ಯವ್ವಾ ಯವ್ವಾ “ಭೂಮಿಯ ಋಣ” ಚಂದ ಕಣವ್ವಾ: -ಡಾ. ನಟರಾಜು ಎಸ್.‌ ಎಂ.

ಒಂದು ಪೇಜಿನ ಕತೆ, ಕವಿತೆ ಕಟ್ಟುವುದು ಸುಲಭ. ಹತ್ತಾರು ಪುಟಗಳ ಕಥೆ, ನೂರಾರು ಪುಟಗಳ ಕಾದಂಬರಿ ಬರೆಯುವುದು ಕಷ್ಟ. ಆ ಕಷ್ಟಕ್ಕೆ ಯುವ ಲೇಖಕರು ತೆರೆದುಕೊಂಡಂತೆ ಯುವ ಲೇಖಕಿಯರು ತೆರೆದುಕೊಂಡಿದ್ದು ಬಹಳ ವಿರಳ. ಆ ಕಾರಣಕ್ಕೆ ಯುವ ಲೇಖಕಿಯರ ಕವಿತೆಗಳು ನಮಗೆ ಸಾಮಾಜಿಕ ಜಾಲತಾಣಗಳಲ್ಲಿ, ವಿಶೇಷಾಂಕಗಳಲ್ಲಿ ಹೆಚ್ಚಾಗಿ ಓದಲು ಸಿಗುತ್ತವೆ. ಲೇಖಕಿಯರು ಕಥಾಲೋಕಕ್ಕೆ ತೆರೆದುಕೊಳ್ಳಲು ಒಂದಷ್ಟು ಸಮಯ ತೆಗೆದುಕೊಳ್ಳುತ್ತಾರೆ ಎನಿಸುತ್ತದೆ. ಬದುಕಿನ ಅನುಭವಗಳನ್ನು ತುಂಬಾ ಪರಿಣಾಮಕಾರಿಯಾಗಿ ಕಟ್ಟಿಕೊಡುವ ಕೆಲಸ ಅಷ್ಟು ಸುಲಭವಲ್ಲ. ಆ ಸುಲಭವಲ್ಲದ ಕೆಲಸವನ್ನು ಒಂದು ಕಾಲಘಟ್ಟ ತಲುಪಿದ ಲೇಖಕಿಯರು ಮಾತ್ರ ತುಂಬಾ ಅನಾಯಾಸವಾಗಿ ಕಟ್ಟಿಕೊಡುತ್ತಾರೆ. ಹಾಗೆ ಬದುಕಲಿ ಕಂಡದನ್ನು ಕಥಾರೂಪದಲ್ಲಿ ನಮ್ಮೆದುರಿಗೆ ಇಟ್ಟಿರುವ ಹಿರಿಯ ಲೇಖಕಿಯ ಹೆಸರು ಶೋಭಾ ಗುನ್ನಾಪೂರ. ಅವರ ಚೊಚ್ಚಲ ಕಥಾಸಂಕಲನದ ಹೆಸರು “ಭೂಮಿಯ ಋಣ”.

