ಮಾಡಿರುವ ಜಪಾನೀಯರು ಚೀನಾದಿಂದ ಭಾಷೆ, ಲಿಪಿ, ಬೌದ್ಧ ಧರ್ಮ ಹಾಗೂ ಝೆನ್ ಸಿದ್ಧಾಂತ ಎಲ್ಲವನ್ನು ಸ್ವೀಕರಿಸಿ ತಮ್ಮವನ್ನಾಗಿಸಿ ಬೆಳೆಸಿದರು. ಎಷ್ಟರ ಮಟ್ಟಿಗೆ ಎಂದರೆ “ತಾವು ಮದುವೆಯಾಗುವ ಹುಡುಗನಿಗೆ ಹೈಕು ಬರೆಯಲು ಬರಬೇಕು” ಎಂದು ಅಲ್ಲಿಯ ಹುಡುಗಿಯರು ಬಯಸುತಿದ್ದರಂತೆ…!!
ಹೈಕುವಿನ ಲಕ್ಷಣಗಳು
ಪ್ರತಿಯೊಂದು ಕಾವ್ಯ ಪರಂಪರೆ ತನ್ನದೇ ಆದ ವಿಶಿಷ್ಟ ಲಯ, ನಿಯಮ, ಲಕ್ಷಣಗಳೊಂದಿಗೆ ಹೊರ ಬಂದು ಸಾಹಿತ್ಯಾಸಕ್ತರ ಮನ ಸೆಳೆಯುತ್ತದೆ. ಜಪಾನಿನ ಅಧ್ಯಾತ್ಮಿಕ ವಿಚಾರಗಳನ್ನು ವ್ಯಕ್ತಪಡಿಸಲು ಹುಟ್ಟಿದ ಲಯವೇ ಹೈಕು. “Haiku is the picture painted with words” ಇಷ್ಟು ಸಾಕಲ್ಲವೇ ಹೈಕುವಿನ ಸ್ವರೂಪ ತಿಳಿಯಲು. ಇದೊಂದು ಅತಿ ಸಣ್ಣ ಕಾವ್ಯ ಪ್ರಕಾರ. ದಾರ್ಶನಿಕತೆ, ಅಂತರ್ ದೃಷ್ಟಿ, ಕಲ್ಪನಾವಿನ್ಯಾಸವೇ ಜೀವಾಳ. ಸಂಕ್ಷಿಪ್ತತೆಯೇ ಇದರ ಮುಖ್ಯ ಗುಣ. ಇದರಲ್ಲಿ ಶಬ್ಧ ಸಂದಣಿಗೆ ಅವಕಾಶವಿಲ್ಲ. ಸಾಸಿವೆಯಲ್ಲಿ ಸಾಗರವನ್ನು ಅಡಗಿಸಿದಂತೆ ಇದರ ರಚನೆ. ಇದು ಅಹಂ ಕಳಚಿಟ್ಟು ಬಯಲಲ್ಲಿ ಬಯಲಾಗುವ ಅಧ್ಯಾತ್ಮವನ್ನು ನಿರೀಕ್ಷಿಸುತ್ತದೆ. ಇದು ಚಿಂತನಶೀಲ, ಅತೀಂದ್ರಿಯ, ಕ್ಷಣಿಕತೆಯ ಅಭಿವ್ಯಕ್ತಿ. ಮೂರು ಸಾಲಿನಲ್ಲಿ ಬರೆದು ೬ ಸೆಕೆಂಡ್ಸ್ ನಲ್ಲಿ ಓದುವ ಕಾವ್ಯ. ಇದು ಮೂರು ಸಾಲುಗಳನ್ನು ಹೊಂದಿರುತ್ತದೆ. ಒಂದನೆಯ ಮತ್ತು ಮೂರನೇ ಸಾಲುಗಳಲ್ಲಿ ಐದು ಅಕ್ಷರಗಳು ಎರಡನೆಯ ಸಾಲಿನಲ್ಲಿ ಏಳು ಅಕ್ಷರಗಳು ಬರಬೇಕು. ಇದೊಂದು ಹದಿನೇಳು ಅಕ್ಷರಗಳ ಕಾವ್ಯಮಾಲೆ. ಬೃಹತ್ತಾದ ಅರ್ಥವನ್ನು ಕಿರಿದಾದ ೧೭ ಅಕ್ಷರಗಳಲ್ಲಿ ಅರ್ಥ ಬಿಂಬಿಸುವ ಸಾಹಿತ್ಯ ಪ್ರಕಾರ. ನಾವು ಅಕ್ಷರಗಳೆಂದು ಕರೆದರೆ ಜಪಾನೀಯರು ‘ಸಿಲಬಲ್’ ಎಂದು ಕರೆಯುವರು. ಇದೊಂದು ಉಚ್ಚಾರಣೆಯಲ್ಲಿ ಬರುವ ಘಟಕ. ‘ಸಿಲಬಲ್’ ಎಂದರೆ ಒಂದೇ ಉಚ್ಚಾರಣೆಯ ಪ್ರಯತ್ನದಲ್ಲಿ ಉಚ್ಚರಿಸಲ್ಪಡುವ ಶಬ್ಧ. ಅಂದರೆ ಅವುಗಳು ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಅಕ್ಷರಗಳೂ ಆಗಿರಬಹುದು. ನಮ್ಮ ಕನ್ನಡ ಭಾಷೆಗಿಂತಲೂ ಜಪಾನ್ ಭಾಷೆ ತುಂಬಾ ಭಿನ್ನವಾಗಿದೆ. ‘It is highly phonetic language’ ಅಂದರೆ ಸ್ವರಬದ್ಧವಾದ ಭಾಷೆ. ಅಲ್ಲಿ ಸ್ವರಾಂತ್ಯ ಶಬ್ದಗಳಿವೆ, ವ್ಯಂಜನಾಂತ್ಯ ಪದಗಳಿಲ್ಲ. ಅದರೊಂದಿಗೆ ‘ಹೃಸ್ವ ಸ್ವರಗಳು’ ಕೂಡ ಇಲ್ಲವೆಂದು ಹೇಳಲಾಗುತ್ತದೆ. ಕನ್ನಡದಲ್ಲಿ ಯಾವುದೇ ಸೈಲೆಂಟ್ ಅಕ್ಷರಗಳು ಇಲ್ಲ. ನಾವು ಏನು ಬರೆಯಬಲ್ಲೆವೊ ಅದನ್ನು ಸ್ಪಷ್ಟವಾಗಿ ಉಚ್ಚರಿಸಬಲ್ಲೆವು. ‘ಲವ್’ ‘love’ ‘ಲೌ’ ಈ ರೀತಿಯಲ್ಲಿ ಭಾಷೆಗಳ ಉಚ್ಚಾರಣೆ ಮತ್ತು ಲಯದಲ್ಲಿ ವ್ಯತ್ಯಾಸಗಳನ್ನು ಕಾಣುತ್ತೇವೆ. ೧೭ಅಕ್ಷರಗಳು ಇರಬೇಕು ಎನ್ನುವುದೊಂದು ಸರಳ ನಿಬಂಧನೆ. ಆದರೆ ಈ ನಿಬಂಧನೆಯ ಆಂತರ್ಯದಲ್ಲಿ ಅಕ್ಷರಗಳ ಔಚಿತ್ಯ, ವ್ಯಾಕರಣದ ಬಂಧ ಹಾಗೂ ಕಾವ್ಯದ ಧ್ವನಿ ಮುಖ್ಯವಾಗಿ ಇರಲೇಬೇಕು.
“ಸರಿಗ ಮಪ
ಸಾರೇಗಾ ಮಪದ ನೀ
ಸರಿಗ ಮಪ”
ಇದರಲ್ಲಿ ಹೈಕುವಿನ ಬಾಹ್ಯ ಲಕ್ಷಣಗಳು ಇವೆಯಾದರೂ ಇದನ್ನು ಹೈಕು ಎಂದು ಕರೆಯಲಾಗದು. ಕಾರಣ, ಅಕ್ಷರಗಳ ಜೋಡಣೆಯೊಂದನ್ನೇ ಹೈಕು ಎನ್ನಲಾಗದು. ಕಿರಿದರಲ್ಲಿ ಹಿರಿದು ಅಡಗಿರಬೇಕು. ಕನ್ನಡಿಯಲ್ಲಿ ಆನೆಯನ್ನು ತೋರಿಸುವ ಕೆಲಸ ಹೈಕು ಮಾಡುತ್ತದೆ, ಮಾಡಬೇಕು. ಕೆಲವೇ ಪದಗಳಲ್ಲಿ ಕವಿ ತಾನು ಅನುಭವಿಸಿದ ಜೀವನಾನುಭವಗಳನ್ನು ಸುಂದರವಾಗಿ ಕಟ್ಟಿಕೊಡುವುದು ಅತ್ಯಂತ ಪ್ರಯಾಸದ ಕೆಲಸ. ಈ ಪ್ರಯಾಸ ದೈಹಿಕತೆಯದಲ್ಲ, ಮಾನಸಿಕತೆಯದು. ಇದೊಂದು ಜಾಣ್ಮೆಗೆ ಓರೆಗಚ್ಚುವ ಸೃಜನಶೀಲ ಕುಸುರಿ ಕಾರ್ಯವಾಗಿದೆ. ‘ಹಿಡಿದರೆ ಹಿಡಿ ತುಂಬ, ಬಿಟ್ಟರೆ ಜಗದ ತುಂಬ’ ಎನ್ನುವುದು ಹೈಕುವಿನ ಮಹತ್ವವನ್ನು ಸಾರುತ್ತದೆ. ಇಲ್ಲಿ ಬಾಶೋ ಅವರು ಹೇಳಿದ ಮಾತನ್ನು ಉಲ್ಲೇಖಿಸಬಹುದು. “೩ ರಿಂದ ೫ ಹೈಕು ಬರೆದವರು ಕವಿ, ೧೦ ಹೈಕು ಬರೆದವರು ಮಹಾಕವಿ….!”
