ಬಂಡಾಯ ಕಾವ್ಯ: ಗೋಲ್ಡನ್ ಅಶು, ಜಬೀವುಲ್ಲಾ ಎಂ. ಅಸದ್, ಪ್ರಶಾಂತ್ ಬೆಳತೂರು

ಗಾಂಧಿ ಮತ್ತು ಅವನ ಖಾಯಿಲೆ ಬಿದ್ದ ಸ್ವಾತಂತ್ರ್ಯ

ಭವಿಷ್ಯವಿರದ ಸಾಲಿಯ ಗೋಡೆಗಳು
ಬದುಕು ಕಟ್ಟುವ ಕನಸು ಕಾಣುತ್ತವೆ
ಹೆಗಲಿಗೆ ಐಡಿ ಕಾರ್ಡಿಲ್ಲದ – ಕೆಂಪು ಶಾಲಿನ ಪೋರ
ಶಾಲೆಗೊರಟ ಒಂಟಿ ಸಾಬರ ಮನೆಯ ಹುಡುಗಿಗೆ
ರಾಮ ನಾಮ ಹೇಳುತ್ತಿದ್ದ
ಆ ಗಟ್ಟಿಗಿತ್ತಿಯೂ ಸುಮ್ಮನಿರಲಿಲ್ಲ
ಬೀದಿ ಮಧ್ಯೆಯೇ ಆಜಾನ್ ಕೂಗಿದಳು

ಆಗ –
ಕಪ್ಪು ಕೋಮುವಿನ ಹಲಗೆಯ ಮೇಲೆ
ಕಲಿಸುವವ ಸಂವಿಧಾನದ ಕೊಲೆ
ಮಾಡುತ್ತಿದ್ದ !

ಸತ್ಯಕ್ಕೆ ಗಲ್ಲಾದ ಈ ಹೊತ್ತು
ಹಸಿಮೈಯ್ಯ ಅತ್ಯಾಚಾರಿ ಬಾಲೆಯೊಬ್ಬಳ ಮನೆಯ
ಮುಂದೆ –
ಸ್ವತಂತ್ರ್ಯದ ಸಂಭ್ರಮ ಮನೆ ಮಾಡಿತ್ತು !

ಹೌದು
ನವ ಭಾರತಕ್ಕೆ ಎಪ್ಪತ್ತೈದರ
ಸಂಭ್ರಮ ,

ಅತ್ಯಾಚಾರಿಗೆ – ಲಂಚಬಾಕರಿಗೆ
ಬಣ್ಣ ಬಣ್ಣದ ಶಾಲಿನವರಿಗೆ
ಹಸಿದು ಕುಳಿತ ಟೀವಿಯವರಿಗೆ
ಕೆಂಪು ಕೋರ್ಟಿಗೆ – ಕಪ್ಪು ಕೋರ್ಟಿನ ಲಾಯರಿಗೆ
ಬೂಟುಗಾಲಿನ ಪೋಲಿಸಪ್ಪನಿಗೆ
ಇಂದು ಅಮೃತ ಘಳಿಗೆ !

ಪಂದ್ರಾಗಸ್ಟಿನ ಜಂಡಾ ಮುಗಿಲೆತ್ತರಕ್ಕೆ
ಹಾರುವ ಮೊದಲೇ
ಅವ್ವನ ತಲೆ ಮೇಲೆ – ರಾತ್ರಿಯ ತಂಗಳು ರೊಟ್ಟಿಯ
ಬುತ್ತಿಪಡವಾಗಿ
ಹೊಲದ ದಾರಿ ಹಿಡಿದಿತ್ತು

ಮತ್ತಿಷ್ಟು
ಈ ಜಂತಿ ಮಾಳಿಗೆಯ ಮನೆಯ ಮೇಲೆ
ಒಂಟಿಯಾಗಿ ಘೀಳಿಡುತ್ತಿತ್ತು !