“ಭೂಮಿಯ ಋಣ” ಪುಸ್ತಕವನ್ನು ರಾಯಚೂರಿನ ವೈಷ್ಣವಿ ಪ್ರಕಾಶನದವರು ಪ್ರಕಟಿಸಿದ್ದಾರೆ. ಈ ಪುಸ್ತಕಕ್ಕೆ ಹಿರಿಯ ಲೇಖಕರಾದ ಬರಗೂರು ರಾಮಚಂದ್ರಪ್ಪನವರ ಮುನ್ನುಡಿ ಹಾಗು ಎಂ ಎಸ್‌ ಆಶಾದೇವಿಯವರ ಆಶಯ ನುಡಿಗಳಿವೆ. ಪುಸ್ತಕದ ವಿನ್ಯಾಸವನ್ನು ಹೆಚ್‌ ಕೆ ಶರತ್‌ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಕನ್ನಡದ ಅತ್ಯುತ್ತಮ ಮುಖಪುಟ ವಿನ್ಯಾಸಕಾರರಾದ ಸೌಮ್ಯ ಕಲ್ಯಾಣಕರ್‌ ಅವರು ಭೂಮಿಯ ಋಣ ಕೃತಿಗೆ ಮುಖಪುಟ ರಚಿಸಿದ್ದಾರೆ. ಉತ್ತರ ಕರ್ನಾಟಕದ ಲೇಖಕರಿಗೆ ಉತ್ತಮ ವೇದಿಕೆಯಾಗುತ್ತಿರುವ ವೈಷ್ಣವಿ ಪ್ರಕಾಶನದಿಂದ ಉತ್ತಮವಾದ ಪುಸ್ತಕಗಳು ಪ್ರಕಟವಾಗುತ್ತಿರುವುದು ಖುಷಿಯ ಸಂಗತಿ. ಅವರ ಪ್ರಕಾಶನದ ದಾದಾಪೀರ್‌ ಜೈಮನ್‌ ರವರ ನೀಲಕುರಿಂಜಿ ಕೃತಿಗೆ ಯುವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿರುವುದು ಗುಣಮಟ್ಟದ ಪ್ರಕಟಣೆಗೆ ಒತ್ತುಕೊಡುವ ವೈಷ್ಣವಿ ಪ್ರಕಾಶನದ ಆಶಯ ತಿಳಿಯುತ್ತದೆ. ಅಂತಹ ಒಳ್ಳೆಯ ಆಶಯದಿಂದ ಪ್ರಕಟವಾದ ಪುಸ್ತಕದ ಸಾಲಿಗೆ ಭೂಮಿಯ ಋಣ ಕೃತಿಯೂ ಸೇರುತ್ತದೆ.

ಭೂಮಿಯ ಋಣ ಪುಸ್ತಕ ಕೈ ಸೇರಿದಾಗ ಮೊದಲಿಗೆ ಒಂದೆರಡು ಕತೆಗಳನ್ನು ಓದಿದೆ. ಓದಿದ ಎರಡೂ ಕತೆಗಳಲ್ಲಿ ಕತೆಯ ಮುಖ್ಯಪಾತ್ರದಾರಿಗಳು ದುರಂತ ಅಂತ್ಯವನ್ನು ಕಂಡಿರುವುದನ್ನು ನೋಡಿ “ಯಾಕೆ ಮುಖ್ಯವಾದ ಕ್ಯಾರೆಕ್ಟರ್‌ ಗಳನ್ನೇ ಲೇಖಕಿ ಸಾಯಿಸಿಬಿಟ್ಟಿದ್ದಾರಲ್ಲ” ಅಂತ ಅಂದುಕೊಂಡು ಒಂದಷ್ಟು ದಿನ ಪುಸ್ತಕವನ್ನು ಪಕ್ಕಕ್ಕಿಟ್ಟಿದ್ದೆ. ಶೋಭಾ ಗುನ್ನಾಪುರ ಅವರ ಮಕ್ಕಳಾದ ಅನಿಲ್‌ ಮತ್ತು ಸುನಿಲ್‌ ಬೆಂಗಳೂರಿನಲ್ಲಿ ತುಂಬಾ ಕಾಳಜಿ ವಹಿಸಿ ಪುಸ್ತಕ ಬಿಡುಗಡೆ ಮಾಡಿದ್ದನ್ನು ನೋಡಿ ಮತ್ತೊಮ್ಮೆ ಪುಸ್ತಕವನ್ನು ಓದಲು ಕೈಗೆತ್ತಿಕೊಂಡೆ. ಓದಿದ ಕತೆಗಳನ್ನು ಮತ್ತೆ ಓದಿದಾಗ “ಇಲ್ಲಾ ಪಾತ್ರಗಳಿಗೆ ಕತೆಗೆ ತಕ್ಕ ಹಾಗೆ ಮುಕ್ತಿ ನೀಡಿದ್ದರೂ ಬಹುಶಃ ಲೇಖಕಿಯ ಜೀವನಾನುಭವದ ಮೂಸೆಯಿಂದ ಮೂಡಿದ ಕತೆಗಳಲ್ಲಿನ ಪಾತ್ರಗಳು ಅವರು ತಮ್ಮ ಬದುಕಲ್ಲಿ ಕಂಡ ಪಾತ್ರಗಳೇ ಆಗಿರಬಹುದು” ಎಂದುಕೊಂಡೆ ಮತ್ತೆ ಆಸ್ಥೆಯಿಂದ ಇಡೀ ಪುಸ್ತಕವನ್ನು ಓದಿಕೊಂಡೆ.

