ಪಂಜು ಕಾವ್ಯಧಾರೆ

ಮಳೆಯಾಗಿ ನೀ ಸುರಿದಂತೆಲ್ಲ

ಏನು ಕೋಪವೋ ನಾನರಿಯೇ
ಒಂದೇ ಸಮನೆ ಜಿಟಿಜಿಟಿಯೆಂದು

ಹನಿಸುವ ನಿನ್ನ ಮೌನದ ಭಾಷೆಯು
ಮುನಿದಂತೆ ಭಾಸವಾಗಿ ಕನವರಿಸಿದೆ

ಮುತ್ತಿಡಲು ಹರಸಾಹಸ ಪಟ್ಟಂತೆ
ಹಗಲಿಗೊಂದು ಪರದೆ ಹರವಿದಂತೆ

ಮುಸುಕಿನಲಿ ಗುದ್ದಾಟ ನಡೆಸುವಾಗೆಲ್ಲ
ತುಂತುರು ಹನಿಯ ಮಂಪರು ಸಂಪಾಗಿ

ಕೈಗೆ ಸಿಗದೆ ಕೊಸರಿ ಓಡುವೆಯೇಕೆ ಹೆದರಿ
ನನ್ನ ಮುನಿಸಿಗೆ ಕಾರಣವೆಂಬಂತೆ ಬಿಂಬಿಸಿ

ಹೊತ್ತಿಗೆ ಬಾರದವನ ಮುದ್ದಿಸಲೊಲ್ಲೆನು
ಪ್ರತಿಹನಿಯಲ್ಲೂ ಜಿನುಗುವ ಕಾರಂಜಿಗಳು

ಮಳೆಗಾಳಿಗೆ ಸಿಲುಕಿ ನಲುಗಿದಷ್ಟು ಹಿತ
ಜೀವಜಗತ್ತು ಚಿಗುರೊಡೆಯುವುದೀಗ

ತೂತಿನ ಕೊಡೆಯೊಳಗೆ ಆಗಸದ ಚಿತ್ತಾರ
ಕಾರ್ಮೋಡಗಳ ಹೊಯ್ದಾಟದಲಿ ಕಂಪನ

ಗುಡುಗು ಮಿಂಚಿನಾರ್ಭಟದಲಿ ಸುಳಿವ
ತಣ್ಣನೆಯ ಸುಳಿಗಾಳಿಯ ಪ್ರೇಮಾರಂಭ

ಕೆಸರುಗದ್ದೆಯಲಿ ಮಿಂಚಿನೋಟದ ಹಬ್ಬ
ಮಳೆಯಲ್ಲಿ ಮೈಮನದ ತಿಕ್ಕಾಟದ ದಿಬ್ಬ

ಸುರಿದಷ್ಟು ಬಿಚ್ಚಿಟ್ಟಿರುವೆ ಒಡಲೊಳು
ಭೂವಿಯ ಹಸಿರಾಗಿಸಲು ಕಂಗಳು

ಹೊತ್ತೊಯ್ಯುವ ಮುಂಚೆ ಸುರಿದು ಬಿಡು
ತೆಪ್ಪಗಿರಲಿ ಮೋಡ ಮುಸುಕಿದ ಹಗಲು

ನಿನ್ನ ಕೋಪತಾಪಕೆ ಒಗ್ಗಿದೆ ನನ್ನೆದೆಯು
ನೀನೆಷ್ಟು ಗುಡುಗಿದರು ಪ್ರೀತಿಸುವೆ ನಿನ್ನ

ಮಳೆಯಾಗಿ ನೀ ಸುರಿದಂತೆ ಚಿನ್ನಾ
ಧರೆಯಾಗಿ ಆಲಂಗಿಸಿ ಮುದ್ದಿಸುವೆ ರನ್ನಾ.

ಮುಂಗಾರಿನ ಮುಂಗುರುಳು ಚಾಚಿದಂತೆಲ್ಲ
ಕಾಮನಬಿಲ್ಲಿನಂತೆ ರಂಗೋತ್ಸವ ನಲ್ಲ.