ಕೆಂಪು ಕೋಟೆಯ ನಾಯಕ
ಜಿಟಿ – ಜಿಟಿ ಮಳೆಯ ನಡುವೆ
ಅಚ್ಛೇ ದಿನದ ಕೊಳೆತ ಕನಸುಗಳನ್ನು ಬಿತ್ತುವಾಗ

ಆಸೆ ಬುರುಕ ಜನರ ಕಣ್ಣುಗಳು
ಬೂಂದಿ ಕಾಳಿನ ಮೇಲಿತ್ತು

ನಮ್ಮದು ಮನುಷ್ಯ ಧರ್ಮ
ಆತನದು ಮನು ಧರ್ಮ
ಒಂದು ಜನಿವಾರದ ಸಿದ್ಧಾಂತ
ಒಂದು ಜನಾಂಗ
ಒಬ್ಬ ನಾಯಕ
ಅಷ್ಟಾದರೂ ಆತ ಸರ್ವಾಧಿಕಾರಿಯಲ್ಲ
ಸರ್ವೋತ್ತಮ
ಪರಮಾತ್ಮ

ಇಷ್ಟೆಲ್ಲಾ ಬರೆದ ನಾನು – ಓದುತ್ತಿರುವ ನೀನು
ಇಬ್ಬರೂ ದೇಶದ್ರೋಹಿಗಳು !

ಉಡುಪಿಯ ಓಣಿಯಲ್ಲಿ
ಪ್ರವೀಣ – ಪಾಜೀಲ್ ರು ಬರ್ಬರವಾಗಿ ಭೂಮಿ ಸೇರಿದಾಗ
ಯಾವ ಧರ್ಮವೂ ಸಾಯಲಿಲ್ಲ , ಗೆದ್ದು – ಸೋಲಲಿಲ್ಲ
ಇಬ್ಬರು ಮನುಷ್ಯರಷ್ಟೇ ಸತ್ತರು
ಮತ್ತು ಮನುಷ್ಯತ್ವ !

ದಿನಾ ಧರ್ಮದೆಸರಲಿ ಬೀದಿಗೆರಡು ಹೆಣ ಬೀಳುವಾ ಹೊತ್ತು
ವಿಧಾನ ಸೌಧದ ಗೇಟಿಗೆ ಬೆನ್ನು ತಾಗಿಸಿ
ನ್ಯಾಯಕ್ಕಾಗಿ ರಾಮ – ರಹೀಮರು
ಗಾಂಧಿಯ ಮುಂದೆ ನ್ಯಾಯಕ್ಕಾಗಿ ಕೂಗಾಕುತ್ತಿರುವಾಗ

ಜಗವೇ ಕೋಮುವನ್ನು ಅಪ್ಪಿಕೊಳ್ಳುತ್ತಿರುವ
ಈ ಸಂಜೆ
ದೂರದ ಸಬರಮತಿ ಕೈಬೀಸಿ ಕೆರೆಯುತ್ತಿದ್ದಳು

ಗಾಂಧಿಗೆ ಹೊರಡುವ ಮನಸ್ಸಾಗಲಿಲ್ಲ
ಮೌನವಾದ –
ಮತ್ತೆಂದೂ ಮುಗುಳ್ನಗದಷ್ಟು ಮುಳುಗಿಹೋದ !

ಸ್ವತಂತ್ರ್ಯದ ಭ್ರಮೆಯಲ್ಲಿ ಮುಳುಗಿರುವ ಈ ಕ್ಷಣ
ಯೂನಿವರ್ಶಿಟಿಯ ಆವರಣದಲ್ಲಿ ಮನುಷ್ಯರಾರೂ
ಕಾಣಲಿಲ್ಲ

ಸಂವಿಧಾನಕ್ಕೆ ವಿಷವುಣಿಸಿ
ಮನು ಮತ್ತವನ ಸಂಘಡಿಗರು
ನೇಣಿಗೇರಿದ ಸ್ಥಿತಿಯಲ್ಲಿದ್ದ ತಿರಂಗದ ಕೆಳಗೆ
ಶ್ಲೋಕಗಳನ್ನೋದುತ್ತಿರುವಾಗ

ಗಾಂಧಿಯ ಮುಖದಲ್ಲಿ ನಗುವಿರಲಿಲ್ಲ

ಆಗ
ಗಡಿಪಾರಾದ ಸೇನಾನಿಯಂತೆ
ಉಮ್ಮಳಿಸಿ ಬಂದ ದುಃಖ ನುಂಗಿ
ದೂರದಲ್ಲಿ ನಿಂತಿದ್ದ ಅಂಬೇಡ್ಕರ್ ಎದ್ದು ಹೊರಟು ನಿಂತ !

