ಬದುಕಿನ ಬಂಧಕ್ಕೆ ಹೆಸರಿನ ಹಂಗು ಯಾತಕ್ಕೆ? : ಪೂಜಾ ಗುಜರನ್. ಮಂಗಳೂರು.

ರಕ್ತ ಸಂಬಂಧಗಳೆಂದರೆ ಒಂದೇ ರಕ್ತ ಹಂಚಿಕೊಂಡು ಜೊತೆಯಾಗಿ ಹುಟ್ಟಿದವರು. ಆದರೆ ಜೊತೆಯಾಗಿ ಹುಟ್ಟದೆಯೂ ಜೊತೆಯಿರುವವರಿಗೆ ಏನು ಅನ್ನುತ್ತಾರೆ. ಅವರನ್ನು ಒಡನಾಡಿಗಳು, ಅನ್ನಬಹುದು. ಒಂದು ಬಾಂಧವ್ಯ ಬೆಳೆಯಲು ಜೊತೆಯಾಗಿಯೇ ಹುಟ್ಟಬೇಕಿಲ್ಲ. ಜೊತೆಯಾಗಿಯೇ ಬದುಕಬೇಕಿಲ್ಲ. ಕೊನೆವರೆಗೂ ಜೊತೆ ಜೊತೆಯಾಗಿ ನಡೆಯುವ ಒಂದೊಳ್ಳೆ ಮನಸ್ಸು ಇದ್ದರೆ ಸಾಕು. ಅವರು ಯಾವತ್ತಿಗೂ ನಮ್ಮೊಳಗೆ ಇರುತ್ತಾರೆ. ಅಲ್ಲಿ ಯಾವುದೆ ಕಟ್ಟುಪಾಡುಗಳ ಹಂಗು ಇರುವುದಿಲ್ಲ. ನಂಬಿಕೆ ವಿಶ್ವಾಸ ಅನ್ನುವ ಚೌಕಟ್ಟಿನ ಒಳಗೆ ಬಾಂಧವ್ಯ ಗಟ್ಟಿಯಾಗುತ್ತದೆ. ಇಲ್ಲಿ ನಾವು ಜೊತೆಯಾಗಿ ಬದುಕಲು ಸಂಬಂಧಗಳಿಗೆ ಹೆಸರಿಡುತ್ತೇವೆ. ಇದು ಯಾರು ಮಾಡಿಕೊಂಡು ಬಂದ ಸಾಂಪ್ರಾದಾಯವೋ ತಿಳಿಯದು.

ಇಲ್ಲಿ ಜೊತೆಯಾಗಿ ಬದುಕಲು ಸಂಬಂಧಗಳಿಗೆ ಹೆಸರಿಡಲೇಬೇಕು ಅನ್ನುವುದು ತಪ್ಪು. ಹೆಸರಿಟ್ಟ ಮಾತ್ರಕ್ಕೆ ಎಲ್ಲವೂ ಒಂದೇ ರೀತಿ ಇರುತ್ತದೆ ಅನ್ನುವುದು ನಮ್ಮ ಕಲ್ಪನೆಯಷ್ಟೆ. ಅಣ್ಣ ತಮ್ಮ ತಂಗಿ ಇನಿಯ ಸ್ನೇಹಿತ ಹೀಗೆ ಈ ಭೂಮಿಯಲ್ಲಿ ನಾವು ಜೊತೆಯಾಗಿ ಬದುಕಲು ಇಷ್ಟೆಲ್ಲ ಹೆಸರಿಟ್ಟು ಎಲ್ಲರ ಜೊತೆ ಬೆರೆಯುತ್ತೇವೆ. ಇದು ನಾವು ನಮಗಾಗಿ ಮಾಡಿಕೊಂಡಿರುವ ಒಪ್ಪಂದವಷ್ಟೆ. ಮನುಷ್ಯ ಭಾವುಕ ಜೀವಿ. ಅದಕ್ಕೆ ಅವನು ಎಲ್ಲರಲ್ಲೂ ಎಲ್ಲದರಲ್ಲೂ ತನಗಾಗಿ ಮಿಡಿಯುವವರನ್ನು ಬಯಸುತ್ತಾನೆ‌. ಅವನು ಇನ್ಯಾರಿಗಾಗಿಯೋ ಮಿಡಿಯುತ್ತಾನೆ. ತನಗಾಗಿ ಯಾರಾದರೂ ಇದ್ದಾರೆಯೋ ಎಂದು ಕ್ಷಣ ಕ್ಷಣವೂ ಚಡಪಡಿಸುತ್ತಾನೆ. ಇದು ಪ್ರತಿಯೊಬ್ಬನ ಬದುಕಿನಲ್ಲಿಯೂ ಇರುತ್ತದೆ. ಮನುಷ್ಯ ಅಂದ್ರೆ ಹೀಗೆ.. ಅವನದು ನಾನಾ ತರಹದ ರೂಪ ಹಲವು ರೀತಿಯ ಯೋಚನೆ. ಹುಟ್ಟುವಾಗ ಜೊತೆಯಿದ್ದವರು ಬೆಳೆಯುತ್ತ ಜೊತೆಯಾಗುವವರು ನಮ್ಮೊಂದಿಗೆ ಕೊನೆವರೆಗೂ ಇರುತ್ತಾರೆ ಅನ್ನುವ ಖಾತ್ರಿ ಯಾರಿಗೂ ಇರುವುದಿಲ್ಲ. ಆ ಸತ್ಯದ ಅರಿವಿದ್ದರೂ ಮನುಷ್ಯ ಸಂಬಂಧಗಳ ಸಂಕೋಲೆಯಲ್ಲಿ ಬಂಧಿಯಾಗಿರಲು ಇಷ್ಟ ಪಡುತ್ತಾನೆ.