ಪ್ರಕೃತಿಯೊಂದಿಗೆ ಒಂದಾಗುವ ದ್ಯಾನಸ್ಥ ಮನಸ್ಥಿತಿಯೇ ಹೈಕು ರಚನೆಗೆ ಹದವಾದ ಸಂದರ್ಭ. ಇದೊಂದು ಭಾವ ನೆಡುವ ಕೆಲಸ. ಭಾವ ಪದ್ಮಾಸನದಲ್ಲಿ ಅರಳಿ ನಿಲ್ಲುತ್ತದೆ. ಇಲ್ಲಿನ ಮೊದಲ ಸಾಲು ವಿಷಯವನ್ನು ಹೊಂದಿಸಿದರೆ, ಎರಡನೇ ಸಾಲು ಆ ವಿಷಯವನ್ನು ಬಹಿರಂಗ ಪಡಿಸುತ್ತದೆ. ಇನ್ನೂ ಮೂರನೇ ಸಾಲು ಪಂಚ್ ನೀಡುತ್ತದೆ. ಸಂಪೂರ್ಣತೆಯ ಪ್ರಜ್ಞೆಯನ್ನು ಸೃಷ್ಟಿಸುತ್ತದೆ. ಪ್ರಾಸದ ಅವಶ್ಯಕತೆ ಇಲ್ಲ, ತಾನಾಗಿಯೇ ಬಂದರೆ ಅದು ಹೈಕುವನ್ನು ಮತ್ತಷ್ಟು ಸುಂದರಗೊಳಿಸುತ್ತದೆ. ಇಲ್ಲಿ ಎರಡು ವಿರುದ್ಧ ಆಲೋಚನೆಗಳು, ತೌಲನಿಕ ವಿಚಾರಗಳು ಇರುತ್ತವೆ, ಇರಬೇಕು. ನಿಸರ್ಗದಲ್ಲಿ ನಡೆಯುವ ಘಟನೆ ಇಲ್ಲವೇ ಬೆಳವಣಿಗೆಗಳನ್ನು ಒಂದು ಮೋಹಕ ಬೆರಗಿನಿಂದ ದಾಖಲಿಸುವುದು ಇಲ್ಲಿ ಮುಖ್ಯವಾಗುತ್ತದೆ. ಇದರಲ್ಲಿ ನಮ್ಮ ಪಾತ್ರ ಏನೂ ಇರುವುದಿಲ್ಲ. ಕವಿ ದೂರ ನಿಂತು ದಾಖಲಿಸುವ ಪ್ರಯತ್ನ ಮಾಡುತ್ತಾನೆ. ಈ ಕಾರಣಕ್ಕಾಗಿಯೇ ಇದೊಂದು ಸ್ತಬ್ಧ ಚಿತ್ರ…!! “Experience the moment, freeze it get mesmerised yourself, extend it and show it to them; but not to explain”
ಹೈಕು ಕುರಿತು ಪರಿಪೂರ್ಣವಾಗಿ ತಿಳಿಯಬೇಕೆಂದರೆ ಜಪಾನಿನ ಕೆಲ ಉದಾಹರಣೆಗಳನ್ನು ಗಮನಿಸುವುದು ಅಗತ್ಯ. ಬಾಶೋ ಅವರು ಹೈಕು ಕ್ಷೇತ್ರದಲ್ಲಿ ಪ್ರಾತಸ್ಮರಣೀಯರು. ಅವರು ಕೆಲ ಪ್ರಮುಖ ಹೈಕುಗಳನ್ನು ಇಲ್ಲಿ ದಾಖಲಿಸುವುದು ಸೂಕ್ತ ಅನಿಸುತ್ತದೆ.
“On a leafless branch
A crow Comes to Rest
Autumn night fall”
“ಎಲೆಗಳಿಲ್ಲದ ಕೊಂಬೆಯ ಮೇಲೆ
ಕಾಗೆ ವಿಶ್ರಾಂತಿಗಾಗಿ ಬರುತ್ತದೆ
ಶರತ್ಕಾಲದ ರಾತ್ರಿಯಲ್ಲಿ”
ಇದರಲ್ಲಿರುವ ಪ್ರಕೃತಿ, ಋತುಮಾನಗಳನ್ನು ಗಮನಿಸಬಹುದು. ಜೊತೆಗೆ ಆಳವಾದ ಭಾವನೆಯ ಅಭಿವ್ಯಕ್ತಿ ಕೂಡ ಇದೆ. ಇದರೊಂದಿಗೆ ಬಾಶೋ ಅವರ ಬಹು ಚರ್ಚಿತ ಹೈಕು ನೋಡಬಹುದು.
“An old pond
A frog jumps in
The sound of water”
” ಚಂದಿರನನ್ನೆ
ಛೇದಿಸುವ
ಕಲೆ
ಈ ಕಪ್ಪೆಗೆ
ಯಾರು ಕಲಿಸಿದರಪ್ಪ?”
ಅಬ್ಬಾ…ಎನ್ನದೇ ಇರಲಾಗದು… ಅಲ್ಲವೇ.
ಬಾಶೋ ಜೀವಿಸಿದ್ದ ೧೦೦ ವರ್ಷಗಳ ನಂತರ ‘ಕೊಬಾಯಾಶಿ ಇಸ್ಸಾ’ ಅವರು ಹೈಕುಗಳನ್ನು ಬರೆಯಲಾರಂಭಿಸಿದರು. ಇವರು ಹೈಕುಗಳು ಜೀವನ್ಮುಖಿಯಾಗಿವೆ.
