ಉತ್ತರ
ದಶಶಿರನಹಂಕಾರ ಮುರಿದು ಮಣ್ಣಾಗುವ ಘಳಿಗೆ
ಹೆಬ್ಬಾಣವ ಹೂಡಿ ರಾಘವನು ಹೂಂಕರಿಸಿದ ಪರಿಗೆ
ಅಂತರಿಕ್ಷ ಈಗ ಅಕ್ಷರಶಃ ಸ್ತಬ್ಧ
ಮಂಡೋದರಿಯ ಎದೆಯಲನಲ ಅಬ್ಬರಿಸಿ ದಗ್ದ…
ಜನಕನಂಗಳದಲಿ ಏಕೋ ನರಳುತಿದೆ ಪಾರಿಜಾತ
ನಡೆಯುವದ ನೆನೆಸಿ ನಡುಗಿದನೆ ಆ ಜಾತವೇದ?
ಮೌನವಾಗಿದೆ ಅಂಬುಧಿ ಅಂಬುಗಳ ಒಳಗಿಳಿಸಿ
ಮೂಡಣದ ಕಣ್ಣಂಚ ಹನಿ ಎದೆಯಾಳಕಿಳಿಸಿ….
ಅದೋ ಉರುಳಿದೆ ವಿಪ್ರ ಶ್ರೇಷ್ಠನ ಶೀರ್ಷ
ಒಂದಲ್ಲ ಎರಡಲ್ಲ ಸರಿಯಾಗಿ ಹತ್ತು
ಹರಿತ ರಾಮನ ಶರಕೆ ಶರಣಾದ ರಾವಣನ
ಇಪ್ಪತ್ತು ಕಣ್ಣುಗಳಲ್ಲೂ ಗತ್ತೋ ಗತ್ತು….
ಮೆಲ್ಲ ಮೆಲ್ಲನೆ ಅಡಿಯಿಟ್ಟು ಬಂದಳಾ ಸುಮಬಾಲೆ
ಕಣ್ಣಲ್ಲಿ ನೂರಾರು ಹೊಂಗನಸ ಮಾಲೆ
ನಗುಮುಖದ ಒಡೆಯ ಎದುರುಗೊಳ್ಳಲೆ ಇಲ್ಲ
ತೋಳ್ತೆರೆದು ಜಾನಕಿಯ ಬಳಸಲಿಲ್ಲ…
ಸಹಸ್ರ ಕಪಿಗಳ ಸೈನ್ಯ ಕಣ್ಮುಂದೆ ಇದ್ದರೂ
ಕೊಂಚವಾದರೂ ಚೇಷ್ಟೆ ಕಾಣಲಿಲ್ಲ
ತಲೆತಗ್ಗಿಸಿದ ತಮ್ಮ ಸಿದ್ಧ ಮಾಡಿದ ಕುಂಡ
ಒಣಗಿರುವ ಸೌದೆ ಸುಲಭ ಸಿಗಲಿಲ್ಲ
ಆಜ್ಞೆ ಬೇಕಿರಲಿಲ್ಲ ಆಣತಿ ಬೇಕಿರಲಿಲ್ಲ
ಕಣ್ ಸನ್ನೆಯಲೆ ಅನುಮತಿಯ ಪಡೆದಳವಳು
ಕುಂಡದಲಿ ಆಡಿಯಿಟ್ಟು ನಿಂತಳವಳು
ಅಗ್ನಿ ದೇವನ ಪ್ರಾರ್ಥಿಸುತ್ತಾ ಕೈ ಮುಗಿದಳವಳು
ಧಗ ಧಗನೆ ಧಗ ಧಗನೆ ಉರಿದ ಕುಂಡದೊಡಲು
ಬಿಸಿಯಾಯಿತು ಸುತ್ತಲಿನ ಅಗಾಧ ಕಡಲು
ಅವನಿಜೆಯ ತುಟಿಯಲ್ಲಿ ಬಿರಿದ ಮಂದಹಾಸ
ಅಶುದ್ಧ ಲೋಕದ ಪ್ರಶ್ನೆಗಳಿಗೆ ಶುದ್ಧ ಉತ್ತರ ಸಿಕ್ಕಂತ ನಿಮಿಷ