ಈ ಪುಸ್ತಕದಲ್ಲಿ ಒಟ್ಟು ಒಂಬತ್ತು ಕತೆಗಳಿವೆ. ಈ ಒಂಬತ್ತು ಕತೆಗಳು ಒಂಬತ್ತು ಸಂಸಾರದ ಕತೆಗಳು ಅಥವಾ ಒಂಬತ್ತು ಕುಟುಂಬಗಳ ಕತೆಗಳು ಎನ್ನುಬಹುದು. ಒಂದೊಂದು ಕುಟುಂಬದ ಕತೆಗಳನ್ನು ಗಮನಿಸಿದಾಗ ಆ ಕುಟುಂಬದ ಸದಸ್ಯರ ವೃತ್ತಿಗಳು, ಅವರ ಆರ್ಥಿಕ ಪರಿಸ್ಥಿತಿಗಳು, ಭಾವನಾತ್ಮಕ ಗೊಂದಲುಗಳು, ತಾಕಲಾಟಗಳು, ಎಲ್ಲವನ್ನು ಅಚ್ಚುಕಟ್ಟಾಗಿ ಲೇಖಕಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಕತೆಗಳಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶಗಳೆಂದರೆ ಒಂದೊಂದು ಕತೆಗಳಲ್ಲೂ ಮುಖ್ಯಪಾತ್ರದಾರಿಗಳಿಗೆ ಕಷ್ಟಗಳು ಎದುರಾದಾಗ ಅವರನ್ನು ಸಂತೈಸಲು, ಅವರಿಗೆ ಭಾವನಾತ್ಮಕವಾಗಿ, ಆರ್ಥಿಕವಾಗಿ ಊರುಗೋಲಾಗಲು ಯಾರಾದರೂ ಇದ್ದೇ ಇರುತ್ತಾರೆ. ಆ ಪಾತ್ರಗಳ ಸಾಂತ್ವನ ಮತ್ತು ಅವರ ಕಷ್ಟಕಾಲದಲ್ಲಿನ ಸಹಾಯ ಬದುಕಿನಲ್ಲಿ ಒಬ್ಬರಿಗೊಬ್ಬರು ಹೇಗೆ ಸಹಾಯಹಸ್ತ ನೀಡಬೇಕು ಎನ್ನುವುದನ್ನು ಒತ್ತಿ ಹೇಳುತ್ತದೆ.

ಇದಕ್ಕೆ ಉದಾಹರಣೆಯಾಗಿ ಹೇಳಬೇಕೆಂದರೆ “ಬೇಗೆ” ಕತೆಯಲ್ಲಿ ಚಂದ್ರಣ್ಣ ಮಾಸ್ಟರ್‌ ಅವರ ಕುಟುಂಬ, “ಎಕ್ಕೆಲಗ ಜೋಗ” ಕತೆಯಲ್ಲಿನ ಭೀಮಾಬಾಯಿ, ನಮ್ಮೂರ ಗೊಲ್ಲಾಳ ಕತೆಯಲ್ಲಿನ ಸರಸತ್ತೆವ್ವ, “ಭೂಮಿಯ ಋಣ” ಕತೆಯಲ್ಲಿನ ಉಮೇಶ, “ಆಟ ಬೋಟ ಸಾಕ? ಬೇಕ?” ಕತೆಯಲ್ಲಿನ ಶರಣಮ್ಮ, “ತಿರುವು” ಕತೆಯಲ್ಲಿನ ಮೀರಾ ಇವರೆಲ್ಲಾ ಪ್ರತಿ ಕತೆಗಳ ಮುಖ್ಯಪಾತ್ರದಾರಿಗಳ ಬದುಕಿಗೇ ಒಂದು ಒಳ್ಳೆಯ ತಿರುವು ತಂದವರು ಎನ್ನಬಹುದು. ಮುಖ್ಯ ಪಾತ್ರದಾರಿಗಳನ್ನು ಪಕ್ಕಕ್ಕಿಟ್ಟು ಈ ಪೋಷಕ ಪಾತ್ರಗಳಂತಹ ವ್ಯಕ್ತಿತ್ವಗಳ ವಿಶ್ಲೇಷಣೆ ಮಾಡುತ್ತಾ ಹೋದರೆ ನಮಗೆ ಇವರಲ್ಲಿ ಮಾನವೀಯ ಗುಣವಿರುವುದು ಕಾಣುತ್ತದೆ. ಜೊತೆಯ ಮುಖ್ಯವಾಗಿ ಇವರಲ್ಲಿ ಮನಸ್ಸಿನ ಚಿಕಿತ್ಸಕರನ್ನು ನಾವು ಕಾಣಬಹುದು. ಇಂತಹವರು ನಮ್ಮ ಸುತ್ತಮುತ್ತಲೂ ಇವತ್ತಿಗೂ ಇದ್ದಾರೆ. ಅಂತಹ ವ್ಯಕ್ತಿತ್ವಗಳ ಸಂತತಿ ಈಗಿನ ದಿನಗಳಲ್ಲಿ ಕಾಣೆಯಾಗುತ್ತಿರುವುದು ವಿಪರ್ಯಾಸ.

