“ಕುಮಾರ” ಹೆಸರಿನ ದೊಡ್ಡ ಮನಸಿನವರು…..”: ಅಮರದೀಪ್

ವಿಹಾರ್ ಕುಮಾರ್. ಎ.

ಬಹುಶ: ನಾನಿದ್ದ ಗೊಂದಲದ ದಿನಗಳಲ್ಲಿ ಇವರಿಬ್ಬರ ಪರಿಚಯ ಸ್ನೇಹವಾಗದಿದ್ದರೆ ಇನ್ನಷ್ಟು ಗೊಂದಲಕ್ಕೆ ಬೀಳುತ್ತಿದ್ದೆನೇನೋ. 1998ರಲ್ಲಿ ವರ್ಗಾವಣೆಗೊಂಡು ನಾನಿದ್ದ ಕಛೇರಿಗೆ ಬಂದವರೊಬ್ಬರು ವಿಹಾರ್ ಕುಮಾರ್. ಎ. ಅಂತ. ಇನಿಷಿಯಲ್ “ಎ” ಅಂದರೆ ಏನೆಂದು ನನಗೂ ಗೊತ್ತಿರಲಿಲ್ಲ. ನಂತರ ತಿಳಿದದ್ದು, ಎ ಅಂದರೆ ಆವುಲ ಅಂತ. ತೆಲುಗಿನಲ್ಲಿ ಆವುಲ ಅಂದರೆ ಆಕಳಂತೆ. ಥೇಟ್ ಆಕಳಂತೆಯೇ ಸ್ವಭಾವದ ವ್ಯಕ್ತಿ ಅವರು. ಬಂದ ಕೆಲವೇ ದಿನಗಳಲ್ಲಿ ನನಗೆ ತುಂಬಾ ಹಳೆಯ ಸ್ನೇಹಿತರಂತಾದರು. ನೋಡಿದರೆ ನನಗೂ ಅವರಿಗೂ ಇಪ್ಪತ್ತೆರಡು ವರ್ಷಗಳ ಅಂತರದ ವಯಸ್ಸು. ಆದರೆ, ತಮಾಷೆಗೆ ಮಾತಾಡುತ್ತಾ ನಿಂತರೆ ವಯಸ್ಸು ಅವರದಿನ್ನು ಇಪ್ಪತ್ತೈದೂ ದಾಟುತ್ತಿರಲಿಲ್ಲ. ಮನಸ್ಸು ಮಾಡಿದ್ದರೆ ಎಂ.ಎಸ್ಸಿ ಜಿಯಾಲಜಿ ಮಾಡಿದ ಅವರು ಸರ್ಕಾರಿ ಉಪನ್ಯಾಸಕರ ಹುದ್ದೆಗೇ ಹೋಗಬಹುದಿತ್ತು. ಹೋಗಿದ್ದರೆ ಅದೆಷ್ಟು ನೂರು ವಿದ್ಯಾರ್ಥಿಗಳಿಗೆ ಇವರು ಮಾರ್ಗದರ್ಶಕರಾಗುತ್ತಿದ್ದರೋ ಏನೋ. ನನ್ನ ಮಟ್ಟಿಗೆ ಅವರದು ಬೆಸ್ಟ್ ಕೌನ್ಸಲಿಂಗ್. ಒಂದು ವಿಷಯವನ್ನು ಅಷ್ಟು ಚೆನ್ನಾಗಿ ಕನ್ವಿನ್ಸ್ ಮಾಡುವ ಅಥವಾ ಅರ್ಥ ಮಾಡಿಸುವ ಸಮಾಧಾನದ ಗುಣವಿತ್ತು. ಬಂದದ್ದು ಮಾತ್ರ ಆಹಾರ ಇಲಾಖೆಗೆ.