-ಗೋಲ್ಡನ್ ಅಶು

ಸಂಭ್ರಮಿಸುವುದಾದರೂ ಹೇಗೆ ಸ್ವಾಮಿ?

ನಮಗಿಲ್ಲಿ….
ಆಚರಣೆಗೆ ಕಾರಣಗಳು ಬೇಕು
ಖುಷಿ ಪಡಲು ನೆಪಗಳು ಸಾಕು
ಭಾರತೀಯರಿಗೆ ಸಿಕ್ಕ ಸ್ವಾತಂತ್ರ್ಯ
ಸಿಕ್ಕದ್ದಲ್ಲವದು
ಸುದೀರ್ಘ ಹೋರಾಟದಿಂದ
ದಕ್ಕಿಸಿಕೊಂಡ ಪ್ರಜಾಪ್ರಭುತ್ವ ಭಾರತವಿದು
ದೇಶಪ್ರೇಮಿಗಳ ಸ್ವಾಭಿಮಾನದ ಫಲ
ಚಳವಳಿ, ತ್ಯಾಗ, ಬಲಿದಾನಗಳ
ಪರಿಶ್ರಮದ ದ್ಯೋತ್ತಕ

ನೆನಪಿರಲಿ
ನಾವಿಂದು ಸ್ವತಂತ್ರರಾಗಿದ್ದೇವೆ
ನಿಜ, ಆದರೆ ಅದು…
ಆಂಗ್ಲರ ಹಿಡಿತದಿಂದ ಮಾತ್ರ
ನಾವಿನ್ನೂ ಬಂಧನದಲ್ಲಿಯೇ ಉಳಿದಿದ್ದೇವೆ
ನಿಮಗೆ ತಿಳಿಯುತ್ತಿದೆಯೇ?
ನಾವಿನ್ನೂ ಜಾತಿ ಮತಗಳ ಸಂಕೋಲೆಯಿಂದ
ಮೇಲು ಕೀಳಿನ ಅಸಮಾನತೆಯ ಅಂತರದಿಂದ
ಎಲ್ಲಿ ಮುಕ್ತವಾಗಿದ್ದೇವೆ?

ಬಡತನ, ನಿರುದ್ಯೋಗ, ಅನಕ್ಷರತೆಯಿಂದ
ಇಂದಿಗೂ ಹೋರಾಡುತ್ತಲೇ ಇದ್ದೇವೆ
ಅರಾಜಕತೆ, ಭ್ರಷ್ಟಾಚಾರ,
ಅನ್ಯಾಯಕ್ಕೆ ಒಳಗಾಗುತ್ತಲೇ ಇದ್ದೇವೆ

ಮತ್ತೇಕೆ ಈ ಸಂಭ್ರಮ!
ಯಾವ ಪುರುಷಾರ್ಥಕ್ಕಾಗಿ ಈ ಕ್ರಮ?

ಬದುಕಿದ್ದು ಸತ್ತವರಾಗಿದ್ದೇವೆ
ಸ್ವಾರ್ಥ ರಾಜಕಾರಣದ ದಳಗಳಾಗಿದ್ದೇವೆ
ನಮ್ಮ ನಮ್ಮಲ್ಲೆ ಕೋಮು ದ್ವೇಷದ ಬೀಜ ಬಿತ್ತಿ
ತಮ್ಮ ಅಧಿಕಾರದ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಅವರು
ಧರ್ಮಗಳ ಮುಖವಾಡಗಳನ್ನು ಧರಿಸಿ
ಶುರುವಾಗುತ್ತಿದೆ ಈಗ
ಅಂತರ್ಯುದ್ಧದ ಭೀತಿ