“Mosquito at my ear
Does he think
I’m deaf”
“ನನ್ನ ಕಿವಿಯ ಹತ್ತಿರ ಸೊಳ್ಳೆ
ಅವನು ಯೋಚಿಸುತಿದ್ದಾನೆಯೇ
ನಾನು ಕಿವುಡನೆಂದು “
ಎಷ್ಟೊಂದು ಸರಳ ಹಾಗೂ ಕ್ಷಣಮಾತ್ರದಲ್ಲಿ ಮೂಡಿದ ಹೈಕು ಅಲ್ಲವೇ.. ಈ ಕಾರಣಕ್ಕಾಗಿಯೇ ಬಾಶೋ ಹೈಕು ಕುರಿತು ಈ ರೀತಿಯಲ್ಲಿ ಹೇಳಿದ್ದಾನೆ. “Simply what is happening in this place at this moment”
ಘಟನೆಯೊಂದರ ತಾತ್ಕಾಲಿಕ ಕ್ಷಣವೊಂದನ್ನು ಮಾನವೀಯ ಗುಣದೊಂದಿಗೆ ಒಂದು ಚೌಕಟ್ಟಿನಲ್ಲಿ ಚಿತ್ರಿಸುವುದರ ಮೂಲಕ ಹೈಕು ರಚನೆಯಾಗುತ್ತವೆ. ಇದಕ್ಕೆ ಯೋಸಾ ಬೂಸಾನ್ ರವರ ಹೈಕು ನೋಡಬಹುದು.
“ಪ್ರಾರ್ಥನೆಗೆಂದು ಬಂದ
ಸಂತನ ಕೈ
ಹಿಂಜರಿದಿದೆ,
ಮಂದಿರದ
ಗಂಟೆಯ ಮೇಲೆ
ಚಿಟ್ಟೆಯೊಂದು ನಿದ್ದೆ ಹೋಗಿದೆ”
ಈ ತರಹದ ಹಲವಾರು ಘಟನೆಗಳನ್ನು ನಾವು ನೋಡುತ್ತಿರುತ್ತೇವೆ. ಆದರೆ ಕಾವ್ಯ ರಚನೆಯ ಸೋಲುತ್ತೇವೆ. ಕಾರಣ ಕಾವ್ಯಕ್ಕೆ ಬೇಕಾಗಿರುವುದು ಶಬ್ಧ ಭಂಡಾರಕ್ಕಿಂತ ಸೂಕ್ಷ್ಮ ಸಂವೇದನೆ…!! ಇದಕ್ಕೆ ಮಸಾಯೋಕಾ ಶಿಕಿಯವರ ಹೈಕುವನ್ನು ಗಮನಿಸಬಹುದು.
“ಸುರಂಗದಲ್ಲಿ
ಹರಿದು ಹೋದ
ರೈಲಿನ ರಭಸಕ್ಕೆ
ಎಳೆಯ ಗರಿಕೆಯೊಂದು
ಚಿತ್ತಭ್ರಮೆಗೊಳಗಾಗಿದೆ”
ಜಪಾನ್ ನೆಲದಲ್ಲಿ ಬೌದ್ಧ ಧರ್ಮ ಹಾಗೂ ಝೆನ್ ಸಿದ್ಧಾಂತದ ನೆರಳಲ್ಲಿ ಜನಿಸಿದ ಹೈಕು ಇಂದು ವಿಶ್ವದಾದ್ಯಂತ ತನ್ನ ಹೊಳಪಿನಿಂದ ನಳನಳಿಸುತ್ತಿದೆ. ಅಮೇರಿಕಾದಲ್ಲಂತೂ ಹಲವಾರು ಹೈಕು ಸೊಸೈಟಿ, ಸಂಘಗಳು ಇವೆಯಂತೆ..!!ಹರೋಲ್ಡ್ ಗೌಲ್ಡ್ ಹೆಂಡರ್ಸನ್ “ಹೈಕು ಸೊಸೈಟಿ ಆಫ್ ಅಮೇರಿಕಾ” ದ ಸಂಸ್ಥಾಪಕರು..!! ಇಂಥಹ ಹೈಕು ಭಾರತಕ್ಕೆ ಪ್ರವೇಶ ಮಾಡಿದ್ದು ಶ್ರೀ ರವೀಂದ್ರ ನಾಥ್ ಠಾಕೂರ್ ಅವರ ಅವರ ಕೆಲವು ಅನುವಾದಿತ ಹೈಕುಗಳಿಂದ. ಜಪಾನ್ ಪ್ರವಾಸದಿಂದ ಹಿಂದಿರುಗಿದ ಮೇಲೆ ೧೯೧೯ ಲಲ್ಲಿ “ಜಪಾನಿ ಯಾತ್ರೆ” ಎಂಬ ಕೃತಿಯನ್ನು