-ಸುಮತಿ ಕೃಷ್ಣಮೂರ್ತಿ
ಅತಿಥಿ
ಅತಿಥಿ ಜೀವಿತಂ ಮರೀಚಿಕೆಯ ಮನಸೇ
ನೀನು ಬಯಸದೆ ಬಂದ ಭಾಗ್ಯ ವಿಧಾತ
ಎಂದಾರೊಂದೂ ದಿನ ಸೇರಬೇಕಲ್ಲವೇ
ಮನಮನ ಸೇರುವ ವಿನೂತನ ವಿಭ್ರಾಂತ
ನಿನ್ನ ಕರೆದರು ಕರೆಯದೆ ಇದ್ದರೂ
ಬಂದೆ ಬರುವೆ ಅನವರತ ಹೇಗೆಂದು
ತಿಳಿಯದು ಹೀಗೆ ಹೀಗೆ ಎಂದು
ಬಿಡಿಸಿ ಹೇಳಲಾಗದು ಮನದ ಹಲವು ಬಯಕೆ
ಕಷ್ಟದಲ್ಲಿದ್ದಾಗಲೆಲ್ಲ ಚಿಂತೆಗಳಾವರಿಸಿದಾಗಲೆಲ್ಲ
ನೋವು ನಲಿವುಗಳಿದ್ದಾಗೆಲ್ಲ ಬಂದೆ ಬರುವೆ
ಹೇ ಅತಿಥಿ ಗೋವಿಂದ ಅವಶ್ಯವಾಗಿ
ದೊರಕಿಕೊಂಡೆ ನೋಡು ಎಲ್ಲ ಸಮಯಕ್ಕೂ
ಮನದ ಪ್ರೀತಿಗೂ ಪ್ರೇಮಕ್ಕೂ ಸ್ನೇಹಕ್ಕೂ ಸೋದರತೆಗೂ
ಅಕ್ಷಯಂಬರಕ್ಕೂ ಅಕ್ಷಯಪಾತ್ರೆಯ ಅಗುಳಿಗೂ
ಮನದ ಬಯಕೆಯ ಹೇಳೆನಲು ಮರವನೇರಿದ ಹಣ್ಣು
ಆರನೆಯವನು ಇರಲಿ ನನಗೆ ಗೋವಿಂದ
ಎಂದಳು ಭೇದವರಿಯದ ದ್ರುಪದ ಸತಿ
ಹಾಗಾಗಿ ಸದಾ ನೀನು ನನಗೆ ಅತಿಥಿ
ಜಗದಲ್ಲಿ ಎಲ್ಲಾರಿಗೂ ಒಂದು ಬಗೆಯ ಜೀವನವಿದೆ
ನಿಜ ! ಆದರೆ ಇದು ವಿಶೇಷ
ಮಥುರೆಯ ಮಧುರಾಧಿಪತಿ ಈ ಆದರಗಳು ನಿನಗೆ
ಜನಪ್ರಿಯ ವಿಚಿತ್ರ ಕೀರ್ತಿಗಳ ಹೊರದೂಡಿದರು
ಮತ್ತೆಮತ್ತೆ ಒಲ್ಲದೆ ತಾಕುವ ರೀತಿ ಇದು
ನಿನ್ನನ್ನು ಅತಿಥಿಯಾಗಿಸಿದ ಭವ ಜೀವನ
ಸಾರ್ಥಕವಿದು ನೀ ಬಂದ ಲೇಸೆನಗಿರಲಿ
ಬಾರದಿರುವುದ ಚಿಂತಿಸುವುದು ಬೇಡ
ಬರುವ ಕಾಲಕೆ ಬಂದು ಕೂಡು ಸರ್ವಾಂಗ ಸುಂದರ
ಜಾತಿ ಮತ ಧರ್ಮ ಭಾಷೆಗಳಾಚೆ ಉತ್ತುಂಗವೀಚಿಗಳ ಆಚೀಚೆ
ನಿನ್ನೇನ್ನ ಬಂದು ಸೇರು ಸಂತೋಷ !
