ಚುಟುಕು, ಹನಿಗವನ, ಹನಿಗವಿತೆ, ಹಾಯ್ಕು, ಶಾಯರಿ, ರೂಬಾಯಿ, ಫರ್ದ, ಶೇರ್, ದ್ವಿಪದಿ, ತ್ರಿಪದಿ, ಚೌಪದಿ ಇತ್ಯಾದಿ ಇತ್ಯಾದಿಯಾಗಿ ಕರೆಯಲ್ಪಡುವ ಸಾಹಿತ್ಯದ ವಿವಿಧ ಪ್ರಕಾರಗಳು ಸಾಸಿವೆಯಲ್ಲಿ ಸಾಗರ ಅಡಕಗೊಳಿಸಿದಂತೆ ಅತಿ ಸ್ವಲ್ಪದರಲ್ಲಿ ಬಹಳಷ್ಟು ಹೇಳುವ ಅಭಿವ್ಯಕ್ತಿ ಮಾಧ್ಯಮ. ಇಲ್ಲಿ ಕತೆ, ಕವಿತೆಯಂತೆ ಸ್ವಲ್ಪೂ ಕೂಡ ವಾಚ್ಯತೆಗೆ ಜಾಗವಿರುವುದಿಲ್ಲ. ಹೀಗಾಗಿ ಪ್ರಸ್ತುತ ಅಕ್ಕಡಿ ಸಾಲಿನ ಮೂಲಕ ಶ್ರೇಷ್ಠ ಕವಿಯಾಗಿ ಗುರುತಿಸಿಕೊಂಡಿರತಕ್ಕಂತಹ ಎ. ಎಸ್. ಮಕಾನದಾರ ಅವರ ಇತ್ತೀಚಿನ ಸಂಕಲನ ಮೇಲಿನ ಯಾವುದೇ ಒಂದು ಪ್ರಕಾರಕ್ಕೆ ಬದ್ಧವಾಗಿರದೆ, ಅಷ್ಟೂ ಪ್ರಕಾರಗಳನ್ನು ತನ್ನೊಳಗೆ ಹುದುಗಿಸಿಕೊಂಡು ಕೇವಲ ” ಪ್ಯಾರಿ ಪದ್ಯ”ಗಳಾಗಿ ನಮ್ಮ ಮುಂದೆ ಇದೆ.
ಪ್ಯಾರಿ ಪದ್ಯ ಈ ಶೀರ್ಷಿಕೆಯ ಕನ್ನಡ ಸಾಹಿತ್ಯದ ಮಟ್ಟಿಗೆ ತುಂಬಾ ಹೊಸದು ಮತ್ತು ಆಕರ್ಷಣೀಯವಾಗಿದೆ.
ಕೇವಲ ಶಿರೋನಾಮೆಯಿಂದ ಮಾತ್ರ ಈ ಕೃತಿ ಆಕರ್ಷಕವಾಗಿರದೆ ಓದುಗರು ಕೈಗೆತ್ತಿಕೊಂಡು ನೋಡಿದಾಗ ಮೇಲ್ನೋಟಕ್ಕೆ ತುಂಬಾ ನಯನಮನೋಹರವಾಗಿರುವುದು ಗಮನಕ್ಕೆ ಬರುತ್ತದೆ. ಚಿತ್ರಕಲಾವಿದ, ಶಿಕ್ಷಕ ವಿಜಯ್ ಕಿರೇಸೂರ್ ಅವರ ಕಲೆ ವಿನ್ಯಾಸ ಇರುವ ಮುಖಪುಟ ಈ ಪುಸ್ತಕದ ಮೇಲೆ “ಫಹಲಿ ನಜರ್ ಮೇ ಪ್ಯಾರ “ಆಗುವಂತೆ ಮಾಡುತ್ತದೆ. ಪ್ಯಾರಿ ಅಂದರೆ ಅದರ ಅರ್ಥ ಅದೇ ತಾನೇ?. ಪ್ಯಾರಿ ಅಂದರೆ ಪ್ರಿಯವಾದವಳು ಎಂದರ್ಥ.