ಸರ್ಕಾರಿ ನೌಕರಿ ಅಂದರೆ ಸಾಕು ದುಡ್ಡು ಕಾಸು ಮಾಡಿಕೊಳ್ಳುವ ದಾರಿಯೆಂದೇ ಬಹುತೇಕರ ಅನಿಸಿಕೆ. ನನಗೂ ಎಷ್ಟೋ ಜನ ಕೇಳಿಯೂ ಇದ್ದಾರೆ; “ ಸಂಬಳ ಬಿಟ್ಟು ಮತ್ತೇನಾದ್ರೂ…….” ಅಂತ. ಆ “ಮತ್ತೇನಾದ್ರೂ” ಎನ್ನುವ ಖಯಾಲಿ ಮತ್ತು ನಿರೀಕ್ಷೆ ಎರಡೂ ಇರದವನಾಗಿ ಉಳಿದಿದ್ದೇನೆ. ಅದು ಗಾಢವಾಗಿ ನನ್ನಲ್ಲಿ ಉಳಿಯಲು ಈ ವಿಹಾರ್ ಕುಮಾರ್ ಸರ್ ಕೂಡ ಕಾರಣ. “ನಾವು ದುಡಿದದ್ದೇ ನಮಗೆ ಉಳಿಯುವುದಿಲ್ಲ, ಇನ್ನು ಕಂಡವರದ್ದು ತಿಂದು ಅರಗಿಸಿಕೊಳ್ಳೋದಾ?” ಅನ್ನುವುದು ನನ್ನ ಅನಿಸಿಕೆ. ಅವಶ್ಯಕತೆ ಬಿದ್ದರೆ ಸಾಲ ಮಾಡೋದಂತೂ ಇದ್ದದ್ದೇ ಮತ್ತೆ ತೀರಿಸೋದೂ…

ಒಮ್ಮೆ ಯಾರೋ ಒಬ್ಬರು ಕಛೇರಿ ಬಾಗಿಲಲ್ಲಿ ನಿಂತು “excuse me sir, if you don’t have mind, may I” ಅಂದ. ಬಾಗಿಲ ಪಕ್ಕದಲ್ಲೇ ಕೂತಿದ್ದ ವಿಹಾರ್ ಕುಮಾರ್ ಸರ್ “certainly not” ಅಂದುಬಿಟ್ಟರು. ಪಾಪ, ಬಂದವನು ಏನೋ ಮಾಹಿತಿ ಕೇಳಿದ, ಪಡೆದ. ನಡುವೆ ಅರ್ಧ ಕೇಜಿ ತಲೆಯನ್ನೂ ತಿಂದ. ನೋಡಿದರೆ ಆ ವ್ಯಕ್ತಿ ಮಾಸ್ಟರ್ ಡಿಗ್ರಿ ಹೋಲ್ಡರ್. ಅವನು ಹೋದ ನಂತರ ವಿಹಾರ್ ಕುಮಾರ್ ನನ್ನ ನೋಡಿದರು. ಒಟ್ಟಿಗೆ ನಕ್ಕಿದ್ದು ಅಷ್ಟಿಷ್ಟಲ್ಲ. ಇಂಥ ಅದೆಷ್ಟೋ ನಗೆ ನಕ್ಕ ಉದಾಹರಣೆಗಳು ಈಗಲೂ ನೆನಪಾಗುತ್ತವೆ.

ಇಂಥ ಕುಮಾರ್ ಸರ್, ನನ್ನ ತಂದೆ ತೀರಿದ ದಿನ ಕಛೇರಿಗೆ ಫೋನ್ ಬಂದಾಗ ಅದೆಷ್ಟು ಸೂಕ್ಷ್ಮವಾಗಿ ನೋವಾಗದಂತೆ, ಗಾಬರಿ ಬೀಳದಂತೆ ವಿಷಯವನ್ನು ನೇರವಾಗಿಯೂ ಹೇಳದೇ ನನ್ನನ್ನು ಊರಿಗೆ ಕಳಿಸಿಕೊಟ್ಟಿದ್ದರು. ಅದಾದ ನಂತರ ತಮ್ಮದೇ ಮನೆಯ ಮೇಲಿದ್ದ ಎರಡು ರೂಮಿನ ಮನೆಯನ್ನು ಬಾಡಿಗೆಗೆ ಕೊಟ್ಟು ನನ್ನನ್ನೂ ತಮ್ಮ ಹಿರಿಯ ಮಗನಂತೆ ಕಛೇರಿ, ಮನೆಯಲ್ಲೂ ನಾನು ಹದ ತಪ್ಪದಂತೆ ಗದರಿಸದೆಯೂ ಹೆಗಲ ಮೇಲೆ ಕೈ ಹಾಕಿ ಸೂಕ್ಷ್ಮವಾಗಿ ತಿಳಿಸುತ್ತಿದ್ದರು. ಊಟದ ವಿಷಯದಲ್ಲಿ ಅವರು ಮತ್ತು ಅವರ ಪತ್ನಿ ರಾಧಕ್ಕ ತೋರಿಸಿದ ಪ್ರೀತಿ ಮರೆಯುವಂತಿಲ್ಲ.

