‘ಕಾಂತಾರ’ದೊಳಗೊಂದು ಸುತ್ತು: ಶ್ರೀಧರ ಪತ್ತಾರ, ವಿಜಯಪುರ.

ಕಾಡು, ಅದರ ಸುತ್ತಲಿನ ಜಗತ್ತು ಮತ್ತು ಭೂತಕೋಲದ ದೈವದೊಂದಿಗೆ ತಳಕು ಹಾಕಿಕೊಂಡಿರುವ ಕಾಂತಾರ ನೋಡುಗರಿಗೆ ತನ್ನೊಳಗಿನ ಭಾವವನ್ನು ಬಹಳ ಬೇಗನೆ ಬಿಟ್ಟುಕೊಡುವುದಿಲ್ಲ. ಕಾಂತಾರದ ಕತ್ತಲೆ ಬೆಳಕು, ರವ-ನಿರವಯತೆಯ ಚುಂಗುಹಿಡಿದು ಹೊರಟರೆ ಖಂಡಿತವಾಗಿಯೂ ಕಥೆಯ ಕಾಡಿನೊಳಕ್ಕೆ ಪಯಣಿಸುತ್ತೇವೆ. ನೋಡುನೋಡುತ್ತಲೇ ಅದರೊಳಗೆ ಕಳೆದುಹೋಗುತ್ತೇವೆ. ತನ್ನ ವಾದ್ಯ, ತಾಳಮೇಳದ ಸದ್ದುಗದ್ದಲದೊಂದಿಗೆ ನಮ್ಮನ್ನು ಆಗಾಗ ಬೆಚ್ಚಿಬೀಳಿಸುತ್ತ, ಮೈನವಿರೇಳಿಸುವ ಕಾಂತಾರವೆಂಬ ದೃಶ್ಯಕಾವ್ಯ ನಮ್ಮಲ್ಲಿ ನಿಜಕ್ಕೂ ಆಶ್ಚರ್ಯ ಅದ್ಭುತವೆನ್ನಬಹುದಾದ ಭಾವವೊಂದನ್ನು ಹುಟ್ಟುಹಾಕುತ್ತದೆ.

ವಿಭಿನ್ನ ಮತ್ತು ವಿಶೇಷ ಎಂದೆನಿಸುವ ಕಾಡೆಂಬ ನಿಗೂಢ ಜಗತ್ತನ್ನು ತೆರೆದಿಡುವ ಕತೆ ನೋಡುಗರನ್ನು ರೋಚಕತೆಗೆ ತಳ್ಳುತ್ತದೆ. ದೈವ, ದೈವ ಕಾಪಿಡುವ ಅಲ್ಲಿನ ನಿವಾಸಿಗಳು ಭೂಮಿಯ ಆಸೆಗೆ ಬಿದ್ದ ರಾಜಕಾರಣಿಯ ಕುಟಿಲೋಪಾಯಗಳು ಒಂದೆಡೆಯಾದರೆ ಅರಣ್ಯ ಇಲಾಖೆಯ ನೊಗ ಹೊತ್ತು, ಕಾಡಿನ ಭೂಮಿ, ಕಾಡಮರಗಿಡ, ಪಶುಪಕ್ಷಿಗಳ ಹಿತಕಾಯಲು ಸದಾ ಉತ್ಸುಕನಾಗಿರುವ ವನಪಾಲಕನ ಸಾಹಸ ಈ ಕತೆಯ ಹೆಚ್ಚುಗಾರಿಕೆ. ಮತ್ತಷ್ಟೂ ನಿಗೂಢವಾಗುವ ಕಾಡು, ಕಾಡಿನ ರಾತ್ರಿಗಳು, ದೈವದ ನರ್ತನ, ಚಂಡೆಮದ್ದಳೆಯ ಸದ್ದು, ಕತ್ತಲೆ ಸೀಳುವ ದೀವಟಿಗೆಗಳ ಬೆಳಕು ಇವೆಲ್ಲ ಎಲ್ಲರನ್ನೂ ಆವರಿಸಿಕೊಳ್ಳುವ ಪರಿ ಮಾತ್ರ ಅದ್ವಿತೀಯ..

