ಪುಸ್ತಕದ ಹೆಸರು : ಪರಿಮಳಗಳ ಮಾಯೆ
ಲಲಿತ ಪ್ರಬಂಧ ಸಂಕಲನ
ಲೇಖಕಿ : ಶ್ರೀಮತಿ ಆರ್ ಸಮತಾ
ಪ್ರಕಾಶಕರು: ಅಹರ್ನಿಶಿ ಪ್ರಕಾಶನ, ಶಿವಮೊಗ್ಗ
ಮೊದಲ ಮುದ್ರಣ : 2022, ಬೆಲೆ: ರೂ. 140
ಶ್ರೀಮತಿ ಸಮತಾ ಅವರ ಈ ಲಲಿತ ಪ್ರಬಂಧಗಳ ಪುಸ್ತಕವು ಓದಲು ಸಿಕ್ಕಿದ್ದು ನನಗೆ ಆಕಸ್ಮಿಕವಾಗಿ. ಸಮತಾ ಅವರು ನನ್ನ ತಂಗಿಯ ಸಹಪಾಠಿಯಾಗಿದ್ದವರು. ನಿನ್ನೆ ನನ್ನ ಸೋದರಿ ಲಕ್ಷ್ಮಿ ಉರುಫ್ ಪಮ್ಮಿಯ ಮನೆಗೆ ಹೋದಾಗ ಅದೂ ಇದೂ ಮಾತಾಡುವಾಗ ಲೇಖಕಿಯ ವಿಚಾರ ಬಂತು. ಈಕೆ ನನ್ನ ತಂಗಿಯ ಸ್ನೇಹಿತೆ. ನನ್ನ ತಂಗಿಯನ್ನು ಬಿಎಡ್ ತರಗತಿಗೆ ಪ್ರವೇಶಾತಿ ಮಾಡಲು ಹೋದಾಗ ನಾನು ನೋಡಿದ್ದು ; ಸುಮಾರು ಇಪ್ಪತ್ತೈದು ವರುಷಗಳ ಹಿಂದೆ. ಆನಂತರ ನನ್ನ ಪುಸ್ತಕವೊಂದನ್ನು ಓದಿ, ಮೆಚ್ಚಿ ಪತ್ರ ಬರೆದು ಸ್ನೇಹಿತರಾದದ್ದು ಸಮತಾ ಅವರ ತಂದೆ ರಾಂಪುರದ ರಾಜಣ್ಣ ಅವರು. ಹೀಗೆ ರಾಜಣ್ಣನವರ ಮೂಲಕವೂ ನನ್ನ ಸಹೋದರಿಯ ಮೂಲಕವೂ ಸಮತಾ ಅವರ ವಿಚಾರ ಗೊತ್ತಾಗುತ್ತಿತ್ತು. ಮೂಲತಃ ಗಣಿತದ ಶಿಕ್ಷಕಿಯಾದ ಸಮತಾ ಅವರು ಲೇಖಕಿ ಅಂತ ನನಗೆ ಗೊತ್ತೇ ಇರಲಿಲ್ಲ. ಬರೀ ಲೇಖಕಿ ಅಲ್ಲ ; ಅದ್ಭುತವಾಗಿ ಬರೆಯಬಲ್ಲ ಮತ್ತು ಬರೆವಣಿಗೆಯ ಗುಟ್ಟು ಬಲ್ಲ ಸೃಜನಶೀಲೆ ಎಂಬುದನ್ನು ಇವರ ಈ ಕೃತಿ ಸಾಬೀತು ಮಾಡಿದೆ. ನಿನ್ನೆ ರಾತ್ರಿ ನನ್ನ ತಂಗಿಯಿಂದ ಪಡೆದು ತಂದ ಈ ಕೃತಿಯನ್ನು ಮುಟ್ಟಿ ಮಾತಾಡಿಸಿದೆ. ಪೂರ್ತ ಓದಿಸಿಕೊಂಡಿತು. ಒಂದಕ್ಷರ ಬಿಡದೆ ಓದಿಯೇ ಬಿಟ್ಟೆ. ಇದು ಕೇವಲ ಲಲಿತ ಪ್ರಬಂಧಗಳ ಲಕ್ಷಣ ಮಾತ್ರವೇ ಅಲ್ಲ ; ಇವನ್ನು ಬರೆದ ಲೇಖಕಿಯ ಆಪ್ಯಾಯಮಾನ ಶೈಲಿ ಮತ್ತು ಸುಭಗ ಭಾಷೆ. ಸರಳ ವಿರಳ ಸಲೀಸು ; ಇಲ್ಲಿನ ಲಲಿತ ಪ್ರಬಂಧಗಳ ಹಾಸು ಬೀಸು.