ಶಿವಲೀಲಾ ಹುಣಸಗಿ ಯಲ್ಲಾಪುರ

ಭಾವ ಶರಧಿ

ಬಿಸಿಲಿನುರಿಯಲಿ ಬೆಂದ ಭೂರಮೆಯ ಬೇಗೆಯನು
ಪರಿಹರಿಸೆ ಧರೆಗಿಳಿದ ಪರ್ಜನ್ಯ ಧಾರೆ.
ಮಬ್ಬು ಹಿಡಿದ ಕರ್ಮುಗಿಲಿನ ಬಾನಿಗೆ
ಗುಡುಗು ಮಿಂಚಿನ ಸುಳಿವಿನಿತಿಲ್ಲ
ಹಗಲೂ – ಇರುಳೂ ಜಡಿಸೋನೆಯ ಪ್ರಭಾರೆ.

ನಭವನೆಲ್ಲ ಮುಚ್ಚಿದ ಮುಗಿಲಲಿ ನೇಸರನು
ತುಸು ಬೇಸರದಿ ಮರೆಯಾಗಿಹನು
ಮುಗಿಲುಗಳೋಡುತಿವೆ ,ಅಂತ್ಯವಿರದ ಹಾದಿಯಲಿ
ಪಸರಿಸುತಲಿ ಒಲವ ತಂಗಾಳಿ

ಗಿರಿಕಾನನಗಳು ಹೊಸ ಮಳೆಯಲಿ
ಮೈ ಮರೆತು ಮಿಂದು ಜೀವ ತರಂಗಿಣಿಯು
ಹಸುರುಡುಗೆಯನುಟ್ಟು ಮಲೆಗಳ ತೊಟ್ಟಿಲಲಿ
ಮಂದಸ್ಮಿತವ ತೋರಿಹಳು ಮಗುವಾಗಿ.

ಬೆಟ್ಟಗಳಿಳಿದು ಹೊಳೆಯಾಗಿ ಪ್ರವಹಿಸಿ
ನೊರೆನಗೆಯನು ಬೀರಿ,
ಜಲಪಾತದಿ ಧುಮ್ಮಿಕ್ಕಿದಳು ಕ್ಷೀರಧಾರೆಯಾಗಿ,
ಕಣಿವೆಗಳ ದಾಟಿ ಸಾಗರ ಸಂಗಮಕೆ
ಹವಣಿಸುತಿಹಳು ಭಾವಶರಧಿ!!

-ಸರಿತಾ ಮಧು

ನೆನಪಿನ ಜೋಳಿಗೆ.
ಅಳಿದು ಹೋದ ಅಧ್ಯಾಯವೊಂದು,
ನೆನಪಿನ ಜೋಳಿಗೆಯಲಿ ತಡವರಿಸಿದೆ ಇಂದು.
ನೆನಪುಗಳ ಮುಗಳುಗಳನು ಹೀಗೆ ಚಿವುಟಲಿ ನಾನು?
ಚಿವುಟದೆ ಬಿಡಲು ಅನ್ಯ ದಾರಿಯಿಲ್ಲವೇನು?

ಬಯಸಿತೀ ನನ್ನ ಚಿತ್ತ ಏಕಾಂತವ.
ಹೊರಟತೀ ಎನ್ನ ವiನವು ಬಯಸಿ ವೇದಾಂತವ.
ಕಡಲ ತೀರ ಯಾನವೊಂದು ಬೇಕಿದೆ.
ಆಲೆಗಳ ಕಾದಾಟ ನಾ ನೋಡ ¨ಯಸಿದೆ.

ಮನಸಿನಂಗಳದಿ ಕಾರ್ಮೋಡ ಕವಿದು ಗಾಢಾಂಧಕಾರ.
ಮೈಮರಿಸಿದ ಮೇಲ್ಕುಳಿತ ಆ ಮಾಟಗಾರ.
ಸತ್ ಚಿಂತನೆಗೆ ಕರಗುವನೆ ಈ ಮಾಯವಿ?
ಬಿಡಿಸೆನ್ನ ಈ ಬಂಧನದಂದ ಓ ಕರುಣಾಮಯಿ!
-ಕಿರಣ್.ವ್ಹಿ.

ಶಬ್ದದ ನಡುವಿನ ನಿಶ್ಯಬ್ದ ಕವಿತೆ…

ಮಳೆರಾತ್ರಿ ಇಲ್ಲವೇ ಬಿಸಿಲ ರಾತ್ರಿಯಲ್ಲಿ ,ಚಳಿಯ ಮುಂಜಾನೆ ಸಂಘದಲ್ಲಿ
ನಿಶ್ಯಬ್ಧ ಕವಿತೆ ಬರೆಯಲು ಕಾಯುತ್ತಿದೆ…

