ಹೆಂಗಿದೀರಿ ಎಲ್ಲಾರೂ. ಈ ಕರೋನಾ ಅಂತ ಎಲ್ಲಾರೂ ಭೇಟಿ ಆಗೋದ ಕಡಿಮಿ ಆಗೇದಲ್ಲ. ಏನು ಮಾಡೋದು. ನಮ್ಮ ಪದ್ದಕ್ಕಜ್ಜಿನೂ ಹೀಂಗ ಒದ್ದಾಡತಾರ. “ಹೂಂ ರೀ, ಭಾಳ ದಿನಾ ಆಗಿತ್ತಲ್ಲ, ಪದ್ದಕ್ಕಜ್ಜಿ ಬಗ್ಗೆ ಮಾತನಾಡಿ. ಏನು ಮಾಡೋದು, ಕಾಲಮಾನ ಕೆಟ್ಟ ಕೂತಾವ, ಸುಟ್ಟ ಬರಲೀ, ಈ ಕರೋನಾದಿಂದ ಒಬ್ಬರಿಗೊಬ್ಬರು ಒಂದ ಊರಾಗ, ಒಂದ ರಸ್ತೆದಾಗ, ಆಜೂ ಬಾಜೂ ಮನಿಯೊಳಗಿದ್ದರೂನೂ ಸೈತೇಕ, ಅಮೇರಿಕಾ – ಆಸ್ಟ್ರೇಲಿಯಾದಾಗ ಇದ್ಧಂಗ ಕಂಪ್ಯೂಟರಿನ್ಯಾಗ ಮಾರಿ ನೋಡೋ ಹಂಗಾದೇದ “ ಅಂತಾರ ನಮ್ಮ ಪದ್ದಕ್ಕಜ್ಜಿ.
ನಿಮಗೆಲ್ಲಾರಿಗೂ ಗೊತ್ತ ಅದನಲ್ಲಾ, ನಮ್ಮ ಪದ್ದಕ್ಕಜ್ಜಿ ಅಂದರ, ಒಂದು ಕ್ಷಣಾನೂ ಸುಮ್ಮನ ಕೂಡೂದಿಲ್ಲ, ಸದಾ ಏನಾದರೊಂದು ಮಾಡತನ ಇರತಾರ. ಮಠ – ಗುಡಿ – ಭಜನಿ – ಸಮಾರಾಧನೆ ಅಂತ ಒಂದೇ ಒಂದು ದಿನಾನೂ ಮನ್ಯಾಗಿರದೇ, ದಿನಾ ಪೂರ್ತಿ ಚಟುವಟಿಕೆಯಿಂದ ಇರತಾರ. 75 ವರ್ಷಾದರೂ ಕಲ್ಲು ಖಣೀ ಆಗ್ಯಾರ. ಮಕ್ಕಳಿಬ್ಬರೂ, ಅಮೇರಿಕಾ – ಆಸ್ಟ್ರೇಲಿಯಾ ಅಂತ ವಿದೇಶವಾಸಿಗಳಾಗಿರೋದರಿಂದ, ಮತ್ತ ನಮ್ಮ ಪದ್ದಕ್ಕಜ್ಜಿ ಗಂಡನೂ, ಅಂದರ ನಮ್ಮ ರಾಯರೂ, ಪದ್ದಕ್ಕಜ್ಜಿಯ ಯಾವುದೇ ಕೆಲಸಕ್ಕೂ ಅಡ್ಡಿ ಬರದ ಪ್ರೋತ್ಸಾಹಿಸೋದರಿಂದ (ಅದು ಅನಿವಾರ್ಯ ಅನ್ನೋದು ನಮ್ಮ ರಾಯರಿಗೊಂದೇ ಗೊತ್ತು), ನಮ್ಮ ಪದ್ದಕ್ಕಜ್ಜಿ ಸೇವಾ ನಿರ್ವಿಘ್ನವಾಗಿ ನಡೆದಿರತಿದ್ದವು. ಆದರ, ಈ ಕರೋನಾ ಕಾಲದಾಗ, ದೇವರನ ಮಾರಿ ಮುಚಗೊಂಡು ಕೂತ ಹೊತ್ತಿನ್ಯಾಗ, ಭಜನಿ ಎಲ್ಲೆ, ಗುಡಿ ಎಲ್ಲೆ. ಪಾಪ, ಪದ್ದಕ್ಕಜ್ಜಿ ಕೈ ಕಟ್ಟಿ ಹಾಕಿದಂಗ, ಅಲ್ಲಲ್ಲ, ಕಾಲು ಕಟ್ಟಿ ಹಾಕಿದಂಗ ಆಗೇದ. ಏನ ಮಾಡತಾರ ಅವರರೆ ಪಾಪ.