ಕನ್ನಡ ಸಾಹಿತ್ಯ ಪಾಠ ಮಾಡಿಕೊಂಡು ಬರೆವ ಅಧ್ಯಾಪಕರು ಬರೆದದ್ದು ಸಾಕು ; ಬೇರೆಯವರು ಬರೆಯಬೇಕು ಎಂಬುದು ನನ್ನ ಬಹುಕಾಲದ ಅನಿಸಿಕೆ. ಅದರಂತೆ ಇಂದು ಬೇರೆ ಬೇರೆ ಕ್ಷೇತ್ರದಲ್ಲಿ ಕಾಯಕ ಮಾಡಿಕೊಂಡು ಜೀವನದ ವಿಶಿಷ್ಟ ಮತ್ತು ವಿಶೇಷ ಅನುಭವಗಳನ್ನು ತಮ್ಮದಾಗಿಸಿಕೊಳ್ಳುತ್ತಿರುವ ಕನ್ನಡ ಅಧ್ಯಾಪಕೇತರ ಮಂದಿಯ ಬರೆವಣಿಗೆ ನನಗೆ ಯಾವತ್ತೂ ಇಷ್ಟವೇ. ಇದಕ್ಕೆ ಕಾರಣವೂ ಇದೆ : ಸಿದ್ಧಾಂತಗಳ ರಾದ್ಧಾಂತದಲ್ಲಿ ನಲುಗಿ ಹೋದ, ತಾವೇ ಶ್ರೇಷ್ಠವೆಂದು ಬಡಬಡಿಸುತ್ತಾ ಅಹಮಿನಲಿ ತೇಲಿ ಹೋದ ಅಕಡೆಮಿಕ್ ಬರೆಹಗಾರರು ನನಗೆ ವಾಕರಿಕೆ ತರಿಸಿಬಿಟ್ಟಿರುವ ಈ ದಿನಮಾನಗಳಲ್ಲಿ ಇಂಥ ಬರೆಹಗಾರರು ಕಣ್ಣಿಗೆ ಬಿದ್ದಾಗ ಸಹಜವಾಗಿಯೇ ಭರವಸೆ ತರುತ್ತಾರೆ.
