ಕಲ್ಲು ದೇವರು ದೇವರಲ್ಲ: ಮನು ಗುರುಸ್ವಾಮಿ

ವಿಗ್ರಹಾರಾಧನೆ ಎಂಬುದು ಬಹುತೇಕ ಮೂರ್ತಿ ಪೂಜೆ ಎಂಬ ಅರ್ಥವನ್ನೇ ನೀಡುವಂತದ್ದು. ಜನಪದರಿಂದ ಹಿಡಿದು ಶಿಷ್ಟಪದದವರೆಗೂ ಮೂರ್ತಿ ಪೂಜೆ ಅಸ್ತಿತ್ವದಲ್ಲಿರುವುದನ್ನು ನಾವು ಗಮನಿಸಬಹುದು. ಕೆಲವರು ಕಲ್ಲು, ಮಣ್ಣು, ಮರ, ಲೋಹ ಇತ್ಯಾದಿಗಳನ್ನು ಬಳಸಿ ನಿರ್ಮಿಸಲ್ಪಟ್ಟ ಒಂದು ಆಕೃತಿಗೆ ದೇವರೆಂಬ ಸ್ಥಾನಕೊಟ್ಟು ಆರಾಧಿಸುತ್ತಾ ಬಂದಿದ್ದಾರೆ. ಇನ್ನೂ ಕೆಲವರು ಕಲ್ಲು, ಮಣ್ಣು, ಮರ ಮೊದಲಾದ ಭೌತಿಕ ವಸ್ತುಗಳನ್ನು ದೇವರೆಂದು ಪೂಜಿಸಿತ್ತಾ ಬಂದಿದ್ದಾರೆ. ಭೌತಿಕ ವಸ್ತುಗಳು ಮಾನವನ ನಿತ್ಯ ಜೀವನದಲ್ಲಿ ಅವಶ್ಯಕವಾಗಿರುವುದರಿಂದ ಜನಪದರು ಅದನ್ನೇ ದೇವರೆಂದು ನಂಬಿ ಪೂಜಿಸುತ್ತಾ ಬಂದಿದ್ದಾರೆ ಎಂಬ ಮಾತು ಅರ್ಥಪೂರ್ಣವಾದರೂ, ಮುಂದೆ ಮಾನವ ನಿರ್ಮಿತ ವಸ್ತುಗಳೇ ದೇವರಾದ ಪರಿ ಹೇಗೆ ? ಎಂಬುದು ಇಲ್ಲಿ ಪ್ರಶ್ನೆಯಾಗಿ ಉಳಿದಿದೆ. ಈ ಹಿನ್ನೆಲೆಯಲ್ಲಿ ವಚನ ಸಾಹಿತ್ಯ ಕಾಲಘಟ್ಟದ ಬಹುತೇಕ ವಚನಕಾರರು ಅನ್ಯದೇವದ ವಿರೋಧಿ ನಿಲುವಿನಲ್ಲಿ ಮೂರ್ತಿ ಪೂಜೆಯ ಖಂಡನೆಯನ್ನು ಒಂದು ಮಾಡಿಕೊಂಡು ಇಷ್ಟದೈವ ಇಲ್ಲವೇ ಏಕದೇವತಾರಾಧನೆಯ ನಿಲುವನ್ನು ಪ್ರತಿಪಾದಿಸುತ್ತಾ ಬಂದರು. ಈ ನಿಟ್ಟಿನಲ್ಲಿ ಅವರು ವಿಗ್ರಹಾರಾಧನೆಯ ಬಗ್ಗೆ ತಳೆದ ನಿಲುವುಗಳೇನು? ಜನರಿಗೆ ಅದನ್ನು ಅರ್ಥಮಾಡಿಸಲು ಕೈಗೊಂಡ ಕ್ರಮಗಳೇನು ಇತ್ಯಾದಿ ಅಂಶಗಳನ್ನು ಪ್ರಸ್ತುತ ಲೇಖನದಲ್ಲಿ ಅರಿಯಬಹುದಾಗಿದೆ.