ಈ ಶಿರೋನಾಮೆಯ ಹಿನ್ನಲೆಯಲ್ಲಿ ಕೃತಿಯನ್ನು ಅವಲೋಕಿಸಲಾಗಿ.. ಪ್ರೀಯೆ, ಪ್ರಿಯತಮೆ, ಸಖಿ, ಸಾಕಿ, ಸಜನಿ, ಗೆಳತಿ, ಮಾಷುಕಾ, ದಿಲ್ ರುಬಾ, ಮೆಹಬೂಬಾ, ದಿವಾನಿ,ಮಸ್ತಾನಿ, ಹೂವಿ ಕೊನೆಗೆ ಲೇ ಇವಳೆ ಮತ್ತು ಇವುಗಳ ಪುಲ್ಲಿಂಗಗಳಾದ ,ಪ್ರಿಯತಮಾ, ಮಾಷುಕ್, ದಿಲ್ ರುಬಾ, ಸಾಜನ್, ಮೆಹಬೂಬ್, ಫಕೀರ್, ಯಾ ರಬ್ ಇತ್ಯಾದಿ ಹೆಸರಿನ ಶೀರ್ಷಿಕೆಯಡಿಯಲ್ಲಿ ಮೂಡಿ ಬಂದಿರುವ ಪದ್ಯಗಳು ಒಂದರ್ಥದಲ್ಲಿ ನಮಗೆ ಪ್ರೇಮಿಗಳಿಬ್ಬರ ನಡುವೆ ನಡೆಯುವ ಮೌನವಾದ ಭಾವ ಸಂವಾದ.. ಒಮ್ಮೊಮ್ಮೆ ಪ್ರೇಮಿಗಳ ನಡುವಿನ ಪಿಸು ಮಾತುಗಳಂತೆ ಭಾಸವಾಗಿ ಓದುಗರ ಹೃದಯದಲ್ಲಿ ಪ್ರತಿಧ್ವನಿಸಿದರೆ ಆಶ್ಚರ್ಯವಿಲ್ಲ. ಈ ದೃಷ್ಟಿಯಲ್ಲಿ ನೋಡಿದಾಗ “ಪ್ಯಾರಿ ಪದ್ಯ” ಜೊತೆಗೆ ಸಖಿ ಚೆಲ್ಲಿದ ಕಾವ್ಯಗಂಧ ಉಪ ಶೀರ್ಷಿಕೆ ಕೂಡ ತುಂಬಾ ಸೂಕ್ತವೆನಿಸುತ್ತದೆ.
ಈ ಎಲ್ಲ ವಿವರಣೆ ಕೇವಲ ಪ್ಯಾರಿಯ ಬಾಹ್ಯ ಸೌಂದರ್ಯದ ಮಾತಾದರೆ, ಒಳಗಿನ ಸಾಹಿತ್ಯದ ಹೂರಣ ಹೇಗಿದೆ ನೋಡಬೇಡವೇ?