ಆದರೂ ಎಷ್ಟು ದಿನಾಂತ ಹಿಂಗ ಸುಮ್ಮ ಕೂಡಲಿಕ್ಕಾಗತದ. ಅದೂ ನಾವು – ನೀವು ಹೆಂಗರ ಸುಮ್ಮ ಕೂಡಬಹುದು. ನಮ್ಮ ಪದ್ದಕ್ಕಜ್ಜಿ ಅಂತಹವರು, ಸದಾ ಸಮಾಜ ಮುಖಿಯಾಗಿದ್ದವರು, ಸುಮ್ಮನ ಕೂಡಲಿಕ್ಕಾಗತದ ? ಸಾಧ್ಯಾನೇ ಇಲ್ಲ. ಹಂಗರ ಇದಕ್ಕ ಏನರೇ ಒಂದು ಮಾಡಲೇ ಬೇಕಲ್ಲ. ನಮ್ಮ ಪದ್ದಕ್ಕಜ್ಜಿ, ತಮ್ಮ ಭಜನಾ ಮಂಡಳಿಯೊಳಗ ಎಲ್ಲಾರಿಗೂ ಫೋನು ಮಾಡಿದರು. ಪಾಪ, ಎಲ್ಲಾರೂ, ನಮ್ಮ ಪದ್ದಕ್ಕಜ್ಜಿ ಬಲವಂತಕ್ಕ ಭಜನಾ ಮಂಡಳಿ ಸದಸ್ಯರಾಗಿದ್ದರೋ ಏನೋ. ಮತ್ತ ಅವರು ನಮ್ಮ ಪದ್ದಕ್ಕಜ್ಜಿ ಹಂಗ ವಯಸ್ಸಾದವರು, ಮನಿಯೊಳಗ ಮಕ್ಕಳೆಲ್ಲಾ ಅವರನ್ನೂ ಕರೋನಾ ಅಂತ ಹೊರಗ ಭೇಟಿ ಆಗಲಿಕ್ಕೆ ಬಿಟ್ಟಿರಲಿಕ್ಕಿಲ್ಲ. ಅಂತೂ ನಮ್ಮ ಪದ್ದಕ್ಕಜ್ಜಿ ಒಬ್ಬರ ಕೂತಿರ ಬೇಕಾಗಿತ್ತು,
ಹಿಂಗಿಂಗ ಅಂತ ಇದ್ದಾಗ, ಒಮ್ಮೆ, ಮಗ ಪದ್ದಕ್ಕ್ಜಜ್ಜಿಗೆ, “ಅಮ್ಮ, ನಾಳೆ ಭಾನುವಾರ, ನಮಗ ಫೇಸ್ ಬುಕ್ ನೊಳಗ ಇವರು ಲೈವ್ ಬರಲಿಕ್ಕತ್ತಾರ. ಸೋ, ನಾವು ಆ ಕಾರ್ಯಕ್ರಮದೊಳಗ ಇರತೇವಿ, ನಿನ್ನ ಜೊತೆ ಮಾತಾಡಲಿಕ್ಕೆ ಆಗೂದಿಲ್ಲ.” ಅಂದ. ನಮ್ಮ ಪದ್ದಕ್ಕಜ್ಜಿ ತಲಿಯೊಳಗ ಒಂದು ಹೊಸಾ ಹುಳ ಹೊಕ್ಕಿತು. ಎರಡು ಮೂರು ದಿನ ಸ್ವಂತ ಹುಡುಕಿದರು, ಫೋನು ಮಾಡಿ ಯಾರ್ಯಾರನ್ನೋ ಕೇಳಿದರು, ಅಂತೂ ಕೊನೆಗೊಂದು ದಿನ, ತಮ್ಮ ಕಂಪ್ಯೂಟರ್ ನೊಳಗ ಗೂಗಲ್ ಮೀಟಿಂಗ್ ಅಂತ ಮಾಡಿ, ಭಜನಾ ಮಂಡಳಿಯ ಒಂದು ಹತ್ತು ಜನಾ ಎಲ್ಲಾ ಸೇರಿ ಮಾತಾಡಿ, ಹಂಗ ಕೂತರ ಆಗೂದಿಲ್ಲ, ಮತ್ತ, ಈ ಕರೋನಾ ಕಾಲದಾಗ, ನಾವೂ ಏನಾರೆ ಮಾಡಲೇಬೇಕು ಅಂತ ಮಾತಾಡಿದರು. ಕರೋನಾ ಕಾಲ ಅಂದರ, ಅದೂ ಒಂದು ಯುಗ ಇದ್ಧಂಗ, ಮುಗಿಯೋ ಲಕ್ಷಣ ಇಲ್ಲಾ ಅಂದುಕೊಂಡು ಹೊಸಾದೇನರ ಮಾಡಬೇಕು. ಮತ್ತ, ಈ ಫೇಸ್ ಬುಕ್ ಲೈವ್ ಅಂತ ಏನರ ಮಾಡಬೇಕು ಅಂದರು.