ಕಲ್ಲು ದೇವರು : ಆರಾಧನೆ, ವಿಡಂಬನೆ :-

ವಚನ ಸಾಹಿತ್ಯದಲ್ಲಿ ವಿಗ್ರಹಾರಾಧನೆಯ ಖಂಡನೆಯು ವಚನಕಾರರು ತಳೆದ ಪ್ರಮುಖ ನಿಲುವುಗಳಲ್ಲಿ ಒಂದು. ಅದರಲ್ಲೂ ‘ಕಲ್ಲು ದೇವರು’ ಎಂಬ ಪರಿಕಲ್ಪನೆಯ ಬಗ್ಗೆ ವಚನಕಾರರಿಗಿದ್ದ ಆಕ್ರೋಶ ಹೇಳತೀರದು. ಜನರಲ್ಲಿದ್ದ ಮೂಢನಂಬಿಕೆ, ಮೌಢ್ಯಾಚರಣೆ ಇವೆಲ್ಲದಕ್ಕೂ ಆ ಕ್ಷಣ ವಚನಕಾರರ ವಚನಗಳು ರಾಮಬಾಣವಾಗಿದ್ದವು. ಈ ನಿಟ್ಟಿನಲ್ಲಿ ಕಲ್ಲುದೇವರನ್ನು ಒಳಗೊಂಡಂತೆ ಮೂರ್ತಿ ಪೂಜೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ವಚನ ರಚಿಸಿದ ಪ್ರಮುಖ ವಚನಕಾರರಲ್ಲಿ ಬಸವಣ್ಣ, ಅಲ್ಲಮಪ್ರಭು, ಚೆನ್ನಬಸವಣ್ಣ, ಅಂಬಿಗರ ಚೌಡಯ್ಯ, ಸಿದ್ದರಾಮೇಶ್ವರ, ಮಡಿವಾಳ ಮಾಚಿದೇವ, ಕಾಡಸಿದ್ದೇಶ್ವರ ಮೊದಲಾದ ವಚನಕಾರರನ್ನು ಹೆಸರಿಸಬಹುದು.
ಮೇಲಿನ ಈ ಎಲ್ಲ ಅಂಶಗಳನ್ನು ಗಮನಿಸಿದಾಗ ಬಸವಣ್ಣನವರ ಜನಪ್ರಿಯ ವಚನವೊಂದು ಇಲ್ಲಿ ಹೆಚ್ಚು ಪ್ರಸ್ತುತ ಎನಿಸುತ್ತದೆ.

“ಕಲ್ಲು ನಾಗರ ಕಂಡಡೆ ಹಾಲನೆರೆಯೆಂಬರು
ದಿಟ್ಟದ ನಾಗರ ಕಂಡಡೆ ಕೊಲ್ಲೆಂಬರಯ್ಯ
ಉಂಬ ಜಂಗಮ ಬಂದಡೆ ನಡೆಯೆಂಬರು
ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯ
ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದಡೆ
ಕಲ್ಲು ತಾಗಿದ ಮಿಟ್ಟೆಯಂತಪ್ಪರಯ್ಯ”