ಬರೆದರು. ಅದರಲ್ಲಿ ಎರಡು ಜಪಾನಿನ ಹೈಕುಗಳ ಅನುವಾದ ಇವೆ. ಮುಂದೆ ಇವುಗಳೇ ಭಾರತದಲ್ಲಿ ಹೈಕು ನೆಲೆಯೂರಲು, ಜಪಾನಿನ ಹೈಕುಗಳನ್ನು ಅಭ್ಯಾಸಿಸಲು ದಾರಿ ಮಾಡಿಕೊಟ್ಟಿತು ಎಂದರೆ ಅತಿಶಯೋಕ್ತಿ ಅನಿಸದು..!! ಠಾಕೂರ್ ಅವರ ಪ್ರಭಾವದಿಂದ ಸಚ್ಚಿದಾನಂದ ಹೀರಾನಂದ ರವರು ಹಲವು ಸೈಟುಗಳನ್ನು ಅನುವಾದ ಮಾಡಿದ್ದಾರೆ. ಹಿಂದಿಯಲ್ಲಿ ಸುಮಾರು ೪೦೦ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಹೈಕು ಸಂಕಲನಗಳು ಬಂದಿವೆಯೆಂದು ಹೇಳಲಾಗುತ್ತಿದೆ. ೧೯೫೬-೧೯೫೯ರ ಮಧ್ಯೆ ಅಜ್ಞೆಯರವರ “ಅರಿ ಓ ಕರುಣಾ ಪ್ರಭಾಮಯ” ಎನ್ನುವುದು ಪ್ರಥಮ ಹಿಂದಿ ಹೈಕು ಸಂಕಲನವೆಂದು ಹೇಳಲಾಗುತ್ತಿದೆ. ಇದು ೨೭೬ ಅನುವಾದಿತ ಹೈಕುಗಳು, ಹಲವು ಸ್ವತಂತ್ರ ಹೈಕುಗಳನ್ನು ಒಳಗೊಂಡಿದೆ. ಈ ಹೈಕು ಕುರಿತು ಎಮ್.ಫಿಲ್, ಪಿಎಚ್.ಡಿ ಮಾಡುತ್ತಿರುವುದು ತಿಳಿದು ಬರುತ್ತದೆ. ಲಕ್ನೋ ವಿಶ್ವವಿದ್ಯಾಲಯದಲ್ಲಿ ಡಾ. ಕರುಣೇಶ ಪ್ರಕಾಶ್ ಭಟ್ಟ ಅವರು ಸಂಶೋಧನೆ ಮಾಡಿರುವುದನ್ನು ಗಮನಿಸಬಹುದು. “೫-೭-೫ ನಿಯಮದ ಶಿಥಿಲತೆ ಛಂದಸ್ಸಿನ ದೃಷ್ಟಿಯಿಂದ ಅರಾಜಕತೆ ಸೃಷ್ಟಿಸುತ್ತದೆ” ಎಂಬ ಡಾ. ಜಗದೀಶ್ ವ್ಯೋಮ ರವರ ಅಭಿಪ್ರಾಯ ಕಾವ್ಯದ ಲಕ್ಷಣಗಳ ಕುರಿತು ಹೇಳುತ್ತದೆ. ಪ್ರಯೋಗದ ಹೆಸರಿನಲ್ಲಿ ಛಂದಸ್ಸು ಮುರಿಯಬಾರದು ಎನ್ನುತ್ತಾರೆ. “ಸಾಹಿತ್ಯದ ತಪ್ಪು ರಚನೆ ಭ್ರೂಣ ಹತ್ಯೆಗೆ ಸಮ” ಎನ್ನಬಹುದು. ಇದನ್ನೇ ಅನುಮೋದಿಸುವಂತೆ ಹಿಂದಿಯ ಖ್ಯಾತ ಹೈಕು ಮಾಸ್ಟರ್ ಪ್ರೊ. ಸತ್ಯಭೂಷಣ ವರ್ಮರವರು ” ಹೈಕು ಕ್ಷಣಾರ್ಧದಲ್ಲಿ ರೂಪುಗೊಳ್ಳುವುದು, ಅದರಲ್ಲಿ ಒಂದು ಅಕ್ಷರವೂ ಪೋಲಾಗಬಾರದು. ಕವಿತೆಯ ಕೊನೆಯ ಶಬ್ಧ ಕೇಳುತ್ತಲೇ ಒಂದು ಪೂರ್ಣ ಪ್ರಮಾಣದ ಭಾವ ಉದಯಿಸಬೇಕು” ಎನ್ನುತ್ತಾರೆ. ಇದು ಹೈಕುವಿನ ಸ್ವರೂಪ, ಲಕ್ಷಣಗಳ ಮೇಲೆ ಬೆಳಕು ಚೆಲ್ಲುತ್ತದೆ.