ಅನ್ಯ ಇಲಾಖೆಯಿಂದ ಎರವಲು ಸೇವೆಯ ಮೇಲೆ ನಮ್ಮ ಕಛೇರಿಗೆ ಬಂದಿದ್ದ ಅವರು ಆಗಾಗ “ನಾವು ಯಾವತ್ತಿದ್ರೂ ಬಾಡಿಗೆದಾರಪ್ಪ, ನೀವೇ ಮನೆ ಓನರ್, ನಿಮ್ಮನ್ನ ಎದುರು ಹಾಕ್ಕೋಳ್ಳಕಾಗುತ್ತಾ?” ಅಂತೆಲ್ಲಾ ತಮಾಷೆ ಮಾಡುತ್ತಲೇ ಕೆಲಸ ಕಲಿಸಿದ, ಕಛೇರಿಯಲ್ಲಿ, ನೌಕರರೊಂದಿಗೆ ಇರಬೇಕಾದ ಸೂಕ್ಷ್ಮಗಳನ್ನು ಮತ್ತು ನಮ್ಮ ಗೌಪ್ಯತೆ, ಸೇಫ್ಟಿಗೆ ದಾಖಲೆ ಸಹಿತವಾಗಿ ಹೇಗಿರಬೇಕೆನ್ನುವುದನ್ನು ಕಲಿಸಿದ ಗುರುವಾದರು. ನೋಡ ನೋಡುತ್ತಲೇ ಅವರ ಮನೆಯಲ್ಲಿದ್ದಾಗಲೇ ನನ್ನ ಮದುವೆಯೂ ಆಯಿತು, ದೊಡ್ಡ ಮಗನೂ ಹುಟ್ಟಿದ. ಜೊತೆಗೆ ಅವರ ಸೀಟಿಗೆ ನನಗೆ ಪದೋನ್ನತಿಯೂ ಸಿಕ್ಕು ಅವರೂ ಪದೋನ್ನತಿ ಮೇಲೆ ತೆರಳಿದರು.