ಬಸವಣ್ಣನವರ ಈ ವಚನ ಇಂದಿಗೂ ಪ್ರಸ್ತುತವಾಗಿರುವ ವಾಸ್ತವಿಕ ಸತ್ಯವೊಂದನ್ನು ತೆರೆದಿಡುತ್ತಿದೆ. ಕಣ್ಣಿಗೆ ಕಾಣುವುದನ್ನು ಸುಳ್ಳೆಂದು, ಕಾಣದನ್ನು ಸತ್ಯವೆಂದು ನಂಬುವ ಜನರ ಮೂರ್ಖತನದ ಪರಮಾವಧಿಗೆ ಈ ವಚನ ಕೈಗನ್ನಡಿಯಂತಿದೆ. ಇಲ್ಲಿ ಅಣ್ಣ ಹೇಳಲೋರಟಿರುವ ಸತ್ಯವಿಷ್ಟೇ “ಹಸಿವೆಂದು ಮನೆ ಬಾಗಿಲಿಗೆ ಬಂದ ನಿರ್ಗತಿಕರಿಗೆ ಒಂದು ತುತ್ತು ಅನ್ನವನ್ನು ನೀಡಲು ಹಿಂಜರಿಯುವ ಜನ, ಕಲ್ಲು ದೈವಕ್ಕೆ ನೈವೇದ್ಯ ನೀಡುವ ಪರಿ ಹಾಸ್ಯಸ್ಪದ. ಕಲ್ಲು ನಾಗರಕ್ಕೆ ಹಾಲನೆರೆದು ಅಭಿಷೇಕ ಮಾಡುವ ಇವರು ನಿಜ ನಾಗರ ಕಣ್ಣೆದುರು ಬಂದರೆ ಅದನ್ನು ಕೊಂದು ರಕ್ತಾಭಿಷೇಕ ಮಾಡುತ್ತಾರೆ. ಹಸಿದ ಜಂಗಮನೊಬ್ಬ ತನ್ನ ಮನೆ ಬಾಗಿಲಿಗೆ ಬಂದರೆ ಮುಂದಕ್ಕೆ ನಡೆಯೆಂದು ಹೇಳಿ, ಲಿಂಗದ ಮುಂದೆ ನೈವೇದ್ಯ ಇಡುತ್ತಾರೆ. ಇದು ಇವರ ಮೂರ್ಖತನದ ಪರಮಾವಧಿಯಲ್ಲದೆ ಇನ್ನೇನು ?” ಎಂಬುದಾಗಿ ಬಸವಣ್ಣನವರು ಅಭಿಪ್ರಾಯಪಟ್ಟಿರುವಂತೆ ವಚನ ಕಾಣಸಿಗುತ್ತದೆ.

ಬಸವಣ್ಣನವರ ಈ ನೆಲೆಯಲ್ಲಿಯೇ ಚಿಂತಿಸಿರುವಂತೆ ಕಾಣಸಿಗುವ ಮತ್ತೊಬ್ಬ ವಚನಕಾರ ಅಂಬಿಗರ ಚೌಡಯ್ಯ. ಆದರೆ ಈತನ ವಿಚಾರಧಾರೆ, ಬಸವಣ್ಣನವರ ವಿಚಾರಧಾರಿಗಿಂತ ಸ್ವಲ್ಪ ಭಿನ್ನವಾಗಿದೆ.

ಸ್ವಲ್ಪ ಅಮೃತಾನ್ನವನೊಯ್ದು ಹುತ್ತವೆಂದು
ಬಿಲದ್ವಾರದಲ್ಲಿ ಹೊಯ್ವ ತೊತ್ತಿಂಗೆಲ್ಲಿಯದೊ ಶಿವಾಚಾರ !
ಅದೆಂತೆಂದಡೆ –
ಕಲ್ಲು ನಾಗರ ಕಂಡಡೆ ಹಾಲು ಹೊಯ್ಯೆಂಬಳು
ಬದುಕಿನ ನಾಗರ ಕಂಡಡೆ ಕೊಲ್ಲು ಕೊಲ್ಲೆಂಬುಳು
ಉಂಬ ದೇವರು ಬಂದಡೆ ಇಲ್ಲವೆಂದಟ್ಟುವಳು,
ಉಣ್ಣದ ಕಲ್ಲು ಪ್ರತಿಮೆಯ ಮುಂದಿಟ್ಟು ಉಣ್ಣೆಂಬಳು
ಇಂತಹ ವೇಷದಂ(ಡ)ಬ ತೊತ್ತಿಂಗೆ
ವಿಚಾರಿಸದೆ ಲಿಂಗವ ಕೊಡಲಾಗದೆಂತನಂಬಿಗರ ಚೌಡಯ್ಯ

ಪ್ರಸ್ತುತ ವಚನದಲ್ಲಿ ಅಂಬಿಗರ ಚೌಡಯ್ಯನ ನಿಲುವು, ಈ ಹಿಂದೆ ಉಲ್ಲೇಖಿಸಲಾದ ಬಸವಣ್ಣನವರ ವಚನದ ನಿಲುವನ್ನೇ ಪ್ರತಿಪಾದಿಸುವಂತಿದ್ದರೂ ಇಲ್ಲಿ ಕಾಣಸಿಗುವ ವ್ಯತ್ಯಾಸವಿಷ್ಟೇ. “ಹುತ್ತಕ್ಕೆ ಹಾಲನೆರೆಯುತ್ತಿರುವ ಒಬ್ಬ ಹೆಂಗಸನ್ನು ಕುರಿತು ಅಂಬಿಗರ ಚೌಡಯ್ಯ ಇಲ್ಲಿ ಮಾತನಾಡುತ್ತಿದ್ದಾನೆ. ಆಕೆಯು ಬರೀ ಹೆಂಗಸಲ್ಲ, ಡಾಂಭಿಕ ಭಕ್ತಿಯುಳ್ಳ ತೊತ್ತು ಎಂಬುದು ವಚನಕಾರರ ಅಭಿಪ್ರಾಯ. ಅಂತೆಯೇ ಆತ ಮುಂದುವರಿದು ಕಲ್ಲು ನಾಗರಕ್ಕೆ ಹಾಲನೆರೆದು ನಿಜ ನಾಗರ ಕಂಡರೆ ಕೊಲ್ಲೆಂದು ಹೇಳುವ, ಉಣ್ಣುವ ದೇವರು ಬಂದರೆ ಇಲ್ಲವೆಂದು ಹೇಳಿ, ಉಣ್ಣದ ಕಲ್ಲು ಪ್ರತಿಮೆಯ ಮುಂದೆ ನೈವೇದ್ಯವಿಟ್ಟು ಉಣ್ಣೆಂಬುವ ಡಾಂಭಿಕ ವೇಷದ ಹೆಂಗಸಿಗೆ, ಬುದ್ಧಿ ಕಲಿಸದೇ ಲಿಂಗವನ್ನು ಕಟ್ಟಲಾಗದು” ಎಂಬುದಾಗಿ ಮಾತನಾಡಿದ್ದಾನೆ. ಅಲ್ಲಿ ಬಸವಣ್ಣನವರು ಇಡೀ ಡಾಂಭಿಕ ಭಕ್ತರನ್ನು ಕಂಡು ತಮ್ಮ ವಚನಕ್ಕೆ ವಸ್ತುವಾಗಿಸಿಕೊಂಡರೆ, ಇಲ್ಲಿ ಅಂಬಿಗರ ಚೌಡಯ್ಯ ಒಬ್ಬ ಡಾಂಭಿಕ ಭಕ್ತಿಯುಳ್ಳ ಮಹಿಳೆಯನ್ನು ಕುರಿತು ತನ್ನ ವಚನವನ್ನು ಪ್ರಸ್ತುತಪಡಿಸಿದ್ದಾನೆ.

ಈ ವಸ್ತು ವಿಷಯವನ್ನೂ ಮೀರಿ, ಇನ್ನೂ ಭಿನ್ನವಾಗಿ ಮಾತನಾಡುವ ಮತ್ತೊಬ್ಬ ವಚನಕಾರ ಅಲ್ಲಮಪ್ರಭು. ಈತನ ಆಲೋಚನೆ ಕ್ರಮವೇ ವಿಭಿನ್ನವಾಗಿದೆ.

” ಕಲ್ಲು ಮನೆಯ ಮಾಡಿ ಕಲ್ಲು ದೇವರ ಮಾಡಿ
ಆ ಕಲ್ಲು ಕಲ್ಲ ಮೇಲೆ ಕೆಡೆದದೆ
ದೇವರೆತ್ತ ಹೋದರೊ ? ಲಿಂಗ ಪ್ರತಿಷ್ಠೆಯ ಮಾಡಿದವಂಗೆ,
ನಾಯಕ ನರಕ – ಗುಹೇಶ್ವರಾ