ಚಿತ್ರಕತೆಯಲ್ಲಿ ಬರುವಂತೆ, ಕಾಡೇ ಸರ್ವಸ್ವವೆಂದುಕೊಂಡು, ಸೊಪ್ಪು, ಸದೆ, ಬಿದಿರು ಬುಟ್ಟಿಯೆಂದು, ತಮ್ಮಜೀವನೋಪಾಯ ಅರಸುವವರಿಗೆ, ಅರಣ್ಯ ಇಲಾಖೆಯವರ ಕಾರ್ಯ ಚಟುವಟಿಕೆಗಳು, ಕಾನೂನು, ರೀತಿ ನಿಯಮಗಳು ಕಬ್ಬಿಣದ ಕಡಲೆಯಾಗಿರಲಿಕ್ಕೂ ಸಾಕು. ಅದು ಕಾಡಕುಡಿಗಳ ಹಕ್ಕೆಂದು ಸುಮ್ಮನಾಗಿ ದೈವದಂತೆ ಯೋಚಿಸಲೇಬೇಕಾದ ಅನಿವಾರ್ಯತೆ ಅರಣ್ಯ ಸಿಬ್ಬಂದಿಗೆ ಬಂದೊದಗುತ್ತದೆ.. ಅದು ಅಲ್ಲಿನವರ ಬದುಕಿನ ಪ್ರಶ್ನೆ. ಇದು ಕಾಂತಾರದ ವನಪಾಲಕನಿಗೆ ತೀವ್ರವಾಗಿ ಕಾಡಿತ್ತು ಕೂಡ. ಈ ವಿಚಾರವಾಗಿ ಉಭಯ ಸಂಕಟದಲ್ಲಿದ್ದ ವನಪಾಲಕ ಕಾಂತಾರದ ಮಂದಿಗೆಲ್ಲ ವಿಲನ್ಂತೆ ಕಂಡಿದ್ದು ಅಚ್ಚರಿಯೇನಲ್ಲ…. ಅಂತೆಯೇ ಬಹಳವೇ ಮುತುವರ್ಜಿಯಿಂದ ಕಾಡುಳಿಸುವ ಯತ್ನದಲ್ಲಿರುವವರ ನಡೆ ಅಲ್ಲಿನ ಮೂಲನಿವಾಸಿಗಳಿಗೆ ಸಹ್ಯವಾಗುವುದಿಲ್ಲ. ತಮ್ಮನ್ನು ಇಲಾಖೆಯವರು ಒಕ್ಕಲೆಬ್ಬಿಸುತ್ತಾರೆಂದು ತಿಳಿದು ತಮ್ಮ ಸಾತ್ವಿಕ ಸಿಟ್ಟನ್ನು ಹೊರಹಾಕುತ್ತಾರೆ.. ಇಲಾಖೆಯವರು ಅವರ ಪರಮ ಶತ್ರುಗಳೆಂದು ಭಾವಿಸುತ್ತಾರೆ. ಅರಣ್ಯ ಸಿಬ್ಬಂದಿಗಳ ಕೆಲಸವನ್ನು ವಿಫಲಗೊಳಿಸುವಲ್ಲಿ ತಮ್ಮ ಅಸ್ತಿತ್ವ ಅಡಗಿದೆ ಎಂದು ಬಲವಾಗಿ ನಂಬಿದವರು ಅವರು.. ಆದರೆ ತಮಗೆ ಮಾರಕವಾದುದು ಇಲಾಖೆಯಲ್ಲ ಆ, ಕಾಂತಾರ ಪರಿಸರದಲ್ಲಿನ ಕಪಟ ರಾಜಕಾರಣಿಯಂತಹವರೆಂದು ಅವರಿಗೆ ತಿಳಿವುದು ಸ್ವಲ್ಪ ತಡವಾಗಿಯೇ. ಅರಣ್ಯ ಭೂಮಿಯ ಒತ್ತುವರಿ ತೆರವುಗೊಳಿಸುವ ಕೆಲಸ ಇಲಾಖೆಯವರ ವಿದ್ವಂಸಕ ನಡೆಯೆನ್ನಿಸಿದರೂ ಕಾಡುವಾಸಿಗಳಿಗೆ ಅದರ ಸಕಾರಾತ್ಮಕ ಪರಿಣಾಮ ಮನದಟ್ಟು ಮಾಡಲು ಹಲವಾರು ಘಟನಾವಳಿಗಳು ಘಟಿಸುತ್ತವೆ… ವನಪಾಲಕ ತದನಂತರದಲ್ಲಿ ಅಲ್ಲಿನ ಕಾಡನಿವಾಸಿಗಳ ರಕ್ಷಕನಾಗಬೇಕಾಗಿ ಬಂದುದು ಅಲ್ಲಿನ ಸಾಂದರ್ಭಿಕ ವೈರುಧ್ಯ. ಆದರೂ ಅದೇ ಸತ್ಯ. ಒಳ್ಳೆಯ ಕಾಲ ಮಾತ್ರ ಅಂತಹ ಸುಸಂದರ್ಭವನ್ನು ಒದಗಿಸಿಕೊಡುವುದು.