ನನಗೆ ಈ ಪುಸ್ತಕದಲ್ಲಿ ಮೇಲಿನ ಪಾತ್ರದಾರಿಗಳು ವಿಶೇಷ ಅನಿಸಿದ ಹಾಗೆ ಪುಸ್ತಕದಲ್ಲಿನ ಭಾಷೆಯ ಸೊಗಸು ಮನಸ್ಸಿಗೆ ತುಂಬಾ ಮುದ ನೀಡಿತು. ಒಂದೊಂದು ಸಂಭಾಷಣೆಯನ್ನು ಓದುತ್ತಾ ಇರುವಾಗಲೂ ಉತ್ತರ ಕರ್ನಾಟಕದ ಭಾಷೆಯ ಸೊಗಡು ಮನಸ್ಸನ್ನು ತುಂಬಿಕೊಂಡಿತು. ಜೊತೆಗೆ ಪುಸ್ತಕದಲ್ಲಿ ಕಾಣುವ ಗಾದೆಗಳು, ಜಾನಪದ ಪದಗಳು ಯಾಕೋ ತುಂಬಾ ಹಿಡಿಸಿಬಿಟ್ಟವು.

ಕೆಲವು ಗಾದೆ ಮಾತುಗಳ ಒಳಗೊಂಡ ಸಂಭಾಷಣೆಯ ತುಣುಕಗಳ ಉದಾಹರಣೆಗಳು ಹೀಗೆವೆ ನೋಡಿ:
“ಅದಕ್ಕೆ ಅಂತಾರ ಹಿರೇರು ಕರಳೀಗಿ ನಾಚಕಿಯಿಲ್ಲ. ಅಂಗಾಲಿಗೆ ಹೇಸಗಿಯಿಲ್ಲ ಅಂತ ಅದು ಸುಳ್ಳಲ್ಲ ನೋಡವ್ವ”
” ಹಿರಿಯರು ಹೇಳ್ತಾರ ಹೆಣ್ಣಿನ ನೆಲಿ, ಕುದುರಿಯ ನೆಲಿ, ಮತ್ತೆ ನೀರಿನ ನೆಲಿ ತಿಳ್ಯಾದಿಲ್ಲ ಎಂದು ಸುಳ್ಳಲ್ಲ”,
” ಹೌದು ಮತ್‌ ಕಾಗಿ ಕೈಯಾಗ ಕಚೇರಿ ಕುಡಾನ ಕಚೇರಿ ತುಂಬಾ ಹೇಲ ಮಾಡಿತಂತ ಹಾಂಗ ಆಗಕತ್ಯಾದ ನನ್ನ ಸಂಸಾರ”
“ಬರ್ಲಿ ಬಿಡ ದ್ಯಾಮಿ.. ಮಳಿ ಬಂದ್ರ ಕೆಟ್ಟಲ್ಲ ಮಗಾ ಉಂಡ್ರ ಕೆಟ್ಟಲ್ಲ ಅಂತಾರ..”