ಇದನ್ನು ನೋಡಬೇಕಾದರೆ ಪ್ಯಾರಿಯ ಪದ ಪದವೂ ತಡಕಾಡಬೇಕಾಗುತ್ತೆ ಮನನ ಮಾಡಿಕೊಳ್ಳಬೇಕಾಗುತ್ತೆ. ಪ್ಯಾರಿಯ ಪುಟ ಪುಟವೂ ಪುಟಕ್ಕಿಟ ಚಿನ್ನ. ವಿಜಯ ಕಿರೇಸೂರ ಅವರ ಸುಂದರ ಚಿತ್ರಗಳು ಪ್ರತಿ ಪುಟದಲ್ಲಿ ಪದ್ಯದ ಭಾವಕ್ಕೆ ಅನುಗುಣವಾಗಿ, ಸಾಂದರ್ಭಿಕವಾಗಿ ಕಾವ್ಯ ಚಿತ್ರ ಕಲೆಯ ಜುಗುಲ್ಬಂದಿಯಾಗಿ ಅರಳಿ ನಿಂತಿವೆ. ಪ್ಯಾರಿ ಇಲ್ಲಿ ಬಹುವಾಗಿ ಪಾರಿಭಾಷಿಕ ಪದಗಳು ನೆಚ್ಚಿಕೊಂಡಿರುವುದರಿಂದ ಪ್ಯಾರಿಯನ್ನು ಪ್ರೀತಿಸು, ಪ್ರೇಮಿ, ಆಷೀಕ್, ಸಾಜನ್.. ಮಾಷುಕ್ ಯಾರೇ ಆಗಲಿ ಓದಿನಲ್ಲಿ ಸ್ವಲ್ಪ ತನ್ಮಯತೆ, ತಾಳ್ಮೆ, ಸಂಯಮ ಬೇಕೆನಿಸುತ್ತದೆ. ಪಾರಿಭಾಷಿಕ ಶಬ್ಧಗಳ ಅರ್ಥ ಕೊನೆಯ ಪುಟದಲ್ಲಿ ಇದೆ.ಆದರೆ, ಸಂದರ್ಭಕ್ಕನುಗುಣವಾಗಿ ಆಯಾ ಪುಟಗಳ ಕೊನೆಯಲ್ಲಿದ್ದರೆ ಓದಿಗೆ ಅನುಕೂಲಕರ ಆಗಿರುತ್ತಿತ್ತೆಂದು ಅನಿಸುತ್ತದೆ.
ಪ್ಯಾರಿ ಎನ್ನುವ ಹೆಸರಿಗೆ ಸಂಬಂಧಿಸಿದ್ದು ಅಂದಾಗ ಇದು ಕೇವಲ ಪ್ರೇಮಿಗಳ ಹಸಿ ಹಸಿ ಭಾವನೆ, ಒಣ ಪ್ರಲಾಪ ಅಥವಾ ಪ್ರೇಮಿಗಳ ಕನವರಿಕೆ, ಹಳಹಳಿಕೆಗೆ ಸೀಮಿತವಾದ ಪದ್ಯಗಳು ಎಂದು ಭಾವಿಸಬೇಕಿಲ್ಲ. ಬದಲಾಗಿ ತುಂಬ ಪ್ರಬುದ್ಧ ಮಾಗಿದ ಅನುಭವಿ ಕವಿಯೊಬ್ಬ ಕಟ್ಟಿಕೊಟ್ಟ ಅನುಭಾವದ ಅನುಭೂತಿಯ ಅಮೃತವಾಣಿಯಂತೆ ಭಾಸವಾಗುತ್ತದೆ. ಬೆನ್ನುಡಿಯಲ್ಲಿ ಆರತಿ ಎಚ್ ಎನ್ ಅವರು ಗುರುತಿಸುವಂತೆ “ಒಲೆಯಲ್ಲಿ ಸುಟ್ಟು, ಬೆಂಕಿಯಲ್ಲಿ ಬೇಯಿಸಿ, ಬಿಸಿಲಲ್ಲಿ ಬೆಂದು, ಸುಟ್ಟು ಬೂದಿಯಾದರೂ ಪ್ರೇಯಸಿಯ ಕನವರಿಕೆ ಬಿಡಲಾರೆ ಎನ್ನುವ ಹಲುಬುವಿಕೆ, ಪ್ರತಿ ಪುಟದಲ್ಲೂ ಪ್ಯಾರಿ ಪದ್ಯವಾಗಿ ಕಾಡುತ್ತದೆ” ಎನ್ನುತ್ತಾರೆ. ಸ್ವತಃ ಸೂಫಿ ಸಂತ ಪರಂಪರೆಗೆ ಮಾರು ಹೋಗಿರುವ ಕವಿ, ಮಕಾನದಾರರು ಸಾಮಾಜಿಕ ಸಮಾನತೆ, ಸರ್ವ ಧರ್ಮ ಸಮನ್ವಯ, ಕೋಮ ಸೌಹಾರ್ದತೆ, ಜಾತ್ಯತೀತ ನಿಲುವಿಗೆ ಬದ್ಧರಾಗಿರುವುದು ಅವರ ಪದ್ಯಗಳು ಓದಿದಾಗ ಓದುಗರ ಅರಿವಿಗೆ ಬರುತ್ತದೆ.