ತನ್ನ ಪೂರ್ವಜರು ಎಂದೋ ಬಿಟ್ಟುಕೊಟ್ಟ ಭೂಮಿಯನ್ನು ಕಬಳಿಸಲು ಹೊಂಚುವ ರಾಜಕಾರಣಿ ಕುತಂತ್ರದಿಂದ ತನ್ನ ದಾಳ ಉರುಳಿಸುತ್ತಾನೆ. ಇತ್ತ ಅರಣ್ಯ ಇಲಾಖೆಯವರೊಂದಿಗೆಯೇ ಇರುತ್ತ ಅತ್ತ ಹಾಡಿಯ ಬಡಪಾಯಿಗಳನ್ನು ಪುಸಲಾಯಿಸಿ ತನ್ನ ಬೇಳೆ ಬೇಯಿಸಿಕೊಳ್ಳುವ ಇವನ ಹುನ್ನಾರಕ್ಕೆ ದೈವನರ್ತಕ ಗುರವನ ಬಲಿಯಾಗುತ್ತದೆ. ನರ್ತಕನ ಸಾವಾದರೂ ದೈವದ ಸಾವಾಗುವುದಿಲ್ಲ. ಸದಾ ಕಥಾನಾಯಕನ ಕನಸೊಳಗೆ ಬಂದು ಆರ್ಭಟಿಸಿ ಬೆಚ್ಚಿ ಬೀಳಿಸುವ ದೈವ ಅಂದು ಅವನೆದುರು ಗೋಳಾಡುವ ದೃಷ್ಯ ದೈವನರ್ತಕನ ಸಾವಿನ ಸಂಕೇತವಾಗುತ್ತದೆ. ಕಥಾನಾಯಕ ತನ್ನ ಹುಂಬತನದಿಂದ ಇಲಾಖೆಗೆ ಕಂಟಕನಾಗಿ, ಭಂದನಕ್ಕೊಳಗಾಗಿ ಜೈಲು ಸೇರಿದವನು ವಾಪಸು ಬರುವ ಹೊತ್ತಿಗೆ ಆ ಗ್ರಾಮದ ಚಿತ್ರಣವೇ ಬದಲಾಗಿ ಅಲ್ಲಿ ರಣರಂಗದ ಕಾವೇರಿರುತ್ತದೆ. ತನ್ನ ತಮ್ಮನ ಸಾವಿನ ಪ್ರತಿಕಾರದಲ್ಲಿ ಬೇಯುವ ಕಥಾನಾಯಕ, ರಾಜಕಾರಣಿಯ ಮಾತಿನ ಮೋಡಿಗೆ ಮರುಳಾದನಾದರೂ, ಆ ಕೊಲೆಗಾರನ ಅಟ್ಟಹಾಸದ ನಗೆ ನಿಜಕ್ಕೂ ಅವನನ್ನು ಕೆರಳಿಸುತ್ತದೆ., ಬೆಂಕಿಕೆಂಡಗಳ ತಿದಿಯೊತ್ತುವನೊಬ್ಬ ಅವನ ತಮ್ಮನ ಸಾವಿನ ಕಠೋರ ಸತ್ಯವನ್ನು ಸಕಾಲಕ್ಕೆ ಕಥಾನಾಯಕನಿಗೆ ಅರಹುತ್ತಾನೆ. ಇದನ್ನು ಕೇಳಿದವನೆದೆಯೊಳಗೆ ಚಟಪಟನೇ ಹಾರುವ ಬೆಂಕಿಯ ಜ್ವಾಲೆ ಮತ್ತಷ್ಟೂ ಕೆಂಡಗಳನ್ನು ಹೊತ್ತಿಸುತ್ತದೆ. ಅವನ ಹೃದಯ ಕಾದ ಕಬ್ಬಿಣದ ಕುಲುಮೆಯಾಗುತ್ತದೆ. ಕೊನೆಗೆ ತಾನೇ ದೈವವಾಗಿ, ದೈವವೇ ತಾನಾಗಿ ರಾಜಕಾರಣಿಯ ಶಿರಚ್ಛೇದನ ಮಾಡಿ ಅಕ್ಷರಶಃ ರುದ್ರತಾಂಡವವಾಡುತ್ತಾನೆ.