ನ್ಯಾಯ ನೀಡುವವರೆ
ಅನ್ಯಾಯ ಎಸಗುತ್ತಿರುವಾಗ
ಯಾರಲ್ಲಿ ಮೊರೆ ಹೋಗುವುದು ತಿಳಿಯದಾಗಿದೆ ಈಗ

ಈ ದೇಶ ಅವರು, ಇವರು
ಯಾರೊಬ್ಬರದ್ದಲ್ಲ,
ಎಲ್ಲರೂ ಸೇರಿ ಕಟ್ಟಿದ್ದು
ಎಲ್ಲಾ ಭಾರತೀಯರಿಗೆ ಸೇರಿದ್ದು

ತಪ್ಪುಗಳ ಮರೆಮಾಚುವ ಯತ್ನದಲ್ಲಿ
ಸರ್ಕಾರದ ಅಭಿಯಾನವೊಂದು ಶುರುವಾಗಿದೆ ಈಗ
ಎಪ್ಪತ್ತೈದನೆಯ ಸ್ವಾತಂತ್ರ್ಯ
ಅಮೃತ ಮಹೋತ್ಸವದ ನೆಪದಲ್ಲಿ
ಮನೆಗೊಂದರಂತೆ ತಿರಂಗವಂತೆ
ಇಲ್ಲಿ ತಿರುಪೆ ಎತ್ತುವ ಹಲವರಿಗೆ, ನಿರಾಶ್ರಿತರಿಗೆ
ಹಸಿದ ಹೊಟ್ಟೆಗಳಿಗೆ
ಉಣ್ಣಲಿಕ್ಕೆ ಗಂಜಿ ಇಲ್ಲ
ಬಾಯಿ ಸಿಹಿ ಮಾಡುವುದು ಹೇಗೆ?
ಉಡಲಿಕ್ಕೆ ಮೈ ತುಂಬ ಬಟ್ಟೆ ಇಲ್ಲ
ಇನ್ನೂ ಧ್ವಜ ಹೇಗೆ ಕೊಂಡರು?
ಬಿಸಿಲು, ಗಾಳಿ, ಚಳಿ, ಮಳೆಗೆ
ತಲೆಮರೆಸಿಕೊಳ್ಳಲು ಸೂರೊಂದಿಲ್ಲ
ಎಲ್ಲಿ ಬಾವುಟ ಹಾರಿಸುವುದು?

ಬದುಕುಗಳು ದಿನದಿಂದ ದಿನಕ್ಕೆ
ಮೂರಾಬಟ್ಟೆಯಾಗುತ್ತಿರುವಾಗ
ನಾಳೆಗಳ ಭರವಸೆಯ ಬೆಳಕು ಕಂದುತ್ತ
ಕಣ್ಮರೆಯಾಗುತ್ತಿರುವಾಗ
ಸಂಭ್ರಮಿಸುವುದಾದರೂ ಹೇಗೆ ಸ್ವಾಮಿ?

ದೇಶಕ್ಕಾಗಿ ಮಡಿದವರ ನೆತ್ತರ ಶೋಕಘಮ
ಇನ್ನೂ ಉಸಿರಾಡುವ ನಮ್ಮ ಗಾಳಿಯಲ್ಲಿರುವಾಗ!

-ಜಬೀವುಲ್ಲಾ ಎಂ. ಅಸದ್.

” ಅತ್ತೆ…ಉಳಿಸಿ ಹೋದ ಅಕ್ಷರಗಳು…..!”

ಎಳವೆಯಲ್ಲಿ…
ಮಾರುದ್ದದ ಪೆನ್ನಿಗೆ
ಮಾರು ಹೋದ ಕಂಗಳು
ಮುಸಿ ನಗುತ್ತಾ
ಅಂಗೈಗಳ ಗೀಚಿಕೊಂಡವು..!

ಅಂಗಳದ ಪಡಸಾಲೆಯ ಮೇಲೆ
ಅಂಗಾತ ಬಿದ್ದಿರುವ ಹಳದಿ ಬಣ್ಣದ
ಹೊಚ್ಚ ಹೊಸ ಪುಸ್ತಕದ ಘಮಲನ್ನು
ಮೆಲ್ಲಗೆ ತೆರೆದು
ಮೂಗಿಗೊತ್ತಿಕೊಳ್ಳುವ ಪುಳಕ..!