–ಸಂತೋಷ್ ಟಿ
ಬಡತನ
ಬಡತನವೆಂಬುದು ಮಾನವ
ನೊಡಲೊಳು ಕರುಳನು ಹಿಂಡುವ ಪರಿಯದು, ರಾಕ್ಷಸಿ
ಇಡಿಯನ್ನ ಉಣಲು ನಾನಾ
ಪಾಡುಪಡುವವರ ಶಿವನೆಂತು ಕಾಯುವ ಹರಸಿ. . ?
ಉಡಲೊಂದು ಬಟ್ಪೆ ಇಲ್ಲದೆ
ಸುಡುಸುಡುವಬಿಸಿಲೊಳು ಕೊರೆವಚಳಿಯೊಳು ಗಡಗಡ
ನಡುಗುವನು ಬಡವನಲ್ಲದೆ
ಉಡಲಿದ್ದು ಉಡದವನ ಬಡವನೆಂಬರೆ ಮೂಢ. . ?
ಕಾಂಚಾಣವೆಂಬ ಲಕುಮಿಯ
ಹಂಚಿಕೊಳಲಾಗದೆ ಸಮದಿ, ಸರ್ವರ ಬುದ್ಧಿಯ
ಚಂಚಲದಿ ಕುಣಿಸೆ ಲಕುಮಿಯು,
ಸಿಂಚನವಾಗಿ ಹರಿದು ಸಿಗಿದಳು ಬಡವರೆದೆಯ
-ಪ್ರಜ್ವಲ್ . ಎಸ್. ಜಿ
ಅಳಲು
ಕಾಡೆಂಬುದಿಂದು ನಾಡಾಗುತಿರಲು
ಹೆಚ್ಚುತಿದೆ ಭುವಿಯ ಅಳಲು
ಬೇಡದ ಹೊಲಸು ತುಂಬಿರಲು
ಗ್ರಹವಾಗಿದೆ ಕಸದ ಬಟ್ಟಲು
ಎಲ್ಲೆಡೆ ಬರಿಯ ಕರ್ಕಶ ಧ್ವನಿ
ಅಗ್ನಿಯಲಿ ಸುಡುತಿದೆ ಅವನಿ
ಹಿನಿಯ ನೀರಿಗಾಗಿಂದು ಕಂಬನಿ
ಎಲ್ಲವೂ ಬರಿದಾಗುತಿದೆ ಜನನಿ
ಶುದ್ಧ ಆಹಾರವಿಲ್ಲಿ ಸಿಗದಾಗಿ
ಮನುಜನಾಗಿರುವ ಬಲು ರೋಗಿ
ವಿಷವರ್ತುಲದಿ ಸಿಲುಕಿ ಸೊರಗಿ
ಕೊನೆಯಾಗುತಿಹ ಮೆಲ್ಲನೆ ಕರಗಿ
ಮರಳುವ ಮತ್ತೆ ಹಸಿರ ಬಳಿಗೆ
ಬರದಂತೆ ತಡೆಯಲು ವಿಷಮ ಘಳಿಗೆ
ಭುವಿಯ ಸಲಹುವ ಈ ಬಗೆ
ಅರಿತರೆ ನಗು ನಮ್ಮ ನಾಳೆಗೆ
-ನಿರಂಜನ ಕೆ ನಾಯಕ
ಗಜಲ್
ತಕ್ಕಡಿ ಹಿಡಿದು ಬಂದವರೆಲ್ಲ
ಸರಿಯಾಗಿ ತೂಗುವರೆಂದು ನಂಬಿದ್ದು ನಿನ್ನದೆ ತಪ್ಪು
ಕರಿಕೋಟು ಖಾಕಿ ಬಟ್ಟೆ ಹಾಕಿದವರೆಲ್ಲ ನ್ಯಾಯವನ್ನೆ
ಕಾಪಾಡುವರೆಂದು ನಂಬಿದ್ದು ನಿನ್ನದೆ ತಪ್ಪು
ದೇಶಕ್ಕೆ ಸಂವಿಧಾನ ಒಂದೇ, ನಾಗರಿಕರು
ಅದರಂತೆ ಬದುಕುತ್ತಾರೆಂದು ನಂಬಿದ್ದು ನಿನ್ನದೆ ತಪ್ಪು
ಇಲ್ಲಿ ಧರ್ಮಗಳನು ದ್ವೇಷಗಳನು ಬೆಳೆಸುತ್ತಿದ್ದೇವೆ