ಇಲ್ಲಿ ಅಲ್ಲಮಪ್ರಭು ಕೇಳಿರುವ ಪ್ರಶ್ನೆಗೆ ಉತ್ತರಿಸುವುದು ಕಷ್ಟವೇ ಸರಿ. ಕಲ್ಲು ದೇಗುಲದಲ್ಲಿನ ಕಲ್ಲೊಂದು ಕಳಚಿ, ಕಲ್ಲು ವಿಗ್ರಹ(ದೇವರ)ದ ಮೇಲೆ ಬೀಳುವ ಸಂದರ್ಭದಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳಲಾಗದ ದೇವರು ಅದೆತ್ತ ಹೋದರೊ ? ಎಂಬುದು ಇಲ್ಲಿನ ಪ್ರಶ್ನೆ. ಕೇವಲ ಬೂಟಾಟಿಕೆಗೋಸ್ಕರ ಲಿಂಗ ಪೂಜೆಯನ್ನು ಮಾಡಿ, ಲಿಂಗ ಪ್ರತಿಷ್ಠೆಯನ್ನು ಮೆರೆದವರಿಗೆ ಇದರಿಂದ ನಾಯಕನರಕ ಎಂಬುದು ಅಲ್ಲಮಪ್ರಭುವಿನ ಮಾತು. ಆದರೆ ಇದು ಇಲ್ಲಿಗೆ ಕೊನೆಯಾಗಿಲ್ಲ, ಈತ ಮತ್ತೊಂದು ವಚನದಲ್ಲಿ “ಇಟ್ಟ ಕಲ್ಲು ಮೆಳೆಯ ಮೇಲೆ ಸಿಕ್ಕಿದಡೆ ಆ ಕಲ್ಲು ಲಿಂಗವೆ ? ಆ ಮೆಳೆ ಭಕ್ತನೆ ? ಇಟ್ಟಾತ ಗುರುವೆ ?’ ಎಂಬುದಾಗಿ ತೋರಿಕೆ ಲಿಂಗಪೂಜೆಯನ್ನು ಮಾಡುವ ಡಾಂಭಿಕ ಭಕ್ತರನ್ನು ಕುರಿತು ಮಾತನಾಡಿದ್ದಾನೆ. ಅಲ್ಲದೆ –

ಮೃತ್ಯು ಲೋಕದ ಮಾನವರು
ದೇಗುಲದೊಳಗೊಂದು ದೇವರ ಮಾಡಿದಡೆ
ಆನು ಬೆರಗಾದೆನು
ನಿಚ್ಚಕ್ಕೆ ನಿಚ್ಚ ಅರ್ಚನೆ ಪೂಜನೆಯ ಮಾಡಿಸಿ
ಭೋಗವ ಮಾಡುವವರ ಕಂಡು ನಾನು ಬೆರಗಾದೆನು ಗುಹೇಶ್ವರ
ನಿಮ್ಮ ಶರಣರು ಹಿಂದೆ ಲಿಂಗವನಿರಿಸಿ ಹೋದರು

ಪ್ರಸ್ತುತ ವಚನದಲ್ಲೂ ಈತ “ಅಂಗದ ಮೇಲಿರುವ ಲಿಂಗವನ್ನು ಹಿಂದಿರಿಸಿ, ದೇವಾಲಯ ಒಂದನ್ನು ಕಟ್ಟಿ ದೇಗುಲದೊಳಗೊಂದು ದೇವರ ಇರಿಸಿ, ಅದಕ್ಕೆ ಪೂಜೆ ಮಾಡಿ, ಭೋಗ ಜೀವನವ ನಡೆಸುವವರ ಕಂಡು” ಇಲ್ಲಿ ಬೇಸರವನ್ನು ವ್ಯಕ್ತಪಡಿಸಿದ್ದಾನೆ.

ಆಗೇ ಈ ವಿಷಯವಾಗಿ ಮಾತನಾಡುವ ಮತ್ತೊಬ್ಬ ವಚನಕಾರ ಸಿದ್ದರಾಮೇಶ್ವರ. ಕಲ್ಲು ದೇವರಲ್ಲಿ ವಲ್ಲಭನಿದ್ದಾನೆಂಬ ಮಾತನ್ನೇ ಎತ್ತಿಕೊಂಡಿರುವ ವಚನಕಾರ ಪರೋಕ್ಷವಾಗಿ ಕಲ್ಲಿನಲ್ಲಿ ವಲ್ಲಭನಿಲ್ಲ ಎಂಬ ಸತ್ಯದೊಡನೆ, ಜನರ ಕಣ್ತೇರೆಸಲು ಪ್ರಯತ್ನಿಸಿದ್ದಾನೆ.