ಆತು, ನಿಮಗ ಗೊತ್ತ ಅದಲಾ, ಒಮ್ಮೆ ನಮ್ಮ ಪದ್ದಕ್ಕಜ್ಜಿ ತಲ್ಯಾಗ ಬಂದರ, ಅವರು ಬಿಡೂದನ ಇಲ್ಲಾಂತ. ಭಜನಾ ಮಂಡಳಿಯ ಒಳಗ ಸ್ವಲ್ಪ ಸಣ್ಣವರು, ಕಂಪ್ಯೂಟರ್ ಗೊತ್ತಿದ್ದ, ಭವಾನಿ ಮತ್ತ ಸುಲಭಾ ಗೆ ಹೇಳಿ ಒಂದು ಕಾರ್ಯಕ್ರಮ ಮಾಡಲಿಕ್ಕೆ ಹೇಳೇ ಬಿಟ್ಟರು. ಯಾರು ?, ಏನು ?, ಯಾವಾಗ ?, ಎಂಬ ಪ್ರಶ್ನಿ ಕೇಳದ ಪದ್ದಕ್ಕಜ್ಜಿ ಮಾತು ನಮಗ ತಿಳಿಯೂದಿಲ್ಲ ಬಿಡರಿ, ಅವರು ಒಂದು ಥರಾ ತ್ರಿಲೋಕ ಜ್ಞಾನಿಗಳಿದ್ದಂಗ. ಈಗನೂ ಹಂಗೇ ಆತು. ಕೊನೆಗೆ ಸುಲಭಾ ಫೇಸ್ ಬುಕ್ ನೋಡಿಕೊಳ್ಳೋದು, ಮತ್ತ ಭವಾನಿ ಗೂಗಲ್ ಮೀಟ್ ನೊಳಗ ಎಲ್ಲಾರನೂ ಎಡ್ಮಿಟ್ ಮಾಡಿಕೋತ ಕಾರ್ಯಕ್ರಮ ನಿರ್ವಹಿಸೋದು, ನಮ್ಮ ಪದ್ದಕ್ಕಜ್ಜಿನೇ ಒಂದು ಉಪನ್ಯಾಸ ಕೊಡೋದು ಅಂತ ಮಾತಾಡಿಕೊಂಡರು.
ಭವಾನಿಯವರು ಈ ಕಾರ್ಯಕ್ರಮಕ್ಕ ಪದ್ದಕ್ಕಜ್ಜಿ ಪ್ರವಚನ ಆನ್ ಫೇಸ್ ಬುಕ್ ಲೈವ್ ಅಂತ ಹಾಕಿದರು. ಎಲ್ಲಾ ಸದಸ್ಯರಿಗೂ ಲಿಂಕ್ ಕಳಿಸಿದರು. ಅವರೂ ಎಲ್ಲಾರೂ ತಮ್ಮ ತಮ್ಮ ಗೆಳತಿಯರಿಗೆ ಬಂಧುಗಳಿಗೆ ಹಂಗ ಹಂಗ ಪಾಸ್ ಮಾಡಿಕೋತ ಹೋದರು. ಅದು ಯಾವಾಗ ತಿರುಗಿ ತಿರುಗಿ ತಮಗ ಮತ್ತೊಬ್ಬರಿಂದ ಆ ಲಿಂಕ್ ವಾಪಸ್ ಬಂತೋ ಅಲ್ಲಿಗೆ ಈ ಪಾಸ್ ಮಾಡೋ ಕಾರ್ಯಕ್ರಮ ಮುಗದಂಗಾತು.