ಮನುಷ್ಯನನ್ನು ಬೆಳೆಸಲಾರದ್ದು ನಿನ್ನದೆ ತಪ್ಪು
ವರ್ತಕರು ಬಂದಿದ್ದಾರೆ ಮೋಹಭತ್ತಿನ ದುಕಾನ ತೆರೆಯಲು ನಾಡಿಗೆ
ಜೋಳಿಗೆ ಕೊಂಡೊಯ್ಯಲಾರದ್ದು ನಿನ್ನದೆ ತಪ್ಪು
ಒಂದೊಂದು ಪಕ್ಷದ್ದು ಒಂದೊಂದು ತತ್ವ ಸಿದ್ಧಾಂತ
ಈ ನೆಲದ ತತ್ವಸಿದ್ಧಾಂತ ಮರೆತು ಹೊರಳಾಡಿದ್ದು ನಿನ್ನದೆ ತಪ್ಪು
ಬಣ್ಣಗಳಿಂದ ಕಲಹ ಹುಟ್ಟಿವೆ ದೇಶದಲ್ಲಿ,
ಮನಸ್ಸಿನಲ್ಲಿ ಮತ್ಸರ ಬೆಳೆಯಲು ಬಿಟ್ಟಿದ್ದು ನಿನ್ನದೆ ತಪ್ಪು
“370”ತೆಗೆದಾಗಿನಿಂದ ತಕ್ಕಡಿ ತೂಗುತ್ತಿದೆ ಸಮಾನಾಂತರ
ಈ ತೂಕ ಹಮೇಷ ಇರುವುದೆಂದು; ನಂಬಿದ್ದು ನಿನ್ನದೆ ತಪ್ಪು
“ಜೊನ್ನವ” ಈ ಹಗಲಿನಲ್ಲಿ ನಿನ್ನ ನೀನು ಕಳೆದುಕೊಂಡು
ನಡುರಾತ್ರಿಯಲ್ಲಿ ಹುಡುಕ ಹೊರಟಿದ್ದು ನಿನ್ನದೆ ತಪ್ಪು
–ಜೊನ್ನವ (ಪರಶುರಾಮ್ ಎಸ್ ನಾಗುರ್)
ಕನಸು
ನೂರಾರು ಹೊಸ ಕನಸು ಮುಂಜಾನೆ ಏಳುವ ಮುನ್ನ
ಎಲ್ಲಾ ಕನಸು ನನಸಾಗಬೇಕೆಂಬ ಆಸೆ ಈಡೇರುವ ಮುನ್ನ
ನೂರಾರು ಕನಸು ಒಡೆದು ಹೋದ ಮನಸ್ಸು
ಕೆಲವೊಂದು ಸಿಹಿ
ಕೆಲವೊಂದು ಕಹಿ
ಕನಸನ್ನು ಕೊಲ್ಲಬೇಡ ನನಸಾಗುವ ಮುನ್ನ
ಕನಸು ಸವಿದಷ್ಟು ರುಚಿ
ಜೇನಿನ ತುಪ್ಪದಂತೆ
ಸಿಹಿ ಕಹಿ ಕ್ಷಣಗಳು ಬಾಳಲ್ಲಿ ಎದುರಾಗಿದೆ
ಕತ್ತಲಲ್ಲಿ ಕಂಡ ಕನಸು ಎಷ್ಟು ಸಿಹಿಯಾಗಿತ್ತು
ಬೆಳಕು ಹರಿದಮೇಲೆ ಅದು ನುಚ್ಚುನೂರಾಯ್ತು
-ಶಶಾಂಕ್. ಎಮ್. ಗಂಗೊಳ್ಳಿ
ತಟಸ್ಥ
ಕಡಲ ತೀರದಲ್ಲಿರುವ ಅದು
ದೂರದಿಂದಲಷ್ಟೇ ಚಂದ
ಇದ್ದರೂ ಇರಬಹುದು
ಅದರೊಡಲೊಳಗೂ
ಮುಗಿಯದ, ಅರುಹದ ಅದೆಷ್ಟೋ ಭಾವನೆಗಳು
ವಿಹರಿಸದೇ, ವಿರಮಿಸಿದ
ತನ್ನೊಳಗೇ ಪಯಣಿಸುತ್ತಿಹ
ಸುಪ್ತ ಆಲೋಚನೆಗಳು. . . .