ಯಾಕೆಂದರೆ ಮನಸ್ಸಿಗೆ ಖುಷಿ ಕೊಡುವುದನ್ನು ಅದೆಷ್ಟು ಕಷ್ಟ ಆದರೂ ಇಷ್ಟಪಟ್ಟು ಮಾಡುವುದರಲ್ಲಿ ಇರುವ ಸುಖ ಇನ್ಯಾವುದರಲ್ಲೂ ಅವನು ಕಾಣಲಾರ. ಮನಸ್ಸು ಭಾವನೆಗಳ ಗೂಡು. ಇಲ್ಲಿ ಪ್ರೀತಿಯ ಜೇನಿಗೆ ಹಾತೊರೆಯುವ ಮನಸ್ಸುಗಳೇ ಹೆಚ್ಚು. ಮಧುರವಾದ ಭಾವಗಳು ಬದುಕಿನ ಮೈಲಿಗಲ್ಲು. ಇಲ್ಲಿ ಕೆಲವೊಂದು ಬಂಧಗಳು ಹೀಗೆ ನಮಗೆ ತಿಳಿಯದೆ ಜೊತೆಯಾಗುತ್ತದೆ. ನಮ್ಮನ್ನು ಆ ಬಂಧನದೊಳಗೆ ಬಂಧಿಸಿಬಿಡುತ್ತದೆ. ಅಲ್ಲಿ ಸ್ವಾರ್ಥವನ್ನೂ ಮೀರಿದ ಬಾಂಧವ್ಯ ಮನಸ್ಸನ್ನು ಆವರಿಸಿರುತ್ತದೆ. ಒಂದು ಸುಂದರವಾದ ಮಧುರ ಬಾಂಧವ್ಯ ಬೆಳೆಯಲು ಕಾರಣಗಳು ಬೇಕಾಗುವುದಿಲ್ಲ. ಮನುಷ್ಯ ಭಾವಜೀವಿ. ಅಲ್ಲಿ ಭಾವನೆಗಳು ನಾನಾ ತರವಾಗಿರುತ್ತದೆ. ಸೂಜಿಗಲ್ಲಿನಂತೆ ಸೆಳೆಯುವ ಪ್ರೀತಿ ಮನಸ್ಸನ್ನು ಗೆಲ್ಲುತ್ತದೆ. ಆಗ ಅಲ್ಲೊಂದು ಸಂಬಂಧ ತನಗರಿವಿಲ್ಲದೆ ಹುಟ್ಟುತ್ತದೆ. ಹಾಗಂತ ಎಲ್ಲರಿಗೂ ಎಲ್ಲರೂ ಹತ್ತಿರವಾಗಲ್ಲ. ಬದುಕು ಅಂದ್ರೆ ಇದೆ ತಾನೇ..