ಪ್ರೀತಿ, ಪ್ರೇಮ, ಕಾಮ,ಮೌನ, ವಿರಹ,ವ್ಯಕ್ತಿ, ಸಮಾಜ,ಧರ್ಮ,ಅಧ್ಯಾತ್ಮ,ರಾಜಕಾರಣಗಳಂಥ ವಿಷಯ ವೈವಿಧ್ಯತೆಯಿಂದ ಇಲ್ಲಿ ಕಾವ್ಯ ಲತೆಗಳಾಗಿ ನಳನಳಿಸಿದರೂ ಈ ಎಲ್ಲ ಲತೆಗಳ ಆಶಯವೊಂದೇ.. ಅವು ಅರಳಿ ಸುಮವಾಗಿ ಪ್ರೇಮ ದೇವತೆಯ ಪಾದಾರಂವಿದಗಳಿಗೆ ಅರ್ಪಿತವಾಗಿ ಕೃತಾರ್ಥವಾಗುವುದು. ಪ್ರೇಮವೇ ಕವಿಯ ಧರ್ಮ ಆಗಬೇಕು ಮತ್ತವನ ಕಾವ್ಯ ಪ್ರೇಮ ಪುಷ್ಪ. ಈ ದಿಶೆಯಲ್ಲಿ ಮಕಾನದಾರರವರ ಕಾವ್ಯ ಅರಳಿ ಸಾರ್ಥಕತೆ ಪಡೆದಿದೆ ಎಂದು ಹೇಳಬಹುದು.
ಇಲ್ಲಿನ ಒಂದೊಂದು ಪದ್ಯವೂ ಕವಿಯ ಮಿದುಳಿನ ಒಂದೊಂದು ಬೆವರ ಹನಿ, ಕವಿ ಹೃದಯದ ಒಂದೊಂದು ನೆತ್ತರ ಹನಿಯಾಗಿ ಗೋಚರಿಸುತ್ತದೆ. ಪ್ರತಿ ಪದ್ಯದ ವಿಷಯ, ಭಾವ ಬೇರೆ ಬೇರೆಯಾದರೂ ಅವು ಹೋಗಿ ಸೇರುವುದು ಪ್ರೇಮ ಸಾಗರವನ್ನೆ. ವಿವಿಧ ವಿಷಯಗಳ ನೂರಾರು ಪದ್ಯಗಳನ್ನು ಒಂದೊಂದಾಗಿ ಅವಲೋಕಿಸುತ್ತ ಹೋಗುವುದು ತುಂಬಾ ಕಷ್ಟದ ಕೆಲಸ. ಆದರೆ, ಇವುಗಳನ್ನು ಒಟ್ಟಾರೆಯಾಗಿ ನೋಡಿದಾಗ ಲೌಕಿಕವೋ ಅಲೌಕಿಕವೋ ಇದರ ಸ್ಥಾಯಿಭಾವ ಮಾತ್ರ ಒಲುಮೆಯಾಗಿದೆ. ಹೀಗಾಗಿ ನಾನು ಅಷ್ಟೂ ಪದ್ಯಗಳನ್ನು ಓದಿದ್ದರೂ ಕೂಡ ಅವುಗಳ ಅವಲೋಕನದ ತಂಟೆಗೆ ಹೋಗದೆ. ನನಗೆ ಕಾಡಿದ ಇಷ್ಟವಾದ ಒಂದೇ ವಿಷಯಕ್ಕೆ ಸಂಬಂಧಿಸಿದ ಕೆಲವು ಪದ್ಯಗಳನ್ನು ಆಯ್ದುಕೊಂಡು ನಿಮ್ಮ ಮುಂದೆ ಇಡುತ್ತೇನೆ. ಮೂಲತಃ ಮೃದು ಜೀವಿಯೂ, ಭಾವನಾಜೀವಿಯೂ ಆಗಿರುವ ಮಕಾನದಾರ ಅವರು ಅಂತರಾಳದಲ್ಲಿ ಒಬ್ಬ ಅಧ್ಯಾತ್ಮ ಜೀವಿಯೂ ಹೌದು. ಸೂಫಿ ಪರಂಪರೆಯನ್ನು ಮೆಚ್ಚಿದವರು ಮತ್ತು ಪಾಲಿಸಿದವರು. ಹೀಗಾಗಿ ಬುದ್ಧ ಅವರಿಗೆ ಕಾಡಿದ ಪರಿ ಅದ್ಭುತವಾದದ್ದು. ಅವರು ಬುದ್ಧನ ಬಗ್ಗೆ ಧ್ಯಾನಿಸಿ ಬರೆದ ಕವಿತೆಗಳು ಸಾಕಷ್ಟು ಇವೆ. ಇವುಗಳನ್ನೆ ಆಯ್ದುಕೊಳ್ಳಲು ಮತ್ತು ಕಾಡಲು ನಾನು ಕೂಡ ಬುದ್ಧ ಪ್ರೇಮಿಯಾಗಿರುವುದೂ ಕಾರಣವಾಗಿರಬಹುದು. ಏಕೆಂದರೆ ಬುದ್ಧ ಸಹ ಪ್ರೀತಿಯ ಪ್ರತಿರೂಪವಾಗಿ ನಮಗೆ ತೋರುವುದು ಆಶ್ಚರ್ಯದ ಸಂಗತಿಯಲ್ಲ. ಹೀಗಾಗಿ, ನಾನು ಇಲ್ಲಿನ ಒಟ್ಟಾರೆ ಪದ್ಯಗಳಿಗೆ “ಬುದ್ಧ ಧ್ಯಾನದ ಪ್ಯಾರಿ ಪದ್ಯಗಳು” ಎಂದು ಕರೆಯಲು ಇಷ್ಟ ಪಡುತ್ತೇನೆ.
ಹಾಗದರೆ ಬನ್ನಿ ಕವಿಯನ್ನು ಅನೇಕ ತೆರನಾಗಿ ಕಾಡಿದ ಬುದ್ಧ ಪ್ರೇಮ ಮತ್ತು ಅವುಗಳಿಗೆ ಸಂಬಂಧಿಸಿದ ಪದ್ಯಗಳನ್ನು ಓದಿಕೊಂಡು ಬರೋಣ.
ಬುದ್ಧನಾಗಲು ಬೋಧಿವೃಕ್ಷವೇ ಬೇಕಿಲ್ಲ
ಅರ್ಧಾಂಗಿ, ಕರುಳ ಕುಡಿಯೂ ತ್ಯಜಿಸಬೇಕಿಲ್ಲ
ಮೌನದ ಹಾದಿಹಾಡಿದರೆ ಸಾಕು
ಬುದ್ಧನಾಗಲು ಹೊರಟಿದ್ದೆ
ಅರಳಿ ಮರದ ಎಲೆಗಳು
ಶಿಶಿರನ ದುರಾಸೆಗೆ ಮಾರುಹೋಗಿದ್ದವು
ಕೇಶಲೋಚನ ಮಾಡಿಕೊಂಡಿದ್ದೆ
ದುರಾಲೋಚನೆ ತುಂಬಿಕೊಂಡಿದ್ದೆ
ಶಬ್ಧಗಳ ಜಾಲಾಡಿದೆ
ಕೋಶವೆಲ್ಲ ತಿರುವಿದೆ
ಕಿರುನಗೆ ಬೋಧಿವೃಕ್ಷವಾಯಿತು.