ಪರಿಚಿತರ ಪ್ರೇಮ ನಿವೇದನೆಯ
ಸಲುಗೆಯ ಪರಿಯಾ
ವಿರಹ ವೇದನೆಯ
ಅಳಿಸಲಾರದ ನೋವ,
ನೊಂದು ಮತ್ತೇ ಒಂದಾದ
ಜೋಡಿಯ ಕಥೆಯ,
ಜಗವನ್ನೆದುರಿಸಲಾರದೆ ತಳಮಳಿಸುವ
ತಲ್ಲಣಗಳ ತಿಳಿಸಿರಲುಬಹುದು ಅದಕ್ಕೂ. . . .
ಆದರೆ ಅದು ಮಾತ್ರ ತಟಸ್ಥ!
ಥೇಟ್ ಮೌನ ಧ್ಯಾನಸ್ಥನಂತೆ. . . .
ಅಪ್ಪಿಕೊಂಡರೆಂಬ ಮೋಹವು ಇಲ್ಲ
ಬಿಚ್ಚಿ ಹೇಳಿದರೆಂಬ ಮಮಕಾರವೂ ಇಲ್ಲ
ಏನೇ ಗೀಚಿದರು ಮುನಿಸಿಕೊಳ್ಳುವುದಿಲ್ಲ
ಕೆತ್ತಿ ಗಾಯ ಮಾಡಿದರೂ
ಕತ್ತಲ್ಲಾಡಿಸುವುದಿಲ್ಲ. . . .
ಅದಾರೋ ಮುಗುಳ್ನಕ್ಕ ನಗೆಗೆ
ಮೂಕ ಸಾಕ್ಷಿಯಾಗುವುದೇನೋ!?. .
ಮತ್ತಾರೋ ಸುರಿಸಿದ ಕಣ್ಣೀರಿಗೆ
ಸಾಂತ್ವನದ ಮಾತೃತ್ವ ತೋರಿಸಿ
ತೋಯಿಸಿಕೊಳ್ಳದ ಸೆರಗಾಗುವುದಷ್ಟೆ!
ಮತ್ತೆಲ್ಲವನ್ನೂ ತನ್ನೊಡಲೊಳಗೇ ಬಚ್ಚಿಟ್ಟುಕೊಂಡ
ಆ ಕಲ್ಲು ಬಂಡೆ ತಟಸ್ಥವಾಗಿಯೆ ಉಳಿಯುವುದು!.
-ಸರೋಜಾ ಎಸ್. ಅಮಾತಿ
ಬದುಕೊಳಗೆ
ಬದುಕೊಳಗೆ ನೂರು ಪುಟಗಳು
ನಮ್ಮದೇ ಮಾತು ಕತೆ
ಆಪ್ತತೆ ಅನುಬಂಧ ಸಂಬಂಧ
ಹೀಗೆ ಎಲ್ಲವೂ ಪೋಣಿಸಿದ
ಸಾಲುಗಳು ನಮ್ಮವೇ. . . . .
ಬರೆದಷ್ಟು ಹಗುರ ಓದಿದಷ್ಟು ಭಾರ
ಮುಖದ ಮನಸಿನ ಭಾವ
ನಗು ಅಳುವಿನ ಬಿಂಬ
ಅಳುವಿನಲ್ಲಿ ಅಡಗಿದೆ ನೋವು ಕನವರಿಕೆ. . . . . .