ಕನ್ನಡ ಸಾರಸ್ವತ ಲೋಕದಲ್ಲಿ ಹತ್ತು ಹಲವಾರು ಸಾಹಿತ್ಯ ಪ್ರಕಾರಗಳಿವೆ. ಕನ್ನಡಿಗರು ಅನ್ಯ ಭಾಷೆಯ ಹತ್ತಾರು ಸಾಹಿತ್ಯ ರೂಪಗಳನ್ನು ಪ್ರೀತಿಸುತ್ತಾ, ಪೋಷಿಸುತ್ತಾ ಬಂದಿದ್ದಾರೆ. ತಮಗೆ ಇಷ್ಟವಾದ ಪ್ರಕಾರಗಳನ್ನು ಅಪ್ಪಿ ಅದರಲ್ಲಿಯೆ ಕೃಷಿಯನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ. ೧೯೬೦ ರ ದಶಕದಲ್ಲಿ ಕನ್ನಡದಲ್ಲಿ ಹೈಕು ರಚನೆ ಆರಂಭವಾಯಿತು ಎನ್ನಬಹುದು. ಎ.ಕೆ.ರಾಮಾನುಜನ್, ಚಂದ್ರಕಾಂತ ಕುಸನೂರ್, ಪ್ರಕೃದ್ದೀನ್, ವೀರ ಹನುಮಾನ್, ಜಂಬಣ್ಣ ಅಮರಚಿಂತ,…. ಹಲವರ ಅನುವಾದ, ಸ್ವರಚಿತ ರಚನೆಗಳಿಂದ ಹೈಕು ಯಾನ ಆರಂಭವಾಯಿತು. ಅಂಕುರ್ ಬೆಟಗೇರಿಯವರ “ಹಳದಿ ಪುಸ್ತಕ” ಅನುವಾದಿತ ಹೈಕು ಸಂಕಲನ. ಇದುವೇ ಕನ್ನಡದ ಮೊದಲ ಪ್ರಕಟಿತ ಹೈಕು ಸಂಕಲನ ಎನ್ನಲಾಗುತ್ತಿದೆ. ಸಿ. ರವೀಂದ್ರನಾಥ ರವರ “ಒಂದು ಹನಿ ಬೆಳಕು” ಅನುವಾದಿತ ಹೈಕು ಸಂಕಲನ, “ಮೂರು ಸಾಲು ಮರ”, “ಕೊಡೆಯಡಿ ಒಂದು ಚಿತ್ರ”, ಎಚ್. ಎಸ್. ಶಿವಪ್ರಕಾಶ್ ಅವರ “ಮಾಗಿ ಪರ್ವ”…. ಮುಂತಾದ ಕೃತಿಗಳು ಆರಂಭದ ಹಂತದಲ್ಲಿ ಮುಖ್ಯವಾಗಿವೆ. ಅವುಗಳ ನಂತರ ಹಲವಾರು ಹೈಕು ಮಾಸ್ಟರ್ಸ ಹೈಕು ಸಂಕಲನಗಳನ್ನು ಪ್ರಕಟಿಸಿದ್ದಾರೆ. ಕೆ.ಬಿ. ಬ್ಯಾಳಿ, ಡಾ. ಸರಜೂ ಕಾಟ್ಕರ್, ಡಾ. ಸಿದ್ಧರಾಮ ಹಿರೇಮಠ, ಅರುಣಾ ನರೇಂದ್ರ, ಮನೋಜ್ ಮಕರಂದ, ಹೆಬಸೂರ್ ಮಂಜುನಾಥ, ಈರಣ್ಣ ಬೆಂಗಾಲಿ, ಪ್ರೇಮಾ ಹೂಗಾರ, ಡಾ. ಜಯದೇವಿ ಗಾಯಕವಾಡ, ವೀರಪ್ಪ ಮ.ನಿಂಗೋಜಿ….ಮುಂತಾದವರ ಹೆಸರುಗಳನ್ನು ಇಲ್ಲಿ ದಾಖಲಿಸಬಹುದು. ಈ ನೆಲೆಯಲ್ಲಿ ಶಿವಶಂಕರ್ ಕಡದಿನ್ನಿ, ಅಕ್ಷತಾ ರವರ ಸಂಪಾದಿತ ಕೃತಿ “ಬೆಳ್ಳಕ್ಕಿ ಸಾಲು” ರಾಜ್ಯ ಮಟ್ಟದ ಪ್ರಥಮ ಹೈಕು ಸಂಕಲನವೆಂದು ದಾಖಲಾಗಿದೆ. ಹಲವರು ಹೈಕು ಕುರಿತು ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ಮಾಡುತ್ತಿರುವುದು ಖುಷಿಯ ವಿಚಾರವೇ ಸರಿ..!! ಮುಂದೆ ಅಸಂಖ್ಯಾತ ಜನರು ಹೈಕುಗಳನ್ನು ಬರೆಯುತ್ತ ಬಂದಿದ್ದಾರೆ, ಇಂದಿಗೂ ಬರೆಯುತ್ತಿದ್ದಾರೆ. ಪುಸ್ತಕ ಪ್ರಕಟಿಸದ, ಪ್ರಕಟಿಸಲು ಹಾತೊರೆಯುತ್ತಿರುವವರ ಒಂದು ಪಡೆಯೆ ಕಣ್ಣಮುಂದೆ ಬರುತ್ತದೆ. ಡಾ. ಎಚ್.ಟಿ.ಪೋತೆ, ಹರೀಶ್ ಕಿಗ್ಗಾಲು, ಸುಶಾಂತ್ ಕುಲಕರ್ಣಿ, ಸಿದ್ಧಲಿಂಗಪ್ಪ ಬೀಳಗಿ, ಮಹೇಂದ್ರ ಕುರ್ಡಗಿ, ಭಾರತಿ ರವೀಂದ್ರ, ವತ್ಸಲಾ ಶ್ರೀಶ, ಡಾ. ವಿಜಯಕುಮಾರ್ ಪರುತೆ, ಲಿಂಗಾರೆಡ್ಡಿ ಶೇರಿ, ಮಹಿಪಾಲ್ ರೆಡ್ಡಿ ಮುನ್ನೂರು, ಸಿದ್ಧರಾಮ ಹೊನ್ಕಲ್, ಡಾ. ಮಲ್ಲಿನಾಥ ಎಸ್. ತಳವಾರ, ಬಿ.ಎಚ್.ನಿರಗುಡಿ, ವೇಣು ಜಾಲಿಬೆಂಚಿ, ಕೆ. ಸುನಂದ, ಶಮಾ ಜಮಾದಾರ, ಈಶ್ವರ ಮಮದಾಪೂರ…..ಅಬ್ಬಬ್ಬಾ…ಹೆಸರುಗಳನ್ನು ಸೂಚಿಸುತ್ತ ಹೋದರೆ ಮನಸ್ಸಿಗೆ ಒಂದು ರೀತಿಯ ಅನುಪಮ ಆನಂದವಾಗುತ್ತದೆ.