ಇನ್ನು ಜನಪದ ಮಾತುಗಳು “ಏಳು ಮಕ್ಕಳ ತಾಯಿ” ಕತೆಯಲ್ಲಿ ಹೀಗಿವೆ:
ಸಂಗೋಗಿ ಎಡಕಾಗಿ ಶಿರಶ್ಯಾಡ ಬಲಕಾಗಿ ಕಲ್ಲಾಗ ಹರಿತಾವ ಕಡನೀರೋ!!
ಮಲಕಣ ದೇವರ ಪೂಜಕ ಬರತಾವೋ ತಿಳಿನೀರೊ ಹರಿಗೋ… ಹರಿಗೋ..
ಹೊತ್ತ ಮುಳಗಿದರೇನು ಕತ್ತಲಾದರೇನು! ಅಪ್ಪ ನಿನ್ನ ಗುಡಿಗಿ ಬರುವೇನು!!
ಬಸವೇಶ ಮುತ್ತಿನ ಬಾಗಿಲ ತೆರೆದೀಡೋ ಹೊಲೇಪ ಹೋಲೆ!!
ಹೋರಿಯ ಕೊರಳಾಗ ಸೇರಿನ ಸರಪಳಿ ಸೇರಲಾರದವರಾರೋ ಅಗಸ್ಯಾಗ!!
ನನ್ನ ತಂದಿ ಹೋರಿ ಮುಗದಾಣಿ ಬಿಗಿ ಹಿಡಿಯೋ ಹರಿಗೋ… ಹರಿಗೋ..
ಎಂದು ಹಾಡುವ ತಾಯವ್ವನ ದಿಟ್ಟತನ ಧೈರ್ಯವನ್ನು ಮರೆಯುವ ಹಾಗಿಲ್ಲ.

ಹಾಗೆಯೇ “ಆಟ ಬೋಟ ಸಾಕಾ? ಬೇಕಾ?” ಕತೆಯಲ್ಲಿನ ಗಂಡನ ಹೆಸರ ಕೇಳಿದಾಗ ಲಲಿತಾ ನಾಚುತ್ತಲೇ ಹೇಳುವ
ಹತ್ತು ಬೆರಳಿಗೆ ಹತ್ತುಂಗರ
ನಡುವೊಂದು ಸುತ್ತುಂಗರ
ಹತ್ತ ಮಂದ್ಯಾಗ ಕುಂತು ಹೌದು ಅನಸಕೊಂತಾರ ಯಶವಂತ್ರಾಯ…
ಎನ್ನುವ ಜನಪದ ಶೈಲಿ ನಿಜಕ್ಕೂ ಮನಸ್ಸಿಗೆ ಮುದ ನೀಡುತ್ತದೆ.

ಹಾಗೆಯೇ
“ಹುಚ್ಚ ದ್ಯಾವ್ಯಾನ ಹೊಟ್ಟೇಲಿ ಏನ್‌ ಚಂದ ಮಕ್ಕಳು ಹುಟ್ಟಾವ.. ನೋಡದ್ರ ನೆದರ ಆಗ್ತವ” “ನೋಡ ದೋಸ್ತ ರೊಕ್ಕ ನಮಗ ಗಳಿಸಲ್ಲ, ನಾವ ರೊಕ್ಕಕ್ಕ ಗಳಸೀವಿ, ನೀ ಆರಾಮಾಗಿ ಇರು” “ನಮ್ಮ ಸಂಪ್ರದಾಯಿ ಬಿಡಬಾರದವ್ವ ಮನೀಗಿ ಕಾಡಾಟ ಹತ್ತತದ” ಹೀಗೆ ಎಷ್ಟೊಂದು ಸಂಭಾಷಣೆಯ ತುಣುಕುಗಳು ಪುಸ್ತಕದ ತುಂಬಾ ಇರುವುದರಿಂದ ಭೂಮಿಯ ಋಣ ಪುಸ್ತಕಕ್ಕೆ ಅದರದ್ದೇ ಆದ ನೆಲದ ಘಮಲನ್ನು ತನ್ನ ಒಡಲಲ್ಲಿ ತುಂಬಿಕೊಂಡಿದೆ.