ನಮ್ಮದೆನ್ನುವ ಉಸಿರು
ದೇಹವಿರುವವರೆಗೆ ಬುವಿಯೊಳು
ಸರಿ ತಪ್ಪು ಮನದ ನಿರ್ಧಾರ
ಒಪ್ಪಿ ಬಾಳುವುದು ಮನುಜ ಸಂಸಾರ. . . . . .
ಬಾಳಿದರೂ ಬದುಕಿದರೂ
ಸಾಗೀತು ನಮ್ಮದೆನ್ನುವಂತೆ
ತಕ್ಕಡಿಯ ತೂಗಿದಂತೆ ಸಂತಸ ದು:ಖ
ಒಮ್ಮೆ ಈ ಕಡೆ ಒಮ್ಮೆ ಆ ಕಡೆ. . . . .
ಏರಿಳಿತ ಕಡಲ ತೆರೆಗಳಂತೆ
ಜೀವನದ ಕಥೆ ತಿರುಗಿದಂತೆ
ಚಕ್ರ ಸುತ್ತುವುದು ಮೌನ
ಉಸಿರು ಮುಗಿಯುವವರೆಗೂ. . . . .
ಬದುಕು ಸಾಗುವುದು ಹೀಗೆ
ಒಂದು ಗುರುತಾಗಿ ನೆಲೆಯಾಗಿ
ಆಪ್ತವಾಗಿ ಬದುಕು ಇರುವಂತೆ
ಸತ್ಯದ ದಾರಿಯ ತೋರುವಂತೆ. . . . .
-ನಾಗರಾಜ ಬಿ. ನಾಯ್ಕ
ಶಾಯಿರಿ
ನಾನೆಷ್ಟೇ ಬೇಡಿಕೊಂಡ್ರೂ ನನ್ನ ಮನಸು
ಅವ್ಳಿಗೆ ಅರ್ಥಾನ ಆಗಲಿಲ್ಲ
ನನ್ನ ಮನಸಿನ ನೋವಂತೂ
ಅಕೀಗೆ ಗೊತ್ತಾಗ್ಲೇ ಇಲ್ಲ!
ಸತ್ತಮ್ಯಾಲೂ ನಾವು ನೆನಪಾಗಿ ಉಳಿತೀವಿ
ಅಂತ ಬಾಳಮಂದಿ ಅಂತಾರ
ಆದ್ರ, ಬದುಕಿದ್ದಾಗ ಅಕಿ ನನ್ನ ಪ್ರೀತೀನ
ಅರ್ಥಾನ ಮಾಡಿಕೊಳ್ಳಲಿಲ್ಲ!!
ಶಾಯಿರಿ
ಆಕಿ ಕೆಂಪನ್ನ ತುಟಿಗೆ ಮುತ್ತಿಟ್ಟಾಗ
ಅವಂಗ ಹಿಂಗ ಅನ್ನಸ್ತು!
ಇನ್ನ ಮ್ಯಾಲೆ ನೀರಡಿಕಿ ಆದಾಗ ನೀರ ಬ್ಯಾಡ
ಬರೀ ಅಕಿ ತುಟೀನ ಬೇಕ ಅನ್ನಸ್ತು!!
ಶಾಯಿರಿ
ನಿನ್ನಿಂದಲೇ ಪ್ರತಿ ಮುಂಜಾನೆಯಾಗಿದೆ ನನಗೆ
ನಿನ್ನಿಂದಲೇ ಪ್ರತಿ ಸಂಜೆಯೂ ಆಗಿದೆ !!
ನಿನಗೂ ನನಗೂ ಎಂಥಾ ನಂಟ ಆಗೇತಂದ್ರ
ನನ್ನ ಪ್ರತಿ ಉಸಿರನ್ಯಾಗೂ ನಿಂದ ಹೆಸರೈತಿ!!
ಶಾಯಿರಿ
ನಿನ್ನ ಸಹವಾಸ ಮಾಡಿ ನಿನ್ನ ಮ್ಯಾಲೆ ಮನಸಾಗೇತಿ
ನಿನ್ನ ಕೂಡ ಮಾತಾಡೂದು ಚಟ ಆಗಿ ಹೋಗೈತಿ!