ಅವರಿಗೂ ಇಲಾಖೆಯಲ್ಲಿ ಹೇರಾಫೇರಿ ಮಾಡುವ ಜನರಿಂದ ತೊಂದರೆ, ಕಿರಿಕಿರಿ ಆದದ್ದು ಅಷ್ಟಿಷ್ಟಲ್ಲ. ಅವೆಲ್ಲವನ್ನೂ ನುಂಗಿಕೊಂಡೇ “ಏಸುವಿನ ಸ್ತ್ರೋತ್ರವೊಂದನ್ನೇ” ನಂಬಿ ನೌಕರಿಯನ್ನು ದಾಟಿ ನಿವೃತ್ತಿ ಹೊಂದಿದರು. ಇದೆಲ್ಲದರ ಮಧ್ಯೆ ಅವರಿಗಿದ್ದ ವಿಶೇಷ ಆಸಕ್ತಿ ಮತ್ತು ವಿದ್ಯೆಗಳ ಬಗ್ಗೆ ಹೇಳಲೇಬೇಕು. ಹೆದರಿಕೆ ಇಲ್ಲದೇ ಹಾವನ್ನು ಹಿಡಿಯುತ್ತಿದ್ದರು. ಅಧ್ಬುತವಾಗಿ ಚಿತ್ರ ಬಿಡಿಸುತ್ತಿದ್ದರು. ಕ್ಯಾಲಿಗ್ರಾಫ್ ಬರಹ ಗೊತ್ತಿತ್ತು. ಎಂ. ಎಸ್ಸಿ. ಓದುವಾಗಲೇ ಡಿಪ್ಲೋಮಾ ಇನ್ ಹೋಮಿಯೋಪತಿಯನ್ನು ಓದಿದ್ದರ ಪರಿಣಾಮವಾಗಿ ಪರಿಚಯಸ್ಥರಿಗೆ ಉಚಿತ ವೈದ್ಯಕೀಯ ಸಲಹೆ, ಚಿಕಿತ್ಸೆಯನ್ನೂ ಉಚಿತವಾಗಿ ಕೊಡುತ್ತಿದ್ದರು. ನಿವೃತ್ತಿ ನಂತರ ಬಂದ ಮೊತ್ತದಲ್ಲಿ ಚಿಕ್ಕ ಮಗ ಬಾಬುಗೆ ಹೋಂ ಅಪ್ಲೈಯನ್ಸ್ ಹಾಕಿಕೊಟ್ಟು ಚಿಕ್ಕದೊಂದು ಕ್ಲಿನಿಕ್ಕನ್ನೂ ನಡೆಸುತ್ತಿದ್ದರು. ಜಾತಿಯಿಂದ ಕ್ರಿಶ್ಚಿಯನ್ನಾದರೂ ಅವರ ಸಂಪರ್ಕ ಮತ್ತು ಸ್ನೇಹಕ್ಕೆ ಸಿಕ್ಕವರೊಂದಿಗೆ ಜಾತಿ ಮೀರಿದ ಆಪ್ತತೆ ಮತ್ತು ಪ್ರೀತಿಯಿಂದ ಇರುತ್ತಿದ್ದ ತಾಳ್ಮೆ ನೋಡಿ ಕಲಿಯವಂತಾದ್ದು. ಅದೊಮ್ಮೆ ಖಾಲಿ ಕೂತಿದ್ದಾಗ ನಾಲ್ಕು ಪದಗಳನ್ನು ಅದೆಷ್ಟು ಚೆಂದ ಬರೆದಿದ್ದರು. “I treat, he cures”. “he” ಅಂದರೆ ದೇವರು ಅನ್ನುವ ಅರ್ಥದಲ್ಲಿ. ಇದು ಅವರ ಸೇವಾ ಮನೋಭಾವ ತೋರಿಸುತ್ತದೆ.

ಅವರು ಸರ್ವಿಸಲ್ಲಿದ್ದಾಗ ನಾನಿದ್ದ ಕಛೇರಿ ಬಿಟ್ಟು ಹೋದ ವರ್ಷಗಳ ನಂತರ ಅವರಿಂದ ವೈದ್ಯಕೀಯ ಸಲಹೆ, ಚಿಕಿತ್ಸೆ, ಸಾಂತ್ವಾನ, ಸಮಾಧಾನ ಪಡೆದ ನಮ್ಮದೇ ಕಛೇರಿಯ ವ್ಯಕ್ತಿಯೊಬ್ಬರು ತಮ್ಮ ತಪ್ಪನ್ನು ಮುಚ್ಚಿಟ್ಟುಕೊಳ್ಳಲು ಅವರ ಮೇಲೆ ವಿನಾಕಾರಣ ಸಲ್ಲದ ಅಸಹ್ಯದ ಆರೋಪ ಹೊರಿಸಿದಾಗ್ಯೂ ಸುಮ್ಮನೆ ನಕ್ಕು “ದೇವರು ಅವರಿಗೆ ಒಳ್ಳೇದು ಮಾಡಲಿ” ಎಂದಿದ್ದರು. ತುಂಬಾ ಸಲ ಅನ್ನಿಸಿದ್ದೇನೆಂದರೆ, ಪ್ರಾಮಾಣಿಕವಾಗಿದ್ದವರಿಗೇ ಹೆಚ್ಚು ತೊಂದರೆಗಳಾ?. ನನ್ನ ಆಪ್ತರೊಬ್ಬರು ನನಗೆ ಪದೇ ಪದೇ “ ದೋಸ್ತ, ಎತ್ತರಕ್ಕೆ ಬೆಳೆದ ಮರವನ್ನೇ ಮೊದಲು ಕಡಿಯೋದು” ಅಂತ ಹೇಳುತ್ತಿದ್ದುದು ನೆನಪಾಗುತ್ತೆ.