ನೆಲದ ಘಮಲನ್ನು ತುಂಬಿಕೊಂಡಿರುವ ಭೂಮಿಯ ಋಣದಲ್ಲಿನ ಕತೆಗಳನ್ನು ಓದುತ್ತಾ ಓದಂತೆ ಲೇಖಕಿಯು ಕತೆಗಳಿಗೆ ಬಳಸಿಕೊಂಡಿರುವ ವಿಷಯ, ವೈವಿಧ್ಯತೆಯಿಂದ ಕೂಡಿವೆ. ಜೊತೆಗೆ ಎಲ್ಲವೂ ಗ್ರಾಮೀಣ ಮೂಲದ ಕತೆಗಳೇ ಆಗಿವೆ. ಇವರ ಕತೆಗಳನ್ನು ಓದುವಾಗ ಗ್ರಾಮೀಣ ಪ್ರದೇಶದಲ್ಲಿ, ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳು ಅನುಭವಿಸುವ ಕಷ್ಟಕೋಟಲೆಗಳ ಸರಮಾಲೆಗಳು ನಮ್ಮ ಕಣ್ಣ ಮುಂದೆ ಬರುತ್ತದೆ. ಶೌಚಾಲಯಗಳಿಲ್ಲದೆ ಬಯಲನ್ನೇ ಶೌಚಕ್ಕೆ ಉಪಯೋಗಿಸಬೇಕಾದ ಅನಿವಾರ್ಯತೆಯನ್ನು, ನಿರುದ್ಯೋಗ ಸಮಸ್ಯೆಯಿಂದ ಹಳ್ಳಿ ಬಿಟ್ಟು ಶಹರಗಳಿಗೆ ಕೆಲಸಗಳಿಗೆ ಗುಳೇ ಹೊರಡುವುದನ್ನು, ಊಟವಿಲ್ಲದೆ ಕೊನೆಗೆ ಬಿಕ್ಷೆ ಎತ್ತಿಯಾದರೂ ಬದುಕಬೇಕಾದ ಪಾತ್ರಗಳ ವಿಷಮ ಸ್ಥಿತಿಗಳನ್ನು ಲೇಖಕಿ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ನಿರುದ್ಯೋಗ ಸಮಸ್ಯೆಗಳನ್ನು ಹೋಗಲಾಡಿಸಲು ದುಡಿಯಲು ಪ್ರೇರೇಪಿಸುವ, ವ್ಯವಸಾಯಕ್ಕೆ ಮತ್ತೆ ಮರಳುವ, ಮನೆಗಳಲ್ಲಿ ಹಸುಗಳನ್ನು ಸಾಕುವ, ಕುರಿ ಸಾಕುವ, ಹಂದಿ ಸಾಕುವ ವಿವಿಧ ಕಾಯಕ ಜೀವಿಗಳ ಕತೆಗಳು, ವಯಸ್ಸಿಗೆ ಬಂದರೂ ಮದುವೆಯಾಗದವರ, ಮದುವೆಯಾಗಿ ಮಕ್ಕಳಾಗದವರ, ಮದುವೆಯಾಗಿ ವಿಚ್ಚೇದನವಾದವರ ಕತೆಗಳು, ದೇವದಾಸಿ ಪದ್ದತಿಯ ಒಳನೋಟಗಳು ಲೇಖಕಿಯ ಲೇಖನಿಯಿಂದ ಮೂಡಿವೆ.

ಈ ಪುಸ್ತಕದಲ್ಲಿ ಶೋಭಾ ಗುನ್ನಾಪೂರರವರ ಮನದ ಮಾತುಗಳನ್ನು ಓದಿದಾಗ ಅವರು ತಮ್ಮ ಹಳ್ಳಿಯಲ್ಲಿ ಸ್ತ್ರೀ ಶಕ್ತಿ ಸಂಘಗಳಲ್ಲಿ ತುಂಬಾ ಸಕ್ರಿಯವಾಗಿದ್ದಾರೆ ಎನ್ನುವುದು ತಿಳಿಯಿತು. ಅವರು ಆ ರೀತಿ ಸಕ್ರಿಯರಾಗಿ ಇರುವ ಕಾರಣಕ್ಕೆ ಮಹಿಳೆಯರೆಲ್ಲಾ ಆರ್ಥಿಕವಾಗಿ, ಸಾಮಾಜಿಕವಾಗಿ, ಭಾವನಾತ್ಮಕವಾಗಿ, ಒಬ್ಬರಿಗೊಬ್ಬರು ಪೂರಕವಾಗಿ ಬೆಳೆಯಲು ಸಹಕಾರಿಯಾಯಿತು ಎಂದಿದ್ದಾರೆ. ಅದರ ಪರಿಣಾಮ ಮತ್ತು ಹೆಣ್ಣು ಸ್ವಂತಂತ್ರಳಾಗಿರಬೇಕು ಎನ್ನುವ ಅವರ ಆಶಯವನ್ನು ನಾವು ಅವರ ಕತೆಗಳಲ್ಲಿ ಕಾಣಬಹುದು. ಇನ್ನು ಮನೆಯ ಯಜಮಾನನ ಪಾತ್ರಗಳನ್ನು ಹೆಚ್ಚಿನ ಕತೆಗಳಲ್ಲಿ ಅಸಹಾಯಕ ವ್ಯಕ್ತಿತ್ವಗಳಂತೆ ಚಿತ್ರಿಸಿರುವಂತೆ ಕಂಡರೂ ಅವರ ಸಂಗಾತಿಗಳ ಪಾತ್ರಗಳು ಗಂಡಿನ ಪಾತ್ರಗಳನ್ನು ಪೋಷಿಸುವುದನ್ನು ನಾವು ಕಾಣಬಹುದು. ಹೆಚ್ಚಿನ ಕತೆಗಳಲ್ಲಿ ಅಚಾನಕ್ಕಾಗಿ ಸಂಭವಿಸುವ ಒಂದು ದುರಂತದ ನಂತರವೂ ಬದುಕನ್ನು ಕಷ್ಟಪಟ್ಟು ಮತ್ತೆ ಕಟ್ಟಿಕೊಳ್ಳಬಹುದು ಎನ್ನುವ ಸಂದೇಶವನ್ನು ನಾವು ಕಾಣಬಹುದು.