ಒಂದ ಕ್ಷಣ ನೀ ಕಾಣಲಿಲ್ಲಾಂದ್ರ ಜೀವ ಚಡಪಡಸತೈತಿ
ಮೊದ ಮೊದ್ಲ ಸ್ನೇಹ ಆಗಿದ್ದು ಈಗೀಗ ಪ್ರೀತಿಯಾಗೇತಿ!!
-ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
ಹೆತ್ತವ್ವ
ಮಗಲಲ್ಲಿ ಮಲಗಿದ ಹಗಲಲ್ಲಿ ಗುನುಗಿದ
ಜಂಗಮವಾಣಿ ಹಾಗೆ ನನ್ನವ್ವ
ತಾನೇಳುವ ಮೊದಲು ಎಚ್ಚರವಾಗಿ ತನ್ನನ್ನು
ಬೇಗನೆ ಎಬ್ಬಿಸಿಡುವಳು ನನ್ನ ಹೆತ್ತವ್ವ
ಮಾಂಸ ಮುದ್ದೆಯನ್ನು ಸಿಂಗರಿಸಿ
ಅಂಗಾಂಗಕ್ಕೆ ರಕ್ತವ ಸಂಚರಿಸಿ
ಸುಂದರವಾದ ಬೊಂಬೆಯಂತೆ
ರೂಪಾಂತರಿಸಿ ನನ್ನ ಹಡೆದವ್ವ
ತನಗಾಗಿ ಜೀವ ನಿತ್ತವಳೆ ನನ್ನ ಹೆತ್ತ ತಾಯಿ ಅವ್ವ
ಹಸಿದೊಡಲಿಗೆ ಹಾಲುಣಿಸಿ
ನೂರು ನೋವಿದ್ದರೂ ನಗುವ ತೋರಿಸಿ
ಜಗದ ಜನರ ಮನಸ ಗೆದ್ದವಳೆ ತಾಯಿ
ಅವಳ ಸುಂದರ ಮನಸಿಗೆ
ಸೋಲದವರಿಲ್ಲದ ಮಹಾಮಾಯಿ
ಹಡೆದವ್ವ ಎಂಬ ನಾಲ್ಕಕ್ಷರ
ಆ ಬ್ರಹ್ಮ ವಿಷ್ಣು ಮಹೇಶ್ವರ ಗಿಂತ ಬಲು ವಿಸ್ತಾರ
ಒಡಲಲಿ ಸುಡುವಂತಹ ಸಾವಿರ
ನೋವಿದ್ದರು ನಗುವವಳು
ಒಡಲನೇ ಬಗೆದರು ತನ್ನ
ನೋವೆಲ್ಲ ಸಹಿಸುವವಳು
ಹೆತ್ತ ತಾಯಿ ಹೊತ್ತ ಭೂಮಿಯ ಋಣ
ಋತು ಋತುಗಳು ಉರುಳಿದರೂ
ನೂರು ಜನ್ಮ ತೀರಿದರೂ ಇರುವಷ್ಟು
ದಿನ ಪೂಜಿಸೋಣ
ಮಕ್ಕಳಾದವರು ಹಡೆದವ್ವನ
ಉನ್ನತಿ ಬಯಸಿ
ಅವಳ ಸೇವೆ ಮಾಡುವುದು ಧರ್ಮವಲ್ಲವೇ
ಇದರಿಂದ ಅವಳು ತನಗೆ ಸ್ವರ್ಗದ
ಬಾಗಿಲೆಂದು ಭಾವಿಸಿ ತೆರೆಯಿತೆಂದು
ಖುಷಿ ಪಡುತ್ತಾಳಲ್ಲವೇ
ಮುಕ್ಕೋಟಿ ದೇವರ ಮಗಳು
ನನ್ನ ಹೆತ್ತವಳು
ಈ ದೊಡ್ಡ ಬೃಹದಾಕಾರದ ಜಗದಲ್ಲಿ
ಹೊರತಂದು ಬಿಟ್ಟವಳು.