ಸಂಬಂಧಗಳನ್ನು ನಿಯಂತ್ರಿಸಿ ಉಳಿಸುವುದು ಎಂದಿಗೂ ಆಗದು. ಉಳಿಯುವ ಸಂಬಂಧಗಳು ಎಂದಿಗೂ ಅಳಿಯದು. ಬಲವಂತವಾಗಿ ಉಳಿಸುವ ಯಾವ ಬಂಧಗಳು ನಮ್ಮ ಹಿಡಿತದಲ್ಲಿ ಇರಲಾರದು. ನಾವು ಮಾಡುವ ಸಂಬಂಧಗಳು ಮನಸ್ಸನ್ನು ಖುಷಿಯಾಗಿಸಬೇಕೇ ಹೊರತು ಪರಿತಪಿಸುವಂತೆ ಮಾಡಬಾರದು. ನಾವು ಬಯಸುವ ಎಲ್ಲ ಸಂಬಂಧಗಳು ನಮ್ಮನ್ನು ನಿಯಂತ್ರಿಸುವಷ್ಟೆ ಸ್ವತಂತ್ರವಾಗಿರಬೇಕು. ಅಲ್ಲಿ ಯಾವ ಜಂಜಾಟಗಳು ನಮ್ಮ ಭಾವನೆಗಳನ್ನು ಕಂಗೆಡಿಸಬಾರದು. ಅಂತಹ ಯಾವ ಸಂಬಂಧಗಳು ನಮ್ಮನ್ನು ಜಾಸ್ತಿ ಸಮಯ ಸಂತೋಷವಾಗಿ ಇಡಲಾರದು. ಅದಕ್ಕೆ ಮೊದಲು ನಾವು ಸಂಬಂಧಗಳ ಜೊತೆ ರಾಜಿಯಾಗಬೇಕು. ಆಗ ಮಾತ್ರ ಪರಿಶುದ್ಧವಾದ ಪ್ರೇಮವೊಂದು ಮನಸ್ಸನ್ನು ಆವರಿಸುತ್ತದೆ. ಆದರೂ ಇಲ್ಲಿ ತನಗಾಗಿ ಯಾರಾದರೂ ಕೊನೆವರೆಗೂ ಜೊತೆಯಿರಲಿ ಅಂತ ಪ್ರತಿಯೊಬ್ಬನು ಬಯಸುತ್ತಾನೆ. ಭೂಮಿ ಮೇಲಿನ ನಮ್ಮ ಬಾಳು ಅದು ಉಸಿರಿರುವವರೆಗೆ ಮಾತ್ರ. ಆ ಉಸಿರಿಗಾಗಿ ನಾವು ಈ ಸಂಬಂಧಗಳ ಕೋಟೆಯನ್ನು ಭದ್ರವಾಗಿ ಕಟ್ಟುತ್ತೇವೆ. ಆ ಪ್ರೀತಿಯ ಕೋಟೆಯನ್ನು ಆದಷ್ಟೂ ಕಣ್ಗಾವಲಿನಲ್ಲಿಟ್ಟು ಕಾಯುತ್ತೇವೆ. ಸಂಬಂಧಗಳು ಎಷ್ಟು ಚಂದವಾಗಿರುತ್ತದೆಯೋ ಅಷ್ಟು ಧೀರ್ಘವಾಗಿರುತ್ತದೆ. ಯಾರನ್ನೆ ಆಗಲಿ ಯಾವುದನ್ನೇ ಆಗಲಿ ಓಲೈಸಿ ಬದುಕಲು ಸಾಧ್ಯವಿಲ್ಲ. ಓಲೈಕೆ ಮಾಡುತ್ತ ಉಳಿಸುವ ಸಂಬಂಧಗಳು ಕೊನೆವರೆಗೂ ಬಾಳಿಕೆಯಾಗದು. ಪ್ರೇಮವೂ ಸವಿಯಾಗಿದ್ದಾಗ ಮಾತ್ರ ಸವಿಯುದಲ್ಲ. ಅದು ನಿತ್ಯ ನಿರಂತರವಾದ ದಾಹದಂತೆ ದೇಹದೊಳಗೆ ಹರಿದಾಡುತ್ತಲೇ ಇರಬೇಕು.