“ಭೂಮಿಯ ಋಣ” ಲೇಖಕಿಯ ಮೊದಲ ಪುಸ್ತಕವಾದರೂ ಅವರ ಓದಿನ ವಿಸ್ತಾರ, ಜೀವನಾನುಭವ, ಅವರ ಮಗ ಕತೆಗಾರ ಅನಿಲ್‌ ಗುನ್ನಾಪೂರ ಅವರ ಒತ್ತಾಸೆ ಈ ಕತೆಗಳನ್ನು ಲೇಖಕಿಯ ಕೈ ಹಿಡಿದು ಬರೆಯಿಸಿವೆ ಎನ್ನಬಹುದು. ಈಗಾಗಲೇ ತಮ್ಮ ಆತ್ಮಕತೆಯ ಹಸ್ತಪ್ರತಿಯನ್ನು ಪ್ರಕಟಣೆಗೆ ಸಿದ್ದ ಮಾಡಿ ಇಟ್ಟುಕೊಂಡಿರುವ ಶೋಭಾ ಗುನ್ನಾಪೂರ ಅವರ ಆತ್ಮಕತೆ ಕನ್ನಡದ ಓದುಗರಿಗೆ ದಕ್ಕುವಂತಾಗಲಿ, ಜೊತೆಗೆ ಅವರ ಲೇಖನಿಯಿಂದ ಅನೇಕ ಸಾಹಿತ್ಯದ ಕೃಷಿ ಮುಂದುವರೆಯಲಿ ಎಂದು ಹಾರೈಸುತ್ತೇನೆ.

-ಡಾ. ನಟರಾಜು ಎಸ್.‌ ಎಂ.

ಪುಸ್ತಕ: ಭೂಮಿಯ ಋಣ (ಕಥಾಸಂಕಲನ)

ಪ್ರಕಾಶಕರು: ವೈಷ್ಣವಿ ಪ್ರಕಾಶನ, ರಾಯಚೂರು

ಬೆಲೆ: Rs. 100/-

ಸಂಪರ್ಕ ಸಂಖ್ಯೆ: ಅನಿಲ್‌ ಗುನ್ನಾಪೂರ 7406481629

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಎಂ.ಜವರಾಜ್
ಎಂ.ಜವರಾಜ್
1 year ago

ಉತ್ತಮ ವಿಮರ್ಶೆ ಸರ್. ತುಂಬಾ ಅಚ್ಚುಕಟ್ಟಾಗಿ ಕತೆಗಳ ವಿವರಣೆ ಮಾಡಿದ್ದೀರಿ. ಲೇಖಕಿಯ ತುಡಿತದ ಒಳಕೋನವನ್ನು ಹಿಡಿದು ಅಳೆದು ತೂಗಿದಂತಹ ತೂಕದ ಬರಹ ಇದಾಗಿದೆ.

1
0
Would love your thoughts, please comment.x
()
x