ಕಷ್ಟವೋ,ಇಷ್ಟವೋ ಹೇಗೋ ತಡವರಿಸಿಕೊಂಡು
ಮತ್ತೊಂದು ಇನ್ನೊಂದಕ್ಕೆ ಕೇಳಿಸುವಂತೆ
ಮಾತಿನಲ್ಲಿ ಕೇಳೆಯೇ ಬಿಟ್ಟಿತು
ನಿಶ್ಯಬ್ಧ ಎಂದರೇನು?
ಹದಿನಾಲ್ಕು ಸಾಲಿ ಪದ್ಯವೇನು? ಅಥವಾ ದೀರ್ಘ ಗದ್ಯವೇನು
ನಿಶ್ಯಬ್ದದಲ್ಲಿ ಪದಗಳೆ ಇರುವುದಿಲ್ಲವಲ್ಲ
ವಾಚಾಳಿ ಮನಸಿಗೊಂದು ಮೌನ ತಂಗುದಾಣ…

ಪ್ರೀತಿಯನ್ನು ದ್ವೇಷಿಸುವುದಕ್ಕಾದರೂ
ಪ್ರೀತಿಸುವುದನ್ನು ಸುರು ಮಾಡಬೇಕಿದೆ
ದ್ವೇಷದ ಮೊದಲಹಂತವು ಪ್ರೀತಿ ಕೊನೆಯ ಹಂತವು ಪ್ರೀತಿಯೇ
ಅಸುಂದರ ಕಲ್ಪನೆಯಲ್ಲಿ ಎಲ್ಲವೂ ಸುಂದರವಾಗದು..

ಮಾತು ಭಾವನೆಯ ಪ್ರತಿರೂಪ
ಮೌನ ಅದರ ಆಳ
ಪ್ರೀತಿಸುವವರಿಗೆ ಮೌನವು ಅರ್ಥವಾಗುತ್ತದೆ
ದ್ವೇಷಿಸುವವರಿಗೆ ಮಾತು ಮೌನವಾಗುತ್ತದೆ
ಮನುಷ್ಯ ಕಂಡುಹಿಡಿದಿದ್ದು ಮಾತು
ಮನಸು ಕಂಡುಕೊಂಡಿದ್ದು ಮೌನ
ಹೀಗಾದರೆ ನಿಶ್ಯಬ್ದ ಕವಿತೆ ಬರೆಯುವುದು ಹೇಗೆ?
ಉತ್ತರ ಕಷ್ಟ ಸಾಧ್ಯ…

ಪದಗಳ ಹರಿದು ಬರಲಿಲ್ಲ ಭಾವನೆಯ ಖಾಲಿ ತೋಟಕ್ಕೆ
ಲೇಖನಿ ನಿರ್ಧರಿಸಿತು
ಕವಿತೆಯ ಸಹವಾಸ ಬೇಡವೆಂದು
ಮತ್ತೆ ನಿಶ್ಯಬ್ದವು ಗದ್ದಲವನು ಸೇರಿತು
ಕವಿತೆ ಅಲ್ಲಿಯೇ ಉಳಿಯಿತು….

-ವೃಶ್ಚಿಕ ಮುನಿ

ಗಜಲ್.

ಕರೆದಾಗಲೆಲ್ಲ ಕಣ್ಣ ಮುಂದೆ ಹಾಜರಿ ಹಾಕುತ್ತಿದ್ದೆ.
ನೆನೆದಾಗಲೆಲ್ಲ ಹೃದಯದಲಿ ನಿನಾದ ಹುಟ್ಟಿಸುತ್ತಿದ್ದೆ.

ಉಲಿದರೆ ಸಪ್ತ ಸ್ವರ ನಿನ್ನ ದನಿ ಅಂದವ ಎಲ್ಲಿರುವೆ.
ಮುಂಗುರುಳು ಕಂಡಾಗ ಮುಗುಳ್ನಗುತ್ತಾ ಬರ್ತಿದ್ದೆ.

ಅಳಬೇಡ ಕಣೆ ಎದೆ ಚೂರಾಗುವದು ಎನ್ನುವವ
ಕಣ್ಣ ಬಿಂಬದಲ್ಲಿ ನಿಲ್ಲದೆ ಹೊರಟು ಅದೆಲ್ಲಿ ಹೋದೆ.

ಹಳದಿ ನಿನ್ನಿಷ್ಟ ಅಂತ ತಂದು ಕೊಟ್ಟ ಮಾಯಗಾರನೆ
ಕೆನ್ನೆಯ ಕಣ್ಣೀರು ಜಾರುತಿಹುದು ಬಂದು ನೋಡಬಾರದೆ.