ಹಾಗೆ ನೋಡಿದರೆ ತಮ್ಮ ಗಣಿತ ಕಲಿಸುವ ವೃತ್ತಿ ಸಂಬಂಧದ ವಿಚಾರಗಳನ್ನು ಸಮತಾ ಅವರು ತಮ್ಮ ಈ ಪ್ರಬಂಧಗಳಲ್ಲಿ ಹೆಚ್ಚು ತಂದಿಲ್ಲ. ಅವನ್ನೆಲ್ಲ ತಂದು ವಿನಾಕಾರಣ ಬರೆಹದ ಭಾರ ಹೆಚ್ಚು ಮಾಡಿಕೊಳ್ಳಲು ಅವರಿಗೆ ಸುತರಾಂ ಇಷ್ಟವಿಲ್ಲ. ಉಳಿದಂತೆ ಅವರು ಆಯ್ಕೆ ಮಾಡಿಕೊಂಡಿರುವ ವಿಷಯಗಳು ನಮ್ಮ ನಿಮ್ಮ ಸಾಮಾನ್ಯರಿಗೆ ಗೊತ್ತಿರುವಂಥದೇ. ಆದರೆ ಅವನ್ನು ನಿರೂಪಿಸುವ ಶೈಲಿ ಮತ್ತು ವಿಧಾನಗಳು ಲಲಿತ ಸುಂದರವಾಗಿವೆ ; ಲಲಿತ ಪ್ರಬಂಧಗಳಾಗಿವೆ! ಸಮತಾ ಅವರು ಏನೊಂದನೂ ಸಲೀಸಾಗಿ ಬರೆಯಬಲ್ಲರು ; ವೈನೋದಿಕವಾಗಿಸಬಲ್ಲರು ; ಇದರ ಒಡಲಿನಲ್ಲೇ ನಮ್ಮ ಕಾಲಮಾನದ ಸಂಸ್ಕೃತಿಯ ಮತ್ತು ಪೀಳಿಗೆಯ ಆಲೋಚನೆಗಳನ್ನು ನಿರಾಳವಾಗಿ ಅಭಿವ್ಯಕ್ತಿಸಬಲ್ಲರು. ಲಲಿತ ಪ್ರಬಂಧಗಳೇ ಹಾಗೆ. ಒಂದು ವಿಷಯದ ಸುತ್ತ ಚೆಲ್ಲುವ ಬೆಳಕು ; ಮನೋಲಹರಿ ; ಬದುಕಿನ ದೃಷ್ಟಿಕೋನದ ಆಕ್ಷಣದ ವ್ಯಾಖ್ಯಾನ. ಲೈಟಾಗಿದ್ದರೂ “ಲೈಟ್” ಆಗಿಬಿಡುವ ಚೋದ್ಯ.
ಎ ಎನ್ ಮೂರ್ತಿರಾವ್ ಮತ್ತು ರಾ ಕುಲಕರ್ಣಿಯವರಂಥ ಘಟಾನುಘಟಿಗಳು ಬರೆದ ಲಲಿತ ಪ್ರಬಂಧಗಳು ನನಗೆ ಆಯಾಚಿತವಾಗಿ ನೆನಪಾದವು. ಶ್ರೀಮತಿ ಸಮತಾ ಅವರ ಈ ಮೊದಲ ಪ್ರಬಂಧ ಸಂಕಲನದ ಬರೆಹಗಳು ಅಷ್ಟು ತೂಕದ್ದಾಗಿವೆ. ಕನ್ನಡ ಸಾಹಿತ್ಯದ ಓದು ಬಲ್ಲ ಯಾರೂ ಹೀಗೆ ಹೇಳಲೇಬೇಕು. ಉದ್ಯೋಗಸ್ಥ ಹೆಣ್ಣೊಬ್ಬಳು ಓದು ಬರೆಹಗಳನ್ನು ಹವ್ಯಾಸವನ್ನಾಗಿಸಿಕೊಂಡ ಹೊತ್ತಲ್ಲಿ ಅರಳಿದ ಕುಸುಮಗಳಿವು ; ತನ್ನ ಪಯಣದ ಉದ್ದಕೂ ಸುಗಂಧವ ಚೆಲ್ಲುತ ಸುತ್ತಲ ಪರಿಸರವನ್ನು ಆಹ್ಲಾದಗೊಳಿಸುವ ಸಾರ್ಥಕ ನೆಲೆಯವು. ಹಾಗಾಗಿಯೇ ಈ ಎಲ್ಲ ಪ್ರಬಂಧಗಳು ತಮ್ಮ ಕುಸುಮಿತ ಗಂಧವನ್ನು ಓದುಗರಿಗೆ ಲೇಪಿಸಿ ಬಿಡುವ ಪರಿಮಳದಲ್ಲಿ ಅದ್ದಿದ ವಸ್ತ್ರದಂತೆ ಶೋಭಿಸಿ ಬಿಡುವ ಗುಣವನ್ನು ಹೊಂದಿವೆ. ಅದರಲ್ಲೂ ʼಪರಿಮಳಗಳ ಮಾಯೆʼ ಎಂಬ ಪ್ರಬಂಧವಂತೂ ಈ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದೆ. ಒಂದು ಲಲಿತ ಸುಂದರ ಪ್ರಬಂಧ ಹೇಗಿರಬೇಕು? ಎಂಬುದಕೇ ಮಾದರಿಯಾಗಿದೆ. ನನ್ನದೂ ಇಂಥ ನಾಯಿಮೂಗೇ ಆದುದರಿಂದ ಬಹುಶಃ ನೇರವಾಗಿ ಇದು ಕನೆಕ್ಟ್ ಆಯಿತೆನಿಸುತ್ತದೆ.