“ಕಲ್ಲು ದೇವರಲ್ಲಿ ವಲ್ಲಭನಿದ್ದಾನೆಂದು
ಲಲ್ಲೆ ಕರೆಯಬೇಡ, ಖುಲ್ಲತನದಿಂದ
ಒಮ್ಮೆ ಅರಿಯಬಲ್ಲಡೆ ಕಪಿಲಸಿದ್ಧಮಲ್ಲಿಕಾರ್ಜುನನ
ಶರಣರ ಪಾದದಲ್ಲಿ ತಲ್ಲೀಯವಾಗ ಕಲ್ಲಯ್ಯ

ಮೇಲಿನ ವಚನದಲ್ಲೂ ಕಲ್ಲು ದೇವರು ಎಂಬ ಪರಿಕಲ್ಪನೆ ಬಗ್ಗೆ ವಚನಕಾರರಿಗಿರುವ ಭಾವ ಎಂಥದ್ದು ಎಂಬುದು ಅರಿವಾಗುತ್ತದೆ. ಅದರಲ್ಲೂ ಸಿದ್ದರಾಮೇಶ್ವರರ ನಿಲುವು ಇನ್ನೂ ವಿಶೇಷ. ಈ ನಿಟ್ಟಿನಲ್ಲಿಯೇ “ಕಲ್ಲು ಲಿಂಗವಲ್ಲ.. ಲಿಂಗ ಕಲ್ಲಲ್ಲ” ಎಂಬ ಸಿದ್ದರಾಮೇಶ್ವರರ ಮಾತು ಇಲ್ಲಿ ಉಲ್ಲೇಖಾರ್ಹ.

ಇನ್ನೂ ಮಡಿವಾಳ ಮಾಚಯ್ಯ “ಪೃಥ್ವಿಯ ಮೇಲಣ ಶಿಲೆಯ ತಂದು, ಪ್ರತಿಮೆಗಳ ಮಾಡೆ, ಕಲ್ಲು ಕುಟಿಕನಲ್ಲಿಯೆ ಗುರುವಾದ, ಕಲ್ಲು ಶಿಷ್ಯನಾದ” ಎಂದಿರುವ ಮಾತಿನಲ್ಲಿ ಕಲ್ಲು ದೇವರು ಕೇವಲ ಮಾನವ ನಿರ್ಮಿತ. ಆ ಕಲ್ಲುದೇವರಿಗೆ ಗುರು ಅದನ್ನು ನಿರ್ಮಿಸಿದಾತ. ಹಿಂದಣಾದಿಯನರಿಯಜ ಗುರು, ಉಪದೇಶವನ್ನು ಅರಿಯದ ಶಿಷ್ಯ ಈ ಇಬ್ಬರೂ ಕಲ್ಲನ್ನು ಕೆತ್ತಿ ಪ್ರತಿಮೆ ಮಾಡುವ ಕಲ್ಲುಕುಟಿಗನ ಕಲ್ಲನಂತೆ ಎಂಬುದಾಗಿ ಮಾಚಯ್ಯ ಇಲ್ಲಿ ತೌಲನಿಕವಾಗಿ ಅಭಿಪ್ರಾಯಿಸಿದ್ದಾನೆ.

ಒಟ್ಟಾರೆ ೧೨ನೇ ಶತಮಾನದಲ್ಲೇ ಆರಂಭವಾದ ಈ ವೈಚಾರಿಕ ಪ್ರಜ್ಞೆ ವಚನಕಾರಿಂದ ಹೊಸ ರೂಪ ಪಡೆದು ಇಂದಿನ ವಿದ್ವಾಂಸರಿಗೂ, ಅಧ್ಯಯನಶೀಲರಿಗೂ ಮಾರ್ಗದರ್ಶನವಾಗಿದೆ ಎಂದರೆ ಬಹುಶಃ ತಪ್ಪಾಗಲಾರದು.

-ಮನು ಗುರುಸ್ವಾಮಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
1 1 vote
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x