ಇನ್ನ ಮುಂದಿನ ವಿಷಯ, ಅಂದರ ನಮ್ಮ ಪದ್ದಕ್ಕಜ್ಜಿ, ಫೇಸ್ ಬುಕ್ ಲೈವ್ ನೊಳಗ ಯಾವ ವಿಷಯದ ಬಗ್ಗೆ ಪ್ರವಚನ ಕೊಡಬೇಕು ಅಂತ. ಆದರ ಅದೇನು ದೊಡ್ಡದಲ್ಲ. ನಮ್ಮ ಪದ್ದಕ್ಕಜ್ಜಿ ಮಾತಿನ ಮಹಿಮೆ ಎಲ್ಲಾರಿಗೂ ತಿಳಿದದ್ದೇ ಅದ. ಅವರು ಫೋನಿನೊಳಗ ಮಿಸ್ ಕಾಲ್ ಬಂದರೆ ಕನಿಷ್ಠ ಮುಕ್ಕಾಲು ತಾಸು ಮಾತಾಡತಾರ. ಆದರೆ, ಈಗ ಪ್ರಾಸಕ್ಕಾಗಿ ಪದ್ದಕ್ಕಜ್ಜಿ ಪ್ರವಚನ ಫೆಸ್ ಬುಕ್ ಲೈವ್ ಅಂತ ಹಾಕಿರೋದರಿಂದ, ದೇವರ ಬಗ್ಗೇನ ಆಗಬೇಕು. ಪ್ರವಚನ ಅಂದುಕೊಂಡರೂ, ಇದು ಇವತ್ತಿಗೆ ನಿಲ್ಲಬಾರದು, ಮುಂದುವರಿಯಲೇ ಬೇಕು, ಹಿಂಗೆಲ್ಲಾ ವಿಚಾರ ಮಾಡಿ, ಪದ್ದಕ್ಕಜ್ಜಿ ತಮ್ಮ ಹರಿಕಥಾಮೃತಸಾರದ ಬತ್ತಳಿಕೆ ಹೊರಗ ತಗದರು.
ಇಷ್ಟೆಲ್ಲಾ ಆದರೂ ಈ ವಿಷಯ, ನಮ್ಮ ಪದ್ದಕ್ಕಜ್ಜಿ ಗಂಡಗ, ಅಂದರ ನಮ್ಮ ರಾಯರಿಗೆ ಗೊತ್ತಿರಲಿಲ್ಲ. ಅದರ ಅವಶ್ಯಕತಾನೂ ಇರಲಿಲ್ಲ ಬಿಡರಿ. ಇನ್ನ ನಾಳೆ ಕಾರ್ಯಕ್ರಮ ಅಂದಾಗ, ರಾತ್ರಿ, ಪದ್ದಕ್ಕಜ್ಜಿ ರಾಯರಿಗೆ ಥಣ್ಣಗ ಹೇಳಿದರು, ಅಂದರ, ಒಂದು ಬಾಂಬ್ ಹಾಕಿದರು. “ನಾಳೆ ನಾನು ಫೇಸ್ ಬುಕ್ ಲೈವ್ ಬರಲಿಕ್ಕತ್ತೇನಿ”. ನಮ್ಮ ರಾಯರಿಗೆ ಬಾಂಬ್ ಏನೂ ಪರಿಣಾಮ ಮಾಡಲಿಲ್ಲ, ಯಾಕಂದರ, ಹಿಂದೆಲ್ಲಾ ಇಂತಹಾ ಬಾಂಬ್ ಬಿದ್ದಾಗ, ಮೈಲ್ಡ ಹಾರ್ಟ ಅಟ್ಯಾಕ್ ಆಗಿದ್ದು ಅನುಭವ ಇತ್ತು. ಸಣ್ಣಕ ಹೂಂ ಅಂದರು. ನಮ್ಮ ಪದ್ದಕ್ಕಜ್ಜಿ ಫೇಸ್ ಬುಕ್ ಲೈವ್ ಅಂದರ ಗೊತ್ತದ ಅಲ್ಲ ಅಂದರು ಪದ್ದಕ್ಕಜ್ಜಿ, ಮೂವತ್ತು ವರ್ಷ ಟೆಲಿಕಮ್ಯೂನಿಕೇಶನ್ ಪಾಠ ಮಾಡಿದವರಿಗೆ ಕೇಳಿದರು ಪದ್ದಕ್ಕಜ್ಜಿ, ರಾಯರು ಅದಕ್ಕೂ ಸಣ್ಣಕ ಹೂಂ ಅಂದರು.
ಇನ್ನ ಮುಂದಿಂದೆಲ್ಲಾ ಇತಿಹಾಸ. ಪದ್ದಕ್ಕಜ್ಜಿ ಸಮಯಕ್ಕ ಸರಿಯಾಗಿ ಫೇಸ್ ಬುಕ್ ಲೈವ್ ಬಂದರು. ಗೂಗಲ್ ಮೀಟ್ ಕೂಡಾ ಇತ್ತು. ಭವಾನಿಯವರು ಸ್ವಾಗತಿಸಿದರು. ಸುಲಭಾ ಬಂದವರನ್ನೆಲ್ಲಾ ಎಡ್ಮಿಟ್ ಮಾಡಿಕೊಂಡರು. ಪದ್ದಕ್ಕಜ್ಜಿ ಹರಿಕಥಾಮೃತ ಸಾರದ ಮೊದಲ ಅಧ್ಯಾಯವನ್ನು ಹೇಳಿದರು. ಅದರ ಅರ್ಥವ್ಯಾಪ್ತಿಯನ್ನೂ ಹೇಳಿದರು, ಜಗನ್ನಾಥ ದಾಸರ ಬಗ್ಗೇನೂ ಹೇಳಿದರು. ಭಾಮಿನಿ ಷಟ್ಪದಿ ಬಗ್ಗೆನೂ ಹೇಳಿದರು. ಒಂದು ಹಂತದಲ್ಲಿ ಫೇಸ್ ಬುಕ್ ನಲ್ಲಿ 70 ಜನ ಸೇರಿದ್ರು. ಎಷ್ಟೋ ಜನ ಕಾಮೆಂಟ್ ಹಾಕಿದ್ರು. ಅಂತಾ ಕಾಮೆಂಟ್ ನೊಳಗ ಭಾಳ ಜನ ಕೇಳಿದ್ದು, ಭಾಳ ಚಂದಿತ್ತು ಪ್ರವಚನ, ಮುಂದಿನ ಪ್ರವಚನ ಯಾವಾಗ ನನಗ ಹೇಳರಿ. ಅಂತ ನಾಲ್ಕಾರು ಪುಸ್ತಕ ಓದಿ, ಅರ್ಥ ಬರದುಕೊಂಡು, ಅವನ್ನೆಲ್ಲಾ ಒಂದುಗೂಡಿಸಿ, ಚಂದದ ಮಾಹಿತಿ ತಯಾರು ಮಾಡಿ, ಅದನ್ನ ಹೇಳೋದದ ಅಲ್ಲಾ ಅದೇನು ಸರಳ ಅಲ್ಲ, ಸುಲಭ ಅಲ್ಲ. ನಮ್ಮ ಪದ್ದಕ್ಕಜ್ಜಿ ಅಂದರೂನು ಸರಳ ಅಲ್ಲ, ಸುಲಭ ಅಲ್ಲ.
ಬಿಡಿ ಬಿಡಿ, ನಿಮಗ ಅರ್ಥ ಆಗಬೇಕಂದರ, ಮುಂದಿನ ಪ್ರವಚನ ಯಾವಾಗ ಅಂತ ಹೇಳತೇನಿ ನೀವೂ ಬರ್ರಿ. ಅಷ್ಟ ಮಾತ್ರ ನಾ ಹೇಳಬಲ್ಲೆ. ಈಗ ಹೋಗಿ ಬರತೇನಿ. ಹೆಂಗೂ ಮುಂದ ಸಿಕ್ಕ ಸಿಗತೀರಲ್ಲಾ.
-ಡಾ. ವೃಂದಾ. ಸಂಗಮ್
ತುಂಬಾ ಚೆನ್ನಾಗಿದೆ ಪದ್ದಕ್ಕಜ್ಜಿ ಕಥೆ, ಆದು ಭಾಷೆಯ ಸೊಗಡಿನಲ್ಲಿ ಸೊಗಸಾದ ಲೇಖನ. ಹೃದಯಪೂರ್ವಕ ಅಭಿನಂದನೆಗಳು Dr.ವೃಂದಾ ಅವರಿಗೆ. ಇನ್ನಷ್ಟು ಲೇಖನಗಳು ಮೂಡಿ ಬರಲಿ ನಿಮ್ಮ ಲೇಖನಿಯಿಂದ.
ಚೆನ್ನಾಗಿದೆ
ಡಾ. ವೃಂದಾ ಸಂಗಮ ಇವರ ಪದ್ದಕ್ಕಜ್ಜಿಯ ಕಥೆ ಮನಮುಟ್ಟುವಂತೆ ಬರೆದಿದ್ದಾರೆ. ವೃದ್ಧಾಪ್ಯದಲ್ಲೂ ತಮ್ಮನ್ನು ತಾವು ಜ್ಞಾನವನ್ನು ಸಮಾನಮನಸ್ಕರೊಂದಿಗೆ ಹಂಚಿಕೊಳ್ಳಲು ಚಾಲ್ತಿಯಲ್ಲಿರುವ ಮಾಧ್ಯಮ ಉಪಯೋಗ ಮಾಡಿ ಅದರಲ್ ಲ್ಲಿ ಆಸಕ್ತಿ ಹುಟ್ಟಿಸುವ ರೀತಿ ಶ್ಲಾಘನೀಯ.