ಸಂಜೆಯಾಗುತ್ತಿದ್ದಂತೆ
ಬಂಡಾಯ ಸಂಗಾತಿಗಳ ದಂಡು
ತಮಟೆ ಕುಟ್ಟುತ್ತಾ
ಕ್ರಾಂತಿ ಪದವಾಡುತ್ತಾ
ನಡು ನಡುವೆ ಕೂಗುತ್ತಿದ್ದರು
” ಅಕ್ಷರ ಅನ್ನ.. ಆರೋಗ್ಯ ಚಿನ್ನ”

ಆದರೆ
ಇದನ್ನು ಕೇಳಿ ಅತ್ತೆ ನಗುತ್ತಾಳೆ
ತನ್ನ ಓರಿಗೆಯವರೊಂದಿಗೆ
ಮಾತಾಡಿಕೊಳ್ಳುತ್ತಾಳೆ
“ರಾತ್ರಿ ಇಸ್ಕೂಲಂತ
ವಯಸ್ಸಾದವರೆಲ್ಲಾ ಹೈಕ ಬರೀತ್ವಾಲ್ಲ
ಆ ಸಿಲೋಟಾ ತಕಂಡೋಗ್ಬೇಕಂತ
ಅದ್ಯಾರೋದರು ಈಗ ಕೇಮಿ ಕಾಣ್ದೆ
ಹಿಟ್ಟು ತಿರಿಯದ ಬುಟ್ಬುಟ್ಟು”

ಮನೆಯೊಳಗಿನಿಂದ
ಅಜ್ಜಿ ಕೂಡ ಗೊಣಗುತ್ತಾಳೆ
“ಹ್ಞೂಂ ಕಣೇಳು ಆ ಕಾಲದಿಂದ್ಲೂ ಇಲ್ದಿರದು
ಈಗ ಕಣ್ಣುಕತಿ ಕಾಣ್ದಿರ ಹೊತ್ನಲ್ಲಿ
ನನ್ನಂಗ ವಯ್ಸಾದವ್ರೆಲ್ಲರೂವೆ
ಓದಿ ಮೆಡ್ರ್ಕಾದೆ ಬುಡು ಪಸಂದಾಗಿ “

ಹೀಗೆ..
ಅಪಸ್ವರಗಳು..ಗೇಲಿಗಳು..ತಿರಾಸ್ಕರಗಳು
ಕೆಳಗೇರಿ ತುಂಬಾ ಕುಣಿಯುವಾಗ
ತುಮಕೂರು ಸಿಮೇಯಾಚೆಯಿಂದ ಬಂದ
ಉದ್ದನೆಯ ಮೇಷ್ಟ್ರು ತಣ್ಣಗಿನ ದನಿಯಲ್ಲಿ
ಮನೆ- ಮನೆ ಬಾಗಿಲುಗಳಿಗೆ ಬಂದು
ನಿತ್ಯ ಓಲೈಸುತ್ತಿದ್ದರು..!

ಕೊನೆಗೊಮ್ಮೆ
ಒಂದು ಬೆಳದಿಂಗಳ ರಾತ್ರಿ
ನಕ್ಷತ್ರಗಳು ಚೆಲ್ಲಿದಂತೆ
ಅ ಆ ಇ ಈ ಗಳು..ಕ ಕಾ ಕಿ ಕೀ ಕುಗಳು
ಮೈಕೈಗಳ ನಡುಗಿಸಿಕೊಂಡು ಸ್ಲೇಟಿನಲ್ಲಿ
ಅರಳಿ ನಿಲ್ಲುವ ಹೊತ್ತಿಗೆ
ಮೇಷ್ಟ್ರಿಗೆ ಕೆಲಸ ರೋಸಿತ್ತು
ಆಳುವ ಸರ್ಕಾರಕ್ಕೆ ಸುಸ್ತಾಗಿತ್ತು