ಯಾವುದೇ ಪುಸ್ತಕದ ಮೊದಲ ಲಕ್ಷಣ : ಓದಿಸಿಕೊಳ್ಳುವುದು. ಅದರಲೂ ಲಲಿತ ಪ್ರಬಂಧಗಳು ಓದಿಸಿಕೊಳ್ಳುವ ಗುಣವನ್ನು ಹೊಂದಿರಲೇಬೇಕು. ಈ ನಿಟ್ಟಿನಲ್ಲಿ ಈ ಕೃತಿಯು ನಮ್ಮನ್ನು ಆವರಿಸುತ್ತದೆ. ಕೈಗೆ ತೆಗೆದುಕೊಂಡ ಯಾರೂ ಮುಗಿಸದೇ ನಿಲ್ಲಿಸರು ಎಂದು ನಾನು ಖಚಿತವಾಗಿ ಹೇಳಬಲ್ಲೆ. ಅದಕ್ಕೆ ನಾನೇ ಸಾಕ್ಷಿ. ಒಂದೇ ಸಲಕ್ಕೆ ಓದಿ ಬಿಟ್ಟ ಸಂತಸವನು ಹೀಗೆ ಬರೆಯುವುದರ ಮೂಲಕ ಹಂಚಿಕೊಳ್ಳುತ್ತಿರುವೆ.
ಇವರ ತಂದೆ ರಾಜಣ್ಣನವರು ಕೆ ಆರ್ ನಗರದವರು. ಇಪ್ಪತ್ತೊಂದು ವರುಷಗಳ ಕಾಲ ನನಗೆ ಅನ್ನ, ಆಶ್ರಯ, ಅಕ್ಕರೆ, ಅಭಿಮಾನಗಳನ್ನು ಧಾರೆಯೆರೆದ ಕೃಷ್ಣರಾಜನಗರವು ನನ್ನ ಪಾಲಿಗೆ ತವರುಮನೆ. ಸಮತಾ ಅವರು ಈ ನೆಲದವರು. ಶಿವಮೊಗ್ಗದಲಿ ಓದಿ, ಕೊಡಗಿನಲ್ಲಿ ವೃತ್ತಿ ನಡೆಸಿ, ಮೈಸೂರಿನಲ್ಲಿ ನೆಲೆಸಿದ ಇವರ ಬಗ್ಗೆ ನನ್ನಲ್ಲೀಗ ಸದಭಿಮಾನ-ಸಗೌರವಗಳು ಮೂಡಿವೆ. ಓದುವ ಮತ್ತು ಬರೆಯುವ ಯಾರನ್ನು ಕಂಡರೂ ಸಹಜವಾಗಿಯೇ ನನಗೆ ಇಂಥ ಪ್ರೀತಿ-ಮಮತೆ. ಅದರಲೂ ನಿರಹಂಕಾರದಲಿದ್ದು ಸುಮ್ಮನೆ ತಮ್ಮ ಪಾಡಿಗೆ ತಾವು ಬದುಕುತ್ತಾ ಬರೆಯುತ್ತಾ ಇರುವವರನ್ನು ಹೃನ್ಮನ ಪೂರ್ವಕ ಗೌರವಿಸುವೆ. ಏಕೆಂದರೆ ಅಹಮನು ಪೋಷಿಸುವುದು ಬರೆಹದ ಕೆಲಸವಾಗಬಾರದು ; ಅಹಮನು ಶೋಧಿಸಿ ಕೈ ಬಿಡುವ ಜಾಯಮಾನಕೆ ನೆರವಾಗಬೇಕು. ಸಮತಾ ಅವರ ಲೇಖನಿ ಈ ಕೆಲಸವನ್ನು ಸದ್ದಿಲ್ಲದೆ ಮಾಡಿದೆ.