‘ಪಾವಿತ್ರ್ಯತೆ ಗುಡಿಗೆ ಮಾತ್ರ ಸೀಮಿತವಲ್ಲ, ಎಲ್ಲರಲ್ಲಿಯೂ ಕಾಣಬೇಕು’ ಎಂಬುದು ಝೆನ್ ಸಿದ್ಧಾಂತವಾಗಿದೆ. ಪ್ರಕೃತಿಯೊಂದಿಗಿನ ಮನುಷ್ಯನ ಸಂಬಂಧದಲ್ಲಿ ಆಧ್ಯಾತ್ಮಿಕತೆಯನ್ನು ಈ ಹೈಕುಗಳು ವ್ಯಕ್ತಪಡಿಸುತ್ತವೆ. ಇದಕ್ಕೊಂದು ಬಾಶೋ ಅವರ ಒಂದು ಉದಾಹರಣೆ ಇಲ್ಲಿ ಗಮನಿಸಬಹುದು.
“ಹತ್ತಿಯ ಹೊಲದಲ್ಲಿ
ನಿಂತಾಗ
ಮನಸು ಹೇಳಿತು ;
ಬಿತ್ತಿದರೆ
ಚಂದಿರನನ್ನೇ ಬಿತ್ತಬೇಕು”
ಹೈಕುವಿನಲ್ಲಿ ವರ್ಣನೆ, ಗುಣವಾಚಕ ಮುಖ್ಯವಾಗದೆ ಸಹಜ, ಸರಳತೆ ಮುನ್ನೆಲೆಗೆ ಬರಬೇಕು. ನವೀರು, ಸೂಕ್ಷ್ಮ ಪದಗಳು ಇಲ್ಲಿ ಮುಖ್ಯವಾಗುತ್ತದೆ. ಹೈಕು ಓದಿದ ತಕ್ಷಣ ಓದುಗರಲ್ಲಿ ಸ್ಪಷ್ಟ ಚಿತ್ರಣ ಮೂಡಬೇಕು. ಈ ಹಿನ್ನೆಲೆಯಲ್ಲಿ “ನನ್ನನ್ನು ಕಾಣಬೇಕೆಂದರೆ ಮೊದಲು ಪ್ರೀತಿಸುವುದನ್ನು ಕಲಿ” ಎನ್ನುತ್ತದೆ ಹೈಕು. ಇದು ಯಾವತ್ತೂ ನೋವು, ಗಾಯ, ರಕ್ತ ಮತ್ತು ಅಂಧಕಾರವನ್ನು ಬಿಂಬಿಸುವುದಿಲ್ಲ. ವ್ಯಂಗ್ಯ ಇದರ ವಿಷಯವೇ ಅಲ್ಲ, ಜೀವನ ಶ್ರದ್ಧೆ, ಭಾವನೆಗಳು ಉತ್ಕೃಷ್ಟ ಸ್ಥಿತಿಯೆ ಹೈಕು. ‘Purest form of poetry which deals with mankind’. ಭಾವನೆಗಳ ಪ್ರತಿಬಿಂಬ, ಉತ್ಕಟ ಭಾವಗಳ ಅಭಿವ್ಯಕ್ತಿಯಾಗಿದೆ. ಗೂಢತೆ ಇರದೆ ಗಂಭೀರತೆಯಿರಬೇಕು. ಈ ನಿಟ್ಟಿನಲ್ಲಿ ಹೈಕು ಸೂಜಿಯ ಕಣ್ಣಿನಂತಿರುವ ಹೈಕು ಅಸಂಖ್ಯಾತ ಭಾವಗಳನ್ನು ಹೊಲಿಯುತ್ತದೆ. ಇಂದು ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ, ಧಾರ್ಮಿಕ, ತಾತ್ವಿಕ…. ನೆಲೆಯಲೆಲ್ಲ ಹೈಕುಗಳ ಕಬಂಧ ಬಾಹುಗಳನ್ನು ಗುರುತಿಸಬಹುದು.
ಇನ್ನೂ ಹೈಕುವಿನ ಬರವಣಿಗೆಯ ಕಡೆಗೆ ಗಮನಹರಿಸುವದಾದರೆ ಅದು ಅತ್ತ ಮಗುವಿನ ಕಣ್ಣೀರು ತುಂಬಿದ ಮುಗ್ಧ ನಗೆಯಾಗಿದೆ.