ದೈವ ಆವಾಹಿಸಿಕೊಂಡವನು ಕಾಡ ಗಿಡಮರಗಳನ್ನು, ಸುತ್ತಲ ಪರಿಸರವನ್ನು ಹಸನ್ಮುಖಿಯಾಗಿ ದಿಟ್ಟಿಸುತ್ತ, ವನಪಾಲಕ, ಹಾಡಿಯ ಜನ, ಹೀಗೆ ತನ್ನ ಕೈಗಳನ್ನು ಕೂಡಿಸಿ,,.. ಅಭಯ ನೀಡುತ್ತ ಇಲ್ಲಿ ಕಾಡು, ನಾಡು, ದೈವ, ಎಲ್ಲ ಒಂದು., ಎಲ್ಲರೂ ಉಳಿಯಬೇಕೆನ್ನುವ ಮಹತ್ವಾಕಾಂಕ್ಷೆ, ಹಿರಿಯ ಜವಾಬ್ದಾರಿಯನ್ನು ಎಲ್ಲರ ಹೆಗಲಿಗೂ ಹೊರೆಸುತ್ತಾನೆ. ದೈವವೇ ತಾನಾಗಿ ಎಲ್ಲರೂ ಎಲ್ಲರನ್ನೂ ಕಾಪಿಡಬೇಕೆಂದು ಭಿನ್ನವಿಸಿಕೊಳ್ಳುವ ಪರಿಯಂತೂ ಅನನ್ಯ. ಈ ಸತ್ಯ ಸಾರಲು ಸ್ವತಃ ದೈವವೇ ಹೀಗೆ ಮೈದಾಳಿ ಬರಬೇಕಾಯಿತು. ವಾಸ್ತವದಲ್ಲೂ ಕಾಡು ರಕ್ಷಣೆಗೆಂದು ಹೀಗೆ ದೈವಗಳು ಜೊತೆಗೂಡಿದರೆ ನಿಜಕ್ಕೂ ಉಳಿಯುತ್ತದೆ. ಅದರೊಂದಿಗೆ ನಾಡಿನ ಉಸಿರು ಬೆಚ್ಚಗಿರುವುದು. ಆಗ ದೈವದ್ಹೆಸರಲ್ಲಿ ಉದ್ಘೋಷ ಕೂಗುತ್ತ ದೈವತ್ವವನ್ನು ಮತ್ತಷ್ಟೂ ಮೇಲಕ್ಕೇರಿಸಿ ಭಯಭಕ್ತಿಯಿಂದ ತಲೆಬಾಗಿ ಆ ಶಕ್ತಿಗೆ ಎಲ್ಲರೂ ಶರಣೆನ್ನಲೇಬೇಕು.

ಈ ಮೂಲಕ ಸರ್ವರ ಹಿತಬಯಸುವ ದೈವದ ಕರುಣಾಭಾವ ವರ್ಣೀಸಲಸದಳ. ಈ ಎಲ್ಲ ಬೆಳವಣಿಗೆಯಿಂದ ಸಂತುಷ್ಟಗೊಂಡಂತೆ ದೈವ ಮತ್ತೇ ಕುಣಿಯುತ್ತದೆ. ಒಂದು ಕಾಲದಲ್ಲಿ ಕಾಡಿಗೆ ಮೃತ್ಯುಪ್ರಾಯದಂತೆ ಭಾಸವಾದ ಕಥಾನಾಯಕ ಅಲ್ಲಿನ, ಅರಣ್ಯವನ್ನು, ಅಲ್ಲಿನ ಜನರನ್ನು, ರಕ್ಷಿಸುವ ಕರಣಿಕನಾಗುತ್ತಾನೆ. ದೈವವಾಗುತ್ತಾನೆ. ನರ್ತಿಸುತ್ತಲೇ ಏನೋ ಮರೆತುಬಂದವರಂತೆ ಅರಣ್ಯದೊಳಗೆ ಓಡಿಹೋಗುತ್ತಾನೆ. ಅಲ್ಲಿ ಬೆಂಕಿಯ ವರ್ತುಲದಲ್ಲಿ ಇನ್ನೊಂದು ದೈವದ ಜೊತೆಗೂಡುತ್ತಾನೆ. ಹೊತ್ತುರಿವ ದೀವಟಿಗೆಯ ಬೆಳಕಲ್ಲಿ ದೈವಗಳೆರಡು ಕೈಜೋಡಿಸಿ ಕುಣಿಯುತ್ತಾರೆ. ಕಾಡಂಗಳದ ನೀರವ ರಾತ್ರಿಯಲ್ಲಿ ಈರ್ವರ ಸಮಾಗಮ ಕಂಡು ಕಾಡದೇವಿಯೂ ಮೈದುಂಬಿಕೊಂಡಳೇನೋ…?. ಆಗ ನೋಡುಗರೆಲ್ಲರ ಕೈಗಳು ತಾನೇತಾನಾಗಿ ಒಂದುಗೂಡಿ ಹಣೆಯನ್ನು ಸ್ಪರ್ಷಿಸುತ್ತವೆ.

ಶ್ರೀಧರ ಪತ್ತಾರ, ವಿಜಯಪುರ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x