ಪುಸ್ತಕವು ಅಚ್ಚುಕಟ್ಟಾಗಿ ಮುದ್ರಿತವಾಗಿದೆ. ಪುಟ 114 ರ ಮೊದಲ ಪ್ಯಾರಾದಲಿ ಮಾತ್ರ ಅಕ್ಷರ ಸ್ಖಾಲಿತ್ಯವಿದೆ. (ನಿಶ್ಯಬ್ಧ ಅಲ್ಲ; ನಿಶ್ಶಬ್ದ ಸರಿ) ಉಳಿದಂತೆ ಕರಡು ತಿದ್ದುವಿಕೆ ಪರಫೆಕ್ಟು. ಹೊತ್ತಗೆಯು ಸುಂದರವಾಗಿದೆ ; ಡೀಸೆಂಟಾಗಿದೆ. ಶೀರ್ಷಿಕೆ, ಆಕಾರ, ಬಳಸಿದ ಕಾಗದದ ಗುಣಮಟ್ಟ, ಆಯ್ದುಕೊಂಡ ವರ್ಣವಿನ್ಯಾಸ, ಇಟ್ಟ ಬೆಲೆ ಎಲ್ಲವೂ ಕರೆಕ್ಟಾಗಿದೆ. ಏಕೆಂದರೆ ಪ್ರತಿ ಪುಸ್ತಕಕೂ ತನ್ನದೇ ಆದ ಅಸ್ತಿತ್ವ ಮತ್ತು ವ್ಯಕ್ತಿತ್ವಗಳಿರುತ್ತವೆ. ಅಂಥ ಆಕರ್ಷಕತೆ ಈ ಕೃತಿಯಲ್ಲಿದ್ದು, ಸಾಹಿತ್ಯದ ಮೂಲ ಲಕ್ಷಣವೆನಿಸಿದ ರಸಾಸ್ವಾದ ಮತ್ತು ಮನೋ ಆಹ್ಲಾದಗಳೆರಡೂ ಪ್ರತಿ ಪುಟ ಪುಟಗಳಲ್ಲಿ ಅನುರಣಿತವಾಗಿವೆ.