“I am first with five
Then Seven in the middle
Five again to end”
ತಂದೆಯೊಬ್ಬ ತನ್ನ ಪುಟ್ಟ ಕಂದನನ್ನು ತನ್ನೆರಡು ಕೈಗಳಿಂದ ಮೇಲಕ್ಕೆ ಎತ್ತಿ ಎತ್ತಿ ಆಡಿಸುತ್ತಿರುವಾಗ ಮಗುವಿಗೆ ಮೊದಲ ಸಲ ಗೊಂದಲ, ಎರಡನೇಯ ಬಾರಿ ಗಾಬರಿ, ಮೂರನೇಯ ಸಲ ತನ್ನ ಅಪ್ಪ ತನ್ನನ್ನು ಕೆಳಕ್ಕೆ ಬೀಳಿಸಲಾರ ಎಂಬ ನಂಬಿಕೆಯಿಂದ ಮಗು ಮಂದಹಾಸ ಬೀರುತ್ತದೆ. ಆ ಮಗುವಿನ ನಗು, ಹಿತವಾದ ಅನುಭವ, ಮಂದಹಾಸವೆ ಹೈಕು. ಈ ಇಡೀ ಘಟನೆಯನ್ನೇ ಅಭಿವ್ಯಕ್ತಿ ಪಡಿಸಿದರೆ ಅದೊಂದು ಕವಿತೆಯಾಗುತ್ತದೆ. ಈ ನೆಲೆಯಲ್ಲಿ ಹೈಕುವಿಗೆ ಬೇಕಾಗಿರೊದು ಘಟನೆಯಲ್ಲ, ಕ್ಷಣ ಮಾತ್ರ ಸಾಕು. ಉತ್ತಮ ಹೈಕು ರಚನೆಗಾಗಿ ಹೀಗೆ ಮಾಡಬಹುದು..
೦೧. ಪ್ರಕೃತಿಯ ಮಡಿಲಲ್ಲಿ ವಾಯು ವಿಹಾರ
೦೨. ಋತುಮಾನಗಳ ಮೇಲೆ ಗಮನದ ಕೇಂದ್ರೀಕರಣ
೦೩. ವಿಷಯದ ಆಯ್ಕೆ
೦೪. ಉದಾಹರಣೆಗಾಗಿ ಉತ್ತಮ ಹೈಕುಗಳನ್ನು ಓದುವುದು
೦೫. ಕಣ್ಣೆದುರು ಇರುವ ಹಾಗೂ ಕಾಡುವ ವಿಚಾರಗಳಿಗೆ ಹೈಕುವಿನ ರೂಪ ನೀಡುವುದು….
“ಪ್ರೀತಿಯ ಮಳೆ
ಸುರಿಯಲಿ; ಜಗದ
ಕೊಳೆ ಹೋಗಲಿ”
ಜಪಾನಿನ ಮಣ್ಣಿನಲ್ಲಿ ಮೊಳಕೆಯೊಡೆದ ಹೈಕು ಇಂದು ವಿಶ್ವದಾದ್ಯಂತ ತನ್ನ ಕೊಂಬೆಗಳನ್ನು ಚಾಚಿದೆ. ‘ಹೊಕ್ಕು’ ವಿನಿಂದ ‘ಹೈಕು’ ಆಗಿ, ಒಂದು ಹೈಕು ಕುರಿತು ವಿಚಾರ ಸಂಕಿರಣಕ್ಕೆ ಎಡೆಮಾಡಿಕೊಟ್ಟಿರುವುದು ಇಂದು ನಮ್ಮ ಕಣ್ಣೆದುರಿಗೇ ಇರುವ ಭವ್ಯ ಪರಂಪರೆಯಾಗಿದೆ. ನನ್ನ ಕೆಲವು ಹೈಕುಗಳನ್ನು ಉದಾಹರಣೆಗೆ ನೀಡಿ ಈ ಬರಹಕ್ಕೆ ಪೂರ್ಣ ವಿರಾಮ ನೀಡುವೆನು.
ಹೈಕುಗಳು
ಸುತ್ತಮುತ್ತಲೂ
ಅಂಧಕಾರ ; ಪುಸ್ತಕ
ಬೆಳಗುತ್ತಿದೆ
ಮನದಲೆಲ್ಲ
ಮಲಿನತೆಯ ಮಂಜು
ಶ್ವೇತ ಬಯಕೆ
ನೇಸರ ಬಂದ
ಜೀವನ ಶ್ರದ್ಧೆ ತಂದ
ಬಾಳು ಬಂಗಾರ
ಕ್ಷಣಿಕ ಸುಖ
ಅನುದಿನವೂ ನೋವು
ಬಾಳಿನ ಗುಟ್ಟು
ಹದಗೊಂಡಿವೆ
ಮೋಡಗಳು ; ಅವನಿ
ನೋಡಲು ಚೆಂದ
ಶಶಿ ವಿಳಾಸ
ಹುಡುಕಿದೆ ; ಪ್ರೇಮಿಯ
ಮನದಿ ಕಂಡೆ
ಪದ್ಮಾಸನದಿ
ಭಾವ ಅರಳಿತು ; ಹೈಕು
ಉದಯಿಸಿತು
ದೀಪ ಹಚ್ಚಿಡು
ಮನಸು ಬೆಳಗಲು ;
ಬೆಂಕಿ ನಂದಿಸು
ಯುವಜನತೆ
ಮೌನ ; ಉಸಿರಾಗಿದೆ
ಅಧಃಪತನ
ಗುಲಾಮಗಿರಿ
ಆಳುತಿದೆ ; ಮನಸ್ಸು
ಚಿತೆಯಲ್ಲಿದೆ
ಚಿಂತನೆ ಚಿತೆ
ಹತ್ತಿದೆ ; ಜಡತ್ವವು
ಕಾಲು ಚಾಚಿದೆ
-ರತ್ನರಾಯಮಲ್ಲ
(ಡಾ. ಮಲ್ಲಿನಾಥ ಶಿ. ತಳವಾರ)