ಅಂದಿನ‌ ನಮ್ಮ ಸಂಭ್ರಮದ ಕ್ಷಣಗಳು ಮರಳಲಾರವೆ.
ಬಯಕೆ ಬಾಂದಳಕೆ ತೋರಣ ಕಟ್ಟಿ ಮರಳು ಮಾಡಿದೆ

ಅನುರಾಗದ ಹಾದಿಯಲ್ಲಿ ಮುಳ್ಳಾಗಿ ಬಿಟ್ಟೆಯಲ್ಲ
ಕ್ಷಮಿಸಲಾಗದ ತಪ್ಪು ಎಸಗಿ ಮೌನವಾಗಿ ಎದ್ದು ಹೋದೆ.

ಮರಳಿ ಗೂಡಿಗೆ ನೀ ಬಂದರೂ ನಿನ್ನಾಸೆಗಿಲ್ಲಿ ಜಯವಿಲ್ಲ.
ಬಾಳ ಏಂಜೆಲ್ ಎಂದು ಅಪ್ಪಿದವನೇ ಏಕೆ ಹೆಜ್ಜೆ ತಪ್ಪಿದೆ.

-ಜಯಶ್ರೀ.ಭ.ಭಂಡಾರಿ.

ಮಹದಾನಂದ

ಪ್ರಸವ ನೋವನ್ನು
ತಡೆಯದೆ ಕೂಗಿದೆನು,
ಹೌಹಾರಿದವಳಂತೆ
ಬೆಚ್ಚಿ ಬಿದ್ದೆ,
ಭುವಿಗೆ ಬಂದ
ನನ್ನ ಕಂದ,
ಆಹಾ….! ಏನು ಕಿರಿಕಿರಿ
ಜೀವ ಹೋಗಿ ಬಂದಂತಾಯಿತು…!

ವ್ಯಗ್ರ ಪ್ರಕ್ಷುಬ್ದ
ಪ್ರಮೇಯವಿದು,
ಹೆಣ್ಣಿನಂತರಾಳದ
ವೇದನೆಯಿದು,
ಅನುಭವಿಸಿದವಳಿಗೆ
ಗೊತ್ತು,
ಒಡಲ ಕಡಲಿನ ನೋವು…?

ಪ್ರತಿದಿನವು
ಕಂಪಿಸಿದ ಅನುಭವ
ಕಂದನ ಚಕ್ರದಾಟ,
ನನಗೋ ಒಳಗೆ ಸಂಕಟ
ದುಃಖ ಉದಧಿಯ
ನೀರಾಗಿ ತಾನೆ ಹರಿಯುತ್ತಿದೆ,
ಅನುಜನ ಕಿರಿಕಿರಿ
ತಡೆಯಲಾಗುತ್ತಿಲ್ಲ….!

ಹೆಣ್ಣು ಭ್ರೂಣವಾದರೆ
ಮತ್ತೊಂದು ಉದ್ವಿಗ್ನ ಸ್ಥಿತಿ,
ಗಂಡೆ ಬೇಕೆಂಬ ಅಭಿಪ್ಸೆ,
ಜಿಗುಪ್ಸೆಯ ಜಿಜ್ಞಾಸೆಯ
ಕುಲುಮೆಯಲಿ ಬೆಂದಿರುವೆ,
ದೇವಾ,,,,?

ನಿಂದನೆಯ ನುಡಿಯ ಸಹಿಸಿ
ತಾಯೆ,
ಕಿಲಕಿಲ ನಗುವ ಮಗುವ
ನೋಡುತ,
ಹರಿದಾಡುವಾಗ ಕಣ್ಣಿಗಾಗುವ
ಮಹದಾನಂದ ಅಷ್ಟಿಷ್ಟಲ್ಲ,
ಆಗ ಕಷ್ಟವಾದರೂ ಈಗ
ಸುಖತರುವೆಯಲ್ಲ,,

ಓ ಮುದ್ದು ಕಂದ
ನಿನ್ನಿಂದ ನನಗಾನಂದ…!!

ಶಂಕರಾನಂದ ಹೆಬ್ಬಾಳ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
shivaleela hunasagi
shivaleela hunasagi
2 years ago

ಧನ್ಯವಾದಗಳು ಪಂಜು ಕವಿತೆಯ ಪ್ರಕಟಿಸಿದ್ದಕ್ಕಾಗಿ..😍

1
0
Would love your thoughts, please comment.x
()
x