ಲೇಖಕಿಯು ಆಯ್ದುಕೊಂಡ ವಿಷಯಗಳೇ ತುಂಬ ಇಂಟರೆಸ್ಟಿಂಗ್ ಆಗಿರುವಂಥವು. ಆ ಮಟ್ಟಿಗೆ ಜನಪರವೂ ಜನಪದವೂ ಆಗಿ ಓದುಗರನ್ನು ಆವರಿಸಿಕೊಳ್ಳುತ್ತವೆ. ಅವರು ಸಹ ತಮ್ಮ ಅನುಭವಗಳೊಂದಿಗೆ ಸಮೀಕರಿಸಿಕೊಂಡು ಖುಷಿಪಡುವ ಆನಂದವು ಜಿಲೇಬಿ, ಜಹಂಗೀರುಗಳ ಒಳಗಣ ರಸಪಾಕದಂತೆ ಮಡುಗಟ್ಟಿದೆ. ಮೇಲ್ನೋಟಕೆ ಹಾಸ್ಯ ಮತ್ತು ವಿನೋದಗಳೇ ಪ್ರಧಾನವಾಗಿದ್ದರೂ ಅಂತರಂಗದಲ್ಲಿ ಒಂದು ಬಗೆಯ ಗಾಢ ವಿಷಾದ ಮತ್ತು ವಿಷಣ್ಣತೆಗಳು ದಾಖಲಾಗಿರುವುದನ್ನು ಒಳಗಣ್ಣಿಂದ ಗುರುತಿಸಬಹುದು. ಪುಟಿಯುವ ಜೀವಂತಿಕೆ ಮತ್ತು ಅದಮ್ಯ ಜೀವನೋತ್ಸಾಹಗಳೆರಡೂ ಬರೆಹಗಳಲ್ಲಿ ವ್ಯಕ್ತವಾಗುವುದರಿಂದ ಓದುಗರು ಸಹ ಇವರಂತೆಯೇ ಸಂಭ್ರಮಿಸುವುದು ಖಚಿತ. ಸುನೀತಾ ಕುಶಾಲನಗರ ಅವರು ತಮ್ಮ ಬೆನ್ನುಡಿಯಲ್ಲಿ ಗುರುತಿಸಿರುವಂತೆ, ತಮ್ಮ ಸುತ್ತಲಿನ ಲೋಕವನು ಸೂಕ್ಷ್ಮವಾಗಿ ಮತ್ತು ಸಂವೇದನಾಶೀಲವಾಗಿ ಗಮನಿಸುತ್ತ, ಚಿತ್ತಭಿತ್ತಿಯಿಂದ ನವಿರಾಗಿ ಅಭಿವ್ಯಕ್ತಿಸುವ ಸಾಮಥ್ರ್ಯ ಸಮತಾ ಅವರದು. ಅವರ ನೆನಪಿನ ಶಕ್ತಿ ಮತ್ತು ಬರೆಯುವಾಗಿನ ತಾದಾತ್ಮ್ಯಗಳ ಬಗ್ಗೆ ನನಗೆ ಅತೀವ ಮೆಚ್ಚುಗೆ ಮೂಡಿತು.
ʼಎನ್ನ ಪಾಡೆನಗಿರಲಿ; ಅದರ ಹಾಡನಷ್ಟೇ ನೀಡುವೆನು ರಸಿಕ ನಿನಗೆ! ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ ಆ ಸವಿಯ ಹನಿಸು ನನಗೆʼ ಎಂದು ಕವಿ ಬೇಂದ್ರೆ ನನಗೆ ನೆನಪಾದರು. ಸಮತಾ ಅವರು ಪಾಡನ್ನು ಹಾಡಾಗಿಸುವ ಕಲೆಯಲ್ಲಿ ನಿಷ್ಣಾತರು. ಜೊತೆಗೆ ಕಲ್ಲು ಹೃದಯವನೂ ಹಗುರಗೊಳಿಸಿ, ತುಟಿಯ ಮೇಲೊಂದು ಮಂದಸ್ಮಿತ ಮೂಡಿಸುವಲ್ಲಿ ಚಾಣಾಕ್ಷರು ಎಂಬುದು ಇಲ್ಲಿನ ಬರೆಹಗಳಿಂದ ಮನದಟ್ಟಾಗುವುದು. ʼಕವಿಯ ಹೃದಯವೊಂದು ವೀಣೆ; ಲೋಕವದನು ಮಿಡಿವುದುʼ ಎಂಬ ಕವಿ ಕುವೆಂಪು ಅವರ ಮಾತೊಂದಿದೆ. ಅದರಂತೆ ಇವರು ಜಗತ್ತಿನ ವಿದ್ಯಮಾನಗಳಲಿ ಅಡಗಿರುವ ಬೇರೊಂದು ಆಯಾಮವನ್ನು ನಮ್ಮ ಗಮನಕೆ ತಂದು ಸಂಕೀರ್ಣ ಬದುಕಿಗೊಂದು ರಿಲೀಫು ಕೊಡುವಲ್ಲಿ ಸಿದ್ಧಹಸ್ತರು. ಉರಿವ ಹಣತೆಯಿಂದ ಇನ್ನೊಂದು ಹಣತೆಯನ್ನು ಬೆಳಗುವ ಕೆಲಸವನ್ನಷ್ಟೇ ಅವರು ಮಾಡಿದ್ದಾರೆ. ತಾವೇನೂ ಕಳೆದುಕೊಳ್ಳದೆ ಓದುಗರಿಗೆ ಎಂಥದೋ ಅನಿರ್ವಚನೀಯ ಖುಷಿಯನ್ನು ಉಣಬಡಿಸಿದ್ದಾರೆ. ಎರಡು ವೀಣೆಗಳನ್ನು ಶ್ರುತಿಗೊಳಿಸಿ, ಕೊಠಡಿಯ ಎರಡು ಮೂಲೆಗಳಲಿ ನೆಲೆಗೊಳಿಸಿ, ಒಂದನ್ನು ನುಡಿಸಿದರೆ ಇನ್ನೊಂದು ಅದರ ಕಂಪನಕೆ ತಾನೇ ತಾನಾಗಿ ಮಿಡಿಯುವುದಂತೆ. ಇದೊಂದು ಲೋಕ ವಿಸ್ಮಯ. ಹಾಗೆ ಸಮತಾ ಅವರ ಲಲಿತಮಯ ಸಲೀಸು ಬರೆಹಗಳನು ಓದುತಿದ್ದರೆ ನಾವೂ ಹೀಗೆ ಬರೆಯಬೇಕು ಎಂದೆನಿಸುವುದು ಸತ್ಯ ಮತ್ತು ಸಹಜ. ಆದರೆ ಇಂಥ ಬರೆಹಗಳ ಕೃಷಿ ಮೇಲ್ನೋಟಕೆ ಅನಿಸುವಷ್ಟು ಸರಳವೂ ಅಲ್ಲ; ಸಾಮಾನ್ಯವೂ ಅಲ್ಲ! ಬಾಳಿನ ಬದ್ಧತೆ ಮತ್ತು ಸಾಕಷ್ಟು ಸಿದ್ಧತೆಗಳಿಲ್ಲದಿದ್ದರೆ ಹೀಗೆ ಇವು ಗದ್ಯಕವಿತೆಗಳಾಗಿ ಹೊರ ಹೊಮ್ಮುವುದೂ ಇಲ್ಲ !!
ಹೀಗೇ ಸಮತಾ ಹೆಚ್ಚು ಹೆಚ್ಚು ಬರೆಯಲಿ; ಹರಟೆ ರೂಪದ ಪ್ರಬಂಧಧ್ವನಿ ಇನ್ನಷ್ಟು ಮೊರೆಯಲಿ; ಸಹೃದಯ ತಣಿಯಲಿ ಎಂದು ಹಾರೈಸುವೆ. ಲೇಖಕಿಗೆ ಅಭಿನಂದನೆಗಳು ಮತ್ತು ಪುಸ್ತಕ ಓದಿಸಿದ ನನ್ನ ಸೋದರಿಗೆ ಧನ್ಯವಾದಗಳು.
-ಡಾ. ಹೆಚ್ ಎನ್ ಮಂಜುರಾಜ್
ಬಹಳ ಸುಂದರ ಪರಿಚಯ.ಈ ಲಲಿತ ಪ್ರಬಂಧ ಪುಸ್ತಕವನ್ನು ಖರೀದಿಸುವ ಬಗೆ ತಿಳಿಸಿ.
ಆರತಿ ಘಟಿಕಾರ್
ದಯಮಾಡಿ ನೇರವಾಗಿ ಲೇಖಕಿ ಸಮತಾ ಅವರನ್ನು ಸಂಪರ್ಕಿಸಿ: 8660716693
ಇವರು ನಿಮಗೆ ದಾರಿ ತೋರುವರು. ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು ಆರತಿಯವರೇ.