ಮುಂದೆ…!
ಒಂದು ಸುಡು ಬಿಸಿಲಿನ ಮಧ್ಯಾಹ್ನ
ಅತ್ತೆಯನ್ನು ಬಸುರು ಮಾಡಿ ಮೇಷ್ಟ್ರು
ಊರು ತೊರೆದು ಹೋದರೆಂಬ ಸುದ್ದಿ
ಮನೆಯನ್ನೆಲ್ಲಾ ದಂಗು ಬಡಿಸಿತ್ತು
ಕೇರಿಯ ಪೋಲಿ ಯುವಕರು
ನನ್ನನ್ನು ಕಂಡಾಗಲೆಲ್ಲ ಮಿಠಾಯಿ ಆಸೆ ತೋರಿಸಿ
ಹತ್ತಿರ ಕರೆಯುತ್ತಾ..
” ಒಳ್ಳೀ ಮೇಷ್ಟ್ರು ಅಲ್ವಾ..
ಹೊಂಟೋಗ್ಬುಟ್ಟಿದ್ರಂತಲ್ಲ ಪಾಪ…!
ಏಡೆಡ್ ಕ್ಲಾಸ್ ತಗ್ತಾ ಇದ್ರು
ಸಂಜಾ ಏಳ್ಗಂಟಾಯಿಂದ ಒಂಬತ್ಗಂಟ್ಗಂಟ
ಮಾಮೂಲಿ ಕ್ಲಾಸು…
ಹತ್ಗಂಟಾ ಮೇಲಾ ಪೆಸಲ್ ಕ್ಲಾಸು ನಿಮ್ ಅತ್ಗಾ
ನಿಚ್ಚಾ ತಗ್ತಾ ಇದ್ರಂತಲ್ಲ ನೋಡಕಿಲ್ವಾ ನೀನು
ಹೆಂಗ್ ತಗಂಡರು ಅಂತ..?” ಎಂದೆನುತ
ಗೇಲಿ ಮಾಡಿ ನಗುತ್ತಿದ್ದರು

ಇನ್ನು ಕೆಲವರು
ಅತ್ತೆಯ ಅಂಗಾಂಗಳನ್ನು ವಿವರ್ಣವಾಗಿ ವರ್ಣಿಸುತ್ತಾ
“ಲೋ ಮೇಷ್ಟ್ರು ನಿಮ್ ಅತ್ಗಾ ಗಣಪತಪ್ಪ್ನಾ ಕೂರ್ಸಿದರಾ…
ಇಲ್ಲ ಗೌರಮ್ನಾ ಕೂರ್ಸಿದರಾ..?
ಎಂದು ಗಿಲಿಟೀನ ಭಾಷೆಯಲ್ಲಿ ಕೇಳಿ ಹಂಗಿಸುವಾಗೆಲ್ಲಾ
ಪೆಚ್ಚು ಮೋರೆ ಹಾಕಿಕೊಂಡು ಮನೆಗೆ ಮರಳುತ್ತಿದ್ದೆ

ಅತ್ತೆ ಮಾತ್ರ..
ಮೂರು ದಿನಗಳಿಂದ ಮೌನಕ್ಕೆ ಜಾರಿದ್ದಳು
ಕಣ್ಣೀರು ಉರವಣಿಸಿ ಒಳಗೊಳಗೆ ಬಿಕ್ಕುತ್ತಾ
ರೂಮಿನಲ್ಲಿ ಅಂಗಾತ ಬಿದ್ದಿದ್ದಳು
ಅವಳನ್ನೇ ದಿಟ್ಟಿಸಿ ಅಪ್ಪಿಕೊಂಡೆ
ತಲೆಯನ್ನು ನೇವರಿಸಿದಳು
ಮುತ್ತಿಕ್ಕಿ ಎದೆಯಗೂಡಿನಲ್ಲಿ ಮಲಗಿಸಿಕೊಂಡಳಷ್ಟೇ..!
ಎಚ್ಚರವಾದಾಗ ಅವಳಿರದೆ
ಕೊನೆಯದಾಗಿ ಬರೆದು ಹೋದ :

“ನನ್ನನ್ನು ಯಾರು ಉಡುಕಬೇಡಿ”
– ರತ್ನ
ಎಂಬ ಗೋಡೆಯ ಮೇಲಿನ ದಪ್ಪದಾದ ಅಕ್ಷರಗಳು
ಕಣ್ಣುಗಳೊಳಗೆ ಅಚ್ಚಳಿಯದಂತೆ ನಾಟಿಕೊಂಡು
ಅವಳ ನೆನಪಾದಾಗಲೆಲ್ಲ
ಕಣ್ಣೀರಾಗಿ ಕೆಲವೊಮ್ಮೆ ಹೀಗೆ ಅಕ್ಷರಗಳಾಗಿ
ಮನದ ಮೂಲೆಯಲ್ಲಿ ಮೂಡುತ್ತಿರುತ್ತವೆ…!

ಪ್ರಶಾಂತ್ ಬೆಳತೂರು

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x