ವಿಹಾರ್ ಕುಮಾರ್ ದಂಪತಿ ನನ್ನ ಹೆಂಡತಿಯನ್ನು ಬಾಯ್ತುಂಬಾ “ಮಗಳೇ” ಅನ್ನುತ್ತಿದ್ದ ರೀತಿಯೇ ಕೆಲ ಸಂಧರ್ಭದ ದುಗುಡವನ್ನು ನಿವಾರಿಸುತ್ತಿತ್ತು. ಮೊನ್ನೆ ಮೊನ್ನೆವರೆಗೆ ಮಗನ ಚೂರು ಸಮಸ್ಯೆಗೆ ಭೇಟಿಯಾಗಿ ಬಂದಿದ್ದೆ. ನಂತರ ಮಾತಾಡುವಾಗೆಲ್ಲಾ “ನಮ್ ಮಗಳು ಹೆಂಗಿದಾಳಪ್ಪ” ಅನ್ನುತ್ತಿದ್ದರು. ದಿನಂಪ್ರತಿ ಒಂದು ಜೋಕು, ಒಂದು ಸಂದೇಶ, ವಿಲೇವಾರಿ ನಮ್ಮ ಮಧ್ಯೆ ಆಗುತ್ತಲಿತ್ತು. ಕಳೆದ ಹದಿನೈದು ದಿನದ ಹಿಂದೆ ಕಾಲ್ ಮಾಡಿದರೆ ಕಟ್ ಮಾಡಿದರು. ನಾಲ್ಕಾರು ದಿನ ನಂತರ ಡೌಟಾಗಿ ಅವರ ಮಗ ವಿಶುಗೆ ಮಾತಾಡಿದೆ. “ಕೋವಿಡ್-19 ಪಾಸಿಟಿವ್ ಆಗಿದೆ ಡ್ಯಾಡಿಗೆ. ಆಸ್ಪತ್ರೆಗೆ ಸೇರಿಸಿದ್ದೇವೆ“ ಅಂದುಬಿಟ್ಟ.

ಆಸ್ಪತ್ರೆ, ಮನೆ ಅಲೆಯುತ್ತಿದ್ದ ಅವರ ಎರಡನೇ ಮಗ ಬಾಬುಗೆ ಕಾಲ್ ಮಾಡಿದರೆ ತೊಂದರೆ ಆದೀತೆಂದು ಬರೀ ಮೆಸೇಜ್ ಮಾಡಿ ಮಾಹಿತಿ ಪಡೆಯುತ್ತಿದ್ದೆ. ಭಾನುವಾರ ಕೂಡ “by the grace of god dad is doing well uncle, discharged yesterday” ಅಂತ ಮೆಸೇಜ್ ಮಾಡಿದ್ದ. ಮತ್ತೆ ನಿನ್ನೆ ರಾತ್ರಿ ಕೂಡ ಮೆಸೇಜ್ ಮಾಡಿ “ಆರಾಮಿದಾರೆ” ಅಂದ. ಇಂದು ಬೆಳಿಗ್ಗೆ ಇನ್ನೊಬ್ಬ ಸ್ನೇಹಿತರಾದ ಡೇವಿಡ್ ಸುಕುಮಾರ್ ಮಾತಾಡಿದರು; “ವಿಹಾರಣ್ಣ ಹೋಗ್ಬಿಟ್ರಂತೆ”… ನನ್ನ ಇಲಾಖೆಯಲ್ಲಿ ನನ್ನಂತೆ ನನಗಿಂತ ಕೆಲ ಕಿರಿ ನೌಕರರೂ ವಿಹಾರ್ ಸರ್ ರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಇದೇ ಜೂನ್ 16ಕ್ಕೆ ಅವರ ಜನ್ಮ ದಿನ ಮತ್ತು ವಿವಾಹ ವಾರ್ಷಿಕೋತ್ಸವದ ದಿನವಿತ್ತು…