-ನಂದೀಶ್ ಹೊಸಮಠ್
ಕನ್ನಡವೆಂದರೆ
೧
ಕನ್ನಡವೆಂದರೆ
ಆತ್ಮಕ್ಕೆ ಭೂದೇವಿ ಉಡಿಸಿದ
ಮೊದಲ ಅರಿವೆ
೨
ಹೊಸದಾಗಿ ಹುಟ್ಟಿದ ಮನೆ- ಶಿಶುವಿಗೆ
ಮಹಾಮೌನಿ ಅಪ್ಪ ಖುಷಿಯಿಂದ ಹಾಡುವ ಲಾಲಿ ಹಾಡು
“… ಸೋ ಸೋ ಸೂಸಿತು ತಂಗಾಳಿ
ಕೋ ಕೋ ಕೂಗಿತು ಮುಂಗೋಳಿ
ಚಿಲಿಪಿಲಿ ಎಂದವು ಹಕ್ಕಿಗಳು
ಬಾನಲಿ ಹೊಳೆದವು ಚುಕ್ಕಿಗಳು …. “
ಅಪ್ಪನ ಕನ್ನಡ ಶಾಲೇ ಪದ.
ಕವಿಯಾರೆ0ತ ಕೇಳಬೇಕು
ಮುಂದಿನ ಬಾರಿ
ಊರಿಗೋದಾಗ
೩
ಕನ್ನಡ ಶಾಲೆ
ನನ್ನ ಕನ್ನಡ ಶಾಲೆ
ನಿಜಕ್ಕೂ ಖಾಲಿಯಾಗಿ ಬಂದಾಗಿ
ಇತಿಹಾಸದ
ಲೊಂದಾಗಿದ್ದು
…
ನಿಜವೇ
ಕೇಳಬೇಕಿದೆ – ಈ ಬಾರಿ ಅಪ್ಪನ್ನ
೪
ಹೋರಾಟ ಶುರುವಾಗಿದೆ ಆಗಲೇ
ಸಾಗರದಾಚೆ ಕಲ್ಲಿನಲ್ಲಿ ಕಲಿ – ನಲಿ
ಇಲ್ಲಿ
ಅದರಲ್ಲಿ
ನಮ್ಮೂರ ಗದ್ದೆ ಔಳಿನಲ್ಲಿ ಹುಗಿದೋಗುತಲಿರೋ
ಕನ್ನಡ ಶಾಲೇನ ಹ್ಯಾಗೆ ಹಿಡಿದೆತ್ತಿ ನಿಲಿಸೋದು
೫
ಸುಸ್ತಾದೆಯಾ ಕನ್ನಡಾಂಬೆ
ಇಳಿವಯಸಲ್ಲಿ ಫಾರಿನ್ ನಲ್ಲಿ ಸೆಟಲ್ ಆದ
ಮಕ್ಕಳ ಮನೆಯೇ ಲೇಸೆನಿಸೆ
ಅಚ್ಚರಿಯೇ ನಿಲ್ಲ ಬಿಡು
ಆದದ್ದಾಯ್ತು
ಮನೆ-ಮಕ್ಳಳಿ ಗೊಂಚೂರು
ಕಿವಿ ಹಿಂಡಿ ಉಪಕರಿಸವ್ವಾ
ಎಡ- ಬಲದ ಗ ಗೊಡವೆ ಗಿಂತ
ಎದೆ ಹಾಲಂತ ತಾಯ್ಮಾತು ಒಡವೆಯಾಗಲಿ
ಆಗಸದ ಗಿಡ ಮುಟ್ಟಿರೋ ನಮ ಭಾಷೆ ಊರ ಮಣ್ಣಿಗೆ ಬೇರಿಳಿಸಿ
ಊರು ಗದ್ದೆ ಕಾನು ಜಾತ್ರೆ ಮಾತ್ರೆ ಯುದ್ಧ ಎಂತೆಲ್ಲ
ದುಡಿವ ತೋಳಿಗೆ ತಾಯ ನುಡಿಯು
ಗರ್ವ ತುಂಬಲಿ
-ರಶ್ಮಿ ಕಬ್ಬಗಾರ