ಕಾರುಣ್ಯದ ಜಾಡಿನಲ್ಲಿ ಹೊರಟವನಿಗೆ
ಜಾಡಮಾಲಿ ದೇವರಾಗಿ ಕಂಡ
ಬೆಳಕಿನ ಬೆನ್ನು ಕತ್ತಲು
ಬುದ್ಧನ ತೊಟ್ಟಿಲು
ಬೋಧಿವೃಕ್ಷ
ನೀನು ಸೂಜಿ
ನಾನು ದಾರ
ಹೊಲಿಯೋಣ ಗಡಿಗಳನು
ನಿನ್ನ ಮೊಹಬ್ಬತ್ತಿನ ಮುಂದೆ
ಯಾವ ಇಬಾದತ್ ಸಮವಾದೀತು.?
ಸತ್ತ ಕನಸುಗಳಿಗೆ ಕಫನ್ ಸುತ್ತಿದ್ದೆ
ಪ್ಯಾರಿ
ನೀ ಹೊದಸಿದ ಚದ್ದರನಿಂದ
ಕನಸುಗಳು ಮಿಸಾಡಿವೆ
ಶ್….!
ಸದ್ದು ಮಾಡದಿರಿ
ಸಂಜೆಯಾಯ್ತು
ಆಕಾಶಕೆ ಅವಳ ಇನಿಯ
ತಿಲಕ ಇಡುತ್ತಿದ್ದಾನೆ.
ಕೆಂಡದಮಳೆಯಲಿ
ಮಿಂದವನಿಗೆ
ನಿನ್ನ ನಗು ಹೂ ಮಳೆಯಾಯ್ತು
ಹೇಗೆ ಹಾಡಲಿ ನಾ ಹೊಸ ಹಾಡ
ನನ್ನೊಲವಿನ ಗೀತೆ ಹಾಡದಿರುವಾಗ
ಯಾವ ರಾಗವ ಹಾಡಿದರೇನು
ಬೇ – ಸೂರ್ ಆಗುತಿರುವಾಗ
ದುಷ್ಮನ್ – ಸೈತಾನ್ ಮಸಣ ಸೇರಲಿ ಬಿಡು
ಸಾಜನ್
ಹೃದಯದ ಗುಲ್ಮಹರ್
ಮಾನವತೆಯ ಬೆಸೆಯುತಿರಲಿ ಸಾಕಿ
ದುವಾ ಕುಬುಲ್ ಆಗಿದೆ
ಎದೆಗೆ ಒರಗಿದ ಪ್ರೇಯಸಿ
ಮುಂಗುರುಳು ತೀಡುತ ಹನಿಸಿ ಬಿಟ್ಟಳು
ತುಂಬಿ ತುಳುಕಿತು ಚಮ್ಲಾ
ಕಬರ್ ತುಂಬ ಹೂವ ಪರಿಮಳ
ಸಾವು ನಕ್ಕು ನಲಿಯಿತು
ನದಿಗಳ ಜೋಡನೆಗೆ ಚಹರೆ ಕಾಣುತಿರುವೆ
ವಿಶ್ವಪ್ರೇಮ ಭಾವುಟ ಹಾರಿಸುತ್ತಿರುವೆ
ನಿನ್ನ ತುಟಿ ಕೊಳಲಾಗಿಸು
ಪ್ರತಿ ಉಸಿರು ಸ್ವರವಾದೀತು
ನಗುವ ಬೀಗ ತಾನೇ ತೆರೆದೀತು
ಬಿಕ್ಕುತ್ತದ್ದ ಜೀವಕ್ಕೆ
ಹನಿ ಹನಿ ಹನಿಸಿದೆ
ಕಾವ್ಯ ಉಸಿರಾಯಿತು
ಜಗ ಹಚ್ಚು ಹಸಿರಾಯಿತು
ದೈತ್ಯಾಕಾರದ ಕೇಡಿಗೆ
ನಾಚಿಕೆ
ಪುಟ್ಟ ಹಣತೆ ಬುದ್ಧನ
ಮೌನ