“ಬದುಕಲ್ಲಿ ಪ್ರೀತಿಯೊಂದೆ ಶಾಶ್ವತ” ಆ ನಂಬಿಕೆಯಲ್ಲಿ ಜೀವಮಾನವೆಲ್ಲ ಒಂದು ಹಿಡಿ ಪ್ರೀತಿಗಾಗಿ ಮಿಡಿಯುವ ಮನಸ್ಸುಗಳು ಎಲ್ಲರಲ್ಲೂ ಇದೆ.ಆ ಮಿಡಿತದ ಬಡಿತಕ್ಕೆ ಏನೇನೋ ಹೆಸರಿಟ್ಟು ಸಂಬಂಧಗಳನ್ನು ನಾವು ಸೃಷ್ಟಿಸುತ್ತೇವೆ. ಆ ಸೃಷ್ಟಿಯೊಳಗೆ ನಮ್ಮನ್ನು ನಾವು ಮರೆತು ನಮ್ಮವರಿಗಾಗಿ ಸದಾ ಹಾತೊರೆದು ಬದುಕುತ್ತೇವೆ. ಒಂದು ವೇಳೆ ಆ ಮಧುರವಾದ ಸಂಬಂಧದಲ್ಲಿ ಏನಾದರೂ ಅಪಸ್ವರದ ನಾದ ಹೊಮ್ಮಿದರೆ ಬಾಳಗೀತೆ ಲಯ ತಪ್ಪಿದ ರಾಗವಾಗುತ್ತದೆ. ಭೂಮಿ ಮೇಲೆ ಬದುಕುವುದಕ್ಕೆ ಸಂಬಂಧಗಳು ಮುಖ್ಯವೇ.? ಬಹುಶಃ ಈ ಒಂದು ಪ್ರಶ್ನೆಗೆ ಉತ್ತರಿಸುವುದು ಕಷ್ಟ.ಬೀದಿ ಬದಿ ಬೇಡುವ ಒಂಟಿ ಭಿಕ್ಷುಕನಿಗೂ ಬಂಧು ಬಳಗ ಯಾರು ಇಲ್ಲ. ಆದರೂ ಅವನು ತನಗಾಗಿ ಬದುಕುತ್ತಾನೆ. ಜೀವನ ಅಂದ್ರೆ ಇಷ್ಟೇ. ಬರುವಾಗ ಒಂಟಿ ಹೋಗುವಾಗ ಒಂಟಿ. ಮಧ್ಯೆ ಈ ಸಂಬಂಧಗಳ ಜಂಜಾಟದಲ್ಲಿ ಮೂರು ದಿನದ ಬದುಕು. ಈ ಬದುಕೆಂದರೆ ಒಂದು ಕನ್ನಡಿಯಂತೆ. ನಾವು ನಕ್ಕರೆ ಬದುಕು ನಗುತ್ತದೆ. ಅತ್ತರೆ ಬದುಕು ಅಳುತ್ತದೆ. ನಾವು ಯೋಚಿಸಿದಂತೆ ನಮ್ಮ ಬದುಕು. ಇಲ್ಲಿ ಕೊಡುವ ಪ್ರೀತಿ ವಿಶ್ವಾಸಗಳು ನಮ್ಮ ಪ್ರತಿಬಿಂಬವೇ ಹೊರತು ಇನ್ನೇನೂ ಅಲ್ಲ. ಕ್ರಿಯೆಗೆ ಪ್ರತಿಕ್ರಿಯೆ. ಅದು ಇಲ್ಲದಿದ್ದರೆ ಎಲ್ಲವೂ ಮೌನವಾಗುತ್ತದೆ. ಇಲ್ಲಿ ಸಂಬಂಧಗಳಿಗೆ ಹೆಚ್ಚಿನ ಪಾಮುಖ್ಯತೆ ಇದೆ. ಆದರೂ ಮನುಷ್ಯ ಅಲ್ಪ ತೃಪ್ತ. ಎಲ್ಲರೂ ಇದ್ದರೂ ಅವನು ಒಂಟಿತನದ ಜೊತೆಯೇ ಬದುಕುತ್ತಾನೆ.

ಇರುವಷ್ಟು ದಿನ ನಾವು ಪ್ರೀತಿ ನೆಮ್ಮದಿ ಸುಖವನ್ನು ಹುಡುಕುತ್ತ ಸಾಗುತ್ತೇವೆ. ಅದೆಷ್ಟು ಇದ್ದರೂ ತೃಪ್ತಿ ಅನ್ನುವುದು ಮನುಷ್ಯನಿಗೆ ಇರುವುದಿಲ್ಲ. ಸಂಬಂಧಗಳನ್ನು ಉಳಿಸಲು ಅದರ ಜೊತೆ ಹೆಣಗಬೇಕು. ಇಲ್ಲಿ ಎಷ್ಟೇ ಒದ್ದಾಡಿದರೂ ಯಾರು ಕೊನೆವರೆಗೂ ಜೊತೆಯಾಗಿ ಬರಲಾರರು. ಉಸಿರು ಇರುವವರೆಗೆ ಮಾತ್ರ ಸಂಬಂಧಗಳ ಹಂಗು. ಯಾವುದೇ ಸಂಬಂಧಗಳು ಶಾಶ್ವತವಲ್ಲ. ಶಾಶ್ವತ ಅಂತ ಒಂದಿದ್ದರೆ ಅದು ಸಂಬಂಧಗಳ ಜೊತೆ ಗಳಿಸಿಕೊಂಡ ಅತ್ಮೀಯತೆ ಒಳ್ಳೆತನ ಮತ್ತು ಭರವಸೆ ಮಾತ್ರ. ಆ ಭರವಸೆಯ ಪ್ರೀತಿ ಎಲ್ಲರಿಗೂ ಸಿಗಲಿ. ಸಂಬಂಧಗಳು ಸಮೃದ್ಧವಾಗಿರಲಿ.

-ಪೂಜಾ ಗುಜರನ್. ಮಂಗಳೂರು.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x