ಡಾ. ರವಿಕುಮಾರ್

ಕೇವಲ ಆರೆಂಟು ತಿಂಗಳ ಹಿಂದೆ ನನ್ನ ಇನ್ನೊಬ್ಬ ಹಿರಿಯ ಮತ್ತು ಹಿತೈಷಿ ಹೋಮಿಯೋಪತಿ ವೈದ್ಯರಾದ ಡಾ. ರವಿಕುಮಾರ್ ಸಹ ತೀರಿದರು. ಅವರ ಅಂತ್ಯಕ್ರಿಯೆಯಲ್ಲಿ ನಾನೂ ಇದ್ದೆ. ದು:ಖದಲ್ಲಿದ್ದ ರವಿ ಸರ್ ಕುಟುಂಬದ ಸದಸ್ಯರನ್ನು ವಿಹಾರ್ ಸರ್ ಸಂತೈಸುವುದನ್ನು ನೋಡಿದ್ದೆ. ಡಾ. ರವಿ ಸರ್ ಅವರ ಪರಿಚಯವಾಗಿದ್ದು ಇದೇ ವಿಹಾರ್ ಸರ್ ಅವರಿಂದ. ಡಾ.ರವಿಕುಮಾರ್ ಅವರದೂ ಇಂಥದ್ದೇ ಗುಣ. ಅಲ್ಲದೇ ಅಧ್ಬುತ ವ್ಯಕ್ತಿತ್ವದವರು. ಅವರ ಭಾಷಾ ಜ್ಞಾನ, ವೈದ್ಯಕೀಯ ಚಿಕಿತ್ಸಾ ವಿಧಾನ, ಮತ್ತು ಯಾರೇ ಎದುರಿಗೆ ನಿಂತರೂ ಅವರ ಗುಣ ಲಕ್ಷಣಗಳನ್ನು ಗುರುತಿಸಿ ನಕ್ಕು ಸುಮ್ಮನಾಗುತ್ತಿದ್ದರು. ಅವರೂ ಅಪ್ಪನ ವಯಸ್ಸಿನವರು. ಅವರೊಂದಿಗೂ ನಾನು ನನ್ನ ಕುಟುಂಬ ಉತ್ತಮ ಬಾಂಧವ್ಯ ಹೊಂದಿದೆ. ಅವರ ಬಗ್ಗೆ ಹೇಳಿದರೆ ಇನ್ನೊಂದು ಇಂಟರೆಸ್ಟಿಂಗ್ ಕತೆ… ಮತ್ತೊಮ್ಮೆ ಅವರ ಬಗ್ಗೆ ಹೇಳುತ್ತೇನೆ. ಒಟ್ಟಿನಲ್ಲಿ ಬಳ್ಳಾರಿಯಲ್ಲಿ ನನ್ನ ನೌಕರಿ ಜೀವನದಿಂದ ಆರಂಭದಿಂದ ದೊರೆತ ಇವರಿಬ್ಬರ ಸ್ನೇಹ ಸಂಭಂಧದಲ್ಲಿ ಇಪ್ಪತ್ಮೂರು ವರ್ಷದವರೆಗೆ ಸಾಕಷ್ಟು ವಿಷಯಗಳನ್ನು ಮಾತಾಡಿದ್ದೇನೆ, ಕಲಿತಿದ್ದೇನೆ, ಪರಿಹರಿಸಿಕೊಂಡಿದ್ದೇನೆ. ವಯಸ್ಸು ಅರವತ್ತು ದಾಟಿದ್ದರೂ ಕೂಡ ವಯಸ್ಸಿಗೆ ಬಂದ ಹುಡುಗರಿಂದ ವಯಸ್ಸಾದವರವರೆಗೂ ಸೂಕ್ಷ್ಮವಾಗಿ ತಿದ್ದುವ, ಕನ್ವಿನ್ಸ್ ಮಾಡುವ ಅಥವಾ ಆಪ್ತತೆ, ಪ್ರೀತಿಯೊಂದರಿಂದಲೇ ಬದಲಾವಣೆ ತರುವಲ್ಲಿ ಇಬ್ಬರು ಕುಮಾರರು ನಾನು ಗೌರವಿಸುವ ಹಲವರಲ್ಲಿ ಅಗ್ರಸ್ಥಾನದಲ್ಲಿದ್ದವರು. ಈಗಿಲ್ಲವೆನ್ನುವುದೇ ಸದ್ಯದ ನನ್ನ ದುಗುಡ. ನಿಮ್ಮ ಗುಣ ಮತ್ತು ತಾಳ್ಮೆ ಅನುಕರಣೀಯ. ಹೋಗಿಬನ್ನಿ, ಏಸು ನಿಮ್ಮಾತ್ಮಗಳಿಗೆ ಶಾಂತಿ ನೀಡಲಿ.

ಅಮೇನ್….

-ಅಮರದೀಪ್….

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x