ಕಲ್ಲು ಹೃದಯದಲೂ
ಬಿಡಿಸಬಹುದೇ
ಕರುಣೆಯ ಚಿತ್ರ
ನೀ ನೆತ್ತರಲ್ಲಿ ಬರೆದ ಕವಿತೆಗೆ
ಮಧು ಬಟ್ಟಲಿನಲಿ ಅದ್ದಿ ತಿದ್ದಿ ತೀಡಿದೆ
ಅರಳುವ ಹೂ ಮುಂದೆ
ಖಡ್ಗ – ಡಾಲು
ಆತ್ಮಹತ್ಯೆಗೆ ಶರಣು
ಸಾವಿನ ಕದ ತಟ್ಟಿದ ಫಕೀರನಿಗೆ
ಜೀವದ ಹಂಗೂ ಇಲ್ಲಾ
ಸಾವಿನ ಹಂಗೂ ಇಲ್ಲಾ
ಚಮಲಾದ ಚಂಗು ಇದೆ
ತೋಡಿದ ಗೋರಿ
ಜನಾಜಾ ತಬ್ಬಿದರೂ
ತಬ್ಬಲಿ ಆಗಲಾರ ಪ್ಯಾರಿ
ಗುನುಗುಣಿಸಿ ಹಾಡಿದ ಮಧುಶಾಲೆಯಲ್ಲಿ
ಖುಸ್ರೋವಿನ ಸಂಗೀತ ಮೀರ್ ನ ಶೇರ್ ಅರ್ಥವಿಸುವಿರಾ?
ಶಂಮ್ಸ್ ನ ಮಾತಿಗೆ ಮೌಲ್ವಿಯೇ ಶರಣಾಗಿದ್ದು ಹೇಗೆ
ಧರ್ಮ ಕರ್ಮದ ಗೀತೆಗೆ ದರ್ವೇಶಿ ಪ್ರೀತಿ ತೋರಿಸುವಿರಾ.?
ಈ ಕೊನೆ ಸಾಲುಗಳಂತೂ ಸಂಕಲನದ ಇಡೀ ಆಶಯ ಹಿಡಿದಿಡುವಂತಿವೆ.
ಹೀಗೆ ಮಕಾನದಾರ ಅವರ ಸಮಗ್ರ ಪ್ಯಾರಿ ಪದ್ಯಗಳು ಗಮನಿಸಿದಾಗ ಕುವೆಂಪು ಅವರ ಕವಿತೆ ಓ ನನ್ನ ಚೇತನ ಆಗು ನೀ ಅನಿಕೇತನ ನೆನಪು ಆಗದೆ ಇರಲಾರದು.ಪೀತಿ, ಪ್ರೇಮ, ಮಮತೆ, ಮಮಕಾರ, ಮಾನವೀಯತೆ, ವಿಶ್ವ ಬಂಧುತ್ವ, ಸಾರುವ ಪದ್ಯಗಳನ್ನು ಭಾವನಾತ್ಮಕ ನೆಲೆಯಲ್ಲಿ ಕಟ್ಟಿಕೊಟ್ಟು ಒಂದು ಹೊಸ ಸಂವೇದನೆ, ಹೊಸ ಪದ ಪ್ರಯೋಗ, ಹೊಸ ಪ್ರಯತ್ನದ ಮುಖಾಂತರ ಕನ್ನಡ ಚುಟುಕು ಸಾಹಿತ್ಯವನ್ನು ಇನ್ನಷ್ಟು ಶ್ರೀಮಂತಗೊಳಿಸಿದ್ದಾರೆ. ಅದಕ್ಕಾಗಿ ಕವಿ ಎ. ಎಸ್. ಮಕಾನದಾರ ಅಭಿನಂದನಾರ್ಹರು.
ಕೃತಿಗಾಗಿ ಸಂಪರ್ಕಿಸಿ-
ನಿರಂತರ ಪ್ರಕಾಶನ, ಗದಗ
ಮೊಬೈಲ್ ಸಂಖ್ಯೆ- 9916480291
-ಅಶ್ಫಾಕ್ ಪೀರಜಾದೆ